ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’

Date:

ಕೃತಿ: States and Minorities (ರಾಜ್ಯಗಳು ಮತ್ತು ಅಲ್ಪಸಂಖ್ಯಾತರು)
ಮೊದಲ ಮುದ್ರಣ:
1947, Thacker & Co. Ltd.
ಮಹಾರಾಷ್ಟ್ರ ಸರ್ಕಾರದ ಮೊದಲ ಪ್ರಕಟಣೆ:
1979
ಇಂಗ್ಲಿಷ್ ಸಂಪುಟ:
1
ಕನ್ನಡ ಸಂಪುಟ:
1
Kalpaz Edition:
2017


‘ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟ’ವು ಸಂವಿಧಾನ ಸಭೆಗೆ ಸಲ್ಲಿಸುವುದಕ್ಕಾಗಿ ತಮ್ಮ ಪರವಾಗಿ ಒಂದು ಮನವಿ ಪತ್ರವನ್ನು ಬರೆದುಕೊಡುವಂತೆ ಬಾಬಾಸಾಹೇಬರಲ್ಲಿ ಕೇಳಿಕೊಂಡಾಗ ರೂಪುಗೊಂಡ ಕೃತಿಯೇ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’. ಬಿನ್ನವತ್ತಳೆಯೊಂದನ್ನು ಬರೆಯುತ್ತಾ ಬರೆಯುತ್ತಾ, ಅದೊಂದು ಮಿನಿ ಸಂವಿಧಾನವೇ ಆಗಿಹೋಗುತ್ತದೆ. ‘ಸಂವಿಧಾನ ರಚನೆಗೆ ಮನಃಪೂರ್ವಕವಾಗಿ ಸಿದ್ಧವಾಗಿದ್ದೇನೆ’ ಎಂಬ ಸೂಚನೆಯನ್ನೂ ಬಾಬಾಸಾಹೇಬರು ಈ ಕೃತಿಯ ಮೂಲಕ ನೀಡುತ್ತಾರೆ. ಭವಿಷ್ಯದ ಭಾರತವು ಹೇಗಿರಬೇಕೆಂಬುದನ್ನು, ಕ್ರಾಂತಿಕಾರಕ ಅನುಚ್ಛೇದಗಳನ್ನು ಮನವಿ ರೂಪದಲ್ಲಿ ಪ್ರಸ್ತಾಪಿಸುತ್ತಾರೆ. ಅಂಬೇಡ್ಕರ್ ಅವರು ಇಲ್ಲಿ States ಎನ್ನುವ ಪದವನ್ನು ರಾಜ್ಯಗಳು ಅಥವಾ ಪ್ರಾಂತ್ಯಗಳು ಎನ್ನುವ ಅರ್ಥದಲ್ಲಿ ಬಳಸುತ್ತಾರೆ. ಅದೇ ರೀತಿ minorities ಎನ್ನುವ ಪದವನ್ನು ಬಳಸಿದ್ದು ಕೇವಲ ಧಾರ್ಮಿಕ/ ಭಾಷಾ ಅಲ್ಪಸಂಖ್ಯಾತರನ್ನಷ್ಟೇ ಉದ್ದೇಶಿಸಿ ಅಲ್ಲ. ಅವರ ಪ್ರಕಾರ ಭಾರತದಲ್ಲಿ ನಿಜ ಅರ್ಥದಲ್ಲಿ ಅಲ್ಪಸಂಖ್ಯಾತರು ಅಂತ ಯಾರಾದರೂ ಇದ್ದರೆ ಅದು ಈ ದೇಶದಲ್ಲಿ ಈಗ ಪರಿಶಿಷ್ಟಜಾತಿ ಅಂತ ಯಾರನ್ನು ಕರೆಯಲಾಗುವುದೋ ಅವರು ಮಾತ್ರ. ಅದರಲ್ಲೂ ಯಾರನ್ನು ಹಿಂದೆ ಅಸ್ಪೃಶ್ಯರು ಅಂತ ಪರಿಗಣಿಸಲಾಗಿತ್ತೋ ಅವರು ನಿಜವಾದ ಅಲ್ಪಸಂಖ್ಯಾತರು ಎಂಬುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವು. ಆದರೆ ಮುಂದೆ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಬಾಬಾಸಾಹೇಬರು ಆಯ್ಕೆಯಾದ ಬಳಿಕ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ನ ಹಲವು ಸಂಗತಿಗಳನ್ನು ಸಂವಿಧಾನದಲ್ಲಿ ಅಡಕ ಮಾಡಲಾಗದ ಒತ್ತಡ ಸೃಷ್ಟಿಯಾಗುತ್ತದೆ. ಹೀಗಾಗಿ ಈ ಕೃತಿ ಜಾರಿಯಾಗದ ‘ಅಂಬೇಡ್ಕರ್ ನಿಜ ಸಂವಿಧಾನ’ ಎಂದೇ ಗುರುತಿಸಲ್ಪಟ್ಟಿದೆ.

- Advertisement -

ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ (States and Minorities) ಒಂದು ವಿಶಿಷ್ಟವಾದ ಕೃತಿ. ಎಲ್ಲ ಅಡಕಗಳು, ಕೋಷ್ಟಕಗಳು ಮತ್ತು ವಿವರಣೆಗಳು ಸೇರಿ ಕೇವಲ 79 ಪುಟಗಳ ಈ ಪುಟ್ಟ ಪುಸ್ತಕ ಬಾಬಾ ಸಾಹೇಬರ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿ ನಮ್ಮ ಮುಂದಿರುವ ಇನ್ನೊಂದು ಮಹತ್ವದ ದಾಖಲೆ. ಅಷ್ಟಕ್ಕೂ ಇದನ್ನು ಅವರು ಬರೆದದ್ದು ಒಂದು ಪುಸ್ತಕ ಬರೆಯುವ ಉದ್ದೇಶದಿಂದ ಅಲ್ಲ. ಇದನ್ನು ಅಂಬೇಡ್ಕರ್ ಒಂದು ಕರಪತ್ರ ಅಂತ ಕರೆದಿದ್ದಾರೆ. ವಾಸ್ತವದಲ್ಲಿ ಇದು ಅಂಬೇಡ್ಕರ್ ಸಂವಿಧಾನ ಸಭೆ (Constituent Assembly)ಗೆ ನೀಡಿದ ಒಂದು ಮನವಿ ಅಥವಾ ಬಿನ್ನವತ್ತಳೆ (memorandum). ಇದರ ಹಿನ್ನೆಲೆಯನ್ನು ಪುಸ್ತಕದ ಮುನ್ನುಡಿಯಲ್ಲಿ ಅಂಬೇಡ್ಕರ್ ಅವರು ಹೀಗೆ ವಿವರಿಸುತ್ತಾರೆ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಸ್ವತಂತ್ರ ಭಾರತಕ್ಕೊಂದು ಸಂವಿಧಾನವನ್ನು ರಚಿಸುವ ಹೊಣೆಯನ್ನು ಸಂವಿಧಾನ ಸಭೆಗೆ ವಹಿಸಿಕೊಡುವುದು ಎಂದು ಖಾತರಿಯಾದ ಮೇಲೆ All India Scheduled Caste Federationನ ಕಾರ್ಯಕಾರಿ ಸಮಿತಿಯವರು ಅವರ ಪರವಾಗಿ ಸಂವಿಧಾನ ರಚನಾ ಸಭೆಗೆ ಸಲ್ಲಿಸಲು ಪರಿಶಿಷ್ಟಜಾತಿಗೆ ಸೇರಿದವರ ಹಕ್ಕುಗಳ ಸಂರಕ್ಷಣೆಯ ಕುರಿತಂತೆ ಒಂದು ಬಿನ್ನವತ್ತಳೆಯನ್ನು ರಚಿಸುವಂತೆ ಕೇಳಿಕೊಂಡರು. ನಾನು ಈ ಕಾರ್ಯವನ್ನು ಬಹಳ ಸಂತೋಷದಿಂದ ಒಪ್ಪಿಕೊಂಡು ನೆರವೇರಿಸಿದೆ. ಆ ಶ್ರಮದ ಫಲವೇ ಈ ಕರಪತ್ರ.

sc fadaration
‘ಪರಿಶಿಷ್ಟ ಜಾತಿ ಒಕ್ಕೂಟ’ದ ಮುಖಂಡರೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್. (ಪರಿಶಿಷ್ಟ ಜಾತಿ ಒಕ್ಕೂಟ ಸಮ್ಮೇಳನ, ನಾಗ್ಪುರ, 1942).

