ವಿ.ಕೃ. ಗೋಕಾಕ್ ಅವರ ಕತೆ | ಹತಭಾಗ್ಯನ ಭಾಗ್ಯ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ನಾನು ನನ್ನೋರ್ವ ಗೆಳೆಯನೊಡನೆ ಗುಜರಾಥದಲ್ಲಿರುವ ಅವನ ಹುಟ್ಟಿದೂರಿಗೆ ಹೋಗಿದ್ದೆನು. ಗುಜರಾಥದ ಇತಿಹಾಸವನ್ನು ಅವನಿಂದ ಕೇಳಿಕೊಳ್ಳುವದರಲ್ಲಿ ನನಗೆ ಬಲು ಮಮತೆ. ಅಂತೇ ಅವನ ಹಳ್ಳಿಗೆ ಹೋದಾಗ, ಅದೇ ವಿಷಯದ ಮೇಲೆ ನಾವು ಮಾತನಾಡುತ್ತಿದ್ದೆವು.

- Advertisement -

”ಅಬೂಪಹಾಡದ ಲಕ್ಷ್ಮೀ ಶಿಬಿರದ ಪರಿಚಯವು ನಿನಗಿದೆಯೆ?” ಎಂದು ಗೆಳೆಯನು ಕೇಳಿದನು. ಅದೊಂದು ಬಹಳ ವರುಷಗಳಿಂದ ನಡೆದು ಬಂದ ಆಶ್ರಮವೆಂದು ನನಗೆ ಗೊತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

”ಅದರ ವಿಷಯವೇನು?” ಎಂದು ನಾನು ಕುತೂಹಲನಾಗಿ ಕೇಳಿದೆನು. ಗೆಳೆಯನು ಹಳೆಯದಾದ ಕೈಬರೆಹದ ಒಂದು ಚಿಕ್ಕ ಲೇಖನವನ್ನು ತೋರಿಸಿದನು.

ಅದನ್ನು ಓದುವಾಗಲೆ ನನ್ನ ಅಂತಃಕರಣವು ಕಲಮಲವಾಯಿತು. ಬರೆದವರಲ್ಲಿ ಆಳವಾದ ಗೌರವವು ಉತ್ಪನ್ನವಾಯಿತು. ಅದನ್ನು ದೊರಕಿಸಿದ ಬಗೆಯನ್ನು ಕುರಿತು ಗೆಳೆಯನನ್ನು ವಿಚಾರಿಸಿದೆನು.

”ನಮ್ಮಜ್ಜನು ಅನೇಕ ವರ್ಷಗಳವರೆಗೆ ಆ ಶಿಬಿರದಲ್ಲಿ ವಾಸಿಸುತ್ತಿದ್ದನು. ಅಲ್ಲಿಯ ಗುರುವಿನ ಮಮತೆಯು ಅವನ ಮೇಲೆ ಬಹಳ. ಅಜ್ಜನು ಅಧ್ಯಯನವನ್ನು ಮುಗಿಸಿ ಬರುವಾಗ, ಗುರುವಿನ ಆ ರಹಸ್ಯಮಯ ಲೇಖನದ ಪ್ರತಿಯೊಂದನ್ನು ಪಡೆದುಕೊಂಡು ಬಂದನು. ಇದು ಅವನ ಕಾಗದಗಳಲ್ಲಿ ಸಿಕ್ಕಿತು” ಎಂದು ಗೆಳೆಯನು ಹೇಳಿದನು.

“ಇಂದು ಆ ಗುರುವಿನ ವಂಶಜರಲ್ಲಿ ಯಾರಾದರೂ ಇರುವರೆ?” ನಾನು ಉತ್ಸುಕತೆಯಿಂದ ಕೇಳಿದೆನು.

”ಅಯ್ಯೋ! ಮಂಕು! ಗೊತ್ತಿಲ್ಲವೆ? ದೇಶಕಾರ್ಯದಲ್ಲಿ ಇಂದಿಗೆ ಅದ್ವಿತೀಯರೆಂದು ಭಾರತದಲ್ಲೆಲ್ಲ ಪುಸಿದ್ಧರಾದ ಸೋ–ರು ಅವರ ಮೊಮ್ಮಗ!”

ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಇದು ನನಗೆ ಗೊತ್ತಾದಂದಿನಿಂದ ಆ ಲೇಖನ ವಿಷಯಕವಾಗಿ ನನ್ನ ಗೌರವವು ಹೆಚ್ಚಿದೆ. ಕನ್ನಡಿಗರಿಗೂ ಪರಿಚಯವಿರಲೆಂದು ಅದನ್ನು ಇಲ್ಲಿ ಭಾಷಾಂತರಿಸಿ ಬರೆಯುತ್ತಿದ್ದೇನೆ. ಲೇಖನದಲ್ಲಿ ಊರು ಸ್ಥಳಗಳ ಉಲ್ಲೇಖವಿಲ್ಲ. ನನಗೆ ಹಿಂದಿನಿಂದ ತಿಳಿದಿದ್ದರೂ ಅನಾವಶ್ಯಕವೆಂದು ಅವುಗಳನ್ನು ಇಲ್ಲಿ ಸೇರಿಸಿಲ್ಲ. ಸುಮಾರು 50 ವರುಷಗಳ ಹಿಂದೆ ಈ ಲೇಖನವು ಬರೆದು ಮುಗಿಯಿತೆಂದು ತೋರುತ್ತದೆ.

1

ಲಕ್ಷ್ಮೀದೇವಿಯು ಬಹು ಸುಂದರಿಯಾಗಿದ್ದಳು. ಒಂದು ಶಬ್ದದಲ್ಲಿ ಅವಳ ಸೌಂದರ್ಯವನ್ನು ತೂಗಿ ತೋರಿಸುವದಾದರೆ, ಅವಳು ಸಾಕ್ಷಾತ್ ದೇವಿಯೆಂದೇ ಹೇಳಬೇಕು. ಅವಳಿಗಿಂತ ರೂಪದಲ್ಲಿ ಚೆಲುವೆಯರು ಸಿಕ್ಕಬಹುದು; ಆದರೆ ಅವಳ ಕಣ್ಣುಗಳ ತೇಜ, ಅವಳ ಮುಖದ ಮೋಹಕತೆ, ಅವಳ ನಿಲುವು, ಅವಳ ನಗೆ ಇವು ದೇವನೆಂಬ ಜ್ಯೋತಿಯ ಕಿರಣಗಳಲ್ಲದೆ ಬೇರೆಯಲ್ಲ.

ನಾನು ಅವಳನ್ನು ನೋಡಿದುದು ಹೇಗೆ? ಆಕಸ್ಮಿಕವಾಗಿ, ಅವಳನ್ನು ನೋಡಬೇಕೆಂದು ಕನಸು ಮನಸಿನಲ್ಲಿಯೂ ನಾನು ಬಯಸಿರಲಿಲ್ಲ; ಆದರೆ ಲಕ್ಷ್ಮೀದೇವಿಯು ಹೀಗೆ- ಇಂತಹ ಸ್ಥಿತಿಯಲ್ಲಿ ತನ್ನ ಪತಿಯೊಡನೆ ಇರುವಳೆಂದು ತಿಳಿದಕೂಡಲೆ, ಸಹಜವಾಗಿ ನೋಡಬೇಕೆಂದೆನಿಸಿತು. ಅದಕ್ಕಾಗಿಯೆ ಅವಳಿದ್ದ ಸೆರೆಮನೆಗೆ ನಾನು ಹೋದದ್ದು. ಹೋದ ಮೇಲೆ ಇಂತಹ ಅನುಪಮ ಸೌಂದರ್ಯವು ನನ್ನ ಕಣ್ಣಿಗೆ ಬೀಳುವದೆಂದೂ ನಾನು ತಿಳಿದಿರಲಿಲ್ಲ; ಆದರೆ ಹೋಗಿ ನೋಡಿದ ಮೇಲೆ ಲಕ್ಷ್ಮೀದೇವಿಯು ಹೀಗಿರದೆ ಮತ್ತೆ ಹೇಗಿರಬೇಕೆಂದಿದ್ದೆ? -ಎಂದೆಂದುಕೊಂಡೆನು. ಇಂದ್ರಲೋಕದಲ್ಲಿ ಇಂಥ ಆನಂದವಿರಬಹುದೆಂದು ಒಮ್ಮೆ ಬುದ್ಧಿಗೆ ಹೊಳೆದರೂ, ಇಲ್ಲಿ ಇದು ಸಹಜವಲ್ಲದೆ ಮತ್ತೇನು ಸಹಜವೆಂದು ಜೀವವು ಕೇಳುತ್ತಿತ್ತು. ದೇವಿಯು ನನ್ನನ್ನು ನಗೆಮೊಗದಿಂದ ಬರಮಾಡಿಕೊಂಡಳು. ನಾನು ಹೋಗಿರುವದು ಅವಳಿಗೇನು ಆಶ್ಚರ್ಯದ ವಿಷಯವೆಂಬಂತೆ ತೋರಲಿಲ್ಲ. ಸಹಜವಾಗಿ-ಬರುವರೆಂದು ಗೊತ್ತಿದ್ದ ಅತಿಥಿಗಳನ್ನು ಕರೆಯುವಂತೆ- ಅವಳು ನನ್ನನ್ನು ಕರೆದಳು. ಅವಳ ಪತಿಯಾದರೂ ಮಂದಹಾಸದಿಂದ ನನ್ನ ಸ್ವಾಗತಗೆಯ್ದನು. ನನಗಾದರೂ ವಿಚಿತವೆನಿಸಲಿಲ್ಲ. ಲಕ್ಷ್ಮೀದೇವಿಯು ಅಲ್ಲಿರುವಳೆಂದು ನಾನು ಹೋದೆನು. ನಾನು ಹೋದೆನೆಂದು ಅವಳು ನನ್ನನ್ನು ಬರಮಾಡಿಕೊಂಡಳು.

