ಬರಗೂರು ರಾಮಚಂದ್ರಪ್ಪ ಅವರ ಕತೆ | ಕ್ಷಾಮ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ರಾಮನ ಗೂರಲು ನಿಲ್ಲಲಿಲ್ಲ. ಎಂದಿಗಿಂತ ಹೆಚ್ಚಾಗಿ ಕೆಮ್ಮು ದಬಾಯಿಸಿಕೊಂಡು ಬರುತ್ತಿತ್ತು. ಪಕ್ಕದಲ್ಲಿಟ್ಟುಕೊಂಡಿದ್ದ ಚಿಪ್ಪಿನಲ್ಲಿ ಉಗಿದ. ಕೆಮ್ಮುತ್ತ ಉಗುಳುತ್ತ ಚಿಪ್ಪು ತುಂಬ್ತ ಬಂದಾಗ ಅದನ್ನೇ ನೋಡುತ್ತ ಅವನಿಗೇ ಅಸಹ್ಯವೆನಿಸಿ “ಹಾಳು ಪ್ರಾರಬ್ಧಕರ್ಮ; ಸತ್ತಾದ್ರೂ ಹೋಗ್ಬಾರ್‍ದ” ಎಂದುಕೊಂಡು ಚನ್ನಿಯ ಕಡೆ ನೋಡಿದ. ಹತ್ತಲಾರದ ಹಸಿ ಸೌದೆಕಡ್ಡಿಗಳು; ಒಂದೇ ಸಮ ಊದುತ್ತಿದ್ದಳು. ಬೆಂಕಿ ಹತ್ತದೆ ಹೊಗೆ ಸುತ್ತಿಕೊಂಡು ಕಣ್ಣಲ್ಲಿ ನೀರು ಬರುತ್ತಿತ್ತು. ಹರಿದ ಸೆರಗಿನಿಂದ ಒರೆಸಿಕೊಳ್ಳುತ್ತಲೇ ಊದುತ್ತಲೇ ಒಳಗೊಳಗೇ ”ಅಯ್ಯೋ ನನ್ನ ಬಾಳೆ” ಎಂದು ಹಳಿದುಕೊಳ್ಳುತ್ತಲೇ ವಿಧಿಯಿಲ್ಲವೆನ್ನುವಂತೆ ಊದುತ್ತಿದ್ದಳು. ಏನಾದರೂ ಮಾಡಿ ಅಡುಗೆಗೆ ಅಣಿ ಮಾಡಬೇಕಿತ್ತು. ಬಿಟ್ಟರೆ ಬೇರೆ ಗತಿಯಿಲ್ಲದೆ ಕಂಬಳಿಯ ಮೇಲೆ ಕೂತು ಕೆಮ್ಮುತ್ತಿದ್ದ ರಾಮನ ಕಡೆ ನೋಡಿದಳು. ಕೆಮ್ಮು ಯಾಕೋ ಬಿಡುವಂತೆ ಕಾಣಲಿಲ್ಲ; ಸೌದೆ ಹತ್ತುವ ಸೂಚನೆಯೂ ಕಾಣಲಿಲ್ಲ. ರಾಮ ಒಮ್ಮೆ ತನ್ನ ದೇಹವನ್ನು ನೋಡಿಕೊಂಡ. ದೇಹವೆಲ್ಲ ಮೂಳೆ ಎಂದುಕೊಂಡ. ಮದುವೆಯಾಗಿ ಮೂರು ವರ್ಷವಾಯಿತು. ಒಂದು ವರ್ಷದ ಹಿಂದೆ ಕಾಣಿಸಿಕೊಂಡ ಕೆಮ್ಮು ಅಸ್ತಮ ಅನ್ನಿಸಿದ್ದು ಸ್ವಲ್ಪ ದಿನಗಳಾದ ಮೇಲೆ. ಆಗ ಅವರಿವರ ಬಾಯಿಗಳು ಚನ್ನಿಯನ್ನು ಬೇಯಿಸಿ ಮೆತ್ತಗೆ ಮಾಡಿದ್ದವು. “ಕಾಲ್ಗುಣ ಸರ್‍ಯಾಗಿಲ್ಲ. ಅದ್ಕೇ ಗೂರ್‍ಲು ಬ್ಯಾರೆ ಬಂತು, ಮಕ್ಳು ಬ್ಯಾರೆ ಆಗ್ಲಿಲ್ಲ” ಎಂದು ಆರೋಪ ಹೊರಿಸಿದ್ದವು. ಚನ್ನಿಯ- ಆಗ ತುಂಬಿದ್ದ- ಮೈಕಟ್ಟು ಕಂಡು ಜೊಲ್ಲು ಸುರಿಸಿದವರು, ಆಕೆ ದಕ್ಕದಿದ್ದಾಗ ”ಯೇ ಬಿಡೋ ಅದೆಲ್ಲೊ ಗೊಡ್ಡು” ಎಂದು ಮಾತು ಉಚಾಯಿಸಿದ್ದರು… ಚನ್ನಿ ತನ್ನ ಆದ್ಯ ಕರ್ತವ್ಯವೆಂಬಂತೆ ಊದುತ್ತಲೇ ಇದ್ದಳು. ರಾಮ ಕೆಮ್ಮುತ್ತಲೇ ಇದ್ದ. ಚನ್ನಿಯನ್ನು ನೋಡಿದ. ಎಷ್ಟು ಸೊರಗಿದ್ದಾಳೆ ಎನ್ನಿಸಿತು. ಊರಿಗೇ ಅಚ್ಚುಕಟ್ಟಾದ ಮೈಕಟ್ಟಿದ್ದ ಚನ್ನಿ ಔಡಲಕಡ್ಡಿಯಾಗಿದ್ದಾಳೆ. ಈ ವರ್ಷ ಬಂದ ಕ್ಷಾಮ ಊರನ್ನೇ ಗಡಗಡ ನಡುಗಿಸಿ ಸುಖದ ತಲೆಯ ಮೇಲೆ ಗಢಾರಿಯಿಂದ ಹೊಡೆದಿತ್ತು. ದನಕರು ಸತ್ತವು. ಹೊಲ ಒಣಗಿ ವ್ಯಥೆಯನ್ನು ಬರೆಯುತ್ತಿದ್ದವು. ಕೂಲಿಯೂ ಗಿಟ್ಟದಿದ್ದಾಗ ಕೆಲವು ಕುಟುಂಬಗಳು ಊರುಬಿಟ್ಟವು. ಚನ್ನಿ ಅರಸಾಹಸಪಟ್ಟು ಹೇಗೊ ಉಪವಾಸವೊ ವನವಾಸವೊ ಕಾಲ ತಳ್ಳುತ್ತಿದ್ದಳು. ಎರಡು ದಿನದ ಹಿಂದೆ ಭರ್ಜರಿ ಮಳೆಯೇನೋ ಬಂದು ತರಿ ಜಮೀನಿನವರಿಗೆ ಅನುಕೂಲ ಮಾಡಿತ್ತು. ಆ ಊರಿನಲ್ಲಿ ಆರೇಳು ಮನೆಗೆ ಮಾತ್ರ ಕೆರೆ ಹಿಂದಿನ ಜಮೀನೆಲ್ಲ ಸೇರಿತ್ತಾದ್ದರಿಂದ ಖುಷ್ಕಿಯನ್ನೇ ನಂಬಿದವರಿಗಾದ ಅನುಕೂಲ ಅಷ್ಟಕಷ್ಟೆ, ಬೆಳೆಯೆಲ್ಲ ಒಣಗಿ ಇನ್ನು ಎಷ್ಟು ಹೆಣಗಿದರೂ ಫಲವಿಲ್ಲವೆನ್ನುವಾಗ ಮಳೆ ಧೋ ಎಂದು ಹುಯ್ದಿತ್ತು. ಬರಗಾಲದ ಕಾಮಗಾರಿಗೆ ಮಂಜೂರು ಮಾಡಿದ್ದ ಸರ್ಕಾರ ಸಮೃದ್ಧ ಮಳೆ ಬಂದ ಕಾರಣ ತೋರಿಸಿ ಬಹಳಷ್ಟು ಕಾರ್ಯಗಳನ್ನು ನಿಲ್ಲಿಸಿತು. ಚನ್ನಿಯಂಥವರು “ಹೊತ್ತಲ್ಲದ ಹೊತ್ನಾಗೆ ಈ ಮಳೆನಾದ್ರೂ ಯಾಕ್ ಬಂತೊ ಹಾಳಾದ್ದು” ಎಂದು ಬಯ್ದುಕೊಳ್ಳದೆ ವಿಧಿಯಿರಲಿಲ್ಲ. ಚನ್ನಿ ಪಾಲಿಗೆ ಮತ್ಯಾವ ಹೊಲವೂ ಇರಲಿಲ್ಲ. ಇರುವ ಹೊಲವೆಂದರೆ ಗೂರಲು ರಾಮ-ತನ್ನ ಗಂಡ-ಒಬ್ಬನೇ. ಈ ಹೊಲದ ಉಳುವಿಗಾಗಿ ದಿನ ಬೆಳಗ್ಗೆ ದುಡಿದು ಎರಡು ಹೊತ್ತು ಕೂಳು ಹುಟ್ಟಿಸಬೇಕಿತ್ತು. “ಮಗನಂತು ವುಟ್ಟಿಲ್ಲ. ಇವ್ರಿಗೆ ಕೂಳು ವುಟ್ಸಾದೆ ನನ್ ಬಾಳು” ಎಂದು ಎಷ್ಟೋ ಸಾರಿ ಅಂದುಕೊಂಡಿದ್ದಳು… ಎಷ್ಟು ಊದಿದರೂ ಒಲೆ ಹತ್ತಲಿಲ್ಲ. “ಥೂ! ಇದ್ರ್ ಮನೆ ಕಾಯ್ವಾಗ” ಎಂದು ಬಯ್ದಳು. ರಾಮ ಮಾತಾಡದೆ ಮಾತನಾಡಲಾಗದೆ-ಎಂದಿನಂತೆ ನಿಸ್ಸಹಾಯಕ ಸ್ಥಿತಿಯಲ್ಲಿ ಅತ್ತಲೇ ನೋಡುತ್ತಿದ್ದ. ವಿಲವಿಲನೆ ಒದ್ದಾಡುತ್ತಿದ್ದ. ಕ್ಷಾಮ ಬೇರೆ; ಇವಳಿಗೆ ಇಂಥ ಸ್ಥಿತಿ ಬರಬಾರದಿತ್ತೆಂದುಕೊಂಡ. ನೋಡ ನೋಡುತ್ತ “ಚನ್ನಿ” ಎಂದ. ತಿರುಗಿದಳು. ಸೊರಗಿದ ಮುಖದಲ್ಲಿ ಹರಿಯುವ ನೀರು; ಕೆದರಿದ ಕೂದಲು; ಕೂದಲ ಮೇಲೆ ಅಲ್ಲಲ್ಲೆ ಬಾಳು ಬರೆಯುತ್ತಿದ್ದ ಬೂದಿ. “ಚಿಪ್ಪು ತುಂಬ್ತು” ಎಂದ. ಎದ್ದು ಬಂದಳು. ಚಿಪ್ಪು ತೆಗೆದುಕೊಂಡು ಹೊರತಂದು ಮೂಲೆಯಲ್ಲಿ ಮಾಡಿಕೊಂಡಿದ್ದ ಸಣ್ಣ ಗುಂಡಿಯಲ್ಲಿ ಹಾಕಿ ತೊಳೆದು, ಮತ್ತೆ ತಂದಿಟ್ಟು ಒಲೆ ಊದಲು ತೊಡಗಿ ಸಾಕುಸಾಕಾಗಿ, ಹತ್ತುವುದು, ಸ್ವಲ್ಪ ಹೊತ್ತಾದ ಕೂಡಲೆ ಆರುವುದು, ಹೊಗೆ ಸುತ್ತುವುದು- ಹೀಗೆ ಕಣ್ಣುಮುಚ್ಚಾಲೆಯಾಡುತ್ತಿದ್ದಾಗ ಕಣ್ಣುತೆರೆಯುವುದೇ ಕಷ್ಟವೆನ್ನಿಸುವಂತಾಗಿ ಎದುರುಮನೆ ಮಲ್ಲಿಯನ್ನು ಕೇಳಿ ಊದುಗೊಳವಿನಾದ್ರೂ ತಂದು ಊದೋಣ ಎಂದುಕೊಂಡು ಹೊರಬಂದಾಗ ಮಲ್ಲಿಯ ಹಜಾರದಲ್ಲಿ, “ನಾಳೆ ಗದ್ದೆ ಕಳೆ ತಗೀತೀವಿ ಬರ್ಬೇಕು” ಎಂದು ಒಳಗಿದ್ದ ಮಲ್ಲಿಗೆ ಕೂಗಿ ಹೇಳಿದ ಧ್ವನಿ ಕೇಳಿ, ”ಓ ತೀಟೆರಂಗಪ್ಪ ಬಂದವ್ನೆ ಆಗ್ಲೆ” ಎಂದುಕೊಂಡು ಕ್ಷಣಕಾಲ ನಿಂತಲ್ಲೇ ನಿಂತಳು. ಒಳಗಡೆಯಿಂದ ಮನೆಯತ್ತ ಬಂದ ಮಲ್ಲಿ ಅವನಿಗೆ ತೀರಾ ಹತ್ತಿರ ನಿಂತಾಗ, ಅವನು ಅವಳ ಹೊಟ್ಟೆಗೆ ಮೃದುವಾಗಿ ಒಂದೇಟು ಕೊಟ್ಟು ಯಾರಾದರೂ ಕಂಡರೋ ಎಂದು ಅತ್ತಿತ್ತ ನೋಡಿದಾಗ, ನೋಡಲಾಗದೆ ಸರಕ್ಕನೆ ಒಳಬಂದು, ಒಲೆಯ ಮುಂದೆ ಕುಳಿತು ರಪರಪನೆ ಯಾವಾಗಿನದಕ್ಕಿಂತ ಬಿರುಸಾಗಿ ಊದಿದಳು. “ಹಾಳ್ ಮಿಂಡ ಎಲ್ಲೋದ್ರು ಕಾಲಿಗೆ ತೂರಿಕೊಳ್ತಾನೆ. ಊರಾಗಿರೋ ಚೆಲ್ವೇರೆಲ್ಲ ಬೇಕಿವ್ನಿಗೆ” ಎಂದು ಒಳಗೊಳಗೇ ಸಿಡಿಮಿಡಿಗೊಳ್ಳುತ್ತ ಊದುಗೊಳವಿ ತರಲೂ ಅಡ್ಡ ಬಂದ ಬೇವರ್ಸಿ ಎಂದೇ ಶಪಿಸುತ್ತ ಸೌದೆಯನ್ನಷ್ಟು ಛೀಮಾರಿಗೊಳಿಸುತ್ತ “ಕಳ್ಕೊಂಡ ಹೆಂಡ್ತಿ ಬಾಳ್ಸೋದ್ ಬಿಟ್ಟು ಊರಾಡ್ಕಂಡು ವೈನಾಗಿರೋಕೋಗ್ತಾನೆ. ಇವ್ನೊಬ್ಬ ಕಂಡೋರ್ ಮಿಂಡ” ಎಂದು ಯಾಕೊ ಮತ್ತೆ ಮತ್ತೆ ಒಳಗೇ ಉಗುಳಬೇಕೆನ್ನಿಸಿ ವಿಧಿಯಿಲ್ಲದೆ ಒಲೆ ಊದುತ್ತಿದ್ದಳು. ಒಮ್ಮೆ ಊದುವುದು, ಮತ್ತೊಮ್ಮೆ ಕೆಮ್ಮುವ ಗಂಡನನ್ನು ನೋಡುವುದು-ಹೀಗೆ ಸಾಗಿತ್ತು. ಎಂದಿಗಿಂತ ಇವತ್ತು ಹೆಚ್ಚು ಹೊಗೆಯಾದರೂ ತುಟಿಪಿಟಕ್ಕೆನ್ನದೆ ಚಳಿಗಾಳಿಗೆ ಎದ್ದು ಹೊರಬರಲೂ ಆಗದೆ ಗೂರಲು ಹೆಚ್ಚುತ್ತಿದ್ದುದರಿಂದ ಕೂರಲೂ ಆಗದೆ ಅವನು ಪಡುವ ಪಾಡು ಕಂಡು ಕನಿಕರದಿಂದ ಎದ್ದು ಅತ್ತ ಇತ್ತ ಹೊಯ್ದಾಡುತ್ತಿದ್ದ ಮಣ್ಣಿನ ದೀಪ ನೋಡಿ, “ಸೀಮೆಎಣ್ಣೆ ಬುಡ್ಡಿನಾರ ಇದ್ದಿದ್ರೆ ಚೆನ್ನಾಗಿತ್ತು. ಅದೂ ಕೆಟ್ಟೋಯ್ತು” ಎಂದು ಆತಂಕಪಟ್ಟುಕೊಂಡು ಕಡೆಗೆ, ಕೆಟ್ಟಿದ್ದನ್ನೇ ಹುಡುಕಿ ನೋಡಿ ತಳದಲ್ಲಿ ಸ್ವಲ್ಪ ಸೀಮೆಯೆಣ್ಣೆ ಕಂಡು ಆನಂದವಾಗಿ, ಬಾನಗಳ ಸಂದಿಯಲ್ಲಿದ್ದ ಬಟ್ಟೆ ಚೂರು ತೆಗೆದುಕೊಂಡು ಒಂದು ತೊಗರಿಕಡ್ಡಿಯ ತುದಿಗೆ ಸುತ್ತಿ ಅದನ್ನ ಬುಡ್ಡಿಯ ತಳಕ್ಕೆ ಅದ್ದಿದಾಗ ಸೀಮೆಯೆಣ್ಣೆಯನ್ನು ಕ್ಷಣದಲ್ಲಿ ಹೀರಿತು. ಕಡ್ಡಿ ತಂದು ಸೌದೆ ತಳಕ್ಕೆ ಇಟ್ಟು ಊದಿದಾಗ ಭಗ್ಗೆಂದು ಹತ್ತಿ, ರಾಮ ಬೆಚ್ಚಿ, “ಏನೇ ಅದು?” ಎಂದ. “ಕೋಲನ್ನೆ ಸಪ್ಪು ಬೇಯಿಸ್ತಿದ್ದೀನಿ” ಎಂದಷ್ಟೇ ಹೇಳಿ ಉರಿಯುವ ಒಲೆಯನ್ನು ಏನೋ ಸಮಾಧಾನದಿಂದ ನೋಡುತ್ತಿರುವಾಗ “ಗದ್ದೆ ಕಳೆ ತಗೀತೀವಿ ಬರ್‍ರಮ್ಮಣ್ಣಿ ನೀವಿಬ್ರೂ” ಎಂದು ಪಕ್ಕದಲ್ಲೇ ಕೂಗಿದ್ದು ಗೊತ್ತಾಗಿ, ತನಗೆ ಕೇಳಿಸಲೆಂದೇ ಹೀಗೆ ಪ್ರತಿಸಾರಿ ಗಟ್ಟಿಯಾಗಿ ಕೂಗಿ ಅಕ್ಕಪಕ್ಕದವರಿಗೆ ಹೇಳಿ ಹೋಗುತ್ತಾನೆಂದು ಅರಿವಿದ್ದುದರಿಂದ “ಕೊರಮ” ಎಂದು ನೆಟಿಗೆ ಮುರಿದು, “ಹೋರಿ ಆಡ್ದಂಗಾಡ್ತಾನೆ ಊರ್‍ನಾಗೆಲ್ಲ” ಎಂದು ಮತ್ತೆ ಬಯ್ದುಕೊಳ್ಳಲು ಹೋಗಿ ಯಾಕೋ ಅವನ ನೆನಪೇ ಹೊಟ್ಟೆ ತೊಳಸುವಂತೆ ಮಾಡುವುದರಿಂದ ಉರಿಯುವ ಒಲೆ ನೋಡುತ್ತ ಕುಳಿತಳು.