ಈ ಕೃತಿಯ ನಿರೂಪಣೆ ಒಂದು ಪುಸ್ತಕದ ಸಾಮಾನ್ಯ ನಿರೂಪಣೆಯ ರೂಪದಲ್ಲಿ ಇಲ್ಲ. ಬದಲಿಗೆ ಸಂವಿಧಾನದ ನಿರೂಪಣೆ ಯಾವ ರೀತಿ ಇದೆಯೋ ಹಾಗೆಯೇ ಇದೆ. ಅಂದರೆ ಪರಿಶಿಷ್ಟ ಜಾತಿಗೆ ಸೇರಿದ ಜನರ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದು ಮನವಿಪತ್ರ ಸಿದ್ಧಪಡಿಸುವ ಬದಲಿಗೆ ಈ ಅವಕಾಶವನ್ನು ಬಳಸಿಕೊಂಡು ಅಂಬೇಡ್ಕರ್ ಅವರು ಒಂದು ಮಿನಿ ಸಂವಿಧಾನವನ್ನೇ ಬರೆದುಬಿಟ್ಟರು. ಅದರಲ್ಲಿ ಪ್ರಸ್ತಾವನೆಯೂ (Preamble) ಸೇರಿದಂತೆ ಭಾರತದಂತಹ ದೇಶದ ಸಂವಿಧಾನದಲ್ಲಿ ಅತ್ಯಗತ್ಯವಾಗಿ ಏನೇನು ಇರಬೇಕೋ ಅವುಗಳನ್ನೆಲ್ಲ ಸಂಕ್ಷಿಪ್ತವಾಗಿ ಸೇರಿಸಿದ್ದಾರೆ. ಕೃತಿಯ ನಿರೂಪಣೆಯ ಬಗ್ಗೆ ಅಂಬೇಡ್ಕರ್ ಹೀಗೆ ಬರೆದಿದ್ದಾರೆ:

‘ನನ್ನ ಯೋಚನೆಗಳನ್ನು ಎಂದಿನಂತೆ ಸಹಜವಾದ ನಿರೂಪಣೆಯಲ್ಲಿ ದಾಖಲಿಸುವ ಬದಲಿಗೆ ನಾನು ಈ ಮನವಿಪತ್ರವನ್ನು ಅದರಲ್ಲಿ ಹೇಳಿರುವ ಅಂಶಗಳು ಸಂವಿಧಾನದಲ್ಲಿ ಯಾವ ರೂಪದಲ್ಲಿ ಕಾಣಿಸಿಕೊಳ್ಳಬೇಕೋ ಅದೇ ರೀತಿ ಪರಿಚ್ಛೇದ (articles)ಗಳ ರೂಪದಲ್ಲಿ ನೀಡಿದ್ದೇನೆ. ಈ ನಿರೂಪಣಾ ವಿಧಾನ ನಾನು ಏನು ಹೇಳಿದ್ದೇನೋ ಅವೆಲ್ಲವನ್ನು ಸಂಕ್ಷಿಪ್ತವಾಗಿಯೂ, ಸರಳವಾಗಿಯೂ, ಸ್ಪಷ್ಟವಾಗಿಯೂ ಓದುಗರಿಗೆ ದಾಟಿಸುವಲ್ಲಿ ಯಶಸ್ವಿಯಾಗುತ್ತದೆ ಎಂದು ನಾನು ಭಾವಿಸಿದ್ದೇನೆ.’

ಇದನ್ನೂ ಓದಿರಿ: ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’: ಬಾಬಾಸಾಹೇಬರು ತೆರೆದಿಟ್ಟ ಇತಿಹಾಸ

ಅಂಬೇಡ್ಕರ್ ಅವರು ಈ ಪುಸ್ತಕವನ್ನು ಅರ್ಥಾತ್ ಮನವಿ ಪತ್ರವನ್ನು ಬರೆಯುತ್ತಾ ಬರೆಯುತ್ತಾ ಹೋದಂತೆ ಅದೊಂದು ಮಿನಿ ಸಂವಿಧಾನವಾಗಿ ರೂಪುಗೊಂಡ ಪ್ರಕ್ರಿಯೆಯೇ ಅದ್ಭುತವಾದದ್ದು. ಈ ಪ್ರಕ್ರಿಯೆ ಅಂಬೇಡ್ಕರ್ ಯೋಚಿಸುವ ರೀತಿಗೆ ಕನ್ನಡಿ ಹಿಡಿಯುತ್ತದೆ. ಅದು ಅಂಬೇಡ್ಕರ್ ಸ್ವಾತಂತ್ರ‍್ಯ ಭಾರತಕ್ಕೊಂದು ಸಾಂವಿಧಾನಿಕ ಬುನಾದಿ ಹಾಕಿಕೊಡುವ ವಿಚಾರದಲ್ಲಿ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಅದೆಷ್ಟು ಆಪ್ತ ರೀತಿಯಲ್ಲಿ ಮತ್ತು ತೀವ್ರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎನ್ನುವುದನ್ನೂ ಸೂಚಿಸುತ್ತದೆ. ಅವರು ಬರೆಯುತ್ತಾರೆ:

“ಭಾರತಕ್ಕೊಂದು ಸಂವಿಧಾನ ರಚಿಸುವ ನಿಟ್ಟಿನಲ್ಲಿ ಸಂವಿಧಾನ ಸಭೆಯ ಮುಂದಿರುವ ಹಲವು ಸವಾಲುಗಳಲ್ಲಿ ಎರಡು ಸವಾಲುಗಳು ಬಹಳ ಪ್ರಮುಖವಾಗಿವೆ. ಅದರಲ್ಲಿ ಮೊದಲನೆಯ ಸವಾಲು ಸ್ವಾತಂತ್ರ್ಯ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸುವ ಸವಾಲು. ಎರಡನೆಯದ್ದು ಭಾರತ ಒಂದು ಒಕ್ಕೂಟವಾಗುವ ಹಿನ್ನೆಲೆಯಲ್ಲಿ ಈ ದೇಶದಲ್ಲಿರುವ ಅಸಂಖ್ಯ ರಾಜ್ಯಗಳು (ಪ್ರಾಂತ್ಯಗಳು) ಎದುರಿಸುವ ಸಮಸ್ಯೆ. ನಾನು ಪ್ರಾಂತ್ಯಗಳ ಸಮಸ್ಯೆಯನ್ನು ಬಹಳಷ್ಟು ಆಸ್ಥೆಯಿಂದ ಬಹಳ ಕಾಲದಿಂದ ಅಧ್ಯಯನ ಮಾಡುತ್ತಾ ಬಂದಿದ್ದೇನೆ. ಅವುಗಳ ಕುರಿತಂತೆ ನನಗೆ ನನ್ನದೇ ಆದ ಕೆಲವು ಸ್ಪಷ್ಟ ಯೋಚನೆಗಳಿವೆ. ಸಂವಿಧಾನ ಸಭೆಯು ನನ್ನನ್ನು ರಾಜ್ಯಗಳಿಗೆ ಸಂಬಂಧಿಸಿದ ಪರಿಚ್ಛೇದಗಳನ್ನು ನಿರೂಪಿಸುವ ಸಮಿತಿಗೆ ನೇಮಿಸುತ್ತದೆ ಎಂದು ನಾನು ನಿರೀಕ್ಷಿಸಿದ್ದೆ. ಆ ಕೆಲಸಕ್ಕೆ ನನಗಿಂತ ಹೆಚ್ಚು ಸಮರ್ಥರು ಯಾರೋ ದೊರಕಿರಬೇಕು. ‘ನಾನು ಗರ್ಭಗುಡಿ’ (tabernacle)ಯ ಹೊರಗಣವನು ಎನ್ನುವುದೂ ಅದಕ್ಕೆ ಕಾರಣವಿರಬಹುದು. ಆ ಬಗ್ಗೆ ನನಗೇನೂ ಬೇಸರವಿಲ್ಲ. ಒಂದೇ ಒಂದು ವಿಷಾದದ ವಿಚಾರವೆಂದರೆ ಕೆಲವೊಂದು ಮಹತ್ವದ ಯೋಚನೆಗಳನ್ನು ಸಂವಿಧಾನ ಸಭೆಯ ಮುಂದಿಡುವ ಅವಕಾಶವೊಂದರಿಂದ ನಾನು ವಂಚಿತನಾದೆ ಎನ್ನುವುದು. ಹಾಗಾಗಿ ನಾನು ಈಗ ನನ್ನ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ. ಈ ಮನವಿಪತ್ರದಲ್ಲಿ ಪರಿಶಿಷ್ಟ ಜಾತಿಯವರ ಹಕ್ಕುಗಳ ಸಂರಕ್ಷಣೆಯ ವಿಚಾರದ ಜತೆಗೆ ಎಲ್ಲ ಅಲ್ಪಸಂಖ್ಯಾತರ ಹಕ್ಕುಗಳ ವಿಚಾರವನ್ನೂ, ಅದಕ್ಕಾಗಿ ಸಮಸ್ತ ನಾಗರಿಕರಿಗೆ ಸಿಗಬೇಕಾದ ಹಕ್ಕುಗಳ ವಿಚಾರವನ್ನೂ ಪ್ರಸ್ತಾಪಿಸುತ್ತೇನೆ. ಅದರ ಜತೆಗೆ ರಾಜ್ಯಗಳ ಸಮಸ್ಯೆಯನ್ನು ಸಾಂವಿಧಾನಿಕವಾಗಿ ಹೇಗೆ ನಿಭಾಯಿಸಬೇಕು ಎಂದೂ ಬರೆಯುತ್ತೇನೆ. ಈ ರೀತಿಯಲ್ಲಾದರೂ ನನ್ನ ವಿಚಾರಗಳು ಜನರಿಗೆ ತಲುಪಲಿ. ಅದನ್ನು ಅವುಗಳ ಮಹತ್ವಕ್ಕನುಗುಣವಾಗಿ ಅವರು ಮೌಲ್ಯಮಾಪನ ನಡೆಸಲಿ, ಅವರಿಗೆ ಯಾವ ರೀತಿಯಲ್ಲಿ ಸೂಕ್ತವೆನಿಸುತ್ತದೋ ಆ ರೀತಿಯಲ್ಲಿ ಅವುಗಳನ್ನು ಬಳಸಿಕೊಳ್ಳಲಿ.”