”ಈಗ ನಾವು ಚಂದ್ರರಾಜರ ಆತಿಥ್ಯವನ್ನು ಸ್ವೀಕರಿಸಿದ್ದೇವೆ. ಕೂಡಲು ಆಸನಗಳ ಕೊರತೆ. ಕುಳಿತುಕೊಳ್ಳಿರಿ” ಎಂದು ಲಕ್ಷ್ಮೀ ದೇವಿಯು ನಗುತ್ತ ನುಡಿದಳು. ಅವಳ ಆ ನಗೆಯಲ್ಲಿ ನಸುವೆ ವಿಷಾದವು ಬೆರೆತುಕೊಂಡಿತ್ತು. ನಸುವೆಂದರೆಷ್ಟು? ಹಗಲಿನಲ್ಲಿ ನೆಲದ ಮೇಲೆ ಬೀಳುವ ಮುಗಿಲ ನೆರಳಿನಂತೆ. ಆದರೆ ಅದರ ಕಾರಣವು ಕಲ್ಲೆದೆಯನ್ನು ಕರಗಿಸುವಂತಹದು. ಲಕ್ಷ್ಮೀ ಕೇಶವಕುಮಾರರು ಈಗ ಚಂದ್ರರಾಜರ- ನನ್ನೊಡೆಯರ- ಸೆರೆಮನೆಯಲ್ಲಿ. ಅರಸರು ಅವರನ್ನು ಕಠಿಣವಾದ ನಿರ್ಬಂಧದಲ್ಲಿಟ್ಟಿದ್ದರು. ಮರುದಿವಸ ಮುಂಜಾನೆ- ಚುಮು ಚುಮು ನಸುಕಿನಲ್ಲಿ- ಜೀವನದ ತೊರೆಯು ಮತ್ತೆ ಹುರುಪುಗೊಂಡು ಹರಿಯುವ ವೇಳೆಯಲ್ಲಿ- ಅವರಿರ್ವರನ್ನು ಗಲ್ಲಿಗೇರಿಸಬೇಕೆಂದು ಗೊತ್ತಾಗಿತ್ತು! ಲಕ್ಷ್ಮೀದೇವಿಯ ಮುಗುಳಗೆಯಲ್ಲಿ ನನಗೆ ಕಿಂಚಿತ್ ವಿಷಾದವು ಕಂಡು ಬಂದಿದ್ದರೆ ಅದರ ಕಾರಣವು ಇದೇ ಸರಿ. ಇಷ್ಟೇ.

ಇದನ್ನು ಓದಿದ್ದೀರಾ?: ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಅಲ್ಪ ವೇಳೆಯವರೆಗೆ ನಾವು ಒಬ್ಬರನ್ನೊಬ್ಬರು ನೋಡುತ್ತ ಕುಳಿತೆವು ಯಾರೂ ಮಾತನಾಡಲಿಲ್ಲ. ನನ್ನ ಎರಡೂ ಕಣ್ಣುಗಳ ಗೊಂಬೆಗಳು ಲಕ್ಷ್ಮೀದೇವಿಯ ರೂಪವನ್ನು ತಳೆದಿದ್ದವು. ಒಮ್ಮೆ ನದಿಯ ಮೇಲೆ ತೇಲಿಹೋಗುವ ಕಮಲದಂತ ಅವಳು ನನಗೆ ಕಾಣುತ್ತಿದ್ದಳು. ಎಂದು ಮುಗಿಯುವದೋ ಎಂದು ಭೀತಿಯನ್ನು ಹುಟ್ಟಿಸಿ, ಸಂತತ ಧಾರೆಯಾಗಿ ಪುಟಿಯುವ ಕಾರಂಜಿಯಂತೆ ಇನ್ನೊಮ್ಮೆ ಶೋಭಿಸುತ್ತಿದ್ದಳು. ಅಶೋಕ ವನದಲ್ಲಿಯ ಸೀತೆಯಂತೆ ಮತ್ತೊಮ್ಮೆ ಕಂಗೊಳಿಸುತ್ತಿದ್ದಳು. ಉಸುಬಿನ ಬೈಲಿನಲ್ಲಿ ಕೀರ್ತಿಯ ಲತೆಯೊಂದು, ನಿಶೆಯ ನಿರ್ಜನ ವನದಲ್ಲಿ ಬೆಳಕಿನ ಮಾಮರವೊಂದು- ಹೀಗೆ ಏನೇನೋ ಆಗಿ ಲಕ್ಷ್ಮೀದೇವಿಯು ನನ್ನ ಕಣ್ಣೆದುರಿನಲ್ಲಿ ಕುಳಿತಿದ್ದಳು.

ಕಡೆಗೊಮ್ಮೆ ದೇವಿಯು ನಕ್ಕಳು. ಮನಸ್ಸಿನಲ್ಲಿ ದೇವಿಗೆ ಕೈಮುಗಿದೆನು. ಮನಸ್ಸಿನಲ್ಲಿ ಆಕೆಗೆ ನನ್ನ ಜೀವವನ್ನು ಅರ್ಪಿಸಿದೆನು.

ಆ ಮಾತು, ಈ ಮಾತು, ರಾಜ್ಯದ- ಮಾತು ದೇವಿಯು ಹೀಗೆ ಮಾತು ಬೆಳಸಿದಳು.

”ಕುಮಾರ, ನೀವು ಚಂದ್ರರಾಜರ ಉತ್ಕಟ ಸೇವಕರು. ವರ್ಷಾನುವರ್ಷ ಕಂಪನಿ ಸರಕಾರದವರೊಡನೆ ನಿಮ್ಮ ರಾಜರ ಘನತೆಯನ್ನು ಕಾಯ್ದಿರುವಿರಿ. ದಿಲ್ಲಿಯ ದರಬಾರಿನಲ್ಲಿ, ಉಳಿದ ಸಂಸ್ಥಾನಿಕರಿಗಿಂತ ಅವರ ಗೌರವವು ಪ್ರಶಸ್ತವಾಗುವಂತೆ ಮಾಡಿರುವಿರಿ. ಬಂಡಾಯದ ವೇಳೆಯಲ್ಲಿ ರಾಜರಿಗೂ ಕಂಪನಿಗೂ ಹಗಲಿರುಳು ನೆರವಾಗಿದ್ದೀರಿ. ನಾವು ಬಂಡುಗಾರರೆಂದು ಸೆರೆಯಾಳಾಗಿದ್ದೇವೆ. ಕಂಪನಿಯ ಆಜ್ಞೆಯಂತೆ ರಾಜರು ನಮಗೆ ದೇಹಾಂತ ಶಿಕ್ಷೆಯನ್ನು ವಿಧಿಸಿದ್ದಾರೆ. ನಮ್ಮಲ್ಲಿ ನಿಮಗೇಕೆ ವಿಶ್ವಾಸ?”

ನನಗೆ ಮೆಯ್ನವಿರೆದ್ದಿತು. ನನ್ನ ದಾಸ್ಯವನ್ನು ಸೂಚಿಸುವ ಹಾಳು ಬಟ್ಟೆಯನ್ನು ತೆಗೆದೊಗೆದು, ಲಕ್ಷ್ಮೀದೇವಿಯ ಸೇವಕನಂತೆ ಉಡುಪು ಧರಿಸಬೇಕೆಂದು ಮನವು ಹರಿಯಿತು. ”ದೇವಿ! ನನ್ನ ದೇಹವು ಇನ್ನೂ ಅರಸರ ಋಣದ ಸಂಕೋಲೆಯಲ್ಲಿ ಬಿದ್ದುಕೊಂಡಿದೆ. ನನ್ನ ಜೀವವು ಮಾತ್ರ ನಿಮ್ಮ ದೈವಿಕಸ್ವಾತಂತ್ರ್ಯದಲ್ಲಿ ವಿಹರಿಸಲು ಹಾತೊರೆಯುತ್ತಿದೆ. ಒಂದು ದಿನ ನಾನು ನಿಮ್ಮಂತೆ ದಾಸ್ಯದಿಂದ ಮುಕ್ತನಾಗಬಹುದು.”

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

ಉದ್ವಿಗ್ನಳಾಗಿ ದೇವಿಯು ನುಡಿದಳು. ”ಕುಮಾರ, ಯಾವ ದಿನ? ಎಂತಹ ಮುಕ್ತಿ?”

ಆಗ ನನ್ನ ಮನಸ್ಸಿನಲ್ಲಿ ಮೋಡ ಕವಿದಂತಾಯಿತು. ಇಂದು ನನ್ನ ಜೀವನದ ಮೇಲೆ ಅಮೃತದ ಧಾರೆಯನ್ನು ಎರೆದ ದೇವಿಯು, ನಾಳೆ ಇಲ್ಲದಂತಾಗುವಳಲ್ಲ! ಮುಂದೆ ನಾನು ಜೀವಿಸಬಹುದೆ? ಬಿಡುಗಡೆ! ಬಿಡುಗಡೆ! ಎಂದು ಆತ್ಮವು ಕೂಗಿಕೊಂಡಿತು. ದೇವಿ-ಕೇಶವಕುಮಾರರ ಬಿಡುಗಡೆಯೆಂದರೆ ನನ್ನ ಬಿಡುಗಡೆಯೇ ಸರಿ.