- Advertisement -

ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಹಾಳು ಕ್ಷಾಮ ಬಂದು ಊರೆಲ್ಲ ಬಂಜೆ ಮಾಡಿತಲ್ಲ ಎಂದು ನೋವಿನ ನೆಲದಲ್ಲಿ ಬೀಜ ಬಿತ್ತುತ್ತಿರುವಾಗ ಫಕ್ಕನೆ ನಗು ಕಿವಿಗೆ ಅಪ್ಪಳಿಸಿ ನಿಟ್ಟು ಬಿದ್ದಂತಾಗಿ “ಅವ್ನ್‌ದೇ ಆ ರಂಗಪ್ಪಂದು. ಆ ಮಲ್ಲೀಗೂ ಗಂಡ ಜಮಾಕರ್ಚಿನಾಗಿಲ್ಲ. ಪಾಪ! ಸಾಧು ಪ್ರಾಣಿ. ಯಾವ್ದೊ ಊರಿಗೆ ಬ್ಯಾರೆ ಹೋಗೈತೆ. ಈಗ ಇವ್ನೆ ಮಾರಾಜ ಆಗವ್ನೆ” ಅಂದುಕೊಂಡು ತನ್ನ ಮೈ ಕೈಯನ್ನು ಮುಟ್ಟಿ ನೋಡಿಕೊಳ್ಳುತ್ತ, ಹೊತ್ತಿಗೊತ್ತಿಗೆ ಕೂಳಿಲ್ಲದೆ ಕಡ್ಡಿಯಾದೆ ಅನ್ನಿಸಿ, “ಯಾವ್ ಜಲ್ಮದ್ ಪಾಪನೊ” ಎಂದು ತನ್ನನ್ನೇ ಹಳಿದುಕೊಳ್ಳುವಾಗ ”ಹೊತ್ತಿಗ್ ಸರ್‍ಯಾಗ್ ಬರ್‍ರವ್ವ, ಬರಗಾಲ್ದಾಗ್ ಬಾಯಿಗ್ ಮಣ್ಣು ಹಾಕ್ಕೊಬಾರ್‍ದು. ಅಮ್ಯಾಲ್ ನನ್ನ ಹೊಲಕ್ಕೆ ಬರೋಲ್ಲ ಅಂತ ನೀವೂನು ಪ್ರತಿಜ್ಞೆ ಮಾಡ್ಬೀಟ್ಟೀರ” ಎಂದು ರಂಗಪ್ಪ ದೊಡ್ಡದಾಗಿ ನಗುತ್ತ ಯಾರಿಗೊ ಹೇಳುತ್ತಿರುವುದು ಕೇಳಿಸಿ, ಬರಗಾಲ್ದಾಗ್ ಬಾಯಿಗ್ ಮಣ್ಣು, ಪ್ರತಿಜ್ಞೆ- ಇವೆಲ್ಲ ತನ್ನ ಕುರಿತ ಮಾತುಗಳೆಂದು ಗೊತ್ತಾಗಿ ಕುಳಿತಲ್ಲೇ ಕೋಪದಿಂದ ಬರಿ ಬಾಯನ್ನು ಪಿಟಿ ಪಿಟಿ ಎಂದು ಒಳಗೆ ಹೊಗೆಯಾಡಿಸಿದಳು. ಉರಿಯುವ ಒಲೆ ನೋಡುತ್ತ ಒಂದು ರೀತಿ ಅಸಹಾಯಕತೆ ಬರುತ್ತ ನಿಟ್ಟುಸಿರುಬಿಟ್ಟು ಮಡಕೆಯ ಮುಚ್ಚಳ ತೆಗೆದು ಈಗಿನ್ನೂ ನೀರಿಗೆ ಬಿಸಿ ಬರುತ್ತಿದೆ, ಸೊಪ್ಪಿನ್ನೂ ಜುಮ್ಮೆಂದಿಲ್ಲವೆಂದು ಖಾತ್ರಿ ಮಾಡಿಕೊಂಡು ರಂಗಪ್ಪನ ಮಾತುಗಳು ಮರುಕಳಿಸಿ, ಚಳಿಯಾಗುತ್ತಿರುವಂತೆ ಭಾಸವಾಗಿ ಗಾಳಿಗೆ ದಡಬಡವೆನ್ನುವ ಹಳೆಯ ಬಾಗಿಲನ್ನು ಮುಂದು ಮಾಡಲು ಬಂದಳು. ಕ್ಷಾಮದ ಬೇಗೆಯಲ್ಲಿ ಬದುಕುವುದೂ ದುಸ್ತರವಾಗಿ, ದಿನ ಒಪ್ಪೊತ್ತಿಗೆ ಕೂಳು ಗಿಟ್ಟಿಸುವುದೂ ಕಷ್ಟವಾದಾಗಲೆ ಬಾಗಿಲು ಅಲ್ಲಲ್ಲೇ ಸೀಳುಬಿಟ್ಟು, ಒಳಚಿಲಕ ಬೇರೆ ಒಂದು ಸಾರಿ ಜಾಡಿಸಿದರೆ ಕಿತ್ತುಬರುವಷ್ಟು ಸಡಿಲವಾಗಿತ್ತು. ಹಲಗೆಗಳು ಸಡಿಲವಾಗಿ ತಾನೊಬ್ಬಳೇ ದುಡಿದು ಗಂಡನನ್ನು ಸಾಕುತ್ತ ತಾನು ಜೀವ ಹಿಡಿದುಕೊಳ್ಳುವ ದಾರುಣತೆ ಒಳಗೆಲ್ಲ ಕೊರೆದು ಕಂಠದಲ್ಲಿ ಒದ್ದುಬರುವ ಅಳಲಿನೊಂದಿಗೆ ಗುದ್ದಾಡುತ್ತಿರುವಾಗ ರಂಗಪ್ಪ ಯಾರೊಂದಿಗೋ ಫಕಫಕನೆ ನಗುತ್ತ ಹೋದದ್ದು ಮಸಕು ಮಸುಕಾಗಿ ಕಂಡು ಅವನ ಹೊಲಕ್ಕೆ ಹೋಗುವುದಿಲ್ಲವೆಂದು ಹಟ ಮಾಡದಿದ್ದರೆ ಅಷ್ಟು ಇಷ್ಟು ಹಣ ಗಿಟ್ಟುತ್ತಿತ್ತೇನೊ ಎನ್ನಿಸಿ ತಕ್ಷಣ “ಥೂ, ಆ ನಾಯಿ ವೊಲಕ್ಕೆ ವೋಗ್ಬಾರ್‍ದು” ಎಂದು ಒತ್ತು ಹಾಕಿಕೊಳ್ಳುತ್ತ, ಬಾಗಿಲಿನ ಅಗಣಿಪಟ್ಟಿಯ ಸಡಿಲಗೊಂಡ ಮೊಳೆಗಳನ್ನು ಗುಂಡುಕಲ್ಲಿನಿಂದ ದಬ ದಬ ಕುಟ್ಟಿ ಕೈ ಸೋತಂತಾಗಿ ಹಾಗೇ ಕುಳಿತಳು. ಮತ್ತೆ ಎದ್ದು ಒಳಚಿಲಕವನ್ನು ನೋಡಿ “ಇದ್ಕೂ ಬಂದೈತೆ ಕೆಟ್ಟಾವತ್ತು” ಎಂದು ಸಿಟ್ಟೊ, ಅಳಲೊ, ಅಸಹಾಯಕತೆಯೊ, ಬೇಸರವೊ ಅಥವಾ ಎಲ್ಲ ಸೇರಿದೆಯೊ ಗೊತ್ತಾಗದ ಭಾವ ಬಿಂಬಿಸಿ ಹಾಳಾಗಿಹೋಗಲಿ ಎನ್ನಿಸಿ ಹಾಗೇ ಬಂದು ಮತ್ತೆ ಸುಮ್ಮನಿರಲಾರದೆ ಅಲ್ಲಿನ ಮೊಳೆಗಳನ್ನು-ಗುಂಡುಕಲ್ಲಿನ ಪೆಟ್ಟಿಗೆ ಸಿಕ್ಕದಿದ್ದರೂ-ಹೊಡೆದು ಬಿಗಿ ಮಾಡಲು ಯತ್ನಿಸಿ ಹೊಡೆದದ್ದಷ್ಟೇ ಸಮಾಧಾನ ಎನ್ನಿಸಿ, ಒಲೆ ಮೇಲೆ ಉಕ್ಕಿದಂತಾಗಿ ದಡಬಡನೆ ಅತ್ತ ಬಂದಳು. ಮುರುಕುಸೌಟಿನ ತುದಿಯಲ್ಲಿ ಸೊಪ್ಪು ತೆಗೆದುಕೊಂಡು ಕೈಯಲ್ಲಿ ಹಿಸುಕಿ ಸರಿಯಾಗಿ ಬೆಂದಿದೆಯೊ ಇಲ್ಲವೊ ಪರೀಕ್ಷಿಸಿ ಇನ್ನೇನು ಬೇಯುತ್ತೆ ಎಂದುಕೊಂಡು ಕುಳಿತಾಗ, ಬಾಗಿಲು ಬಡಬಡಿಸಿ, ಏನಾದರೂ ಮಾಡಿ ಇದನ್ನು ಸರಿಮಾಡಲು ಸಾಧ್ಯವೆ? ಏನು ಬಂತು ಇದಕ್ಕೆ? ಬಾಗಿಲು ಬಿದ್ದು ಹಾರೊಡೆದುಕೊಂಡರೆ… ಎಂದು ಕುಳಿತಲ್ಲೇ ಕಂಪಿಸಿ ನೆಲ ತನ್ನದೋ ಅಲ್ಲವೊ, ನೆಲದ ಮೇಲಿದ್ದೇನೋ ಇಲ್ಲವೊ ಮುಟ್ಟಿ ನೋಡಬೇಕೆನ್ನಿಸಿ, ಏನೋ ಭಯವಾಗಿ ಯಾಕೊ ಮೈಮನಸ್ಸು ಅಸ್ವಸ್ಥವಾಗಿ ಗಂಡನಿಗೆ ಕೆಮ್ಮು ಹೆಚ್ಚಾದ್ದು ಕಂಡು ಯಾವುದಕ್ಕೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ಮೊಣಕಾಲುಗಳ ಮಧ್ಯೆ ತಲೆಯಿಟ್ಟುಕೊಂಡು ಸುಮ್ಮನೆ ಕುಳಿತಳು.

ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ರಾಮ “ಯಾಕೊ ಚಳಿ, ಗಾಳಿ ಜಾಸ್ತಿ ಆಗಿದ್ದಂಗೈತೆ ಕಣೆ. ಬಾಗಿಲು ಬಿಗಿಯಾಗಿಲ್ಲ ಏನಾಗೈತೋ ಏನ್ಕತೆಯೊ” ಎಂದಾಗ ಚನ್ನಿಗೆ ಚುರುಗುಟ್ಟಿ ಬೆಚ್ಚಿದಂತಾಗಿ ನಿಸ್ತೇಜ ಭಾವದಿಂದ ಸುಮ್ಮನೆ ಗಂಡನ ಮುಖ ನೋಡಿ, ಏನೂ ಹೇಳಲು ತೋಚದೆ ಮತ್ತೆ ಹಾಗೇ ತಲೆಕುಟ್ಟಿಕೊಂಡಳು. “ಎಲ್ಲಾ ಸರ್ಯೋಗ್ತೈತೆ ಬಿಡು. ಯಾಕ್ ಸುಮ್ಕೆ ಚಿಂತೆ ಮಾಡ್ತೀಯ” ಎಂದ ಗಂಡನ ಮುಖವನ್ನು ಕ್ಷಣಕಾಲ ನೋಡಿ, ವಿಷಾದದ ನಸುನಗೆಯಿಂದ ಮತ್ತೆ ಸೊಪ್ಪು ಬೆಂದಿದೆಯೊ ಇಲ್ಲವೊ ನೋಡಲು ಮುಚ್ಚಳ ತೆಗೆದಾಗ ಬಾಳಿನುದ್ದಕ್ಕೂ ಸೆರೆಯಲ್ಲಿರಬೇಕಾಗಬಹುದೆಂದು ತಳಮಳಿಸುತ್ತಿದ್ದವರನ್ನು ಇದ್ದಕ್ಕಿದ್ದಂತೆ ಬಿಡುಗಡೆ ಮಾಡಿದಂತೆ ನೀರಿನ ಬೇಗೆ ಭಗ್ಗನೆ ನುಗ್ಗಿ ಬಂದು ಮುಖಕ್ಕೆ ಕಾವು ತಗುಲಿ ಮನಸ್ಸಿನಾಳಕ್ಕೆ ಇಳಿದಂತಾಗಿ ಕೈಕಾಲು ಬಂಧಿಸಿದಂತಾಗಿ ಸೌಟು ಹಿಡಿದು ಸ್ವಲ್ಪ ಹೊತ್ತು ಹಾಗೇ ಕುಳಿತುಬಿಟ್ಟಳು.

ರಂಗಪ್ಪ ತನ್ನ ಹೊಲಕ್ಕೆ ಕೂಲಿಗೆ ಬರುತ್ತಿದ್ದವರೊಂದಿಗೆ ಚಲ್ಲಾಟದ ಮಾತಾಡುತ್ತಲೇ ಬಲೆ ಬೀಸುವುದರಲ್ಲಿ ನಿಸ್ಸೀಮನೆಂದೇ ರಾಮ ಚನ್ನಿಗೆ ಮೊದಲೇ ಹೇಳಿದ್ದ- “ಅವ್ನ್ ಕಚ್ಚೆ ಬದ್ರಯಿಲ್ಲ ಚನ್ನಿ. ಜ್ವಾಪಾನ” ಅಂತ. ಕೂಲಿ ಮಾಡದೆ ವಿಧಿಯಿಲ್ಲದ್ದರಿಂದ ಹೋಗಬೇಕಾಗಿ ಬಂದು, ಒಂದು ಸಾರಿ ರಂಗಪ್ಪ ಚನ್ನಿಯ ಹತ್ತಿರ ನಾಲಗೆ ಉದ್ದಮಾಡಿ ಚಲ್ಲಾಟದ ಮಾತಾಡಿದ್ದನ್ನು ಸಹಿಸದೆ ”ನಿನ್ಮನೆ ಹಾಳಾಗ, ನಿನ್ನ ನಾಲ್ಗೇಗೆ ವುಳ ಬೀಳ, ನಿನ್ನೊಲ್ದಾಕೆ ಕಾಲಿಟ್ರೆ ಕೇಳು” ಎಂದೆಲ್ಲ ರಾಚಿ ಬಂದ ಚನ್ನಿ ಅಂದಿನಿಂದ ಅವನ ಹೊಲಕ್ಕೆ ಕಾಲಿಟ್ಟಿರಲಿಲ್ಲ. ರಂಗಪ್ಪ ಬುಟ್ಟಿಗೆ ಬಿದ್ದಾಳೇನೊ ಎಂದು ಕೀಟಲೆ ಬಿಟ್ಟಿರಲಿಲ್ಲ.

ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಪಕ್ಕದ ಮನೆ ಕಾಳಮ್ಮ ಬಂದು “ಕೆರೇಗೆ ಮಂಗೆ ಬಿದ್ದೈತಂತೆ ಕಣಮ್ಮ ಚನ್ನಕ್ಕ, ಬೋಲ್ ಜೋರಾಗೋಗ್ತ ಐತಂತೆ ನೀರು. ಜತ್ಗೆ ಒಂದ್ಕಡೀಕೆಲ್ಲೋ ಏರಿ ಬಿರುಕು ಬಿಟ್ಟೈತಂತೆ. ಈಗೇನಾರ ಸರ್‍ಮಾಡ್ದಿದ್ರೆ ಕೆರೆಗೆ ಅಪಾಯ್ವಂತೆ. ಮಣ್ಣು ಗಿಣ್ಣು ಆಕಾಕೋಗ್ಬೇಕಂತೆ ಊರಾರು. ಬಾರಮ್ಮಣ್ಣಿ ನೀನೂನು” ಎಂದಾಗ, ರಾಮ “ಏನವ್ವ” ಎಂದ ಆಶ್ಚರ್ಯದಿಂದ. “ಹೂಂ ಕಣಣ್ಣ” ಎಂದಳು ಕಾಳಮ್ಮ. “ಅಯ್ಯೋ!” ಎಂದ. ತನಗೇ ಆಘಾತವಾದಂತೆ ಚನ್ನಿಗೂ ಕಳವಳ; ಜತೆಗೆ ಬೆಳೆಯುವ ತಳಮಳ. “ಈ ಮಳೆ ನೋಡ್ಡಾಗ ನಂಗೂ ಯಿಂಗಾಗ್ತೈತೆ ಅಂಬ್ತ ಅನ್ಸಿತ್ತು” ಎಂದಳು. “ಜಲ್ದು ಏರಿ ಸರ್‍ಮಾಡ್ದಿದ್ರೆ, ಜೋರಾಗ್ ಮಳೆ ಬಂದಾಗ ಕಿತ್ಕಂಡೋಗ್ಬವ್ದು, ನಮ್ಮೂರ್ ಕೆರೇಗೆ ಎಂದೂ ಯಿಂಗಾಗಿರ್ಲಿಲ್ಲ ಕಣಾ ಕಾಳಮ್ಮ” ಎಂದು ಆತಂಕಪಟ್ಟ ರಾಮ. “ಉಂಡೂ ತಿಂದು ಬತ್ತೀನ್ ಕಣವ್ವ” ಎಂದಳು ಚನ್ನಿ.

