ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ನಡೆಸಿದ ಸಮಾವೇಶ ಹಾಗೂ ಅಮೆರಿಕದಲ್ಲಿ ಹೆಚ್ಚುತ್ತಿರುವ ಅದರ ಪ್ರಭಾವದ ಬಗ್ಗೆ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಕಳವಳ ವ್ಯಕ್ತಪಡಿಸಿದ್ದಾರೆ.
ಪಿಬಿಎಸ್ (PBS) ವಾಹಿನಿಯ ‘ಫೈರಿಂಗ್ ಲೈನ್’ ಕಾರ್ಯಕ್ರಮದಲ್ಲಿ ಪತ್ರಕರ್ತೆ ಮಾರ್ಗರೇಟ್ ಹೂವರ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕದಲ್ಲಿರುವ ಭಾರತೀಯರು, ಅದರಲ್ಲೂ ಮುಖ್ಯವಾಗಿ ಹಿಂದೂ-ಭಾರತೀಯರು ಹಿಂದೂ ರಾಷ್ಟ್ರೀಯವಾದದತ್ತ ಆಕರ್ಷಿತರಾಗುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೊಮ್ಮೆ ಐರಿಶ್-ಅಮೆರಿಕನ್ನರು ಐ.ಆರ್.ಎ (IRA) ಸಂಘಟನೆಯನ್ನು ಬೆಂಬಲಿಸುತ್ತಿದ್ದ ರೀತಿಗೆ ಇದನ್ನು ಹೋಲಿಸಿದ ಅವರು, ಈ ಬೆಳವಣಿಗೆಯನ್ನು ಅಲ್ಲಗಳೆಯುವಂತಿಲ್ಲ ಎಂದರು. ಇದಕ್ಕೂ ಮುನ್ನ ಪತ್ರಕರ್ತೆಯು ಆರ್.ಎಸ್.ಎಸ್ ಅನ್ನು ಬಲಪಂಥೀಯ ಅರೆಸೈನಿಕ ಪಡೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಹೊತ್ತಿರುವ ಹಿಂದೂ ರಾಷ್ಟ್ರೀಯವಾದಿ ಸಂಘಟನೆ ಎಂದು ಉಲ್ಲೇಖಿಸಿದರು.
ತಾವು ಬೆಳೆದ ಜಾತ್ಯತೀತ ಭಾರತವು ಶಾಶ್ವತವಾಗಿ ಕಣ್ಮರೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಶ್ದಿ, ಜಾತ್ಯತೀತ ಭಾರತವು ಮತ್ತೆ ಮರುಕಳಿಸುವ ವಿಶ್ವಾಸ ವ್ಯಕ್ತಪಡಿಸಿದರು. “ಶಾಶ್ವತ ಎಂಬುದು ಬಹಳ ದೀರ್ಘವಾದ ಸಮಯ,” ಎಂದ ಅವರು, ಅಮೆರಿಕದಲ್ಲಿ ‘ಟ್ರಂಪ್ ಯುಗದ ನಂತರ’ ಮೌಲ್ಯಗಳು ಮರುಕಳಿಸುತ್ತಿರುವ ರೀತಿಯಲ್ಲೇ ಭಾರತದಲ್ಲೂ ಆಗುವ ನಿರೀಕ್ಷೆ ತಮಗಿದೆ ಎಂದರು. ವಿಶೇಷವಾಗಿ ಭಾರತದ ಯುವಜನತೆಯ ಬಗ್ಗೆ, ಅದರಲ್ಲೂ ಮಹಿಳೆಯರು ತಮ್ಮ ಮೇಲಿರುವ ಸಾಂಪ್ರದಾಯಿಕ ನಿರ್ಬಂಧಗಳನ್ನು ದಿಕ್ಕರಿಸಿ ಮುನ್ನಡೆಯುತ್ತಿರುವ ಬಗೆಯನ್ನು ತಾವು ಗಮನಿಸಿದ್ದು, ಇದು ತಮಗೆ ಅಚ್ಚರಿ ಮತ್ತು ಮೆಚ್ಚುಗೆ ತರಿಸಿದೆ ಎಂದು ಅವರು ಶ್ಲಾಘಿಸಿದರು.
ಇದೇ ವೇಳೆ 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ನ್ಯೂಯಾರ್ಕ್ ನಗರದ ಮೇಯರ್ ಝೋಹ್ರಾನ್ ಮಮದಾನಿ ‘ಯುದ್ಧಾಪರಾಧಿ’ (War Criminal) ಎಂದು ಆರೋಪಿಸಿದ್ದರ ಬಗ್ಗೆಯೂ ಸಂದರ್ಶನದಲ್ಲಿ ಚರ್ಚಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರಶ್ದಿ, ಗಲಭೆಗಳ ಸಂದರ್ಭದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗೂ ಅವರ ನಾಯಕತ್ವದ ಪಾತ್ರದ ಬಗ್ಗೆ ಹಲವರಿಗೆ ಅನುಮಾನಗಳಿವೆ ಎಂದರು. ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಅಂದಿನ ರಾಜ್ಯ ನಾಯಕತ್ವದ ಕೈವಾಡವಿತ್ತು ಎಂದು ಆರೋಪಿಸಿದರು.