ದೇವಿಗೆ ನನ್ನ ವಿಚಾರಲಹರಿಗಳು ತಿಳಿದಿರಬಹುದು. ಅದಕ್ಕಂತೆ ಅಷ್ಟು ಭಾವಗರ್ಭಿತವಾದ ನಗೆಯನ್ನು ನಕ್ಕಳು. “ಕುಮಾರ, ನೀವು ನನ್ನ ಪಾಡಿಗಾಗಿ ವ್ಯಥೆಪಡಬೇಡಿ. ಮರಣವೆಂದರೆ ನಮಗೆ ಹಬ್ಬವಾಗಿದೆ. ಜನ್ಮಭೂಮಿಗೆ ಜೀವಕಳೆಯಿಲ್ಲವೆಂದು ಕದನವೆಸಗಿದೆವು. ಸಫಲವಾಗಲಿಲ್ಲ. ಸ್ವಾತಂತ್ರ್ಯವಿದ್ದೆಡೆಗೆ ತೆರಳುತ್ತಿದ್ದೇವೆ.”

ನನ್ನ ಎದೆಯು ಕರಗಿ ನೀರಾಯಿತು. ದೇವಿಯೇ ಇಲ್ಲದಂತಾದರೆ ಪ್ರೇಮವನ್ನು ಅರಸುತ್ತ ನಾನೆಲ್ಲಿ ಅಲೆಯಬೇಕು? ತಡವರಿಸಿಕೊಂಡು ಎದ್ದೆನು. ದೇವಿ-ಕುಮಾರರನ್ನು ಬೀಳ್ಕೊಂಡು ಲಗುಬಗೆಯಿಂದ ಅರಸರೆಡೆಗೆ ಸಾಗಿದೆನು.

2

ಅದೇ ಸಂಜೆಯಾಗಿತ್ತು. ಅಂದು ದರಬಾರವು ನೆರೆಯುವದಿತ್ತು. ಕಂಪನಿ ಸರಕಾರಕ್ಕೆ ದೊರೆತ ಅಪೂರ್ವ ವಿಜಯದಲ್ಲಿ ಚಂದ್ರರಾಜರು ಭಾಗಿಗಳಾಗಿದ್ದರು. ಕಾರಣ ಅವರಿಗೆ ಮನ್ನಣೆಯಿತ್ತು, ಯಶಸ್ಸಿನಲ್ಲಿ ಪಾಲುಗಾರರಾಗಲು ಊರಿನ ಪ್ರಮುಖರೆಲ್ಲ ಕೂಡಿದ್ದರು. ರಾಜ್ಯದ ಮುಖ್ಯಾಧಿಕಾರಿಗಳು ಸಭೆಯ ಕಾರ್ಯವನ್ನು ವಿಜೃಂಭಣೆಯಿಂದ ಸಾಗಿ ಸಲು ಬದ್ಧಕಂಕಣರಾಗಿದ್ದರು. ಸ್ವತಃ ದೊರೆಗಳೇ ನನಗೆ ಆಮಂತ್ರಣ ವಿತ್ತಿದ್ದರು. ಕಾರಣ ಅವರಿಗಾಗಿ ನಾನು ಅರಮನೆಯಲ್ಲಿ ದಾರಿ ಕಾಯದೆ, ನೆಟ್ಟಗೆ ಸಭಾಮಂಟಪದೆಡೆಗೆ ಧಾವಿಸಿದೆನು. ಸಭೆಯಲ್ಲಿಯ ಅಂದಿನ ದೀಪಮಾಲೆ, ಮಹೋತ್ಸವ,- ಇವೆಲ್ಲ ಎಂದೋ ಮರೆತುಹೋಗಿವೆ. ಆದರೆ ನಾನು ಸಭೆಗೆ ಹೋಗುವಾಗ ನನ್ನೆದೆಯನ್ನು ದಹಿಸಿದ ಪರಿತಾಪವು ಇಂದಿಗೂ ಕುದಿಯುತ್ತಿದೆ.

ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

ಸಭೆಯು ಮುಗಿದ ಮೇಲೆ ದೊರೆಗಳೊಡನೆ ಮಾತನಾಡಿಕೊಳ್ಳುವದೆಂದು ಮನದಲ್ಲಿ ನುಡಿದುಕೊಂಡೆನು. ಆದರೆ ದೈವವು ಬೇರೊಂದು ಬಗೆಯಿತು. ಪ್ರಮುಖರನೇಕರು ಅಭಿನಂದನಪರ ಭಾಷಣಗಳನ್ನು ಮಾಡಿದರು. ಸಮಯೋಚಿತವಾಗಿ ನಾನಾದರೂ ನಾಲ್ಕು ಮಾತು ಹೇಳಬೇಕು. ಇಷ್ಟರಲ್ಲಿ ಮೇಲಧಿಕಾರಿಯೋರ್ವನು ತನ್ನ ವಾಣಿಯನ್ನು ಚಮಕಿಸಿದನು. ಶಂಕರಸಿಂಗನೆಂದರೆ ಮುಖಸ್ತುತಿಯ ಭೃಂಗವೆಂದು ನನಗೆ ಗೊತ್ತಿತ್ತು. ಅವರೆದುರಿಗೆ ಲಾಂಗೂಲಚಾಲನ ಮಾಡಿ, ಇವರ ಕಿವಿಯಲ್ಲಿ ಊದಿನಕಡ್ಡಿ ಹಚ್ಚಿ ಅವನು ಈ ಪದವಿಗೇರಿದ್ದನು. ಅವನ ಕಾಗದದ ಹೂಗಳು ಸುರಿಯುವವರೆಗೆ ನಾನು ಸಹಿಸಿಕೊಂಡಿರಬಹುದಾಗಿತ್ತು. ಆದರೆ ರೀತಿಯಲ್ಲಿ ನಾವೀನ್ಯ ಬೇಕಲ್ಲ? ಎಲ್ಲರ ಹಾಗೆ ಹೊಗಳಿ ಮುಗಿಸಿದರೆ ಹೇಗೆ? ಶಂಕರಸಿಂಗನು ದೊರೆಗಳ ಪರಾಕ್ರಮವನ್ನು ನುತಿಸಿದ್ದಲ್ಲದೆ, ಸೆರೆಯಾಳುಗಳನ್ನು ಹೀಯಾಳಿಸಿದನು. ಕೇಶವ ಕುಮಾರರನ್ನು ಬಂಧಿಸಿದುದು ಅಮೋಘವಾದ ಯಶಸ್ಸೆಂದು ಸಾರಿದನು. ‘ಲಕ್ಷ್ಮೀದೇವಿಯು ತನ್ನ ರೂಪದ ವ್ಯೂಹವನ್ನೊಡ್ಡಿ, ಜನರನ್ನು ಅರಾಜಕತೆಗೆ ಎಳೆಯುತ್ತಿದ್ದಳು. ಕೇಶವಕುಮಾರರಿಗಿಂತ ಲಕ್ಷ್ಮೀದೇವಿಯೇ ತೊಂದರೆಗಳ ತವರಾಗಿದ್ದಳು. ಕಾರಣ ಪತಿಯೊಡನೆ ದೇಹಾಂತ ಶಾಸನವು ಈ ಜಾ-ರಿ-ಣಿ-ಗೆ…’

”ಎಚ್ಚರ! ಏನೆನ್ನುವಿರಿ!” ಎಂದು ಅರಿವಿಲ್ಲದೆ ಖಡ್ಗವನ್ನು ಒರೆಯಿಂದ ಹಿರಿದು ನಾನು ಕೂಗಿಕೊಂಡೆದ್ದೆನು. ಸಭೆಯೆಲ್ಲ ಉಲ್ಲೋಲ ಕಲ್ಲೋಲವಾಯಿತು. ಇರ್ವರು ರಾಜದೂತರು ಬಂದು, ನನ್ನನ್ನು ಬಲವಾಗಿ ಹಿಡಿದುಕೊಂಡರು. ಆದರೆ ನನ್ನ ಹುಮ್ಮಸವು ತೀರಲಿಲ್ಲ. ‘ಖಬ‌ರ್ ದಾರ್! ಶಂಕರಸಿಂಗ! ನೀವು ದೊರೆಗಳನ್ನು ಮನಬಂದಂತೆ ಹೊಗಳಿರಿ. ಆದರೆ ವೃಥಾರೋಪಗಳನ್ನು ಉಳಿದವರ ಮೇಲೆ ಹೊರಿಸಬೇಡಿರಿ. ಲಕ್ಷ್ಮೀದೇವಿಯವರ ಯೋಗ್ಯತೆಯು ನಿಮಗಿನ್ನೂ ತಿಳಿದಿಲ್ಲ.”

