ರಾಜ್ಯದ ಅಮೂಲ್ಯ ಜ್ಞಾನಸಂಪತ್ತಾಗಿರುವ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸಮಗ್ರ ನೀತಿ ರೂಪಿಸಿ, ಹಸ್ತಪ್ರತಿಗಳಿಗಾಗಿಯೇ ಮೀಸಲಾದ ಪ್ರತ್ಯೇಕ ಹಸ್ತಪ್ರತಿ ಸಂಗ್ರಹಾಲಯ ಇಲಾಖೆಯನ್ನು ಸರ್ಕಾರ ಸ್ಥಾಪಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಹಿರಿಯ ಹಸ್ತಪ್ರತಿ ಪಂಡಿತ ಡಾ.ನಾ.ಗೀತಾಚಾರ್ಯ ಒತ್ತಾಯಿಸಿದರು.
ಹಸ್ತಪ್ರತಿಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ವಿಭಾಗ, ಕರ್ನಾಟಕ ಮಹಾವಿದ್ಯಾಲಯ ಬೀದರ್
ಹಾಗೂ ಕರಾಶಿ ಸಂಸ್ಥೆಯ ಕಲ್ಯಾಣ ಕರ್ನಾಟಕ ಸಂಶೋಧನಾ ಕೇಂದ್ರ, ಬೀದರ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ್ ಸಹಯೋಗದಲ್ಲಿ ನಡೆದ ಅಖಿಲ ಕರ್ನಾಟಕ ಇಪ್ಪತ್ಮೂರನೆಯ ಹಸ್ತಪ್ರತಿ ಸಮ್ಮೇಳನದ ಸರ್ವಾಧ್ಯಕ್ಷತೆ ಭಾಷಣದಲ್ಲಿ ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿರುವ ಹಸ್ತಪ್ರತಿ ಕೇಂದ್ರಗಳೊಂದಿಗೆ ಸಮನ್ವಯ ಸಾಧಿಸಬೇಕು. ವಿಶ್ವವಿದ್ಯಾಲಯಗಳು ಹಾಗೂ ಹಸ್ತಪ್ರತಿ ಸಂಸ್ಥೆಗಳ ನಡುವೆ ಹಸ್ತಪ್ರತಿಗಳ ವಿನಿಮಯಕ್ಕೆ ಅವಕಾಶ ಕಲ್ಪಿಸಬೇಕು. ರಾಜ್ಯದ ಎಲ್ಲ ಹಸ್ತಪ್ರತಿ ಸಂಸ್ಥೆಗಳಲ್ಲಿರುವ ಹಸ್ತಪ್ರತಿಗಳ ಸಮಗ್ರ ಮಾಹಿತಿಯನ್ನು ಒಂದೇ ವ್ಯವಸ್ಥೆಯಡಿ ಕೇಂದ್ರೀಕರಿಸಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡಲು ಪ್ರತ್ಯೇಕ ರಾಜ್ಯಮಟ್ಟದ ಹಸ್ತಪ್ರತಿ ಇಲಾಖೆ ಸ್ಥಾಪಿಸಬೇಕು. ಇದರ ಜೊತೆಗೆ ಕೇಂದ್ರೀಕೃತ ಹಸ್ತಪ್ರತಿ ಭಂಡಾರವನ್ನು ನಿರ್ಮಿಸಬೇಕು. ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಸ್ತಪ್ರತಿ ಸಂಗ್ರಹಾಲಯಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿರುವ ಅಮೂಲ್ಯ ಹಸ್ತಪ್ರತಿಗಳನ್ನು ಗುರುತಿಸಿ ಸಂರಕ್ಷಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಹಸ್ತಪ್ರತಿಗಳ ಮಹತ್ವದ ಕುರಿತು ಗ್ರಾಮಮಟ್ಟದಿಂದಲೇ ಜನಜಾಗೃತಿ ಮೂಡಿಸಬೇಕು. ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಹಸ್ತಪ್ರತಿಗಳ ಇತಿಹಾಸ, ಮಹತ್ವ ಹಾಗೂ ಸಂರಕ್ಷಣೆಯ ಕುರಿತ ಪಾಠಗಳನ್ನು ಅಳವಡಿಸಬೇಕು. ಇದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಪ್ರಾಚೀನ ಜ್ಞಾನಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯದ ವಿವಿಧ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಬಳಿ ಸಂಗ್ರಹವಾಗಿರುವ ಎಲ್ಲ ಹಸ್ತಪ್ರತಿಗಳ ಸಮಗ್ರ ಸೂಚಿ ಸಿದ್ಧಪಡಿಸಬೇಕು. ಈಗಾಗಲೇ ಲಭ್ಯವಿರುವ ಸೂಚಿಗಳನ್ನೂ ಒಳಗೊಂಡಂತೆ ಸೂಚಿಗಳ ಸೂಚಿ ರಚಿಸಬೇಕು. ಹಸ್ತಪ್ರತಿಗಳ ದೀರ್ಘಕಾಲೀನ ಸಂರಕ್ಷಣೆಗಾಗಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದರ ಜೊತೆಗೆ ಅವುಗಳನ್ನು ಡಿಜಿಟಲೀಕರಣಗೊಳಿಸಿ, ಮುಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ತಿಳಿಸಿದರು.

