ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ?

Date:

ಕೃತಿ: The Riddle of Rama and Krishna (ರಾಮ ಮತ್ತು ಕೃಷ್ಣರ ಒಗಟು)
ಕೃತಿ ರಚಿಸಲಾದ ವರ್ಷ: ಸುಮಾರು 1954- 1955ರ ಅವಧಿ
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1987, ಅಕ್ಟೋಬರ್
ಇಂಗ್ಲಿಷ್ ಸಂಪುಟ: 4 (‘ಹಿಂದೂ ಧರ್ಮದ ಒಗಟುಗಳು’ ಕೃತಿಯ ಅನುಬಂಧದಲ್ಲಿ ಸೇರಿಸಲ್ಪಟ್ಟ ಕಿರುಕೃತಿ)
ಕನ್ನಡ ಸಂಪುಟ: 3
Samyak Prakashan, New Delhi ಪ್ರಕಟಣೆ: 1997


‘ಹಿಂದೂ ಧರ್ಮದ ಒಗಟುಗಳು’ ಕೃತಿಯ ನಾಲ್ಕು ಪ್ರತಿಗಳನ್ನು ಡಾ.ಅಂಬೇಡ್ಕರ್ ಅವರು ಟೈಪ್ ಮಾಡಿಸಿದ್ದರೆಂಬುದು ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ. ಮುದ್ರಕರೇ ಈ ಕೃತಿಯನ್ನು ನಾಮಾವಶೇಷ ಮಾಡಬಹುದು ಎಂಬ ಎಚ್ಚರಿಕೆ ಬಾಬಾಸಾಹೇಬರಿಗಿತ್ತು. ಈ ಕೃತಿಯ ಅನುಬಂಧದಲ್ಲಿ ಸೇರಿಸಲಾದ ಬರೆಹವೇ ‘ರಾಮ- ಕೃಷ್ಣರ ಒಗಟು’. ಇದು ಪ್ರತ್ಯೇಕವಾಗಿ ಪ್ರಕಟಿಸಲೆಂದೇ ಬರೆದ ಕೃತಿಯೆಂಬುದು ಅಧ್ಯಯನಕಾರರ ಅಭಿಪ್ರಾಯ. ‘ಹಿಂದೂ ಧರ್ಮದ ಒಗಟುಗಳು’ ಕೃತಿಯಲ್ಲಿ ಸೇರಿ ಪ್ರಕಟವಾದಾಗ 1988ರಲ್ಲಿ ಮಹಾರಾಷ್ಟ್ರದಲ್ಲಿ ಭಾರೀ ವಿವಾದವನ್ನೇ ‘ರಾಮಕೃಷ್ಣರ ಒಗಟು’ ಹುಟ್ಟುಹಾಕಿತು. ದೈವೀಪುರುಷರೆಂದು ಆರಾಧಿಸಲ್ಪಡುವ ರಾಮ ಮತ್ತು ಕೃಷ್ಣರು ಭಿತ್ತಿರುವ ನೈತಿಕ ಮೌಲ್ಯಗಳ ಟೊಳ್ಳುತನವನ್ನು ಈ ಕೃತಿ ಬಯಲಿಗೆಳೆದಿತ್ತು. ಇಂದಿನ ಸ್ತ್ರೀವಾದಿ ಅಧ್ಯಯನಗಳು ಪಿತೃಪ್ರಧಾನ ಪುರುಷಾಧಿಕಾರದ ಬಗ್ಗೆ ಮಾತನಾಡುತ್ತವೆ. ಇಂತಹ ಅಧ್ಯಯನಕಾರರು ಅಂಬೇಡ್ಕರ್ ಅವರು ಬಿಡಿಸಿಟ್ಟ ರಾಮ-ಕೃಷ್ಣರ ಒಗಟುಗಳಲ್ಲಿ ಅಡಗಿರುವ ಪಿತೃಪ್ರಧಾನತೆಯ ಬೇರುಗಳನ್ನು ಕಾಣಿಸುವ ನೆಲೆಯನ್ನು ಪರಿಶೀಲಿಸಬೇಕು. ಹಾಗೆ ನೋಡಿದರೆ ಇದೊಂದು ಸ್ತ್ರೀವಾದದ ಗಂಡಾಳ್ವಿಕೆ ಶೋಧದ ಪಠ್ಯವೂ ಆಗಿದೆ.

- Advertisement -

1

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಮಹಾರಾಷ್ಟ್ರ ಸರಕಾರವು ಅಂಬೇಡ್ಕರ್ ಅವರ ಬರೆಹ ಮತ್ತು ಭಾಷಣಗಳ 22 ಸಂಪುಟಗಳನ್ನು 1979 ಏಪ್ರಿಲ್ 14ರಿಂದ ಪ್ರಕಟಿಸಲು ಶುರುಮಾಡಿತು. ಈ ಸಂಪುಟಗಳಲ್ಲಿ ನಾಲ್ಕನೇ ಸಂಪುಟವೆ, ‘ಹಿಂದೂ ಧರ್ಮದ ಒಗಟುಗಳು’ ಕೃತಿಯಾಗಿದೆ. ಈ ಕೃತಿಯ ಅನುಬಂಧದಲ್ಲಿ ಸೇರಿಸಲಾದ ಬರೆಹವೇ ‘ರಾಮ ಕೃಷ್ಣರ ಒಗಟು’. ಈ ಬರೆವಣಿಗೆಯನ್ನು ಅಂಬೇಡ್ಕರ್ ಅವರು 1954 ಜನವರಿಯಿಂದ 1955ರ ನವೆಂಬರ್ ಅವಧಿಯಲ್ಲಿ ಬರೆದಿದ್ದಾರೆಂದು ನಾನಕ್ ಚಂದ್ ರತ್ತು ದಾಖಲಿಸುತ್ತಾರೆ. ಚಟ್ನೀಸ್ ಅವರ ಪ್ರಕಾರ ಬಾಬಾಸಾಹೇಬರು 1940-41ರಲ್ಲಿಯೇ ಈ ಪುಸ್ತಕದ ಕೆಲಸ ಶುರುಮಾಡಿದ್ದರು. ಇದು ಮುಗಿಯುವ ಹೊತ್ತಿಗೆ ನವೆಂಬರ್ 1955 ಆಗಿತ್ತು (ಅಶೋಕ ಗೋಪಾಲ, 62, 2023). ಈ ಕೃತಿಯ ನಾಲ್ಕು ಪ್ರತಿಗಳನ್ನು ಟೈಪ್ ಮಾಡಿದ್ದರಂತೆ, ಇದೇಕೆ ನಾಲ್ಕು ಪ್ರತಿಗಳು ಎಂದು ಕೇಳಿದಾಗ ಅಂಬೇಡ್ಕರ್ ಮುಗುಳ್ನಕ್ಕು ಹೇಳಿದ್ದರಂತೆ, ‘ಈ ಪುಸ್ತಕದ ಹೆಸರೇನು? ಹಿಂದೂ ಧರ್ಮದ ಒಗಟುಗಳು. ನಿನ್ನ ಪ್ರಶ್ನೆಗೆ ಆ ಹೆಸರೇ ಉತ್ತರ. ನನಗೆ ನನ್ನದೇ ಮುದ್ರಣಾಲಯವಿಲ್ಲ. ಹಾಗಾಗಿ ನಾನು ಯಾವುದಾದರೂ ಹಿಂದೂ ಮುದ್ರಕರಿಗೇ ಕೊಡಬೇಕು. ಕೊಟ್ಟಾದ ಮೇಲೆ ಅದು ಕಳೆದು ಹೋಗುವುದು, ಸುಟ್ಟು ಹೋಗುವುದು ಅಥವಾ ಹಾಳಾಗಿ ಹೋಗುವುದು, ಹೀಗಾಗಿ ನನ್ನ ಹಲವು ವರ್ಷಗಳ ಕಠಿಣ ಶ್ರಮ ಹಾಗೆ ನಷ್ಟವಾಗಿಬಿಡುತ್ತದೆ. ಅದಕ್ಕಾಗಿಯೇ ಏನಾದರಾಗಲಿ, ಎಷ್ಟಾದರೂ ಖರ್ಚಾಗಲಿ ನನ್ನ ಬಳಿ ಮತ್ತೊಂದು ಪ್ರತಿ ಇರಬೇಕು’ ಎಂದಿದ್ದರಂತೆ.

