ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?

Date:

ಕೃತಿ: Philosophic Defence of Counter- Revolution: Krishna and His Gita (ಪ್ರತಿಕ್ರಾಂತಿಯ ತಾತ್ವಿಕ ಸಮರ್ಥನೆ: ಕೃಷ್ಣ ಮತ್ತು ಆತನ ಗೀತೆ) (`ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯಲ್ಲಿನ ಆಯ್ದ ಅಧ್ಯಾಯ)
ಮಹಾರಾಷ್ಟ್ರ ಸರ್ಕಾರದ ಮೊದಲ ಪ್ರಕಟಣೆ: 1987, ಏಪ್ರಿಲ್ 14 (ಈವರೆಗೆ ಅಪ್ರಕಟಿತವಾಗಿತ್ತು)
ಇಂಗ್ಲಿಷ್ ಸಂಪುಟ: 3
ಕನ್ನಡ ಸಂಪುಟ: 3
(Revolution and Counter-Revolution in Ancient India)


ಬುದ್ಧನ ಕಾಲದಲ್ಲಿ ಕಂಡಿದ್ದ ಕ್ರಾಂತಿಯಿಂದ ಭಾರತೀಯ ಸಮಾಜ ಮುಂಚಲನೆ ಪಡೆಯಿತು. ಆದರೆ ಪುಷ್ಯಶುಂಗದ ಕಾಲದಲ್ಲಿ ಪ್ರತಿಕ್ರಾಂತಿ ನಡೆದು ಮತ್ತೆ ಶ್ರೇಣೀಕೃತ ವ್ಯವಸ್ಥೆ ಅಸ್ತಿತ್ವಕ್ಕೆ ಬಂತು. ತರತಮಗಳನ್ನು ಸಮರ್ಥಿಸುವ ಸಂದಿಗ್ಧತೆಯೂ ಬ್ರಾಹ್ಮಣೀಯ ವ್ಯವಸ್ಥೆಗೆ ಇತ್ತು. ಆ ಕಾರಣ ಪ್ರತಿಕ್ರಾಂತಿಯ ಪ್ರತಿಗಾಮಿ ಸಾಹಿತ್ಯವೂ ಚಾಲ್ತಿಗೆ ಬಂದಿತು. ಹಾಗೆ ರಚನೆಯಾದ ಕೃತಿಗಳ ಪೈಕಿ ‘ಭಗವದ್ಗೀತೆ’ಯೂ ಒಂದು ಎಂಬುದನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು, ‘ಪ್ರತಿಕ್ರಾಂತಿಯ ತಾತ್ವಿಕ ಸಮರ್ಥನೆ: ಕೃಷ್ಣ ಮತ್ತು ಆತನ ಗೀತೆ’ ಅಧ್ಯಾಯದಲ್ಲಿ ಸಾಕ್ಷ್ಯಗಳ ಸಹಿತ ದಾಖಲಿಸುತ್ತಾರೆ. ಭಗವದ್ಗೀತೆಯ ಮೂಲ ಉದ್ದೇಶವೇ ‘ಚಾತುರ್ವರ್ಣ್ಯ ಮತ್ತು ಪ್ರತಿಕ್ರಾಂತಿಯ ಸಮರ್ಥನೆ’ ಎನ್ನುವ ಅಂಬೇಡ್ಕರ್, ಗೀತೆಯು ಬುದ್ಧನ ಕಾಲದ ನಂತರದಲ್ಲಿ ರಚನೆಯಾದದ್ದು ಎಂಬುದನ್ನು ಸಾಬೀತು ಮಾಡುತ್ತಾರೆ ಮತ್ತು ಗೀತೆಯ ರಚನಾಕಾರರು ಬುದ್ಧನ ತತ್ವಗಳನ್ನು ನಕಲು ಮಾಡಿರುವುದನ್ನು ಪಟ್ಟಿ ಮಾಡುತ್ತಾರೆ. ಗೀತೆಯು ಬಹಳ ಪ್ರಾಚೀನವಾದದ್ದು ಎಂದು ವಾದಿಸುವ ವಿದ್ವಾಂಸರಿಗೆ ಸವಾಲು ಎಸೆಯುವ ಬಾಬಾಸಾಹೇಬರು, ಗೀತೆಯು ಹೇಗೆ ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂದು ವಿಶ್ಲೇಷಿಸಿ, ಅದರೊಳಗೆ ಅವಿತಿರುವ ಜನವಿರೋಧಿ ನಿಲುವುಗಳನ್ನು ಚರ್ಚಿಸುವ ಕಾರಣಕ್ಕೆ ‘ಕೃಷ್ಣ ಮತ್ತು ಆತನ ಗೀತೆ’ ಪ್ರಬಂಧವು ಮಹತ್ವ ಪಡೆದಿದೆ.

- Advertisement -

ಡಾ.ಬಿ.ಆರ್. ಅಂಬೇಡ್ಕರ್ ಅವರ ‘ಸಮಗ್ರ ಬರೆಹಗಳು ಮತ್ತು ಭಾಷಣಗಳು’ ಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರದಿಂದ ಪ್ರಕಟಗೊಳ್ಳಲು ಆರಂಭವಾದ ಮೇಲೆ ಬಾಬಾಸಾಹೇಬರ ಅಪ್ರಕಟಿತ ಬರೆಹಗಳು ಬೆಳಕಿಗೆ ಬಂದವು. ತಮ್ಮ ಅಗಾಧ ಸಂಶೋಧನಾ ಶಕ್ತಿಯಿಂದ ಬರೆಯುತ್ತಿದ್ದ ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯು ಅಪೂರ್ಣವಾಗಿಯೇ ಉಳಿದಿತ್ತು. ಮೂರನೇ ಸಂಪುಟದಲ್ಲಿ ಸೇರಿಸಲಾದ ಈ ಪುಸ್ತಕದಲ್ಲಿನ ಹಲವು ಬರೆಹಗಳಿಗೆ ಸ್ವತಂತ್ರ ಅಸ್ತಿತ್ವವೂ ಇದೆ. ಅಂಥವುಗಳಲ್ಲಿ ‘Philosophic Defence of Counter- Revolution: Krishna and His Gita’ (ಪ್ರತಿಕ್ರಾಂತಿಯ ತಾತ್ವಿಕ ಸಮರ್ಥನೆ: ಕೃಷ್ಣ ಮತ್ತು ಅವನ ಗೀತೆ) ಬರೆಹವೂ ಒಂದು (ಈ ಭಾಗವನ್ನು ಆಧರಿಸಿ ಭಗವದ್ಗೀತೆ ವರ್ಸಸ್ ಬೌದ್ಧತತ್ವ’ ಎಂಬ ಕೃತಿಯನ್ನು ‘ಲಡಾಯಿ ಪ್ರಕಾಶನ’ ಕನ್ನಡದಲ್ಲಿ ಪ್ರಕಟಿಸಿದೆ).

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಬೌದ್ಧಧಮ್ಮವು ವರ್ಣಾಶ್ರಮ ಪದ್ಧತಿಯ ವಿರುದ್ಧ ಕ್ರಾಂತಿಯನ್ನೇ ಮಾಡಿತ್ತು. ದುರಾದೃಷ್ಟವಶಾತ್ ಪುಷ್ಯಶುಂಗನ ಕಾಲದಲ್ಲಿ ಬ್ರಾಹ್ಮಣೀಯ ಪ್ರತಿಕ್ರಾಂತಿ ನಡೆಯಿತು. ಆದರೆ ಬೌದ್ಧಧಮ್ಮದ ಪ್ರಭಾವವನ್ನು ತಗ್ಗಿಸುವುದು ಅಷ್ಟು ಸುಲಭವಾಗಿರಲಿಲ್ಲ. ಜನರ ಮೇಲೆ ಮಾನಸಿಕ ಹಿಡಿತ ಸಾಧಿಸಲು ಹೊಸ ವೈದಿಕ ಸಾಹಿತ್ಯವನ್ನು ಚಾಲ್ತಿಗೆ ತರಲಾಯಿತು. ಆ ನಿಟ್ಟಿನಲ್ಲಿ ರೂಪುಗೊಂಡ ಪ್ರತಿಕ್ರಾಂತಿಕಾರಕ ಕೃತಿಗಳಲ್ಲಿ ಭಗವದ್ಗೀತೆಯು ಒಂದು ಎಂಬುದು ಅಂಬೇಡ್ಕರ್ ನಿಲುವು.

revolution12
‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿ

“ಭಗವದ್ಗೀತೆ ಧರ್ಮಗ್ರಂಥವೂ ಅಲ್ಲ ದರ್ಶನ ಗ್ರಂಥವೂ ಅಲ್ಲ ಎಂಬುದೇ ನನ್ನ ಉತ್ತರ. ತಾತ್ವಿಕ ನೆಲೆಗಟ್ಟಿನ ಮೇಲೆ ಕೆಲವು ಧಾರ್ಮಿಕ ನಂಬಿಕೆಗಳನ್ನು ಸಮರ್ಥಿಸುವುದೇ ಭಗವದ್ಗೀತೆಯ ಉದ್ದೇಶ. ಈ ಕಾರಣದಿಂದಾಗಿ ಅದನ್ನು ಯಾರಾದರೂ ಧರ್ಮಗ್ರಂಥ ಅಥವಾ ದರ್ಶನಗ್ರಂಥ ಎಂದು ಕರೆಯಲಿಚ್ಛಿಸಿದರೆ ಅವರು ಹಾಗೆಯೇ ಮಾಡಲಿ, ಆದರೆ ಅದು ಮೂಲಭೂತವಾಗಿ ಇದಾವುದೂ ಅಲ್ಲ” ಎನ್ನುತ್ತಾರೆ ಅಂಬೇಡ್ಕರ್ (ಸಮಗ್ರ ಬರೆಹಗಳು-ಭಾಷಣಗಳು, ಕನ್ನಡ ಸಂಪುಟ 3, ಪು.ಸಂ. 380; ಮುಂದಿನ ಉಲ್ಲೇಖಗಳನ್ನು ಇದೇ ಕೃತಿಯಿಂದ ಆಯ್ದುಕೊಳ್ಳಲಾಗಿದೆ). ಹಿಂದೂ ಧರ್ಮಗ್ರಂಥಗಳೆನಿಸಿ, ಪೂಜ್ಯನೀಯ ಸ್ಥಾನದಲ್ಲಿರುವ ಶಾಸ್ತ್ರ, ಪುರಾಣ, ಸ್ಮೃತಿಗಳ ನಿಜ ಹೂರಣವನ್ನು ಆಳವಾಗಿ ಅಧ್ಯಯನ ಮಾಡಿದ್ದ ಬಾಬಾಸಾಹೇಬರು, ‘ಭಗವದ್ಗೀತೆ’ಯ ಕುರಿತು ‘ಕೃಷ್ಣ ಮತ್ತು ಆತನ ಗೀತೆ’ ಬರೆಹದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ ಮತ್ತು ಭಗವದ್ಗೀತೆಯಲ್ಲಿನ ಪ್ರತಿಗಾಮಿ ಸಂಗತಿಗಳನ್ನು ಮುಂದಿಡುತ್ತಾರೆ. ಇದು ಅಪೂರ್ಣ ಬರೆಹವಾದರೂ ಸದ್ಯಕ್ಕೆ ಲಭ್ಯವಿರುವ ಪುಟಗಳೇ ಹೊಸದೃಷ್ಟಿಕೋನವನ್ನು ನೀಡುತ್ತವೆ. ಈ ಬರೆಹದ ಜೊತೆಗೆ ‘ಫಿಲಾಸಫಿ ಆಫ್ ಹಿಂದೂಯಿಸಂ’ ಕೃತಿ ಹಾಗೂ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯಲ್ಲಿನ ‘ಬ್ರಾಹ್ಮಣ ಸಾಹಿತ್ಯ’ ಎಂಬ ಭಾಗದಲ್ಲಿ ಭಗವದ್ಗೀತೆ ಕುರಿತು ಮಾಡಿರುವ ಟಿಪ್ಪಣಿಗಳನ್ನೂ ಪೂರಕವಾಗಿ ನೋಡಿದರೆ ಬಾಬಾಸಾಹೇಬರ ಸಂಶೋಧನೆಯ ಆಳ- ಅಗಲ ಬೆರಗು ಹುಟ್ಟಿಸುತ್ತದೆ.

ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಬಾಬಾಸಾಹೇಬರು ಭಗವದ್ಗೀತೆ ಕುರಿತು ಬರೆದಿರುವ ಈ ಎಲ್ಲ ಬರೆಹಗಳನ್ನು ಒಟ್ಟಿಗೆ ನೋಡಿದಾಗ ಮುಖ್ಯವಾಗಿ ಮೂರು ಅಂಶಗಳು ನಮಗೆ ಸ್ಪಷ್ಟವಾಗುತ್ತವೆ. 1. ಭಗವದ್ಗೀತೆಯ ಮೂಲ ಉದ್ದೇಶವೇ ಚಾತುರ್ವರ್ಣ್ಯ ಮತ್ತು ಪ್ರತಿಕ್ರಾಂತಿಯ ಸಮರ್ಥನೆ. 2. ಭಗವದ್ಗೀತೆಯು ಬೌದ್ಧಧರ್ಮದ ತರುವಾಯ ಹುಟ್ಟಿಕೊಂಡ ಕೃತಿಯೇ ಹೊರತು, ಅದರ ಪ್ರಾಚೀನತೆಗೆ ಸಂಪ್ರದಾಯವಾದಿ ಪಂಡಿತರು ಕೊಡುವ ಪುರಾವೆಗಳು ಪೊಳ್ಳುತನದಿಂದ ಕೂಡಿವೆ. 3. ಯುದ್ಧದ ಸಮರ್ಥನೆಯ ಮೂಲಕ ಹಿಂಸೆಯ ಪ್ರತಿಪಾದನೆ.

ಚಾತುರ್ವರ್ಣ್ಯ ಮತ್ತು ಪ್ರತಿಕ್ರಾಂತಿಯ ಸಮರ್ಥನೆ

“ಪ್ರತಿಕ್ರಾಂತಿಯ ಸಿದ್ಧಾಂತಗಳನ್ನು ಸಮರ್ಥಿಸುವ ಅಗತ್ಯ ಭಗವದ್ಗೀತೆಗೆ ಏಕೆ ಬಂತು? ನನ್ನ ದೃಷ್ಟಿಯಲ್ಲಿ ಉತ್ತರ ಬಹಳ ಸ್ಪಷ್ಟವಿದೆ. ಬೌದ್ಧಧರ್ಮದ ಪ್ರಹಾರದಿಂದ ಅವುಗಳನ್ನು ರಕ್ಷಿಸಲು ಭಗವದ್ಗೀತೆ ಅಸ್ತಿತ್ವಕ್ಕೆ ಬಂತು. ಬುದ್ಧ ಬೋಧಿಸಿದ್ದು ಅಹಿಂಸೆ. ಅದನ್ನು ಅವನು ಬೋಧನೆಯಷ್ಟೇ ಮಾಡಲಿಲ್ಲ. ಬ್ರಾಹ್ಮಣರನ್ನು ಬಿಟ್ಟರೆ ಉಳಿದೆಲ್ಲ ಜನರೂ ಅದನ್ನು ಜೀವನ ಮಾರ್ಗವೆಂದು ಅಂಗೀಕರಿಸಿದರು. ಅವರು ಹಿಂಸೆಯ ಬಗ್ಗೆ ಹೇವರಿಕೆ ತಾಳಿದರು. ಬುದ್ಧ ಚಾತುರ್ವರ್ಣದ ವಿರುದ್ಧ ಬೋಧಿಸಿದನು. ಚಾತುರ್ವರ್ಣ ಸಿದ್ಧಾಂತವನ್ನು ಖಂಡಿಸಲು ಕೆಲವು ಅತ್ಯಂತ ಖೇದಕಾರಿ ಹೋಲಿಕೆಗಳನ್ನು ಬಳಸಿದನು. ಚಾತುರ್ವರ್ಣದ ಚೌಕಟ್ಟು ಒಡೆದುಹೋಗಿತ್ತು. ಚಾತುರ್ವರ್ಣ ವ್ಯವಸ್ಥೆ ತಲೆಕೆಳಗಾಗಿತ್ತು. ಶೂದ್ರರು ಮತ್ತು ಸ್ತ್ರೀಯರು ಸನ್ಯಾಸಿಗಳಾಗಿದ್ದರು. ಈ ಸ್ಥಾನವನ್ನು ಪ್ರತಿಕ್ರಾಂತಿ ಅವರಿಗೆ ನಿರಾಕರಿಸಿತ್ತು. ಬುದ್ಧ ಕರ್ಮಕಾಂಡಗಳನ್ನೂ ಯಜ್ಞಗಳನ್ನೂ, ಅವುಗಳು ಹಿಂಸಾಮಯವಾದ್ದರಿಂದ ಖಂಡಿಸಿದ್ದನು. ಫಲಾಪೇಕ್ಷೆಯ ಸ್ವಾರ್ಥ ಲಾಲಸೆ ಅವುಗಳಲ್ಲಿದ್ದುದರಿಂದಲೂ ಅವುಗಳನ್ನು ಖಂಡಿಸಿದನು. ಈ ಖಂಡನೆಗೆ ಪ್ರತಿಕ್ರಾಂತಿಕಾರಿಗಳ ಉತ್ತರವಾದರೂ ಏನು? ಇಷ್ಟೆ- ಇವುಗಳು ವೇದ ಸಮ್ಮತವಾಗಿದ್ದವು, ವೇದಗಳು ದೋಷಾತೀತವಾದವು. ಆದ್ದರಿಂದ ಈ ಸಿದ್ಧಾಂತಗಳನ್ನು ಪ್ರಶ್ನಿಸುವಂತಿರಲಿಲ್ಲ” ಎನ್ನುತ್ತಾರೆ ಅಂಬೇಡ್ಕರ್ (ಸಂ.3, ಪು. 382).

philosophy of Hinduism
‘ಫಿಲಾಸಫಿ ಆಫ್ ಹಿಂದೂಯಿಸಂ’ ಕೃತಿ

ಗೀತೆಯು ಪ್ರತಿಪಾದಿಸುವ ಕರ್ಮಸಿದ್ಧಾಂತವನ್ನು ವೈಭವೀಕರಿಸುವುದು, ಭಗವದ್ಗೀತೆ ಶ್ರೇಷ್ಠ ಗ್ರಂಥವೆಂದು ಪ್ರಚಾರ ಮಾಡುವುದು, ಗೀತೆಯ ಕರ್ಮಸಿದ್ಧಾಂತ ಜಾತಿ ಕೇಂದ್ರಿತವಲ್ಲವೆಂದು ವಾದಿಸುವುದು ನಿರಂತರ ನಡೆಯುತ್ತಿದೆ. ಆದರೆ ಅಂಬೇಡ್ಕರ್ ಅವರ ಪ್ರಕಾರ- ಭಗವದ್ಗೀತೆ ವಾಸ್ತವದಲ್ಲಿ ಏನನ್ನು ಬೋಧಿಸುತ್ತದೆ? ಅದರ ನಿಜವಾದ ಉದ್ದೇಶವೇನು? ಈ ಕುರಿತು, ‘ಕೃಷ್ಣ ಮತ್ತು ಆತನ ಗೀತೆ’ ಬರೆಹದಲ್ಲಷ್ಟೇ ಅಲ್ಲದೇ, ‘ಹಿಂದೂ ಧರ್ಮದ ತತ್ವಶಾಸ್ತ್ರ’ (Philosophy of Hinduism) ಕೃತಿಯಲ್ಲಿಯೂ ಬಾಬಾಸಾಹೇಬರು ಮತ್ತಷ್ಟು ಸ್ಪಷ್ಟವಾಗಿ ಹೀಗೆ ದಾಖಲಿಸುತ್ತಾರೆ (ಕನ್ನಡ ಸಂ. 3, ಪು.ಸಂ. 85ರಿಂದ ಆಯ್ದ ಭಾಗ ನೋಡಿ):

‘ಭಗವದ್ಗೀತೆ’ ಏನು ಬೋಧಿಸುತ್ತದೆ? ಎಂಬುದರ ಬಗೆಗೂ ಸಂದೇಹಕ್ಕೆ ಆಸ್ಪದವೇ ಇಲ್ಲ. ‘ಭಗವದ್ಗೀತೆ’ಯಲ್ಲಿ ಕೃಷ್ಣನು ನೀಡಿರುವ ಕೆಳಗಿನ ನಾಲ್ಕು ಸ್ಪಷ್ಟ ನಿರ್ಧಾರಗಳ ಮೂಲಕ ಅದರ ಬೋಧನೆಯನ್ನು ಸಂಗ್ರಹಿಸಿಬಿಡಬಹುದಾಗಿದೆ.

