ಬೆಂಗಳೂರು ಬಂದ್ | ಫ್ರೀಡಂ ಪಾರ್ಕ್‌ನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಆಟೋ, ಕ್ಯಾಬ್ ಚಾಲಕರು

Date:

ಸೆ.11ರಂದು ರಾಜ್ಯ ರಾಜಧಾನಿ ಬೆಂಗಳೂರು ಖಾಸಗಿ ಬಸ್‌, ಕ್ಯಾಬ್ ಹಾಗೂ ಆಟೋಗಳ ಸಂಚಾರವಿಲ್ಲದೆ ಸಂಪೂರ್ಣ ಸ್ತಬ್ದವಾಗಿತ್ತು. ಭಾನುವಾರ (ಸೆ.10) ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆಯವರೆಗೆ ಖಾಸಗಿ ವಾಹನಗಳ ಸಂಚಾರಕ್ಕೆ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿತ್ತು. 37 ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಟ್ಯಾಕ್ಸಿ ಚಾಲಕರು ಹಾಗೂ ಆಟೋ ಚಾಲಕರು ಬೆಂಗಳೂರಿನ ಏಳು ಕಡೆಯಿಂದ ಮೆಜೆಸ್ಟಿಕ್‌ವರೆಗೂ ರ್‍ಯಾಲಿ ನಡೆಸಿದ್ದಾರೆ. ಬಳಿಕ, ಮೆಜೆಸ್ಟಿಕ್​ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಜಾಥಾ ನಡೆಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಮಂದಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಪ್ರತಿಭಟನಾ ಧರಣಿ ನಡೆಸಿದ್ದಾರೆ. ರ್‍ಯಾಪಿಡೋ ಬೈಕ್ ಟ್ಯಾಕ್ಸಿ ಸಂಪೂರ್ಣ ನಿಷೇಧ ಮಾಡಬೇಕು ಎಂಬ ಕೂಗು ಅವರಾದ್ದಾಗಿತ್ತು. ಇನ್ನೂ ಶಕ್ತಿ ಯೋಜನೆಯನ್ನು ಕೈಬಿಡಬೇಕು ಇದರಿಂದ ಆರ್ಥಿಕ ಹೊಡೆತ ಬೀಳುತ್ತಿದೆ. ರ್‍ಯಾಪಿಡೋ ಬಂದು ಆರು ವರ್ಷ ಕಳೆದಿವೆ. ಕಳೆದ ಐದು ವರ್ಷದಿಂದ ಈ ಸಮಸ್ಯೆ ವಿರುದ್ಧ ಧ್ವನಿಯೆತ್ತಿ ಹೋರಾಟ ಮಾಡುತ್ತಲೇ ಇದ್ದೇವೆ. ಆದರೂ ಬದಲಾಗುತ್ತಿರುವ ಸರ್ಕಾರಗಳು ಬರೀ ಭರವಸೆ ನೀಡಿ ಕಾಲಹರಣ ಮಾಡುತ್ತಿವೆಯೇ ಹೊರತು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಧರಣಿನಿರತರು ಕಿಡಿಕಾರಿದ್ದಾರೆ.

ಬಂದ್‌ ಹಿನ್ನೆಲೆಯಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ‘ಯೆಲ್ಲೋ ಬೋರ್ಡ್‌’ಗಳು ರಸ್ತೆಗಿಳಿದಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಆಟೋ ಚಾಲಕರು ದುಪ್ಪಟ್ಟು ಹಣ ಕೇಳಿ ಬಾಡಿಗೆ ಓಡಿಸುತ್ತಿದ್ದರು. ಇನ್ನೊಂದು ಕಡೆ ಈ ದಿನ ದುಡಿದರೆ ನಮ್ಮ ಹೊಟ್ಟೆ ತುಂಬುತ್ತದೆ ಎಂದು ಕೆಲವು ಚಾಲಕರು ಕ್ಯಾಬ್‌ ಸೇವೆ ನೀಡುತ್ತಿದ್ದರು. ಇದನ್ನು ಕಂಡ ಪ್ರತಿಭಟನಾನಿರತರು ಗಾಡಿ ಕೀ ಕಿತ್ತುಕೊಂಡು ಹಲ್ಲೆ ನಡೆಸುವುದು, ಕಾರಿನ ಗಾಜಿಗೆ ಕಲ್ಲು ಮತ್ತು ಮೊಟ್ಟೆ ಎಸೆಯುವುದು ನಡೆಸುತ್ತಿದ್ದರು. ಅಲ್ಲದೇ, ಕೆಲವು ಚಾಲಕರಿಗೆ ಹಾರ ಹಾಕಿ ಸನ್ಮಾನ ಮಾಡುವುದು ಕಂಡು ಬಂದಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಂಗಳೂರು ಬಂದ್