“ನಿಮಗೆ ಮಾತ್ರ ಚೆನ್ನಾಗಿ ತಿಳಿದಿದೆ” ಎಂದು ಶಂಕರಸಿಂಗನು ಗಹಗಹಿಸಿ ನಕ್ಕನು. ದೊರೆಗಳ ಅಂಗರಕ್ಷಕರು ನನ್ನನ್ನು ಸುತ್ತುಗಟ್ಟಿರುವದು ಅವನಿಗೆ ಪೂರ್ಣವಾಗಿ ಮನವರಿಕೆಯಾಗಿತ್ತು. ಸಭಿಕರೆಲ್ಲರೂ ಹುಚ್ಚೆದ್ದು ನಕ್ಕರು. ನನ್ನ ತಲೆಗೆ ಪಿತ್ತವೇರಿತು.

ಚಂದ್ರರಾಜರು ಕೂಡ ಈ ಉಲ್ಲಾಸದಲ್ಲಿ ತುಸು ದನಿಗೂಡಿಸಿದರು. ಆಮೇಲೆ ಗಂಭೀರರಾಗಿ ನನ್ನನ್ನು ದಿಟ್ಟಿಸಿ ನೋಡಿ: ”ಕುಮಾರ, ಮುಂಜಾವಿನಲ್ಲಿ ನೆಟ್ಟಗಿದ್ದ ನೀವು ಈಗ ಅಸ್ತವ್ಯಸ್ತರೇಕೆ? ರಾಜದ್ರೋಹಿಗಳನ್ನು ನಿಮ್ಮಂಥ ರಾಜನಿಷ್ಠರು ಸಮರ್ಥಿಸಬೇಕೆ? ತುಸು ಸಾವಧಾನವಿರಲಿ. ನಿಮ್ಮ ಹೆಸರಿಗೆ ಕಲಂಕ ಬೇಡ.”

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ದೊರೆಗಳ ಮಾತುಗಳು ಕಠಾರಿಯಂತೆ ನನ್ನೆದೆಯನ್ನಿರಿದವು. ಆದರೂ ಸಾವರಿಸಿಕೊಂಡು ಕೈಜೋಡಿಸಿ ಮಾತನಾಡಿದೆನು. ಸರಕಾರ, ಲಾಲಿಸಬೇಕು. ತಪ್ಪು ಕ್ಷಮಿಸಬೇಕು. ಹೀನರ ನುಡಿಯಿಂದ ಖತಿಗೊಂಡು ಹೀಗೆ ಹರಿಹಾಯ್ದೆನು. ನಾನು ತಮ್ಮ ಚರಣಸೇವಕನು. ತಮ್ಮ ಋಣದಲ್ಲಿ ಬೆಳೆದಿದ್ದೇನೆ. ಸ್ವಾಮಿಯ ಕಾರ್ಯವೆಂದರೆ ದೇವನ ಆಜ್ಞೆಯಿದ್ದಂತೆ.” ಪಳಪಳನೆ ನನ್ನ ಕಂಗಳಿಂದ ಅಶ್ರುಧಾರೆಯು ಸುರಿಯಹತ್ತಿತು.

ದೊರೆಗಳ ಮುಖವು ಮತ್ತಿಷ್ಟು ಗಂಭೀರವಾಯಿತು. ”ಬಿಜಯಕುಮಾರ, ಅದನ್ನೆಲ್ಲ ನೀವು ನನಗೆ ಹೇಳಬೇಕೆ? ನಾನು ಪಟ್ಟಕ್ಕೆ ಬಂದಂದಿನಿಂದ, ಸಭೆಯಲ್ಲಿ ಹೀಗೆ ನನ್ನೆದುರು ಖಡ್ಗವನ್ನು ಯಾರೂ ಝಳಪಿಸಿದ್ದಿಲ್ಲ. ನೀವು ಹಾಗೆ ಮಾಡಿದಿರಿ. ನಾನು ಸುಮ್ಮನಿದ್ದೇನೆ.”

”ಮಹರಾಜ, ಅದಕ್ಕೆಂದೇ ನಾನು ಪ್ರಾರ್ಥಿಸುವದು. ತಮ್ಮ ದಯೆಯಿಲ್ಲದೆ ನಾನು ಇಂದಿನವರೆಗೆ ಬದುಕುತ್ತಿರಲಿಲ್ಲ. ತಮ್ಮ ಕಾರ್ಯದಲ್ಲಿ ತತ್ಪರನಾದುದಲ್ಲದೆ ನಾನು ಯಾವ ಭಿನ್ನಹವನ್ನೂ ಮುಂದೆ ಚಾಚಿರಲಿಲ್ಲ, ಇಂದು ಮಾತ್ರ ಮನ್ನಿಸಬೇಕು. ತಮ್ಮ ಸೇವೆಯಲ್ಲಿ ನನ್ನ ಜೀವವನ್ನು ಸವೆಯಿಸುವ ಆಶೆಯು ಇನ್ನೂ ನನಗಿದೆ. ಆದರೆ ಒಂದು ಅಭಿಲಾಷೆಯ ಮೇಲೆ ನನ್ನ ಬಾಳುವೆಯ ತಳಹದಿಯೇ ನಿಂತಿದೆ. ”

ದರಬಾರವೆಲ್ಲ ನನ್ನ ಮಾತು ಕೇಳಿ ಸ್ತಬ್ಧವಾಗಿತ್ತು. ಶಂಕರಸಿಂಗನು ಶಿಖಿಯಾಗಿ ಮೆರೆಯದ ದಾವಾಗ್ನಿಯಂತೆ ದಿಟ್ಟಿಸುತ್ತಿದ್ದನು. ಅರಸರು ಮತ್ತೆ ಅನುಗ್ರಹಿಸಿದರು ”ಕುಮಾರ, ನಿಮ್ಮ ಇಚ್ಛೆಯೇನಿದೆ- ಕೇಳಿಕೊಳ್ಳಬಹುದು. ತಿಳಿಯದೆ ಹೇಗೆ ನೆರವೇರಿಸುವದು?”

ಮನದಲ್ಲಿದ್ದ ಧೈರ್ಯವನ್ನೆಲ್ಲ ನಾಲಗೆಯ ತುದಿಯ ಮೇಲೆ ಒಟ್ಟುಗೂಡಿಸಿ ನಾನು ನುಡಿದೆನು: ”ಕೇಶವಕುಮಾರ ಲಕ್ಷ್ಮೀದೇವಿಯರ ಪ್ರಾಣದಾನ ಗೆಯ್ಯಬೇಕು. ದೊರೆಗಳು ಬಡವನ ಈ ಪ್ರಾರ್ಥನೆಯನ್ನು ಮನ್ನಿಸಬೇಕು.”

ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ

ಸಭೆಯು ನಿಶ್ಯಬ್ದವಾಗಿತ್ತು. ಶಂಕರಸಿಂಗನು ರಾಜರನ್ನೇ ಎವೆಯಿಕ್ಕದೆ ನೋಡುತ್ತಿದ್ದನು. ದೊರೆಗಳ ಗಾಂಭೀರ್ಯದಲ್ಲಿ ನಡುವೆ ಕೋಪವು ಬೆರೆತುಕೊಂಡಿತು.

”ಕುಮಾರ, ಈ ತೆರದ ಬಿನ್ನಹವು ನಿಮ್ಮಿಂದ ಬರುವದೆಂದು ನನಗೆನಿಸಿರಲಿಲ್ಲ. ನೀವು ಹೆಸರೆತ್ತಿದ ರಾಜದ್ರೋಹಿಗಳು ಪರಿಪರಿಯಾಗಿ ನಮ್ಮನ್ನು ಪೀಡಿಸಿದ್ದಾರೆ. ಅವರನ್ನು ಸೆರೆ ಹಿಡಿದಾಗಲೆ ಕಂಪನಿ ಸರಕಾರದೊಡನೆ ನಮ್ಮ ವರ್ಚಸ್ಸು ಹೆಚ್ಚಿದೆ. ಅವರನ್ನು ಬಿಟ್ಟು ಬಿಡುವದೆಂದರೆ ನಮ್ಮ ಮೋರೆಗೆ ನಾವೇ ಕಲಂಕವನ್ನು ಬಡಿದುಕೊಂಡಂತೆ. ಈ ವಿಷಯವನ್ನು ಪುನಃ ಪ್ರಸ್ತಾಪಿಸುವವರು ರಾಜದ್ರೋಹಿಗಳಾಗುವರು.”

ನಿಂತಲ್ಲಿ ನನ್ನ ಜೀವವು ಕುಸಿದಿತು. ಇನ್ನು ಬದುಕುವದು ಹೇಗೆ? ಅಲ್ಲಿಯೇ ನನ್ನ ಕೆಲಸಕ್ಕೆ ಶರಣು ಹೊಡೆದು, ಲಕ್ಷ್ಮೀದೇವಿಯೊಡನೆ ಸತ್ತು ಬಾಳಬೇಕೆಂದು ಮನವು ಹಂಬಲಿಸಿತು. ಉಳಿದವರ ಭಾವನೆಗಳನ್ನು ಹುಲ್ಲೆಂದು ಭಾವಿಸುವ ಅರಸನನ್ನು ನಾನು ಇಲ್ಲಿಯವರೆಗೆ ಸೇವಿಸಿದುದು ಹೇಗೆ?

