‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

Date:


ಕೃತಿ: Annihilation of Caste (ಜಾತಿ ನಿರ್ಮೂಲನೆ)
ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ್ದ ಕೃತಿ)
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1979
ಇಂಗ್ಲಿಷ್ ಸಂಪುಟ- 1
ಕನ್ನಡ ಸಂಪುಟ- 1
Navayana Edition (‘ದಿ ಡಾಕ್ಟರ್ ಅಂಡ್ ದಿ ಸೇಂಟ್’ ಎಂಬ ದೀರ್ಘ ಮುನ್ನುಡಿಯೊಂದಿಗೆ ಪ್ರಕಟ)- 2014


‘ಜಾತ್ ಪಾತ್ ತೋಡಕ್ ಮಂಡಲ್’ ಎಂಬ ಸುಧಾರಣಾವಾದಿ ಹಿಂದೂ ಸಂಘಟನೆ ವಾರ್ಷಿಕವಾಗಿ ನಡೆಸುತ್ತಿದ್ದ ಸಮ್ಮೇಳನಕ್ಕೆ 1936ರಲ್ಲಿ ಡಾ.ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಹ್ವಾನಿಸಲಾಗುತ್ತದೆ. ಈಗಾಗಲೇ ಹಿಂದೂ ಧರ್ಮ ತೊರೆಯುವುದಾಗಿ ಹೇಳಿದ್ದ ಬಾಬಾಸಾಹೇಬರು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡು ಸಿದ್ಧಪಡಿಸಿದ್ದ ಭಾಷಣವು ಚರ್ಚೆಯನ್ನು ಹುಟ್ಟುಹಾಕುತ್ತದೆ. ಅದರಲ್ಲಿನ ಕ್ರಾಂತಿಕಾರಕ ಸಂಗತಿಗಳು ಸುಧಾರಣಾವಾದಿಗಳಿಗೆ ಆತಂಕ ಹುಟ್ಟಿಸುತ್ತವೆ. ಭಾಷಣದಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕೆಂದು ಬಯಸಿದ ಮಂಡಲ್‌ನ ನಿಲುವನ್ನು ಬಲವಾಗಿ ವಿರೋಧಿಸಿದ ಬಾಬಾಸಾಹೇಬರು ತಮ್ಮ ಭಾಷಣವನ್ನು ಯಥಾವತ್ತು ತಾವಾಗಿಯೇ ಪ್ರಕಟಿಸುತ್ತಾರೆ. ಅದುವೇ ಈಗ ‘ಅನಾಇಲೇಷನ್ ಆಫ್ ಕ್ಯಾಸ್ಟ್’ ಕೃತಿಯಾಗಿ ನಮ್ಮ ಮುಂದಿದೆ. ಜಾತಿ ನಿರ್ಮೂಲನೆಗೆ ಆಗಬೇಕಾದ ನಿಜದ ಬದಲಾವಣೆಗಳನ್ನು ಈ ಕೃತಿ ಸೂಚಿಸಿದೆ. ತಮ್ಮ ಟಿಪ್ಪಣಿಯನ್ನು ಅನೇಕ ಉಪವಿಭಾಗಗಳಲ್ಲಿ ವಿಂಗಡಿಸಿ ವಿಚಾರ ಮಂಡಿಸುವ ಅಂಬೇಡ್ಕರರು, ಒಂದು ಸಂಶೋಧನಾ ಶಿಸ್ತನ್ನು ಇಡೀ ಈ ಅಧ್ಯಯನದುದ್ದಕ್ಕೂ ಪಾಲಿಸುತ್ತಾರೆ. ಜಾತಿಯ ಮೂಲ ಮತ್ತದರ ನಿರ್ಮೂಲನೆಗೆ ಬಳಸುವ ಆಕಾರಗಳು, ವೈಜ್ಞಾನಿಕ ಸಂಶೋಧನೆಗೆ ಪಾಲಿಸಬೇಕಾದ ಹಂತಗಳು ಮತ್ತು ಪ್ರಪಂಚದ ನಾನಾ ಕಡೆ ನಡೆದ ಜನಾಂಗೀಯ ತಿಕ್ಕಾಟಗಳ ಹಿಂದಣ ಇರುವ ‘ಜಾತಿ’ ತರಹದ್ದೇ ಆದ ಕಾರಣಗಳು ಮತ್ತು ಭಾರತದಲ್ಲಿಯ ಜಾತಿ ಹುಟ್ಟಿಗೆ, ಆಚರಣೆಗೆ ಬಳಸುವ ಕುತಂತ್ರಗಳು ಏನೆಲ್ಲ ಸಾಮಾಜಿಕ ಒಕಡಕನ್ನು ಮೂಡಿಸಿವೆ ಎಂಬುದನ್ನು ವಿಶ್ಲೇಷಿಸುವ ಕಾರಣಕ್ಕೆ ಈ ಕೃತಿ ಮಹತ್ವದ್ದಾಗಿ ನಮ್ಮ ಮುಂದಿದೆ.