ಕೃತಿ ಸಂಪೂರ್ಣ ಸಿದ್ಧವಾಗಿದ್ದರೂ, ಅಂಬೇಡ್ಕರ್ ತಕ್ಷಣ ಮುದ್ರಣಕ್ಕೆ ಕಳಿಸಲಿಲ್ಲ. ಮುದ್ರಿಸುವ ಮುನ್ನ ಅದಕ್ಕೆ ಎರಡು ಛಾಯಾಚಿತ್ರಗಳು ಅಗತ್ಯವಿದ್ದವು ಎನ್ನುತ್ತಾರೆ ರತ್ತೂ. ಮೊದಲನೆಯದು: ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ 1951ರಲ್ಲಿ ಬನಾರಸ್‌ಗೆ ಭೇಟಿ ನೀಡಿದಾಗ ಬ್ರಾಹ್ಮಣರ ಕಾಲು ತೊಳೆದು ಪಾದೋದಕ ಕುಡಿದ ಫೋಟೋ. ಎರಡನೆಯದು: ಬ್ರಾಹ್ಮಣರೊಬ್ಬರು ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿಯಾದರೆಂಬ ಸಂತೋಷಾಚರಣೆಗೆ 1947ರ ಆಗಸ್ಟ್ 15ರಂದು ಬನಾರಸ್‌ನ ಬ್ರಾಹ್ಮಣರು ನಡೆಸಿದ ಯಜ್ಞದಲ್ಲಿ, ಸ್ವತಃ ನೆಹರೂ ಭಾಗಿಯಾಗಿ ಬ್ರಾಹ್ಮಣರು ಉಡುಗೊರೆಯಾಗಿ ನೀಡಿದ ರಾಜದಂಡ ಸ್ವೀಕರಿಸಿ, ಅವರು ತಂದುಕೊಟ್ಟ ಗಂಗಾಜಲ ಸೇವಿಸಿದ ಪ್ರಸಂಗದ ಫೋಟೋ. ಈ ಪೈಕಿ ರಾಜೇಂದ್ರಪ್ರಸಾದರ ಫೋಟೋ ಸಿಕ್ಕಿದರೂ, ನೆಹರೂ ಫೋಟೋಗಾಗಿ ಅಂಬೇಡ್ಕರ್ ಹುಡುಕಾಟ ಮುಂದುವರೆಸಿದ್ದರೆಂದು ರತ್ತೂ ಬರೆದಿದ್ದಾರೆಂದು ಎನ್.ಎಸ್. ಶಂಕರ್ ಅವರು ಉಲ್ಲೇಖಿಸುತ್ತಾರೆ.

reddle of rama and krisha 1
‘ರಾಮ ಮತ್ತು ಕೃಷ್ಣರ ಒಗಟು’ ಕೃತಿ

ಅಂಬೇಡ್ಕರ್ ಅವರಿಗೆ ‘ಹಿಂದೂ ಧರ್ಮದ ಒಗಟುಗಳು’ ಕೃತಿಯನ್ನು ಮುದ್ರಣ ಮಾಡುವವರೆ ಆ ಕೃತಿಯನ್ನು ನಾಶ ಮಾಡಬಹುದು ಎನ್ನುವ ಭಯವಿತ್ತು ಎಂದು ಕಾಣುತ್ತದೆ. ಈ ಕೃತಿಯು ವ್ಯಾಪಕ ವಿರೋಧವನ್ನು ಹುಟ್ಟುಹಾಕಬಲ್ಲದು ಎನ್ನುವುದನ್ನು ಈ ಕೃತಿ ಬರೆಯುವಾಗಲೇ ಗ್ರಹಿಸಿದ್ದಂತೆ ಕಾಣುತ್ತದೆ. ರತ್ತು ಅವರು ಕಾಲಾನಂತರ ಈ ನಾಲ್ಕೂ ಪ್ರತಿಗಳು ಕಾಣೆಯಾಗಿದ್ದವು, ಅಂಬೇಡ್ಕರ್ ಸಮಗ್ರ ಬರೆಹ ಪ್ರಕಟಣಾ ಯೋಜನೆಯಲ್ಲಿ ಅಪ್ರಕಟಿತ ಪುಟಗಳಿಂದ ಸಂಗ್ರಹಿಸಿದ ಪಠ್ಯಗಳಲ್ಲಿ ‘ಹಿಂದೂ ಧರ್ಮದ ಒಗಟುಗಳು’ ಸಂಪುಟವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಸಿದ್ದಾರ್ಥ ಕಾಲೇಜಿನ ಎಸ್.ಎಸ್. ರೇ ಅವರಿಗೆ ಅವರು ಒದಗಿಸಿದ ಒಂದು ಅಧ್ಯಾಯವೂ ಸೇರಿದೆ ಎನ್ನುತ್ತಾರೆ. ಅಶೋಕ ಗೋಪಾಲ್ ಅವರು (ಅಶೋಕ ಗೋಪಾಲ, 62, 2023) ಇದನ್ನೆಲ್ಲ ಚರ್ಚಿಸುತ್ತಾ, ‘ರಾಮ ಮತ್ತು ಕೃಷ್ಣರ ಒಗಟು’ (The Riddle of Rama and Krishna) ಅಪೂರ್ಣ ಬರೆಹ ಇರಬೇಕು; ಇದು ಮತ್ತೊಂದು ಸ್ವತಂತ್ರ ಗ್ರಂಥಕ್ಕೆ ಮಾಡಿರುವ ಟಿಪ್ಪಣಿಗಳಿರಬೇಕು ಎನ್ನುತ್ತಾರೆ.

ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಅಂಬೇಡ್ಕರ್ ಅವರು ‘ಹಿಂದೂ ಧರ್ಮದ ಒಗಟುಗಳು’ ಕೃತಿಯ ಮೂಲ ಪರಿವಿಡಿಯಲ್ಲಿ ‘ರಾಮ ಕೃಷ್ಣ’ರ ಅಧ್ಯಾಯವನ್ನು ಸೇರಿಸಿರಲಿಲ್ಲ. ಹಾಗಾಗಿ ಮಹಾರಾಷ್ಟ್ರ ಸರಕಾರ ಹಿಂದೂ ಧರ್ಮದ ಒಗಟುಗಳು ಕೃತಿಯನ್ನು ಪ್ರಕಟಿಸುವಾಗ ಅನುಬಂಧದಲ್ಲಿ ಈ ಪಠ್ಯವನ್ನು ಸೇರಿಸಲಾಯಿತು. ಈ ಕೃತಿ ಪ್ರಕಟವಾದಾಗ 1988ರಲ್ಲಿ ಮರಾಠ ಮಹಾಮಂಡಲದಲ್ಲಿ ಇದರ ಪ್ರತಿಯನ್ನು ಸುಡಲಾಯಿತು. ಇದರಲ್ಲಿ ರಾಮ ಕೃಷ್ಣ ಅಧ್ಯಾಯಕ್ಕೆ ಬಹಳ ಪ್ರತಿರೋಧ ಬಂದಿತು. ಶಿವಸೇನೆಯ ಪ್ರತಿಭಟನೆ ತೀವ್ರವಾದಾಗ ಮಹಾರಾಷ್ಟ್ರ ಸರಕಾರವು ಈ ಪ್ರಕಟಣೆಯನ್ನು ಹಿಂಪಡೆಯಿತು. ಈ ನಡೆಯನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ದಲಿತ ಸಂಘಟನೆಗಳು ವ್ಯಾಪಕವಾಗಿ ಪ್ರತಿರೋಧ ತೋರಿದ ಕಾರಣ ಮತ್ತೆ ರಾಮಕೃಷ್ಣ ಪಠ್ಯ ಸೇರ್ಪಡೆಯಾಯಿತು. ಈ ಮುದ್ರಣದಲ್ಲಿ ಮಹಾರಾಷ್ಟ್ರ ಸರಕಾರವು ‘ಈ ಅಧ್ಯಾಯದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ಸರಕಾರದ ಸಹಮತವಿಲ್ಲ’ ಎಂದು ಮುದ್ರಿಸಿತು (ಎನ್.ಎಸ್ ಶಂಕರ್, 2018, 15). ಅಸಲಿಗೆ ಈ ಪುಟ್ಟ ಅಧ್ಯಾಯಕ್ಕೆ ಇಷ್ಟು ವ್ಯಾಪಕವಾದ ಪ್ರತಿರೋಧ ಏಕೆ ಬಂತು ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ.

2

ಈ ತನಕ ಹಿಂದೂ ಧರ್ಮದ ನಂಬಿಕೆ, ದೈವ, ಆಚರಣೆಗಳಲ್ಲಿ ವರ್ಣಾಶ್ರಮವನ್ನು ಗಟ್ಟಿಗೊಳಿಸುತ್ತಾ ಬರಲಾಗಿದೆಯೋ ಆ ಗಟ್ಟಿಯಾದ ನಂಬಿಕೆಗಳನ್ನು ಛಿದ್ರಗೊಳಿಸುತ್ತಾ ಮತ್ತು ಹಿಂದೂ ಧರ್ಮದಲ್ಲಿ ಯಾವ ಯಾವುದನ್ನು ಕಟ್ಟು ಕಥೆಗಳ ಮೂಲಕ ಅಸತ್ಯಗಳನ್ನು ಕಟ್ಟಲಾಗಿತ್ತೋ ಅಂಥವುಗಳನ್ನು ‘ಹಿಂದೂ ಧರ್ಮದ ಒಗಟುಗಳು’ ಕೃತಿಯಲ್ಲಿ ಅಂಬೇಡ್ಕರ್ ಅವರು ಮೂಲ ಆಕರಗಳೊಂದಿಗೆ ಬಯಲು ಮಾಡುತ್ತಾ ಬರುತ್ತಾರೆ. ಅಂದರೆ ಹಿಂದೂ ಧರ್ಮದ ಬಗೆಗಿನ ಕಗ್ಗಂಟಿನ ಒಗಟನ್ನು ಬಿಡಿಸುತ್ತಾರೆ. ಹಾಗಾಗಿ ಹಿಂದೂ ಧರ್ಮದ ನಂಬಿಕೆಗೆ ಘಾಸಿಯಾಗಿದೆಯೆಂದು ‘ಹಿಂದೂ ಧರ್ಮದ ಒಗಟು’ ಸಂಪುಟವನ್ನು ವ್ಯಾಪಕವಾಗಿ ವಿರೋಧಿಸಲಾಗುತ್ತದೆ.