ಅಷ್ಟರಲ್ಲಿ ಶಂಕರಸಿಂಗನು ಎದ್ದು ನಿಂತನು. ”ಮಹರಾಜ, ಒಳ ಸಂಚುಗಾರರೊಡನೆ ಬೆರೆತು, ದೊರೆಗಳ ಹಿತವನ್ನು ದುರ್ಲಕ್ಷಿಸುವ ದೂಷಿತರಿಂದ ನನ್ನ ಭಾಷಣಕ್ಕೆ ತಡೆ ಬಂದಿತು. ರಾಜಕಾರಣದಲ್ಲಿ ರಾಕ್ಷಸಿಯರಂತೆ ಕಾಲಿಡುವ ಚೆಲುವೆಯರಾದ ಸ್ತ್ರೀಯರು…”

ಮುಂದೆ ಶಂಕರಸಿಂಗನು ಹೇಳುವ ಮಾತು ನನ್ನ ಮನಸ್ಸಿನಲ್ಲಿ ಮಿಂಚಿ ಹೋಯಿತು. ಜಾ…ರಿ…ಣಿ. ಈ ಕಠೋರ ಶಬ್ದದ ಪುನರಾವೃತ್ತಿಯನ್ನು ತಡೆಯುವದು ಹೇಗೆ? ನನ್ನ ಕೈಯಿಂದ ತಡೆಯಿಲ್ಲದೆ ಸಾಗಿಹೋದ ಕಠಾರಿಯು ಆ ನೀಚನ ಮರ್ಮವನ್ನು ಭೇದಿಸಿತು. ಕ್ಷಣಮಾತ್ರ ದಲ್ಲಿ ರಕ್ತದ ಮಡುವಿನಲ್ಲಿ ಶಂಕರಸಿಂಗನು ಮೃತನಾಗಿ ಬಿದ್ದಿದ್ದನು. ಸಭೆಯಲ್ಲೆಲ್ಲ ಹಾಹಾಕಾರವೆದ್ದಿತು.

ರಾಜಾಜ್ಞೆಯಂತೆ ದೂತರು ನನ್ನನ್ನು ಒಂಧಿಸಿ, ಸೆರೆಮನೆಯೆಡೆಗೆ ಸಾಗಿಸಿದರು. ಅಭಿನಂದನಕ್ಕಾಗಿ ಕಲೆತಿದ್ದ ಸಭೆಯು ಅಸ್ತವ್ಯಸ್ತವಾಗಿ ಮುಗಿದುಹೋಯಿತು.

3

ಅಂದು ರಾತ್ರಿ ಕತ್ತಲೆಯ ಕೋಣೆಯಲ್ಲಿ ನಾನು ಕೊಳೆಯುತ್ತಿದ್ದೆನು. ನನ್ನ ಕ್ರೋಧದ ಜ್ವಾಲೆಯು ಇನ್ನೂ ಶಾಂತವಾಗಿರಲಿಲ್ಲ. ದಿಕ್ಕು ದಿಕ್ಕುಗಳಿಗೆ ವಿಚಾರಗಳು ಹರಿಯುತ್ತಿದ್ದವು. ಇಂಥ ಅರಸನನ್ನು ವ್ಯರ್ಥವಾಗಿ ಸೇವಿಸಿದೆನಲ್ಲವೆ? ಆದರೆ ಆ ನೀಚನ ಮೇಲಿನ ಸಿಟ್ಟು ಚೆನ್ನಾಗಿ ತೀರಿತು. ನನಗೆ ಯಮಯಾತನೆಯು ಬಂದರೂ ಚಿಂತೆಯಿಲ್ಲ. ದೇಹದ ದಾಸ್ಯವನ್ನು ತೊರೆದು, ಇಂದು ಜೀವದೇವನ ರಾಜ್ಯದಲ್ಲಿ ಕಾಲಿಟ್ಟಿದ್ದೇನೆ. ಬಂದ ದುಃಖಗಳನ್ನು ಭೋಗಿಸಿಯೇ ತೀರಬೇಕು. ಆದರೆ ಲಕ್ಷ್ಮೀದೇವಿಯನ್ನು ಕಾಣುವದು ಹೇಗೆ?

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಬರಬರುತ್ತ ಜೀವನದ ನೀರಸತೆಯ ಅನ್ಯಾಯವೂ ಕಣ್ಣೆದುರು ಕುಣಿಯತೊಡಗಿದವು. ಈ ಜಗತ್ತಿನಲ್ಲಿ ಜೀವಜ್ಯೋತಿಗಳಿಗೆ ಸ್ಥಾನವಿಲ್ಲವೆ? ಕತ್ತಲೆ ಕವಿದು, ತಲೆ ತಿರುಗಿ ಭಣಗುಟ್ಟಿತು. ಅಷ್ಟರಲ್ಲಿ ಸೆರೆಮನೆಯ ಬಾಗಿಲು ಮೆಲ್ಲನೆ ತೆರೆದಂತಾಗಿ, ಲಕ್ಷ್ಮೀದೇವಿಯು ಪ್ರವೇಶಿಸಿದಳು. ಅದು ಕನಸೋ ಮನಸೋ ನಾನರಿಯೆ. ಇಂದಿಗೂ ಅದರ ಬಗೆಯನ್ನು ತಿಳಿಯದಾಗಿದ್ದೇನೆ. ಆದರೆ ಇಷ್ಟು ಮಾತ್ರ ನಿಜ; ಹತಭಾಗ್ಯನಾದ ನನ್ನ ಭಾಗ್ಯವನ್ನು ಆ ಕ್ಷಣವು ಇಂದಿಗೂ ತೆರೆದಿಟ್ಟಿದೆ.

ಲಕ್ಷ್ಮೀದೇವಿಯು ಬಂದೊಡನೆ ಕೋಣೆಯೆಲ್ಲ ಪ್ರಕಾಶಮಾನವಾಯಿತು. ಅವಳ ಎತ್ತರವಾದ ನಿಲುವು, ಗಂಭೀರವಾದ ನಗೆ, ಮೌನವಿರಲು ಆಣತಿಯೆಸಗುವ ತುಟಿಯ ಮೇಲಿನ ಆ ಬೆರಳು- ಇವೆಲ್ಲ ನನ್ನ ಯಾತನೆಯನ್ನು ಕಳೆದು ಆನಂದಿತನನ್ನಾಗಿ ಮಾಡಿದವು.

”ದೇವಿ! ಹೀಗೆ ನೀವು ಬರಬಾರದು. ಕಾವಲುಗಾರನು ಹಿಂಸೆ ಪಡಿಸಬಹುದು” ಎಂದು ಮಲಗಿಕೊಂಡಲ್ಲಿ ನಾನು ನುಡಿದೆನು.

ದೇವಿಯು ಮೃದುವಾಗಿ ನಕ್ಕಳು. ”ಕುಮಾರ, ನೀವು ನನ್ನ ಬರವನ್ನು ನಿರೀಕ್ಷಿಸುತ್ತಿರಲು, ನಾನು ಬರದಿರುವದು ಹೇಗೆ?”

ಕ್ಷಣ ಹೊತ್ತು ಎಲ್ಲ ಸ್ತಬ್ಧವಿತ್ತು. ಮತ್ತೆ ದೇವಿಯು ಮಾತನಾಡಿದಳು. ”ಕುಮಾರ, ಇಂದು ನೀವು ಸೆರೆಯಾಳುಗಳು. ಆದರೆ ವಿಜಯಶಾಲಿಗಳಾಗಿದ್ದೀರಿ. ಇಂದಿನ ನಿಮ್ಮ ವಿಜಯವು ನೂರು ವಿಜಯಗಳನ್ನು ಸ್ಪುರಿಸುವಂತಹದು. ಈ ಸೈರ್ಯವು ಎಂದಿಗೂ ಕದಲದಿರಲಿ.”

”ದೇವಿ; ಎಲ್ಲವನ್ನೂ ತೊರೆದು ನಿಮ್ಮೆಡೆಗೆ ಬಂದಿದ್ದೇನೆ. ಇನ್ನು ಅಗಲಿಕೆಯಿಲ್ಲವಷ್ಟೇ?” ಎಂದು ನನ್ನ ಕ್ಷೀಣವಾಣಿಯು ದೀನವಾಗಿ ಕೇಳಿತು.

ದೇವಿಯು ನಕ್ಕಳು. ಆದರೆ ನಗೆಯಲ್ಲಿ ವಿಷಾದವಿತ್ತು “ಕುಮಾರ, ನಾವು ಇನ್ನು ಪಯಣ ಬೆಳೆಯಿಸುತ್ತೇವೆ.” ತುಸು ಹೊತ್ತು ದೇವಿಯು ವಿಚಾರಿಸಿದಳು. ಅವಳ ಕಣ್ಣಲ್ಲಿ ಶೋಕವು ಒತ್ತರಿಸಿತು. ಕುಮಾರ, ಹೀಗೆ ನನ್ನ ಕರುಳನ್ನು ಕೆರಳಬೇಡಿರಿ. ನಾನು ನಿಮ್ಮ ಭಗಿನಿಯಲ್ಲವೆ? ನನ್ನ ಪ್ರೇಮವನ್ನು ಪೂರ್ತಿಗೊಳಿಸಲು ನಾನೋರ್ವ ಧೀರನನ್ನು ವರಿಸಿದೆನು. ಆದರೆ ಪ್ರೇಮದ ವಿರಾಮವನ್ನು ತಡೆಯದೆ ಹೋದೆನು. ಜಗತ್ತಿನಲ್ಲಿ ಸಂಗ್ರಾಮವೆಂದೂ ಸ್ವರ್ಗದಲ್ಲಿ ಪ್ರೇಮವೆಂದೂ ಈಶ್ವರನ ಕ್ರಮವಿದ್ದಂತೆ ತೋರುತ್ತದೆ. ನೀವು ಬದುಕಿದಲ್ಲಿ ಪ್ರೇಮವು ಲಭಿಸುವ ತಾಣವನ್ನು ತೋರಿಸಲೆ?”