- Advertisement -

1936ರಲ್ಲಿ ಡಾ. ಅಂಬೇಡ್ಕರರು ಲಾಹೋರ್‌ನ ‘ಜಾತ್ ಪಾತ್ ತೋಡಕ್ ಮಂಡಲ’ದ ಆಹ್ವಾನದ ಮೇರೆಗೆ ಮಾಡಬೇಕಿದ್ದ ಭಾಷಣದ ಕರಡು ‘ಅನಾಇಲೇಷನ್ ಆಫ್ ಕ್ಯಾಸ್ಟ್- ಸ್ಪೀಚ್ ಪ್ರೀಪೇರ್ಡ್ ಬಟ್ ನಾಟ್ ಡೆಲಿವರ್ಡ್’ (ಜಾತಿ ನಿರ್ಮೂಲನೆ) ಮಹತ್ವದ ಕೃತಿಯಾಗಿ ಹೊರಹೊಮ್ಮಿತು. ಅಂದಿನಿಂದ ಇಂದಿನವರೆಗೂ ಅಂಬೇಡ್ಕರ್ ಅವರ ಈ ಕೃತಿ ಮತ್ತೆಮತ್ತೆ ಚರ್ಚೆಗೆ ಬರುತ್ತಲೇ ಇದೆ. ಖ್ಯಾತ ಬರಹಗಾರ್ತಿ ಅರುಂಧತಿ ರಾಯ್ ಅವರ ‘ದಿ ಡಾಕ್ಟರ್ ಅಂಡ್ ದಿ ಸೇಂಟ್’ ದೀರ್ಘ ಟಿಪ್ಪಣಿಯೊಂದಿಗೆ ನವಯಾನ ಪ್ರಕಾಶನದಿಂದ ಮರುಮುದ್ರಣಗೊಂಡ ಆವೃತ್ತಿಗೆ ಮೆಚ್ಚುಗೆಗಳಷ್ಟೇ ಟೀಕೆಗಳೂ ಬಂದವು. ಏಕೆಂದರೆ ರಾಯ್ ಅವರು, ಅಂಬೇಡ್ಕರ್‌ರ ವಿಚಾರಗಳ ಬಗ್ಗೆ ಮಾತನಾಡುತ್ತ ಗಾಂಧಿಯನ್ನು ಕಡೆಗಣಿಸುವುದು ಅಂಬೇಡ್ಕರರಿಗೆ ಬಗೆವ ಅಪಚಾರ ಎಂಬರ್ಥದಲ್ಲಿ ನುಡಿದರು. ಇದಕ್ಕೆ ಅನೇಕ ಅಂಬೇಡ್ಕರ್‌ವಾದಿಗಳು ತಕರಾರು ವ್ಯಕ್ತಪಡಿಸಿದರು. ಆದರೆ ರಾಯ್ ಅವರ ಟಿಪ್ಪಣಿಯೊಂದಿಗೆ ಮರುಮುದ್ರಣವಾದ ಕಾರಣ ಈ ಪುಸ್ತಕ ಮರುಚರ್ಚೆಗೆ ಒಳಪಟ್ಟಿತು. ಪ್ರಖರ ಅಂಬೇಡ್ಕರ್‌ವಾದಿ ಮತ್ತು ಮಾರ್ಕ್ಸ್‌ವಾದಿ ಚಿಂತಕ ಆನಂದ್ ತೇಲ್ತುಂಬ್ಡೆ, ‘ಬಂಡವಾಳಶಾಹಿ ಜಗತ್ತಿಗೆ ಹೇಗೆ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ ಒಂದು ಟೀಕಾ ಬರಹವೋ ಹಾಗೆಯೇ ಭಾರತದ ಜಾತಿ ಪದ್ಧತಿಗೆ ಅನ್ಹಿಲೇಷನ್ ಆಫ್ ಕಾಸ್ಟ್ (ಜಾತಿ ವಿನಾಶ)’ ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಜಾತಿ ಎಂಬುದು ಮನುಷ್ಯರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಯಂತ್ರಿಸುವ ಸಾಧನ. ಭಾರತದಂತಹ ಅಸಮಾನತೆಯ ನೆಲದಲ್ಲಿ ಮನುಷ್ಯರನ್ನು ಹುಟ್ಟಿನ ಆಧಾರದ ಮೇಲೆ ಹಲವು ಗುಂಪುಗಳಾಗಿ ವಿಂಗಡಿಸಿ, ಸಹಜ ಸಂವಹನಕ್ಕೂ ಅಡ್ಡಿಪಡಿಸುತ್ತದೆ. ವೇದ, ಶಾಸ್ತ್ರಗಳನ್ನು ಆಧರಿಸಿ ಸೃಷ್ಟಿಸಿರುವ ಈ ತರತಮ ಭಾವವನ್ನು ವ್ಯಕ್ತಿಯ ಹುಟ್ಟಿನಿಂದಲೇ ಆಚರಣೆಗೆ ತಂದು, ಮನುಷ್ಯರ ನಡುವೆ ಭೌತಿಕ ಮತ್ತು ಮಾನಸಿಕ ಗೋಡೆಗಳನ್ನು ಕಟ್ಟಲಾಗುತ್ತದೆ. ಅದಕ್ಕೆ ಅಂಬೇಡ್ಕರರು ಚಾತುರ್ವರ್ಣದ ಈ ನಿರ್ಮಿತಿಯನ್ನು ಮೆಟ್ಟಿಲುಗಳೇ ಇಲ್ಲದ ನಾಲ್ಕು ಮಹಡಿಯ ಕಟ್ಟಡಕ್ಕೆ ಹೋಲಿಸಿದ್ದರು. ಮತ್ತದಕ್ಕೆ ಮೇಲಿಂದ ಕೆಳಕ್ಕೆ ಇಳಿಯುವ ಅಥವಾ ಕೆಳಗಿನಿಂದ ಮೇಲಕ್ಕೆ ಹತ್ತುವ ವ್ಯವಸ್ಥೆಯೇ ಇಲ್ಲವಾದುದರ ಬಗ್ಗೆ, ಶ್ರೇಣಿಕೃತ ವ್ಯವಸ್ಥೆಯ ಕುರಿತು ವಿವರಿಸುತ್ತಾರೆ. ಇದರ ಪರಿಣಾಮವಾಗಿ ಅಸ್ಪೃಶ್ಯತೆಯ ಆಚರಣೆ ಹೇಗೆ ದೇಶದ ಅಭಿವೃದ್ಧಿಗೂ ಮಾರಕವಾಗಿದೆ ಎಂಬುದನ್ನು ಉದಾಹರಣೆ ಸಮೇತ ವಿಶ್ಲೇಷಿಸುತ್ತಾರೆ.

Jat pak todak Mandal
ಜಾತ್-ಪಾತ್ ತೋಡಕ್ ಮಂಡಲದ ಸ್ಥಾಪಕ ಸದಸ್ಯರ ಛಾಯಾಚಿತ್ರ.