ಈ ರಾಮ-ಕೃಷ್ಣ ಒಗಟು ಮೂಲದಲ್ಲಿ 19 ಪುಟಗಳ ಬರೆಹ. ಇಷ್ಟು ಪುಟ್ಟ ಲೇಖನ ಏನನ್ನು ಒಳಗೊಂಡಿದೆ? ಯಾಕಿಷ್ಟು ವಿವಾದವನ್ನು ಹುಟ್ಟುಹಾಕಿತು? ಎನ್ನುವುದನ್ನು ಈ ಕೃತಿಯ ಒಳಗಿಂದ ಪರೀಕ್ಷೆ ಮಾಡಬಹುದು. ಅಂತೆಯೇ ಅಂಬೇಡ್ಕರ್ ಅವರು ರಾಮ ಮತ್ತು ಕೃಷ್ಣನ ಬಗ್ಗೆ ಬರೆದದ್ದು ಇದೇ ಮೊದಲಲ್ಲ. ಆರಂಭದಿಂದಲೂ ಬರೆಯುತ್ತಾ ಬಂದಿದ್ದರು. ಇಲ್ಲಿ ಈತನಕ ಅಂಬೇಡ್ಕರ್ ಓದಿದ ಎಲ್ಲ ಆಕರಗಳ ನೆರವಿನಿಂದ ಸರಳವಾಗಿ ಇಡಿಯಾಗಿ ಹಿಂದೂಗಳ ಮನಸ್ಸಲ್ಲಿ ದೈವಿಕ ಸ್ವರೂಪ ಪಡೆದ ಈ ಇಬ್ಬರೂ ವ್ಯಕ್ತಿಗಳನ್ನು ನೈಜತೆಯನ್ನು ಬಯಲು ಮಾಡುತ್ತಾರೆ. ವಿಶೇಷ ಏನೆಂದರೆ ಯಾವ ಯಾವ ಪಠ್ಯಗಳ ನೆರವಿನಿಂದ ರಾಮ ಕೃಷ್ಣರನ್ನು ದೈವೀ ಪುರುಷರು ಎಂದು ಹೇಳಲಾಗಿತ್ತೋ ಅದೇ ಆಕರಗಳನ್ನು ಬಳಸಿ ಅಂಬೇಡ್ಕರ್ ಈ ಇಬ್ಬರೂ ಯಾಕೆ ದೈವೀಪುರುಷರಲ್ಲ? ಹೇಗೆ ದೈವೀ ಪುರುಷರಿಗೆ ಸಲ್ಲದ ಗುಣಗಳು ಈ ಇಬ್ಬರಲ್ಲಿಯೂ ನೆಲೆಗೊಂಡಿದ್ದವು ಎನ್ನುವುದನ್ನು ಬಾಬಾಸಾಹೇಬರು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಅಂಬೇಡ್ಕರ್ ಅವರು 1936ರಲ್ಲಿ ಬರೆದ ‘ಜಾತಿ ವಿನಾಶ’ ಕೃತಿಯಲ್ಲಿ ರಾಮನ ಬಗ್ಗೆ ಉಲ್ಲೇಖಿಸುತ್ತಾ, ಜಾತಿಯ ಸಮಸ್ಯೆಗಳ ಬಗ್ಗೆ ಹೇಳುತ್ತಾ, ಚಾತುರ್ವರ್ಣವನ್ನು ಮೀರುವುದು ಅಥವಾ ಎದುರಿಸುವುದು ದೊಡ್ಡ ಸವಾಲಾಗಿದೆ ಎನ್ನುತ್ತಾ, ‘ರಾಮರಾಜ್ಯವು ಚಾತುರ್ವರ್ಣವನ್ನು ಪಾಲಿಸುವ ರಾಜ್ಯವಾಗಿತ್ತು. ಹಾಗಾಗಿಯೇ ಬ್ರಾಹ್ಮಣ್ಯವನ್ನು ಆಚರಿಸಿದ ಶೂದ್ರ ಶಂಭೂಕನನ್ನು ಕೊಲ್ಲಬೇಕಾಯಿತು. ಇದು ರಾಜಧರ್ಮ ಮತ್ತು ಚಾತುರ್ವರ್ಣದ ರಕ್ಷಣೆಯಾಗಿದೆ’ (ಸಂ:1,ಪುಟ:72) ಎಂದು ವಿಶ್ಲೇಷಣೆ ಮಾಡುತ್ತಾರೆ.

image 178
ಶೂದ್ರ ಶಂಭೂಕನನ್ನು ಕೊಂದ ರಾಮ (ಸಾಂದರ್ಭಿಕ ಚಿತ್ರ)

ಹಾಗೆ ನೋಡಿದರೆ, ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣ ಕುರಿತಂತೆ ವ್ಯಾಪಕವಾದ ಅಧ್ಯಯನಗಳು ನಡೆದಿವೆ. ಇತಿಹಾಸತಜ್ಞ ಹೆಚ್.ಡಿ. ಸಾಂಕಾಲಿಯ ಉಲ್ಲೇಖಿಸುವಂತೆ, 1843ರಿಂದ 1867ರ ಅವಧಿಯಲ್ಲಿ ಗೊರೆಸ್ಯೋನ ಪ್ರಕಟಿಸಿದ ರಾಮಾಯಣದ ಆರು ಸಂಪುಟಗಳಿಂದ ಈ ಅಧ್ಯಯನ ಆರಂಭವಾಗಿರಬೇಕು, ಎ. ವೆಬರ್ (1873) ಮೊದಲು ಕಾಲನಿರ್ಣಯದ ಚರ್ಚೆ ಮಾಡಿರಬೇಕೆಂದು ಅಭಿಪ್ರಾಯ ತಾಳುತ್ತಾರೆ. ವಿಲಿಯಂ ಜೋನ್ಸ್, ರಾಮಸ್ವಾಮಿಶಾಸ್ತ್ರಿ , ಆರ್.ಸಿ. ಮುಜುಂದಾರ್, ಪುಲಸ್ಕರ್, ಅಂಬೇಡ್ಕರ್, ಪಿ.ವಿ. ಕಾಣೆ, ಡಿ.ಡಿ. ಕೋಸಾಂಬಿ, ಎ.ಎಲ್. ಬಾಷಂ, ರೋಮಿಲಾ ಥಾಪರ್, ಇರ್ಫಾನ್ ಹಬೀಬ್ ತನಕ ನೂರಾರು ಜನ ಇತಿಹಾಸ ತಜ್ಞರು, ಪುರಾತತ್ವಜ್ಞರು, ಮಾನವಶಾಸ್ತ್ರಜ್ಞರನ್ನು ಒಳಗೊಂಡಂತೆ ಹಲವು ಜ್ಞಾನಶಾಖೆಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿದೆ.