ಚಿತ್ರದ ಗೊಂಬೆಯಂತೆ ನಾನು ಸಮ್ಮತಿಯಿತ್ತೆನು.

ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?

”ಅಲ್ಲಿ ನೋಡಿ! ಅಬೂಪಹಾಡ!” ಎಂದು ದೇವಿಯು ಬೆರಳು ಮಾಡಿ ತೋರಿಸಿದಳು. ನಾನು ಹೊರಳಿ ನೋಡಿದೆನು. ಅಬೂಪಹಾಡದ ಪರ್ವತಶ್ರೇಣಿಯು ಮೆರೆಯುತ್ತಲಿತ್ತು. ಅದರಡಿಗೆ ಒಂದು ಹಳ್ಳಿ. ಹಳ್ಳಿಯ ಒರ್ವ ವೃದ್ಧನ ಮನೆಯಲ್ಲಿ, ಪರಮಸುಂದರಿಯಾದ ತರುಣಿಯು ಧ್ಯಾನಿಸುತ್ತ ಕುಳಿತುಕೊಂಡಿದ್ದಳು. ಅವಳ ಮೈಕಟ್ಟೆಲ್ಲ ಅಚ್ಚಳಿಯದೆ ಲಕ್ಷ್ಮೀದೇವಿಯನ್ನು ಹೋಲುತ್ತಿತ್ತು. ಆದರೆ ಕರ್ಮಯೋಗದಲ್ಲಿ ಅಡಿಯಿಡುವ ಮುಂಚೆ ತಪಸ್ಸಿಗಾಗಿ ಕುಳಿತ ದೇವಿಯಂತೆ, ಕನ್ನೆಯು ಶೋಭಿಸುತ್ತಿದ್ದಳು. ಅವಳನ್ನು ನೋಡಿ ನನ್ನ ಮನವು ಸುಪ್ರಸನ್ನವಾಯಿತು.

ಮತ್ತೆ ಹೊರಳಿ ನೋಡಿದೆನು. ಲಕ್ಷ್ಮೀದೇವಿಯು ಮಾಯವಾಗಿದ್ದಳು. ಕತ್ತಲೆಯು ಕೋಣೆಯನ್ನು ಕವಿದುಕೊಂಡಿತ್ತು. ಮತ್ತೆ ಯಾತನೆ, ಸಂಕಟ, ನೋವು. ನಾನು ರೇಗಿದೆನು, ಚೀರಿದೆನು, ಆಕ್ರೋಶಿಸಿದೆನು. ಕತ್ತಲೆಯು ಕದಲಲಿಲ್ಲ; ಕದವು ತೆರೆಯಲಿಲ್ಲ.

4

ಮುಂದೆ ನಾನು ಸೆರೆಮನೆಯಲ್ಲಿ ಕಾಲ ಕಳೆದ ಬಗೆಯು ಇಂದಿಗೂ ನನಗೆ ತಿಳಿಯದಾಗಿದೆ. ಮನವೆಲ್ಲ ಶೂನ್ಯವಾಗಿ ಜೀವಿತವು ಘೋರ ಕಾನನವಾಯಿತು, ಪಂಜರದಲ್ಲಿಯ ಗಿಳಿಯು ಮುಗಿಲನ್ನು ನೋಡುವಂತೆ, ಹಗಲು ರಾತ್ರಿ ನಾನು ಕೋಣೆಯ ಬಾಗಿಲನ್ನು ದಿಟ್ಟಿಸುತ್ತಿದ್ದೆನು. ನನಗೆ ಹೊಳೆಯುವ ಚಿತ್ರಗಳು ಎರಡು: ಮಾಯವಾದ ಲಕ್ಷ್ಮೀದೇವಿ, ಆಕೆ ತೋರಿಸಿದ ಅಬೂಪಹಾಡ.

ಆಗ ನಾನು ಭ್ರಮಿಷ್ಟನಾಗಿದ್ದೆನೆಂದು ಹಿಂದುಗಡೆ ನನಗೆ ತಿಳಿಯಿತು. ಆರು ತಿಂಗಳವರೆಗೆ ‘ಲಕ್ಷ್ಮೀದೇವಿ’ ಎಂದು ಕನಕರಿಸಿದೆನು. ಸೆರೆಮನೆಯಲ್ಲಿ ಹೊರಳಾಡಿದೆನು. ‘ಅಬೂಪಹಾಡ’ ಎಂದು ಕೂಗಿಕೊಂಡೆನು, ನನ್ನ ವಿಷಯಕವಾಗಿ ದೊರೆಗಳ ಮನೋನಿಶ್ಚಯವೇನಾಗಿತ್ತೋ ನಾನರಿಯೆ. ಅದೇನೆ ಇರಬಹುದು; ನನ್ನ ದುಃಸ್ಥಿತಿಯನ್ನು ನೋಡಿ ಅವರಿಗೆ ಕರುಣೆ ಬಂದಿರಬೇಕು. ಅವರಿಗೂ ಕಂಪನಿ ಸರಕಾರದವರಿಗೂ ಪತ್ರವ್ಯವಹಾರವು ನಡೆದಿರಬೇಕು. ನನ್ನ ಸಂತತವಾದ ಸ್ವಾಮಿ ನಿಷ್ಠೆಯು ಅಚಲವಿದ್ದು, ಭ್ರಮೆಯ ಮೂಲಕ ಹಾಗೆ ವರ್ತಿಸಿದೆನೆಂದು ಅವರು ತಿಳಿದಿರಬೇಕು. ಅಂತೂ ನನ್ನ ವಿಮೋಚನೆಯು ಎಲ್ಲರಿಗೂ ಒಪ್ಪಿಗೆಯಾಯಿತು. ಅಂತೇ ಸೆರೆಮನೆಯಿಂದ ನನ್ನನ್ನು ಕರೆದೊಯ್ದು, ವಿವಿಧೋಪಾಯಗಳಿಂದ ನನಗೆ ಪ್ರಜ್ಞೆ ಬಂದ ಮೇಲೆ, ರಾಜ್ಯದ ಗಡಿನಾಡು ದಾಟಿಸಿ ನನ್ನನ್ನು ಬಿಟ್ಟುಬಿಟ್ಟರು. ತಿರುಗಿ ರಾಜ್ಯವನ್ನು ಹೊಕ್ಕುದಾದರೆ ದೇಹದಂಡನೆಯೆಂದು ಸಾರಿ ಹೇಳಿದರು.

ಇದನ್ನು ಓದಿದ್ದೀರಾ?: ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ನನಗೆಲ್ಲಿ ರಾಜ್ಯದಲ್ಲಿರುವುದು ಬೇಕು? ಯಾರ ಸೇವೆಯಲ್ಲಿಯೂ ನಾನು ನನ್ನ ಜೀವವನ್ನು ಸವೆಯಿಸುವ ಹಾಗಿರಲಿಲ್ಲ. ಅದರ ಹಸಿವನ್ನು ಹಿಂಗಿಸುವದೇ ನನ್ನ ಹಂಬಲಿಕೆಯಲ್ಲವೆ? ಮುಕ್ತನಾದೊಡನೆ ನೇರವಾಗಿ ಅಬೂಪಹಾಡವನ್ನು ಗುರಿಯಿಟ್ಟು ಸಾಗಿದೆನು. ಹಾದಿಯಲ್ಲಿಯ ನೀರು; ಕಾಡಿನಲ್ಲಿಯ ಹಣ್ಣು. ಹಣ್ಣು ಹರಿಯಲು ಕೂಡ ಅವಕಾಶವಿರಲಿಲ್ಲ. ನಾನು ಸೆರೆಮನೆಯಲ್ಲಿ ಕಂಡ ಹಳ್ಳಿಯನ್ನು ಶೋಧಿಸತೊಡಗಿದೆನು.

ಕಡೆಗೊಮ್ಮೆ ಮರಗಳ ಗುಂಪಿನಲ್ಲಿ ಆ ಹಳ್ಳಿಯು ಕಾಣಿಸಿಕೊಂಡಿತು. ‘ಕನಸು’ ಹೀಗೆ ದಿಟವಾದುದನ್ನು ಕಂಡು ನನಗೆ ಪರಮಾಶ್ಚರ್ಯವಾಯಿತು. ಮುಂದೆ ನೋಡಬೇಕಾದುದು ಆ ಮುದುಕನ ಗುಡಿಸಿಲು. ಅಗಸೆಗಲ್ಲಿನ ಹತ್ತಿರ ದಾರಿ ಹೋಗುವವರನ್ನು ನೋಡುತ್ತ, ಊರುಗೋಲು ಹಿಡಿದ ವೃದ್ಧನೊಬ್ಬನು ಸಾಗಿದ್ದನು. ನಾನು ಸಮೀಪಿಸಿದೊಡನೆ ಮಾತನಾಡಿಸಿದನು.

”ನಿಮ್ಮ ಹೆಸರೇನು, ಮಹಾಸ್ವಾಮಿ”

”ಬಿಜಯ ಕುಮಾರ”

“ಇಲ್ಲಿಗೇಕೆ ಆಗಮನ?”