states and Minorites cover page
‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ ಕೃತಿ

ಈ ಕೃತಿಯನ್ನು ಬರೆಯುವ (ಮೊದಲ ಮುದ್ರಣ 1945) ಹೊತ್ತಿಗೇನೇ ಅಂಬೇಡ್ಕರ್ ಅವರಿಗೆ ಮುಂದೆ ಸಂವಿಧಾನ ಸಭೆ ನಿಭಾಯಿಸಬೇಕಾದ ಕ್ಲಿಷ್ಟಕರ ವಿಚಾರಗಳ ಬಗ್ಗೆ ಸ್ಪಷ್ಟವಾದ ಯೋಚನೆ ಮತ್ತು ನಿಲುವುಗಳಿದ್ದವು. ಜತೆಗೆ ಕೆಲವೊಂದು ಸಮಸ್ಯೆಗಳಿಗೆ ಅವರದ್ದೇ ಆದ ಪರಿಹಾರೋಪಾಯಗಳನ್ನು ಅವರು ಸಿದ್ಧಪಡಿಸಿಕೊಂಡು ತಯಾರಾಗಿದ್ದರು. ಮುಖ್ಯವಾಗಿ ಈ ಕೃತಿಯಲ್ಲಿ, ರಾಜ್ಯಗಳನ್ನು ಸೇರಿಸಿಕೊಂಡು ಹೊಸ ಒಕ್ಕೂಟವಾಗಿ ದೇಶವನ್ನು ಒಂದು ಸಾಂವಿಧಾನಿಕ ರಾಷ್ಟ್ರವನ್ನಾಗಿ ಕಟ್ಟುವ ವಿಚಾರದಲ್ಲಿ ಮತ್ತು ಅಂತಹ ಆಧುನಿಕ ರಾಷ್ಟ್ರ ವ್ಯವಸ್ಥೆಯಲ್ಲಿ ಸಮಸ್ತ ನಾಗರಿಕರಿಗೆ ನೀಡಬೇಕಾದ ಹಕ್ಕುಗಳ ಮತ್ತು ಅವುಗಳ ಸಂರಕ್ಷಣೆಗಾಗಿ ಅಳವಡಿಸಿಕೊಳ್ಳಬೇಕಾದ ಮಾರ್ಗಗಳ ಬಗ್ಗೆ ಅವರು ವಿವರವಾಗಿ ಬರೆದ ಕಾರಣದಿಂದಾಗಿ ಈ ಕೃತಿಗೊಂದು ಸಂವಿಧಾನದ ಸ್ವರೂಪ ಬಂದು ಬಿಟ್ಟಿತು. ಇದರಲ್ಲಿ ಭಾರತವನ್ನು ಅಮೆರಿಕದ ಮಾದರಿಯಲ್ಲಿ ಭಾರತದ ಸಂಯುಕ್ತ ಸಂಸ್ಥಾನಗಳು (United States of India) ಎಂದು ಅಂಬೇಡ್ಕರ್ ಕರೆದಿದ್ದರು ಎನ್ನುವುದು ಕೂಡಾ ಮಹತ್ವದ ಅಂಶ. ಒಂದು ಮಿನಿ ಸಂವಿಧಾನವಾಗಿ ಸ್ವರೂಪದಲ್ಲಿ ಸಂಪೂರ್ಣವಾಗಿರಬೇಕು ಎನ್ನುವಂತೆ ಅದಕ್ಕೊಂದು ಪ್ರಸ್ತಾವನೆಯನ್ನೂ (Preamble) ಅಂಬೇಡ್ಕರ್ ಅವರು ಬರೆದು ಸೇರಿಸಿದ್ದಾರೆ. ಹಾಗಾಗಿ ಈ ಕೃತಿಯಲ್ಲಿ ಮೂರು ಪ್ರಮುಖ ವಿಭಾಗಗಳಿವೆ:

1. ‘ಭಾರತದ ಸಂಯುಕ್ತ ಸಂಸ್ಥಾನಗಳ ಸಂವಿಧಾನ ಪ್ರಸ್ತಾವನೆಗೊಂದು ಪ್ರಸ್ತಾವನೆ’ (Proposed Preamble to the Constitution of the United States of India)

2. ಸಂವಿಧಾನದ ಪ್ರಸ್ತಾವಿತ ಪರಿಚ್ಛೇದ 1- ಭಾರತದ ಸಂಸ್ಥಾನಗಳನ್ನು ಭಾರತದ ಸಂಯುಕ್ತ ರಾಷ್ಟ್ರ ವ್ಯವಸ್ಥೆಗೆ ಸೇರಿಸಿಕೊಳ್ಳುವ ಬಗ್ಗೆ (Proposed Article I of the Constitution relating to the admission of Indian States and new territories into the Union)

3. ಸಂವಿಧಾನದ ಪ್ರಸ್ತಾವಿತ ಪರಿಚ್ಛೇದ 2 – ನಾಗರಿಕರ ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಸಂರಕ್ಷಣೆ ಮತ್ತು ಪರಿಶಿಷ್ಟ ಜಾತಿಗಳ ಹಿತರಕ್ಷಣೆಯ ಅಂಶಗಳ ಬಗ್ಗೆ (Proposed Article II of the Constitution containing Fundamental Rights for Citizens Provisions for the Protection of Minorities and Safeguards for the Scheduled Castes).

ಇದಾದ ನಂತರ ಒಂದು ವಿಸ್ತೃತವಾದ ಟಿಪ್ಪಣಿ ಮತ್ತು ಮೂರು ಅಡಕಗಳನ್ನು ಈ ಕೃತಿ ಒಳಗೊಂಡಿದೆ.