ಸೊಪ್ಪು ಬಂದಿತ್ತು. ಇದ್ದ ಸ್ವಲ್ಪ ರಾಗಿಹಿಟ್ಟಿಗೇ ಎಸರು ಇಟ್ಟು ಮುದ್ದೆ ಮಾಡಿ ರಾಮನಿಗೆ ಬಡಿಸಿ ತಾನು ಬರೀ ಸೊಪ್ಪು ತಿಂದು ಕುಳಿತಳು. ಇದನ್ನು ಗಮನಿಸಿದ ರಾಮನಿಗೆ ಕರುಳು ಕುಯ್ದಂತಹ ವೇದನೆಯಾಗಿ ನಿಸ್ಸಾಹಾಯಕ ಸ್ಥಿತಿಯಿಂದ ಒಳಗೇ ಒದ್ದಾಡಿದ. ”ಚನ್ನಿ ಯಾಕಿಂಗ್ಮಾಡ್ತೀಯ? ನೀನೂ ಅಷ್ಟುಂಡು ನಂಗಿಷ್ಟಿಟ್ಟಿದ್ರಾಗ್ತಿರ್‍ಲಿಲ್ವ? ದಿನಾ ಯೋಳಾಕಾಗ್ತೈತ?” ಎಂದ- ”ಒಬ್ರೀಗೆ ಆಗಾಕಿಲ್ಲ- ಇನ್ನು ಇಬ್ರು ಉಂಬಾಂದೆಂಗೆ? ಕಾಯ್ಲೆ ಕಸಾಯ್ಲೇರು ಉಂಡ್ರೆ ಸಾಕು” ಎಂದಳು. ಸುಮ್ಮನಾದ; ಜಂತೆಯ ಕಡೆ ನೋಡುತ್ತ ಮಲಗಿದ. ಗಾಳಿ ಬೀಸಿ ಬಾಗಿಲು ಕಿರ್‍ರೆಂದಾಗ “ಇವತ್ತೇನೊ ಬಂದೈತೆ ಇದ್ಕೆ. ಯಾವತ್ತಿದ್ದಂಗಿಲ್ಲ; ಈ ಗಾಳಿ ನೋಡು ಏನ್ ಚಿರ್‍ರಂಬ್ತೈತೆ” ಎನ್ನುತ್ತ ದುಪ್ಪಟಿಯನ್ನು ಮೈತುಂಬ ಹೊದ್ದು ಗೂಡರಿಸಿಕೊಂಡ.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಚನ್ನಿ ಕುಳಿತಿದ್ದಳು: ಏನೋ ಹಟ ಸಾಧಿಸಿದ್ದಾಯಿತು; ಮೈಗೆ ಸುಖವಿಲ್ಲ; ಮನಸ್ಸಿಗೆ ಶಾಂತಿಯಿಲ್ಲ; ಹೇಗೆ ಏಗುವುದೆಂದೇ ತಿಳಿಯುತ್ತಿಲ್ಲ ಎಂದು ಚಿಂತಿಸುತ್ತಿರುವಾಗ ಗುಡುಗು ಮಿಂಚುಗಳ ಆರ್ಭಟ ಕಂಡು, ಮಳೆ ಬರಬಹುದು, ಕೆರೆ ಏನಾಗಬಹುದು? ಒಡೆದೇ ಬಿಟ್ಟರೆ? ಎಂದು ಕಲ್ಪಿಸಿಕೊಂಡಾಗ ನೆಲ ನಡುಗಿದಂತಾಗಿ, ಗಾಳಿ ಧೂಳು ಎದ್ದು, ಬಾಗಿಲು ರೊಯ್ಯನೆ ಹಿಂದಕ್ಕೆ ಬಂದು, ಮತ್ತೆ ಮುಂದಕ್ಕೆ ಹೋಗಿ ಒಳಬಂದ ಮಳೆವಾಸನೆ ಅಲ್ಲೇ ಸುತ್ತಿಕೊಂಡು ಮೂಗಿಗೆ ಬಡಿದು, ಕೆರೆ ಕಣ್ಣ ಮುಂದೆ ಬಂದು ಜೊತೆ ಜೊತೆಯಾಗೇ ಭವಿಷ್ಯ ಭೀಕರವೆನಿಸಿ, ಕೊತಕೊತ ಕುದಿತದ ಮಧ್ಯೆ ಸಿಕ್ಕಿದಂತೆ ಭಾಸವಾಗಿ, ಯಾವುದೋ ಬಹುದಿನ ಮಲಗಿದ್ದ ಶಕ್ತಿ ಮೈಯೆಲ್ಲವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವಂತೆ, ಶಕ್ತಿಯೇ ಇಲ್ಲದವಳಂತೆ ಮೆಲ್ಲನೆ ಎದ್ದು ಬಾಗಿಲನ್ನು ಮುಂದು ಮಾಡುವಾಗ ಗಂಡಸರು ಹೆಂಗಸರು ಸಲಿಕೆ, ಗುದ್ದಲಿ, ತಟ್ಟಿ ಸಮೇತ ಹೋಗುತ್ತ, ”ಮಳೆ ಬರಂಗಾಗ್ತೈತೆ ಮೂಡ್ಗಡೀಕೆ ಮಿಂಚ್ತಾ ಐತೆ ಬರ್‍ರಮ್ಮ ಅಂಗೆ ಜಲ್ದು” ಎಂದು ಅವರಿವರನ್ನು ಕೂಗುತ್ತಿರುವಾಗ ಮುಂದಾಳತ್ವ ವಹಿಸಿದ್ದ ಊರ ಪಟೇಲ, “ಬರ್‍ರಿ ಬರ್‍ರಿ ಜಲ್ದು ಆಮ್ಯಾಕೆ ತಾರಾತಿಗ್ಡಿ ಆಗ್ಬಿಡ್ತೈತೆ. ಊರ್ಕೆಲ್ಸ ಮಾಡ್ವಾಗ ಕೀಸ್ಬುದ್ದಿ ಇರ್‍ಬಾರ್‍ದು. ಐ… ಕಾಳಮ್ಮ, ಚನ್ನಕ್ಕ, ಮಲ್ಲಕ್ಕ… ಬರ್‍ರಮ್ಮ ಬರ್‍ರಿ…” ಎಂದು ಕೂಗುತ್ತಿದ್ದಾಗ ಚನ್ನಿ “ಬಂದೇ ಕಣಣ್ಣ ಈಗ” ಎನ್ನುತ್ತ ಹಾಗೇ ನಿಂತಳು. ಅವರೆಲ್ಲ ಮುಂದುವರಿದಾಗ ಬಾಗಿಲಿಗೆ ಒಳಚಿಲಕ ಹಾಕಿದಳು. ಒಳಚಿಲಕ ಭದ್ರವಿಲ್ಲದ್ದರಿಂದ ಬಾಗಿಲು ಗಾಳಿಗೆ ದಬದಬ ಬಡಿದುಕೊಳ್ಳುತ್ತಿತ್ತು. “ಮಲ್ಲಿ ಕೆರೆ ಕೆಲ್ಸಕ್ಕೊಗ್ತಾಳೊ ಇಲ್ವೊ” ಎಂದುಕೊಂಡಳು. “ಒಳ್ಳೇ ವೈನಾಗವ್ಳೆ ಮೈತುಂಬ್ಕೊಂಡು” ಎಂದುಕೊಂಡು ”ತೋಟತ್ತಾವಿರೊ ರಂಗಪ್ಪನ ರೂಮ್ನಾಕೆ ವೋಗಿ ಮಲಗಿದ್ದು ಬರಾದ್ಬಿಟ್ಟು ಮಲ್ಲಿ ಕೆರೆ ತಾವೆಲ್ಲೋಗ್ತಾಳೆ” ಎಂದು ಯೋಚಿಸಿ ನೋಡೋಣವೆಂದು ಬಾಗಿಲು ತೆರೆದು ಹಟ್ಟಿಗೆ ಬಂದು ಹಜಾರದ ಮೂಲೆಯಲ್ಲಿ ಮುದುಡಿ ಕುಳಿತಿದ್ದ ಮಲ್ಲಿಯನ್ನು ನೋಡಿ “ಕೆರೆತಾವ ವೋಗಾಕಿಲ್ವ ಮಲ್ಲಕ್ಕ” ಎಂದಳು. ಮಲ್ಲಿಯೇ “ಬಿಡ್ ಬಿಡು ಚನ್ನಕ್ಕ ನಂಗ್ಯಾಕೆ. ಇಷ್ಟ ಇರಾರೋಗ್ತಾರೆ. ನಿಮ್ಮಂಥೋರು ವೋಗಂಗಿದ್ರೆ ವೋಗ್ರಮ್ಮ ಮಾರಾಗಿತ್ತೀರಂಗೆ” ಎಂದು ಕ್ಷಣಕಾಲ ಸುಮ್ಮನಿದ್ದು, ”ನಾನು ಸ್ವಲ್ಪವೊತ್ತಿಗ್ಮುಂಚೇಲಿ ವೊರೀಕಾಗಿದ್ದೀನಿ ಕಣೇ ಚನ್ನಕ್ಕ” ಎಂದಳು. ಚನ್ನಿ ”ಓ” ಎನ್ನುತ್ತ ಆಕಾಶದ ಕಡೆಗೆ ನೋಡಿದಳು. ಮಳೆ ಬರುವ ಸೂಚನೆಯಿದೆ. ನಿಮಿಷಕ್ಕೋ ಎರಡು ನಿಮಿಷಕ್ಕೋ ಒಂದೊಂದೇ ಹನಿ ಬೀಳುತ್ತಿದೆ. ಆದರೂ ಯಾಕೊ ಕೆರೆಯ ಮಂಗೆ ಮುಚ್ಚುವುದಕ್ಕೆ ಹೋಗುವ ಮನಸ್ಸೇ ಬಾರದೆ ಒಳಬಂದು ಬಾಗಿಲು ಹಾಕಲು ಹೋಗಿ ಹಾಳು ಚಿಲಕ ಎಂದು ಬೈದುಕೊಂಡಳು. ಎತ್ತ ಕಡೆ ಹೋಗುವುದು? ಕೆರೆ ಕೆಲಸಕ್ಕೊ ಅಥವಾ ಅಥವಾ… ಹೇಗಿದ್ದರೂ ಮಲ್ಲಿ ಇವತ್ತು ರಂಗಪ್ಪನಿಗೆ ಮಗ್ಗುಲಾಗೂಲ್ಲ. ಅ…ಲ್ಲಿ…ಗೆ…