”ದೇಶಭಗಿನಿ ಲಕ್ಷ್ಮೀದೇವಿಯವರ ಗುರುತಿನವರು ಇಲ್ಲಿರುವರಂತೆ. ಅವರನ್ನು ಕಾಣಲು ಬಂದಿದ್ದೇನೆ.”

”ಮಹರಾಜ, ನಾನೇ ದೇವಿಯವರ ಅಡಿಯಾಳು, ಪ್ರೇಮಚಂದ. ತಾವು ಯಾರು? ಬಂದ ಕಾರಣವೇನು?”

ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಆಗ ನನ್ನ ಕಥೆಯನ್ನೆಲ್ಲ ಮುದುಕನಿಗೆ ಹೇಳಿದೆನು. ಸೆರೆಮನೆಯಲ್ಲಿ ಬಿದ್ದ ‘ಕನಸಿ’ನ ವರ್ತಮಾನವನ್ನು ಕೇಳಿ, ಅವನಿಗೆ ಆಶ್ಚರ್ಯವಾಯಿತು. ಬಳಿಕ ವೃದ್ಧನು ನನ್ನನ್ನು ಮನೆಗೆ ಕರೆದೊಯ್ದನು. ನನ್ನ ಕನಸಿನಲ್ಲಿ ಕಂಡ ಕುಮಾರಿಯು, ಅಲ್ಲಿ ವಿಷಾದಮಯ ಗಾನಲಹರಿಯಲ್ಲಿ ತನ್ನ ಮನವನ್ನು ರಮಿಸಿಕೊಳ್ಳುತ್ತಿದ್ದಳು. ನಾವು ಬಂದೊಡನೆ ಸಾವಕಾಶವಾಗಿ ಎದ್ದು ಒಳಮನೆಯನ್ನು ಸೇರಿದಳು.

”ರುಕ್ಕಿಣಿ ಕುವರಿ! ಇವರು ಬಿಜಯ ಕುಮಾರರು. ಲಕ್ಷ್ಮೀದೇವಿಯವರ ಗುರುತಿನಿಂದ ಇಲ್ಲಿಗೆ ಬಂದಿದ್ದಾರೆ” ಎಂದು ಪ್ರೇಮಚಂದನು ಅವಳಿಗೆ ನನ್ನ ಪರಿಚಯವನ್ನು ಮಾಡಿಕೊಟ್ಟನು.

”ಕುಮಾರರಿಗೆ ಸ್ವಾಗತವಿರಲಿ” ಮೃದುಸ್ಮಿತೆಯಾಗಿ ಲಕ್ಷ್ಮೀದೇವಿಯು ಮಾತನಾಡಿದಳು. ಅದೇ ಧ್ವನಿ, ಅದೇ ಗಾಂಭಿರ್ಯ, ಅದೇ ನಗೆ. ಲಕ್ಷ್ಮೀದೇವಿಯು ನನ್ನನ್ನು ತಿರಸ್ಕರಿಸಿಲ್ಲವೆಂದು ಮನಸ್ಸಿನಲ್ಲಿ ಸಮಾಧಾನ ಹೊಂದಿದೆನು.

”ಇವರು ಲಕ್ಷ್ಮೀದೇವಿಯವರ ಪುತ್ರಿ. ದೇಶಕಾರ್ಯದ ಸಲುವಾಗಿಯೇ ಈ ಲತೆಯನ್ನು ದೇವಿಯವರು ಬೆಳೆಯಿಸಿದರು. ನಾನು ಅದನ್ನು ನೋಡಿಕೊಂಡು ಬಂದಿದ್ದೇನೆ.” ಗದ್ಗದಿತಕಂಠನಾಗಿ ಪ್ರೇಮಚಂದನು ಹೇಳಿದನು.

ನಾನು ಮೌನವಾಗಿ ರುಕ್ಷ್ಮಿಣೀದೇವಿಯನ್ನು ನೋಡಿದೆನು. ಅವಳ ಅಗಲವಾದ ಕಣ್ಣೀರಿನಲ್ಲಿ ಆರ್ದ್ರಭಾವವು ಸುಳಿಯಿತು.

*

ಮುಂದೆ ಕೆಲವು ದಿನಗಳಲ್ಲಿ ರುಕ್ಷ್ಮಿಣಿಯ ಪ್ರೇಮವನ್ನು ನಾನು ಸಂಪಾದಿಸಿದುದನ್ನು ಬಿಚ್ಚಿ ಹೇಳಬೇಕೆ? ನನ್ನ ಕಥೆಯು ಅವಳಿಗೆ ಮನದಟ್ಟಾಗಿಹೋಗಿತ್ತು. ಅನುಭವಿಕನಾದ ಪ್ರೇಮಚಂದನೂ ನನ್ನ ಒಲುಮೆಗೆ ಸಂತೋಷದಿಂದ ಅನುಮತಿಯಿತ್ತನು.

5

ನನ್ನ ಹಾಗೂ ರುಕ್ಷ್ಮಿಣಿಯ ವಿವಾಹವು ಬಹು ವಿಜೃಂಭಣೆಯಿಂದ ಆ ಹಳ್ಳಿಯಲ್ಲಿ ನೆರವೇರಿತು. ಸತಿಪತಿಯರಾಗಿ ನಾವು ಅಲ್ಲಿ ಕೆಲವು ಕಾಲ ಕಳೆದೆವು. ಒಂದೆರಡು ವರ್ಷ ಗತಿಸಿದ ಮೇಲೆ ಪ್ರೇಮಚಂದನು ಕಾಲಾಧೀನನಾದನು. ಅವನ ಮರಣಕ್ಕಾಗಿ ಹಳ್ಳಿಯೆಲ್ಲ ಮರುಗಿತು. ಆದರೆ ತನ್ನ ಕಾರ್ಯವನ್ನು ಕೊನೆಗಾಣಿಸಿದ ಆ ಮುದುಕನು ನಗುತ್ತ ಸ್ವರ್ಗವನ್ನೈದಿದನು.

ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಮುಂದೆ ನಮ್ಮ ಜೀವನದ ಗುರಿಯ ಬಗ್ಗೆ ನಾವು ಬಹಳವಾಗಿ ವಿಚಾರಿಸಿದೆವು. ಯಾವ ರೀತಿಯಾಗಿ ದೇಶಕಾರ್ಯವನ್ನು ಕೈಕೊಳ್ಳಬೇಕು? ದೇಶವೆಲ್ಲ ಮೌನವಾಗಿತ್ತು. ಆರ್ಯಾವರ್ತದ ರಾಜರೆಲ್ಲ ಮಾಂಡಲಿಕರಾಗಿ ಸುಖಲೋಲುಪರಾಗುತ್ತಿದ್ದರು. ಇನ್ನು ಭರತಖಂಡದ ಉಜ್ವಲತೆಯು ದೀರ್ಘನಿದ್ರಾಪರವಶವಾಯಿತೆಂದು ನನಗೆನಿಸಿತು. ಆದರೆ ವಿಧಿಲಿಖಿತವನ್ನು ಅಳಿಸುವದು ಹೇಗೆ! ಕತ್ತಲೆ-ಗಾಳಿಗಳೊಡನೆ ಹೋರಾಡುವದು, ಪೂರ್ತಿಯಿಲ್ಲದ ಕನಸು, ಅದರಿಂದ ಯಾವ ಗುರಿಯೂ ಸಾಧಿಸುವದಿಲ್ಲ. ಒಂದು ಧ್ಯೇಯವನ್ನು ಮಾತ್ರ ಬೆಳಗಿಸಬಹುದು. ಅಜ್ಞಾನಿಗಳಾದ ಭಾರತೀಯರನ್ನು ಜ್ಞಾನವಂತರನ್ನಾಗಿ ಮಾಡಿದರೆ ದೇಶದ ಪುಣ್ಯವು ತೆರೆಯಬಹುದಲ್ಲವೆ? ಉತ್ಸಾಹಿಗಳಾದ ತರುಣರನ್ನು ಕಲೆಹಾಕಿ, ಆರ್ಯಾವರ್ತದ ಘನತೆಯನ್ನು ಅವರಿಗೆ ತಿಳಿಸಬೇಕು. ಸ್ವಾತಂತ್ರ್ಯದ ದೈವಿಕತೆಯನ್ನು ಅವರಿಗೆ ಬಣ್ಣಿಸಿ ಬಿಂಬಿಸುವಂತೆ ಮಾಡಬೇಕು. ಅಂದರೆ ಇಂತಹ ಪುಣ್ಯಭೂಮಿಯ ದುರವಸ್ಥೆಯು ಅವರ ಮನವನ್ನು ದಹಿಸಬಹುದು. ಸ್ವಾತಂತ್ರ್ಯದ ಈ ಸಂದೇಶವು ದೇಶದಲ್ಲೆಲ್ಲ ಮಾನ್ಯವಾಗಿ, ನವೋನವವಾದ ಪ್ರತಿಭೆಯ ಸಂಚಾರವಾಗಬಹುದಲ್ಲವೆ? ಇವೇ ಮೊದಲಾದ ವಿಚಾರಗಳು ನನ್ನ ಮನದಲ್ಲಿ ಅಂಕುರಿಸಿ, ಬೆಳೆದು ಫಲವಾಗಿ, ಕಡೆಗೆ ನಾನೂ ರುಕ್ಷ್ಮಿಣಿಯ ಇಂತಹದೊಂದು ಆಶ್ರಮವನ್ನು ಸ್ಥಾಪಿಸಲು ಅಬೂಪಹಾಡದ ಒಂದು ಜನಾಂತಿಕವಾದ ಪ್ರದೇಶದೆಡೆಗೆ ತೆರಳಿದೆವು. ನಮ್ಮ ಧ್ಯೇಯಗಳನ್ನು ತಿಳಿದ ಅನೇಕ ದೇಶವತ್ಸಲರು ತಮ್ಮ ಬಾಲಬಾಲಿಕೆಯರನ್ನು ಆಶ್ರಮದಲ್ಲಿ ತಂದಿರಿಸಿ ಹೋದರು.

