ಪರೀಕ್ಷೆ ಬರೆದು ಒಂದೂವರೆ ವರ್ಷ ಕಳೆದರೂ ಫಲಿತಾಂಶ ಬಾರದೆ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳ ಬರೋಬ್ಬರಿ 46 ಉತ್ತರ ಪತ್ರಿಕೆಗಳು ಬೆಂಗಳೂರು ವಿ.ವಿ.ಯಲ್ಲಿ ನಾಪತ್ತೆಯಾಗಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದಾಗಿ ಪ್ರಸ್ತುತ ನಾಲ್ಕನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
2025ರ ಜನವರಿಯಲ್ಲಿ ಈ ವಿದ್ಯಾರ್ಥಿಗಳು ದ್ವಿತೀಯ ಸೆಮಿಸ್ಟರ್ ಪರೀಕ್ಷೆ ಬರೆದಿದ್ದರು. ಅದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಉಳಿದೆಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಆದರೆ, ಈ 46 ವಿದ್ಯಾರ್ಥಿಗಳು ಏಪ್ರಿಲ್‌ನಿಂದಲೇ ತಮ್ಮ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಫಲಿತಾಂಶ ವಿಳಂಬವಾದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ವಿ.ವಿಗೆ ಜ್ಞಾಪನಾ ಪತ್ರ (ರಿಮೈಂಡರ್) ಬರೆದಾಗಷ್ಟೇ, ‘ಆಧುನಿಕ ಬ್ಯಾಂಕಿಂಗ್’ (Modern Banking) ವಿಷಯದ ಉತ್ತರ ಪತ್ರಿಕೆಗಳೇ ನಾಪತ್ತೆಯಾಗಿರುವ ಬೆಚ್ಚಿಬೀಳಿಸುವ ಸತ್ಯ ಬಹಿರಂಗವಾಗಿದೆ.
ಈ ಎಡವಟ್ಟಿನ ಕುರಿತು ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲು, ಅವರು ಇತರ ವಿಷಯಗಳಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ‘ಆಧುನಿಕ ಬ್ಯಾಂಕಿಂಗ್’ ವಿಷಯದ ಅಂಕಗಳನ್ನು ಲೆಕ್ಕಹಾಕಿ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ. ಜೊತೆಗೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪರೀಕ್ಷಾ ಉಸ್ತುವಾರಿ, ಸಿಸ್ಟಮ್ಸ್ ಎಂಜಿನಿಯರ್ ಹಾಗೂ ಕಾಲೇಜಿನ ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಲು ತೀರ್ಮಾನಿಸಲಾಗಿದೆ. “ಉತ್ತರ ಪತ್ರಿಕೆಗಳನ್ನು ಪತ್ತೆಹಚ್ಚಲು ಸಿಸ್ಟಮ್ ಮ್ಯಾನೇಜರ್‌ಗೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಅವರು ವಿಫಲರಾದರೆ, ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು” ಎಂದು ಕುಲಪತಿ ಸಿ. ಶಿವರಾಜು ಸ್ಪಷ್ಟಪಡಿಸಿದ್ದಾರೆ.
ವಿಶ್ವವಿದ್ಯಾಲಯದ ಈ ಬೇಜವಾಬ್ದಾರಿತನಕ್ಕೆ ಸಿಂಡಿಕೇಟ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪರ್ಯಾಯ ಮಾರ್ಗದಲ್ಲಿ ಫಲಿತಾಂಶ ಪ್ರಕಟಿಸುವುದರಿಂದ ಅಸಲಿ ಸಮಸ್ಯೆ ಬಗೆಹರಿಯುವುದಿಲ್ಲ. ಭಾರತೀಯ ಅಂಚೆ ಮೂಲಕವೇ ವಿ.ವಿಯ ಮೌಲ್ಯಮಾಪನ ವಿಭಾಗವನ್ನು ತಲುಪಿದ್ದ ಉತ್ತರ ಪತ್ರಿಕೆಗಳು ಕಣ್ಮರೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅತ್ಯಂತ ಗೌಪ್ಯವಾಗಿರಬೇಕಾದ ಉತ್ತರ ಪತ್ರಿಕೆಗಳ ನಿರ್ವಹಣೆಯಲ್ಲಿ ಇಷ್ಟೊಂದು ನಿರ್ಲಕ್ಷ್ಯ ವಹಿಸಿದವರು ಯಾರೆಂದು ಸ್ಪಷ್ಟವಾಗಬೇಕು” ಎಂದು ಸದಸ್ಯ ಡಾ.ಎಚ್.ಜೆ. ಜೈಕೃಷ್ಣ ಆಗ್ರಹಿಸಿದ್ದಾರೆ.
“ವಿ.ವಿಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. 2013 ರಿಂದ 2023ರ ನಡುವಿನ ಅವಧಿಯಲ್ಲೂ 97 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆಯಾಗಿ ಫಲಿತಾಂಶ ತಡೆಹಿಡಿಯಲಾಗಿತ್ತು. ಆಗಲೂ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಸಮಿತಿ ರಚಿಸಲಾಗಿತ್ತು. ಆದರೂ ಮತ್ತೆ ಅದೇ ತಪ್ಪು ಮರುಕಳಿಸುತ್ತಿದೆ” ಎಂದು ಮತ್ತೊಬ್ಬ ಸದಸ್ಯ ಲೋಕೇಶ್ ರಾಮ್ ಪರೀಕ್ಷಾ ವ್ಯವಸ್ಥೆಯ ಅವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡರು.
ಈ ಹಗರಣದ ಹಿಂದೆ ತಾಂತ್ರಿಕ ಲೋಪ ಹಾಗೂ ನಿಯಮ ಉಲ್ಲಂಘನೆಯ ಶಂಕೆಯೂ ವ್ಯಕ್ತವಾಗಿದೆ. “ಡಿಜಿಟಲ್ ಮೌಲ್ಯಮಾಪನಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಅಭಿವೃದ್ಧಿಪಡಿಸಿದ್ದ ಅಧಿಕೃತ ತಂತ್ರಾಂಶವನ್ನು ಬಳಸುವ ಬದಲು, ಸಿಂಡಿಕೇಟ್‌ನ ಅನುಮತಿಯನ್ನೇ ಪಡೆಯದೆ ಬೇರೊಂದು ತಂತ್ರಾಂಶವನ್ನು ಬಳಸಲಾಗಿದೆ ಎಂಬ ಆರೋಪಗಳೂ ಇವೆ. ಇದೇ ಅವ್ಯವಸ್ಥೆ ಈ ರಾದ್ಧಾಂತಕ್ಕೆ ಕಾರಣವಾಗಿರಬಹುದು” ಎಂದು ಹೆಸರು ಹೇಳಲಿಚ್ಛಿಸದ ಸಿಂಡಿಕೇಟ್ ಸದಸ್ಯರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಾರೆಯಾಗಿ ವಿ.ವಿಯ ಆಡಳಿತ ವೈಫಲ್ಯಕ್ಕೆ ವಿದ್ಯಾರ್ಥಿಗಳು ಬಲಿಯಾಗುವಂತಾಗಿದೆ.