ಏನೋ ಆವೇಶ ಬಂದಂತೆ ಗುಂಡುಕಲ್ಲು ತೆಗೆದುಕೊಂಡು ಒಳಚಿಲಕದ ಮೊಳೆಯನ್ನು ಯರಿಬಿರಿ ಕುಟ್ಟಿದಳು. ಏಟು ಮೊಳಗೆ ಬೀಳದೆ ಚಿಲಕಕ್ಕೆ ಬಿದ್ದು ಅದು ಲಬುಕಿ ಇನ್ನೂ ಸಡಿಲವಾಗಿ ಸಿಕ್ಕಾಪಟ್ಟೆ ಬೇಸರ ಬಂದು, ಗಾಳಿಗೆ ಬಡಿದಾಡುತ್ತ ಕಿರುಗುಟ್ಟುವ ಬಾಗಿಲ ಮೇಲೆ ಸಿಟ್ಟುಬಂದು ಹೇಗೂ ಒತ್ತಿ ಹಿಡಿದುಕೊಂಡು ಚಿಲಕವನ್ನು ಸರಿ ಮಾಡಲೇಬೇಕೆಂದು ಹಾಗೂ ಹೀಗೂ ಪ್ರಯತ್ನಿಸುತ್ತಿರುವಾಗಲೇ ಮಳೆ ಇಷ್ಟಿಷ್ಟೇ ಹನಿಯಲು ಪ್ರಾರಂಭಿಸಿ ಹೆಚ್ಚಾಗುವ ಸೂಚನೆ ಕಂಡು ಬಂದು, ಇವಳ ಪ್ರಯತ್ನ ಇನ್ನೂ ಹೆಚ್ಚಾಗಿ, ಆದರೆ ವಿಫಲವಾಗುತ್ತ ಬಂದು ಮನಸ್ಸು ಉದ್ವಿಗ್ನವಾಗಿ ಮೈಯೆಲ್ಲ ಉರಿಯೆದ್ದು ತಡೆಯಲಾಗದೆ ಒಳಚಿಲಕವನ್ನೇ ಕಿತ್ತೆಸೆದುಬಿಟ್ಟಾಗ ಬಾಗಿಲು ಬರ್‍ರನೆ ತೆಗೆದುಕೊಂಡು ತಣ್ಣನೆಯ ಗಾಳಿ ನುಗ್ಗಿ, ಹಾಯೆನಿಸಿ, ಮುಖದ ಮೇಲಿನ ಬೆವರನ್ನು ಸೆರಗಿನಿಂದ ಒರಸಿಕೊಳ್ಳುತ್ತ ಹಿಂದಕ್ಕೆ ತಿರುಗಿಯೂ ನೋಡದೆ ಹೊರಟುಬಿಟ್ಟಳು. ಹಜಾರದಲ್ಲಿ ಕುಳಿತಿದ್ದ ಮಲ್ಲಿ “ಕೆರೆ ಕೆಲ್ಸಕ್ಕೊರ್‍ಟೇನೆ ಚನ್ನಕ್ಕ” ಎಂದರೂ ಕಿವಿಗೆ ಬೀಳದವಳಂತೆ ಬಿರಬಿರನೆ ಹೆಜ್ಜೆ ಹಾಕಿದಳು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಹಸಿವು ಹೆಚ್ಚಾಗುತ್ತಿತ್ತು. ಅದೂ ರಾಮ ಖಾಯಿಲೆ ಬಿದ್ದ ಮೇಲೆ ಸರಿಯಾಗಿ ಊಟಕ್ಕೂ ಅನುಕೂಲವಾಗದೆ ಉಪವಾಸವೆನ್ನುವುದು ವಿಶೇಷವೇನೂ ಆಗಿರಲಿಲ್ಲ. ಕೆಲವು ದಿನಗಳಿಂದಂತೂ ಹಸಿವು ಕಿತ್ತು ತಿನ್ನುತ್ತಿತ್ತು. ದೇಹದ ನರಗಳೆಲ್ಲ ಹುರಿಗಟ್ಟಿ ಎತ್ತಲೊ ಕೊಂಡೊಯ್ದಂತಾಗುತ್ತಿತ್ತು. ಒತ್ತಿ ಹಿಡಿಯಲು ಎಷ್ಟು ಸಾಧ್ಯ? ಇಂದು ಬೆಳಿಗ್ಗೆ ಒಂದು ಮುದ್ದೆ ಉಂಡಿದ್ದು, ಈ ಬರೀ ಸೊಪ್ಪು ತಿಂದು- ಅದೂ ಯಾಕೊ ಹಿಡಿಸದಿದ್ದರೂ ಇರಲಿ ಬರೀ ಹೊಟ್ಟೆ ಎಂದು ಸ್ವಲ್ಪ ತಿಂದು- ಈಗ ಹೊಟ್ಟೆಯಲ್ಲೆಲ್ಲ ತಳಮಳ; ತೊಳಸುತ್ತಿರುವ, ಸುತ್ತುತ್ತಿರುವ ಅನುಭವ; ಹಸಿವು ಹಬ್ಬುತ್ತ ಇಡೀ ದೇಹಕ್ಕೆ ಆವರಿಸಿದಂತಾಗಿ ಹುತ್ತದಲ್ಲಿ ಹೂತು ಹೋಗುತ್ತಿರುವ ತೀವ್ರತೆ ಹೆಚ್ಚಾಗಿ ಸತ್ತಂತಿದ್ದ ಶರೀರದಲ್ಲಿ, ಏನೋ ಅಡಗಿ ತರಾಟೆಗೆ ತೆಗೆದುಕೊಳ್ಳುತ್ತಿರುವ ಅನುಭವವಾಗುತ್ತ ಬಂದು ಚನ್ನಿಯ ಉದ್ವಿಗ್ನತೆಗಿಂತ ವೇಗವಾಗಿ ಕಾಲು ಮುಂದುವರಿದವು.

ಕೆರೆಯ ಕೆಲಸ ಅಲ್ಲಿ ಸಾಗುತ್ತಿತ್ತು. ಅವರಾಡುವ ಮಾತುಗಳು ರಾತ್ರಿಯ ಗಾಳಿಯಲ್ಲಿ ತೇಲಿ ಬರುತ್ತಿದ್ದವು.

“ಜಲ್ದು ಮಳ್ಳೀನ್ ಮೂಟೆ ಹಾಕ್ರಯ್ಯ ಒಳಭಾಗಕ್ಕೆ. ಹೊರ್‍ಗಡೇಲಿ ಮಂಗೆ ಕಾಣುಸ್ತೈತಲ್ಲ ಅಲ್ಲೆ ಮಣ್ಣುಗಿಣ್ಣು ಹಾಕ್ರಮ್ಮ ಜಲ್ದು” “ಅರರೇ! ಅಲ್ನೋಡ್ರಯ್ಯ ಅಲ್ಲಿ ಮ್ಯಾಲ್ಗಡೀಕ್ ಮಳೆ ಜೋರಾಗಾಗೈತೆ. ಅದ್ಕೇ ಹಳ್ಳ ನೋಡ್ರಯ್ಯ ಎಸ್ಟ್ ಬಿರ್‍ಸಾಗ್ ಬರ್‍ತಾ ಐತೆ! ಆಗ್ಲೇ ಕೆರೆಗೆ ಎಷ್ಟೊಂದು ನೀರ್ ಬಂದ್ಬುಡ್ತು. ಮುಗುಸ್ರಪ್ಪ ನಿಮ್ ಧರ್ಮ ಜಲ್ದು. ಮೊದ್ಲೇ ಆ ಕಡೇಲಿ ಏರಿ ಬ್ಯಾರೆ ಬಿರುಕು ಬಿಟ್ಟೈತೆ ಹೊಡ್ಕಂಡ್ರೆ ಏನ್ಗತಿ ಏನ್ಕತೆ. ರಾಮ! ರಾಮ! ಹೂಂ ತರ್‍ರೀ ತರ್ರೀ ಜಲ್ದ್‌ಜಲ್ದು” -ಪಟೇಲ ಸೂಚನೆ ಕೊಡುತ್ತಿದ್ದ- ಆತಂಕದಿಂದ; ಅವಸರದಿಂದ.