ಮನವಿಯ ರೂಪದ ಈ ಸಂಕೀರ್ಣ ದಾಖಲೆಯನ್ನು ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ 1947 ಮಾರ್ಚ್ 15ರಂದು ಸಮರ್ಪಿಸುತ್ತಾರೆ. ಅದು ಮುಂದೆ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಉಪಸಮಿತಿಯ ಮುಂದೆ ಬರುತ್ತದೆ. ನಂತರ ಅದೇ ವರ್ಷ ಆಗಸ್ಟ್‌ನಲ್ಲಿ ಸ್ವತಃ ಅಂಬೇಡ್ಕರ್ ಅವರೇ ಸಂವಿಧಾನದ ಕರಡು ಸಿದ್ಧತಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.

ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ?

ಪಾಳೇಗಾರಿಕೆ ಮತ್ತು ಬಂಡವಾಳಶಾಹಿ ವ್ಯವಸ್ಥೆಯನ್ನು ಯಥಾವತ್ತಾಗಿ ಉಳಿಸಿಕೊಂಡು, ಜಾತಿ ವಿನಾಶ ಮಾಡುವುದು (ಅದರಲ್ಲೂ, ಎಸ್.ಸಿ./ಎಸ್.ಟಿ.ಗಳಿಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸ್ವಾತಂತ್ರ‍್ಯವನ್ನು ದೊರಕಿಸುವುದು) ಅಸಾಧ್ಯ ಎಂಬುದನ್ನು ಬಾಬಾಸಾಹೇಬರು ಮನಗಂಡಿದ್ದರು. ಹಾಗಾಗಿ ಈ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಕ್ರಾಂತಿಕಾರೀ ಎನ್ನಬಹುದಾದ ಕೆಲವು ಕ್ರಮಗಳನ್ನು ಸೂಚಿಸುತ್ತಾರೆ.

ಅಂಬೇಡ್ಕರ್ ಅವರು ಇಲ್ಲಿ States ಎನ್ನುವ ಪದ ಬಳಸಿದ್ದು ರಾಜ್ಯಗಳು ಅಥವಾ ಪ್ರಾಂತ್ಯಗಳು ಎನ್ನುವ ಅರ್ಥದಲ್ಲಿ. ಅದೇ ರೀತಿ minorities ಎನ್ನುವ ಪದವನ್ನು ಬಳಸಿದ್ದು ಕೇವಲ ಧಾರ್ಮಿಕ/ ಭಾಷಾ ಅಲ್ಪಸಂಖ್ಯಾತರನ್ನಷ್ಟೇ ಉದ್ದೇಶಿಸಿ ಅಲ್ಲ. ಅವರ ಪ್ರಕಾರ ಭಾರತದಲ್ಲಿ ನಿಜ ಅರ್ಥದಲ್ಲಿ ಅಲ್ಪಸಂಖ್ಯಾತರು ಅಂತ ಯಾರಾದರೂ ಇದ್ದರೆ ಅದು ಈ ದೇಶದಲ್ಲಿ ಈಗ ಪರಿಶಿಷ್ಟಜಾತಿ ಅಂತ ಯಾರನ್ನು ಕರೆಯಲಾಗುವುದೋ ಅವರು ಮಾತ್ರ. ಅದರಲ್ಲೂ ಯಾರನ್ನು ಹಿಂದೆ ಅಸ್ಪೃಶ್ಯರು ಅಂತ ಪರಿಗಣಿಸಲಾಗಿತ್ತೋ ಅವರು ನಿಜವಾದ ಅಲ್ಪಸಂಖ್ಯಾತರು. ಹಾಗಾಗಿ ಈ ಪುಸ್ತಕದ ಶೀರ್ಷಿಕೆಯ ಮುಂದುವರಿಕೆಯಯಾಗಿ ನೀಡಲಾದ ‘What are Their Rights and How to Secure Them in the Constitution of Free India’ ಎನ್ನುವ ಉಪಶೀರ್ಷಿಕೆಯಲ್ಲಿ ಬರುವ ‘their’ ಎನ್ನುವ ಸರ್ವನಾಮವನ್ನು ಕೂಡ ಬಹಳ ಜಾಗರೂಕತೆಯಿಂದ ಅರ್ಥೈಸಿಕೊಳ್ಳಬೇಕಾಗುತ್ತದೆ. ಇಲ್ಲಿ ‘their’ ಅಥವಾ ‘ಅವರ’ ಎನ್ನುವಾಗ ಪುಸ್ತಕ ಯಾರನ್ನು ಉದ್ದೇಶಿಸುತ್ತದೆ? ಯಾರನ್ನು ಎಂದರೆ ‘ರಾಜ್ಯಗಳನ್ನು, ಪರಿಶಿಷ್ಟ ಜಾತಿಗೆ ಸೇರಿದವರನ್ನು ಮತ್ತು ಇತರ ಬೇರೆ ಬೇರೆ ಆಧಾರಗಳಲ್ಲಿ ಅಲ್ಪಸಂಖ್ಯಾತರು ಅಂತ ಪರಿಗಣಿಸಲಾದವರನ್ನು ಅಂತ ನಾವು ಅರ್ಥೈಸಿಕೊಳ್ಳಬೇಕಾಗುತ್ತದೆ.

Dalits 1
‘ಪರಿಶಿಷ್ಟ ಸಮುದಾಯಗಳ ಜನರೇ ನಿಜವಾದ ಅಲ್ಪಸಂಖ್ಯಾತರು’ ಎಂದು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು (ಫೋಟೋ: ಅಸ್ಪೃಶ್ಯರ ಶಾಲೆಯ ಸಂಗ್ರಹ ಚಿತ್ರ, ಬೆಂಗಳೂರು, ಕೃಪೆ: ಲೇಡಿ ಒಟ್ಟೋಲಿನ್ ಮೋರೆಲ್)

ಪರಿಶಿಷ್ಟ ಜಾತಿಗಳನ್ನು ಈ ಪುಸ್ತಕದಲ್ಲಿ ಅಲ್ಪಸಂಖ್ಯಾತರು ಎಂದು ಪರಿಗಣಿಸಿದ್ದನ್ನು ಕೆಲವರು ಆಕ್ಷೇಪಿಸುತ್ತಾರೆ. ಆಗ ಯಾವ ಸಮುದಾಯವನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಬಹುದು ಎಂಬುದಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು ಅವರು ನೀಡುತ್ತಾರೆ. ‘ಜನಸಂಖ್ಯೆಯ ದೃಷ್ಟಿಯಿಂದ ಸಣ್ಣ ಸಣ್ಣ ಧಾರ್ಮಿಕ ಗುಂಪುಗಳಾಗಿರುವವರಿಗಿಂತ, ಸಾಮಾಜಿಕ ತಾರತಮ್ಯ ಮತ್ತು ಶೋಷಣೆಯನ್ನು ಅನುಭವಿಸುತ್ತಿರುವ ಎಸ್. ಸಿ.ಗಳನ್ನು ಅತ್ಯಂತ ಅರ್ಹ ಅಲ್ಪಸಂಖ್ಯಾತರು ಎಂದು ಪರಿಗಣಿಸಬೇಕಾಗುತ್ತದೆ. ಏಕೆಂದರೆ ಎಸ್. ಸಿ.ಗಳಷ್ಟು ತಾರತಮ್ಯ ಮತ್ತು ಶೋಷಣೆಯನ್ನು ಯಾವ ಧಾರ್ಮಿಕ ಅಲ್ಪಸಂಖ್ಯಾತ ವರ್ಗವೂ ಅನುಭವಿಸುತ್ತಿಲ್ಲ. ಆದಕಾರಣ, ಎಸ್.ಸಿ.ಗಳು ವಿಶೇಷವಾದ ಸೌಲಭ್ಯ ಮತ್ತು ರಕ್ಷಾಣೋಪಾಯಗಳಿಗೆ ಅರ್ಹರಾಗಿದ್ದಾರೆ’ ಎನ್ನುವುದು ಪರಿಶಿಷ್ಟ ಜಾತಿಗಳಿಗೆ ಸೇರಿದವರನ್ನು ಅಲ್ಪಸಂಖ್ಯಾತರು ಎಂದು ಕರೆದಿದಕ್ಕೆ ಅಂಬೇಡ್ಕರ್ ಅವರು ನೀಡಿದ ಸಮರ್ಥನೆ ಆಗಿತ್ತು.