ಅಲ್ಲದೆ, ಹಲವೆಡೆ ಪ್ರತಿಭಟನಾನಿರತ ಚಾಲಕರು ರ್‍ಯಾಪಿಡೋ ಬೈಕ್ ಬುಕ್ ಮಾಡಿ, ಬೈಕ್ ಸವಾರರನ್ನು ತಾವು ಇರುವ ಕಡೆ ಕರೆಸಿ ಅವರ ಹೆಲ್ಮೆಟ್‌ ಕಸಿದುಕೊಂಡು ಥಳಿಸುತ್ತಿರುವ ಘಟನೆ ನಡೆದಿದೆ. ರಸ್ತೆಗೆ ಇಳಿದ ಆಟೋ, ಕಾರುಗಳನ್ನು ತಡೆಯುತ್ತಿರುವ ಚಾಲಕರು, ಟಯರ್​ಗಳ ಗಾಳಿ ತೆಗೆದು ಆಕ್ರೋಶ ಹೊರಹಾಕುತ್ತಿದ್ದರು.

ಇನ್ನೂ ಈ ಬಾರಿಯ ಬೆಂಗಳೂರಿನ ಬಂದ್‌ನಲ್ಲಿ ಚಾಲಕರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುವ ಬದಲಾಗಿ ಹಲ್ಲೆ, ಗೂಂಡಾಗಿರಿ, ದುರ್ವರ್ತನೆ ತೋರಿದ ಘಟನೆಗಳೇ ಹೆಚ್ಚಾಗಿ ಕಂಡು ಬಂದಿವೆ.  

ಪೊಲೀಸ್‌ ಸರ್ಪಗಾವಲು

ಬೆಂಗಳೂರಿನಾದ್ಯಂತ ಪ್ರಮುಖ ಬಸ್​ ನಿಲ್ದಾಣಗಳಲ್ಲಿ ಎಸಿಪಿ, ಇನ್ಸ್​​ಪೆಕ್ಟರ್​​​ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಭದ್ರತೆ ನಿಯೋಜನೆ ಮಾಡಲಾಗಿತ್ತು.

ಶಾಂತಿನಗರ, ಮೌರ್ಯ ಸರ್ಕಲ್​, ಕೋರಮಂಗಲ, ಶಿವಾನಂದ ಸರ್ಕಲ್​, ಕಲಾಸಿಪಾಳ್ಯ, ಪೀಣ್ಯ, ಮೈಸೂರು ರಸ್ತೆ, ಸ್ಯಾಟ್​​ ಲೈಟ್​​​ ಬಸ್ ನಿಲ್ದಾಣ, ಹೆಬ್ಬಾಳ, ಯಲಹಂಕ, ಕೆ.ಆರ್​.ಪುರಂ, ಕೆಂಗೇರಿ ಸೇರಿದಂತೆ ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆ ನಿಯೋಜಿಸಲಾಗಿತ್ತು. ಪ್ರತಿಭಟನೆ ಮಾಡುವ ಸ್ಥಳವಾದ ಫ್ರೀಡಂ ಪಾರ್ಕ್‌ನಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಪೊಲೀಸ್

ಪ್ರಯಾಣಿಕರ ಪರದಾಟ

ಬೆಂಗಳೂರು ಬಂದ್‌ನ ಕಾವು ಪ್ರಯಾಣಿಕರಿಗೆ ತಟ್ಟಿದೆ. ಜನರು ಪ್ರಯಾಣಿಸಲು ಬಿಎಂಟಿಸಿ, ಮೆಟ್ರೋ ಮಾತ್ರ ಅವಲಂಬಿಸಬೇಕಾಗಿತ್ತು. ಆಟೋ ಸೇರಿದಂತೆ ಖಾಸಗಿ ಬಸ್‌, ಕ್ಯಾಬ್‌ ಸಂಪೂರ್ಣ ಬಂದಾಗಿತ್ತು. ಮುಂಜಾನೆಯೇ ಬೇರೆ, ಬೇರೆ ಊರುಗಳಿಂದ ಮೆಜೆಸ್ಟಿಕ್​ಗೆ ಆಗಮಿಸಿದ ಜನರು ಆಟೋಗಳು ಇಲ್ಲದೆ ಬಿಎಂಟಿಸಿ ಬಸ್‌ಗಳತ್ತ ಮುಖ ಮಾಡಿದರು. ಲಗೇಜ್ ಹೆಚ್ಚಿದೆ ಬಸ್​ನಲ್ಲಿ ಹೋಗಲು ಆಗದು, ಆಟೋನೇ ಬೇಕು ಎನ್ನುವವರಿಗೆ ಭಾರಿ ಸಮಸ್ಯೆ ಎದುರಾಯಿತು.

ಬೆಂಗಳೂರು ಬಂದ್

ಆಟೋ ಚಾಲಕರ ಬೇಡಿಕೆಗಳು

 • ರ್‍ಯಾಪಿಡೋ ಬೈಕ್ ಟ್ಯಾಕ್ಸಿ ಸಂಪೂರ್ಣ ಬಂದ್ ಮಾಡಬೇಕು
 • ಆಟೋ ಚಾಲಕರಿಗೆ ₹10 ಸಾವಿರ ಮಾಸಿಕ ಪರಿಹಾರ
 • ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ
 • ರಾಜ್ಯ ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ಧಪಡಿಸಬೇಕು
 • ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಇಂದಿರಾ ಕ್ಯಾಂಟೀನ್ ಇರಬೇಕು
 • ಎಲೆಕ್ಟ್ರಿಕ್ ಆಟೋಗಳಿಗೆ ಸಹ ರಹದಾರಿ ನೀಡಬೇಕು

ಟ್ಯಾಕ್ಸಿ ಚಾಲಕರ ಬೇಡಿಕೆಗಳು

 • ಜೀವಾವಧಿ ತೆರಿಗೆ ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಿ
 • ಟ್ಯಾಕ್ಸಿ ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
 • ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿದ್ಯಾಭ್ಯಾಸಕ್ಕೆ ಧನಸಹಾಯ

ಬೆಂಗಳೂರು ಬಂದ್

ಖಾಸಗಿ ಬಸ್ ಚಾಲಕರ ಬೇಡಿಕೆಗಳು

 • ಖಾಸಗಿ ಬಸ್​ಗಳಿಗೂ ‘ಶಕ್ತಿ’ ಯೋಜನೆಯನ್ನು ವಿಸ್ತರಿಸಬೇಕು
 • ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು
 • ಕಿ.ಮೀ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು

ತಾತ್ಕಾಲಿಕವಾಗಿ ಬಂದ್ ವಾಪಾಸ್ ಪಡೆದ ಚಾಲಕರು

ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲಕರನ್ನು ಉದ್ದೇಶಿಸಿ ಮಾತನಾಡಿದರು, “ಖಾಸಗಿ ಸಾರಿಗೆ ಕೆಲ ಬೇಡಿಕೆ ಈಡೇರಿಸಲು ಭರವಸೆ ನೀಡಿದ್ದೇನೆ. 32 ಬೇಡಿಕೆಗಳ ಪೈಕಿ 27 ಬೇಡಿಕೆ ಈಡೇರಿಸಲಾಗುವುದು. ಇನ್ನೂ ಕೆಲವು ಬೇಡಿಕೆ ಈಡೇರಿಸಲು ಸಮಯ ಬೇಕಾಗುತ್ತದೆ. ನಾನು ಖಾಸಗಿ ಸಾರಿಗೆಯವರ ಪರ ಇದ್ದೇನೆ. ಸದ್ಯದಲ್ಲೇ ಹೊಸ ಆ್ಯಪ್ ಮಾಡಿಕೊಡುತ್ತೇವೆ. ಬಸ್ ಮಾಲೀಕರ ಸಂಘದ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಜತೆಗೆ ಚರ್ಚೆ ಆಗಬೇಕು” ಎಂದು ತಿಳಿಸಿದ್ದಾರೆ.

