ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ ಎಂಬ ರೂಪಕ ಹಾಗೂ ಅರಿಸ್ಟಾಟಲ್ ಆಗ ಹೇಳಿದ್ದ ನಿರಂಕುಶಾಧಿಕಾರಿಯ ಲಕ್ಷಣಗಳು ಇಂದಿನ ಭಾರತದಲ್ಲಿ ಹೇಗೆ ಸಾಕಾರಗೊಳ್ಳುತ್ತಿವೆ ಎಂಬುದಕ್ಕೆ ಈ ‘ಭಜನ್ ಕ್ಲಬಿಂಗ್’ ರಾಜಕಾರಣವೇ ಸಾಕ್ಷಿ.
ಭಾರತೀಯ ಜನಸಂಘದ ನಾಯಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ದೆಹಲಿಯ ದೀನದಯಾಳ್ ಉಪಾಧ್ಯಾಯ ಪಾರ್ಕ್‌ನಲ್ಲಿ ಆಯೋಜಿಸಿದ್ದ ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಯುವಜನರನ್ನೂ ಒಳಗೊಂಡಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರೊಂದಿಗೆ ಕುಳಿತು ಭಜನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮೊದಲ ಸಾಲಿಸಲ್ಲೇ ಕುಳಿತಿದ್ದ ಪ್ರಧಾನಿ ಮೋದಿ, ಭಜನೆಗಳನ್ನು ಆಲಿಸುತ್ತಾ ಚಪ್ಪಾಳೆ ತಟ್ಟುತ್ತಾ, ಕೈಯಲ್ಲಿ ಖಂಜರಿ (tambourine) ಹಿಡಿದು ತಾಳ ಹಾಕುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ಸದ್ದು ಮಾಡುತ್ತಿರುವ ‘ಭಜನ್ ಕ್ಲಬಿಂಗ್’ ಎಂದರೇನು? ಆಧುನಿಕ ಸಂಗೀತ ಕಚೇರಿಗಳು, ಡಿಜೆ ಬೀಟ್‌ಗಳು, ಹೈ-ಫೈ ಸ್ಟೇಜ್ ಲೈಟಿಂಗ್‌ಗಳು ಮತ್ತು ಯುವಜನರನ್ನು ಆಕರ್ಷಿಸುವ ಪಾಪ್-ಕಲ್ಚರ್ ಶೈಲಿಯನ್ನು ಭಕ್ತಿಗೀತೆಗಳೊಂದಿಗೆ ಬೆರೆಸಿ ಸೃಷ್ಟಿಸಲಾದ ಒಂದು ಹೊಸ ಕಾಲದ ಮನರಂಜನಾ ಕಟ್ಟುಪಾಡು ಇದು. ಧರ್ಮವನ್ನು ಹೈಟೆಕ್ ಮನರಂಜನೆಯ ಸರಕನ್ನಾಗಿ ಮಾರುಕಟ್ಟೆಗೆ ಬಿಡುವ ಈ ಕಸರತ್ತು, ಆಧುನಿಕ ಯುವಜನತೆಯನ್ನು ತಮ್ಮತ್ತ ಸೆಳೆದುಕೊಳ್ಳುವ ಅತ್ಯಂತ ಚಾಣಾಕ್ಷ ರಾಜಕೀಯ ತಂತ್ರವಷ್ಟೇ ಹೊರತು ಬೇರೇನೂ ಅಲ್ಲ. ಆದರೆ, ಈ ಸಾಂಸ್ಕೃತಿಕ ಮುಖವಾಡದ ತೆರೆಯ ಹಿಂದೆ ಅಡಗಿರುವ ರಾಜಕೀಯ ಸಂಚು ಅತ್ಯಂತ ಆಳವಾದದ್ದು ಮತ್ತು ಅಪಾಯಕಾರಿಯಾದದ್ದು.
ಯುವ ಜನರನ್ನು ಸೆಳೆಯಲು ಮಾಡರ್ನ್ ಭಜನೆ ಕನ್ಸರ್ಟ್ ಮೊರೆ ಹೋಗಿ ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗುತ್ತಿದ್ದರೆ, ಇತ್ತ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅದೇ ಯುವಜನರಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ʼಛಾತ್ರೋಂ ಕಿ ಗೂಂಜ್ʼ ಅಭಿಯಾನ ಶುರು ಮಾಡಿದ್ದಾರೆ.