ಅಂಬೇಡ್ಕರ್‌ರ ಅನೇಕ ಬರಹ ಮತ್ತು ಭಾಷಣಗಳಲ್ಲಿ ಜಾತಿ ಪದ್ಧತಿ ಆಚರಣೆಯ ವಿವಿಧ ಸ್ವರೂಪಗಳನ್ನು, ಅದರ ಮಾರಕ ಪರಿಣಾಮಗಳನ್ನು ಮತ್ತು ಒಂದು ಪ್ರಜ್ಞಾವಂತ, ಆರೋಗ್ಯಕರ ಸಮಾಜ ರೂಪಿಸುವಲ್ಲಿ ಜಾತಿ ಹೇಗೆಲ್ಲ ಅಡೆತಡೆ ಒಡ್ಡಬಲ್ಲದು ಎಂಬುದು ಕಾಣುತ್ತೇವೆ. ಹಿಂದೂ ಸಮಾಜ ನಿರ್ಮಾಣದ ಕನಸು ಕಾಣಬಯಸುವವರು ಹೇಗೆಲ್ಲ ಜಾತಿಯನ್ನು ಬಳಸಿಕೊಂಡು ಸಮುದಾಯ ಮತ್ತು ವ್ಯಕ್ತಿ ಚೈತನ್ಯವನ್ನು ತುಳಿಯುತ್ತಾರೆ ಎಂಬುದರ ವಿವರವನ್ನೂ ನೀಡುತ್ತಾರೆ. ಜಾತಿ ಎಂಬ ರೋಗಕ್ಕೆ ಗಿಡಮೂಲಿಕೆ ಹುಡುಕುವ, ಇಲ್ಲವೇ ಈ ಸಮಾಜದ ದೇಹಕ್ಕೆ ಅಂಟಿಕೊಂಡಿರುವ ಆ ಕೊಳೆತ ಗಡ್ಡೆಯನ್ನು ಕತ್ತರಿಸಿ ಶಸ್ತ್ರಚಿಕಿತ್ಸೆ ಮಾಡುವ ಅನೇಕ ಪ್ರಯತ್ನಗಳನ್ನು ಸಹ ನಾವು ಈ ನೆಲದಲ್ಲಿ ಕಾಣುತ್ತೇವೆ. ಅವತಾರ ಪುರುಷರು, ಮಹಾತ್ಮರು, ಪಂಡಿತರು ಮತ್ತು ಪವಾಡ ಪುರುಷರು ನೀಡದ ‘ಪ್ರಜೆ’ತನವನ್ನು ಸಂವಿಧಾನದ ಮೂಲಕ ಬಾಬಾಸಾಹೇಬರು ಎಲ್ಲ ಜನಸಮುದಾಯಗಳಿಗೆ ನೀಡಿದ್ದು ಭಾರತದ ಮಟ್ಟಿಗೆ ಕ್ರಾಂತಿಕಾರಕವೇ ಸರಿ. ಆದರೆ ಜಾತಿ ನಿರ್ಮೂಲನೆ ಬಗ್ಗೆ ತುಂಬಾ ಖಚಿತವಾಗಿ, ತಾರ್ಕಿಕವಾಗಿ ಮತ್ತು ಅನುಭವದಿಂದ ಮಾತನಾಡುವ ಅಂಬೇಡ್ಕರ್‌ರ ವಾದದ ಸರಣಿಯನ್ನು ಟೀಕಿಸುವ ಬರಹಗಳನ್ನು ಗಾಂಧೀ ತಮ್ಮ ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಿಸಿದರೂ ಅವುಗಳಲ್ಲಿಯ ಅತಾರ್ಕಿಕ ಮತ್ತು ಢೋಂಗಿತನವನ್ನು ಅಂಬೇಡ್ಕರರು ದಿಟ್ಟವಾಗಿ ಬಯಲಿಗೆಳೆದಿದ್ದಾರೆ. ‘ಲಿಬರ್ಟಿ ಆಫ್ ಸ್ಪೀಚ್ ಅಂಡ್ ಥಾಟ್’ ಆಲೋಚಿಸುವ ಮತ್ತು ಮಾತಾನಾಡುವ ಸ್ವಾತಂತ್ರ‍್ಯವನ್ನು ಬಳಸಿಕೊಳ್ಳುವಲ್ಲಿ ಅಂಬೇಡ್ಕರರು ಎಂದೂ ಹಿಂಜರಿದವರಲ್ಲ. ಅದಕ್ಕೆ ಅವರ ಬರಹಗಳೇ ಸಾಕ್ಷಿ. ಅಂತಹ ಒಂದು ಉದಾಹರಣೆ ‘ಅನಾಇಲೇಷನ್ ಆಫ್ ಕಾಸ್ಟ್’ ಕಿರು ಹೊತ್ತಿಗೆ. ಇದಕ್ಕೆ ‘ಸ್ಪೀಚ್ ಪ್ರಿಪೇರ್ಡ್ ಬಟ್ ನಾಟ್ ಡೆಲಿವರ್ಡ್’ ಎಂದು ನೀಡಲಾಗಿರುವ ಉಪನಾಮೆಯೇ ಈ ಹೊತ್ತಿಗೆಯನ್ನು ಓದಲು ಪ್ರೇರೇಪಿಸುತ್ತದೆ. ಇಲ್ಲಿ ಮತ್ತೆ ಮತ್ತೆ ನಮ್ಮನ್ನು ಸೆಳೆದ ಪರಿಕಲ್ಪನೆಗಳೆಂದರೆ ‘ಪಬ್ಲಿಕ್’ ಮತ್ತು ‘ರಿಪಬ್ಲಿಕ್’. ಬಾಬಾ ಸಾಹೇಬರು ಈ ಎರಡು ವಿಷಯಗಳ ಮೇಲೆ ಹೆಚ್ಚು ಒತ್ತು ಕೊಟ್ಟು ಮಾತನಾಡುತ್ತಾರೆ. ‘ಮಾತಾಡಬಾರದು’, ‘ಪ್ರಕಟಿಸಕೂಡದು’ ಎಂಬ ಹೊತ್ತಲ್ಲಿ ಹಾಗೆ ಮಾತಾನಾಡಿದ್ದು, ಆಲೋಚಿಸಿದ್ದರ ಹಿನ್ನೆಲೆಯಲ್ಲಿ ‘ಅನ್ಹಿಲೇಷನ್ ಆಫ್ ಕಾಸ್ಟ್’ ಮಹತ್ವದ ಕೃತಿ.

ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಇನ್ನು ಈ ಪುಸ್ತಕದ ವಿಷಯಕ್ಕೆ ಬಂದರೆ, ಇದು ಕೆಲ ಭಾಗಗಳಲ್ಲಿದೆ. ಮೊದಲ ಭಾಗದಲ್ಲಿ ಇರುವ ವಿಚಾರ: ‘ಜಾತ್ ಪಾತ್ ತೋಡಕ್ ಮಂಡಲ್’ ಅಂಬೇಡ್ಕರ್ ಅವರನ್ನು ತನ್ನ ವಾರ್ಷಿಕ ಸಮಾವೇಶಕ್ಕೆ ಅಧ್ಯಕ್ಷರನ್ನಾಗಿ ಬರಮಾಡಿಕೊಂಡು, ಆ ನಂತರ ಪತ್ರ ವ್ಯವಹಾರದಲ್ಲಿ ಕೆಲ ಭಿನ್ನಮತ ವ್ಯಕ್ತಪಡಿಸಿ, ಮಂಡಲದ ಕೆಲ ಸದಸ್ಯರ ಅಸಮಾಧಾನದ ನೆಪ ಹೇಳುತ್ತದೆ. ಮೊದಲೇ ಒಲ್ಲದ ಮನಸ್ಸಿಂದ ಒಪ್ಪಿದ್ದ ಅಂಬೇಡ್ಕರರು ಭಾಷಣ ಸಿದ್ಧಪಡಿಸಿ ಮಂಡಲದ ಸದಸ್ಯರಿಗೆ ಕಳಿಸಿರುತ್ತಾರೆ. ಅದರ ಸಾರಾಂಶ ಪತ್ರಿಕೆಗಳಲ್ಲಿ ವರದಿಯಾಗಿ ಆ ಕಿರುಹೊತ್ತಿಗೆಯಲ್ಲಿ ವ್ಯಕ್ತವಾದ ಕ್ರಾಂತಿಕಾರಕ ವಿಚಾರಗಳ ಕಾರಣ ಅದು ಟೀಕೆಗೆ ಗುರಿಯಾಗುತ್ತದೆ. ಪ್ರವೇಶಿಕೆಯಲ್ಲಿ ಮಂಡಲದ ಕಾರ್ಯದರ್ಶಿ ಸಂತರಾಮ್‌ರೊಂದಿಗೆ ನಡೆದ ಸುದೀರ್ಘ ಪತ್ರ ಸಂವಾದದ ಬಗ್ಗೆ ಇದೆ. ಇದಕ್ಕೆಲ್ಲ ಸಣ್ಣ ಕಾರಣ ಅಂಬೇಡ್ಕರರ ಭಾಷಣ ಎಲ್ಲಿ ಛಾಪಿಸಬೇಕು ಎಂಬುದು ಮತ್ತು ಎಷ್ಟು ಬೆಲೆ ನಿಗದಿ ಮಾಡಬೇಕು ಅನ್ನುವುದರ ಕುರಿತು ಚರ್ಚೆ ಇದೆ. ಭಾಷಣ ರದ್ದಾದ ಬಳಿಕ ಈ ಕಿರುಪುಸ್ತಕಕ್ಕೆ ಬಹುಬೇಡಿಕೆ ಬಂದು ಎರಡೇ ತಿಂಗಳಲ್ಲಿ 1500 ಪ್ರತಿ ಮಾರಾಟವಾಗುತ್ತವೆ. ಅಲ್ಲದೆ ಗುಜರಾತಿ, ತಮಿಳು, ಮರಾಠಿ, ಹಿಂದಿ, ಪಂಜಾಬಿ ಮತ್ತು ಮಲಯಾಳಂ ಭಾಷೆಗೆ ಅನುವಾದಿಸಲ್ಪಡುತ್ತದೆ. ಆದರೆ ಈ ಕಾರಣಕ್ಕೆ ಈ ಕಿರು ಹೊತ್ತಿಗೆ ಮುಖ್ಯವಾಗದೆ, ಅಂಬೇಡ್ಕರರು ತಮ್ಮೆಲ್ಲ ಸಂಶೋಧನಾ ಸಾರವನ್ನು ಬಸಿದು, ಜಗತ್ತಿನ ನಾನಾ ನಾಗರಿಕತೆಗಳ ಮೂಲ ತೆಗೆದು, ಭಾರತದ ಸಂದರ್ಭಕ್ಕೆ ಅವುಗಳನ್ನು ಹೋಲಿಸಿ ಜಾತಿಯ ಹುಟ್ಟಿನ ಲೆಕ್ಕಾಚಾರವನ್ನು ವಿಶ್ಲೇಷಿಸುವ ಮಾದರಿ ತುಂಬಾ ತಾರ್ಕಿಕವಾಗಿದೆ.