ನ್ಯಾಯಾಲಯವು ಅವರನ್ನು ದೋಷಮುಕ್ತಗೊಳಿಸಿರಬಹುದು (Exonerated), ಆದರೆ ಆ ಪ್ರಕ್ರಿಯೆ ಹೇಗೆ ನಡೆಯಿತು ಮತ್ತು ಯಾರು ಅವರನ್ನು ದೋಷಮುಕ್ತಗೊಳಿಸಿದರು ಎಂಬ ಪ್ರಶ್ನೆಗಳಿವೆ ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲಿ ಯುದ್ಧ ನಡೆಯದ ಕಾರಣ ಅವರನ್ನು ‘ಯುದ್ಧಾಪರಾಧಿ’ ಎನ್ನಲಾಗದಿದ್ದರೂ, ಆ ಹಿಂಸಾಚಾರದಲ್ಲಿ ಅವರ ಜವಾಬ್ದಾರಿ ಇತ್ತು ಎಂದು ತಾನು ನಂಬುವುದಾಗಿ ಹಾಗೂ ಅವರಲ್ಲಿ ಒಂದು ಅತ್ಯಂತ ‘ಕ್ರೂರ ಮುಖ’ (Brutal side) ಇದೆ ಎಂದು ರಶ್ದಿ ಗಂಭೀರ ಆರೋಪ ಮಾಡಿದರು.
ಸಲ್ಮಾನ್ ರಶ್ದಿ ಅವರು ಭಾರತೀಯ ಮೂಲದ, ವಿಶ್ವವಿಖ್ಯಾತ ಬ್ರಿಟಿಷ್-ಅಮೆರಿಕನ್ ಕಾದಂಬರಿಕಾರ ಮತ್ತು ಪ್ರಬಂಧಕಾರರಾಗಿದ್ದಾರೆ. ಇತಿಹಾಸ ಮತ್ತು ಮಾಂತ್ರಿಕ ವಾಸ್ತವಿಕತೆಯನ್ನು (Magic realism) ಬೆಸೆಯುವ ವಿಶಿಷ್ಟ ಶೈಲಿಯ ಬರಹಗಳಿಗೆ ಹೆಸರಾಗಿರುವ ಇವರ ಎರಡನೇ ಕಾದಂಬರಿ ‘ಮಿಡ್‌ನೈಟ್ಸ್ ಚಿಲ್ಡ್ರನ್’ (1981) ಪ್ರತಿಷ್ಠಿತ ‘ಬೂಕರ್ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಲ್ಲದೆ, ಆ ನಂತರ ‘ಬೂಕರ್ ಆಫ್ ಬೂಕರ್ಸ್’ ಹಾಗೂ ‘ಬೆಸ್ಟ್ ಆಫ್ ದಿ ಬೂಕರ್’ ಎಂಬ ಅತ್ಯುನ್ನತ ಗೌರವಗಳಿಗೂ ಪಾತ್ರವಾಯಿತು.
1988ರಲ್ಲಿ ಪ್ರಕಟವಾದ ಅವರ ‘ದಿ ಸೈಟಾನಿಕ್ ವರ್ಸಸ್’ ಕಾದಂಬರಿಯು ಜಾಗತಿಕ ಮಟ್ಟದಲ್ಲಿ ತೀವ್ರ ವಿವಾದ ಸೃಷ್ಟಿಸಿ, ಇರಾನ್‌ನಿಂದ ಅವರ ವಿರುದ್ಧ ‘ಫತ್ವಾ’ (ಮರಣದಂಡನೆ ಫರ್ಮಾನ್) ಹೊರಡಿಸಲು ಕಾರಣವಾಗಿತ್ತು. ದಶಕಗಳ ಕಾಲ ಜೀವ ಬೆದರಿಕೆಗಳ ನಡುವೆಯೂ ಧೃತಿಗೆಡದೆ ಸಾಹಿತ್ಯ ಕೃಷಿ ಮುಂದುವರಿಸಿದ ಅವರಿಗೆ ಸಾಹಿತ್ಯ ಕ್ಷೇತ್ರದ ಸೇವೆಗಾಗಿ 2007ರಲ್ಲಿ ‘ನೈಟ್‌ಹುಡ್’ (ಸರ್) ಗೌರವ ಒಲಿದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕರಾಗಿರುವ ರಶ್ದಿ ಅವರು, 2022ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಭೀಕರ ಹತ್ಯಾ ಯತ್ನವೊಂದರಲ್ಲಿ ತಮ್ಮ ಬಲಗಣ್ಣಿನ ದೃಷ್ಟಿ ಕಳೆದುಕೊಂಡರೂ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿ ಮತ್ತೆ ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ವಿಚಾರಗಳನ್ನು ದಿಟ್ಟವಾಗಿ ಮಂಡಿಸುತ್ತಿದ್ದಾರೆ.