ಜೂನ್ 17ರಂದು ರಾಜಸ್ಥಾನದ ಕೋಟಾದಿಂದ ಆರಂಭವಾದ ಈ ಸಂವಾದ ಸರಣಿ, ಬಳಿಕ ಡೆಹ್ರಾಡೂನ್, ಪ್ರಯಾಗ್‌ರಾಜ್ ಮತ್ತು ಪುಣೆಗೆ ತಲುಪಿತು. ಪ್ರತಿ ನಗರದಲ್ಲೂ ಸ್ಥಳೀಯ ಯುವಜನರು ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳನ್ನು ಕೇಂದ್ರವಾಗಿಸಿಕೊಂಡು ರಾಹುಲ್ ಗಾಂಧಿ ಸಂವಾದ ನಡೆಸುತ್ತಿದ್ದಾರೆ. ಕೋಟಾದಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲಿನ ವೆಚ್ಚ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳು, ಡೆಹ್ರಾಡೂನ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಪ್ರಯಾಗ್‌ರಾಜ್‌ನಲ್ಲಿ ಶಿಕ್ಷಣ–ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಚರ್ಚೆಯಾದರೆ, ಆಗಸ್ಟ್ 22ರಂದು ಪುಣೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಿಗಾಗಿ ವಿಶೇಷವಾಗಿ ಆಯೋಜಿಸಲಾಗಿತ್ತು. ಅಲ್ಲಿ ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣದ ಕುರಿತು ರಾಹುಲ್ ಗಾಂಧಿ ಮಾತನಾಡಿದರು.
ಸೆಪ್ಟೆಂಬರ್ 19ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮ ಈ ಸರಣಿಯ ಐದನೇ ಆವೃತ್ತಿಯಾಗಿತ್ತು. ಇಲ್ಲಿ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗ, ಭವಿಷ್ಯ ಹಾಗೂ ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನೇರ ಸಂವಾದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, “ಪ್ರತಿ ಕಾರ್ಯಕ್ರಮದಲ್ಲೂ ವಿದ್ಯಾರ್ಥಿಗಳ ಹೃದಯದಲ್ಲಿರುವ ಮತ್ತು ಅವರ ಭವಿಷ್ಯಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ವಿಷಯವನ್ನು ಎತ್ತಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಇಂದೋರ್ ಕಾರ್ಯಕ್ರಮಕ್ಕೂ ಮುನ್ನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಸಿಗದ ಹಿನ್ನೆಲೆಯಲ್ಲಿ, ರೀಜನಲ್ ಪಾರ್ಕ್ ಎದುರಿನ ಪರ್ಯಾಯ ಮೈದಾನದಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು.
ಕಾಂಗ್ರೆಸ್ ಯೋಜನೆಯ ಪ್ರಕಾರ, ಮೊದಲ ಹಂತದಲ್ಲಿ ದೇಶದ ವಿವಿಧ ರಾಜ್ಯಗಳನ್ನು ಒಳಗೊಂಡಂತೆ ಸುಮಾರು 28 ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವಿದೆ. ಬಳಿಕ ಈ ಯುವಜನ ಸಂಪರ್ಕವನ್ನು ಸುಮಾರು 800 ಜಿಲ್ಲೆಗಳು/ಪಟ್ಟಣಗಳಿಗೆ ವಿಸ್ತರಿಸುವ ಯೋಜನೆಯೂ ಪಕ್ಷದ ಮುಂದಿದೆ. ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ಸೋರಿಕೆ, ದುಬಾರಿ ಶಿಕ್ಷಣ, ಸರ್ಕಾರಿ ನೇಮಕಾತಿಯಲ್ಲಿನ ಅಕ್ರಮಗಳು ಮತ್ತು ನಿರುದ್ಯೋಗದಂತಹ ವಿಚಾರಗಳನ್ನು ಈ ಅಭಿಯಾನದ ಪ್ರಮುಖ ವಿಷಯಗಳನ್ನಾಗಿ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಗ್ರೀಕ್‌ನ ಮಹಾನ್ ತತ್ವಜ್ಞಾನಿ ಅರಿಸ್ಟಾಟಲ್ ಶತಮಾನಗಳ ಹಿಂದೆ ರಾಜಕೀಯ ವಿಶ್ಲೇಷಣೆಯೊಂದಿಗೆ ನೀಡಿದ ʼಈʼ ಮಾತುಗಳು ಇಂದಿನ ಭಾರತದ ಪರಿಸ್ಥಿತಿಗೆ ಅಚ್ಚುಕಟ್ಟಾಗಿ ಅನ್ವಯಿಸುತ್ತವೆ. “A tactic by which a tyrant can retain power is by showing himself deeply religious. People are less likely to fear injustice from a ruler they believe is pious. They are also less likely to rebel because they think God is on his side.” (ಒಬ್ಬ ನಿರಂಕುಶಾಧಿಕಾರಿಯು ತನ್ನ ಅಧಿಕಾರವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಬಳಸುವ ತಂತ್ರವೆಂದರೆ, ತಾನು ಅತ್ಯಂತ ಧಾರ್ಮಿಕ ಎಂದು ಸಮಾಜಕ್ಕೆ ಬಿಂಬಿಸಿಕೊಳ್ಳುವುದು. ಆಡಳಿತಗಾರನು ಧರ್ಮಾತ್ಮ ಎಂದು ನಂಬಿದಾಗ ಜನರಿಗೆ ಆತನ ಅನ್ಯಾಯದ ಬಗ್ಗೆಯೂ ಭಯವಿರುವುದಿಲ್ಲ ಹಾಗೂ ದೇವರು ಆತನ ಪರವಾಗಿಯೇ ಇದ್ದಾನೆ ಎಂದು ಭಾವಿಸಿ ಜನರು ಆತನ ವಿರುದ್ಧ ದಂಗೆ ಏಳಲು ಕೂಡ ಹಿಂಜರಿಯುತ್ತಾರೆ).
ಇಂದಿನ ಭಾರತದಲ್ಲಿ ಪ್ರಧಾನಿ ಮೋದಿ ಮತ್ತು ಆಡಳಿತರೂಢ ಪಕ್ಷ ಅನುಸರಿಸುತ್ತಿರುವ ಹಾದಿಯೂ ಅಕ್ಷರಶಃ ಅರಿಸ್ಟಾಟಲ್ ಹೇಳಿದ ಈ ವ್ಯಾಖ್ಯಾನದಡಿಯಲ್ಲೇ ಸಾಗುತ್ತಿದೆ. ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳ ವ್ಯವಸ್ಥಿತ ಉಲ್ಲಂಘನೆ, ನಿರುದ್ಯೋಗದ ಭೀಕರತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಚುನಾವಣಾ ವ್ಯವಸ್ಥೆಯ ಮೇಲಿನ ನಂಬಿಕೆ ಸಂಪೂರ್ಣವಾಗಿ ಧ್ವಂಸಗೊಳ್ಳುತ್ತಿರುವಾಗ ಸ್ವಾಭಾವಿಕವಾಗಿಯೇ ಜನಾಕ್ರೋಶ ಭುಗಿಲೇಳುವ ಅಪಾಯವಿದೆ. ಆದರೆ ಜನರ ಈ ಆಕ್ರೋಶವನ್ನು ಹತ್ತಿಕ್ಕಿ ದಿಕ್ಕೆಡಿಸಲು ‘ಭಜನ್ ಕ್ಲಬಿಂಗ್’ನಂತಹ ಭಕ್ತಿ ರಂಗಿನ ಮನರಂಜನೆಗಳನ್ನು ಬಲವಾದ ರಾಜಕೀಯ ರಕ್ಷಾಕವಚವನ್ನಾಗಿ ಬಳಸಿಕೊಳ್ಳಲಾಗುತ್ತಿದೆ.
ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಗಾದೆ ಮಾತೊಂದಿದೆ. ಅದು “ರೋಮ್ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸಿದ” ಎನ್ನುವುದು. ನಾಯಕನೊಬ್ಬ ದೇಶ ಅಥವಾ ಜನತೆ ಗಂಭೀರ ಬಿಕ್ಕಟ್ಟು ಹಾಗೂ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿದ್ದಾಗ, ಜವಾಬ್ದಾರಿ ಮರೆತು ಯಾವುದೋ ಮೋಜಿನ ವಿಷಯದಲ್ಲಿ ತೊಡಗಿಸಿಕೊಂಡಿರುವುದನ್ನು ರೂಪಕವಾಗಿ ಈ ನುಡಿಯನ್ನು ಜಗತ್ತಿನಾದ್ಯಂತ ಬಳಸಲಾಗುತ್ತದೆ.