ಬೆಂಗಳೂರು ಬಂದ್

ಬೇಡಿಕೆ ಈಡೇರದಿದ್ದರೆ ಬುಧವಾರ ಮತ್ತೆ ಹೋರಾಟ ಆರಂಭ

ಸಚಿವ ರಾಮಲಿಂಗಾರೆಡ್ಡಿ ಅವರ ಭರವಸೆ ಮೇಲೆ ಬೆಂಗಳೂರು ಬಂದ್​ ಅನ್ನು ಮಧ್ಯಾಹ್ನ ಖಾಸಗಿ ಸಾರಿಗೆ ಒಕ್ಕೂಟ​ ಹಿಂಪಡೆಯಿತು. “32 ಬೇಡಿಕೆಗಳ ಪೈಕಿ 27 ಬೇಡಿಕೆ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಹಾಗಾಗಿ, ಬಂದ್​ ಹಿಂಪಡೆಯುತ್ತಿದ್ದೇವೆ. ಟ್ಯಾಕ್ಸ್​ ಕಡಿಮೆ ಮಾಡುವ ಬಗ್ಗೆ ಕೂಡ ಭರವಸೆ ನೀಡಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಬುಧವಾರ ಮತ್ತೆ ಹೋರಾಟ ಮಾಡುತ್ತೇವೆ” ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.

ಈ ದಿನ.ಕಾಮ್‌ ಜತೆಗೆ ಮಾತನಾಡಿದ ಚಾಲಕರು ಹೇಳಿದ್ದೇನು?

ಆಟೋ ಚಾಲಕಿ ಮಲ್ಲಮ್ಮ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಕಳೆದ ಎಂಟು ವರ್ಷಗಳಿಂದ ನಾನು ಆಟೋ ಓಡಿಸುತ್ತಿದ್ದೇನೆ. ಈಗ 32 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಇದರಲ್ಲಿ ಪ್ರಮುಖವಾದ ಬೇಡಿಕೆ ರ್‍ಯಾಪಿಡೋ ಬೈಕ್ ಬಂದ್ ಮಾಡುವುದು. ಇದರಿಂದ ನಮಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಕಳೆದ ಐದು ವರ್ಷಗಳಿಂದ ನಾವು ಈ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಸಮಸ್ಯೆಯ ಬಗ್ಗೆ ಮೂರ್ನಾಲ್ಕು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ಹೋರಾಟ ರ್‍ಯಾಪಿಡೋ ಸಂಸ್ಥೆಯ ವಿರುದ್ಧ ಚಾಲಕರ ವಿರುದ್ಧವಲ್ಲ” ಎಂದು ಹೇಳಿದರು.

ಆಟೋ ಚಾಲಕಿ ಜಾನ್ಸಿ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ನಾನು ಕಳೆದ ಎಂಟೊಂಭತ್ತು ವರ್ಷಗಳಿಂದ ಆಟೋ ಓಡಿಸುತ್ತಿದ್ದೇನೆ. ನಮಗೆ ರ್‍ಯಾಪಿಡೋ ಬೈಕ್ ಇರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಕೊರೊನಾ ಸಮಯದಲ್ಲಿ ಸರ್ಕಾರ ಹಲವಾರು ಚೀನಾ ಆಪ್‌ಗಳನ್ನು ಡಿಲೀಟ್ ಮಾಡಿದೆ. ಆದರೆ, ಇದೊಂದು ರ್‍ಯಾಪಿಡೋ ಆಪ್ ಡಿಲೀಟ್‌ ಮಾಡದೆ ಇರುವುದಕ್ಕೆ ಕಾರಣ ಏನು?” ಎಂದು ಪ್ರಶ್ನಿಸಿದರು.

ಬೆಂಗಳೂರು ಬಂದ್

“ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಂತ ಪಕ್ಷಗಳು ಬದಲಾಗಿ ಹೊಸ ಸರ್ಕಾರ ಬರುತ್ತಿದೆ. ಆದರೆ, ನಮ್ಮ ಆಟೋ ಚಾಲಕರ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ರ್‍ಯಾಪಿಡೋ ಬಂದು ಆರು ವರ್ಷ ಕಳೆದಿದೆ. ನಾವು ಈ ರ್‍ಯಾಪಿಡೋ ವಿರುದ್ಧ ನಾವು ಹೋರಾಟ ಆರಂಭಿಸಿ, ಐದು ವರ್ಷಗಳಾಯಿತು. ಆಟೋ ಚಾಲಕರಿಗೆ ಆಕಸ್ಮಿಕವಾಗಿ ಹೃದಯಾಘಾತವಾಗಿ ಸಾವನ್ನಪ್ಪಿದ್ದರೆ, ಸರ್ಕಾರದಿಂದ ಸಹಕಾರ ಬೇಕು. ಮಕ್ಕಳ ವಿದ್ಯಾಭ್ಯಾಕ್ಕಾಗಿ ಸ್ಕಾಲರ್‌ಶಿಪ್ ನೀಡಬೇಕು ಎಂಬ ಬೇಡಿಕೆಗಳಿವೆ” ಎಂದರು.