1.“ಚಾತುವರ್ಣ್ಯವೆಂದು ಹೆಸರಾಗಿರುವ ಗೊತ್ತುಪಾಡನ್ನು (ಅಂದರೆ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರವೆಂದು ನಾಲ್ಕು ಭಾಗಗಳನ್ನಾಗಿ ವಿಂಗಡಿಸುವುದು) ನಾನೇ ಸೃಷ್ಟಿಸಿದವನು ಮತ್ತು ನಾನೇ ಅವರವರ ಜಾಯಮಾನಕ್ಕನುಗುಣವಾಗಿ ವಿವಿಧ ಕಸುಬುಗಳನ್ನು ಅವರಿಗೆ ವಹಿಸಿದವನು.” (ಗೀತೆ IV. 13)

2.“ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಸುಲಭವಾಗಿದ್ದರೂ ತನ್ನದೇ ವರ್ಣದ ಕಸುಬನ್ನು ಅನುಸರಿಸುವುದೇ ಜಾಣತನ. ಸಾಕಷ್ಟು ದಕ್ಷತೆಯಿಂದ ಅದನ್ನು ಒಬ್ಬನು ನಿರ್ವಹಿಸಲಾಗದಿದ್ದರೂ ತನ್ನ ವರ್ಣದ ಕಸುಬೇ ಶ್ರೇಯಸ್ಕರವಾದುದು. ಒಬ್ಬನು ತನ್ನ ವರ್ಣದ ಕಸುಬನ್ನು ಅನುಸರಿಸುವುದರಲ್ಲಿ ಆನಂದವಿದೆ. ಇದರ ಫಲವಾಗಿ ಅವನಿಗೆ ಸಾವು ಸಂಭವಿಸಿದರೂ ಚಿಂತೆಯಿಲ್ಲ. ಆದರೆ ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಮಾತ್ರ ಅಪಾಯಕಾರಿ.” (ಗೀತೆ, III.35)

3.“ತಮ್ಮ ಕಸುಬುಗಳಿಗೆ ಚೆನ್ನಾಗಿ ಹೊಂದಿಕೊಂಡಿರುವ ಅವಿದ್ಯಾವಂತರ ನಂಬಿಕೆಗಳನ್ನು ವಿದ್ಯಾವಂತರು ಅಭದ್ರಗೊಳಿಸಬಾರದು. ಅವನ ವರ್ಣಕ್ಕನುಸಾರವಾದ ಕಸುಬಿನಲ್ಲಿ ಅವನೇ ಮೊದಲು ತೊಡಗಬೇಕು. ಬಳಿಕ ಇತರರೂ ಅವರವರ ವರ್ಣಾನುಸಾರವಾದ ಕಸುಬನ್ನು ಅಂಗೀಕರಿಸುವಂತೆ ಮಾಡಬೇಕು. ಒಬ್ಬ ವಿದ್ಯಾವಂತನು ತನ್ನ ಉದ್ಯೋಗಕ್ಕೆ ಅಂಟಿಕೊಳ್ಳದೆ ಇರಬಹುದು. ಆದರೆ ಅವಿದ್ಯಾವಂತರೂ ಮಂದಮತಿಗಳೂ ಆದವರು ತಮ್ಮ ಕಸುಬಿಗೆ ಅಂಟಿಕೊಂಡಿರುತ್ತಾರೆ. ವಿದ್ಯಾವಂತರು ಅವರನ್ನು ಕೆಡಿಸಬಾರದು. ಅವರ ಕಸುಬನ್ನು ತ್ಯಜಿಸಿ ಅಡ್ಡಹಾದಿ ಹಿಡಿಯುವಂತೆ ಅವರನ್ನು ಪ್ರೇರೇಪಿಸಬಾರದು.” (3. III, 26, 29)

4.“ಅಯ್ಯಾ, ಅರ್ಜುನ! ಕರ್ತವ್ಯ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಈ ಧರ್ಮ (ಅಂದರೆ ಚಾತುರ್ವರ್ಣ್ಯನುಸಾರಿಯಾದ ಧರ್ಮ) ಅವನತಿ ಹೊಂದಿದಾಗಲೆಲ್ಲ ನಾನೇ ಭೂಮಿಯಲ್ಲಿ ಅವತರಿಸಿ ಈ ಅವನತಿಗೆ ಕಾರಣರಾದವರನ್ನು ಶಿಕ್ಷಿಸಿ, ಮತ್ತೆ ಅದನ್ನು ಸುಸ್ಥಿಗೆ ತರುತ್ತೇನೆ.” (ಗೀತೆ. IV. 8)

    ಹೀಗಿದೆ ‘ಗೀತೆ’ಯ ನಿಲುವು. ‘ಮನುಸ್ಮೃತಿ’ಗೂ ಇದಕ್ಕೂ ಯಾವ ವ್ಯತ್ಯಾಸವಿದೆ? ಮನುವನ್ನು ಅಡಕಗೊಳಿಸಿದ್ದೇ ‘ಗೀತೆ’. ‘ಮನುಸ್ಮೃತಿ’ಯಿಂದ ತಪ್ಪಿಸಿಕೊಂಡು ಹೋಗಿ ‘ಗೀತೆ’ಯಲ್ಲಿ ಆಶ್ರಯ ಪಡೆಯಬಯಸುವವರಿಗೆ ‘ಗೀತೆ’ ಎಂದರೇನು? ಎಂಬುದು ತಿಳಿದಿಲ್ಲ ಅಥವಾ ‘ಗೀತೆ’ಯ ಆತ್ಮವೇ ‘ಮನುಸ್ಮೃತಿ’ಯೊಂದಿಗೆ ರಕ್ತಸಂಬಂಧ ಪಡೆದಿದೆಯೆಂಬುದನ್ನು ತಮ್ಮ ಪರಿಗಣನೆಯಿಂದ ಬಿಟ್ಟುಬರಲು ಸಿದ್ಧರಿಲ್ಲ.

    ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ

    ಕರ್ಮಸಿದ್ಧಾಂತವು ವಾಸ್ತವದಲ್ಲಿ ಏನು ಹೇಳುತ್ತದೆ ಎಂಬುದನ್ನು ಬಾಬಾಸಾಹೇಬರು ‘ಗೀತೆ’ಯಿಂದಲೇ ಆಯ್ದು ಉತ್ತರಿಸುತ್ತಿರುವುದನ್ನು ಇಲ್ಲಿ ಕಾಣಬಹುದು. “ಹುಟ್ಟಿನಿಂದ ಕರ್ಮ ನಿರ್ಧಾರವಾಗುವುದಿಲ್ಲ, ಆತ ಅನುಸರಿಸುವ ನಡೆ ಮತ್ತು ನುಡಿಯಿಂದ ನಿರ್ಧಾರವಾಗುತ್ತದೆ. ಆತ ಬ್ರಾಹ್ಮಣನೋ ಕ್ಷತ್ರೀಯನೋ ವೈಶ್ಯನೋ ಶೂದ್ರನೋ ಎಂಬುದು ಆತನ ಕ್ರಿಯೆಗಳಿಂದ ವ್ಯಕ್ತವಾಗುತ್ತದೆ” ಎಂದು ವಾದಿಸುವ ‘ಭಗವದ್ಗೀತಾವಾದಿ’ಗಳ ಮುಂದೆ ಅಂಬೇಡ್ಕರ್ ಈ ಸಾಲುಗಳ ಅರ್ಥವೇನೆಂದು ಕೇಳಿದ್ದರು ಮತ್ತು ಗೀತೆ ಪ್ರತಿಪಾದಿಸುವ ಕರ್ಮಸಿದ್ಧಾಂತವು ಚಲನಾಶೀಲವಾದದ್ದಲ್ಲ, ಅದೊಂದು ಯಥಾಸ್ಥಿತಿಯ ಪ್ರತಿಪಾದನೆ ಎಂಬುದನ್ನು ‘ಗೀತೆ’ಯಲ್ಲೇ ಬರುವ ಸಮರ್ಥನೆಗಳ ಮೂಲಕ ಚರ್ಚಿಸಿದ್ದರು. “ಬೇರೆ ಕಸುಬನ್ನು ಅನುಸರಿಸುವುದಕ್ಕಿಂತ, ನಿನ್ನದೇ ಕಸುಬನ್ನು ಅನುಸರಿಸು, ಅದರಲ್ಲೇ ಮೋಕ್ಷಕಾಣು ಎಂದು ಗೀತಾಚಾರ್ಯರು ಬೋಧಿಸುವುದು ಏತಕ್ಕೆ?”- ಎಂದು ಅಂಬೇಡ್ಕರ್ ಅವರು ಇಲ್ಲಿ ಪಾಟಿಸವಾಲು ಎಸೆಯುತ್ತಿರುವುದು ಸ್ಪಷ್ಟ.

    ಭಗವದ್ಗೀತೆಯ ಕಾಲಘಟ್ಟ: ವಿದ್ವಾಂಸರಿಗೆ ಅಂಬೇಡ್ಕರ್ ಪ್ರತ್ಯುತ್ತರ

    ಅಂಬೇಡ್ಕರ್ ಅವರು ‘ಕೃಷ್ಣ ಮತ್ತು ಆತನ ಗೀತೆ’ ಕೃತಿಯಲ್ಲಿ ಪ್ರಮುಖವಾಗಿ ಚರ್ಚಿಸುವುದು ಗೀತೆಯ ಕಾಲಘಟ್ಟದ ಕುರಿತು. ‘ಬೌದ್ಧಧರ್ಮದ ಉಗಮಕ್ಕಿಂತ ಮೊದಲೇ ಭಗವದ್ಗೀತೆ ರಚನೆಯಾಗಿತ್ತು’ ಎಂಬ ವಾದಗಳ ಮಿತಿಗಳನ್ನು ಬಾಬಾಸಾಹೇಬರು ಎತ್ತಿಹಿಡಿದರು. ಈವರೆಗೆ ಇರದ ಹೊಸ ತಾತ್ವಿಕ, ಬೌದ್ಧಿಕ, ಆಧ್ಯಾತ್ಮಿಕ ಪರಂಪರೆಯನ್ನು, ಹೊಸ ಪರಿಭಾಷೆಗಳನ್ನು ಬೌದ್ಧಧಮ್ಮ ಹುಟ್ಟುಹಾಕಿತ್ತು. ವೇದ, ಶಾಸ್ತ್ರ, ಪುರಾಣಗಳಲ್ಲಿ ಇರದ ಚಿಂತನೆಗಳು ಭಗವದ್ಗೀತೆಯಲ್ಲಿ ಕಾಣಿಸಿಕೊಂಡಿದ್ದನ್ನೂ ಆ ಮುಂಚಿತವಾಗಿ ಬೌದ್ಧಿಸಂ ಪ್ರವರ್ಧಮಾನಕ್ಕೆ ಬಂದಿದ್ದನ್ನೂ ಅಂಬೇಡ್ಕರ್ ವಿಸ್ತೃತವಾಗಿ ಚರ್ಚಿಸಿದ್ದರು. ಮುಖ್ಯವಾಗಿ ಬಾಲಗಂಗಾಧರ ತಿಲಕ್ ಮತ್ತು ಇತರ ಕೆಲವು ವಿದ್ವಾಂಸರ ವಾದಗಳನ್ನು ತಮ್ಮ ವಿಮರ್ಶೆಗೆ ಒಳಸಿಕೊಂಡರು.