ಹಂಪಿ ಕನ್ನಡ ವಿವಿ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಗೇರ ಪ್ರಾಸ್ತಾವಿಕ ಮಾತನಾಡಿ, “ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಹಸ್ತಪ್ರತಿ ಅಧ್ಯಯನಕ್ಕಾಗಿಯೇ ಸ್ಥಾಪಿತವಾದ ದೇಶದ ಮೊದಲ ಹಾಗೂ ಏಕೈಕ ಅಧ್ಯಯನ ವಿಭಾಗವಾಗಿದೆ. ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಚಂದ್ರಶೇಖರ ಕಂಬಾರರ ದೂರದೃಷ್ಟಿಯ ಫಲವಾಗಿ 1996ರಲ್ಲಿ ಆರಂಭವಾದ ಈ ವಿಭಾಗವು ಹಸ್ತಪ್ರತಿಗಳ ಸಾಹಿತ್ಯಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳ ಅಧ್ಯಯನಕ್ಕೆ ಹೊಸ ದಿಕ್ಕು ನೀಡಿದೆ ಎಂದರು.
ವಸಾಹತುಪೂರ್ವ ಭಾರತದ ಜ್ಞಾನ, ಸಾಂಸ್ಕೃತಿಕ ಹಾಗೂ ಪುಸ್ತಕ ಪರಂಪರೆಯನ್ನು ತಿಳಿಯಲು ಹಸ್ತಪ್ರತಿಗಳು ಪ್ರಮುಖ ಆಕರಗಳಾಗಿವೆ. ತಾಳೆಗರಿ, ಭೂರ್ಜಪತ್ರ ಹಾಗೂ ಕಾಗದಗಳಲ್ಲಿ ದಾಖಲಾದ ಜ್ಞಾನಸಂಪತ್ತನ್ನು ಸಂಗ್ರಹಿಸುವುದು, ಸಂರಕ್ಷಿಸುವುದು, ಸಂಪಾದಿಸುವುದು ಮತ್ತು ವಿಶ್ಲೇಷಿಸುವ ಕಾರ್ಯದಲ್ಲಿ ವಿಭಾಗವು ಕಳೆದ ಮೂರು ದಶಕಗಳಿಂದ ತೊಡಗಿಸಿಕೊಂಡಿದೆ ಎಂದರು.
ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನ, ಹಳಗನ್ನಡ ಬೋಧನಾ ತರಬೇತಿ ಶಿಬಿರ ಹಾಗೂ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರಗಳ ಮೂಲಕ ವಿದ್ವಾಂಸರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಹಸ್ತಪ್ರತಿ ಅಧ್ಯಯನದ ಕುರಿತು ಜಾಗೃತಿ ಮೂಡಿಸುತ್ತ ಓದಿನ ಹಸಿವು ಹುಟ್ಟಿಸುತ್ತದೆ. ನಾಡಿನಾದ್ಯಂತ ಸಂಚರಿಸಿ 5,000ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಿ ಸಂರಕ್ಷಿಸಿರುವ ವಿಭಾಗವು ಭಾರತೀಯ ಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯ ಉಳಿವಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

ಹಸ್ತಪ್ರತಿಗಳು ನಮ್ಮ ಪ್ರಾಚೀನ ಜ್ಞಾನಸಂಪತ್ತಿನ ಕಣಜ
ಹಸ್ತಪ್ರತಿಗಳಿಗೆ ಎಣ್ಣೆ ಎರೆಯುವ ಮುಖಾಂತರ ಸಮ್ಮೇಳನ ಉದ್ಘಾಟಿಸಿದ ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, “ಹಸ್ತಪ್ರತಿಗಳು ಎಂದರೆ ಕೇವಲ ತಾಳೆಗರಿ ಅಥವಾ ಕಾಗದಗಳ ಮೇಲೆ ಬರೆಯಲಾಗಿರುವ ಅಕ್ಷರಗಳಲ್ಲ. ಅವು ನಮ್ಮೊಂದಿಗೆ ಜ್ಞಾನವನ್ನು ಹಂಚಿಕೊಳ್ಳಲು ಕಾಯುತ್ತಿರುವ ಅಮೂಲ್ಯ ಮಾಧ್ಯಮಗಳಾಗಿವೆ. ಅವುಗಳನ್ನು ತಿಳಿದುಕೊಳ್ಳುವ, ಓದುವ ಮತ್ತು ಅರ್ಥಮಾಡಿಕೊಳ್ಳುವ ತಾಳ್ಮೆ ಹಾಗೂ ಆಸಕ್ತಿ ನಮ್ಮಲ್ಲಿದ್ದರೆ, ಅವು ತಮ್ಮೊಳಗೆ ಅಡಗಿಸಿಕೊಂಡಿರುವ ಜ್ಞಾನಸಂಪತ್ತನ್ನು ನಮ್ಮ ಮುಂದೆ ತೆರೆದಿಡುತ್ತವೆ ಎಂದು ಹೇಳಿದರು.