“ರ್‍ಯಾಪಿಡೋ ಬೈಕ್ ಅನಧಿಕೃತ ಅಂತ ಗೊತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಲೀಗಲ್‌ಗೂ ಇಲ್ಲೀಗಲ್‌ಗೂ ಇರುವ ವ್ಯತ್ಯಾಸ್ ಸರ್ಕಾರಕ್ಕೆ ಗೊತ್ತಾಗಲ್ವಾ? ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನಾವು ಕಾಣಿಸುವುದಿಲ್ವಾ? ಇದು ಒಬ್ಬರ ಕಷ್ಟಾನಾ? ಬರೋಬ್ಬರಿ 3 ಲಕ್ಷ ಆಟೋ ಚಾಲಕರ ಸಮಸ್ಯೆ. ಬೇರೆ ವೃತ್ತಿಯ ಜತೆಗೆ ರ್‍ಯಾಪಿಡೋ ಬೈಕ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ನಾವು ಆಟೋದವರು ಈ ವೃತ್ತಿಯೊಂದನ್ನೇ ನಂಬಿಕೊಂಡಿದ್ದೇವೆ. ರ್‍ಯಾಪಿಡೋ ಬೈಕ್ ಹುಡುಗಿಯರಿಗೆ ಸುರಕ್ಷಿತವಲ್ಲ. ಇಷ್ಟೇಲ್ಲಾ ಅನ್ಯಾಯ ನಡಿತಿದೆ. ಈ ಕೇಸ್ ಕೋರ್ಟ್‌ ಅಲ್ಲಿ ಇದೆ ಅಂದ್ರೆ ಈಗ ಯಾಕೆ ರ್‍ಯಾಪಿಡೋ ಓಡಿಸಲು ಅನುಮತಿ ನೀಡಬೇಕು” ಎಂದು ಆಟೋ ಚಾಲಕ ದೇವರಾಜ್ ಈ ದಿನ.ಕಾಮ್‌ಗೆ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಬ್ಬೆದ್ದು ನಾರುತ್ತಿರುವ ಪಾರಂಪರಿಕ ರಸೆಲ್ ಮಾರುಕಟ್ಟೆ: ಕ್ರಮ ಕೈಗೊಳ್ಳದ ಬಿಬಿಎಂಪಿ

“ಸಿದ್ಧರಾಮಯ್ಯ ಅವರು ನಮ್ಮ ಸರ್ಕಾರ ಬಂದಾಗ ರ್‍ಯಾಪಿಡೋ ಬಂದ್ ಮಾಡುತ್ತೇವೆ ಎಂದು ಹೇಳಿದ್ದರೂ ಆದರೆ, ಸರ್ಕಾರ ಬಂದು ಇಷ್ಟು ದಿನ ಕಳೆದರೂ ನಮ್ಮ ಬಗ್ಗೆ ಯೋಚಿಸುತ್ತಿಲ್ಲ. ನಮಗೆ ಯಾವ ಪರಿಹಾರವೂ ಬೇಡ, ಇದೊಂದು ರ್‍ಯಾಪಿಡೋ ಸಮಸ್ಯೆ ಪರಿಹರಿಸಿದರೇ, ಸಾಕು ಇನ್ನೂ ಮುಂದೆ ನಾವು ಕಾಂಗ್ರೆಸ್‌ ಸರ್ಕಾರವನ್ನೇ ಆರಿಸಿ ತರುತ್ತೇವೆ. ಕಳೆದ 20 ವರ್ಷಗಳಿಂದ ಆಟೋ ಓಡಿಸುತ್ತಿದ್ದೇನೆ. ಇನ್ನೂ ಕೂಡ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ” ಎಂದು ಹೇಳಿದರು.

