ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಬ್ಬಾಳಿಕೆ ಮತ್ತು ಮಿಲಿಟರಿ ಒತ್ತಡಗಳಿಗೆ ಇರಾನ್ ಎಂದಿಗೂ ಶರಣಾಗುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಅವರು, ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಮೆರಿಕ-ಇಸ್ರೇಲ್ ದಾಳಿಯ ಬಗ್ಗೆ ಮಾತನಾಡಿದ್ದಾರೆ. “ಇರಾನ್‌ನ ಸೇನಾ ಪಡೆಗಳನ್ನು ನೇರವಾಗಿ ಎದುರಿಸುವ ಬದಲು ನಾಗರಿಕ ಮೂಲಸೌಕರ್ಯಗಳು, ಆಹಾರ ಪೂರೈಕೆ, ನೀರು ಮತ್ತು ಔಷಧಿಗಳಂತಹ ಮೂಲಭೂತ ಲಭ್ಯತೆಗಳನ್ನು ತಡೆದು ದೇಶವನ್ನು ಹೆದರಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಆದರೆ, ಇಂತಹ ಕೃತ್ಯಗಳಿಂದ ಇರಾನ್ ಜನತೆಯನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ಅಮೆರಿಕ ಮತ್ತು ಇಸ್ರೇಲ್‌ನ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅಧ್ಯಕ್ಷರು, “ನಮ್ಮ ದೇಶದ ಪರಮಾಣು ಚಟುವಟಿಕೆಗಳು ಅಂತಾರಾಷ್ಟ್ರೀಯ ನಿಯಮಗಳ ವ್ಯಾಪ್ತಿಯಲ್ಲೇ ಇವೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದದ (NPT) ಸಕ್ರಿಯ ಸದಸ್ಯ ರಾಷ್ಟ್ರವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರಂತರ ಪರಿಶೀಲನೆಗೆ ಒಳಪಟ್ಟಿದೆ. ಕೇವಲ ತಜ್ಞರ ಪರಿಶೀಲನೆಯನ್ನು ಎದುರಿಸಲು ಸಿದ್ಧವಿರುವಾಗ, ಇರಾನ್ ಮಿಲಿಟರಿ ದಾಳಿಗೆ ನೆಪ ಸೃಷ್ಟಿಸಲು ವಾಷಿಂಗ್ಟನ್ ಮತ್ತು ತೆಲ್‌ಅವೀವ್ ಸುಳ್ಳು ಆರೋಪಗಳನ್ನು ಮಾಡುತ್ತಿವೆ” ಎಂದು ಪೆಜೆಶ್ಕಿಯನ್ ಆಪಾದಿಸಿದ್ದಾರೆ.
“ಇಸ್ರೇಲ್ ಈ ಒಪ್ಪಂದದ ಸದಸ್ಯ ರಾಷ್ಟ್ರವಲ್ಲದಿದ್ದರೂ ಅದರ ಪರಮಾಣು ಕಾರ್ಯಕ್ರಮದ ಮೇಲೆ ಅಂತರರಾಷ್ಟ್ರೀಯ ಪರಿಶೀಲನೆ ಏಕೆ ನಡೆಯುತ್ತಿಲ್ಲ” ಎಂದೂ ಅವರು ಪ್ರಶ್ನಿಸಿದ್ದಾರೆ.
ಅಮೆರಿಕದೊಂದಿಗಿನ ರಾಜತಾಂತ್ರಿಕ ಮಾತುಕತೆಯ ಕುರಿತು ಮಾತನಾಡಿದ ಅವರು, “ತಕ್ಷಣವೇ ನೇರ ಮಾತುಕತೆ ಪುನರಾರಂಭಿಸುವುದು ಕಷ್ಟಕರ. ಸಂಘರ್ಷದ ಆರಂಭದಲ್ಲಿ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾಗಿದ್ದು, ಇದು ಇರಾನ್ ಸಮಾಜಕ್ಕೆ ದೊಡ್ಡ ಆಘಾತ ತಂದಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪೂರ್ವಶರತ್ತುಗಳಿಲ್ಲದೆ ಮಾತುಕತೆ ನಡೆಸುವುದು ಸಾಧ್ಯವಿಲ್ಲ. ಹಿಂದೆ ಸಹಿ ಮಾಡಲಾಗಿದ್ದ ತಿಳಿವಳಿಕೆ ಒಪ್ಪಂದದಿಂದ ವಾಷಿಂಗ್ಟನ್ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದರಿಂದ ಉಭಯ ದೇಶಗಳ ನಡುವಿನ ನಂಬಿಕೆ ಸಂಪೂರ್ಣವಾಗಿ ಕುಸಿದಿದೆ. ಅಮೆರಿಕ ತನ್ನ ದಿಗ್ಬಂಧನಗಳನ್ನು ಹಿಂಪಡೆದು, ದಾಳಿಗಳನ್ನು ನಿಲ್ಲಿಸಿದರೆ ಮಾತ್ರ ಮುಂದಿನ ಮಾತುಕತೆ ಸಾಧ್ಯ” ಎಂದಿದ್ದಾರೆ.
“ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಲು ಪ್ರಾದೇಶಿಕ ಸಹಕಾರದ ಅಗತ್ಯತೆ ಇದೆ. ಇರಾನ್, ಸೌದಿ ಅರೇಬಿಯಾ, ಟರ್ಕಿ, ಮತ್ತು ಪಾಕಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳು ಒಗ್ಗೂಡಿ ಶಾಂತಿ ವ್ಯವಸ್ಥೆಯೊಂದನ್ನು ರೂಪಿಸಬೇಕು” ಎಂದು ಕರೆ ನೀಡಿದ್ದಾರೆ.
“ಶತಮಾನಗಳ ಯುದ್ಧದ ನಂತರ ಯುರೋಪಿಯನ್ ಒಕ್ಕೂಟ ರೂಪುಗೊಂಡ ಮಾದರಿಯಲ್ಲೇ, ಮಧ್ಯಪ್ರಾಚ್ಯದ ದೇಶಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಯ್ದುಕೊಂಡು ಆರ್ಥಿಕ ಹಾಗೂ ಭದ್ರತಾ ಸಹಕಾರವನ್ನು ವೃದ್ಧಿಸಿಕೊಳ್ಳಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.




