ದಂಡ/ಶುಲ್ಕವನ್ನು 'ಅಭಿವೃದ್ಧಿ ಶುಲ್ಕ' ಎಂದು ಕರೆಯಲಾಗಿದೆ. ಆಸ್ತಿಯ ವಿಸ್ತೀರ್ಣ ಮತ್ತು ಅದು ಇರುವ ಪ್ರದೇಶಕ್ಕೆ ಅನುಗುಣವಾಗಿ ನಿಗದಿಯಾಗುವ ಗೈಡೆನ್ಸ್ ಅವ್ಯಾಲ್ಯೂ ಆಧಾರದ ಮೇಲೆ ಶುಲ್ಕ ನಿರ್ಧರಿಸಲಾಗುತ್ತದೆ.
ಬೆಂಗಳೂರಿನ ಆಸ್ತಿ ಮಾಲೀಕರಲ್ಲಿ ದೀರ್ಘಕಾಲದಿಂದ ಚರ್ಚೆಯಲ್ಲಿರುವ ವಿಷಯ- ‘ಬಿ’ ಖಾತಾದಿಂದ ‘ಎ’ ಖಾತಾಕ್ಕೆ ಬದಲಾವಣೆ. ಇತ್ತೀಚೆಗೆ, ಈ ವಿಚಾರವಾಗಿ ಕರ್ನಾಟಕ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆಸ್ತಿ ಮಾಲೀಕರು ತಮ್ಮ ಅಸ್ತಿಯನ್ನು ‘ಬಿ’ ಖಾತಾದಿಂದ ‘ಎ’ ಖಾತಾಗೆ ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ ಶಿವಕುಮಾರ್, ”ಬೆಂಗಳೂರಿನಲ್ಲಿ 23 ಲಕ್ಷ ಆಸ್ತಿಗಳಿವೆ. ಅವುಗಳಲ್ಲಿ 16 ಲಕ್ಷ ಆಸ್ತಿಗಳು ಎ ಖಾತಾ ಮತ್ತು 7 ಲಕ್ಷ ಬಿ ಖಾತೆಯಲ್ಲಿವೆ. ಬಿ ಖಾತಾ ಹೊಂದಿರುವವರು ಬ್ಯಾಂಕ್ ಸಾಲ, ಮಾರಾಟಕ್ಕೆ ಸಂಬಂಧಿಸಿದಂತೆ ತೊಡಕು ಎದುರಿಸುತ್ತಿದ್ದಾರೆ. ಹೀಗಾಗಿ, ಬಿ ಖಾತಾಗಳನ್ನು ಎ ಖಾತಾ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಸ್ತಿ ಮಾಲೀಕರು ತಮ್ಮ ಆಸ್ತಿಯ ಗೈಡೆನ್ಸ್ ವ್ಯಾಲ್ಯೂನಲ್ಲಿ 2%ಅನ್ನು ದಂಡವಾಗಿ ಪಾವತಿಸಿ ಎ ಖಾತೆಗೆ ಬದಲಾಯಿಸಿಕೊಳ್ಳಬಹುದು” ಎಂದು ಹೇಳಿದ್ದಾರೆ.
‘ಎ’ ಖಾತಾ ಮತ್ತು ‘ಬಿ’ ಖಾತಾ ಅಂದರೇನು?
‘ಎ’ ಖಾತಾ: ಕಟ್ಟಡ ನಿರ್ಮಾಣಕ್ಕೆ ಅಧಿಕೃತವಾಗಿ ಅನುಮೋದನೆ ಹೊಂದಿರುವ ಆಸ್ತಿ ಮತ್ತು ಎಲ್ಲ ನೀತಿ-ನಿಯಮಗಳನ್ನು ಪಾಲಿಸಿದ ಆಸ್ತಿಗಳಿಗೆ ನೀಡುವ ದಾಖಲೆ. ಇದು ಆಸ್ತಿಯ ಕಾನೂನುಬದ್ಧತೆಯನ್ನು ದೃಢೀಕರಿಸುತ್ತದೆ.
