ಇರಾನ್‌ಗೆ ನರಕ ತೋರಿಸುತ್ತೇವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ, ವಿಶ್ವಸಂಸ್ಥೆಯ ಅಣುಶಕ್ತಿ ಕಾವಲು ಪಡೆಯ ಮಾಜಿ ಮುಖ್ಯಸ್ಥ ಮೊಹಮ್ಮದ್ ಎಲ್-ಬರಾದೆಯಿ ಅವರು ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಈ ಹುಚ್ಚ ಇಡೀ ಕೊಲ್ಲಿ ರಾಷ್ಟ್ರಗಳನ್ನು ಬೆಂಕಿಯ ಉಂಡೆ ಮಾಡುತ್ತಾನೆ’ ಎಂದು ಹೇಳಿದ್ದಾರೆ. ಆತನನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸಿ ಎಂದು ಕೊಲ್ಲಿ ರಾಷ್ಟ್ರಗಳಿಗೆ ಅವರು ಮನವಿ ಮಾಡಿದ್ದಾರೆ.
ಮೊಹಮ್ಮದ್ ಎಲ್-ಬರಾದೆಯಿ ಅವರು 1997 ರಿಂದ 2009 ರವರೆಗೆ ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (IAEA) ಮುಖ್ಯಸ್ಥರಾಗಿದ್ದರು. ಅವರು ನೋಬೆಲ್ ಶಾಂತಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇರಾನ್-ಅಮೆರಿಕ ಸಂಘರ್ಷದ ಕುರಿತು ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ಅವರು, “ಕೊಲ್ಲಿ ಸರ್ಕಾರಗಳಿಗೆ ನನ್ನದೊಂದು ವಿನಂತಿ: ಈ ಹುಚ್ಚ ಈ ಪ್ರದೇಶವನ್ನು ಸುಟ್ಟು ಭಸ್ಮ ಮಾಡುವ ಮೊದಲು ದಯವಿಟ್ಟು ನಿಮ್ಮ ಶಕ್ತಿಯನ್ನು ಬಳಸಿ ಆತನನ್ನು ತಡೆಯಿರಿ” ಎಂದು ಕರೆಕೊಟ್ಟಿದ್ದಾರೆ.
ಅಲ್ಲದೆ, ವಿಶ್ವಸಂಸ್ಥೆ, ಯುರೋಪಿಯನ್ ಯೂನಿಯನ್, ಚೀನಾ ಹಾಗೂ ರಷ್ಯಾ ವಿದೇಶಾಂಗ ಸಚಿವಾಲಯಗಳು ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಟ್ಯಾಗ್ ಮಾಡಿರುವ ಅವರು, ಟ್ಯಾಗ್ ಮಾಡಿ, “ಈ ಹುಚ್ಚುತನವನ್ನು ನಿಲ್ಲಿಸಲು ಯಾವುದೂ-ಯಾರಿಗೂ ಸಾಧ್ಯವಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.
الى حكومات الخليج :
— Mohamed ElBaradei (@ElBaradei) April 4, 2026
رجاءا مجددا القيام بكل ما في وسعكم قبل ان يقوم هذا المعتوه بتحويل المنطقة إلى كرة من لهب … https://t.co/r5esCaDODZ
ಈ ಲೇಖನ ಓದಿದ್ದೀರಾ?: ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಚೀನಾ – ಪಾಕಿಸ್ತಾನದ 5 ಅಂಶಗಳ ಮಹತ್ವದ ಪ್ರಸ್ತಾವನೆ
ಶನಿವಾರ, ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, “ಇರಾನ್ ಒಪ್ಪಂದ ಮಾಡಿಕೊಳ್ಳಬೇಕು ಅಥವಾ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕು. ಸಮಯ ಮೀರುತ್ತಿದೆ – ಕೇವಲ 48 ಗಂಟೆಗಳ ನಂತರ ಅವರ ಮೇಲೆ ನರಕವೇ ಸೃಷ್ಟಿಯಾಗಲಿದೆ” ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯ ನಂತರ ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಜಾಗತಿಕ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಹಲವಾರು ಸರಕುಗಳ ವ್ಯವಹಾರಕ್ಕೆ ಹೊಡೆತ ನೀಡಿದ್ದು, ಹಲವು ರಾಷ್ಟ್ರಗಳ ಆರ್ಥಿಕತೆ ಏರುಪೇರಾಗಿದೆ.



