ಮೀನುಗಾರಿಕಾ ಇಲಾಖೆಯು 2026-27ನೇ ಸಾಲಿನ ವಿವಿಧ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹರು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 17ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಸಮಗ್ರ ಮೀನುಗಾರಿಕಾ ಅಭಿವೃದ್ಧಿ ಯೋಜನೆಯಡಿ ಕೆರೆ ಮತ್ತು ಜಲಾಶಯಗಳ ಅಂಚಿನಲ್ಲಿ ಮೀನುಮರಿ ಪಾಲನಾ ಕೊಳಗಳ ನಿರ್ಮಾಣಕ್ಕೆ ಮತ್ತು ಮೀನುಮರಿ ಪಾಲನೆಗೆ ಸಹಾಯಧನ, ಮೀನುಗಾರಿಕೆ ಸಲಕರಣಾ ಕಿಟ್ಗಳ ವಿತರಣೆ, ಒಳನಾಡು ಮೀನುಗಾರಿಕೆ ಅಭಿವೃದ್ಧಿ ಸಹಾಯ ಯೋಜನೆಯಡಿ ಭೂಮಿ ಮತ್ತು ಹೊಂಡ ಹೊಂದಿರುವ ಕೃಷಿಕರಿಗೆ ಉಚಿತ ಮೀನುಮರಿ ವಿತರಣೆ ಮಾಡಲಾಗುತ್ತದೆ.
ಸ್ವಂತ ಜಮೀನಿನಲ್ಲಿ ಮೀನು ಕೃಷಿ ಕೊಳ ನಿರ್ಮಾಣ ಮಾಡಲು ಶೇಕಡಾ 40ರಷ್ಟು ಸಹಾಯಧನ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀನುಗಾರರಿಗೆ ವಿಶೇಷ ಘಟಕ ಯೋಜನೆಯಡಿ ಮೀನು ಸಲಕರಣೆ ಕಿಟ್ ಹಾಗೂ ಮತ್ಸ್ಯವಾಹಿನಿ ಸಹಾಯ ಯೋಜನೆಯಡಿ ಹೊಸದಾಗಿ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಖರೀದಿಸಿದ ಮೀನುಗಾರರು ಹಾಗೂ ಮೀನು ಮಾರಾಟಗಾರರಿಗೆ ಸರ್ಕಾರದ ಮಾರ್ಗಸೂಚಿಯ ಮೇರೆಗೆ ಶೇಕಡಾ 40ರಷ್ಟು ಸಹಾಯಧನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಇಚ್ಛಿಸುವ ವಿಜಯಪುರ, ಸಿಂದಗಿ, ಇಂಡಿ, ಆಲಮೇಲ್, ಚಡಚಣ, ಬಬಲೇಶ್ವರ, ತಿಕೋಟಾ ಹಾಗೂ ದೇವರ ಹಿಪ್ಪರಗಿ ತಾಲೂಕುಗಳ ಅರ್ಹ ಮತ್ತು ಆಸಕ್ತ ಮೀನುಗಾರರು, ಸಹಕಾರ ಸಂಘದ ಸದಸ್ಯರು, ಜಲಾಶಯ ಹಾಗೂ ನದಿ ಮೀನುಗಾರಿಕೆ ಪರವಾನಗಿ ಹೊಂದಿರುವವರು ಮತ್ತು ಮೀನು ಕೃಷಿಕರು ಅಗತ್ಯ ದಾಖಲೆಗಳೊಂದಿಗೆ ವಿಜಯಪುರದ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಮುದ್ದೇಬಿಹಾಳ, ಬಸವನ ಬಾಗೇವಾಡಿ, ಕೊಲ್ದಾರ, ನಿಡಗುಂದಿ ಮತ್ತು ತಾಳಿಕೋಟೆ ತಾಲೂಕುಗಳ ಅರ್ಹ ಅರ್ಜಿದಾರರು ಸಹ ಆಗಸ್ಟ್ 17ರೊಳಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವಿಜಯಪುರದ ಮೀನುಗಾರಿಕಾ ಸಹಾಯಕ ನಿರ್ದೇಶಕರನ್ನು (ಮೊಬೈಲ್: 9845927110) ಅಥವಾ ಮುದ್ದೇಬಿಹಾಳದ ಮೀನುಗಾರಿಕಾ ಸಹಾಯಕ ನಿರ್ದೇಶಕರನ್ನು (ಮೊಬೈಲ್: 9880210505) ಸಂಪರ್ಕಿಸಬಹುದು ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.