ವಾಲ್ಮೀಕಿಯ ಕಾಲದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಕ್ರಿ.ಪೂ. 3ರಿಂದ 5ನೇ ಶತಮಾನದಲ್ಲಿ ವಾಲ್ಮೀಕಿ ಬದುಕಿದ್ದು, ‘ರಾಮಾಯಣ ರಚಿಸಿರಬೇಕು’ ಎಂಬ ನಿಲುವಿದೆ. ಹೀಗಿರುವಾಗ ಅಂಬೇಡ್ಕರ್ ಅವರು ರಾಮನ ವ್ಯಕ್ತಿತ್ವವನ್ನು ಮನಗಾಣಿಸಲು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಪಠ್ಯವನ್ನೇ ಮೂಲ ಆಕರವನ್ನಾಗಿಸಿಕೊಳ್ಳುತ್ತಾರೆ. ಇಲ್ಲಿ ಅಂಬೇಡ್ಕರ್ ಆರಂಭಕ್ಕೆ ಬೌದ್ಧರಾಮಾಯಣ ಮತ್ತು ವಾಲ್ಮೀಕಿ ರಾಮಾಯಣವನ್ನು ಹೋಲಿಕೆ ಮಾಡುತ್ತಾರೆ. ವಾಲ್ಮೀಕಿ ರಾಮಾಯಣದ ಸಂಕ್ಷಿಪ್ತ ಕತೆ ಹೇಳುವ ಅಂಬೇಡ್ಕರ್, ಇದರಲ್ಲಿ ರಾಮನು ಪೂಜಾರ್ಹ ವ್ಯಕ್ತಿ ಎಂದು ಹೇಳುವ ಯಾವ ಅಂಶವೂ ಇಲ್ಲ ಎಂದು ಹೇಳುತ್ತಾರೆ.

ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ

ರಾಮನ ಹುಟ್ಟು ಅಸಹಜವಾಗಿದೆ, ನೈಸರ್ಗಿಕವಾಗಿಲ್ಲ, ಒಬ್ಬ ವ್ಯಕ್ತಿಯಾಗಿ, ಒಬ್ಬ ರಾಜನಾಗಿ ರಾಮನು ಒಳ್ಳೆಯ ವ್ಯಕ್ತಿಯಾಗಿದ್ದನೆ ಎನ್ನುವುದನ್ನು ವಿಶ್ಲೇಷಣೆಗೆ ಒಡ್ಡುತ್ತಾರೆ. ಇದರಲ್ಲಿ ಎರಡು ನಿದರ್ಶನಗಳನ್ನು ಕೊಡುತ್ತಾರೆ: ಒಂದು- ವಾಲಿಯನ್ನು ರಾಮನು ಮೋಸದಿಂದ ಕೊಂದದ್ದು, ಎರಡು- ಸೀತೆಯನ್ನು ತುಂಬಾ ಅಮಾನವೀಯವಾಗಿ ನಡೆಸಿಕೊಂಡದ್ದು. ಈ ಎರಡೂ ಪ್ರಕರಣಗಳನ್ನು ದೀರ್ಘವಾಗಿ ಚರ್ಚೆ ಮಾಡಿ ರಾಮನು ಒಬ್ಬ ಘನತೆಯುಳ್ಳ ವ್ಯಕ್ತಿಯಾಗಿಯೂ ನಡೆದುಕೊಂಡಿಲ್ಲ ಎನ್ನುವುದನ್ನು ವಿವರಿಸುತ್ತಾರೆ.

ವಾಲ್ಮೀಕಿ ರಾಮಾಯಣದ ಉಲ್ಲೇಖಗಳನ್ನು ಆಧರಿಸಿಯೇ, ‘ರಾಮನು ಏಕ ಪತ್ನಿವ್ರತಸ್ತ ಆಗಿರಲಿಲ್ಲ. ಬಹುಪತ್ನಿಯರು, ಉಪಪತ್ನಿಯರಿದ್ದರು, ಹೆಂಗಳೆಯರ ನಡುವೆ ಕುಡಿಯುತ್ತಾ ಕೂರುತ್ತಿದ್ದ ಬಗ್ಗೆ’ ಹೇಳುತ್ತಾರೆ. ರಾಮನು ತಪಸ್ಸು ಮಾಡುತ್ತಿದ್ದ ಶಂಬೂಕನನ್ನು ಕೊಲೆ ಮಾಡುವ ರೀತಿ ಕೂಡ ವರ್ಣಾಶ್ರಮ ಧರ್ಮದ ಪಾಲನೆಯಾಗಿದೆ ಎನ್ನುತ್ತಾರೆ. ಹೀಗೆ ಎಲ್ಲ ವಿವರಗಳ ಮೂಲಕ ಅಂಬೇಡ್ಕರ್ “ರಾಮನ ಬಗೆಗೆ ಹಿಂದೂಗಳಲ್ಲಿ ನೆಲೆಯೂರಿದ ಯಾವ ನಂಬಿಕೆಗಳು ನಿಜವಲ್ಲ. ಅದನ್ನು ನಾನು ಹೇಳುವುದಿಲ್ಲ, ಸ್ವತಃ ವಾಲ್ಮೀಕಿಯೇ ಬರೆಯುತ್ತಾನೆ” ಎಂದು ವಿಶ್ಲೇಷಿಸುತ್ತಾರೆ. ಹೀಗೆ ರಾಮನ ಬಗೆಗೆ ಕಟ್ಟಿಕೊಂಡ ಪೊಳ್ಳು ನಂಬಿಕೆಗಳನ್ನು ಒಡೆಯುತ್ತಾರೆ.

