ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ನಗರದ ರಸ್ತೆಗಳಲ್ಲಿ ವಾಹನಗಳ ಒತ್ತಡ ಕಡಿಮೆ ಮಾಡುವ ಮತ್ತು ವಿದ್ಯಾರ್ಥಿಗಳ ಸುಮಗವಾಗಿ ಶಾಲೆಗೆ ತಲುಪುವಂತೆ ಮಾಡುವ ಉದ್ದೇಶದಿಂದ ಶಾಲೆಗಳ ವೇಳಾಪಟ್ಟಿಯನ್ನು ಬದಲಾಯಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಶಾಲಾ ಸಮಯವನ್ನು ಪರಿಷ್ಕರಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಮತ್ತು ಸಾರ್ವಜನಿಕರಿಂದ ಮನವಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಳಗಿನ ಮತ್ತು ಸಂಜೆಯ ಅವಧಿಯಲ್ಲಿ ಶಾಲಾ ವಾಹನಗಳು ಮತ್ತು ಕಚೇರಿಗೆ ತೆರಳುವ ವಾಹನಗಳು ಒಂದೇ ಸಮಯದಲ್ಲಿ ರಸ್ತೆಗೆ ಇಳಿಯುವುದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಹಿಂದೆ ಹೈಕೋರ್ಟ್ ಕೂಡ ಸಂಚಾರ ನಿಯಂತ್ರಣಕ್ಕಾಗಿ ಶಾಲಾ ಮತ್ತು ಕಚೇರಿ ವೇಳಾಪಟ್ಟಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು. ಶಾಲಾ ಸಮಯವನ್ನು ಸುಮಾರು 30 ನಿಮಿಷದಿಂದ 1 ಗಂಟೆಗಳ ಕಾಲ ಮುಂಚಿತವಾಗಿ ಅಥವಾ ಬದಲಾಯಿಸಿ ನಿಗದಿಪಡಿಸುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ಹೆಚ್ಚುವುದರ ಜೊತೆಗೆ ರಸ್ತೆಗಳಲ್ಲಿ ವಾಹನಗಳ ಒತ್ತಡವೂ ಕಡಿಮೆಯಾಗಲಿದೆ ಎಂಬುದು ಶಿಕ್ಷಣ ಇಲಾಖೆಯ ಲೆಕ್ಕಾಚಾರ.
ಈ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಶಿಕ್ಷಣ ಇಲಾಖೆಯು ವಿವಿಧ ಭಾಗಿದಾರರೊಂದಿಗೆ ಸಭೆ ನಡೆಸಲಿದೆ. ಸಂಚಾರ ಪೊಲೀಸ್ ಅಧಿಕಾರಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಶಾಲಾ ವಾಹನ ಚಾಲಕರ ಸಂಘ ಹಾಗೂ ಪೋಷಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.