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

ಚನ್ನಿ ಹೋಗುತ್ತಿದ್ದಳು; ಕೆರೆ ರಿಪೇರಿಯ ಸದ್ದು ಕೇಳಿ ಬರುತ್ತಿದ್ದರೂ ತನ್ನ ಪಾಡಿಗೆ ತಾನು ಹೋಗುತ್ತಿದ್ದಳು. ಮಳೆಯ ಹನಿಗಳು ಸ್ವಲ್ಪ ಹೆಚ್ಚಾಗುತ್ತ ಪಟಪಟ ಬಡಿಯ ಹತ್ತಿದ್ದವು. ರಿಪೇರಿಯ ಕಡೆಯಿಂದ ಬಂದ ಗೊಂದಲ ಸದ್ದು, ಆಳಿಗೊಂದು ಮಾತು, ರಭಸದಲ್ಲಿ ಕಾರ್ಯ ನಡೆಯುತ್ತಿದ್ದುದನ್ನು ಸೂಚಿಸುತ್ತಿದ್ದವು. ಎಲ್ಲೋ ದೂರದಲ್ಲಿ ನಡೆಯುವ ಅಸ್ಪಷ್ಟ ಜಟಿಲ ಬಲೆಯ ವಾತಾವರಣದಂತೆ ಏನೂ ಸಂಬಂಧ ಕಲ್ಪಿಸಿಕೊಳ್ಳಲು ಸಾಮರ್ಥ್ಯ ಪಡೆಯದಂತೆ ಕೇಳಿಸಿ, ಚನ್ನಿ ಅದರ ಪರಿವೆಯೇ ಇಲ್ಲದೆ ವೇಗವಾಗಿ ಬರುತ್ತ, ಮಳೆ ಬಿರುಸಾಗಿ ಸುರಿಯಲಾರಂಭಿಸಿದಾಗ ಮತ್ತೂ ಜೋರಾಗಿ ಕಾಲು ಹಾಕುತ್ತ ಸೀದಾ ರಂಗಪ್ಪನ ತೋಟಕ್ಕೆ ಬರುವ ಹೊತ್ತಿಗೆ, ಧಾರಾಕಾರವಾಗಿ ಬೀಳುವ ಸೂಚನೆಯನ್ನು ಸೆಳೆಮಿಂಚು ಮತ್ತು ಭೂಮಿಗೆ ಕಂಬಳಿಯ ಕೊಪ್ಪೆ ಇಟ್ಟಂತಿದ್ದ ಆಕಾಶ ಸೂಚಿಸಿದವು. ಹಳ್ಳ ತುಂಬಿ ಹರಿದು ಬರುತ್ತಿರುವಾಗಲೇ ಇಲ್ಲೂ ಮಳೆ ತುಂಬಾ ಜಾಸ್ತಿಯಾಗಿ ರೊಯ್ಯೆಂದು ಬಡಿಯಲು ಪ್ರಾರಂಭಿಸಿ ಕೆರೆ ರಿಪೇರಿಯ ಸ್ಥಳದಲ್ಲಿ ಅತ್ಯಂತ ಉದ್ವೇಗದ ವಾತಾವರಣ ಮೂಡಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಯಾವುದೂ ಗೊತ್ತಾಗದ ಸನ್ನಿವೇಶ ನಿರ್ಮಾಣವಾಗಿ ಅಂತೂ ಎಲ್ಲರೂ ಏನೋ ಹೇಳುತ್ತಿದ್ದರು. ಏನೋ ಮಾತಾಡುತ್ತಿದ್ದರು. ಮಳೆಯಲ್ಲಿ ತೋಯುತ್ತಲೇ ಚನ್ನಿ ರಂಗಪ್ಪನ ತೋಟದ ರೂಮಿನ ಬಾಗಿಲ ಬಳಿಗೆ ಬಂದಳು. ಎದೆ ಡವಡವ ಎನ್ನತೊಡಗಿತು. ಭಯದ್ದೋ ಉದ್ವೇಗದ್ದೋ ಆಕೆಗೇ ಗೊತ್ತಾಗದ ರೀತಿಯಲ್ಲಿ ಹೃದಯ ಹಾರಾಡುತ್ತಿರುವಂತೆ ಭಾಸವಾಯಿತು. ರೂಮಿನ ಒಳಗೆ ಬೆಳಕಿತ್ತು. ಬಾಗಿಲ ಸಂದಿಯಲ್ಲಿ ನೋಡಿದಾಗ ರಂಗಪ್ಪ ಒಬ್ಬನೇ ಅಡ್ಡಾಗಿ ಸಿಗರೇಟು ಸೇದುತ್ತ “ಅನುರಾಗದ ಅಮರಾವತಿ” ಎಂದು ಸಿನಿಮಾ ಹಾಡನ್ನು ಗುಂಯ್ ಗುಡುತ್ತ ಮಧ್ಯೆ ಮಧ್ಯೆ “ಹಾಳ್ ಮಳೆ: ಮಲ್ಲಿ ಬ್ಯಾರೆ ಬರ್‍ಲಿಲ್ಲ. ಥೂ!” ಎಂದು ಒಬ್ಬನೇ ಗೊಣಗುತ್ತ ಇದ್ದಾಗ, ಇದ್ದಕ್ಕಿದ್ದಂತೆ ಕೆರೆಯ ಕಡೆಯಿಂದ ಹಾಹಾಕಾರವೆದ್ದು ಸುತ್ತಮುತ್ತಲ ವರ್ತುಲವೆಲ್ಲ ಬೆಚ್ಚಿ ಬೀಳುವಂತೆ ಮಾಡಿತ್ತು. “ಅಯ್ಯೋ ಬಿರುಕುಬಿಟ್ಟಿತ್ತಾವ ಏರಿ ಕುಸೀತಾ ಐತೆ. ಅಗಾ! ಆಗ್ಲೆ ನೀರ್ ನುಗ್ಗಿದ್ವು, ದ್ಯಾವ್ರೆ ಏನಪ್ಪ ಗತಿ! ಬರ್‍ರಯ್ಯೋ ಬರ್‍ರಿ, ಬರ್‍ರೋ” ಎಂಬ ಧ್ವನಿ ಮೈಕೂದಲನ್ನು ನಿಮಿರಿಸುವಂತೆ ಮಾಡಿ ಆ ಹಾಹಾಕಾರ ಹವ್ವನೆ ಹಬ್ಬಿ ರಂಗಪ್ಪ ಜಗ್ಗನೆ ಎದ್ದು ನಿಲ್ಲುವುದಕ್ಕೂ ಚನ್ನಿ ಬಾಗಿಲನ್ನು ದಡಾರನೆ ನೂಕಿ ಒಳಬರುವುದಕ್ಕೂ ಸರಿಯಾಯಿತು. ರಂಗಪ್ಪ ಆಶ್ಚರ್ಯದಿಂದ ಥಟ್ಟನೆ ಹಾಗೇ ನಿಂತ. ಚನ್ನಿಗೆ ಏನು ಹೇಳಬೇಕೆಂದು ತೋಚದೆ ಏದುಸಿರುಬಿಡುತ್ತ ಸುಮ್ಮನೆ ಅವನ ಮುಖ ನೋಡಿದಳು. ಎರಡು ಮೂರು ನಿಮಿಷ ಬರೀ ಮಳೆಯ ಸದ್ದು: ಸುಯ್ಯೆಂದು ಹನಿಗಳನ್ನು ಅಳ್ಳಾಡಿಸುತ್ತ ಆಟವಾಡುವ ಗಾಳಿ; ಇವುಗಳ ಮಧ್ಯೆ ದಾರಿ ಬಿಡಿಸಿಕೊಂಡು ಬರಲು ಯತ್ನಿಸುವ ಏರಿಯ ಬಳಿಯ ತಡಬಡಿಕೆ. ಕಡೆಗೆ ರಂಗಪ್ಪನೇ “ಏನ್ ಬಂದೆ?” ಎಂದ. “ನ… ನ… ನಾನು ನಿನ್ನ ವೊಲ್ದಾಕ್ ಬತ್ತೀನಿ. ಆವತ್ತು ಕಾಲಿಕ್ಕಲ್ಲ ಅಂಬ್ತ ಹಟ ಮಾಡಿದ್ದು ತಪ್ಪಾತು” ಎಂದಳು. ರಂಗಪ್ಪ ಓ ಎಂದು ಉದ್ಗರಿಸಿದ. ”ಹೌದಾ” ಎಂದು ಕಣ್ಣಲ್ಲಿ ತುಂಟತನ ಚಿಮ್ಮಿದ. “ಕರಿಯಮ್ ದ್ಯಾವ್ರಾಣ್ಗೂ ಬತ್ತೀನಿ. ಅದ್ಕೇ ನಾನ್ ಓಡೋಡ್ ಬಂದೆ ನಿನ್ತಾವೀಗ. ನಿನ್ ವೊಲ್ದಾಗಿರೋ ಕಳೇನೆಲ್ಲ ಒಬ್ಳೇ ಬೇಕಿದ್ರು ತೆಗೀತೀನಿ. ಆಮ್ಯಾಲೆ ಯಾವಾಗ ಕರುದ್ರೂ ಬತ್ತೀನಿ” ಎಂದು ಚನ್ನಿ ಉದ್ವೇಗದ ಧ್ವನಿಯಲ್ಲಿ ಮಳೆಯನ್ನು ಸರಿಗಟ್ಟುವವಳಂತೆ ಹೇಳಿದಾಗ ರಂಗಪ್ಪ ನಗುತ್ತ ಏನೋ ಒಂದು ಥರಾ ಶೈಲಿಯಲ್ಲಿ “ಭೇಷ್, ಪರವಾಗಿಲ್ಲ” ಎಂದ.