‘ಬಿ’ ಖಾತಾ: ನಿಯಮಗಳನ್ನು ಉಲ್ಲಂಘಿಸಿರುವ ಅಥವಾ ಕಂದಾಯ ಭೂಮಿಯಲ್ಲಿ ನಿರ್ಮಿಸಲಾದ ಆಸ್ತಿಗಳಿಗೆ ನೀಡುವ ತಾತ್ಕಾಲಿಕ ದಾಖಲೆ. ಬಿಬಿಎಂಪಿ ಕೇವಲ ಆಸ್ತಿ ತೆರಿಗೆ ವಸೂಲಿ ಮಾಡಲು ಈ ರಿಜಿಸ್ಟರ್ ನಿರ್ವಹಿಸುತ್ತದೆ. ಇದು ಆಸ್ತಿಗೆ ಸಂಪೂರ್ಣ ಕಾನೂನು ಮಾನ್ಯತೆ ನೀಡುವುದಿಲ್ಲ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಹೇಗೆ?
ಬಿ ಖಾತಾದಿಂದ ಎ ಖಾತೆಗೆ ಆಸ್ತಿಯನ್ನು ಬದಲಾಯಿಸಲು ರಾಜ್ಯ ಸರ್ಕಾರವು ‘ನನ್ನ ಖಾತಾ ನನ್ನ ಹಕ್ಕು’ ಅಭಿಯಾನ ಆರಂಭಿಸಿದೆ. ಈ ಅಭಿಯಾನ ನಡೆಯುವ ಸ್ಥಳದಲ್ಲಿ ಮೊದಲಿಗೆ ಅರ್ಜಿ ಸಲ್ಲಿಸಬೇಕು. ಆ ನಂತರ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು.
ಅರ್ಜಿ ಸಲ್ಲಿಕೆಯಾದ 6 ತಿಂಗಳೊಳಗೆ ಅಧಿಕಾರಿಗಳು ಆಸ್ತಿ ಪರಿಶೀಲನೆ ಮಾಡಿ, ಖಾತಾ ಬದಲಾವಣೆ ಸಾಧ್ಯವಾದರೆ ದಂಡವಾಗಿ ಆಸ್ತಿಯ ಗೈಡೆನ್ಸ್ ವ್ಯಾಲ್ಯೂನಲ್ಲಿ 2%ರಷ್ಟು ಹಣವನ್ನು ಕಟ್ಟಿಸಿಕೊಂಡು ಎ ಖಾತಾಗೆ ಪರಿವರ್ತನೆ ಮಾಡಿಕೊಡುತ್ತಾರೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಗರಿಷ್ಠ ಒಂದು ವರ್ಷ ಸಮಯವೂ ಆಗಬಹುದು. ಗಮನಾರ್ಹವೆಂದರೆ, ಈ ಗೈಡೆನ್ಸ್ ವ್ಯಾಲ್ಯೂ ಈ ಹಿಂದೆ 5% ಇತ್ತು. ಈಗ 2%ಗೆ ಇಳಿಸಲಾಗಿದೆ.
ಪ್ರತಿ ಶನಿವಾರ ಅಭಿಯಾನ
ಡಿ.ಕೆ ಶಿವಕುಮಾರ್ ಮಾಹಿತಿ ನೀಡಿರುವಂತೆ, ಮೇ 16ರಿಂದ ಮೂರು ತಿಂಗಳುಗಳ ಕಾಲ ಪ್ರತಿ ಶನಿವಾರ ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ನಡೆಯಲಿದೆ. ಈ ಅಭಿಯಾನಕ್ಕಾಗಿ ಜಿಬಿಎ ಅಡಿಯಲ್ಲಿರುವ 5 ಪಾಲಿಕೆಗಳಿಗೆ ತಲಾ 10 ಸ್ಥಳಗಳಂತೆ ಒಟ್ಟು 50 ಜಾಗಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದ್ದರೂ ಸಹ ಅಧಿಕಾರಿಗಳು ಅಭಿಯಾನದಲ್ಲಿ ತೊಡಗಿಸಿಕೊಂಡು ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ.
