ರಾಜ್ಯದ ಎಲ್ಲಾ ಖಾಸಗಿ ಹಾಗೂ ಅನುದಾನಿತ ಶಾಲೆಗಳು 2026-27ನೇ ಶೈಕ್ಷಣಿಕ ವರ್ಷದ ಶಾಲಾ ಶುಲ್ಕದ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಸೂಚಿಸಿದೆ.
ಇಲಾಖೆಯ ಇತ್ತೀಚಿನ ಸುತ್ತೋಲೆಯಲ್ಲಿ, ಪ್ರತಿ ತರಗತಿಯ ಶುಲ್ಕ ರಚನೆಯನ್ನು ಶಾಲೆಯ ಸೂಚನಾ ಫಲಕದಲ್ಲಿ ಸ್ಪಷ್ಟವಾಗಿ ಪ್ರದರ್ಶಿಸುವಂತೆ ಹಾಗೂ ಶಾಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಆದೇಶಿಸಲಾಗಿದೆ. ಜೊತೆಗೆ, ಈ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಬೇಕು. ಇಲಾಖೆಯು ತನ್ನ ಪೋರ್ಟಲ್‌ನಲ್ಲಿಯೂ ಈ ವಿವರಗಳನ್ನು ಪ್ರಕಟಿಸಲಿದೆ.
ಈ ಕ್ರಮವು ಶುಲ್ಕ ಸಂಗ್ರಹದಲ್ಲಿ ಪಾರದರ್ಶಕತೆ ತರುವುದು ಮತ್ತು ಪೋಷಕರಿಗೆ ಅನಧಿಕೃತ ಅಥವಾ ಗುಪ್ತ ಶುಲ್ಕಗಳಿಂದ ಬಚಾವು ಮಾಡುವುದು ಮುಖ್ಯ ಉದ್ದೇಶವಾಗಿದೆ. ಪೋಷಕರು ಮಕ್ಕಳನ್ನು ತರಗತಿಗೆ ಪ್ರವೇಶ ಮಾಡಿಸುವ ಮೊದಲು ಅನುಮೋದಿತ ಶುಲ್ಕಗಳನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ.
ಉಲ್ಲಂಘನೆಗೆ ಕಠಿಣ ಕ್ರಮ :ಅನಧಿಕೃತ ದೇಣಿಗೆ ಅಥವಾ ಕ್ಯಾಪಿಟೇಷನ್ ಫೀ ಸಂಗ್ರಹಿಸಿದರೆ, ಸಂಗ್ರಹಿಸಿದ ಮೊತ್ತದ 10 ಪಟ್ಟು ದಂಡ ವಿಧಿಸಲಾಗುವುದು. ನಿಯಮ ಉಲ್ಲಂಘನೆಗೆ ಮೊದಲ ಬಾರಿ ₹25,000 ಮತ್ತು ನಂತರದ ಪ್ರತಿ ಉಲ್ಲಂಘನೆಗೆ ₹50,000 ವರೆಗೆ ದಂಡ ವಿಧಿಸಲಾಗುತ್ತದೆ. ದೂರುಗಳು ಬಂದರೆ ಸಂಬಂಧಪಟ್ಟ ಡಿಡಿಪಿಐ ಮತ್ತು ಬ್ಲಾಕ್ ಶಿಕ್ಷಣಾಧಿಕಾರಿಗಳು ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ನಿರ್ದೇಶನವು ರಾಜ್ಯದಾದ್ಯಂತದ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಅನ್ವಯಿಸುತ್ತದೆ. ಪೋಷಕರು ಶಾಲೆಗಳ ಸೂಚನಾ ಫಲಕ, ವೆಬ್‌ಸೈಟ್ ಅಥವಾ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಶುಲ್ಕ ವಿವರಗಳನ್ನು ಪರಿಶೀಲಿಸಬಹುದು.
ಇಲಾಖೆಯ ಈ ಕ್ರಮವು ಪೋಷಕರ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.