ಎರಡನೆಯದಾಗಿ, ಸೆಪ್ಟೆಂಬರ್ 24, 1932ರಂದು ನಡೆದ ಪುಣೆ ಕರಾರಿನ ಮೂಲಕ ಕಳೆದುಕೊಂಡ ಪ್ರತ್ಯೇಕ ಮತದಾನದ ಮೂಲಕವೇ ಎಸ್.ಸಿ.ಗಳು ತಮ್ಮ ಪ್ರತಿನಿಧಿಗಳನ್ನು ಆರಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಾರೆ. ಈ ಪದ್ಧತಿಯ ಮೂಲಕ ಮಾತ್ರವೇ ಎಸ್.ಸಿ.ಗಳು ತಮ್ಮ ಪ್ರಾಮಾಣಿಕ, ನಿಷ್ಠಾವಂತ ಮತ್ತು ಸಮರ್ಥ ನಾಯಕರನ್ನು ಚುನಾಯಿಸಲು ಸಾಧ್ಯ ಎಂಬುದನ್ನು ತಮ್ಮ 10 ವರ್ಷಗಳ ಅನುಭವದಲ್ಲಿ ಅರಿತಿರುತ್ತಾರೆ.

ಮೂರನೆಯದಾಗಿ, ಎಲ್ಲಿಯತನಕ ಹಾಲಿ ಇರುವ ಹಳ್ಳಿ ಮತ್ತು ಕೇರಿ ವ್ಯವಸ್ಥೆ ಇರುತ್ತದೋ ಅಲ್ಲಿಯತನಕ ಮೇಲ್ಜಾತಿಗಳ ದಬ್ಬಾಳಿಕೆ ಮತ್ತು ದೌರ್ಜನ್ಯವು ತಪ್ಪುವುದಿಲ್ಲ ಹಾಗೂ ಎಸ್.ಸಿ.ಗಳ ಪರವಾಲಂಬಿಯಾದ ದಯನೀಯ ಬದುಕು ಮತ್ತು ದಾರಿದ್ರ‍್ಯವೂ ತಪ್ಪುವುದಿಲ್ಲ ಎಂಬುದು ಬಾಬಾಸಾಹೇಬರು ಅನುಭವದಿಂದ ಅರಿತಿರುತ್ತಾರೆ. ಆದಕಾರಣ, ಎಸ್.ಸಿ.ಗಳಿಗೆ ಇತರರಿಂದ ಸ್ವತಂತ್ರವಾದ ಪ್ರತ್ಯೇಕ ಹಳ್ಳಿಗಳ (Separate Settlements) ನಿರ್ಮಾಣಕ್ಕೆ ಒತ್ತಾಯಿಸುತ್ತಾರೆ. ಈ ಉದ್ದೇಶಕ್ಕಾಗಿ, ಪ್ರತ್ಯೇಕ ಆಯೋಗವನ್ನು ರಚಿಸಬೇಕೆಂದು ಹೇಳುತ್ತಾರೆ.

ಇದನ್ನೂ ಓದಿರಿ: ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಬಹು ಮುಖ್ಯವಾಗಿ, ಸ್ವತಂತ್ರ ಭಾರತದಲ್ಲಿ, ಪ್ರಮುಖ ಉತ್ಪಾದನಾ ವಲಯಗಳಾದ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳನ್ನು ಜಾತೀಯತೆಗೆ ಬಲ ನೀಡದಂತೆ ಹೇಗೆ ಸಂಘಟಿಸಬೇಕು ಎಂಬುದನ್ನು ಅತ್ಯಂತ ವಿನೂತನ ರೀತಿಯಲ್ಲಿ ವಿವರಿಸಿದ್ದಾರೆ. ಈ ಆರ್ಥಿಕ ಚಿಂತನೆಯನ್ನು State Socialism (ಪ್ರಭುತ್ವ ಸಮಾಜವಾದ) ಎಂದು ಕರೆಯಲಾಗಿದೆ. ಈ ತತ್ವದ ಮುಖ್ಯ ಅಂಶಗಳನ್ನು ಕೆಳಗೆ ನೀಡಲಾಗಿದೆ.

1.ಪ್ರಮುಖ ಕೈಗಾರಿಕೆಗಳು (Key Industries) ಸರ್ಕಾರದ ಒಡೆತನದಲ್ಲಿರಬೇಕು. ಅದೇ ರೀತಿಯಾಗಿ, ಮೂಲಭೂತ ಅಥವಾ ಪ್ರಾಥಮಿಕ ಕೈಗಾರಿಕೆಗಳು (Basic Industries) ಸರ್ಕಾರದ ಮಾಲೀಕತ್ವದಲ್ಲಿ ಇರಬೇಕು ಮತ್ತು ಸರ್ಕಾರಿ ನಿಗಮಗಳ ಮೂಲಕ ನಿರ್ವಹಿಸಲ್ಪಡಬೇಕು.

2.ವಿಮೆಯು ಸರ್ಕಾರದ ಏಕಸ್ವಾಮ್ಯದಲ್ಲಿರಬೇಕು. ಪ್ರತಿಯೊಬ್ಬ ವಯಸ್ಕ ಪ್ರಜೆಯೂ ತನ್ನ ಸಂಬಳಕ್ಕೆ ಅನುಗುಣವಾಗಿ ಜೀವ ವಿಮಾ ಪಾಲಿಸಿಯನ್ನು ಪಡೆದುಕೊಳ್ಳಲು ಸರ್ಕಾರವು ಒತ್ತಾಯಿಸಬೇಕು.

3.ಕೃಷಿಯು ಸರ್ಕಾರಿ ಸ್ವಾಮ್ಯದ ಉದ್ಯಮವಾಗಿರಬೇಕು. ಕೈಗಾರಿಕೆ, ವಿಮೆ ಮತ್ತು ಭೂಮಿಯ ಒಡೆತನ ಹೊಂದಿರುವ ಖಾಸಗಿಯವರ ಹಾಲಿ ಹಕ್ಕುಗಳನ್ನು ಸರ್ಕಾರವು ವಶಪಡಿಸಿಕೊಳ್ಳಬೇಕು. ಅವರ ಹಕ್ಕುಗಳ ಬೆಲೆಗೆ ಸಮನಾದ ಡಿಬೆಂಚರುಗಳನ್ನು ಪರಿಹಾರವಾಗಿ ಅವರಿಗೆ ನೀಡಬೇಕು. ಆ ಡಿಬೆಂಚರುಗಳನ್ನು ನಗದಾಗಿ ಪರಿವರ್ತಿಸುವ ಅವಧಿಯನ್ನು ಸರ್ಕಾರವೇ ನಿರ್ಧರಿಸಬೇಕು. ಈ ಡಿಬೆಂಚರುಗಳನ್ನು ವರ್ಗಾಯಿಸಬಹುದೇ ಹೊರತು ಸರ್ಕಾರ ವಶಪಡಿಸಿಕೊಂಡ ಭೂಮಿಯನ್ನು ವಾಪಸ್ಸು ಪಡೆಯುವ ಹಕ್ಕು ಯಾರಿಗೂ ಇರುವುದಿಲ್ಲ. ಡಿಬೆಂಚರನ್ನು ನಗದಾಗಿ ಪಡೆಯುವ ತನಕ ಅದರ ಮೇಲೆ ಸರ್ಕಾರ ನಿಗದಿಪಡಿಸಿದ ಬಡ್ಡಿಯನ್ನು ಪಡೆಯಬಹುದು. ಕೃಷಿ ಉದ್ಯಮಕ್ಕಾಗಿ ಸರ್ಕಾರವು ವಶಪಡಿಸಿಕೊಂಡ ಭೂಮಿಯನ್ನು ‘ಫಾರ್ಮ್’ಗಳನ್ನಾಗಿ ನಿಗದಿತ ಅಳತೆಯಲ್ಲಿ ವಿಂಗಡಿಸಬೇಕು. ಈ ಫಾರ್ಮ್ ಜಮೀನನ್ನು ಕುಟುಂಬ ಘಟಕಗಳನ್ನಾಗಿ ಮಾಡಲ್ಪಟ್ಟ ಹಳ್ಳಿಯ ನಿವಾಸಿಗಳಿಗೆ ಬೇಸಾಯ ಮಾಡಲು ಕೆಳಕಂಡ ಷರತ್ತುಗಳ ಮೇಲೆ ಗುತ್ತಿಗೆಗೆ ನೀಡಬೇಕು:

ಅ. ಫಾರ್ಮ್‌ಗಳನ್ನು ಸಾಮೂಹಿಕ ಫಾರ್ಮ್‌ಗಳಾಗಿ ಸಾಗುವಳಿ ಮಾಡಬೇಕು ಮತ್ತು ಸರ್ಕಾರದ ನಿಯಮ ಹಾಗೂ ನಿರ್ದೇಶನಗಳಿಗೆ ಅನುಸಾರ ಸಾಗುವಳಿ ಮಾಡಬೇಕು.