ಬೆಂಗಳೂರು ಆಟೋ ಸೇನೆಯ ಆಟೋ ಚಾಲಕ ಪುಟ್ಟು ಈ ದಿನ.ಕಾಮ್‌ ಜತೆಗೆ ಮಾತನಾಡಿ, “ನಾವು ಕಟ್ಟುವ ತೆರಿಗೆ ನಮಗೆ ವಾಪಾಸ್ ನೀಡಲು ಇಷ್ಟೊಂದು ಮೀನಮೇಷ್ ಮಾಡುತ್ತಿದ್ದಾರೆ. ಸಾರ್ವಜನಿಕರ ಸೇವೆ ಮಾಡಲು ಟ್ಯಾಕ್ಸ್‌ ಕಟ್ಟಿ ಯೆಲ್ಲೋ ಬೋರ್ಡ್‌ನಲ್ಲಿ ವಾಹನ ಚಲಾವಣೆ ಮಾಡುತ್ತಿದ್ದೇವೆ. ಆದರೂ, ಇಲ್ಲಿನ ಸರ್ಕಾರ ವೈಟ್‌ ಬೋರ್ಡ್‌ ಅವರಿಗೆ ಬೈಕ್‌ ಟ್ಯಾಕ್ಸಿ ನಡೆಸಲು ಅನುಮತಿ ನೀಡಲಾಗುತ್ತಿದೆ. ಈಗಾಗಲೇ ನಾಲ್ಕು ರಾಜ್ಯದಲ್ಲಿ ವೈಟ್‌ ಬೋರ್ಡ್‌ ಟ್ಯಾಕ್ಸಿ ಬ್ಯಾನ್ ಮಾಡಲಾಗಿದೆ. ಈ ಯೋಜನೆ ನಮ್ಮ ಕರ್ನಾಟಕದಲ್ಲಿ ಏಕೆ ಬರುತಿಲ್ಲ. ಅದು ಕಳೆದ ಐದು ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ. ಆದರೂ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕ್ಕೊಳ್ಳುತ್ತಿಲ್ಲ. ನಮಗೆ ಯಾವ 10 ಸಾವಿರ ಪರಿಹಾರವೂ ಬೇಡ. ಮೊದಲನೆಯದಾಗಿ ನಮಗೆ ರ್‍ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಿದರೆ ಸಾಕು” ಎಂದರು.

ಬೆಂಗಳೂರು ಬಂದ್

ಆಟೋ ಚಾಲಕಿ ಪ್ರೀತಿ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಲಿಂಗತ್ವ ಅಲ್ಪಸಂಖ್ಯಾತರಾಗಿರುವಂತಹ ನಮಗೆ ಬೇರೆ ಕಡೆ ಕೆಲಸ ಸಿಗುವುದೇ ಕಷ್ಟಕರವಾಗಿದೆ. ಕಷ್ಟಪಟ್ಟು ದುಡಿಯೋಣ ಅಂತ ಈಗ ಕಳೆದ ಮೂರು ತಿಂಗಳಿನಿಂದ ಆಟೋ ಓಡಿಸುತ್ತಿದ್ದೇನೆ. ಆದರೆ, ರ್‍ಯಾಪಿಡೋದಿಂದ ನಮಗೆ ಸಮಸ್ಯೆ ಉಂಟಾಗುತ್ತಿದೆ. ಸರ್ಕಾರದ ನೂತನ ಯೋಜನೆಗಳಿಂದಲೂ ಕೂಡ ನಮಗೆ ಆದಾಯದ ಮೇಲೆ ಹೊಡೆತಬಿದ್ದಿದೆ. ಆಟೋ ಬಾಡಿಗೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಒಂದೊತ್ತಿನ ಊಟಕ್ಕೂ ಕೂಡ ಸಮಸ್ಯೆಯಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

“ನಾಲ್ಕು ವರ್ಷದಿಂದ ಎಲ್ಲ ಸರ್ಕಾರಗಳು ಭರವಸೆ ನೀಡುತ್ತಿದ್ದಾವೆ ಅಷ್ಟೇ. ಆದರೆ, ಯಾರು ರ್‍ಯಾಪಿಡೋ ನಿಲ್ಲಿಸುತ್ತಿಲ್ಲ. ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ರ್‍ಯಾಪಿಡೋ ಬಂದ ಮಾಡಿಸುತ್ತಾರೆ ಎಂದು ಹೇಳಿದ್ದರೂ. ಆದರೆ, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಕರುನಾಡ ವಿಜಯಸೇನೆ ಅಧ್ಯಕ್ಷ ವಿನೋದ್ ಕುಮಾರ್ ಈ ದಿನ.ಕಾಮ್‌ಗೆ ಹೇಳಿದರು.