ಹಿಂದೂ ಸುಧಾರಣಾವಾದಿಗಳ ಗುಂಪು ಜಾತಿ ನಿರ್ಮೂಲನೆ ಮಾಡಿ ಹಿಂದೂ ಧರ್ಮವನ್ನು ಸುಧಾರಿಸುವ ಮಾರ್ಗದಲ್ಲಿನ ಸಮಸ್ಯೆಗಳ ಕುರಿತು ಅಂಬೇಡ್ಕರರು ತಮ್ಮ ಪ್ರಖರ ಭಿನ್ನಾಭಿಪ್ರಾಯ ಹೊಂದಿದ್ದರು. ಸುಧಾರಣಾವಾದಗಳಲ್ಲಿ ಎರಡು ಪಂಗಡಗಳನ್ನು ಗುರುತಿಸುತ್ತಾರೆ ಅಂಬೇಡ್ಕರರು. ಒಂದು ಸಾಮಾಜಿಕ ಸುಧಾರಣಾವಾದ ಮತ್ತೊಂದು ರಾಜಕೀಯ ಸುಧಾರಣಾವಾದ. ಅಂದಿನ ಕಾಂಗ್ರೆಸ್‌ನ ಬೊನರ್ಜಿಯಂಥವರ ವಾದದಲ್ಲಿ ಸಾಮಾಜಿಕ ಸುಧಾರಣೆ ಎಂದಾದರೂ ರಾಜಕೀಯ ಸುಧಾರಣೆ ತರಬಲ್ಲುದೇ? ಹೀಗೆ ಇತಿಹಾಸದ ಪುಟಗಳಿಂದ ಹೆಕ್ಕಿ ತೋರಲು ಅಂಬೇಡ್ಕರರು ಆಯ್ಕೆ ಮಾಡಿಕೊಳ್ಳುವ ಉದಾಹರಣೆಗಳಿಂದಲೇ ಇದು ಸ್ಪಷ್ಟವಾಗುತ್ತದೆ. ಪೇಶ್ವೆಗಳ ಆಡಳಿತದಲ್ಲಿ ಅಸ್ಪೃಶ್ಯರು ರಸ್ತೆಯಲ್ಲಿ ನಡೆದು ಹೋಗಲು ಯೋಗ್ಯರಾಗಿದ್ದಿಲ್ಲ. ಅವರು ನಡದರೆ ದಾರಿ ಕೊಳಕಾಗಿ, ಅದೇ ದಾರಿಯಲ್ಲಿ ನಡೆದು ಬರುವ ಹಿಂದೂಗಳಿಗೆ ದ್ರೋಹವಾಗುತ್ತದೆ ಎಂಬ ಆಚರಣೆ ಇತ್ತು. ಇಂದೋರ್‌ನ ಕನಾರಿಯಾ ಹಳ್ಳಿಯಲ್ಲಿ ಕಲೋಟ, ಬಿಚೋಲಿ ಹಫೀಸ್, ಬಿಚೋಲಿ-ಮರ್ದಾನ ಮತ್ತು ಪಟೇಲ್-ಪಟ್ವಾರಿಯಾ ಹೇಗೆ ಬದುಕಬೇಕು ಎಂಬುದನ್ನು ಅವರವರ ಜಾತಿ ಆಧರಿಸಿ ಹೇಳಲಾಗುತ್ತಿತ್ತಂತೆ. ಗುಜಾರಾತ್‌ನ ಝಾನು ಹಳ್ಳಿಯಲ್ಲಿ ಸ್ಥಿತಿವಂತ ಅಸ್ಪೃಶ್ಯ ಹೆಣ್ಣುಮಗಳು ಲೋಹದ ಬಿಂದಿಗೆಯಲ್ಲಿ ಬಾವಿಯಿಂದ ನೀರು ತರುವುದಕ್ಕೆ ತಕರಾರು, ಸಾರ್ವಜನಿಕ ಶಾಲೆಗೆ ಮಕ್ಕಳನ್ನು ಕಳಿಸುವುದಕ್ಕೆ ಅಡ್ಡಿ- ಹೀಗೆ ದಾಖಲಿಸುತ್ತಾರೆ. ಜೈಪೂರ್‌ನ ಚಾಕ್ವಾರದಲ್ಲಿ ಪುಣ್ಯಕ್ಷೇತ್ರಕ್ಕೆ ಹೋಗಿ ಬಂದ ಅಸ್ಪೃಶ್ಯನೊಬ್ಬ ತಮ್ಮ ಕೇರಿ ಜನರಿಗೆ ಊಟದಲ್ಲಿ ತುಪ್ಪ ಬಡಿಸಿದ್ದಕ್ಕೆ ಆ ಊರಿನ ಮೇಲ್ಜಾತಿಗಳು ದೊಣ್ಣೆ ಹಿಡಿದು ಬಂದು, ಅಡುಗೆ ಚೆಲ್ಲಿ, ಬೆತ್ತದಿಂದ ಅಲ್ಲಿ ಊಟಕ್ಕೆ ಕುಳಿತವರನ್ನು ಬಡಿದು ಓಡಿಸಿದ್ದು 1935ರ ಇಸವಿಯ ಅಂದಿನ ಪತ್ರಿಕೆಗಳಲ್ಲಿ ವರದಿ ಆಗಿರುವುದನ್ನು ನೆನೆಯುತ್ತಾರೆ. ಯಾಕೆಂದರೆ ‘ತುಪ್ಪ’ ತಿನ್ನುವುದು ಒಂದು ಸಾಮಾಜಿಕ ಪ್ರತಿಷ್ಠೆಯಾಗಿತ್ತು. ಬಯಸಿದ ಊಟ, ಬಟ್ಟೆ, ಒಡವೆ ತೊಡಲು ಮತ್ತು ಶಿಕ್ಷಣ ಪಡೆಯಲು ಬಿಡದೆ ನೀವು ರಾಜಕೀಯ ಸುಧಾರಣೆಗೆ ಹೊರಟಿರುವುದು ಸರಿಯೇ ಎಂದು ಸಾಮಾಜಿಕ ಸುಧಾರಣಾವಾದಿಗಳನ್ನು ಕೇಳಲು ಅವರ ಹತ್ತಿರ ಉತ್ತರವಿದ್ದಿಲ್ಲ. ಯಾಕೆ ಈ ನೆಲದಲ್ಲಿ ‘ಮಹಾತ್ಮ’ರು ಸುಧಾರಕರು ಕೇವಲ ತಮ್ಮ ಜಾತಿಯ ಹೆಣ್ಣುಮಕ್ಕಳ ವಿಧವಾ ಪುನರ್ ವಿವಾಹ, ಬಾಲ್ಯ ವಿವಾಹ ತಡೆಗಷ್ಟೇ ಮೀಸಲಾದರು? ಇದು ಸೀಮಿತವಾದ ಅಲ್ಲವೇ?- ಹೀಗೆ ಪ್ರಶ್ನಿಸುತ್ತಾರೆ. ಕಾರ್ಲ್ ಮಾರ್ಕ್ಸ್‌ನ ಸ್ನೇಹಿತ ಫರ್ಡಿನೆಂಡ್ ಲಸ್ಸಲ್‌ನನ್ನು ಉದಾಹರಿಸುತ್ತ, “ರಾಜಕೀಯ ಸಂವಿಧಾನ ರೂಪಿಸುವವರು ಸಾಮಾಜಿಕ ಬಲಗಳನ್ನು ಪರಿಗಣಿಸಬೇಕಾಗುತ್ತದೆ”‘ ಎಂಬುದನ್ನು ನೆನೆಯುತ್ತಾರೆ. ಇಲ್ಲಿ ಸಮುದಾಯಕ್ಕೆ ತಕ್ಕಂತೆ ಅಧಿಕಾರ ವಿಂಗಡನೆ ಆಗಬೇಕು. ರಾಜಕೀಯ ಸಂವಿಧಾನ ಸಾಮಾಜಿಕ ಸಂಘಟನೆಯನ್ನು ಗಮನಿಸಬೇಕು. ಇದು ಐರೋಪ್ಯ ದೇಶಗಳಲ್ಲಿ ಸಾಧ್ಯವಾಗಿದೆ ಎಂಬುದನ್ನು ಐರ್ಲ್ಯಾಂಡ್‌ನ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ನಡುವಿನ ತಿಕ್ಕಾಟದಲ್ಲಿ ಐರೀಶ್ ಹೋಮ್ ರೂಲ್‌ನ ಹೆಸರಲ್ಲಿ ಕ್ಯಾಥೊಲಿಕ್ ಹಾಗೂ ಪ್ರೊಟೆಸ್ಟಂಟ್‌ರ ಜಗಳದಲ್ಲಿ ‘ಜಾತಿ’ ಕೋನ ಇರುವಿಕೆ ಗುರುತಿಸುತ್ತಾರೆ. ರೋಮ್‌ನಲ್ಲಿ ‘ರಿಪಬ್ಲಿಕ್ ಕಾನ್ಸ್ಟಿಟ್ಯೂಷನ್ ಆಫ್ ರೋಮ್’ ರಾಜಾಧಿಕಾರ ಕೊನೆಯಾದಾಗ ಕನ್ಸುಲ್ಸ್ ಮತ್ತು ಡೊಂಟಿಫೆಕ್ಸ್ ಮ್ಯಾಕ್ಸಿಮಸ್‌ರ ನಡುವಿನ ಬಲಾಬಲದ ನಡುವಿನ ಸಂಘರ್ಷವೂ ಒಂದರ್ಥದಲ್ಲಿ ಜಾತಿ ಆಧಾರಿತವಾಗಿದೆ ಅನ್ನುತ್ತಾರೆ. ಯಾಕೆಂದರೆ ಸಾಮಾಜಿಕ ಶ್ರೇಣಿಯಲ್ಲಿ ತಾ ಮೇಲೆ ನೀ ಕೆಳಗೆ ಎಂಬ ಶ್ರೇಷ್ಠತೆಗೆ ಹಂಬಲಿಸುವಿಕೆ ಇತ್ತು ಅವರಲ್ಲಿ. ಮತ್ತು ಇದೆಲ್ಲವೂ ‘ಕಟ್ಟರ್ ಸಂಪ್ರದಾಯವಾದಿ’ ಚರ್ಚಿನ ಆಚರಣೆಯ ರಾಜಕೀಯ ಸಂವಿಧಾನವನ್ನು ಆಧರಿಸಿದೆ. ಮುಖ್ಯವಾಗಿ ಧಾರ್ಮಿಕ ಚಳವಳಿಯಂತೆ ರೂಪಗೊಂಡಿತ್ತು. ಹಾಗೆಯೇ, ಅರಬ್‌ರು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಹೊಮ್ಮುವ ಮೊದಲು, ಅಲ್ಲಿ ಕ್ರಾಂತಿಕಾರಕ ಧಾರ್ಮಿಕ ಬದಲಾವಣೆಗೆ ಒಳಗಾಗಿದ್ದರು.

