ಉಕ್ರೇನ್ ರಾಜಧಾನಿ ಕೀವ್ ಸಮೀಪದ ಮೈಲಾ ಗ್ರಾಮದಲ್ಲಿದ್ದ ಶಸ್ತ್ರಾಸ್ತ್ರ ಗೋದಾಮಿನ ಮೇಲೆ ರಷ್ಯಾ ಪಡೆಗಳು ಕ್ಷಿಪಣಿ ದಾಳಿ ನಡೆಸಿವೆ. ದಾಳಿಯಲ್ಲಿ ಗೋದಾಮು ನಾಶವಾಗಿದ್ದು, ಕನಿಷ್ಠ 37 ಮಂದಿ ನಾಗರಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಜನವಸತಿ ಪ್ರದೇಶದಲ್ಲೇ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದಕ್ಕಾಗಿ ಉಕ್ರೇನ್ ಸರ್ಕಾರ ಮತ್ತು ಸೇನೆಯ ವಿರುದ್ಧವೇ ಸ್ವತಃ ಉಕ್ರೇನಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾತ್ರಿ ರಷ್ಯಾ ನಡೆಸಿದ ದಾಳಿಯಿಂದಾಗಿ ಗೋದಾಮಿನಲ್ಲಿದ್ದ ಶಸ್ತ್ರಾಸ್ತ್ರಗಳು ಒಂದರ ಮೇಲೊಂದರಂತೆ ಭೀಕರವಾಗಿ ಸ್ಫೋಟಗೊಂಡಿವೆ. ಶನಿವಾರ ರಾತ್ರಿವರೆಗೂ ಪ್ರದೇಶದಲ್ಲಿ ಬಾಂಬ್ಗಳ ಸದ್ದು ಕೇಳಿಸುತ್ತಿತ್ತು. ಸ್ಫೋಟದ ತೀವ್ರತೆಗೆ ಶಸ್ತ್ರಾಸ್ತ್ರಗಳ ಚೂರುಗಳು ಸುತ್ತಮುತ್ತಲಿನ ಮನೆಗಳು, ತೋಟ ಹಾಗೂ ರಸ್ತೆಗಳಿಗೆ ಬಿದ್ದಿವೆ. ಈ ಸ್ಫೋಟಗಳಿಂದಲೇ ಅತೀ ಹೆಚ್ಚು ಅನಾಹುತವಾಗಿದ್ದು, ಇದು ಈ ವರ್ಷದ ಅತ್ಯಂತ ಘೋರ ದುರಂತಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.
ಉಕ್ರೇನ್ ಸೇನೆಯು ಜನವಸತಿ ಪ್ರದೇಶದಲ್ಲಿ ಶೆಲ್ಗಳು, ಸ್ಪೋಟಕಗಳು ಹಾಗೂ ಡ್ರೋನ್ಗಳನ್ನು ಸಂಗ್ರಹಿಸಿದ್ದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಪ್ಪಿಕೊಂಡಿದ್ದಾರೆ. “ಆ ಗೋದಾಮು ಯಾವುದೇ ಕಾರಣಕ್ಕೂ ಅಲ್ಲಿ ಇರಬಾರದಿತ್ತು. ಜನರ ಮನೆಗಳ ಪಕ್ಕದಲ್ಲೇ ಇಷ್ಟೊಂದು ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದು ಭೀಕರ ನಿರ್ಲಕ್ಷ್ಯ. ಈ ಸಂಬಂಧ ಕ್ರಿಮಿನಲ್ ತನಿಖೆಗೆ ಆದೇಶಿಸಿದ್ದೇನೆ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಇತ್ತ ಪ್ರಧಾನಿ ಸರ್ಹಿ ಕೊರೆಟ್ಸ್ಕಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, “ಯುದ್ಧ ಆರಂಭವಾಗಿ ಐದು ವರ್ಷಗಳಾಗಿವೆ. ಆದರೂ ಇಂತಹ ತಪ್ಪುಗಳನ್ನು ಮರುಕಳಿಸುವುದು ಕ್ಷಮಿಸಲಾಗದ ಅಪರಾಧ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಎಚ್ಚರಿಸಿದ್ದಾರೆ.
ಕಳೆದ ತಿಂಗಳು ಕೂಡ ಕೀವ್ ಹೊರವಲಯದ ವೈಶ್ನೆವೇ ಪ್ರದೇಶದಲ್ಲಿ ನಾಗರಿಕರ ಮನೆಗಳ ಬಳಿ ಇದ್ದ ಶಸ್ತ್ರಾಸ್ತ್ರ ಸಂಗ್ರಹಾಗಾರದ ಮೇಲೆ ರಷ್ಯಾ ದಾಳಿ ನಡೆಸಿದಾಗ ಹಲವರು ಮೃತಪಟ್ಟಿದ್ದರು. “ನಮ್ಮ ಮನೆಗಳ ಪಕ್ಕದಲ್ಲೇ ಆಯುಧ ಇಟ್ಟಿದ್ದಾರೆ ಎಂದು ನಮಗೆ ಗೊತ್ತೇ ಇರಲಿಲ್ಲ. ಹಿಂದಿನ ಘಟನೆಯಿಂದಲೂ ಸರ್ಕಾರ ಬುದ್ಧಿ ಕಲಿತಿಲ್ಲವೇ” ಎಂದು ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ವಿಟಾಲಿ ಹಾಲ್ಚುಕ್ ಪ್ರಶ್ನಿಸಿದ್ದಾರೆ.
ಪ್ರಸ್ತುತ ಉಕ್ರೇನ್ ತೀವ್ರ ಮಟ್ಟದ ‘ಪ್ಯಾಟ್ರಿಯಾಟ್’ ಇಂಟರ್ಸೆಪ್ಟರ್ ಕ್ಷಿಪಣಿಗಳ ಕೊರತೆ ಎದುರಿಸುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ರಷ್ಯಾ, ಗಂಟೆಗೆ 400 ಮೈಲಿ ವೇಗದಲ್ಲಿ ಹಾರುವ ಕ್ಷಿಪಣಿ ಮತ್ತು ಡ್ರೋನ್ಗಳ ಮೂಲಕ ಕೀವ್ ನಗರದ ಮೇಲೆ ನಿರಂತರ ದಾಳಿ ನಡೆಸುತ್ತಿದೆ.