ಆ. ಫಾರ್ಮ್‌ನ ಮೇಲೆ ವಿಧಿಸಲ್ಪಡುವ ಕರ ಅಥವಾ ತೆರಿಗೆಗಳನ್ನು ಚುಕ್ತಾ ಮಾಡಿದ ಮೇಲೆ ಉಳಿಯುವ ಬೆಳೆಯನ್ನು ಮೊದಲೇ ನಿಗದಿಪಡಿಸಿದ ಬಗೆಯಲ್ಲಿ ಹಿಡುವಳಿದಾರರು ತಮ್ಮಲ್ಲಿಯೇ ಹಂಚಿಕೊಳ್ಳಬೇಕು.

ಇ. ವಶಪಡಿಸಿಕೊಂಡ ಭೂಮಿಯನ್ನು ಜಾತಿ ಅಥವಾ ಜನಾಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ಹಳ್ಳಿಯಲ್ಲಿನ ಎಲ್ಲ ನಿವಾಸಿಗಳಿಗೂ ಸಮನಾಗಿ ಗುತ್ತಿಗೆ ನೀಡಬೇಕು. ಈ ಹಂಚಿಕಾ ವಿಧಾನದಿಂದಾಗಿ, ಭೂಮಾಲೀಕನಾಗಲೀ, ಭೂಹೀನನಾಗಲೀ ಅಥವಾ ಗುತ್ತಿಗೆದಾರನಾಗಲೀ ಇಲ್ಲದಂತಾಗಬೇಕು.

ಈ. ಸಾಮೂಹಿಕ ಸಾಗುವಳಿಗೆ ಅಗತ್ಯವಾದ ನೀರಿನ ಸೌಲಭ್ಯ, ಬೀಜ, ಗೊಬ್ಬರ, ಜಾನುವಾರುಗಳು, ಬೇಸಾಯ ಸಲಕರಣೆಗಳು, ಇತ್ಯಾದಿಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ.

ಉ. ಸರ್ಕಾರವು ಫಾರ್ಮ್‌ನ ಬೆಳೆಯನ್ನು ಲೆವಿಯ ರೂಪದಲ್ಲಿ ಕೆಳಕಂಡಂತೆ ಶುಲ್ಕವಾಗಿ ವಸೂಲು ಮಾಡಬಹುದು:

i. ಭೂಕಂದಾಯಕ್ಕಾಗಿ ಒಂದು ಭಾಗ;

ii. ಡಿಬೆಂಚುದಾರರಿಗೆ ಪಾವತಿ ಮಾಡಲು ಒಂದು ಭಾಗ; ಮತ್ತು

iii. ಸಾಗುವಳಿ ಮಾಡಲು ಒದಗಿಸಿದ ಉತ್ಪಾದನಾ ಸಲಕರಣೆಗಳನ್ನು ಬಳಸಿದ್ದಕ್ಕಾಗಿ ಬಾಡಿಗೆ ಅಥವಾ ಕರ.

ಊ. ಹಿಡುವಳಿಯ ಷರತ್ತುಗಳನ್ನು ಉಲ್ಲಂಘಿಸುವ ಹಿಡುವಳಿದಾರರಿಗೆ ಅಥವಾ ಸರ್ಕಾರವು ಒದಗಿಸಿದ ಸಲಕರಣೆಗಳನ್ನು ಉದ್ದೇಶಪೂರ್ವಕವಾಗಿ ದುರುಪಯೋಗ ಪಡಿಸಿಕೊಳ್ಳುವ ಹಾಗೂ ಸಾಮೂಹಿಕ ಕೃಷಿ ಕಲ್ಪನೆಯ ವಿರುದ್ಧ ಪೂರ್ವಗ್ರಹಪೀಡಿತರಾಗಿ ನಡೆದುಕೊಳ್ಳುವವರ ವಿರುದ್ಧ ದಂಡ ವಿಧಿಸಬಹುದು.

Constitute
‘1949ರ ನವೆಂಬರ್ 25ರಂದು ಭಾರತೀಯ ಸಂವಿಧಾನದ ಅಂತಿಮ ಕರಡನ್ನು ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರಸ್ತುತಪಡಿಸಿದ ಸಂದರ್ಭ. (ಸಾಂದರ್ಭಿಕ ಚಿತ್ರ)

ಸಂವಿಧಾನವು ಜಾರಿಯಾದ ಹತ್ತು ವರ್ಷದೊಳಗೆ ಈ ಕಾರ್ಯ ಯೋಜನೆಯು ಕಡ್ಡಾಯವಾಗಿ ಜಾರಿಗೆ ಬರಬೇಕು. ಭಾರತದ ಸಂಯುಕ್ತ ರಾಜ್ಯಗಳ ಒಕ್ಕೂಟದ ಸಂವಿಧಾನದಲ್ಲಿ, ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ಎಸ್. ಸಿ. ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಮತ್ತಿತರ ಸಮುದಾಯಗಳಿಗೂ ಜನಸಂಖ್ಯೆವಾರು ಪ್ರಾತಿನಿಧ್ಯ ನೀಡಬೇಕೆಂದು ಬಾಬಾಸಾಹೇಬರು ಪ್ರತಿಪಾದಿಸಿದ್ದಾರೆ. ಪ್ರಮುಖ ಮತ್ತು ಮೂಲಭೂತ ಕೈಗಾರಿಕೆಗಳಲ್ಲದೆ ಇತರ ಉದ್ಯಮಗಳನ್ನು ನಡೆಸಲು ಎಲ್ಲರಿಗೂ ಸಮಾನ ಅವಕಾಶಗಳಿರಬೇಕೆಂದು ಸಹ ಪ್ರತಿಪಾದಿಸಿದ್ದಾರೆ. ಹೊಸ ವ್ಯವಸ್ಥೆಯಲ್ಲೂ ಹಳೆಯ ಮನೋಭಾವವುಳ್ಳ ಜಾತಿವಾದಿಗಳು ನಡೆಸಬಹುದಾದ ಅಸ್ಪೃಶ್ಯತಾ ಆಚರಣೆ, ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಹೀನ ಕೃತ್ಯಗಳನ್ನು ನಿಗ್ರಹಿಸಲು ಕೆಲವು ಕಠಿಣ ಕ್ರಮಗಳನ್ನು ತಮ್ಮ ಈ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಪ್ರತ್ಯೇಕ ಹಳ್ಳಿಗಳಲ್ಲಿ (Separate Settlements) ನೆಲೆಗೊಂಡು, ಪ್ರತ್ಯೇಕ ಮತದಾನ ಪದ್ಧತಿಯ ಮೂಲಕ ತಮ್ಮ ಸಮಾಜಕ್ಕೆ ನಿಷ್ಠರಾದ ಸಮರ್ಥ ಶಾಸಕರನ್ನೂ ಸಂಸದರನ್ನೂ ಹೊಂದುವುದರಿಂದಾಗಿ, ತಾವು ಪ್ರತಿಪಾದಿಸಿದ ಎಲ್ಲ ಕಾಯಿದೆ ಕಟ್ಟಳೆಗಳೂ ಕಟ್ಟುನಿಟ್ಟಾಗಿ ಜಾರಿಯಾಗುತ್ತದೆ ಎಂಬ ಭರವಸೆ ಬಾಬಾಸಾಹೇಬರಿಗಿತ್ತು. ತಮಗಿರುವ ಸ್ವತಂತ್ರ ರಾಜಕೀಯ ಬಲದಿಂದ ಸಾಮಾಜಿಕ – ಆರ್ಥಿಕ ಸಮಾನತೆಯನ್ನು ಪಡೆಯುವ ಎಸ್.ಸಿ.ಗಳು ಯಾರ ಹಂಗೂ ಇಲ್ಲದ ಸ್ವತಂತ್ರ ಸ್ವಾಭಿಮಾನದ ಬದುಕನ್ನು ಪಡೆಯಬಲ್ಲರು ಎಂಬ ವಿಶ್ವಾಸ ಅವರಿಗಿತ್ತು. ಆದ್ದರಿಂದ, ಮುಕ್ತವಾದ ಸೌಹಾರ್ದಯುತವಾದ ವಾತಾವರಣದಲ್ಲಿ ತಮ್ಮ ಜನರು ತಮ್ಮಲ್ಲಿರುವ ಅದಮ್ಯ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಅಪೂರ್ವ ಕೊಡುಗೆಗಳನ್ನು ನೀಡುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿರುತ್ತಾರೆ.