    Gite
    ‘ಭಗವದ್ಗೀತೆ’ ಕೃತಿ

    ಪ್ರತಿಗಾಮಿ ವಿಚಾರಗಳನ್ನು ಹೇಳುವ ಜೈಮಿನಿಯ ‘ಪೂರ್ವಮೀಮಾಂಸೆ’ಗೂ ‘ಭಗವದ್ಗೀತೆ’ಯಲ್ಲಿ ಬರುವ ವಿಚಾರಗಳಿಗೂ ವ್ಯತ್ಯಾಸಗಳೇನೂ ಇಲ್ಲ. ಬೌದ್ಧಿಸಂನ ಪ್ರಖರತೆಯಿಂದಾಗಿ ಜೈಮಿನಿಯ ವಿಚಾರಗಳು ಮೂಲೋತ್ಪಾಟನೆಯಾಗುತ್ತಿದ್ದಾಗ, ಅದನ್ನು ತಡೆಯಲೆಂದೇ `ಗೀತೆ’ಯನ್ನು ಗುರಾಣಿಯಾಗಿ ಬಳಸಲಾಯಿತು ಎಂಬ ನಿರ್ಣಯಕ್ಕೆ ಬಾಬಾಸಾಹೇಬರು ಬರುತ್ತಾರೆ.

    “ಭಗವದ್ಗೀತೆಯು ಜೈಮಿನಿಯನ್ನಾಗಲೀ ಪೂರ್ವ ಮೀಮಾಂಸೆಯನ್ನಾಗಲೀ ಹೆಸರಿಸುವುದಿಲ್ಲ ಎನ್ನುವುದು ನಿಜ. ಆದರೆ ಅಧ್ಯಾಯ 3, ಶ್ಲೋಕ 9 ರಿಂದ 18ರಲ್ಲಿ ಭಗವದ್ಗೀತೆಯು ಜೈಮಿನಿ ತನ್ನ ಪೂರ್ವ ಮೀಮಾಂಸೆಯಲ್ಲಿ ಹೇಳುವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತದೆ ಎನ್ನುವುದರಲ್ಲಿ ಅನುಮಾನವಿದೆಯೆ? ಗೀತೆಯ ಪ್ರಾಚೀನತೆಯಲ್ಲಿ ನಂಬಿಕೆಯಿಡುವ ತಿಲಕ್ ಕೂಡ ಪೂರ್ವ ಮೀಮಾಂಸೆಯ ಸಿದ್ಧಾಂತಗಳ ಪರೀಕ್ಷೆಯಲ್ಲಿ ಗೀತೆ ನಿರತವಾಗಿದೆ ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಈ ವಾದವನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಜೈಮಿನಿಯು ಕರ್ಮಯೋಗವನ್ನು ಮಾತ್ರ ಬೋಧಿಸುತ್ತಾನೆ. ಆದರೆ ಭಗವದ್ಗೀತೆ ಅನಾಸಕ್ತಿ ಕರ್ಮವನ್ನು ಬೋಧಿಸುತ್ತದೆ. ಹೀಗೆ ಗೀತೆ ಮೂಲಭೂತವಾಗಿ ಮಾರ್ಪಡಿಸಲಾದ ಒಂದು ಸಿದ್ಧಾಂತವನ್ನು ಬೋಧಿಸುತ್ತದೆ. ಭಗವದ್ಗೀತೆ ಕರ್ಮಯೋಗವನ್ನು ಮಾರ್ಪಡಿಸುವುದಷ್ಟೇ ಅಲ್ಲದೆ ಕೇವಲ ಕರ್ಮಯೋಗ ಪ್ರತಿಪಾದಕರನ್ನು ಸ್ವಲ್ಪ ಉಗ್ರ ಮಾತುಗಳಲ್ಲಿ ಖಂಡಿಸುತ್ತದೆ. ಜೈಮಿನಿಗಿಂತ ಮೊದಲು ಗೀತೆ ಬಂದಿದ್ದರೆ ಭಗವದ್ಗೀತೆಯ ಈ ಖಂಡನೆಯನ್ನು ಜೈಮಿನಿ ಎತ್ತಿಕೊಂಡು ಉತ್ತರಿಸುತ್ತಿದ್ದನೆಂದು ನಿರೀಕ್ಷಿಸಬಹುದು. ಆದರೆ ಭಗವದ್ಗೀತೆಯ ಈ ಅನಾಸಕ್ತಿ ಕರ್ಮಯೋಗದ ಬಗ್ಗೆ ಜೈಮಿನಿಯಲ್ಲಿ ಯಾವುದೇ ಉಲ್ಲೇಖವನ್ನು ನಾವು ಕಾಣುವುದಿಲ್ಲ ಏಕೆ?” (ಸಂ.3, ಪು.ಸಂ. 385) ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ.

    ತಿಲಕರಂತೆಯೇ ವಾದ ಮಾಡುವ ಸಂಸ್ಕೃತ ವಿದ್ವಾಂಸ ಕಾಶಿನಾಥ್ ತ್ರಿಂಬಕ್ ತೆಲಾಂಗ್ ಅವರ ವಾದವನ್ನು ವಿಸ್ತೃತವಾಗಿ ಪರಿಶೀಲನೆಗೆ ಒಡ್ಡುತ್ತಾರೆ. ತೆಲಾಂಗ್ ಅವರ ಪ್ರಕಾರ, “ಬ್ರಾಹ್ಮಣ ಧರ್ಮದ ವಿರುದ್ಧ ಬುದ್ಧನ ಪ್ರತಿಭಟನೆಯ ಪ್ರಧಾನಾಂಶಗಳು ವೇದ ಪ್ರಾಮಾಣ್ಯ ಮತ್ತು ಜಾತಿಯ ಭೇದಭಾವನೆಗಳ ನೈಜ ದೃಷ್ಟಿಯ ಮೇಲೆ ನಿಂತಿರುವಂತೆ ಕಾಣುತ್ತವೆ. ಬುದ್ಧ ಹೋದಷ್ಟು ದೂರ ಗೀತೆ ಹೋಗದಿದ್ದರೂ, ಅದು ರಚನೆಯಾದ ಕಾಲದಲ್ಲಿ ಪ್ರಚಲಿತವಿದ್ದ ಅಭಿಪ್ರಾಯಗಳ ವಿರುದ್ಧದ ಪ್ರತಿಭಟನೆಯನ್ನು ಅದು ಒಳಗೊಂಡಿದೆ. ಬೌದ್ಧಧರ್ಮದ ಹಾಗೆ ಗೀತೆ ವೇದಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವುದಿಲ್ಲ. ಆದರೆ ಅವುಗಳನ್ನು ಮೂಲೆಗಿಡುತ್ತದೆ. ಜಾತಿಯನ್ನು ಗೀತೆ ಬುಡಸಮೇತ ಕಿತ್ತು ಹಾಕುವುದಿಲ್ಲ. ಅದು ಜಾತಿಯನ್ನು ಸಮರ್ಥಿಸಲಾಗದಂತಹ ಆಧಾರದ ಮೇಲೇನೂ ಇಡುವುದಿಲ್ಲ… ಪ್ರಚಲಿತ ಧರ್ಮದ ಕೇಂದ್ರವನ್ನೇ ಅಲುಗಾಡಿಸುವುದರಲ್ಲಿ ನಿರತವಾದ ಆಧ್ಯಾತ್ಮಿಕ ವಿಪ್ಲವವನ್ನು ಜಗತ್ತಿಗೆ ತೋರಿಸುವುದರಲ್ಲಿ ಗೀತೆ ಮತ್ತು ಬೌದ್ಧಧರ್ಮ ಒಂದೇ ತೆರನಾಗಿದ್ದವು. ಗೀತೆ ಬೌದ್ಧಧರ್ಮಕ್ಕಿಂತ ಹಿಂದಿನದು, ಆದರೆ ಕ್ರಾಂತಿಯ ವಿಷಯದಲ್ಲಿ ಬೌದ್ಧಧರ್ಮದಷ್ಟು ಗಂಭೀರವಾಗಿರಲಿಲ್ಲ ಅಥವಾ ಬ್ರಾಹ್ಮಣ ಧರ್ಮಕ್ಕೆ ಬೌದ್ಧಧರ್ಮದಿಂದ ಧಕ್ಕೆ ಉಂಟಾಗಿದ್ದರೂ ಗೀತೆ ಬ್ರಾಹ್ಮಣ ಧರ್ಮವನ್ನು ಎತ್ತಿ ಹಿಡಿಯಲು ಪ್ರಯತ್ನಿಸಿತು..” (ಸಂ.3, ಪು.ಸಂ. 387). ಬೌದ್ಧಧರ್ಮದಿಂದ ಗೀತೆ ಪ್ರಭಾವಿತವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಬಹುತೇಕರಲ್ಲಿ ಮನಸ್ಸಿಲ್ಲದಿರುವುದೇ ಇಂತಹ ವಾದಕ್ಕೆ ಮೂಲ; ಬುದ್ಧನಿಂದ ಏನನ್ನಾದರೂ ಗೀತೆ ಸ್ವೀಕರಿಸಿದೆ ಎಂಬುದನ್ನು ಅಲ್ಲಗಳೆಯುವುದೇ ಇದರ ಉದ್ದೇಶ. ಭಗವದ್ಗೀತೆಯಲ್ಲಿ ಹೋಲಿಕೆ ಬಂದಾಗಲೆಲ್ಲ, ಈ ವಿಚಾರಗಳನ್ನು ಉಪನಿಷತ್ತುಗಳಿಂದ ಗೀತೆ ತೆಗೆದುಕೊಂಡಿದೆ ಎಂಬ ವಾದವನ್ನು ಇಡುತ್ತಾರೆ. ತಿಲಕ್ ಮತ್ತು ಡಾ.ರಾಧಾಕೃಷ್ಣನ್ ಅವರಲ್ಲಿಯೂ ಈ ಧೋರಣೆ ಕಾಣುತ್ತದೆ (ಪು.ಸಂ. 388) ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ.