ಇದನ್ನೂ ಓದಿ: ಇದು SIR ಅಲ್ಲ, ‘ವಿಶೇಷ ಡಿಲಿಟೇಷನ್’ ಕಾರ್ಯಾಚರಣೆ: ಇಸಿ ನೋಟಿಸ್‌ಗೆ ಕಪಿಲ್ ಸಿಬಲ್ ಆಕ್ರೋಶ
ಕ್ರಿ.ಶ. 64ರ ಜುಲೈ ತಿಂಗಳಲ್ಲಿ ರೋಮ್ ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದ ನೀರೋನ ಆಳ್ವಿಕೆಯಲ್ಲಿ ರೋಮ್ ನಗರದಲ್ಲಿ ಭೀಕರವಾದ ಬೆಂಕಿ ಕಾಣಿಸಿಕೊಂಡಿತು. ಈ ಅಗ್ನಿಪರ್ವದ ತೀವ್ರತೆ ಎಷ್ಟಿತ್ತೆಂದರೆ ನಗರದ ಬಹುಪಾಲು ಭಾಗ ಸಂಪೂರ್ಣವಾಗಿ ನಾಶವಾಯಿತು ಮತ್ತು ಲಕ್ಷಾಂತರ ಜನರು ನಿರಾಶ್ರಿತರಾದರು. ರೋಮ್ ನಗರ ಬೆಂಕಿಯಲ್ಲಿ ಬೆಂದು ಬೂದಿಯಾಗುತ್ತಿದ್ದಾಗ ನೀರೋ ದೂರದ ತನ್ನ ಅರಮನೆಯಲ್ಲಿ ನಿಂತು ಪ್ರಾಚೀನ ತಂತಿವಾದ್ಯವಾದ ‘ಕಿತಾರಾ’ ನುಡಿಸುತ್ತಾ ಗ್ರೀಕ್ ಪುರಾಣದ ಟ್ರಾಯ್ ನಗರದ ಧ್ವಂಸದ ಕುರಿತ ಮಹಾಕಾವ್ಯವನ್ನು ಹಾಡುತ್ತಿದ್ದನೆಂದು ರೋಮನ್ ಇತಿಹಾಸಕಾರರು ದಾಖಲಿಸಿದ್ದಾರೆ. ಜನರ ಬದುಕು ನರಕವಾಗುತ್ತಿದ್ದಾಗ ಆಡಳಿತಗಾರರು ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಬಿಂಬಿಸಲು ಜಗತ್ತಿನಾದ್ಯಂತ ಇಂದಿಗೂ ಈ ಐತಿಹಾಸಿಕ ಉದಾಹರಣೆಯನ್ನು ಬಳಸಲಾಗುತ್ತದೆ.
ಆ ನೀರೋ ಚಕ್ರವರ್ತಿಯ ನಿರ್ಲಿಪ್ತ ಕ್ರೌರ್ಯಕ್ಕೂ, ದೇಶದ ಸಂವಿಧಾನ ರಾಜಕೀಯ ಪ್ರೇರಿತ ಇಕ್ಕಟ್ಟಿಗೆ ಸಿಲುಕಿ ನಲುಗುತ್ತಿರುವಾಗ ಪ್ರಧಾನಿ ನಡೆಸುತ್ತಿರುವ ಈ ತಮಟೆ-ಖಂಜರಿಯ ಭಜನಾ ರಾಜಕಾರಣಕ್ಕೂ ವ್ಯತ್ಯಾಸವೇನೂ ಇದ್ದಂತಿಲ್ಲ. ದೇಶದ ನೈಜ ಬಿಕ್ಕಟ್ಟುಗಳನ್ನು ಮುಚ್ಚಿಹಾಕಲು ಧರ್ಮ ಮತ್ತು ಭಕ್ತಿಯನ್ನು ಬಳಸಿಕೊಳ್ಳುತ್ತಿರುವ ಈ ಕಪಟ ನಾಟಕದ ವಿರುದ್ಧ ಪ್ರಜೆಗಳು ಎಚ್ಚೆತ್ತುಕೊಳ್ಳದಿದ್ದರೆ, ಪ್ರಜಾಪ್ರಭುತ್ವದ ಅಂತಿಮ ಉಸಿರು ಕೂಡ ಈ ಭಜನೆಯ ತಾಳದ ಸದ್ದಿನಲ್ಲೇ ನಿಂತುಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.




