ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆ ಕುರಿತ ರಾಜಕೀಯ ಚರ್ಚೆ ತೀವ್ರಗೊಂಡಿರುವ ನಡುವೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ, ಕಾಂಗ್ರೆಸ್‌ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಮಸೂದೆ ಕುರಿತು ಚರ್ಚಿಸಲು ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದ ಮೂಲಗಳ ಪ್ರಕಾರ, ಕಾಂಗ್ರೆಸ್ ಮಸೂದೆಗೆ ಬೆಂಬಲ ನೀಡಲು ಸಮ್ಮತಿಸಿದರೆ ಮಾತ್ರ ಸರ್ವಪಕ್ಷ ಸಭೆ ನಡೆಸುವ ಕುರಿತು ಪರಿಗಣಿಸಲಾಗುವುದು. ಸದ್ಯಕ್ಕೆ ಕಾಂಗ್ರೆಸ್‌ನ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರ ಮರುವಿಂಗಡಣೆ ಮಸೂದೆ ಕುರಿತು ಕಾಂಗ್ರೆಸ್‌ನ ನಿಲುವು ತಿಳಿದುಕೊಳ್ಳಲು ಕಿರಣ್ ರಿಜಿಜು ಅವರು ರಾಹುಲ್ ಗಾಂಧಿಗೆ ಕರೆ ಮಾಡಿದ್ದರು. ಈ ವೇಳೆ ರಾಹುಲ್, ಸರ್ಕಾರ ಪ್ರತಿಪಕ್ಷಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸುವುದಕ್ಕಿಂತ ಎಲ್ಲ ಪಕ್ಷಗಳನ್ನೂ ಒಟ್ಟಿಗೆ ಆಹ್ವಾನಿಸಿ ಚರ್ಚಿಸಬೇಕು ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯವಾಗಿ ಈಗಾಗಲೇ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಸರ್ವಪಕ್ಷ ಸಭೆ ಕೋರಿರುವುದನ್ನೂ ರಾಹುಲ್ ನೆನಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ 20ರಂದು ನಡೆದ ಪೊಲೀಸ್ ಹಿಂಸಾಚಾರದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಹಾಗೂ ರಾಮಮಂದಿರ ದೇಣಿಗೆ ದುರ್ಬಳಕೆ ಆರೋಪದ ಕುರಿತು ಚರ್ಚೆ ನಡೆಸಬೇಕು ಎಂಬ ಕಾಂಗ್ರೆಸ್‌ನ ಬೇಡಿಕೆಯನ್ನು ರಾಹುಲ್ ಪುನರುಚ್ಚರಿಸಿದ್ದಾರೆ. ಈ ವಿಷಯಗಳಿಗೆ ಪರ್ಯಾಯವೇ ಇಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, 2023ರ ಮಹಿಳಾ ಮೀಸಲಾತಿ ಕಾಯ್ದೆಯ ಪ್ರಕಾರ, ಪ್ರಸ್ತುತ ಇರುವ 543 ಲೋಕಸಭಾ ಕ್ಷೇತ್ರಗಳಲ್ಲಿಯೇ 33% ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂಬುದು ಕಾಂಗ್ರೆಸ್‌ನ ನಿಲುವು ಎಂದು ಸಂಸದರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: 5 ವರ್ಷಗಳಲ್ಲಿ ಮೋದಿ ವಿದೇಶ ಪ್ರವಾಸಗಳಿಗೆ ₹557.51 ಕೋಟಿ ವೆಚ್ಚ; ರಾಜ್ಯಸಭೆಯಲ್ಲಿ ಕೇಂದ್ರದ ಮಾಹಿತಿ
ಮಾತುಕತೆ ಬಳಿಕ ಪ್ರತಿಕ್ರಿಯಿಸಿದ ಕಿರಣ್ ರಿಜಿಜು, ರಾಹುಲ್ ಗಾಂಧಿ ಅವರೊಂದಿಗೆ ಫಲಪ್ರದ ಚರ್ಚೆ ನಡೆದಿದೆ. “ನಾವು ರಾಜಕೀಯ ಎದುರಾಳಿಗಳೇ ಹೊರತು ಶತ್ರುಗಳಲ್ಲ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳೊಂದಿಗೆ ನಿರಂತರ ಸಂವಾದ ಇರಬೇಕೆಂದು ಬಯಸುತ್ತೇವೆ” ಎಂದೂ ರಿಜಿಜು ಹೇಳಿರುವುದಾಗಿ ವರದಿಯಾಗಿದೆ.
ಕೇಂದ್ರ ಸರ್ಕಾರಕ್ಕೆ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕರಿಸಲು ಬೇಕಾದ ಸಂಖ್ಯಾಬಲವಿದೆ. ಆದರೂ, ಸಾಧ್ಯವಾದಷ್ಟು ರಾಜಕೀಯ ಒಮ್ಮತದೊಂದಿಗೆ ಮಸೂದೆ ಅಂಗೀಕರಿಸುವ ಉದ್ದೇಶದಿಂದ ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಇದೇ ವೇಳೆ, ಬಿಜೆಪಿಯೇತರ ಕೆಲವು ಪಕ್ಷಗಳು, ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸಲಾಗುವುದು ಎಂಬುದನ್ನು ಮಸೂದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಹಾಗೂ ಪ್ರತಿ ರಾಜ್ಯಕ್ಕೆ ಎಷ್ಟು ಕ್ಷೇತ್ರಗಳು ಸಿಗಲಿವೆ ಎಂಬ ವಿವರವನ್ನು ಪ್ರತ್ಯೇಕ ಅನುಸೂಚಿಯಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿವೆ. ತಮಿಳುನಾಡಿನ ಡಿಎಂಕೆ ಮಾತ್ರ ಈಗಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಸ್ಥಿರವಾಗಿಯೇ (freeze) ಮುಂದುವರಿಸಬೇಕು ಎಂಬ ನಿಲುವು ಹೊಂದಿದೆ ಎಂದು ಮೂಲಗಳು ತಿಳಿಸಿವೆ.