ಕ್ಯಾಬ್ ಚಾಲಕ ಶಿವಬಸಪ್ಪ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ನಮ್ಮದು ಪ್ರಮುಖ ಬೇಡಿಕೆಯೆಂದರೆ, ರ್‍ಯಾಪಿಡೋ ಮತ್ತು ಶಕ್ತಿ ಯೋಜನೆಯಿಂದ ತುಂಬಾ ಸಮಸ್ಯೆ ಉಂಟಾಗಿದೆ. ನಾವು ತೆರಿಗೆ ಇನ್‌ಶೂರೆನ್ಸ್‌ ಕಟ್ಟಿರುತ್ತೇವೆ. ಏಳು ಲಕ್ಷ ಕಟ್ಟಿ ವಾಹನ ಚಾಲನೆ ಮಾಡಬೇಕೆಂದರೆ, ಈ ರ್‍ಯಾಪಿಡೋದಿಂದ ಸಮಸ್ಯೆ ಎದುರಾಗುತ್ತಿದೆ. ಶಕ್ತಿ ಯೋಜನೆಯನ್ನು ನಿಲ್ಲಿಸಬೇಕು. ನಾವು ಗಾಡಿಯ ಇಎಮ್‌ಐ ತುಂಬದಿದ್ದರೆ, ಫೈನಾನ್ಸ್‌ ಅವರು ಗಾಡಿ ಬಂದು ತೆಗೆದುಕೊಂಡು ಹೋಗುತ್ತಾರೆ. ಚಾಲಕರಿಗೂ ₹2000 ನೀಡಿ” ಎಂದರು.

“ನಾನು ಕಳೆದ 5 ವರ್ಷದಿಂ ಕ್ಯಾಬ್ ಓಡಿಸುತ್ತಿದ್ದೇನೆ. ನಾವು ಸಾಲ ಮಾಡಿ ಗಾಡಿ ತಂದಿದ್ದೇನೆ. ಓಲಾ ಉಬರ್ 40% ಕಮಿಷನ್ ಕಟ್ ಮಾಡುತ್ತಿದ್ದಾರೆ. ಕಸ್ಟಮರಿಂದ ಕಮಿಷನ್ ತೆಗೆದುಕ್ಕೊಳ್ಳುತ್ತಾರೆ. ಆದರೆ ಆ ಹಣ ನಮಗೆ ಬರುತ್ತಿಲ್ಲ. ಈ ಓಲಾ ಉಬರ್ ಆಪ್ ಬಂದ್ ಮಾಡಿ ನಮಗೆ ಸರ್ಕಾರದಿಂದ ಹೊಸ ಆಪ್ ಬಿಡುಗಡೆ ಮಾಡಬೇಕು” ಎಂದು ಕ್ಯಾಬ್‌ ಚಾಲಕ ಈರಣ್ಣ ಈ ದಿನ.ಕಾಮ್‌ಗೆ ಹೇಳಿದರು.