ಇದನ್ನೂ ಓದಿರಿ: ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?

ಕರಡು ಸಮಿತಿಯಲ್ಲಿ ಮಾತ್ರವಲ್ಲದೆ, ರಾಜ್ಯಾಂಗ ಸಭೆಯಲ್ಲೂ ಒಂಟಿಯಾದ ಬಾಬಾಸಾಹೇಬರು, ಎಲ್ಲರ ಒತ್ತಡಕ್ಕೆ ಮಣಿದು, ತಾವು ತಮ್ಮ ಮೊದಲ ಸಂವಿಧಾನದಲ್ಲಿ ಪ್ರತಿಪಾದಿಸಿದ್ದ ಎಸ್.ಸಿ.ಗಳ ಪ್ರತ್ಯೇಕ ನೆಲೆಗಳ ನಿರ್ಮಾಣ, ಪ್ರತ್ಯೇಕ ಚುನಾವಣಾ ಪದ್ಧತಿ ಮತ್ತು ಪ್ರಭುತ್ವ ಸಮಾಜವಾದಿ ಆರ್ಥಿಕ ಚಿಂತನೆಗಳನ್ನು ಕೈಬಿಡಬೇಕಾಯಿತು. ಆದರೆ, ಉದ್ಯೋಗ ಮೀಸಲಾತಿ ನಿಯಮವನ್ನು ಮೂಲಭೂತ ಹಕ್ಕನ್ನಾಗಿಸುವಲ್ಲಿ ಅವರು ಯಶಸ್ವಿಯಾದರು. ಮೇಲ್ಜಾತಿ ಪಕ್ಷಗಳಿಗೆ ಚಮಚಾಗಳನ್ನು ತಯಾರುಮಾಡುವ ಮೀಸಲು ಕ್ಷೇತ್ರಗಳು ಮತ್ತು ಅದೇ ಮೇಲ್ಜಾತಿಗಳಲ್ಲಿ ಭಾರೀ ಬಂಡವಾಳಿಗಾರನ್ನು ಹಾಗೂ ಭಾರೀ ಜಮೀನುದಾರರನ್ನು ಸೃಷ್ಟಿಸುವ ಆರ್ಥಿಕ ವ್ಯವಸ್ಥೆಯ ನಡುವೆಯೂ ಈ ಮೂಲಕ ಒಂದು ಸಣ್ಣ ಆಶಾಭಾವನೆಯು ಹುಟ್ಟಿಕೊಂಡಿತ್ತು. ಬಲು ದೊಡ್ಡ ಹೋರಾಟವನ್ನೇ ಏಕಾಂಗಿಯಾಗಿ ನಡೆಸಿ ಮೂಲಭೂತ ಹಕ್ಕಾಗಿಸಿದ್ದ ಮೀಸಲಾತಿಯನ್ನು ಬಳಸಿ ತನ್ನ ಸಮಾಜದಲ್ಲಿ ಕೆಲವರಾದರೂ ಉನ್ನತ ಶಿಕ್ಷಣ ಮತ್ತು ಉನ್ನತ ಹಾಗೂ ನಿರ್ಣಾಯಕ ಹುದ್ದೆಗಳನ್ನು ಪಡೆದಲ್ಲಿ, ಅವರು ಪ್ರಭಾವಶಾಲಿ ‘ಬುದ್ಧಿಜೀವಿ ವರ್ಗ’ ಆಗಬಹುದೆಂದು ಬಾಬಾಸಾಹೇಬರು ನಿರೀಕ್ಷಿಸುತ್ತಾರೆ. ಈ ವರ್ಗವು ತನ್ನ ಸಮಾಜವನ್ನು ಒಂದು ಜಾಗೃತ ಸಮಾಜವನ್ನಾಗಿ ಪರಿವರ್ತಿಸಿ, ತಮ್ಮ ನಿಷ್ಠರಾದ ಸಮರ್ಥ ನಾಯಕತ್ವವನ್ನು ಬೆಳೆಸಬಹುದು ಎಂದು ನಿರೀಕ್ಷಿಸುತ್ತಾರೆ. ಅಂತಹ ನಾಯಕತ್ವವು, ಸಂವಿಧಾನದ ಆಶಯಗಳನ್ನು (ಸಾಮಾಜಿಕ ಪರಿವರ್ತನೆ ಮತ್ತು ಆರ್ಥಿಕ ಅಭಿವೃದ್ಧಿ) ಅನುಷ್ಠಾನಕ್ಕೆ ತರಬಹುದು. ಈ ಬುದ್ಧಿಜೀವಿ ವರ್ಗದ ಮುಂದಿರುವ ಸಾಧ್ಯತೆಗಳ ಬಗ್ಗೆ ಆಶಾಭಾವನೆ ಹೊಂದಿದ್ದರಿಂದಲೇ ಅವರು ಮೇಲ್ಜಾತಿಗಳು ಮತ್ತು ಅವರ ಹಿಂಬಾಲಕರೇ ತುಂಬಿದ್ದ ಸಂಸತ್ತಿಗೆ ಎಚ್ಚರಿಕೆಯನ್ನು ಕೊಡುವ ಕೆಚ್ಚನ್ನು ತೋರಿಸುತ್ತಾರೆ. ಆದರೆ, ಮುಂದೆ ಅವರು ಆತಂಕಪಟ್ಟಂತೆ, ಜಾತಿ ವ್ಯವಸ್ಥೆಯೂ ಬದಲಾಗುವುದಿಲ್ಲ ಮತ್ತು ಶೋಷಿತ ವರ್ಗಗಳು ಹಾಲಿ ವ್ಯವಸ್ಥೆಯನ್ನು ಧ್ವಂಸ ಮಾಡುವುದೂ ಇಲ್ಲ. ಏಕೆಂದರೆ, ಶೋಷಿತರ ನಡುವೆ ಹುಟ್ಟಿಬಂದ ಬುದ್ಧಿಜೀವಿ ವರ್ಗವು ತಾವು ಎಸ್.ಸಿ./ಎಸ್.ಟಿ.ಗಳೆಂದು ಗುರುತಿಸಿಕೊಳ್ಳುವುದಕ್ಕೂ ಹಿಂಜರಿದು, ತನ್ನವರಿಂದಲೇ ದೂರವಾಗಿ ಬದುಕುವ ಹೊಣೆಗೇಡಿಗಳಾಗಿ ಬದುಕಲಾರಂಭಿಸುತ್ತಾರೆ. ಹೀಗೆ, ಸಂಯುಕ್ತ ರಾಜ್ಯಗಳ ಭಾರತದ ಸಂವಿಧಾನದಲ್ಲಿ ಆವಿಷ್ಕಾರವಾಗಿದ್ದ, ಪ್ರಭುತ್ವ ಸಮಾಜವಾದವು ಸ್ವತಂತ್ರ ಭಾರತದ ಸಂವಿಧಾನದಲ್ಲಿ ಸ್ಥಾನ ಪಡೆಯದಿದ್ದ ಪ್ರಯುಕ್ತ, ಹಾಲಿ ಸಂವಿಧಾನವು ಜಾತಿವಾದಿಗಳನ್ನು ಕಿಂಚಿತ್ತೂ ಅಲುಗಾಡಿಸದಾಯಿತು. ಶೋಷಿತ ವರ್ಗಗಳು ರಾಜಕೀಯವಾಗಿ ಬಲಾಢ್ಯರಾದರೆ ಮಾತ್ರ ಹಾಲಿ ಸಂವಿಧಾನವನ್ನು ಸಾಮಾಜಿಕ ಪರಿವರ್ತನೆಗೆ ಬಳಸಬಹುದು. ಅಂದರೆ, ಎಸ್.ಸಿ./ಎಸ್.ಟಿ./ಒ.ಬಿ.ಸಿ/ ಧಾರ್ಮಿಕ ಅಲ್ಪಸಂಖ್ಯಾತರು ಸ್ಪಷ್ಟ ಬಹುಮತ ಪಡೆದು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ರಚಿಸಿದರೆ, ಇದೇ ಸಂವಿಧಾನದ ಆಶಯಗಳನ್ನು (ಸಾಮಾಜಿಕ ಪರಿವರ್ತನೆ ಮತ್ತು ಆರ್ಥಿಕ ಅಭಿವೃದ್ಧಿ) ಖಂಡಿತವಾಗಿ ಸಾಧಿಸಬಹುದು. ಆದರೆ ಆ ನಿಟ್ಟಿನಲ್ಲಿ ಶ್ರಮಿಸಲಿಚ್ಛಿಸುವ ಶೋಷಿತ ವರ್ಗಗಳ ನಾಯಕರು ತಮ್ಮಲ್ಲೇ ಬೇರು ಬಿಟ್ಟಿರುವ ಜಾತೀಯ ಭಾವನೆಗಳಿಂದ ಮುಕ್ತರಾಗಬೇಕಿದೆ. ಸ್ವಲ್ಪಮಟ್ಟಿಗೆ ಅನುಕೂಲಸ್ಥ ಸಮುದಾಯಗಳು ತಮ್ಮಲ್ಲೇ ಇರುವ ತಮಗಿಂತ ವಂಚಿತರಾದವರಿಗೆ ಆದ್ಯತೆ ಕೊಡಬೇಕಾಗಿದೆ.