    Bhudda12 3
    ಬುದ್ಧ

    ಹೀಗೆ ಹಾರಿಕೆಯ ಟೀಕೆ ಮಾಡಿ, ಬಾಬಾಸಾಹೇಬರು `ಹಿಟ್ ಅಂಡ್ ರನ್’ ಮಾಡುವುದಿಲ್ಲ. ಗೀತೆಗೂ ಬೌದ್ಧಿಸಂಗೂ ಇರುವ ತುಲನೆಯನ್ನು ಮುಂದಿಟ್ಟು, ಬೌದ್ಧಿಸಂ ವಿಚಾರಗಳೇ ಪ್ರಥಮ ಹೇಗೆ ಎಂಬುದನ್ನು ಸಮರ್ಥಿಸುತ್ತಾರೆ. ಬಾಬಾಸಾಹೇಬರ ಮಾತುಗಳು ಹೀಗಿವೆ:

    “ಸಾಂಖ್ಯ ತತ್ವದಿಂದ ಭಗವದ್ಗೀತೆ ತುಂಬಿಹೋಗಿದೆ ಎಂದು ಹೇಳುವುದು ನಿಜವಾದರೆ, ಗೀತೆಯು ಬೌದ್ಧಧರ್ಮದ ವಿಚಾರಗಳಿಂದ ತುಂಬಿಹೋಗಿದೆ ಎಂದು ಹೇಳುವುದು ಇನ್ನೂ ಹೆಚ್ಚು ನಿಜವಾಗಿದೆ. ಈ ಎರಡರ ನಡುವಣ ಸಾಮ್ಯತೆ ಕೇವಲ ವಿಚಾರದಲ್ಲಷ್ಟೇ ಅಲ್ಲ ಭಾಷೆಯಲ್ಲಿಯೂ ಇದೆ. ಇದೆಷ್ಟು ನಿಜ ಎಂಬುದನ್ನು ಒಂದೆರಡು ಉದಾಹರಣೆಗಳು ತೋರಿಸುತ್ತವೆ. ಭಗವದ್ಗೀತೆ ಬ್ರಹ್ಮ ನಿರ್ವಾಣವನ್ನು ಚರ್ಚಿಸುತ್ತದೆ. ಬ್ರಹ್ಮ ನಿರ್ವಾಣವನ್ನು ಗಳಿಸಲು ಇವು ಸೋಪಾನಗಳು: (i) ಶ್ರದ್ಧೆ (ಆತ್ಮವಿಶ್ವಾಸ), (ii) ವ್ಯವಸಾಯ (ದೃಢನಿರ್ಧಾರ), (iii) ಸ್ಮೃತಿ (ಗುರಿಯ ಸ್ಮರಣೆ), (iv) ಸಮಾಧಿ (ಗಂಭೀರ ಧ್ಯಾನ) ಮತ್ತು (v) ಪ್ರಜ್ಞೆ (ನೈಜ ಅರಿವು ಅಥವಾ ಅಂತರ್ ನೋಟ). ಈ ನಿರ್ವಾಣ ತತ್ವವನ್ನು ಗೀತೆ ಎಲ್ಲಿಂದ ತೆಗೆದುಕೊಂಡಿತು? ಅದು ಉಪನಿಷತ್ತುಗಳಿಂದಲ್ಲ ಎಂಬುದು ಖಚಿತ. ‘ನಿರ್ವಾಣ’ ಶಬ್ದವನ್ನು ಯಾವ ಉಪನಿಷತ್ತೂ ಕೂಡ ಬಳಸುವುದಿಲ್ಲ. ಈ ಇಡೀ ವಿಚಾರವೇ ವಿಶಿಷ್ಟವಾಗಿ ಬೌದ್ಧಧರ್ಮದ್ದು. ಅದನು ಬೌದ್ಧಧರ್ಮದಿಂದ ತೆಗೆದುಕೊಳ್ಳಲಾಗಿದೆ. ಈ ವಿಷಯದಲ್ಲಿ ಯಾರಿಗಾದರೂ ಏನೇ ಅನುಮಾನವಿದ್ದರೂ ಅವರು ಭಗವದ್ಗೀತೆಯ ಬ್ರಹ್ಮ ನಿರ್ವಾಣದ ಜೊತೆ ಮಹಾಪರಿನಿಬ್ಬಾಣ ಸುತ್ತದಲ್ಲಿ ಪ್ರತಿಪಾದಿಸಿರುವ ಬೌದ್ಧ ಕಲ್ಪನೆಯ ನಿರ್ವಾಣವನ್ನು ಹೋಲಿಸಿ ನೋಡಬಹುದು. ನಿರ್ವಾಣಕ್ಕೆ ಬದಲಾಗಿ ಇಡಿ ಬ್ರಹ್ಮ ನಿರ್ವಾಣ ಕಲ್ಪನೆಯನ್ನು ಗೀತೆ ತೆಗೆದುಕೊಂಡಿದ್ದು, ಅದನ್ನು ಬೌದ್ಧಧರ್ಮದಿಂದ ಹರಣ ಮಾಡಲಾಗಿದೆ ಎಂಬ ವಿಚಾರವನ್ನು ಮರೆ ಮಾಡುವುದಕ್ಕಾಗಿ ಎಂಬ ವಸ್ತು ಸ್ಥಿತಿ ಸಾಬೀತಾಗುತ್ತದಲ್ಲವೆ?” (ಸಂ. 3, ಪು.ಸಂ. 388- 389).

    ಇದನ್ನೂ ಓದಿರಿ: ‘ಶೂದ್ರರು ಯಾರಾಗಿದ್ದರು?: ‘…ಅಜ್ಞಾನಿ ಶೂದ್ರರಿಗಾಗಿ ಈ ಪುಸ್ತಕ’

    “ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳಿ. ಅಧ್ಯಾಯ 7 ಶ್ಲೋಕ 13-20ರಲ್ಲಿ ಕೃಷ್ಣನಿಗೆ ಯಾರು ಪ್ರಿಯ ಎಂಬ ಚರ್ಚೆಯಿದೆ. ಜ್ಞಾನಯೋಗಿಯೋ? ಕರ್ಮಯೋಗಿಯೋ? ಅಥವಾ ಭಕ್ತನೋ? ಭಕ್ತಿ ಪ್ರಿಯನೆಂದು ಕೃಷ್ಣ ಹೇಳುತ್ತಾನೆ. ಆದರೆ ಅವನಿಗೆ ಭಕ್ತನ ನೈಜ ಲಕ್ಷಣಗಳಿರಬೇಕು. ನಿಜ ಭಕ್ತನ ಲಕ್ಷಣವೇನು? ಕೃಷ್ಣನ ಪ್ರಕಾರ ಯಾರು ಮೈತ್ರಿ, ಕರುಣೆ, ಮುದಿತಾ ಮತ್ತು ಉಪೇಕ್ಷೆಯನ್ನು ಅನುಷ್ಠಾನ ಮಾಡುತ್ತಾನೋ ಅವನೇ ನಿಜವಾದ ಭಕ್ತ. ಪೂರ್ಣ ಭಕ್ತನ ಈ ಲಕ್ಷಣಗಳನ್ನು ಭಗವದ್ಗೀತೆ ಎಲ್ಲಿಂದ ತೆಗೆದುಕೊಂಡಿತು? ಮತ್ತೆ ಇದಕ್ಕೆ ಮೂಲ ಬೌದ್ಧ ಧರ್ಮ. ಇದಕ್ಕೆ ಆಧಾರ ಬೇಕೆನ್ನುವವರು ಹೃದಯ ಕೃಷಿಗೆ ಅಗತ್ಯವಾದ ಭಾವನೆಗಳನ್ನು ಬುದ್ಧ ಬೋಧಿಸಿರುವ ‘ಮಹಾಪಾದನ ಸುತ್ತ’ ಮತ್ತು ‘ತೇವಿಜ್ಜ ಸುತ್ತ’ಗಳನ್ನು ಹೋಲಿಸಬಹುದು. ಈ ಇಡೀ ಸಿದ್ಧಾಂತವನ್ನು ಪದಶಃ ಬೌದ್ಧ ಧರ್ಮದಿಂದ ಎತ್ತಿಕೊಂಡಿರುವುದು ತೌಲನ ಕ್ರಮದಿಂದ ಗೊತ್ತಾಗುತ್ತದೆ” (ಪು.ಸಂ. 389).

    “ಬುದ್ಧ ಸುತ್ತಗಳ ಮೇಲೆಯೇ ಭಗವದ್ಗೀತೆ ಉದ್ದೇಶಪೂರ್ವಕವಾಗಿ ರೂಪಿತವಾಗಿದೆ. ಬುದ್ಧ ಸುತ್ತಗಳು ಸಂಭಾಷಣೆಗಳಾಗಿವೆ. ಭಗವದ್ಗೀತೆ ಕೂಡ ಹಾಗೆಯೆ ಇದೆ. ಬುದ್ಧನ ಧರ್ಮ, ಸ್ತ್ರೀಯರಿಗೂ ಶೂದ್ರರಿಗೂ ಮೋಕ್ಷವನ್ನು ದಯಪಾಲಿಸಿತು. ಸ್ತ್ರೀಯರಿಗೆ ಮತ್ತು ಶೂದ್ರರಿಗೆ ಮೋಕ್ಷ ಕೊಡಲು ಕೃಷ್ಣ ಕೂಡ ಮುಂದೆ ಬರುತ್ತಾನೆ. ಬೌದ್ಧರು ನಾನು ಬುದ್ಧನಿಗೆ ಶರಣು ಹೋಗುತ್ತೇನೆ. ಧಮ್ಮಕ್ಕೆ ಶರಣು ಹೋಗುತ್ತೇನೆ. ಸಂಘಕ್ಕೆ ಶರಣು ಹೋಗುತ್ತೇನೆ’ ಎಂದು ಹೇಳುತ್ತಾರೆ. ಹಾಗೆ ಕೃಷ್ಣ ಕೂಡ ಹೇಳುತ್ತಾನೆ-ಸರ್ವಧರ್ಮಗಳನ್ನು ಪರಿತ್ಯಾಗ ಮಾಡಿ ನನ್ನೊಬ್ಬನಿಗೇ ಶರಣು ಹೋಗು’. ಬೌದ್ಧಧರ್ಮ ಮತ್ತು ಗೀತೆಗೂ ಇರುವಷ್ಟು ಸಾದೃಶ್ಯ ಬೇರಾವುದಕ್ಕೂ ಇಲ್ಲ (ಪು.ಸಂ. 390)”. ಇದು ಬಾಬಾಸಾಹೇಬರು ತಮ್ಮ ಸಂಶೋಧನೆ ಮತ್ತು ಪ್ರಖರ ವಿದ್ವತ್ತಿನ ಮೂಲಕ ತೆರೆದಿಡುವ ಸಂಗತಿಗಳು.