roy 2
ಅರುಂಧತಿ ರಾಯ್ ಅವರ ‘ದಿ ಡಾಕ್ಟರ್ ಅಂಡ್ ದಿ ಸೇಂಟ್’ ಎಂಬ ದೀರ್ಘ ಮುನ್ನುಡಿಯೊಂದಿಗೆ ಪ್ರಕಟವಾದ ‘ಅನಾಇಲೇಷನ್ ಆಫ್ ಕಾಸ್ಟ್’ ಕೃತಿ (ನವಯಾನ ಪ್ರಕಟಣೆ)

ತಮ್ಮ ಟಿಪ್ಪಣಿಯನ್ನು ಅನೇಕ ಉಪವಿಭಾಗಗಳಲ್ಲಿ ವಿಂಗಡಿಸಿ ವಿಚಾರ ಮಂಡಿಸುವ ಅಂಬೇಡ್ಕರರು, ಒಂದು ಸಂಶೋಧನಾ ಶಿಸ್ತನ್ನು ಇಡೀ ಈ ಅಧ್ಯಯನದುದ್ದಕ್ಕೂ ಪಾಲಿಸುತ್ತಾರೆ. ತೆಗೆದುಕೊಳ್ಳುವ ‘ಎಂಪಿರಿಕಲ್ ಡೇಟಾ’, ವಿಶ್ಲೇಷಣೆಯ ಮಾದರಿ, ಎಲ್ಲವೂ ವೈಜ್ಞಾನಿಕ ಪದ್ಧತಿಯಿಂದ ನೋಡುತ್ತಾರೆ. ಭಾರತದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದ ರಾಜಕೀಯ ಬದಲಾವಣೆ ಹಿಂದೆ ಬುದ್ಧನ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಯ ಹೆಜ್ಜೆಯ ಜಾಡು ಇದ್ದವು. ಮಹಾರಾಷ್ಟ್ರದಲ್ಲಿ ಶಿವಾಜಿಯ ರಾಜಕೀಯ ಬದಲಾವಣೆಗೆ ಮೊದಲು ಅಲ್ಲಿ ಸಂತರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಯ ಗತವಿತ್ತು ಎಂಬ ಅಂತರ್ ಸಂಬಂಧವನ್ನು ಗುರುತಿಸುತ್ತಾರೆ. ಹಾಗೆಯೇ ಸಿಖ್ಖರ ರಾಜಕೀಯ ಬದಲಾವಣೆಗೆ ಮೊದಲು ಗುರು ನಾನಕ್‌ರ ಸಾಮಾಜಿಕ ಮತ್ತು ಧಾರ್ಮಿಕ ಮಾರ್ಪಿನ ಬೆಳಕಿತ್ತು. ಇದಕ್ಕೆ ಚರಿತ್ರೆಯಲ್ಲಿ ದಾಖಲಾದ ಪ್ರತೀ ರಾಜಕೀಯ ವ್ಯವಸ್ಥೆಯ ಬದಲಾವಣೆಗೂ ಮುಂಚೆ, ಆಯಾ ಕಾಲದ ಆಯಾ ಪ್ರದೇಶದಲ್ಲಿ ಘಟಿಸಿದ ಬಲವಾದ ಸಾಮಾಜಿಕ ಮತ್ತು ಧಾರ್ಮಿಕ ದಂಗೆಯ ಚಹರೆಗಳ ಗುರುತಿಸಲು ಹೇಳುತ್ತಾರೆ. ಇದನ್ನು ಇಂದು ನಮ್ಮ ಕಣ್ಣೆದುರು ನಡೆಯುತ್ತಿರುವ ಬದಲಾವಣೆಗೆ ಹೋಲಿಸಿ ನೋಡಿದರೆ ನಮ್ಮ ಅರಿವಿಗೆ ಬರಬಹುದು.

ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ

ಇನ್ನು ಸೋಷಲಿಸ್ಟರ ಮಾತಿಗೆ ಬಂದರೆ, ಒಂದು ಸಾಮಾಜಿಕ ಶ್ರೇಣಿಯಿಂದ ನಿರ್ಮಾಣವಾದ ಮೇಲು-ಕೀಳಿನ ಸಮಸ್ಯೆಯನ್ನು ನಿರ್ಲಕ್ಷಿಸಿ, ಐರೋಪ್ಯದಿಂದ ನೇರವಾಗಿ ಎರವಲು ತಂದ ಸಿದ್ಧಾಂತಗಳ ಮತ್ತು ವಿಚಾರಗಳ ಚಾಳೀಸಿನಿಂದ ಭಾರತದ ಸಾಮಾಜಿಕ ಸ್ಥಿತಿಯನ್ನು ‘ಆರ್ಥಿಕ ನೆಲೆಗಟ್ಟಿನಿಂದ’ ನೋಡುವಲ್ಲಿ ಸಮಸ್ಯೆ ಇರುವಿಕೆಯನ್ನು ಅಂಬೇಡ್ಕರರು ತೋರುತ್ತಾರೆ. ಭಾರತದ ಮನುಷ್ಯನನ್ನು ಆರ್ಥಿಕ ವ್ಯವಸ್ಥೆಯ ಉತ್ಪನ್ನವಾಗಿ ನೋಡುವುದರಲ್ಲಿಯೇ ತಪ್ಪು ಅಡಗಿದೆ ಅನ್ನುತ್ತಾರೆ. ಸಾಮಾಜಿಕ ಸ್ಥಾನ ಎಂಬುದೇ ವ್ಯಕ್ತಿಯ ‘ಅಧಿಕಾರ’ದ ಸ್ಥಾನಮಾನವನ್ನು ನಿರ್ಣಯಿಸುವ ಕಾರಣ, ‘ಮಹಾತ್ಮ’ ಅನಿಸಿಕೊಳ್ಳುವವನ ಹತ್ತಿರ ಏನೂ ಇಲ್ಲದಿದ್ದರೂ, ಆರ್ಥಿಕವಾಗಿ ಬಲಾಢ್ಯರಾದವರನ್ನು ಸೇರಿ ಸಾಮಾನ್ಯರನ್ನು ನಿಯಂತ್ರಿಸುವ, ಆಳುವ ಅಧಿಕಾರ ಪಡೆಯುತ್ತಾರೆ ಎಂಬಲ್ಲಿ ಸಾಮಾಜಿಕ ಸ್ಥಾನ ರಾಜಕೀಯ ಸ್ಥಾನ ರಾಜಕೀಯ ಶಕ್ತಿಯಾಗಿ ಮಾರ್ಪಡುವ ಚಮತ್ಕಾರ ವಿಶ್ಲೇಷಿಸುತ್ತಾರೆ. ಇದಕ್ಕೆ ಇಂದು ಚುನಾವಣೆ ಸಮಯದಲ್ಲಿ ‘ಸಾಧು’ ‘ಸಂತರು’ ಮತ್ತು ‘ಫಕೀರ’ರು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಅಧಿಕಾರದಿಂದ ತಮ್ಮ ಅನುಯಾಯಿಗಳನ್ನು ಮತದಾರರನ್ನಾಗಿ ಪರಿವರ್ತಿಸುವ ಪ್ರಕ್ರಿಯೆ, ನಿರ್ದಿಷ್ಟ ಪಕ್ಷಕ್ಕೆ, ರಾಜಕೀಯ ನಾಯಕನಿಗೆ ಮತ ಹಾಕಲು ಸೂಚಿಸುವಲ್ಲಿ ಅವರ ಆರ್ಥಿಕ ಸ್ಥಾನ ಮುನ್ನೆಲೆಗೆ ಬಾರದಿರುವಿಕೆಯನ್ನು ಸೋಷಲಿಸ್ಟರ ಆರ್ಥಿಕತೆ ಕೇಂದ್ರಿತ ವಿಶ್ಲೇಷಣೆಯ ದೋಷವನ್ನು ಗುರುತಿಸಲು ಉದಾಹರಿಸುತ್ತಾರೆ. ಅದಕ್ಕೆ ಧಾರ್ಮಿಕ/ಸಾಮಾಜಿಕ ಬಲವುಳ್ಳವರು ಭಾರತ ವ್ಯವಸ್ಥೆಯಲ್ಲಿ ಸಾಧಿಸಿರುವ ಈ ಹಿಡಿತವನ್ನು, ಸಮಾಜವಾದ/ ವಾದಿಗಳ ಆರ್ಥಿಕ/ಸಂಪತ್ತಿನ ಸಮಾನ ಹಂಚಿಕೆಯ ಮೂಲಕ ಸಾಮಾಜಿಕ ಸಮಾನತೆಯನ್ನು ತರಲಾಗುವುದು ಎಂಬ ವಿಶ್ಲೇಷಣೆಯೇ ಅನ್ವಯ ಆಗದು ಅನ್ನುತ್ತಾರೆ. ಕೇವಲ ಜಾತಿಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರೆ ಸಾಲದು, ಸಹ ಮನುಷ್ಯರನ್ನು ಗೌರವದಿಂದ ಸಮಾನವಾಗಿ ಕಾಣುವುದು ಆಚರಣೆಗೆ ಬರಬೇಕು. ಆಗಲೇ ಅದಕ್ಕೊಂದು ಅರ್ಥ ಬರುವುದು ಅನ್ನುತ್ತಾರೆ. ಇಡೀ ಈ ಭಾಷಣದ ತಿರುಳು ಜಾತಿಯನ್ನು ಹೇಗೆ ತೊಡೆದು ಹಾಕಬೇಕು ಮತ್ತು ಎಲ್ಲರನ್ನು ಹೇಗೆ ಸಮಾನವಾಗಿ ಕಾಣಬೇಕು ಎಂಬುದಾಗಿದೆ.