ಖಾತಾ ಬದಲಾವಣೆ ಪ್ರಕ್ರಿಯೆ ಮತ್ತು ಶುಲ್ಕ
ಸರ್ಕಾರವು ‘ಬಿ’ ಖಾತಾವನ್ನು ‘ಎ’ ಖಾತಾಕ್ಕೆ ಪರಿವರ್ತಿಸಲು ‘ಬಿಬಿಎಂಪಿ ಆಸ್ತಿ ತೆರಿಗೆ ನಿಯಮಾವಳಿ’ ಅಡಿಯಲ್ಲಿ ಅವಕಾಶ ನೀಡುತ್ತಿದೆ. ಅರ್ಜಿದಾರರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನೂ ವಿವರಿಸಿದೆ.
- ಆನ್‌ಲೈನ್ ಅಥವಾ ನಿಗದಿತ ಫಾರಂ ಮೂಲಕ ಅರ್ಜಿ ಸಲ್ಲಿಸಬೇಕು.
- ಅಗತ್ಯ ದಾಖಲೆಗಳ (ಸೇಲ್ ಡೀಡ್, ಹಳೆಯ ತೆರಿಗೆ ರಸೀದಿ, ಡಿಸಿ ಕನ್ವರ್ಷನ್ ಪ್ರತಿ) ಸಲ್ಲಿಸಬೇಕು.
- ಬಿಬಿಎಂಪಿ ಅಧಿಕಾರಿಗಳಿಂದ ಆಸ್ತಿ ಸಮೀಕ್ಷೆ ಮತ್ತು ಪರಿಶೀಲನೆ.
- ಉಲ್ಲಂಘನೆಯ ಆಧಾರದ ಮೇಲೆ ದಂಡ ಅಥವಾ ಅಭಿವೃದ್ಧಿ ಶುಲ್ಕ ಪಾವತಿ.
ಶುಲ್ಕವನ್ನು ‘ಅಭಿವೃದ್ಧಿ ಶುಲ್ಕ’ ಎಂದು ಕರೆಯಲಾಗಿದೆ. ಆಸ್ತಿಯ ವಿಸ್ತೀರ್ಣ ಮತ್ತು ಅದು ಇರುವ ಪ್ರದೇಶಕ್ಕೆ ಅನುಗುಣವಾಗಿ ನಿಗದಿಯಾಗುವ ಗೈಡೆನ್ಸ್ ವ್ಯಾಲ್ಯೂ ಆಧಾರದ ಮೇಲೆ ಶುಲ್ಕ/ದಂಡವನ್ನು ನಿರ್ಧರಿಸಲಾಗುತ್ತದೆ.
ಈ ಲೇಖನ ಓದಿದ್ದೀರಾ?: ವಿಭಜನೆ, ಸಾಲು-ಸಾಲು ಸೋಲು, ಪಕ್ಷಾಂತರದ ಪೆಟ್ಟು; ಅಸ್ತಿತ್ವಕ್ಕಾಗಿ ಹೋರಾಟುತ್ತಿದೆ ಎಐಎಡಿಎಂಕೆ
ಜನರಿಗೇನು ಲಾಭ?
- ಖಾತೆ ಬದಲಾವಣೆಯಾದ ತಕ್ಷಣ ಆಸ್ತಿಯ ಮೌಲ್ಯ ಹೆಚ್ಚಾಗುತ್ತದೆ.
- ‘ಎ’ ಖಾತಾ ಇದ್ದರೆ ಮಾತ್ರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಲಭವಾಗಿ ಗೃಹ ಸಾಲ ಅಥವಾ ಆಸ್ತಿ ಮೇಲಿನ ಸಾಲ ದೊರೆಯುತ್ತದೆ.
- ಆಸ್ತಿಗೆ ಕಾನೂನು ಮಾನ್ಯತೆ ದೊರೆಯುತ್ತದೆ. ಇದರಿಂದ ಆಸ್ತಿ ಮಾರಾಟ ಮಾಡುವಾಗ ಯಾವುದೇ ತೊಂದರೆ ಇರುವುದಿಲ್ಲ. ಮತ್ತು ಆಸ್ತಿ ವರ್ಗಾವಣೆ ಪ್ರಕ್ರಿಯೆ ಸುಲಭವಾಗುತ್ತದೆ.
