ಫ್ರಾನ್ಸ್‌ನ ಇವಿಯಾನ್ ನಗರದಲ್ಲಿ ನಡೆಯುತ್ತಿರುವ G-7 ಶೃಂಗಸಭೆಯ ವೇದಿಕೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಲಘು ಹಾಸ್ಯದ ಮಾತುಕತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಶ್ವ ನಾಯಕರೆಲ್ಲರೂ ಜಂಟಿ ಗ್ರೂಪ್ ಫೋಟೋಗೆ ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ಮೈಕ್ರೋಫೋನ್‌ನಲ್ಲಿ ಸೆರೆಯಾದ ಇವರಿಬ್ಬರ ಸಂಭಾಷಣೆಯು ಇಂಟರ್ನೆಟ್‌ನಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಫೋಟೋ ಶೂಟ್‌ಗಾಗಿ ನಾಯಕರು ವೇದಿಕೆಗೆ ಆಗಮಿಸುತ್ತಿದ್ದಂತೆ ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ ಪರಸ್ಪರ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದರು. ಈ ವೇಳೆ ಪ್ರಧಾನಿ ಮೋದಿಯವರು ಇವರಿಬ್ಬರ ಸ್ನೇಹದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಇರುವ ಕ್ರೇಜ್ ಮತ್ತು ಜನಪ್ರಿಯತೆಯನ್ನು ನೆನಪಿಸಿ ತಮಾಷೆ ಮಾಡಿದರು. ಇದಕ್ಕೆ ತಕ್ಷಣವೇ ಅತ್ಯಂತ ನಗುತ್ತಾ ಪ್ರತಿಕ್ರಿಯಿಸಿದ ಇಟಲಿ ಪ್ರಧಾನಿ ಮೆಲೋನಿ, “ಹೌದು, ನಾವಿಬ್ಬರೇ ಇನ್‌ಸ್ಟಾಗ್ರಾಮ್‌ನ ಅತ್ಯಂತ ಪ್ರಸಿದ್ಧ ಜೋಡಿ ಎಂದು ಹೆಳಿದರು. ಈ ಆಡಿಯೋ ಅಲ್ಲಿನ ಮೈಕ್‌ನಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಈಗ ನೆಟ್ಟಿಗರ ಗಮನ ಸೆಳೆದಿದೆ.
ನೆಟ್ಟಿಗರು ಇವರಿಬ್ಬರ ಹೆಸರನ್ನು ಒಟ್ಟಿಗೆ ಸೇರಿಸಿ ‘ಮೆಲೋಡಿ’ (#Melodi) ಎಂಬ ಹ್ಯಾಶ್‌ಟ್ಯಾಗ್ ಮೂಲಕ ನಿರಂತರವಾಗಿ ಮೀಮ್ಸ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ರೋಮ್‌ಗೆ ಭೇಟಿ ನೀಡಿದ್ದಾಗ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೊಲೇಟ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿ ಈ ಇಂಟರ್ನೆಟ್ ಟ್ರೆಂಡ್ ಅನ್ನು ಸ್ವತಃ ಸಂಭ್ರಮಿಸಿದ್ದರು.
ಇದನ್ನೂ ಓದಿ: ಶಿವಸೇನೆಯ 6 ಸಂಸದರನ್ನು ಸೆಳೆದ BJP, ಅಸಹಾಯಕರಾದ ಠಾಕ್ರೆ; UPಯಲ್ಲೂ ಶುರುವಾಯ್ತು ರಣತಂತ್ರ!
ಈಗ ಜಿ-7 ವೇದಿಕೆಯಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಜಗತ್ತಿನ ಪ್ರಭಾವಿ ನಾಯಕರ ಸಮ್ಮುಖದಲ್ಲೇ ಇವರಿಬ್ಬರು ತಮ್ಮ ಡಿಜಿಟಲ್ ಜನಪ್ರಿಯತೆಯನ್ನು ಮುಕ್ತವಾಗಿ ಒಪ್ಪಿಕೊಂಡು ಹಾಸ್ಯ ಚಟಾಕಿ ಹಾರಿಸಿರುವುದು ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಹೊಸ ಮಾದರಿಯ ಡಿಜಿಟಲ್ ಬ್ರ್ಯಾಂಡಿಂಗ್‌ಗೆ ಸಾಕ್ಷಿಯಾಗಿದೆ.




