ರಾಜಧಾನಿ ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ನಕಲಿ ಹಾಗೂ ಅವಧಿ ಮುಗಿದ ಕ್ಯಾನ್ಸರ್ ಮತ್ತು ಜೀವ ರಕ್ಷಕ ಗಂಭೀರ ಸ್ವರೂಪದ ಔಷಧಗಳನ್ನು (ICU ಇಂಜೆಕ್ಷನ್‌ಗಳು) ಪೂರೈಸುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರು ನಗರ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ಪತ್ತೆ ಹಚ್ಚಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮಿನರ್ವ ಸರ್ಕಲ್ ಬಳಿ ಇರುವ ‘ಕೃಪಾ ಹೆಲ್ತ್‌ಕೇರ್’ ಎಂಬ ಫಾರ್ಮಸಿಯ ಮಾಲೀಕ ವೀರೇಶ್ ಕುಮಾರ್ ಜೈನ್ ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹಾಗೂ ದೊಡ್ಡೆರಿ ಪ್ರದೇಶದ ಫಾರ್ಮ್‌ಹೌಸ್ ಒಂದರ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧಗಳು, ನಕಲಿ ಬಿಲ್ಲುಗಳು ಹಾಗೂ ಇಂಜೆಕ್ಷನ್ ಭರ್ತಿ ಮಾಡುವ ಉಪಕರಣಗಳನ್ನು ಜಪ್ತಿ ಮಾಡಿದ್ದರು.
ಇದನ್ನೂ ಓದಿ: ಕಂಪನಿಗಳ ಲೇಬಲ್ ಅಂಟಿಸಿ ನಕಲಿ ಔಷಧಿ ಮಾರಾಟ; ಎಸ್‌ಐಟಿ ತನಿಖೆಗೆ ಚಿಂತನೆ: ಯು ಟಿ ಖಾದರ್
ಈ ಪ್ರಕರಣದ ಬೆನ್ನುಹತ್ತಿದ ತನಿಖಾಧಿಕಾರಿಗಳು, ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸರಣಿ ದಾಳಿ ನಡೆಸಿ ಪೂರೈಕೆ ಜಾಲವನ್ನು ತನಿಖೆಗೊಳಪಡಿಸಿದ್ದರು. ಈ ಲಿಂಕ್ ಆಧಾರದ ಮೇಲೆ ಮಿನರ್ವ ಸರ್ಕಲ್‌ನಲ್ಲಿರುವ ಕೃಪಾ ಹೆಲ್ತ್‌ಕೇರ್ ಮೇಲೆ ದಾಳಿ ನಡೆಸಿ ಬೃಹತ್ ಪ್ರಮಾಣದ ನಕಲಿ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖ್ಯಾತ ಕಂಪನಿಗಳ ದುಬಾರಿ ಕ್ಯಾನ್ಸರ್ ಹಾಗೂ ಜೀವ ರಕ್ಷಕ ಔಷಧಗಳನ್ನು ಸುಮಾರು ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಈ ಜಾಲವು ಆಫರ್ ನೀಡುತ್ತಿತ್ತು. ಕಡಿಮೆ ಬೆಲೆಯ ಸಾಮಾನ್ಯ ಔಷಧಗಳಿಗೆ ಪ್ರಸಿದ್ಧ ಕಂಪನಿಗಳ ನಕಲಿ ಲೇಬಲ್ ಹಾಕಿ ಮಾರಾಟ ಮಾಡಲಾಗುತ್ತಿತ್ತು. ಜೊತೆಗೆ, ಅವಧಿ ಮುಗಿದ ಔಷಧಗಳನ್ನು ಹೊಸ ಕಂಟೈನರ್‌ಗಳಿಗೆ ತುಂಬಿ ನಕಲಿ ಲೇಬಲ್ ಹಚ್ಚಿ ಚಲಾವಣೆಗೆ ಬಿಡಲಾಗುತ್ತಿತ್ತು.
ನಗರದ ಮಿನರ್ವ ಸರ್ಕಲ್‌ನಲ್ಲಿದ್ದ ಕೃಪಾ ಹೆಲ್ತ್‌ಕೇರ್ ಮುಖ್ಯ ಸಂಗ್ರಹಣಾ ಕೇಂದ್ರವಾಗಿ ಕೆಲಸ ಮಾಡುತ್ತಿದ್ದು, ಇಲ್ಲಿಂದ ನಗರದ ವಿವಿಧ ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್‌ಗಳಿಗೆ ಔಷಧ ಸರಬರಾಜಾಗುತ್ತಿತ್ತು.
ಬಂಧಿತ ವೀರೇಶ್ ಕಳೆದ 5 ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದಾನೆ ಎನ್ನಲಾಗಿದ್ದು, ಪ್ರಕರಣದ ಮುಖ್ಯ ಸೂತ್ರಧಾರಿ ಎನ್ನಲಾದ ಪ್ರಶಾಂತ್ ಎಂಬಾತ ತಲೆಮರೆಸಿಕೊಂಡಿದ್ದಾನೆ. 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳು (MR) ಈ ನಕಲಿ ಔಷಧಗಳ ಪೂರೈಕೆಯಲ್ಲಿ ಭಾಗಿಯಾಗಿದ್ದು, ಜಾಲವು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ಹೊರರಾಜ್ಯಗಳಿಗೂ ಹಬ್ಬಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಬ್ಯಾಂಕ್ ವಹಿವಾಟು ಹಾಗೂ ರಶೀದಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.