    ಬಾಬಾಸಾಹೇಬರಿಗೆ ಮುಖ್ಯವಾಗಿ ದೃಷ್ಟಿ ಹರಿಸಬೇಕೆನಿಸಿದ್ದು ‘ತಿಲಕ’ರ ‘ಭಗವದ್ಗೀತಾವಾದ’ದ ಬಗ್ಗೆ. ತಿಲಕರು ಚಾಣಾಕ್ಷತೆಯಿಂದ ವಾದ ಮಾಡುವುದನ್ನು ಅಂಬೇಡ್ಕರ್ ಗುರುತಿಸುತ್ತಾರೆ. ‘ಹೀನಯಾನ ಮತ್ತು ಮಹಾಯಾನ’ದ ನಡುವಿನ ಭಿನ್ನತೆಗಳನ್ನು ತೋರಿಸಿ, ಆ ಮೂಲಕ ಭಗವದ್ಗೀತೆಯ ‘ಮೇಲರಿಮೆ’ಯನ್ನು ತಿಲಕರು ಪ್ರತಿಪಾದಿಸುತ್ತಾರೆ. “ಬೌದ್ಧಧರ್ಮ ಮತ್ತು ಭಗವದ್ಗೀತೆಗಳಲ್ಲಿ ಸಾಮ್ಯತೆ ಇದ್ದರೆ, ಅದು ಭಗವದ್ಗೀತೆಯಿಂದ ಮಹಾಯಾನಿಗಳು ಎರವಲು ಪಡೆದದ್ದೇ ಕಾರಣ” ಎನ್ನವ ಜೊತೆಗೆ ‘ಮಹಾಭಾರತ’ದ ಕಾಲದಲ್ಲೇ ಸಂಪೂರ್ಣ ಗೀತೆ ರಚನೆಯಾಯಿತು ಎನ್ನುವಲ್ಲಿಗೂ ತಿಲಕರ ವಾದ ಸಾಗುತ್ತದೆ.

    ಹೀನಯಾನ ಮತ್ತು ಮಹಾಯಾನ ಪಂಥಗಳನ್ನು ತಮ್ಮ ವಾದಕ್ಕೆ ಬಳಸುವ ತಿಲಕರಿಗೆ ಅಂಬೇಡ್ಕರ್ ಹೀಗೆ ಪ್ರತಿಕ್ರಿಯಿಸುತ್ತಾರೆ: “ಶ್ರೀ ಕಿಮುರ ಹೇಳುವಂತೆ ಮಹಾಯಾನಿ ಎಂದರೆ ಮಹಾಸಾಂಘಿಕ ಎಂದು ಹೆಸರಾದ ಬೌದ್ಧ ಪಂಥದ ಇನ್ನೊಂದು ಹೆಸರಷ್ಟೆ. ಮಹಾಸಾಂಘಿಕರ ಪಂಥ ಈಗ ತಿಳಿದುಕೊಂಡಿರುವುದಕ್ಕಿಂತ ಬಹಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿತ್ತು. ಪರಂಪರೆಯನ್ನು ನಂಬುವುದಾದರೆ ಬುದ್ಧನ ಸಾವಿನ ನಂತರ 236 ವರ್ಷಗಳಾದ ಮೇಲೆ ಬುದ್ಧನ ತತ್ವಗಳನ್ನು ನಿಷ್ಕರ್ಷಿಸಲು ಪಾಟಲೀಪುತ್ರದಲ್ಲಿ ನಡೆದ ಅಥವಾ ಬೌದ್ಧ ಮಹಾಸಭೆಯಲ್ಲಿ (ಕ್ರಿ.ಪೂ. 307) ಈ ಪಂಥ ಅಸ್ತಿತ್ವಕ್ಕೆ ಬಂತು. ಅದು ಬೌದ್ಧಧರ್ಮದ ಥೆರವಾಡ ಪಂಥವನ್ನು ವಿರೋಧಿಸಿತು. ಈ ಥೆರವಾಡ ಪಂಥವೇ ಮುಂದೆ ಹೀನಯಾನ (ಅಂದರೆ ಹೀನ ಪಂಥಾವಲಂಬಿಗಳು) ಎಂದು ಕೆಟ್ಟ ಹೆಸರು ಪಡೆಯಿತು. ಮಹಾಯಾನಿಗಳು ಎಂದು ಮುಂದೆ ಕರೆಯಲಾದ ಮಹಾಸಂಘಿಕರು ಅಸ್ತಿತ್ವಕ್ಕೆ ಬಂದಾಗ ಭಗವದ್ಗೀತೆಯ ಹೆಸರು ಕೂಡ ಇರಲಿಲ್ಲ” (ಪು.ಸಂ. 398).

    Tilak
    ಬಾಲ ಗಂಗಾಧರ ತಿಲಕ್

    ಗೀತೆಯು ಮಹಾಭಾರತದೊಂದಿಗೆ ಒಮ್ಮೆಲೇ ಸಂಪೂರ್ಣವಾಗಿ ರಚನೆಯಾಯಿತು, ವ್ಯಾಸನೇ ಗೀತೆಯ ಕರ್ತೃ ಎಂದು ಪ್ರತಿಪಾದಿಸಲು ತಿಲಕರು ಪ್ರಯತ್ನಿಸುತ್ತಾರೆ. ಮಹಾಭಾರತದ ವಿಚಾರವಾಗಿ ತೀಕ್ಷ್ಣವಾಗಿ ವಿಮರ್ಶಿಸುವ ಅಂಬೇಡ್ಕರ್, “ತಿಲಕರ ಕಲ್ಪನೆಯನ್ನು ಮಹಾಭಾರತದ ಚರ್ಚೆಗಷ್ಟೇ ಸೀಮಿತಗೊಳಿಸಿದರೆ, ಅದು ಜನಜನಿತವಾಗಿರುವ ಭಾರತೀಯ ಪರಂಪರೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಈ ಪರಂಪರೆ ಮಹಾಭಾರತದ ರಚನೆಯನ್ನು ಮೂರು ಹಂತಗಳಾಗಿ ವಿಭಜಿಸುತ್ತದೆ: 1. ಜಯ 2. ಭಾರತ. 3. ಮಹಾಭಾರತ. ಪ್ರತಿಯೊಂದು ಭಾಗವನ್ನು ಬೇರೆ ಬೇರೆ ಲೇಖಕರು ಬರೆದರೆಂದು ಅದು ಹೇಳುತ್ತದೆ. ಈ ಪರಂಪರೆಯ ಪ್ರಕಾರ ಮೊದಲ ಆವೃತ್ತಿಯ ಕರ್ತೃ ವ್ಯಾಸ. ಇದನ್ನು ‘ಜಯ’ ಎಂದು ಕರೆಯುತ್ತಾರೆ. ‘ಭಾರತ’ವೆಂದು ಕರೆಯುವ ಎರಡನೇ ಆವೃತ್ತಿಯ ಕರ್ತೃ ವೈಶಂಪಾಯನ ಎಂದು ಪರಂಪರೆ ಹೇಳುತ್ತದೆ. ಮಹಾಭಾರತದ ಮೂರನೆಯ ಆವೃತ್ತಿಯನ್ನು ‘ಸೌತಿ’ ಬರೆದ ಎನ್ನುತ್ತದೆ” (ಪು.ಸಂ. 391) ಎನ್ನುತ್ತಾರೆ. ಮುಂದುವರಿದು, “ಮಹಾಭಾರತದ ರಚನೆಯ ವಿಷಯದಲ್ಲಿ ಗೀತೆಯನ್ನು ಜೋಡಿಸುವ ತಿಲಕರ ಉದ್ದೇಶ ಸ್ಪಷ್ಟವಿದೆ. ಅವರು ಭಾವಿಸುವಂತೆ ಮಹಾಭಾರತದ ಗೊತ್ತಿರುವ ಕಾಲವನ್ನು ಇಟ್ಟುಕೊಂಡು ಗೀತೆಯ ಗೊತ್ತಿಲ್ಲದಿರುವ ಕಾಲವನ್ನು ತೀರ್ಮಾನಿಸುವುದಾಗಿದೆ” (ಪು.ಸಂ. 393) ಎಂದು ಅಭಿಪ್ರಾಯಪಡುತ್ತಾರೆ.