ಯಾವ್ಯಾವ ಸಂಘಟನೆಗಳು ಭಾಗಿ

ಕರ್ನಾಟಕ ಚಾಲಕರ ಒಕ್ಕೂಟ, ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್, ಪೀಸ್ ಆಟೋ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್, ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್, ಕರ್ನಾಟಕ ರಾಜೀವ್ ಗಾಂಧೀ ಚಾಲಕರ ವೇದಿಕೆ, KSTOA, KSBOA, ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕ, ನಮ್ಮ ಚಾಲಕರ ಟ್ರೇಡ್ ಯೂನಿಯನ್, ವಿಜಯಸೇನೆ ಆಟೋ ಘಟಕ, ಜಯಕರ್ನಾಟಕ ಆಟೋ ಘಟಕ, ಜೈ ಭಾರತ್ ಆಟೋ ಚಾಲಕರ ಸಂಘ, ಬೆಂಗಳೂರು ಆಟೋ ಸೇನೆ, ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್, ಕರ್ನಾಟಕ ರಾಜ್ಯಾ ಶಾಲಾ ಮಕ್ಕಳ ವಾಹನ ಟ್ರೇಡ್ ಯೂನಿಯನ್, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್, ಬೆಂಗಳೂರು ಸಾರಥಿ ಸೇನೆ, ಕರ್ನಾಟಕ ಸಿಟಿ ಟ್ಯಾಕ್ಸ್ ಆಪರೇಟರ್ ಕಂಟ್ರೋಲರ್ ಅಸೋಸಿಯೇಷನ್, ಕರುನಾಡು ಸಾರಥಿ ಸೇನೆ ಟ್ರೇಡ್ ಯೂನಿಯನ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘ, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಡ್ರೈವರ್ ಯೂನಿಯನ್, ಕೆ.ಆರ್ ಪುರ ಆಟೋ ಚಾಲಕರ ಸಂಘ, ಕರುನಾಡು ವಿಜಯ ಸೇನೆ ಚಾಲಕರ ಸಂಘ, ಮೈಸೂರು ಬಸ್ ಮಾಲೀಕರ ಸಂಘ, ಪ್ರೀಪೈಡ್ ಟ್ಯಾಕ್ಸಿ ಡ್ರೈವರ್ ವೆಲ್ಫೇರ್ ಅಸೋಸಿಯೇಷನ್, KTDO, ನೊಂದ ಚಾಲಕರ ವೇದಿಕೆ, ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ, ಶಂಕರ್ ನಾಗ್ ಆಟೋ ಸೇನೆ, ರಾಜ್ ಕುಮಾರ್ ಆಟೋ ಸೇನೆ, ಕರ್ನಾಟಕ ಸ್ವಾಭಿಮಾನಿ‌ ಆಟೋ ಡ್ರೈವರ್ಸ್ ಯೂನಿಯನ್, ಓಲಾ ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್ ಸೇರಿದಂತೆ ಒಟ್ಟು 37 ಸಂಘಟನೆಗಳು ಈ ಬೆಂಗಲೂರು ಬಂದ್‌ನಲ್ಲಿ ಬಾಗಿಯಾಗಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ: ಡಿ ಕೆ ಶಿವಕುಮಾರ್

"ಶುದ್ಧ ಕುಡಿಯುವ ನೀರು, ರಸ್ತೆಗುಂಡಿ ಸಮಸ್ಯೆ ಸೇರಿದಂತೆ ಬೆಂಗಳೂರಿನ ಪ್ರಮುಖ ಮೂಲಸೌಕರ್ಯ...

ಖಾಸಗಿ ಶಾಲಾ ಶುಲ್ಕ ಪ್ರಕಟಣೆ ಕಡ್ಡಾಯ: ಶಿಕ್ಷಣ ಇಲಾಖೆ ಸುತ್ತೋಲೆ

ಖಾಸಗಿ ಶಾಲೆಗಳು ನಿಗದಿಪಡಿಸಿರುವ ಪ್ರವೇಶ ಹಾಗೂ ಇತರೆ ಶುಲ್ಕಗಳ ವಿವರಗಳನ್ನು ಸಾರ್ವಜನಕರಿಗೆ...

‘ಸೇಫ್‌ ಸಿಟಿ’ ಯೋಜನೆ | ಎಐ ಕ್ಯಾಮೆರಾಗಳ ಮೊರೆ ಹೋದ ಪೊಲೀಸ್ ಇಲಾಖೆ; 890 ಎಐ ಕ್ಯಾಮೆರಾ ಕಣ್ಗಾವಲು

ರಾಜಧಾನಿ ಬೆಂಗಳೂರಿನ ಸಂಚಾರ ವ್ಯವಸ್ಥೆಯ ಸುಧಾರಣೆಗಾಗಿ ನಗರ ಪೊಲೀಸರು ‘ಸೇಫ್‌ ಸಿಟಿ’...

ಮತ್ತೆ ಜೀವ ಪಡೆದ ಬೆಂಗಳೂರಿನ ಆನೆ ಪಾರ್ಕ್ ಕೆರೆ; ವೈವಿಧ್ಯಮಯ ಪಕ್ಷಿಗಳಿಗೆ ನೆಲೆ

ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಆನೆ ಪಾರ್ಕ್‌ನಲ್ಲಿರುವ ಕೆರೆಯೂ ಮಳೆಯಿಲ್ಲದೇ, ಸಂಪೂರ್ಣವಾಗಿ ಬತ್ತಿ...