ಇರಾನ್ ವಿರುದ್ಧದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೇನಾ ಕಾರ್ಯಾಚರಣೆ ಮತ್ತು ಯುದ್ಧ ನೀತಿಗೆ ಅಮೆರಿಕಾ ಸೆನೆಟ್ ತಡೆಯೊಡ್ಡಿದೆ. ಕಾಂಗ್ರೆಸ್‌ನ (ಸಂಸತ್) ಸ್ಪಷ್ಟ ಅನುಮೋದನೆ ಇಲ್ಲದೆ ಯಾವುದೇ ದೇಶದ ವಿರುದ್ಧ ಯುದ್ಧ ಅಥವಾ ದೀರ್ಘಕಾಲದ ಸೇನಾ ಕಾರ್ಯಾಚರಣೆ ನಡೆಸಬಾರದು ಎಂದು ಒತ್ತಾಯಿಸುವ ಮಹತ್ವದ ನಿರ್ಣಯವನ್ನು ಸೆನೆಟ್ ಅಂಗೀಕರಿಸಿದೆ.
ಮಂಗಳವಾರ ನಡೆದ ತೀವ್ರ ಕುತೂಹಲಕಾರಿ ಮತದಾನದಲ್ಲಿ ಈ ನಿರ್ಣಯವು 50-48 ಮತಗಳ ಅಂತರದಿಂದ ಅಂಗೀಕಾರಗೊಂಡಿದೆ. ಹೊಸ ನಿರ್ಣಯದ ಪ್ರಕಾರ, ಕಾಂಗ್ರೆಸ್ ಅಧಿಕೃತ ಅನುಮತಿ ನೀಡದ ಹೊರತು ಇರಾನ್ ವಿರುದ್ಧ ನಡೆಯುತ್ತಿರುವ ಶತ್ರುತ್ವದ ಕ್ರಮಗಳಿಂದ ಅಮೆರಿಕ ಸೇನೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
1973ರ ‘ವಾರ್ ಪವರ್ಸ್ ಆಕ್ಟ್’ (War Powers Act) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಪ್ರಕಾರ ಅಧ್ಯಕ್ಷರು ಸೇನೆಯನ್ನು ಯುದ್ಧದಲ್ಲಿ ತೊಡಗಿಸಿದರೆ 60 ದಿನಗಳೊಳಗೆ ಕಾಂಗ್ರೆಸ್‌ನ ಅನುಮೋದನೆ ಪಡೆಯುವುದು ಕಡ್ಡಾಯ. ಡೆಮಾಕ್ರಟಿಕ್ ನಾಯಕ ಚಕ್ ಶೂಮರ್ ಈ ನಿರ್ಣಯವನ್ನು ಮಂಡಿಸಿದ್ದರು. ಸೆನೆಟ್‌ನ ಸದಸ್ಯರು ಈ ನಿರ್ಣಯಕ್ಕೆ ಸಮ್ಮತಿ ಸೂಚಿಸಿದ್ದಾರೆ. ಯುದ್ಧದಂತಹ ಜವಾಬ್ದಾರಿಯುತ ನಿರ್ಧಾರಗಳನ್ನು ಅಧ್ಯಕ್ಷರು ಏಕಪಕ್ಷೀಯವಾಗಿ ತೆಗೆದುಕೊಳ್ಳಬಾರದು ಮತ್ತು ಅಮೆರಿಕ ಸಂವಿಧಾನದ ಮಿತಿಗಳನ್ನು ಗೌರವಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಆದಾಗ್ಯೂ, ಈ ನಿರ್ಣಯವು ತಾಂತ್ರಿಕವಾಗಿ ‘ಕಾಂಕರೆಂಟ್ ರೆಸಲ್ಯೂಷನ್’ (Concurrent Resolution) ಆಗಿರುವುದರಿಂದ, ಇದು ನೇರ ಕಾನೂನು ಜಾರಿಯ ಅಧಿಕಾರ ಹೊಂದಿಲ್ಲ ಮತ್ತು ಅಧ್ಯಕ್ಷರ ಅಂತಿಮ ಸಹಿಗೂ ಹೋಗುವುದಿಲ್ಲ. ಆದರೂ ಅಮೆರಿಕ ಕಾಂಗ್ರೆಸ್‌ನ ಎರಡೂ ಸದನಗಳು ಇರಾನ್ ಸಂಘರ್ಷದ ಕುರಿತು ಅಧ್ಯಕ್ಷರ ವಿರುದ್ಧವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವುದು ಜಾಗತಿಕವಾಗಿ ಭಾರಿ ರಾಜಕೀಯ ಮಹತ್ವ ಪಡೆದುಕೊಂಡಿದೆ.
ಇತ್ತೀಚೆಗಷ್ಟೇ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸೇನಾ ದಾಳಿಗಳ ಬಳಿಕ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಈ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿತ್ತು. ಆದಾಗ್ಯೂ ಇರಾನ್‌ನ ತೀವ್ರ ಪ್ರತಿದಾಳಿಗೆ ತತ್ತರಿಸಿದ ಟ್ರಂಪ್, ಯುದ್ಧ ಕೊನೆಗಾಣಿಸಲು ಹೆಣಗಾಡಿದ್ದರು. ಏಪ್ರಿಲ್‌ನಿಂದ ಕದನ ವಿರಾಮ ಜಾರಿಯಲ್ಲಿದೆ. ಆದರೆ, ಶಾಂತಿಒಪ್ಪಂದದ ಮಾತುಕತೆಗಳು ಇನ್ನೂ ನಡೆಯುತ್ತಿದ್ದು, ಅಂತಿಮ ಒಪ್ಪಂದಕ್ಕೆ ಸಹಿಹಾಕಲಾಗಿಲ್ಲ.