ಹಸ್ತಪ್ರತಿಗಳು ನಮ್ಮ ಹಿರಿಯರು ನಮಗೆ ಕೊಡುಗೆಯಾಗಿ ನೀಡಿರುವ ಜ್ಞಾನ ಮತ್ತು ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿವೆ. ಕಾಲಕ್ರಮೇಣ ಕನ್ನಡ ಲಿಪಿಯಲ್ಲಿ ಹಲವು ಬದಲಾವಣೆಗಳಾಗಿದ್ದು, ಕಳೆದ ಸುಮಾರು ಒಂದು ಸಾವಿರ ವರ್ಷಗಳಲ್ಲಿ ಲಿಪಿಯ ಸ್ವರೂಪದಲ್ಲಿ ಮಹತ್ವದ ಪರಿವರ್ತನೆಗಳು ಸಂಭವಿಸಿವೆ. ಹೀಗಾಗಿ, ಪ್ರಾಚೀನ ಹಸ್ತಪ್ರತಿಗಳಲ್ಲಿರುವ ಲಿಪಿಯನ್ನು ಇಂದಿನವರು ಸುಲಭವಾಗಿ ಓದುವುದು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಹಸ್ತಪ್ರತಿಗಳಷ್ಟೇ ಅಲ್ಲ, ಶಾಸನಗಳನ್ನು ಓದುವುದೂ ಅನೇಕರಿಗೆ ಕಷ್ಟವಾಗಿದೆ. ಅವುಗಳನ್ನು ಓದಲು ಬರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅವುಗಳ ಅಧ್ಯಯನದಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಹಸ್ತಪ್ರತಿಗಳಲ್ಲಿರುವ ವಿಷಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ, ನಾವು ಮರೆತಿರುವ ಅನೇಕ ಸಂಗತಿಗಳನ್ನು, ನಮ್ಮ ಸಂಸ್ಕೃತಿಯ ಅಮೂಲ್ಯ ವಿಚಾರಗಳನ್ನು ಹಾಗೂ ನಮ್ಮ ಪರಂಪರೆ ಮತ್ತು ಇತಿಹಾಸದ ಹಲವು ಮಹತ್ವದ ಅಂಶಗಳನ್ನು ಪುನಃ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಇಂದು ಕನ್ನಡ ಸಾಹಿತ್ಯ ಚರಿತ್ರೆ ಇಷ್ಟೊಂದು ಶ್ರೀಮಂತವಾಗಿದೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಈ ಹೆಮ್ಮೆಗೆ ಪ್ರಮುಖ ಕಾರಣ ನಮ್ಮ ಹಸ್ತಪ್ರತಿಗಳಲ್ಲಿ ಅಡಕವಾಗಿರುವ ಅಮೂಲ್ಯ ಕಾವ್ಯಗಳು ಮತ್ತು ಸಾಹಿತ್ಯ ಕೃತಿಗಳು. ಇವು ಇಂದು ನಮ್ಮ ಅಧ್ಯಯನಕ್ಕೆ ಲಭ್ಯವಾಗಿರುವುದರ ಹಿಂದೆ ಅನೇಕ ಹಸ್ತಪ್ರತಿಗಳನ್ನು ಸಂರಕ್ಷಿಸಿದ, ಅವುಗಳನ್ನು ಓದಿ ಅಧ್ಯಯನ ಮಾಡಿದ ಹಾಗೂ ಹೊಸ ದೃಷ್ಟಿಕೋನದಲ್ಲಿ ಮುಂದಿನ ತಲೆಮಾರಿಗೆ ಪರಿಚಯಿಸಿದ ವಿದ್ವಾಂಸರ ಪರಿಶ್ರಮವಿದೆ ಎಂದರು.