Riddles in Hinduism2 1
‘ಹಿಂದೂ ಧರ್ಮದ ಒಗಟುಗಳು’ ಕೃತಿ

ಅಂಬೇಡ್ಕರ್ ಒಂದು ಕಡೆ ರಾಮನ ಬಗ್ಗೆ ಹೀಗೆ ಬರೆಯುತ್ತಾರೆ, ‘ರಾಮನನ್ನು ಆದರ್ಶ ರಾಜ ಎನ್ನುತ್ತಾರೆ. ಆದರೆ ಈ ತೀರ್ಮಾನಕ್ಕೆ ಸತ್ಯದ ಆಧಾರವಿದೆಯೇ? ಹಾಗೆ ನೋಡಿದರೆ, ರಾಮ ಎಂದೂ ರಾಜನಾಗಿ ಕೆಲಸ ಮಾಡಿಯೇ ಇಲ್ಲ. ಅವನು ನಾಮಮಾತ್ರದ ರಾಜ. ಆಡಳಿತದ ಹೊಣೆಯೆಲ್ಲ ಏನಿದ್ದರೂ, ವಾಲ್ಮೀಕಿ ಹೇಳುವಂತೆ, ಭರತನದು. ರಾಮ ತನ್ನ ರಾಜ್ಯ ಮತ್ತು ಪ್ರಜೆಗಳ ಕ್ಷೇಮಚಿಂತನೆಯಿಂದ ತಾನಾಗಿಯೇ ಬಿಡುಗಡೆ ಪಡೆದಿದ್ದಾನೆ. ರಾಮ ರಾಜನಾದ ನಂತರದ ಅವನ ದಿನಚರಿಯನ್ನು ವಾಲ್ಮೀಕಿ ಕೂಲಂಕಷವಾಗಿ ವಿವರಿಸುತ್ತಾನೆ (ಉತ್ತರಖಾಂಡ, ಸರ್ಗ:42, ಶ್ಲೋಕ:7). ಅದರಂತೆ ರಾಮನ ದಿನಚರಿಯಲ್ಲಿ ಎರಡು ಭಾಗಗಳು; ಮಧ್ಯಾಹ್ನದವರೆಗೆ ಮತ್ತು ಮಧ್ಯಾಹ್ನದ ನಂತರ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಧಾರ್ಮಿಕ ಅನುಷ್ಠಾನಗಳಲ್ಲಿ, ನಿತ್ಯಕರ್ಮಗಳಲ್ಲಿ ದಿನ ಹೋಗುತ್ತದೆ. ಮಧ್ಯಾಹ್ನದ ನಂತರ ವಿದೂಷಕರೊಡನೆ ಇಲ್ಲವೇ ಅಂತಃಪುರದಲ್ಲಿ ಕಾಲ ಕಳೆಯುತ್ತದೆ. ಅಂತಃಪುರದಲ್ಲಿ ಬೇಸರವಾದರೆ ವಿದೂಷಕರ ಬಳಿಗೆ, ವಿದೂಷಕರ ಬಳಿ ಬೇಸರವಾದರೆ ಮತ್ತೆ ಅಂತಃಪುರಕ್ಕೆ (ಉತ್ತರಕಾಂಡ ಸರ್ಗ 43. ಶ್ಲೋಕ 1); ಇದರ ಜೊತೆಗೆ, ರಾಮ ಅಂತಃಪುರದಲ್ಲಿ ಹೇಗೆ ಕಾಲ ಕಳೆಯುತ್ತಿದ್ದನೆಂಬುದನ್ನೂ ವಾಲ್ಮೀಕಿ ಸವಿಸ್ತಾರವಾಗಿ ವಿವರಿಸಿದ್ದಾನೆ. ಅಂತಃಪುರವಿದ್ದದ್ದು ಅಶೋಕವನ ಎಂಬ ಉದ್ಯಾನದಲ್ಲಿ. ರಾಮ ಊಟ ಮಾಡುತ್ತಿದ್ದುದೂ ಅಲ್ಲೇ. ಊಟದಲ್ಲಿ ಎಲ್ಲ ಬಗೆಯ ಸ್ವಾದಿಷ್ಟ ತಿನಿಸುಗಳೂ ಮಾಂಸ, ಹಣ್ಣುಗಳು ಮತ್ತು ಮದ್ಯವೂ ಇರುತ್ತಿದ್ದವು; ರಾಮ ಪಾನವಿರೋಧಿಯೇನೂ ಅಲ್ಲ. ಸ್ವತ: ತಾನೂ ಯಥೇಚ್ಛವಾಗಿ ಮದಿರೆ ಹೀರುವ ಜೊತೆಗೆ ಸೀತೆಯನ್ನೂ ಕುಡಿತಕ್ಕೆ ಎಳೆಯುತ್ತಿದ್ದನೆಂದು ವಾಲ್ಮೀಕಿ ಬರೆಯುತ್ತಾನೆ.

ಇದನ್ನೂ ಓದಿರಿ: ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’

ವಾಲ್ಮೀಕಿ ಮಾಡುವ ಬಣ್ಣನೆಯಂತೆ, ಆತನ ಅಂತಃಪುರವೂ ಕಿರಿದಲ್ಲ. ಅಲ್ಲಿ ನೃತ್ಯ, ಗಾಯನಗಳಲ್ಲಿ ನುರಿತರಾದ ಅಪ್ಸರೆಯರು, ಉರಗ ಮತ್ತು ಕಿನ್ನರ ಕನ್ಯೆಯರು ಇರುತ್ತಿದ್ದರು. ಇವರಲ್ಲದೆ ವಿವಿಧ ಪ್ರದೇಶಗಳಿಂದ ಕರೆತಂದ ಸುಂದರಿಯರೂ ಇದ್ದರು. ನರ್ತಿಸುವ ಈ ಹೆಂಗಳೆಯರ ನಡುವೆ ರಾಮ ಕುಡಿಯುತ್ತ ಕೂರುತ್ತಿದ್ದ. ತನ್ನ ಮನಸ್ಸನ್ನು ರಂಜಿಸಿದವರಿಗೆ ಹೂಮಾಲೆ ಹಾಕುತ್ತಿದ್ದ. ರಾಮ ‘ಹೆಂಗಳೆಯರ ಸಖರಲ್ಲಿ ರಾಜರ ರಾಜ’ ಎಂದು ವಾಲ್ಮೀಕಿ ವರ್ಣಿಸಿದ್ದಾನೆ. ಇದು ಒಂದು ದಿನದ ಕಥೆಯಾಗಿರದೆ, ನಿತ್ಯದ ಕಸುಬಾಗಿತ್ತು. (ಶಂಕರ್ ಎನ್.ಎಸ್ ಅನು: ಪುಟ:32-33) ಹೀಗೆ ಇಡೀ ಲೇಖನದ ಉದ್ದಕ್ಕೂ ರಾಮನ ಬೇರೆ ಬೇರೆ ನೆಲೆಯ ಪುರುಷಾಧಿಕಾರದ ಮೋಸ ವಂಚನೆ ಎಲ್ಲದರ ಎಳೆಗಳನ್ನು ಬಿಡಿಸುತ್ತಾರೆ.