ನಮ್ಮೊಳಗೇ ಆರಂಭವಾಗದ Diagnostics ಪರಿವರ್ತನೆಯನ್ನು ಹೊರಜಗತ್ತಿನಲ್ಲಿ ಕಾಣಲು ಸಾಧ್ಯವೇ

ಅಂಬೇಡ್ಕರ್ ಮತ್ತು ಅಂಬೇಡ್ಕರ್ ಕಾಲದ ಭಾರತದ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಹಲವಾರು ವಿದ್ವಾಂಸರ ಪ್ರಕಾರ ಅಂಬೇಡ್ಕರ್ ಅವರ ಕ್ರಾಂತಿಕಾರಿ ಎನ್ನಬಹುದಾದ ಚಿಂತನೆಗಳನ್ನು ಈ ಕಿರುಕೃತಿ ಅತ್ಯಂತ ಪ್ರಖರಾಗಿ ದಾಖಲಿಸುತ್ತದೆ. ಇದರಲ್ಲಿ ಗಮನ ಸೆಳೆಯುವ ಎರಡು ಅಂಶಗಳು ಎಂದರೆ, ಮೊದಲನೆಯದ್ದು ಅಂಬೇಡ್ಕರ್ ಅವರು ಅಲ್ಪಸಂಖ್ಯಾತ ವರ್ಗಗಳಿಗೆ ಸಾಂವಿಧಾನಿಕವಾಗಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಪ್ರತಿಪಾದನೆ ಮುಂದಿರಿಸಿದ್ದು ಮತ್ತು ಅಂತಹ ಪ್ರಾತಿನಿಧ್ಯ ನೀಡದೆ ಹೋದರೆ ಎದುರಾಗುವ ಅಪಾಯಗಳ ಬಗ್ಗೆ ಎಚ್ಚರಿಸಿದ್ದು. ಎರಡನೆಯದ್ದು ಅಲ್ಪಸಂಖ್ಯಾತ ಮತ್ತು ದಲಿತ ವರ್ಗಗಳನ್ನು ಆರ್ಥಿಕ ಶೋಷಣೆಯಿಂದ ಪಾರುಮಾಡಲು ಅರ್ಥವ್ಯವಸ್ಥೆಯನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎನ್ನುವ ಅವರ ಪ್ರತಿಪಾದನೆ. ಹಾಗಾಗಿ ಅಂಬೇಡ್ಕರ್ ಅವರು ಈ ಕೃತಿಯ ಮೂಲಕ ಏಕಕಾಲಕ್ಕೆ ರಾಜಕೀಯ ಉದಾರವಾದಿ ಚಿಂತಕನಂತೆಯೂ, ಆರ್ಥಿಕವಾಗಿ ಎಡಪಂಥೀಯ ಚಿಂತಕನಂತೆಯೂ ಕಾಣಿಸಿಕೊಳ್ಳುತ್ತಾರೆ.

ಇದನ್ನೂ ಓದಿರಿ: ‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು

ಈ ಕೃತಿಯಲ್ಲಿ ಹೇಳಿದ್ದು ಸಂವಿಧಾನದಲ್ಲಿ ಭಾರತದ ಸಂವಿಧಾನದಲ್ಲಿ ಸೇರದೆ ಹೋದದ್ದು ಒಂದು ದುರಾದೃಷ್ಟ. ಆದರೆ ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತಂತೆ ಅಂಬೇಡ್ಕರ್ ಅವರ ಮೂಲ ಚಿಂತನೆಗಳ ಆಳ ಮತ್ತು ಪ್ರಖರತೆ ಎಷ್ಟಿತ್ತು ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗಿ ನಿಲ್ಲುತ್ತದೆ.

M Gopinath
ಎಂ. ಗೋಪಿನಾಥ್
+ posts

ಬಹುಜನ ಚಳವಳಿಯಲ್ಲಿ ಗುರುತಿಸಿಕೊಂಡ ಗೋಪಿನಾಥ್ ಅವರು, ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದವರು. 1987ರಲ್ಲಿ ಬೆಂಡಿಗೇರಿ ದಲಿತರಿಗೆ ಮಲ ತಿನ್ನಿಸಿದ ಪ್ರಕರಣ ಖಂಡಿಸಿ, ಕೆಎಸ್‌ಎಫ್‌ಸಿ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯಲ್ಲಿ ಪೂರ್ಣಾವಧಿ ಕಾರ್ಯಕರ್ತರಾದರು. ಸಮತಾ ಸೈನಿಕ ದಳ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಹಲವಾರು ಪುಸ್ತಕಗಳನ್ನು ಬರೆದಿರುವ ಅವರು, ವಿ. ಟಿ. ರಾಜಶೇಖರರ ಸಂಪಾದಕತ್ವದಲ್ಲಿದ್ದ ಇಂಗ್ಲಿಷ್ ದಲಿತ್ ವಾಯ್ಸ್‌ನಲ್ಲಿ ಎಕ್ಸಿಕ್ಯೂಟಿವ್ ಎಡಿಟರ್ ಆಗಿದ್ದರು. ಇದೇ ವೇಳೆ ಕನ್ನಡ ದಲಿತ್ ವಾಯ್ ಆರಂಭಿಸಿದರು. 'ಅಂಬೇಡ್ಕರ್ ವಾಯ್ಸ್' ಮಾಸಿಕದ ಪ್ರಧಾನ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.

Narayan
ಎ. ನಾರಾಯಣ

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಎ.ನಾರಾಯಣ ಅವರು ಪ್ರಖರ ರಾಜಕೀಯ ವಿಶ್ಲೇಷಕರೂ ಹೌದು. ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿರುವ ಅವರು, ತಮ್ಮ ವಿಶಿಷ್ಟ ಒಳನೋಟಗಳಿಂದ ಗಮನ ಸೆಳೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...

‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

ಕೃತಿ: Annihilation of Caste (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...