ದೇಶದ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲದ ಸದ್ದು ಜೋರಾಗಿದ್ದು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳಿಗೆ ಬಿಜೆಪಿ ಭಾರಿ ಆಘಾತ ನೀಡಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಬಣದ 6 ಮಂದಿ ಲೋಕಸಭಾ ಸಂಸದರನ್ನು ಬಿಜೆಪಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರೆ, ಇತ್ತ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಾರ್ಟಿಯನ್ನು ಒಡೆಯಲು ವೇದಿಕೆ ಸಿದ್ಧಗೊಳಿಸಿದೆ.
ಈ ಹಿಂದೆ ಏಕನಾಥ್ ಶಿಂಧೆ ಬಂಡಾಯದಿಂದಾಗಿ ಪಕ್ಷ ಮತ್ತು ಅಧಿಕಾರ ಎರಡನ್ನೂ ಕಳೆದುಕೊಂಡಿದ್ದ ಉದ್ಧವ್ ಅವರಿಗೆ, ಈಗ ಗೆದ್ದು ಬಂದಿರುವ 6 ಮಂದಿ ಸಂಸದರು ಕೈಕೊಟ್ಟಿರುವುದು ನುಂಗಲಾರದ ತುತ್ತಾಗಿದೆ. ಮೂಲಗಳ ಪ್ರಕಾರ, ಈ ಆರು ಸಂಸದರು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬಿಜೆಪಿಯೊಂದಿಗೆ ಕೈಜೋಡಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಉದ್ಧವ್ ಠಾಕ್ರೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ಸಂಪೂರ್ಣ ಅಸಹಾಯಕರಾಗಿದ್ದಾರೆ.
ಇತ್ತ ಉತ್ತರ ಪ್ರದೇಶದಲ್ಲೂ ವಿರೋಧ ಪಕ್ಷದ ಪಾಳಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಕಳೆದ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಸಮಾಜವಾದಿ ಪಾರ್ಟಿಯ ಕೋಟೆಯನ್ನು ಧ್ವಂಸಗೊಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ. SPಯ ಹಲವು ಸಂಸದರು ಈಗಾಗಲೇ ಕಮಲ ಪಾಳಯದ ಸಂಪರ್ಕದಲ್ಲಿದ್ದು, ಪಕ್ಷಾಂತರಕ್ಕೆ ದಿನಗಣನೆ ಆರಂಭವಾಗಿದೆ ಎಂಬ ವದಂತಿಗಳು ದಟ್ಟವಾಗಿವೆ.
ಈ ಬೆಳವಣಿಗೆಗಳಿಗೆ ಪುಷ್ಟಿ ನೀಡುವಂತೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮಾಧ್ಯಮಗಳ ಮುಂದೆ ಬಹಿರಂಗ ಬಾಂಬ್ ಸಿಡಿಸಿದ್ದಾರೆ. ಸಮಾಜವಾದಿ ಪಕ್ಷದ ಹಲವು ಸಂಸದರು ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. ಅಖಿಲೇಶ್ ಯಾದವ್ ಅವರ ಏಕಪಕ್ಷೀಯ ನಿರ್ಧಾರಗಳು ಮತ್ತು ಪಕ್ಷದೊಳಗಿನ ಆಂತರಿಕ ಅಸಮಾಧಾನದಿಂದ ಬೇಸತ್ತಿರುವ ಸಂಸದರು ಬಿಜೆಪಿಯ ಅಭಿವೃದ್ಧಿ ರಾಜಕಾರಣವನ್ನು ಬೆಂಬಲಿಸಲು ಸಿದ್ಧರಾಗಿದ್ದಾರೆ ಎಂದು ಮೌರ್ಯ ತಿಳಿಸಿದ್ದು, ಉತ್ತರ ಪ್ರದೇಶದ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ಇದನ್ನೂ ಓದಿ: ನಾವಿಕರ ಸಾವು, ಭಾರಿ ಸುಂಕದ ನಡುವೆ ಟ್ರಂಪ್ ಹೊಗಳಿಕೆಗೆ ಮಾರುಹೋದವೇ ಭಾರತೀಯ ಮಾಧ್ಯಮಗಳು?
ಒಂದೆಡೆ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿರುವ ಬಿಜೆಪಿ, ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಯನ್ನು ಸೀಳಲು ಮುಂದಾಗಿರುವುದು ದೇಶದ ಒಟ್ಟಾರೆ ರಾಜಕೀಯ ಸಮೀಕರಣವನ್ನು ಬದಲಾಯಿಸುವ ಮುನ್ಸೂಚನೆ ನೀಡಿದೆ.




