- ಎಂಟು ಶತಮಾನಗಳಿಂದ ನಡೆಯುತ್ತಿರುವ ಐತಿಹಾಸಿಕ ಕರಗ ಉತ್ಸವ
- 12ನೇ ಬಾರಿಗೆ ಕರಗ ಹೊರಲಿರುವ ತಿಗಳ ಸಮುದಾಯದ ಅರ್ಚಕ ಜ್ಞಾನೇಂದ್ರ
ವಿಶ್ವವಿಖ್ಯಾತ ಹಾಗೂ ಭಾವೈಕ್ಯತೆ ಪ್ರತೀಕ ಬೆಂಗಳೂರು ಕರಗ ಉತ್ಸವ ಜತೆಗೆ ಧರ್ಮರಾಯಸ್ವಾಮಿ ಮಹಾರಥೋತ್ಸವ ಗುರುವಾರ ಮಧ್ಯರಾತ್ರಿ ನಡೆಯಲಿದೆ.
ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಕಳೆದ ಎಂಟು ಶತಮಾನಗಳಿಂದ ನಡೆಯುತ್ತಿದೆ. ಈ ವರ್ಷ ಚೈತ್ರ ಪೂರ್ಣಿಮೆ ಬೆಳದಿಂಗಳಲ್ಲಿ ಮಧ್ಯರಾತ್ರಿ 12.30ಕ್ಕೆ ಕರಗಕ್ಕೆ ಚಾಲನೆ ದೊರೆಯಲಿದೆ. ಕರಗ ವೀಕ್ಷಣೆಗೆ ಈ ಬಾರಿ 5 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆಯಿದೆ.
ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಪೌರ್ಣಮಿಯ ಗುರುವಾರ ಮಧ್ಯರಾತ್ರಿ 12.30ಕ್ಕೆ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ 12ನೇ ಬಾರಿ ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ.
ಈ ವರ್ಷದ ಕರಗದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಚೈತ್ರ ಹುಣ್ಣಿಮೆಯ ಗುರುವಾರ ಮಧ್ಯರಾತ್ರಿ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಲಿದೆ. ಇದಕ್ಕೂ ಮುನ್ನ ಗುರುವಾರ ಬೆಳಗ್ಗೆ ದ್ರೌಪದಿ ದೇವಿಗೆ ಅರಿಶಿನ ಬಣ್ಣದ ಸೀರೆ ಉಡಿಸಿ, ಬಳೆಗಳನ್ನು ತೊಡಿಸಿ ಕರಗ ಹೊತ್ತ ಅರ್ಚಕರು ಗಂಗಾಪೂಜೆ ಸಲ್ಲಿಸುತ್ತಾರೆ. ಅಲ್ಲಿಂದ ಹಸಿ ಕರಗವನ್ನು ಮಂಟಪಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ, ರಾತ್ರಿ 12.30ಕ್ಕೆ ಕರಗ ಮೆರವಣಿಗೆ ಹೊರಡುತ್ತದೆ. ಕರಗ ಮೆರವಣಿಗೆಯೂ ಸುಮಾರು 38 ಕಿ.ಮೀ ಒಳಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಕರಗ ಶಕ್ತ್ಯೋತ್ಸವ | ತಾತ್ಕಾಲಿಕ ಸಂಚಾರ ನಿರ್ಬಂಧ ಎಲ್ಲೆಲ್ಲಿ? ಇಲ್ಲಿದೆ ನೋಡಿ
ನಗರದ ಕುಂಬಾರಪೇಟ್ ರೋಡ್, ರಾಜ ಮಾರ್ಕೆಟ್ ಸರ್ಕಲ್-ಸಿಟಿ ಮಾರ್ಕೆಟ್ ಸರ್ಕಲ್ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ಮೆರವಣಿಗೆ ಹೋಗುತ್ತದೆ. ಅಲ್ಲಿಂದ, ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ, ಬಳೇಪೇಟೆ ಸರ್ಕಲ್ ಮೂಲಕ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ತೆರಳಿ, ಕಬ್ಬನ್ ಪೇಟೆ ಮುಖ್ಯ ರಸ್ತೆ ಮೂಲಕ ಶ್ರೀಧರ್ಮರಾಯ ಸ್ವಾಮಿ ದೇಗುಲಕ್ಕೆ ಮರಳುತ್ತದೆ.