    “ಮಹಾಭಾರತ ಮತ್ತು ಭಗವದ್ಗೀತೆಗಳ ಅವಿನಾಭಾವ ಸಂಬಂಧವನ್ನು ಸ್ಥಾಪಿಸಲು ತಿಲಕರು ಬಳಸಿರುವ ಆಧಾರವೇ ದುರಾದೃಷ್ಟವಶಾತ್ ಅವರ ವಾದದ ಅತ್ಯಂತ ದುರ್ಬಲ ಭಾಗವಾಗಿದೆ. ಗೀತೆ ಮಹಾಭಾರತದ ಒಂದು ಭಾಗ. ಇವೆರಡರ ಕರ್ತೃ ವ್ಯಾಸ. ಇದು ತಿಲಕರ ವಾದ. ಇದನ್ನು ಒಪ್ಪಿಕೊಂಡರೆ ಸತ್ಯಕ್ಕೆ ಬದಲಾಗಿ ಮಿಥ್ಯೆಯನ್ನು ಒಪ್ಪಿಕೊಂಡಂತಾಗುತ್ತದೆ. ವ್ಯಾಸ ಎನ್ನುವುದು ಗುರುತಿಸಲು ಸಾಧ್ಯವಾದ ಯಾವುದೋ ಒಬ್ಬ ವ್ಯಕ್ತಿಯ ಹೆಸರೆಂದು ಅದು ಭಾವಿಸುತ್ತದೆ. ಮಹಾಭಾರತದ ಕರ್ತೃವಿನ ಹೆಸರು ವ್ಯಾಸ. ಪುರಾಣಗಳ ಕರ್ತೃ ವ್ಯಾಸ. ಭಗವದ್ಗೀತೆಯ ಕರ್ತೃ ವ್ಯಾಸ ಮತ್ತು ಬ್ರಹ್ಮಸೂತ್ರಗಳ ಕರ್ತೃ ವ್ಯಾಸ ಎಂಬುದರಿಂದ ಇದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಎಲ್ಲ ಕೃತಿಗಳ ಕರ್ತೃ ವ್ಯಾಸ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇವುಗಳಿಗೆ ಅನೇಕ ಶತಮಾನಗಳಷ್ಟು ದೀರ್ಘಕಾಲ ಒಂದಕ್ಕೊಂದು ಅಂತರವಿದೆ. ತಮ್ಮ ಕೃತಿಗಳಿಗೆ ಹೆಚ್ಚಿನ ಅಧಿಕೃತತೆಯನ್ನು ಒದಗಿಸುವುದಕ್ಕಾಗಿ ಸಂಪ್ರದಾಯ ಶರಣ ಲೇಖಕರು ಪೂಜಾರ್ಹ ಹೆಸರುಗಳನ್ನು ಕಾವ್ಯನಾಮಗಳನ್ನಾಗಿ ಇಟ್ಟುಕೊಳ್ಳುವ ಹವ್ಯಾಸದಲ್ಲಿದ್ದದ್ದು ಗೊತ್ತಿರುವ ವಿಚಾರ. ಗೀತೆಯ ಕರ್ತೃ ವ್ಯಾಸನಾದರೆ ಅವನು ಬೇರೊಬ್ಬ ವ್ಯಾಸನಿರಬೇಕು. ಗೀತೆ ಮತ್ತು ಮಹಾಭಾರತದ ರಚನೆ ಏಕಕಾಲಿಕ ಎನ್ನುವ ತಿಲಕರ ವಾದವನ್ನು ವಿರೋಧಿಸುವ ಇನ್ನೊಂದು ವಾದವಿರುವಂತೆ ಕಾಣುತ್ತದೆ. ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ. ಪುರಾಣಗಳೂ ಕೂಡ ಹದಿನೆಂಟು ಇವೆ. ಭಗವದ್ಗೀತೆಯಲ್ಲಿಯೂ ಹದಿನೆಂಟು ಅಧ್ಯಾಯಗಳಿರುವುದೂ ಕುತೂಹಲಕರ. ಈ ಸಾಮ್ಯತೆ ಏಕೆ? ಎಂದು ಪ್ರಶ್ನೆ. ಪ್ರಾಚೀನ ಭಾರತೀಯ ಲೇಖಕರು ಕೆಲವು ಹೆಸರುಗಳು ಮತ್ತು ಕೆಲವು ಸಂಖ್ಯೆಗಳು ಪಾವಿತ್ರ‍್ಯತೆಯಿಂದ ಕೂಡಿವೆ ಎಂದು ಭಾವಿಸಿದ್ದರು ಎಂಬುದೇ ಉತ್ತರ. ವ್ಯಾಸನ ಹೆಸರು ಮತ್ತು 18ನೇ ಸಂಖ್ಯೆ ಇದಕ್ಕೆ ಉದಾಹರಣೆಗಳು. ಭಗವದ್ಗೀತೆಯ ಅಧ್ಯಾಯಗಳು 18 ಪವಿತ್ರವೆಂದು ಯಾರು ಹೇಳಿದ್ದು? ಮಹಾಭಾರತವೇ? ಗೀತೆಯೇ? ಮಹಾಭಾರತವಾದರೆ, ಗೀತೆ ಮಹಾಭಾರತದ ನಂತರ ರಚಿತವಾಗಿರಬೇಕು. ಗೀತೆಯಾದರೆ, ಮಹಾಭಾರತವು ಗೀತೆಯ ನಂತರ ರಚಿತವಾಗಿರಬೇಕು. ಒಟ್ಟಿನಲ್ಲಿ ಇವೆರಡೂ ಏಕಕಾಲದಲ್ಲಿ ರಚಿತವಾಗಿರಲು ಸಾಧ್ಯವಿಲ್ಲ” (ಪು.ಸಂ. 393- 394) ಎಂದು ತಿಳಿಸುತ್ತಾರೆ.

    ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಉತ್ಪತ್ತಿ, ವಿಕಾಸ ಹೇಗಾಯಿತು?

    ಮುಂದುವರಿದು ಬಾಬಾಸಾಹೇಬರು, ಕಾಲಕಾಲಕ್ಕೆ ಭಗವದ್ಗೀತೆಯು ಮಾರ್ಪಾಡು ಕಂಡಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತಾರೆ. “ಕೃಷ್ಣನನ್ನು ಪರಮೇಶ್ವರನ ಸ್ಥಾನಕ್ಕೆ ಏರಿಸಿದ ಮೂರನೆಯ ಸೇರ್ಪಡೆ ಮೂಲ ಭಗವದ್ಗೀತೆಗೆ ಗುಪ್ತರ ಸಾಮ್ರಾಜ್ಯದ ಕಾಲದಲ್ಲಿ ನಡೆಯಿತು. ಕಾರಣ ಸ್ಪಷ್ಟವಿದೆ. ಗುಪ್ತರಾಜರ ವಿರೋಧಿಗಳಾದ ಶಕ ರಾಜರು ಮಹಾದೇವನನ್ನು ಅವರ ಮನೆ ದೇವರನ್ನಾಗಿ ಮಾಡಿಕೊಂಡರು. ಬ್ರಾಹ್ಮಣರಿಗೆ ಧರ್ಮ ಯಾವಾಗಲೂ ಒಂದು ವ್ಯಾಪಾರ. ಅವರ ಭಕ್ತಿ ಎಂದೂ ಒಂದೇ ದೇವರಿಗೆ ಸೀಮಿತವಲ್ಲ. ಆದರೆ ಆಳುವ ದೊರೆಗಳನ್ನು ಸಂತೃಪ್ತಗೊಳಿಸಲು ಅವರ ಮನೆದೇವರನ್ನು ಉನ್ನತವೂ ಪ್ರಬಲವೂ ಆದ ಪರಮೇಶ್ವರನ ಸ್ಥಾನಕ್ಕೆ ಏರಿಸಿ ಅವನನ್ನು ಪೂಜಿಸತೊಡಗಿದರು. ಈ ವಿವರಣೆ ಸರಿಯಾಗಿದ್ದರೆ ಮೂಲ ಭಗವದ್ಗೀತೆಗೆ ಈ ಸೇರ್ಪಡೆಯು ಕ್ರಿ.ಶ. 400ರಿಂದ 464ರಲ್ಲಿ ಆಗಿರಬೇಕು. ಬೌದ್ಧಧರ್ಮಕ್ಕಿಂತ ಭಗವದ್ಗೀತೆ ಹಿಂದಿನದು ಎಂದು ಹೇಳುವ ಪ್ರಯತ್ನ ಸಫಲವಾಗುವುದಿಲ್ಲವೆಂದು ಈ ಎಲ್ಲದರಿಂದ ದೃಢವಾಗುತ್ತದೆ. ಬುದ್ಧ ಮತ್ತು ಅವನ ಕ್ರಾಂತಿಕಾರಿ ಉಪದೇಶದ ಬಗ್ಗೆ ದ್ವೇಷವನ್ನು ಬೆಳೆಸಿಕೊಂಡವರು ಮನಸೇಚ್ಛೆ ಚಿಂತಿಸುವ ಫಲವೇ ಇದು. ಇತಿಹಾಸ ಅದನ್ನು ಬೆಂಬಲಿಸುವುದಿಲ್ಲ. ತಾತ್ವಿಕ ಮೌಲ್ಯವುಳ್ಳ ಭಗವದ್ಗೀತೆಯ ಭಾಗಗಳಂತೂ ಕಾಲದ ದೃಷ್ಟಿಯಿಂದ ಬುದ್ಧನ ತತ್ವಗಳಿಗೂ ಮತ್ತು ಜೈಮಿನಿ ಮತ್ತು ಬಾದರಾಯಣನ ಸೂತ್ರಗಳಿಗೂ ಅನಂತರ ಬಂದುವೆಂದು ಇತಿಹಾಸ ಅಸಾಧಾರಣವಾಗಿ ಸಾಧಿಸುತ್ತದೆ” (ಪು.ಸಂ. 397) ಎಂಬ ನಿರ್ಧಾರಕ್ಕೆ ಬರುತ್ತಾರೆ.

    ಬಾಬಾಸಾಹೇಬರು ಬರೆದ ‘ಪ್ರತಿಕ್ರಾಂತಿಯ ತಾತ್ವಿಕ ಸಮರ್ಥನೆ’ ಲೇಖನ ಒಂದು ಅಪೂರ್ಣ ಬರೆಹ. ಬಹುಶಃ ಅಂಬೇಡ್ಕರ್ ಅವರು ಈ ಲೇಖನವನ್ನು ಪೂರ್ಣಗೊಳಿಸಿದ್ದಲ್ಲಿ, ಮತ್ತಷ್ಟು ವಿಚಾರಗಳು ನಮಗೆ ಲಭ್ಯವಾಗುತ್ತಿದ್ದವೇನೋ. ಈ ಲೇಖನವನ್ನು ಒಳಗೊಂಡಿರುವ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯಲ್ಲಿ ‘ಬ್ರಾಹ್ಮಣ ಸಾಹಿತ್ಯ’ ಎಂಬ ಭಾಗವು ಬರುತ್ತದೆ. ಭಗವದ್ಗೀತೆಯ ಕಾಲದ ಬಗ್ಗೆ ಅಲ್ಲಿಯೂ ಉಲ್ಲೇಖಿಸುತ್ತಾರೆ. ಅಲ್ಲಿ ಡಿ.ಡಿ. ಕೋಸಂಬಿಯವರ ವಾದವನ್ನು ಅಂಬೇಡ್ಕರ್ ಒಪ್ಪುತ್ತಾರೆ.

