- ಗುತ್ತಿಗೆ ಅವಧಿ ಮುಗಿದರೂ ಬಸ್ ತಂಗುದಾಣ ಹಾಗೂ ಸ್ಕೈವಾಕ್‌ಗಳಲ್ಲಿ ಜಾಹೀರಾತು ಪ್ರದರ್ಶನ
- ಜಾಹೀರಾತು ಬಾಕಿ ಬಿಲ್ ಪಾವತಿ ಮಾಡದ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆ
ಬೆಂಗಳೂರಿನಲ್ಲಿ ಜಾಹೀರಾತುದಾರರಿಂದ ಸುಮಾರು ₹50 ಕೋಟಿ ಬಾಕಿ ಸಂಗ್ರಹಿಸುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಫಲಾಗಿದೆ. ಆದರೂ, ಇದೀಗ ನಗರದಲ್ಲಿ ಮತ್ತಷ್ಟು ಸ್ಕೈವಾಕ್ ನಿರ್ಮಾಣ ಮಾಡಲು ಹಾಗೂ ಜಾಹೀರಾತು ನೀಡಲು ಮತ್ತೆ ಟೆಂಡರ್ ಕರೆದಿದೆ.
ಜಾಹೀರಾತು ಶುಲ್ಕ ಪಾವತಿಸುವಲ್ಲಿ ವಿಫಲವಾಗಿರುವ ಒಂಬತ್ತು ಏಜೆನ್ಸಿಗಳು ಮತ್ತೆ ಸ್ಕೈವಾಕ್ ನಿರ್ಮಾಣ ಮತ್ತು ಜಾಹೀರಾತು ಅಳವಡಿಕೆಗೆ ಅದೇ ಜಾಗಗಳನ್ನು ಬಾಡಿಗೆಗೆ ಪಡೆಯಲು ಬಿಡ್ ಮಾಡಿವೆ. ಈ ಕಂಪನಿಗಳು ಜಾಗದ ಬಾಡಿಗೆ, ಜಾಹೀರಾತು ಶುಲ್ಕ, ತೆರಿಗೆ ಮತ್ತು ಜಿಎಸ್‌ಟಿ ಸೇರಿದಂತೆ ಇತರ ಶುಲ್ಕವನ್ನು ಬಿಬಿಎಂಪಿಗೆ ಇನ್ನೂ ಪಾವತಿಸಿಲ್ಲ. ಇದೀಗ, ಟೆಂಡರ್ ಪಡೆಯಲು ಹಳೇ ಬಾಕಿಯನ್ನು ಪಾವತಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಕಂಪನಿಗಳಿಗೆ ಬಾಕಿ ಪಾವತಿಸುವಂತೆ ಬಿಬಿಎಂಪಿ 36 ನೋಟಿಸ್ ಜಾರಿ ಮಾಡಿದೆ. ಒಟ್ಟು ಬಾಕಿಯಿರುವ ಮೊತ್ತವು ₹26 ಕೋಟಿಗಿಂತ ಹೆಚ್ಚಾಗಿದೆ ಮತ್ತು ಈ ಮೊತ್ತಕ್ಕೆ 18% ದಂಡದೊಂದಿಗೆ ₹50 ಕೋಟಿ ಮೊತ್ತವಾಗಿದೆ.
ಜಯನಗರ 3ನೇ ಬ್ಲಾಕ್ ಹಾಗೂ ಯಶವಂತಪುರ ರೈಲು ನಿಲ್ದಾಣದ ಮುಂಭಾಗ ಸೇರಿದಂತೆ 36 ಸ್ಕೈವಾಕ್‌ಗಳನ್ನು ಕಂಪನಿಗಳು ನಿರ್ಮಿಸಿವೆ. ಕೆಲವು ಕಂಪನಿಗಳು ಕೆಲಸ ಪೂರ್ಣಗೊಳಿಸಲು ಸುಮಾರು ಆರು ವರ್ಷಗಳನ್ನು ತೆಗೆದುಕೊಂಡಿವೆ. ಉದಾಹರಣೆಗೆ, ತಾವರೆಕೆರೆ ಜಂಕ್ಷನ್ ಬಳಿ ಸ್ಕೈವಾಕ್ 2018 ರಲ್ಲಿ ಪೂರ್ಣಗೊಂಡಿತು. ಇದಕ್ಕೆ 2012ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಕಾಮಗಾರಿ ವಿಳಂಬದಿಂದ ಬಿಬಿಎಂಪಿ ಬೊಕ್ಕಸಕ್ಕೆ ಭಾರೀ ನಷ್ಟ ಉಂಟುಮಾಡಿದೆ. ಆದರೆ, ಈ ಯೋಜನೆಗಳಿಂದ ಗಳಿಸಿದ ಹಣವನ್ನು ಬಿಬಿಎಂಪಿ ಇನ್ನೂ ಸಂಗ್ರಹಿಸಿಲ್ಲ.
ಮತ್ತೊಂದೆಡೆ, ಕೆಲವು ಕಂಪನಿಗಳ ಒಪ್ಪಂದಗಳು 2017, 2019, 2020 ಮತ್ತು 2021ರಲ್ಲಿ ಕೊನೆಗೊಂಡಿದ್ದರೂ ಅವರು ಸ್ಕೈವಾಕ್‌ಗಳಲ್ಲಿ ಜಾಹೀರಾತು ಪ್ರಕಟ ಮಾಡುವುದನ್ನು ಮುಂದುವರೆಸಿದ್ದಾರೆ.
ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಅಮರೇಶ್ ಮಾತನಾಡಿ, “ಗುತ್ತಿಗೆ ಅವಧಿ ಮುಗಿದರೂ ಬಸ್ ತಂಗುದಾಣ ಹಾಗೂ ಸ್ಕೈವಾಕ್ ಗಳಲ್ಲಿ ಜಾಹೀರಾತು ಪ್ರದರ್ಶನ ಮುಂದುವರಿದಿದೆ” ಎಂದು ಆರೋಪಿಸಿದರು.
“ಹೊಸದಾಗಿ ಟೆಂಡರ್ ಕರೆಯುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿಕೊಂಡರೂ ಬಾಕಿ ವಸೂಲಿ ಮಾಡುವ ಬಗ್ಗೆ ಸುಮ್ಮನಿದ್ದಾರೆ. ಬಿಬಿಎಂಪಿ ಡಿಸೆಂಬರ್ 2022ರಲ್ಲಿ ನೋಟಿಸ್ ನೀಡಿತ್ತು. ಬೆಂಗಳೂರಿನ ಅನೇಕ ಸ್ಕೈವಾಕ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ಸ್ಕೈವಾಕ್‌ಗಳು ಆದಾಯವನ್ನು ಗಳಿಸುತ್ತವೆ. ನಿರ್ವಹಣೆಗೆ ಸಾಕಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಅಗತ್ಯವಿದ್ದರೆ ಹೊಸದನ್ನು ನಿರ್ಮಿಸಲು ಸಹ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈ ಬಗ್ಗೆ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮುಂಗಾರು ಮಳೆಯಿಂದಾಗುವ ಸಮಸ್ಯೆ ನಿಭಾಯಿಸಲು ಸಂಪೂರ್ಣ ಸನ್ನದ್ಧ : ತುಷಾರ್ ಗಿರಿನಾಥ್
“ಬಾಕಿ ಪಾವತಿಸದ ಏಜೆನ್ಸಿಗಳನ್ನು ನೂತನ ಟೆಂಡರ್‌ಗಳಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ. ಅಂತಹ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ” ಎಂದು ಜಾಹೀರಾತು ವಿಭಾಗದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.