ಟೆಲಿವಿಷನ್ ಸುದ್ದಿ ಪ್ರಸಾರದ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಿದ ಹಾಗೂ ವಿಶ್ವದ ಮೊದಲ 24 ಗಂಟೆಗಳ ನಿರಂತರ ಸುದ್ದಿ ವಾಹಿನಿ ‘ಸಿಎನ್‌ಎನ್’ (CNN) ಸಂಸ್ಥಾಪಕ, ಅಮೆರಿಕದ ಪ್ರಸಿದ್ಧ ಉದ್ಯಮಿ ಟೆಡ್ ಟರ್ನರ್ (87) ಅವರು ಬುಧವಾರ ನಿಧನರಾಗಿದ್ದಾರೆ. ಈ ಕುರಿತು ಟರ್ನರ್ ಎಂಟರ್‌ಪ್ರೈಸಸ್ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.
ಟರ್ನರ್ ಅವರು 2018ರಿಂದ ‘ಲೂಯಿ ಬಾಡಿ ಡಿಮೆನ್ಶಿಯಾ’ (Lewy body dementia) ಎಂಬ ನರ ದೌರ್ಬಲ್ಯ ಹಾಗೂ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದಾಗಿ ಅವರು ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಜೀವನದಿಂದ ಹೆಚ್ಚಾಗಿ ದೂರವೇ ಉಳಿದಿದ್ದರು ಎಂದು ವರದಿಯಾಗಿದೆ.
1938ರಲ್ಲಿ ಅಮೆರಿಕದ ಓಹಿಯೋದಲ್ಲಿ ಜನಿಸಿದ್ದ ಟರ್ನರ್, ತಮ್ಮ ತಂದೆಯ ಜಾಹೀರಾತು ವ್ಯವಹಾರದ ಮೂಲಕ ವೃತ್ತಿಜೀವನ ಆರಂಭಿಸಿದ್ದರು. 1980ರಲ್ಲಿ ಅವರು ‘ಕೇಬಲ್ ನ್ಯೂಸ್ ನೆಟ್‌ವರ್ಕ್’ (CNN) ಅನ್ನು ಸ್ಥಾಪಿಸಿದರು. ನಿರ್ದಿಷ್ಟ ಸಮಯದಲ್ಲಿ ಮಾತ್ರ ಸುದ್ದಿ ಬಿತ್ತರವಾಗುತ್ತಿದ್ದ ಆ ಕಾಲದಲ್ಲಿ, ದಿನದ 24 ಗಂಟೆಯೂ ನಿರಂತರ ಬ್ರೇಕಿಂಗ್ ನ್ಯೂಸ್ ನೀಡುವ ಪರಿಕಲ್ಪನೆಯನ್ನು ಪರಿಚಯಿಸಿ ಅವರು ಕ್ರಾಂತಿ ಮಾಡಿದರು. ವಿಶೇಷವಾಗಿ 1990-91ರ ಗಲ್ಫ್ ಯುದ್ಧದ ಸಮಯದಲ್ಲಿ ಬಾಗ್ದಾದ್‌ನಿಂದ ಸಿಎನ್‌ಎನ್ ಮಾಡಿದ ನಿರಂತರ ನೇರಪ್ರಸಾರವು, ವಾಹಿನಿಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿತ್ತು.
ಕೇವಲ ಸುದ್ದಿ ವಾಹಿನಿಗೆ ಸೀಮಿತವಾಗದೆ ಬೃಹತ್ ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿದ್ದ ಟರ್ನರ್, ಟಿಬಿಎಸ್ (TBS), ಟಿಎನ್‌ಟಿ (TNT), ಮತ್ತು ‘ಕಾರ್ಟೂನ್ ನೆಟ್‌ವರ್ಕ್’ (Cartoon Network) ನಂತಹ ಜನಪ್ರಿಯ ಮನರಂಜನಾ ವಾಹಿನಿಗಳನ್ನು ಹುಟ್ಟುಹಾಕಿದ್ದರು. ಕ್ರೀಡಾ ಕ್ಷೇತ್ರದಲ್ಲೂ ಅಪಾರ ಆಸಕ್ತಿ ಹೊಂದಿದ್ದ ಅವರು 1976ರಲ್ಲಿ ‘ಅಟ್ಲಾಂಟಾ ಬ್ರೇವ್ಸ್’ (Atlanta Braves) ಬೇಸ್‌ಬಾಲ್ ತಂಡವನ್ನು ಖರೀದಿಸಿದ್ದರು.
ಇದನ್ನು ಓದಿದ್ದೀರಾ? ಟಿವಿಕೆ ತೆಕ್ಕೆಗೆ ಜಾರಿದ ಕಾಂಗ್ರೆಸ್, ಆಪ್ತಮಿತ್ರ ಸ್ಟಾಲಿನ್ ಬೆನ್ನಿಗೆ ಚೂರಿ ಹಾಕಿತೇ?
ಒಬ್ಬ ಯಶಸ್ವಿ ಉದ್ಯಮಿಯಾಗಿ ಮಾತ್ರವಲ್ಲದೆ, ಅಪ್ರತಿಮ ದಾನಿಯಾಗಿಯೂ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ವಿಶ್ವಸಂಸ್ಥೆಯ ಪ್ರತಿಷ್ಠಾನವನ್ನು ಸ್ಥಾಪಿಸಿ, ವಿಶ್ವಸಂಸ್ಥೆಗೆ ಬರೋಬ್ಬರಿ 1 ಬಿಲಿಯನ್ ಡಾಲರ್ ದೇಣಿಗೆ(9,500 ಕೋಟಿ ರೂ) ನೀಡುವ ಮೂಲಕ ಅವರು ವಿಶ್ವದ ಗಮನ ಸೆಳೆದಿದ್ದರು. ಪರಿಸರ ಸಂರಕ್ಷಣೆ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ತಡೆಗಟ್ಟುವ ನಿಟ್ಟಿನಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ನಿಧನದ ಸಮಯದಲ್ಲಿ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 2.2 ಬಿಲಿಯನ್ ಡಾಲರ್(20,856 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ.
ಟೆಡ್ ಟರ್ನರ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಸಿಎನ್‌ಎನ್‌ನ ಅಧ್ಯಕ್ಷ ಹಾಗೂ ಸಿಇಒ ಮಾರ್ಕ್ ಥಾಂಪ್ಸನ್, “ಟೆಡ್ ಅವರು ಅತ್ಯಂತ ಬದ್ಧತೆಯ ಹಾಗೂ ನಿರ್ಭೀತ ನಾಯಕರಾಗಿದ್ದರು. ಸಿಎನ್‌ಎನ್ ವಾಹಿನಿಯ ಮಾರ್ಗದರ್ಶಕ ಶಕ್ತಿಯಾಗಿ ಅವರು ಸದಾ ನಮ್ಮೊಂದಿಗೆ ಉಳಿಯಲಿದ್ದಾರೆ,” ಎಂದು ಸ್ಮರಿಸಿದ್ದಾರೆ.