krishna 4
ಕೃಷ್ಣ (ಸಾಂದರ್ಭಿಕ ಚಿತ್ರ)

ಇನ್ನು ಕೃಷ್ಣನಿಗೆ ಸಂಬಂಧಿಸಿದ ಕಥೆಯೂ ಹೀಗೆಯೆ. ಯಾವ ಅರ್ಥದಲ್ಲಿ ಕೃಷ್ಣ ದೈವೀ ಪುರುಷ ಎಂದು ಅಂಬೇಡ್ಕರ್ ಒಂದೊಂದನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಮೊದಲನೆಯದಾಗಿ ಕೃಷ್ಣನ ಕಾಲಕ್ಕೂ ಮಹಾಭಾರತದ ಕಾಲಕ್ಕೂ ವ್ಯತ್ಯಾಸವಿದೆ, ಅದು ಹೇಗೆ ಕೃಷ್ಣ ಮಹಾಭಾರತದ ನಾಯಕನಾಗುತ್ತಾನೆ ಎನ್ನುವ ಪ್ರಶ್ನೆ ಎತ್ತುತ್ತಾರೆ. ರಾಮನನ್ನು ಚಿತ್ರಿಸಲು ವಾಲ್ಮೀಕಿ ರಾಮಾಯಣ ಮತ್ತು ಬೌದ್ಧರಾಮಾಯಣವನ್ನು ಆಕರವನ್ನಾಗಿ ಬಳಸಿದರೆ, ಕೃಷ್ಣನನ್ನು ಚಿತ್ರಿಸಲು ಬಹು ಆಕರಗಳನ್ನು ಬಳಸಿದ್ದಾರೆ. ವ್ಯಾಸನ ಮಹಾಭಾರತವನ್ನೂ ಒಳಗೊಂಡಂತೆ ವಿಷ್ಣು ಪುರಾಣ, ಭಾಗವತ, ಹರಿವಂಶದ ಪುರಾಣ, ಬ್ರಹುವೈವರ್ತ ಪುರಾಣಗಳನ್ನು ತೌಲನಿಕವಾಗಿ ನೋಡಿದ್ದಾರೆ. ಹೀಗೆ ಬಹುಪಠ್ಯಗಳನ್ನು ಆಧರಿಸಿ ಕೃಷ್ಣನ ಸರಣಿ ಕೊಲೆಗಳ ಬಗ್ಗೆ ಪಟ್ಟಿಕೊಡುತ್ತಾರೆ. ನ್ಯಾಯಯುತವಲ್ಲದ ಮೋಸ ವಂಚನೆ ಸ್ತ್ರೀಲೋಲುಪತೆಯನ್ನು ವಿವರವಾಗಿ ಬರೆಯುತ್ತಾರೆ. ಇಲ್ಲಿ ಕೃಷ್ಣನ ಹತ್ತಾರು ಮುಖಗಳನ್ನು ಅನಾವರಣ ಮಾಡುತ್ತಾರೆ. ಈ ಯಾವ ಅಂಶಗಳೂ ಕೃಷ್ಣನೊಬ್ಬ ದೈವ ಎನ್ನುವ ಭಾವನೆಯನ್ನು ಮೂಡಿಸುವುದಿಲ್ಲ.

ಅಂಬೇಡ್ಕರ್ ಕೃಷ್ಣನ ಬಗ್ಗೆ ಬರೆಯುತ್ತಾ, ‘ಕೃಷ್ಣನ ಅಸಭ್ಯತೆಗಳಲ್ಲೆಲ್ಲ ಅತ್ಯಂತ ಕೆಟ್ಟದ್ದು, ರಾಧೆಯೆಂಬ ಗೋಪಿಕೆಯೊಂದಿಗೆ ಆತ ಹೊಂದಿದ್ದ ಅಕ್ರಮ ಸಂಬಂಧ. ರಾಧೆ- ಕೃಷ್ಣರ ಅನೈತಿಕ ಸಂಬಂಧದ ವರ್ಣನೆ ಬ್ರಹುವೈವರ್ತ ಪುರಾಣದಲ್ಲಿ ಬರುತ್ತದೆ. ಕೃಷ್ಣನಿಗೆ ದೊರೆ ರುಕ್ಕಾಂಗದನ ತಂಗಿಯಾದ ರುಕ್ಮಿಣಿಯೊಡನೆ ಮದುವೆಯಾಗಿರುತ್ತದೆ. ರಾಧೆಗೂ ಇನ್ನೊಬ್ಬನೊಂದಿಗೆ ವಿವಾಹವಾಗಿದೆ. ತನ್ನ ಹೆಂಡತಿಯನ್ನೇ ಬಿಟ್ಟು ಬಂದ ಕೃಷ್ಣ, ಇನ್ನಾರದೋ ಹೆಂಡತಿಯಾದ ರಾಧೆಯನ್ನು ಮೋಹಿಸಿ, ಅವಳೊಡನೆ ಪಶ್ಚಾತ್ತಾಪವೇ ಇಲ್ಲದ ಪಾಪ ಸಂಬಂಧದಲ್ಲಿ ಬದುಕುತ್ತಾನೆ. ಕೃಷ್ಣ ಚಿಕ್ಕ ವಯಸ್ಸಿನಲ್ಲೇ ತನ್ನ ಹನ್ನೆರಡರ ಪ್ರಾಯದಲ್ಲೇ ಯೋಧನೂ, ರಾಜಕಾರಣಿಯೂ ಆಗಿದ್ದನೆನ್ನುತ್ತಾರೆ. ಆದರೆ ಯೋಧನಾಗಿ, ರಾಜಕಾರಣಿಯಾಗಿ ಅವನು ಮಾಡಿದ ಪ್ರತಿಯೊಂದು ಕೃತ್ಯವೂ ಅನೈತಿಕವಾದದ್ದು(ಶಂಕರ್ ಎನ್.ಎಸ್ ಅನು: ಪುಟ:32-33). ಹೀಗೆ ಕೃಷ್ಣನ ವಂಚನೆಯ ಜಾಲವನ್ನೆ ಒಂದೊಂದಾಗಿ ವಿವರಿಸುತ್ತಾರೆ. ಬಾಬಾ ಸಾಹೇಬರು ಈ ಇಬ್ಬರ ಪುರಾಣಗಳ ವಿಶ್ಲೇಷಣೆಯ ಮೂಲಕ ಪಿತೃಪ್ರಧಾನ ವ್ಯವಸ್ಥೆಯ ಬೇರುಗಳನ್ನು ಶೋಧಿಸುತ್ತಾರೆ.

ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಉತ್ಪತ್ತಿ, ವಿಕಾಸ ಹೇಗಾಯಿತು?

ಇಂದಿನ ಸ್ತ್ರೀವಾದಿ ಅಧ್ಯಯನಗಳು ಪಿತೃಪ್ರಧಾನ ಪುರುಷಾಧಿಕಾರದ ಬಗ್ಗೆ ಮಾತನಾಡುತ್ತವೆ. ಇಂತಹ ಅಧ್ಯಯನಕಾರರು ಅಂಬೇಡ್ಕರ್ ಅವರು ಬರೆದ ರಾಮ-ಕೃಷ್ಣರ ಕಥೆಗಳಲ್ಲಿ ಅಡಗಿರುವ ಪಿತೃಪ್ರಧಾನತೆಯ ಬೇರುಗಳನ್ನು ಕಾಣಿಸುವ ನೆಲೆಯನ್ನು ಪರಿಶೀಲಿಸಬೇಕು. ಹಾಗೆ ನೋಡಿದರೆ ಇದೊಂದು ಸ್ತ್ರೀವಾದದ ಗಂಡಾಳ್ವಿಕೆ ಶೋಧದ ಪಠ್ಯವೂ ಆಗಿದೆ. ‘ಲೋಕವನ್ನು ಆಳುತ್ತಿರುವುದು ಪಿತೃಪ್ರಧಾನತೆಯ ಗಂಡಾಳ್ವಿಕೆ. ಹಾಗಾಗಿ ಇದು ಸಮಾಜದ ಎಲ್ಲ ವಲಯಗಳಲ್ಲಿ ಆಳದಲ್ಲಿ ಬೇರೂರಿರುವ ಒಂದು ರೋಗ. ಈ ರೋಗವು ಗಂಡು ಹೆಣ್ಣನ್ನು ಕೂಡಿಯೆ ಬಲಿ ಪಡೆಯುತ್ತಿದೆ. ಪಿತೃಪ್ರಧಾನತೆಯು ಬೇಟೆಗಾರನ ಸ್ಥಾನದಲ್ಲಿದ್ದರೆ, ಗಂಡು ಹೆಣ್ಣುಗಳಿಬ್ಬರೂ ಬಲಿಪಶುವಿನ ಸ್ಥಾನದಲ್ಲಿದ್ದಾರೆ. ಆದರೆ ಗಂಡು ತನ್ನನ್ನೂ ಬಲಿ ಪಡೆಯುತ್ತಿರುವ ‘ಪಿತೃಪ್ರಧಾನತೆಯ’ ಒಳಗೇ ಸೇರಿಕೊಂಡು ತನ್ನನ್ನು ಬೇಟೆಗಾರನ ಅಂದರೆ ಆಳುವ ‘ಯಜಮಾನ’ನ ಸ್ಥಾನದಲ್ಲಿಯೂ, ಮಹಿಳೆಯನ್ನು ಬಲಿಪಶುವಿನ ಅಂದರೆ ‘ಗುಲಾಮಳ’ ಸ್ಥಾನದಲ್ಲಿಯೂ ನೋಡುತ್ತಿದ್ದಾನೆ. ಸ್ತ್ರೀವಾದದ ತೊಡಕೆಂದರೆ ಈ ಎದುರಾಳಿತನವನ್ನೆ ತನ್ನ ಅಸ್ತ್ರವನ್ನಾಗಿಸಿಕೊಂಡಿರುವುದು’ ಎಂದು ಆಫ್ರೋ-ಅಮೆರಿಕನ್ ಸ್ತ್ರೀವಾದಿ ಚಿಂತಕಿ ಮತ್ತು ಬರೆಹಗಾರ್ತಿ ‘ಬೆಲ್ ಹುಕ್ಸ್’ ಹೇಳುತ್ತಾಳೆ. ಈ ಆಲೋಚನೆಗಳ ಎಳೆಗಳನ್ನು ಅಂಬೇಡ್ಕರ್ ಬಹಳ ಹಿಂದೆಯೇ ‘ಹಿಂದೂ ಧರ್ಮದ ಒಗಟುಗಳು’ ಸರಣಿ ಬರೆಹದಲ್ಲಿ ಶೋಧಿಸಿದ್ದಾರೆ.

3

ಕಳೆದ ದಶಕದಲ್ಲಿ ಅಂಬೇಡ್ಕರ್ ಕುರಿತಂತೆ ಜಾಗತಿಕ ಗಮನಸೆಳೆಯುವ ಪುಸ್ತಕಗಳನ್ನು ಭಾರತೀಯರು ಮತ್ತು ವಿದೇಶಗಳ ವಿದ್ವಾಂಸರೂ ಬರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕೃತಿಗಳ ಬಗೆಗೆ ಮರು ವಿಮರ್ಶೆ ಮಾಡುವುದು, ಅವರ ಕೃತಿಗಳನ್ನು ಸಮಕಾಲೀನ ವಿದ್ಯಮಾನಗಳ ಜತೆಗಿಟ್ಟು ಮರು ಓದಿಗೆ ಒಳಪಡಿಸುವುದು ಬಹಳ ಮಹತ್ವದ ಕೆಲಸವಾಗಿದೆ. ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ಮೂಲವನ್ನು ಹುಡುಕಲು ಹಿಂದೂ ಧರ್ಮವು ಹುಟ್ಟುಹಾಕಿದ ಕಥನಗಳನ್ನು ಶೋಧಿಸತೊಡಗಿದರು. ಇದರ ಫಲವೇ ‘ಹಿಂದೂ ಧರ್ಮದ ಒಗಟುಗಳು’ ಕುರಿತ ಬರೆಹಗಳ ಸರಣಿಯಾಗಿದೆ.

arun jolada kudligi
ಅರುಣ್‌ ಜೋಳದ ಕೂಡ್ಲಿಗಿ
+ posts

ಲೇಖಕ, ಜಾನಪದ ಸಂಶೋಧಕರು

ಪೋಸ್ಟ್ ಹಂಚಿಕೊಳ್ಳಿ:

ಅರುಣ್‌ ಜೋಳದ ಕೂಡ್ಲಿಗಿ
ಅರುಣ್‌ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...

‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

ಕೃತಿ: Annihilation of Caste (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...