ಹಸ್ತಪ್ರತಿಗಳ ಸಂರಕ್ಷಣೆ, ಅವುಗಳ ನಿರಂತರ ಅಧ್ಯಯನ ಹಾಗೂ ಅವುಗಳಲ್ಲಿರುವ ಅಮೂಲ್ಯ ಜ್ಞಾನವನ್ನು ಹೊಸ ತಲೆಮಾರಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂತಹ ಸಮ್ಮೇಳನಗಳು ನಮ್ಮ ಪ್ರಾಚೀನ ಜ್ಞಾನಪರಂಪರೆಯ ಮಹತ್ವವನ್ನು ಅರಿಯಲು, ಅದನ್ನು ಉಳಿಸಿ ಬೆಳೆಸಲು ಮತ್ತು ಮುಂದಿನ ಪೀಳಿಗೆಯಲ್ಲಿ ಅದರ ಬಗ್ಗೆ ಆಸಕ್ತಿ ಮೂಡಿಸಲು ಮಹತ್ವದ ವೇದಿಕೆಗಳಾಗಿವೆ ಎಂದರು.

ಬೀದರ್ ವಿವಿ ಕುಲಪತಿ ಡಾ.ಬಿ.ಎಸ್. ಬಿರಾದರ್ ಹಸ್ತಪ್ರತಿ ವ್ಯಾಸಂಗ-26 ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, “ಇಂದಿನ ಸಮಾಜಕ್ಕೆ ಹಸ್ತಪ್ರತಿಗಳು ಬೇರು ಇದ್ದಂತೆ, ಅವುಗಳನ್ನು ನಿರ್ಲಕ್ಷಿಸಿದರೆ ಸಾಹಿತ್ಯ ಬೆಳವಣಿಗೆ ಸಾಧ್ಯವಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿಯೂ ಹಸ್ತಪ್ರತಿಗಳು ಸಂಶೋಧಕರು, ಲೇಖಕರ ಅಧ್ಯಯನಕ್ಕೆ ಅಮೂಲ್ಯ ಸಂಪತ್ತಾಗಿದೆ ಎಂದರು.
ಸಾನಿಧ್ಯವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷತೆ ವಹಿಸಿದ ಕರಾಶಿ ಸಂಸ್ಥೆಯ ಬಸವರಾಜ ಜಾಬಶೆಟ್ಟಿ, ಮುಖ್ಯ ಅತಿಥಿಗಳಾದ ಕರಾಶಿ ಸಂಸ್ಥೆ ನ್ಯಾಸ ಅಧ್ಯಕ್ಷ ಡಾ.ಬಸವರಾಜ ಜಿ.ಪಾಟೀಲ್ ಅವರು ಮಾತನಾಡಿದರು.
ಇದನ್ನೂ ಓದಿ : ಬೀದರ್ | ಸೋಯಾಬೀನ್: ತಗ್ಗಿದ ಇಳುವರಿ, ಧಾರಣೆ ಏರಿಕೆ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದಿಂದ ಕರ್ನಾಟಕ ಮಹಾವಿದ್ಯಾಲಯದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಪಾಲ್ಗೊಂಡಿದ್ದರು.
ಮಧ್ಯಾಹ್ನ ಸಮ್ಮೇಳನಾಧ್ಯಕ್ಷ ಡಾ.ನಾ.ಗೀತಾಚಾರ್ಯ ಅವರ ಬದುಕು ಮತ್ತು ಬರಹದ ಕುರಿತು ಮೊದಲ ಗೋಷ್ಠಿ ನಡೆಯಿತು. ಎರಡನೇ ಗೋಷ್ಠಿಯಲ್ಲಿ ಪ್ರೊ. ಬಿ.ಬಿ. ಮಹೀಶವಾಡಿ ಅವರ ಸಾಹಿತ್ಯ ಸಂಸ್ಮರಣೆ-1 ಕುರಿತು ಉಪನ್ಯಾಸ ನಡೆಯಿತು.
ಹಿರಿಯ ಸಾಹಿತಿ ಡಾ.ಕಲ್ಯಾಣರಾವ್ ಜಿ.ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕರ್ನಾಟಕ ಮಹಾವಿದ್ಯಾಲಯ ಪ್ರಾಚಾರ್ಯ ಸೋಮನಾಥ ಬಿರಾದಾರ, ಉಪ ಪ್ರಾಚಾರ್ಯ ಡಾ.ಶಶಿಧರ ಪಾಟೀಲ್ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮಹಾನಂದ ಮಡಕಿ ಸೇರಿದಂತೆ ಶಿವಶಂಕರ ಟೋಕರೆ, ಶಾಂತಕುಮಾರ ಪಾಟೀಲ್ ಹಾಗೂ ಹಂಪಿ ಕನ್ನಡ ವಿವಿ, ಕರ್ನಾಟಕ ಮಾಹಾವಿದ್ಯಾಲಯ ಪ್ರಾಧ್ಯಾಪಕರು, ಸಂಶೋಧಕರು, ಜಿಲ್ಲಾ ಕಸಾಪ ಪದಾಧಿಕಾರಿಗಳು ಭಾಗವಹಿಸಿದ್ದರು.