    “ಕೋಸಾಂಬಿಯವರದು ಇನ್ನೊಂದು ದೃಷ್ಟಿಕೋನವಿದ್ದು, ಅದಕ್ಕೆ ನಿಸ್ಸಂದಿಗ್ಧ ಸಾಕ್ಷಾಧಾರವಿದೆ. ಗೀತೆ’ಯು ಗುಪ್ತರ ದೊರೆ ಬಾಲಾದಿತ್ಯನ ಕಾಲದಲ್ಲೇ ರಚನೆಯಾಯಿತೆಂದು ಪ್ರೊ. ಕೋಸಾಂಬಿ ವಾದಿಸುತ್ತಾರೆ. ಬಾಲಾದಿತ್ಯನು ಆಂಧ್ರ ವಂಶವನ್ನು ನಿರ್ಮೂಲ ಮಾಡಿದ ಗುಪ್ತ ವಂಶಕ್ಕೆ ಸೇರಿದವರು. ಆತ ಪಟ್ಟಕ್ಕೆ ಬಂದಿದ್ದು ಕ್ರಿ.ಶ. 467ರಲ್ಲಿ. ‘ಗೀತೆ’ ಇಷ್ಟು ಈಚಿನದೆನ್ನಲು ಕೋಸಾಂಬಿಯವರು ಕೊಡುವ ಕಾರಣಗಳು ಎರಡು. ಕ್ರಿಸ್ತಶಕ 788ರಲ್ಲಿ ಹುಟ್ಟಿ 820ರಲ್ಲಿ ಮೃತಪಟ್ಟ ಶಂಕರಾಚಾರ್ಯರು ‘ಭಗವದ್ಗೀತೆ’ಗೆ ಭಾಷ್ಯ ಬರೆಯುವ ಮುನ್ನ ಅದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಶಂಕರಾಚಾರ್ಯರಿಗೆ ಕೇವಲ 50 ವರ್ಷಗಳ ಮುಂಚಿನ ಶಾಂತರಕ್ಷಿತನ ‘ತತ್ವ ಸಂಗ್ರಹ’ದಲ್ಲಂತೂ ಗೀತೆಯ ಪ್ರಸ್ತಾಪವಿಲ್ಲ. ಇನ್ನು ಎರಡನೇ ಕಾರಣವೆಂದರೆ ವಸುಬಂಧ ಎಂಬಾತ ‘ವಿಜ್ಞಾನವಾದ’ ಎಂಬ ವಿಚಾರ ಪಂಥವನ್ನು ಹುಟ್ಟಿ ಹಾಕಿದ. ‘ಬ್ರಹ್ಮಸೂತ್ರ ಭಾಷ್ಯ’ದಲ್ಲಿ ಈ ವಿಜ್ಞಾನವಾದದ ವಿಮರ್ಶೆಯಿದೆ. ‘ಗೀತೆ’ಯಲ್ಲಿ ‘ಬ್ರಹ್ಮಸೂತ್ರ’ ಭಾಷ್ಯದ ಪ್ರಸ್ತಾಪವಿದೆ. ಈ ವಸುಬಂಧು ಗುಪ್ತರ ದೊರೆ ಬಾಲಾದಿತ್ಯನ ಕುಲಗುರುವಾಗಿದ್ದ. ಆದ್ದರಿಂದ ‘ಭಗವದ್ಗೀತೆ’ಯು ಬಾಲಾದಿತ್ಯನ ಕಾಲದಲ್ಲಿ ಅಂದರೆ ಕ್ರಿ.ಶ. 467ರ ಸುಮಾರಿಗೆ ರಚಿತವಾಗಿರಬೇಕು ಅಥವಾ ಕೊನೆ ಪಕ್ಷ ಮೂಲ ‘ಗೀತೆ’ಗೆ ಆ ಕಾಲದಲ್ಲಿ ಕೆಲವು ಭಾಗಗಳನ್ನು ಸೇರಿಸಿರಬೇಕು” (ಸಂಪುಟ 3, ಪು.ಸಂ. 266- 267) ಎಂಬ ವೈಜ್ಞಾನಿಕ ದೃಷ್ಟಿಗೆ ಬಾಬಾಸಾಹೇಬರು ಸಹಮತ ವ್ಯಕ್ತಪಡಿಸುತ್ತಾರೆ.

    DD Kosamba
    ಡಿ.ಡಿ. ಕೋಸಂಬಿ

    ಯುದ್ಧದ ಸಮರ್ಥನೆ

    ಭಗವದ್ಗೀತೆಯ ಯುದ್ಧಪ್ರೀತಿ ಆತಂಕಕಾರಿಯಾಗಿದೆ. ಅರ್ಜುನನಲ್ಲಿದ್ದ ಯುದ್ಧಭೀತಿಯನ್ನು ಹೋಗಲಾಡಿಸಲು ಕೃಷ್ಣನಾಡುವ ಮಾತುಗಳು ಅಂದಿನ ಅಹಿಂಸಾಧರ್ಮವನ್ನು ಉಲ್ಲಂಘಿಸುವ ಗುರಿಯನ್ನು ಹೊಂದಿರುವಂತೆ ಕಾಣುತ್ತವೆ. ಬೌದ್ಧಧರ್ಮದ ಪ್ರಭಾವವನ್ನು ಇಲ್ಲವಾಗಿಸಲು ಕೊಲೆಯನ್ನು ಸಮರ್ಥಿಸುವ ಕೆಲಸವನ್ನು ಗೀತೆ ಮಾಡುತ್ತದೆ ಎಂಬ ಅಭಿಪ್ರಾಯನ್ನು ಅಂಬೇಡ್ಕರ್ ತಾಳುತ್ತಾರೆ.

    “ಬೌದ್ಧ ಧರ್ಮದ ಉಗ್ರದಾಳಿಯಲ್ಲಿ ಜೈಮಿನಿಯ ಪ್ರತಿಕ್ರಾಂತಿಕಾರಿ ಸಿದ್ಧಾಂತಗಳು ತತ್ತರಿಸತೊಡಗಿದ್ದವು. ಅವುಗಳಿಗೆ ಭಗವದ್ಗೀತೆಯ ಬೆಂಬಲವಿಲ್ಲದಿದ್ದರೆ ಕುಸಿದುಬೀಳುತ್ತಿದ್ದವು ಎಂಬುದರಲ್ಲಿ ಅನುಮಾನವಿಲ್ಲ. ಭಗವದ್ಗೀತೆ ನೀಡಿದ ಪ್ರತಿಕ್ರಾಂತಿಯ ಸಿದ್ಧಾಂತಗಳ ತಾತ್ವಿಕ ಸಮರ್ಥನೆಯನ್ನು ಭೇದಿಸುವುದೇನೂ ಕಷ್ಟವಲ್ಲ. ಕೊಲ್ಲುವುದೇ ಕ್ಷತ್ರಿಯನ ಕರ್ತವ್ಯವೆಂದು ಹೇಳುವ ಭಗವದ್ಗೀತೆಯ ತಾತ್ವಿಕ ಸಮರ್ಥನೆ, ಅತ್ಯಂತ ಕನಿಷ್ಠವಾಗಿ ಹೇಳುವುದಾದರೆ, ಬಾಲಿಶವಾಗಿದೆ. ಕೊಂದರೆ ಕೊಲೆಯಲ್ಲ, ಏಕೆಂದರೆ ಕೊಲೆಯಾಗುವುದು ದೇಹ, ಆತ್ಮವಲ್ಲ ಎಂದು ಹೇಳುವುದು ಎಂದೂ ಕೇಳರಿಯದಂತಹ ಕೊಲೆಯ ಸಮರ್ಥನೆಯಾಗಿದೆ. ಸಿದ್ಧಾಂತಗಳು ಜನರನ್ನು ಭೀತಿಗೊಳಿಸುತ್ತವೆ ಎಂದು ಕೆಲವರು ಹೇಳುವ ಸಿದ್ಧಾಂತಗಳಲ್ಲಿ ಇದೂ ಒಂದು. ಕೊಲೆಗಾಗಿ ವಿಚಾರಣೆಯನ್ನು ಎದುರಿಸುತ್ತಿರುವ ಕಕ್ಷಿದಾರನ ಪರವಾಗಿ ಕೃಷ್ಣ ವಕಾಲತ್ತು ವಹಿಸಿ ಭಗವದ್ಗೀತೆಯಲ್ಲಿ ಅವನೇ ಹೇಳಿರುವ ಸಮರ್ಥನೆಯನ್ನು ಮುಂದಿಟ್ಟರೆ ಅವನನ್ನು ಹುಚ್ಚಾಸ್ಪತ್ರೆಗೆ ಕಳುಹಿಸುವುದರಲ್ಲಿ ತಿಲ ಮಾತ್ರವು ಅನುಮಾನವಿಲ್ಲ” (ಪು.ಸಂ. 383) ಎಂದು ವ್ಯಂಗ್ಯವಾಡುತ್ತಾರೆ ಅಂಬೇಡ್ಕರ್.

    ಇದನ್ನೂ ಓದಿರಿ: ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’

    ಕೊನೆಯ ಮಾತು

    ಅಂಬೇಡ್ಕರ್ ಅವರು `ಗೀತೆ’ಯ ಕುರಿತು ನಡೆಸಿರುವ ಚಿಂತನೆಗಳು ಸಾಕ್ಷ್ಯಗಳನ್ನು ಒದಗಿಸಿವೆ. ಗೀತೆಯಲ್ಲಿನ ವೈರುಧ್ಯಗಳನ್ನು ಬಟಾಬಯಲು ಮಾಡಿವೆ. ಗೀತೆಯನ್ನು ದೈವೀಕರಿಸಲಾಗಿರುವ ಹುನ್ನಾರಗಳನ್ನು ಬಾಬಾಸಾಹೇಬರು ಪ್ರಶ್ನಿಸುತ್ತಾರೆ. ಹಲವು ಸಂಪ್ರದಾಯವಾದಿಗಳ ದೃಷ್ಟಿಕೋನವು ಅಂಬೇಡ್ಕರರ ತೀಕ್ಷ್ಣ ವಿದ್ವತ್ತಿನ ಮುಂದೆ ಮಂಕಾಗುತ್ತದೆ. ಮೌರ್ಯ ಸಾಮ್ರಾಜ್ಯದ ವಿರುದ್ಧ ಪ್ರತಿಕ್ರಾಂತಿ ಮಾಡಿದ ಪುಷ್ಯಶುಂಗನ ನಂತರದಲ್ಲಿ ರಚನೆಯಾದ ಮನುಸ್ಮೃತಿಯ ಚಹರೆಗಳನ್ನು ಭಗವದ್ಗೀತೆ ಹೊಂದಿತ್ತು. ಆ ಮೂಲಕ ಪ್ರತಿಗಾಮಿ ವಿಚಾರಧಾರೆಗಳಿಗೆ ಧಾರ್ಮಿಕ ಚೌಕಟ್ಟನ್ನು ಒದಗಿಸಲು ಬಳಕೆಯಾಯಿತು. ಜೊತೆಗೆ ಆ ಕಾಲದಲ್ಲಿ ಪ್ರಭಾವಿಸಿದ್ದ ಬುದ್ಧನ ಚಿಂತನೆಗಳನ್ನೂ ಒಳಗೊಂಡು ಮುನ್ನಡೆಯುವ ಅನಿವಾರ್ಯತೆ ಭಗವದ್ಗೀತೆಗೆ ಇತ್ತು. ಈ ಎಲ್ಲ ವಿಚಾರಗಳನ್ನು ಭಗವದ್ಗೀತಾವಾದಿ ಬ್ರಾಹ್ಮಣರು ಅಲ್ಲಗಳೆದರೂ ಸರಿಯಾದ ಸಾಕ್ಷ್ಯಗಳನ್ನು ಒದಗಿಸಲಾರರು ಎಂಬುದೇ ಅಂಬೇಡ್ಕರ್ ಅವರ ಪ್ರಬಲ ಪ್ರತಿಪಾದನೆ.

    yathiraj 3
    ಯತಿರಾಜ್‌ ಬ್ಯಾಲಹಳ್ಳಿ
    + posts

    ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

    ಪೋಸ್ಟ್ ಹಂಚಿಕೊಳ್ಳಿ:

    ಯತಿರಾಜ್‌ ಬ್ಯಾಲಹಳ್ಳಿ
    ಯತಿರಾಜ್‌ ಬ್ಯಾಲಹಳ್ಳಿ
    ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related