ಒಬ್ಬ ಜಾತಿವಾದಿ ಹಿಂದೂ ಉಪವಾಸ ಬೇಕಾದರೆ ಸಾಯಲು ತಯಾರಿದ್ದಾನೆ, ಆದರೆ ಸಾಮಾಜಿಕವಾಗಿ ಕೀಳು ಎಂದು ಭಾವಿಸುವ ವೃತ್ತಿಯನ್ನು ಮಾಡಲಾರ ಎಂದಾದರೆ ಅದಕ್ಕೆ ಕಾರಣ ಏನಿರಬಹುದು ಎಂಬುದನ್ನು ಹುಡುಕಬೇಕು. ಅಲ್ಲದೆ ಡಿವಿಜನ್ ಆಫ್ ಲೇಬರ್- ಶ್ರಮ ವಿಭಜನೆಯು ಹುಟ್ಟಿನ ಪೂರ್ವ ನಿರ್ಧರಿತ ವಿಂಗಡನೆಯಾಗಿದೆ ಹೊರತು ಆರ್ಥಿಕತೆ ಅಥವಾ ಕೌಶಲ್ಯರಾಹಿತ್ಯತೆ ಆಧಾರದ ಮೇಲೆ ಅಲ್ಲ ಎಂಬುದನ್ನು ಗುರುತಿಸುತ್ತಾರೆ. ಆ ಕಾರಣಕ್ಕೆ ಭಾರತದಲ್ಲಿ ಕೆಲ ಕೆಲಸಗಳನ್ನು ಕೀಳು ಮತ್ತೆ ಕೆಲವನ್ನು ಮೇಲು ಎಂದು ಕಾಣಲಾಗುತ್ತದೆ. ಜಾತಿ ಒಂದು ಆರ್ಥಿಕ ಘಟಕವಾಗಿ ತುಂಬಾ ಹಾನಿಕಾರಕ ಸಂಘಟನೆಯಾಗಿದೆ. ಯಾಕೆಂದರೆ ಮನುಷ್ಯರಲ್ಲಿಯ ಸ್ವಾಭಾವಿಕ ಸಾಮರ್ಥ್ಯವನ್ನು ಹಿನ್ನೆಲೆಗೆ ತಳ್ಳಿ ಅವರನ್ನು ಹುಟ್ಟಿನ ಆಧಾರದ ಮೇಲೆ ಅಡಿಯಾಳುಗಳನ್ನಾಗಿ ಮಾಡುತ್ತದೆ. ಇದಕ್ಕೆ ಅಂಬೇಡ್ಕರರು ಜಾತಿಯೊಂದು ಒಗ್ಗಟ್ಟನ್ನು ಒಡೆಯುವ, ಮನುಷ್ಯರನ್ನು ಒಂದುಗೂಡಲು ಬಿಡದ ಒಡಕಿನ ಬಿಂಬವಾಗಿದೆ ಅನ್ನುತ್ತಾರೆ. ಒಂದು ಪ್ರದೇಶದಲ್ಲಿ ದೈಹಿಕವಾಗಿ ಮೈಲು ದೂರ ವಾಸಿಸುವ/ ಜೀವಿಸುವ ಮನುಷ್ಯ ಮಾನಸಿಕವಾಗಿ ಎಂದೂ ಒಂದು ಸಮಾಜದ ಭಾಗವಾಗಲಾರ. ಸಹಜ ಸಂಬಂಧಗಳನ್ನು ಸಹ ಹೈರಾರ್ಕಿಕಲ್ ಆಗಿ ನೋಡುವ ಏಣಿ ಸ್ಥಿತಿಯನ್ನು ರೂಪಿಸುವ ಜಾತಿಯನ್ನು ‘ಅಂಟಿ ಸೋಷಿಯಲ್ ಸ್ಪಿರಿಟ್’ ಅನ್ನುತ್ತಾರೆ ಅಂಬೇಡ್ಕರ್. ಇದಕ್ಕೆ ಮಹಾರಾಷ್ಟ್ರದಲ್ಲಿಯ ಸೋನಾರ್ ಮತ್ತು ಪಥಾರೆ ಪ್ರಭು ಉಪಪಂಗಡಗಳ ತಿಕ್ಕಾಟವನ್ನು ಉದಾಹರಣೆಯಾಗಿ ಕೊಡುತ್ತಾರೆ.

anhilation of caste old
‘ಜಾತಿ ನಿರ್ಮೂಲನೆ’ ಕೃತಿಯ ಹಳೆಯ ಪ್ರತಿ

ಇನ್ನು ಆರ್ಯ ಸಮಾಜದವರ ಜಾತಿ ನಿರ್ಮೂಲನಾ ಮಾದರಿಯನ್ನು ಹೇಗೆ ‘ಹುಟ್ಟಿನ’ ಮೂಲವಾಗಿ ನೋಡದೆ, ‘ಗುಣ’ದ ಮೂಲವನ್ನಾಗಿ ನೋಡುತ್ತಾರೆ ಮತ್ತು ಅದರ ಮಿತಿಗಳೇನು ಎಂಬುದನ್ನು ಚರ್ಚಿಸುತ್ತಾರೆ. ಇದಕ್ಕೆ ರಾಮಾಯಣದ ಒಳಸಂಚು, ದೇವರ ರೂಪದಲ್ಲಿಯ ಪಾತ್ರಗಳ ನೀಚತನ, ಸಮಯ ಸಾಧಕತೆ ಹೇಗೆಲ್ಲ ಮನುಷ್ಯರನ್ನು ವಿಂಗಡಿಸುವಲ್ಲಿ, ಸದೆಬಡೆಯುವಲ್ಲಿ ಉಪಯೋಗಿಸಿಕೊಳ್ಳಲಾಗುತ್ತದೆ ಎಂಬುದನ್ನು ವಿವರಿಸುತ್ತಾರೆ. ಎಸ್. ರಾಧಾಕೃಷ್ಣರ ವಿಚಾರದ ಹಿಂದಿನ ಸಂಚನ್ನು ಸಹ ಬಯಲು ಮಾಡುತ್ತಾರೆ. ಹಾಗಾದರೆ ಅಂಬೇಡ್ಕರರು ಜಾತಿ ನಿರ್ಮೂಲನೆಗೆ ಇರುವ ದಾರಿಗಳನ್ನು ಗುರುತಿಸುವುದಿಲ್ಲವೇ? ಗುರುತಿಸುತ್ತಾರೆ. ಸಾಮಾಜಿಕ ಶ್ರೇಣಿಯನ್ನು ಕೆಡವಬೇಕಾದರೆ, ಅದಕ್ಕೆ ಉಪ-ಜಾತಿಗಳ ನಡುವಣ ಅಂತರ ತೊಲಗಿಸಬೇಕು. ಅಲ್ಲದೆ ಅಂತರ್ ಜಾತಿ ಮದುವೆಗಳನ್ನು ಪ್ರೋತ್ಸಾಹಿಸಬೇಕು. ಅಂತರ್-ಭೋಜನ ಕೂಟಗಳನ್ನು ಏರ್ಪಡಿಸಬೇಕು. ಇವುಗಳ ಮೂಲಕ ಶಾಸ್ತ್ರಗಳನ್ನು ನಾಶ ಮಾಡಬೇಕು. ಒಡೆದು ಆಳುವ ಜನರು, ಹೇಗೆ ವ್ಯವಸ್ಥಿತವಾಗಿ ವೇದ-ಪುರಾಣಗಳನ್ನ ಆಧಾರವಾಗಿ ಪಡೆಯುತ್ತಾರೆ ಎಂಬುದನ್ನು ಈ ಭಾಷಣ ಬರಹದಲ್ಲಿ ಅಂಬೇಡ್ಕರರು ಸವಿಸ್ತಾರವಾಗಿ ಹೇಳುತ್ತಾರೆ.

ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!

ಅನೇಕ ಆವೃತ್ತಿಗಳ ಕಂಡ ಈ ಪುಟ್ಟ ಭಾಷಣ ಯಾಕೆ ಅಂಬೇಡ್ಕರರ ಇತರೆ ಬರಹಗಳಲ್ಲಿಯೇ ಗಮನಾರ್ಹವಾದುದು ಅಂದರೆ, ಅವರು ಜಾತಿಯ ಮೂಲ ಮತ್ತದರ ನಿರ್ಮೂಲನೆಗೆ ಬಳಸುವ ಆಕಾರಗಳು, ವೈಜ್ಞಾನಿಕ ಸಂಶೋಧನೆಗೆ ಪಾಲಿಸಬೇಕಾದ ಹಂತಗಳು ಮತ್ತು ಪ್ರಪಂಚದ ನಾನಾ ಕಡೆ ನಡೆದ ಜನಾಂಗೀಯ ತಿಕ್ಕಾಟಗಳ ಹಿಂದಣ ಇರುವ ‘ಜಾತಿ’ ತರಹದ್ದೇ ಆದ ಕಾರಣಗಳು ಮತ್ತು ಭಾರತದಲ್ಲಿಯ ಜಾತಿ ಹುಟ್ಟಿಗೆ, ಆಚರಣೆಗೆ ಬಳಸುವ ಕುತಂತ್ರಗಳು ಏನೆಲ್ಲ ಸಾಮಾಜಿಕ ಒಡಕನ್ನು ಮೂಡಿಸಿವೆ ಎಂಬುದನ್ನು ವಿಶ್ಲೇಷಿಸುವ ಕಾರಣಕ್ಕೆ ಮುಖ್ಯವೆನಿಸುತ್ತದೆ. ‘ಪಬ್ಲಿಕ್’ ಅನ್ನುವ ಪರಿಕಲ್ಪನೆಯೆ ನಮ್ಮಲ್ಲಿ ಇನ್ನು ಅಷ್ಟಾಗಿ ಆಚರಣೆಗೆ ಬಂದಿಲ್ಲ. ರೈಲು ಒಂದು ಸಾರ್ವಜನಿಕ ಸಾರಿಗೆ ಸಾಧನ. ಅಲ್ಲೂ ನಿಮ್ಮ ಇಚ್ಛೆಯ ಊಟ ಮಾಡಲು ತಕರಾರು ಮಾಡುವ ಸ್ಥಿತಿ ಇದೆ. ಇದಕ್ಕೆ ‘ಸಹೋದರತೆ’ ಎಂಬ ಪದ ಇಂದು ಆಯಾ ಜಾತಿಯವರು ಒಂದಾಗಿರುವ ವ್ಯವಸ್ಥೆ ಎಂಬ ಅರ್ಥದಲ್ಲಿ ಬಳಸಲ್ಪಡುತ್ತಿದೆ. ಈ ಎಲ್ಲ ಕಾರಣಕ್ಕೆ ಅಂಬೇಡ್ಕರ್‌ರ ಈ ಪುಸ್ತಕ ಜಾತಿ ರೋಗಕ್ಕೆ ಸಿದ್ಧೌಷಧದಂತೆ ಕಾಣುತ್ತದೆ.

ramesh aroli
ರಮೇಶ ಅರೋಲಿ
+ posts

ರಾಯಚೂರು ಜಿಲ್ಲೆಯ ಅಸ್ಕಿಹಾಳದವರಾದ ರಮೇಶ ಅರೋಲಿಯವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಳೆಯ ಪಾಪದ ಹೆಸರು ನಿಮ್ಮಂತೆ ಇಟ್ಟುಕೊಳ್ಳಿ, ಜುಲುಮೆ, ಬಂಡಾಯದ ಬೋಳಬಂಡೆಪ್ಪ, ತೀನ್ ಕಂದೀಲ್, ಬಿಡು ಸಾಕು ಈ ಕೇಡುಗಾಲಕ್ಕಿಷ್ಟು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಡಾ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಡಾ. ಪು.ತಿ.ನ. ಕಾವ್ಯ ಪುರಸ್ಕಾರ, ಪ್ರಜಾವಾಣಿ ಕಾವ್ಯ ಸ್ಪರ್ಧೆಯ ಬಹುಮಾನ ದೊರೆತಿವೆ. ಅವರ ಕವಿತೆಗಳು ಇಂಗ್ಲಿಷ್, ಹಿಂದಿ, ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ದೆಹಲಿ ವಿವಿಯ ಕಮಲಾ ನೆಹರೂ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ರಮೇಶ ಅರೋಲಿ
ರಮೇಶ ಅರೋಲಿ
ರಾಯಚೂರು ಜಿಲ್ಲೆಯ ಅಸ್ಕಿಹಾಳದವರಾದ ರಮೇಶ ಅರೋಲಿಯವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಳೆಯ ಪಾಪದ ಹೆಸರು ನಿಮ್ಮಂತೆ ಇಟ್ಟುಕೊಳ್ಳಿ, ಜುಲುಮೆ, ಬಂಡಾಯದ ಬೋಳಬಂಡೆಪ್ಪ, ತೀನ್ ಕಂದೀಲ್, ಬಿಡು ಸಾಕು ಈ ಕೇಡುಗಾಲಕ್ಕಿಷ್ಟು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಡಾ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಡಾ. ಪು.ತಿ.ನ. ಕಾವ್ಯ ಪುರಸ್ಕಾರ, ಪ್ರಜಾವಾಣಿ ಕಾವ್ಯ ಸ್ಪರ್ಧೆಯ ಬಹುಮಾನ ದೊರೆತಿವೆ. ಅವರ ಕವಿತೆಗಳು ಇಂಗ್ಲಿಷ್, ಹಿಂದಿ, ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ದೆಹಲಿ ವಿವಿಯ ಕಮಲಾ ನೆಹರೂ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related