- ಮನೆ ನಿರ್ಮಾಣಕ್ಕೆ ಅಥವಾ ನವೀಕರಣಕ್ಕೆ ಅಧಿಕೃತ ನಕ್ಷೆ ಮಂಜೂರಾತಿ/ಪರವಾನಗಿ ಪಡೆಯಲು ಸಾಧ್ಯವಾಗುತ್ತದೆ.
ಸರ್ಕಾರಕ್ಕೆ ಆಗುವ ಲಾಭವೇನು?
- ಸರ್ಕಾರದ ಪಾಲಿಗೆ ಇದು ಬೊಕ್ಕಸ ತುಂಬಿಸುವ ದೊಡ್ಡ ಯೋಜನೆ.
- ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ಸರ್ಕಾರದ ಖಜಾನೆಗೆ ಬರುತ್ತದೆ.
- ‘ಬಿ’ ಖಾತಾ ಆಸ್ತಿಗಳು ಅಧಿಕೃತವಾದಾಗ, ಭವಿಷ್ಯದಲ್ಲಿ ಆಸ್ತಿ ತೆರಿಗೆಯನ್ನು ವ್ಯವಸ್ಥಿತವಾಗಿ ವಸೂಲಿ ಮಾಡಲು ಸುಲಭವಾಗುತ್ತದೆ.
- ಅನಧಿಕೃತ ಬಡಾವಣೆಗಳನ್ನು ದಾಖಲೆಗಳ ವ್ಯಾಪ್ತಿಗೆ ತರುವುದರಿಂದ ನಗರ ಯೋಜನೆಗೆ ಅನುಕೂಲವಾಗುತ್ತದೆ.
ಜನರು ಎದುರಿಸುವ ಸವಾಲುಗಳು
ಈ ಪ್ರಕ್ರಿಯೆ ಅಂದುಕೊಂಡಷ್ಟು ಸರಳವಾಗಿಲ್ಲ. ಆದ್ದರಿಂದ ಜನರು ಅಥವಾ ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
- ಅಭಿವೃದ್ಧಿ ಶುಲ್ಕದ ಮೊತ್ತ ಹೆಚ್ಚಿದ್ದರೆ, ಅದು ಆಸ್ತಿ ಮಾಲೀಕರಿಗೆ ಹೊರೆಯಾಗಬಹುದು.
- ಹಳೆಯ ಕಂದಾಯ ಜಮೀನುಗಳಲ್ಲಿ ಆಸ್ತಿ ಹೊಂದಿರುವವರ ಬಳಿ ಸರಿಯಾದ ಡಿಸಿ ಕನ್ವರ್ಷನ್ ದಾಖಲೆಗಳು ಇಲ್ಲದಿರಬಹುದು. ಇದು, ದೊಡ್ಡ ಅಡ್ಡಿ.
- ಬಿಬಿಎಂಪಿ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ಹೆಸರಿನಲ್ಲಿ ಮಧ್ಯವರ್ತಿಗಳ ಕಾಟ ಮತ್ತು ಭ್ರಷ್ಟಾಚಾರ/ಲಂಚದ ಬೇಡಿಕೆ ಹೆಚ್ಚಾಗುವ ಆತಂಕ.
- ರಾಜಕಾಲುವೆ ಅಥವಾ ಕೆರೆ ಅಂಗಳದಲ್ಲಿರುವ ಆಸ್ತಿಗಳಿಗೆ ಯಾವುದೇ ಕಾರಣಕ್ಕೂ ‘ಎ’ ಖಾತಾ ಸಿಗುವುದಿಲ್ಲ. ಇಂತಹ ಆಸ್ತಿ ಹೊಂದಿರುವವರು ಸಂಕಷ್ಟಕ್ಕೆ ಸಿಲುಕಬಹುದು.