*

ಇಂದಿಗೆ ಲಕ್ಷ್ಮೀ ಶಿಬಿರಕ್ಕೆ 20 ವರ್ಷಗಳು ತುಂಬಿವೆ. ಈ ಅವಧಿಯಲ್ಲಿ ನಾವು ಗುರಿಯಿಟ್ಟು ಹೊರಟ ತಾಣವು ಸುಳ್ಳಲ್ಲವೆಂದು ನನ್ನ ಕಲ್ಪನೆಯಾಗಿದೆ. ಮಹಾರಾಷ್ಟ್ರ, ಕರ್ನಾಟಕ ಮೊದಲಾದ ಪ್ರಾಂತಗಳಿಂದ ಬಂದ ಗೋಸಾವಿಗಳು ನಮ್ಮ ಶಿಬಿರದಲ್ಲಿ ನಿಂತು ತಮ್ಮ ಪ್ರಾಂತಗಳಿಗೆ ಮರಳಿ ಹೋದಾಗ ಇದೇ ಸಂದೇಶವನ್ನು ಬೀರುತ್ತಲಿದ್ದಾರೆ. ಭಾಗ್ಯೋದಯದ ಚಿಹ್ನೆಗಳು ಕಾಣುತ್ತಿವೆ. ವ್ಯಕ್ತಿಯು ಸ್ವತಃ ತಾನು ಏನು ಮಾಡಬಹುದು? ವಿಮೋಚನೆಯ ಪರಮ ಸುಖವನ್ನು ಕೊಡುವದು ದೇವ ದೇವನನ್ನೇ ಕೂಡಿದೆ. ಆದರೂ ನಾನು ಪ್ರಾರಂಭಿಸಿದ ಕಾರ್ಯವು ಮುಂದುವರಿಯುವದನ್ನು ನೋಡಿ ನನಗೆಷ್ಟೋ ಸಮಾಧಾನ.

ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್‌ ಕುಂಞಿ ಅವರ ಕತೆ | ಒಂದು ತುಂಡು ಗೋಡೆ

ಇನ್ನೊಂದು ಮಾತನ್ನು ಇಲ್ಲಿ ವಿವರಿಸಲು ಮರೆಯಲಾರೆ. ನನ್ನ ಮೈವೆತ್ತ ಸ್ಫೂರ್ತಿಯಂತಿದ್ದ ರುಕ್ಷ್ಮಿಣೀದೇವಿಯು ಇಂದಿಗೆ ಗತಿಸಿ 5 ವರ್ಷಗಳಾದವು. ಇರ್ವರು ಸುತರನ್ನು ನನ್ನೊಡನೆ ಬಿಟ್ಟು ತೆರಳಿದ್ದಾಳೆ. ನನ್ನ ಸುತರೂ ಆಶ್ರಮನಿವಾಸಿಗಳೂ ನೆನೆಯಲೆಂದು ಈ ಐತಿಹ್ಯವನ್ನು ಇಲ್ಲಿ ಬರೆದಿಟ್ಟಿದ್ದೇನೆ. ರುಕ್ಕಿಣೀದೇವಿಯ ವಿಷಯವನ್ನೂ ಅವರು ಮರೆಯದಿರಲಿ. ಲಕ್ಷ್ಮೀದೇವಿಯಲ್ಲಿ ದಿವ್ಯವಾಗಿ ಪ್ರಜ್ವಲಿಸಿದ ಸಾಹಸವು, ರುಕ್ಷ್ಮಿಣಿಯಲ್ಲಿ ಪ್ರಶಾಂತವಾಗಿ ಬೆಳಗಿತು. ಇವರಿಂದ ಧನ್ಯನಾದ ನಾನು, ಜನತೆಯ ಹಾಗೆ ಧನ್ಯತೆಯನ್ನು ಪಡೆಯುವದೆಂದು ನಂಬಿದ್ದೇನೆ. ದೇಶದ ದೈವವು ಬೇಗ ತೆರೆಯಲಿ; ಇರುವನಕ ನನ್ನ ಕಾರ್ಯವು ಕದಲದಿರಲಿ- ಹೀಗೆಂದು ದಿನಾಲು ನಾನು ದೇವದೇವನಿಗೆ ಪ್ರಾರ್ಥಿಸುತ್ತೇನೆ. ಇಷ್ಟು ಬಿನ್ನಹಗಳನ್ನು ಪೂರೈಸಿದ ಪರಮೇಶನು ಈ ಪ್ರಾರ್ಥನೆಯನ್ನು ಮನ್ನಿಸದಿರನೆ?

ವಿ.ಕೃ. ಗೋಕಾಕ್ 1

ವಿ.ಕೃ. ಗೋಕಾಕ್(1909-1992): ಇವರು 1909ರ ಆಗಸ್ಟ್ 10ರಂದು ಧಾರವಾಡ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ವಿದ್ಯಾಭ್ಯಾಸ ಸವಣೂರು, ಧಾರವಾಡಗಳಲ್ಲಿ ನಡೆಯಿತು. ಧಾರವಾಡದಲ್ಲಿದ್ದಾಗಲೇ ಕವಿ ಬೇಂದ್ರೆ ಪರಿಚಯವಾಗಿ, ಮಾರ್ಗದರ್ಶನ, ಪ್ರೋತ್ಸಾಹ ದೊರಕಿತು. ಇಂಗ್ಲಿಷ್ ಎಂ.ಎ. ಪದವಿ ಪೂರೈಸಿದ ಅವರು ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಅಲ್ಲಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಅವರನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು. ಇಂಗ್ಲೆಂಡಿನಿಂದ ಹಿಂತಿರುಗಿ ಬಂದವರಿಗೆ ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನ ಪ್ರಿನ್ಸಿಪಾಲ ಹುದ್ದೆ ಕಾದಿತ್ತು. ಅನಂತರ ಅವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಹುದ್ದೆಗೂ ಏರಿದರು. ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು. ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ಇವರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು. ಅವರ ಮೊದಲ ಪ್ರಕಟಿತ ಕೃತಿ ‘ಕಲೋಪಾಸಕರು’. ಅವರು ಇಂಗ್ಲೆಂಡಿಗೆ ಸಮುದ್ರದ ಮೂಲಕ ಹೋಗಿ ಬಂದ ಅನುಭವಗಳನ್ನು ಆಧರಿಸಿ ರಚಿಸಿದ ‘ಸಮುದ್ರ ಗೀತೆಗಳು’, ‘ಸಮುದ್ರದಾಚೆಯಿಂದ’- ಇವು ಮಹತ್ವದ ಕೃತಿಗಳಾಗಿವೆ. ಕನ್ನಡ ಸಾಹಿತ್ಯದಲ್ಲಿ ‘ನವ್ಯ’ ಎಂಬ ಹೊಸಮಾರ್ಗ ಇವರಿಂದಲೇ ಪ್ರಾರಂಭಗೊಂಡಿತು ಎಂಬ ಅಭಿಪ್ರಾಯವಿದೆ. ಇವರು ನಾಟಕ, ಪ್ರಬಂಧ, ಪ್ರವಾಸ ಕಥನ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಬೃಹತ್ ಕಾದಂಬರಿಗಳಲ್ಲಿ ಒಂದಾದ ‘ಸಮರಸವೇ ಜೀವನ’, ಸುಪ್ರಸಿದ್ಧ ನಾಟಕ ‘ಜನನಾಯಕ’, ಮಹಾಕಾವ್ಯ ‘ಭಾರತ ಸಿಂಧು ರಶ್ಮಿ’ ರಚಿಸಿದ್ದಾರೆ. ಇವರು ಸಾಹಿತ್ಯ-ಸಂಸ್ಕೃತಿಗೆ ಸಲ್ಲಿಸಿದ ಸೇವೆ ಗುರುತಿಸಿ ಹಲವು ಪ್ರಶಸ್ತಿ ಗೌರವಗಳು ಸಂದಿವೆ. ಕನ್ನಡ ಸಾಹಿತ್ಯ ಲೋಕಕ್ಕೆ ಇವರು ೧೯೬೯ರಿಂದ ೧೯೮೪ರ ಅವಧಿಯಲ್ಲಿ ನೀಡಿದ ಅನುಪಮ ಕೊಡುಗೆಯನ್ನು ಗಮನಿಸಿ, ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪದವಿ ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲ ಬಾರಿಗೆ ಸಂದ ಗೌರವಗಳಾಗಿವೆ. ಕರ್ನಾಟಕ ಸರ್ಕಾರ 1980ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ಇವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. 1992ರ ಎಪ್ರಿಲ್ 28ರಂದು ಮುಂಬಯಿಯಲ್ಲಿ ನಿಧನರಾದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಿ.ಬಿ. ಜೋಶಿ ಅವರ ಕತೆ | ಡೂಗಜ್ಜನ ಬಹಿಷ್ಕಾರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...