ಇದನ್ನು ಓದಿದ್ದೀರಾ?: ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಚನ್ನಿಯಲ್ಲಿ ಉತ್ಸಾಹ ಹರಿಯಿತು. ಹತ್ತಿರಕ್ಕೆ ಬಂದಳು; ಮೆಲ್ಲನೆ ಅವನ ಕೈ ಹಿಡಿದುಕೊಂಡಳು; ನಡಗುವ ಕೈಗಳಿಂದ ಅವನನ್ನು ಮತ್ತೆ ಮತ್ತೆ ಸ್ಪರ್ಶಿಸುತ್ತ ಪುಳಕದ ಪಲ್ಲವಿಗೆ ಪಕ್ಕಾದಾಗ ಆತ ಇವಳ ಎರಡು ತೋಳುಗಳನ್ನೂ ಹಿಡಿದುಕೊಂಡ; ಹಾಗೇ ದಿಟ್ಟಿಸಿದ. ಮಳೆಯಲ್ಲಿ ತೊಯ್ದು ಬಂದ ದೇಹವನ್ನು ಕಣ್ಣಪಟ್ಟಿಯಲ್ಲಿ ಅಳೆದ. ಹಿಡಿದ ತೋಳುಗಳು ಬರೀ ಮೂಳೆ ಎಂದುಕೊಂಡ. ಮೈಗೆ ಅಂಟಿದ ಬಟ್ಟೆ ಬರೆಯಲ್ಲೂ ದೇಹದ ಏರುಪೇರು ಕಾಣದೆ ಮುಖ ಸಿಂಡರಿಸಿಕೊಂಡ. ಚನ್ನಿಯ ಕೈ ಕಂಪಿಸುತ್ತಿದ್ದವು; ತುಟಿ ಅದುರುತ್ತಿದ್ದವು. ಕಣ್ಣು ಅರೆ ಮುಚ್ಚಿಕೊಳ್ಳುತ್ತ, ಮೈಯಲ್ಲಿ ರೋಮಾಂಚನದ ಸೆಲೆಯೊಡೆಯುತ್ತ ಅವನ ಮೈಯನ್ನು ತಡವರಿಸುತ್ತಿದ್ದಳು. ರಂಗಪ್ಪ ಅವಳನ್ನೇ ದಿಟ್ಟಿಸುತ್ತ ಹಿಂದಿನ ಚನ್ನಿಯನ್ನು ಚಿತ್ರಿಸಿಕೊಂಡು, ಈಗಿವಳನ್ನು ಕಣ್ಣಲ್ಲೆ ಅಳೆದು, ನೆಣವಿಲ್ಲದ ಹೆಣ್ಣು ಅನ್ನಿಸಿ, ಅವಳ ಮೂಳೆದೋಳನ್ನು ಹಾಗೇ ಹಿಡಿದುಕೊಂಡು ಬಾಗಿಲ ಕಡೆಗೆ ಬಂದು ರಪ್ಪನೆ ಹೊರದಬ್ಬಿ, ಥುತ್ತೆಂದು ಉಗಿದು, ಬಾಗಿಲು ಹಾಕಿಕೊಂಡು, ”ಈಗ್ ಬಂದವ್ಳೆ ಈಗ, ಮೂಳೆ ಮ್ಯಾಲ್ ಚರ್ಮ ಮೆತ್ಕಂಡು, ಕೇಳಾಕಿಲ್ಲ ಇವ್ಳ್ ಸೆಡವು! ಈಗ್ ಮಹಾ ಬಂದ್ಬುಟ್ಳು” ಎಂದು ಏನೇನೋ ಅಂದುಕೊಳ್ಳುತ್ತಿರುವಾಗ ಚನ್ನಿ ದೊಪ್ಪನೆ ನೆಲಕ್ಕೆ ಬಿದ್ದು ಸ್ತಂಭಿತಳಾಗಿ, ಭಯಾನಕ ಸ್ಥಳದಲ್ಲಿ ಕಣ್ಣು ಕಟ್ಟಿ ತಂದುಬಿಟ್ಟಂತೆ ಭಯಗ್ರಸ್ತಳಾಗಿ, ಬೀಳುತ್ತಿರುವ ಮಳೆ, ಬೆಂಕಿ ಮಳೆಯಂತಾಗಿ ಭೂಮಿಯನ್ನು ತಡಕುತ್ತಿದ್ದಳು.

(ಕೃಪೆ: ತುಂಬೆ ಹೂವು, ಸಂ: ಡಾ. ಕರೀಗೌಡ ಬೀಚನಹಳ್ಳಿ, ಪ್ರ: ಕಿರಂ ಪ್ರಕಾಶನ, ಬೆಂಗಳೂರು)

ಬರಗೂರು ರಾಮಚಂದ್ರಪ್ಪ 4

ಬರಗೂರು ರಾಮಚಂದ್ರಪ್ಪ (1947): 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬರಗೂರು, ಶಿರಾ ತಾಲ್ಲೂಕುಗಳಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ. ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರು. ಕಾವ್ಯ, ಕಥೆ, ನಾಟಕ, ಕಾದಂಬರಿ, ವಿಮರ್ಶೆ, ಸಂಸ್ಕೃತಿ ಚಿಂತನೆ, ಸಿನೆಮಾ ನಿರ್ದೇಶನ ಕ್ಷೇತ್ರಗಳಲ್ಲಿ ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. ಭಾಷಣಕಾರ, ಕ್ರಿಯಾಶೀಲ ಸಾಂಸ್ಕೃತಿಕ ವ್ಯಕ್ತಿ. ಬಂಡಾಯ ಸಾಹಿತ್ಯ ಸಂಘಟನೆಯ ನೇತಾರರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪ್ರಶಸ್ತಿ, ರಾಜ್ಯದ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪದವಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ, ಚಲನಚಿತ್ರ ರಂಗದಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ನಿರ್ದೇಶನದ ಏಕವ್ಯಕ್ತಿ ಚಲನಚಿತ್ರವು ಗಿನ್ನಿಸ್ ದಾಖಲೆಯನ್ನು ಪಡೆದಿದೆ. ಪ್ರಕಟಿತ ಕೃತಿಗಳು: ಕನಸಿನ ಕನ್ನಿಕೆ, ಮರಕುಟಿಗ, ನೆತ್ತರಲ್ಲಿ ನೆಂದು ಹೂವು, ಗುಲಾಮಗೀತೆ, ಮಗುವಿನ ಹಾಡು, ಕಾಂಟೆಸ್ಸಾದಲ್ಲಿ ಕಾವ್ಯ(ಕವನ ಸಂಕಲನಗಳು); ಸುಂಟರಗಾಳಿ, ಬಯಲಾಟ ಭೀಮಣ್ಣ, ಒಂದು ಊರಿನ ಕತೆಗಳು, ಕಪ್ಪು ನೆಲದ ಕೆಂಪುಕಾಲು(ಕಥಾ ಸಂಕಲನಗಳು); ಸೂತ್ರ, ಸೀಳು ನೆಲ, ಸಂಗಪ್ಪನ ಸಾಹಸಗಳು, ಬೆಂಕಿ, ಸೂರ್ಯ, ಭರತ ನಗರಿ, ಕೋಟೆ, ಗಾಜಿನ ಮನೆ, ಸ್ವಪ್ನ ಮಂಟಪ, ಶಬರಿ(ಕಾದಂಬರಿಗಳು); ಕನ್ನಡಾಭಿಮಾನ, ಸಂಸ್ಕೃತಿ: ಶ್ರಮ ಮತ್ತು ಸೃಜನಶೀಲತೆ, ಕನ್ನಡ ಪ್ರಜ್ಞೆ, ಕನ್ನಡ ಸಾಹಿತ್ಯವೆಂಬ ಸ್ವಾತಂತ್ರ್ಯ ಹೋರಾಟ, ಪರಂಪರೆಯೊಂದಿಗೆ ಪಿಸುಮಾತು, ಬಂಡಾಯ ಸಾಹಿತ್ಯ ಮೀಮಾಂಸೆ, ಸಂಸ್ಕೃತಿ ಉಪ ಸಂಸ್ಕೃತಿ, ಕನ್ನಡ ಸಾಹಿತ್ಯ ಮತ್ತು ಸಿನಿಮಾ, ಶಬ್ದವಿಲ್ಲದ ಯುದ್ಧ, ಜನಪದ ನಾಯಕ ಡಾ.ರಾಜಕುಮಾರ(ವಿಮರ್ಶೆ). ಇವರು ನಿರ್ದೇಶಿಸಿದ ಚಲನಚಿತ್ರಗಳು ಹಗಲುವೇಷ, ಶಬರಿ, ತಾಯಿ, ಸ್ವಪ್ನಮಂಟಪ, ಅಮೃತಮತಿ, ಶಾಂತಿ, ಭಾಗೀರಥಿ, ಕ್ಷಾಮ, ಬೆಕ್ಕು, ಕರಡಿಪುರ ಕೋಟೆ ಮತ್ತು ಮಹಾಕವಿ. ಸದ್ಯ ಬೆಂಗಳೂರಿನಲ್ಲಿ ವಾಸ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ವಿವೇಕ ಶಾನಭಾಗ ಅವರ ಕತೆ | ಲಂಗರು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...