ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ NEET ತರಬೇತಿ ನೀಡುವ ಮಹತ್ವಾಕಾಂಕ್ಷೆಯ ‘BCC–NUCLEII SUPER 30 CHALLENGE’ ಯೋಜನೆಗೆ ಇಂದು ವಿಧಾನಸೌಧದಲ್ಲಿ ಅಧಿಕೃತ ಸಾಫ್ಟ್ ಲಾಂಚ್ ನೀಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ ಖಾದರ್ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಯೋಜನೆಯ ಪ್ರಚಾರ ಪೋಸ್ಟರ್ ಅನ್ನು ಬಿಡುಗಡೆಗೊಳಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು (ರಿ.) ಮತ್ತು NUCLEII ಸಂಸ್ಥೆಗಳು ಜಂಟಿಯಾಗಿ ರೂಪಿಸಿರುವ ಈ ಯೋಜನೆಯು, ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸುಗಳಿಗೆ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ ಜಾರಿಗೆ ಬಂದಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಜ್ಞರ ಮಾರ್ಗದರ್ಶನದಲ್ಲಿ ಗುಣಮಟ್ಟದ, ಸಂಪೂರ್ಣ ಉಚಿತ NEET ತರಬೇತಿ ಒದಗಿಸುವುದು ಇದರ ಮುಖ್ಯ ಉದ್ದೇಶ.
ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಯು.ಟಿ. ಖಾದರ್, “ಪ್ರತಿಭಾವಂತ ಮತ್ತು ಅರ್ಹ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಲು ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಹಾಗೂ NUCLEII ಸಂಸ್ಥೆಗಳು ಕೈಗೊಂಡಿರುವ ಈ ಮಹತ್ವಪೂರ್ಣ ಯೋಜನೆಯನ್ನು ನಾನು ಶ್ಲಾಘಿಸುತ್ತೇನೆ. ಸಮಾಜದ ಶೈಕ್ಷಣಿಕ ಸಬಲೀಕರಣಕ್ಕೆ ಇಂತಹ ಜನಪರ ಕಾರ್ಯಕ್ರಮಗಳು ಹೆಚ್ಚಿನ ಪ್ರೇರಣೆ ನೀಡುತ್ತವೆ” ಎಂದು ಯೋಜನೆಯ ಯಶಸ್ಸಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ NUCLEII ಸಂಸ್ಥಾಪಕ ಶೇಕ್ ಬಾಷಾ, ಸ್ಟ್ರಾಟಜಿ ಡೈರೆಕ್ಟರ್ ಶಾಫಿ, ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು (ರಿ.) ಅಧ್ಯಕ್ಷ ಶಬೀರ್ ಬ್ರಿಗೇಡ್, ಉಪಾಧ್ಯಕ್ಷರಾದ ಸಾಲಿತ್, ಸಲೀಂ ಸಿ.ಎಂ., ಶಂಶು ಮತ್ತು ಗಫೂರ್ ಕೆಂಟ್, ಸಂಘಟನಾ ಕಾರ್ಯದರ್ಶಿಗಳಾದ ಸಾವದ್ ಸುಲ್ತಾನ್‌ಪಾಳ್ಯ ಮತ್ತು ಹಾರಿಸ್ ಬೆಲ್ಮ, ಖಜಾಂಚಿ ರಿಫಾಯಿ ವಸಂತನಗರ, ಸದಸ್ಯರಾದ ಶಫೀಕ್ ಬೊಳಂತೂರು, ಅಬ್ಬಾಸ್ ಸಿ.ಪಿ., ಝಮೀರ್ ಉಳ್ಳಾಲ, ಕಾನೂನು ಸಲಹೆಗಾರ ಅಡ್ವೊಕೇಟ್ ಕಲಂದರ್ ಕೊಯ್ಲ, ಶಿಕ್ಷಣ ಸಂಯೋಜಕರಾದ ಅಡ್ವೊಕೇಟ್ ರಾಶಿಫ್ ನಾಯರ್ಮೂಲೆ ಮತ್ತು ಸದಕತುಲ್ಲಾ ಉಪಸ್ಥಿತರಿದ್ದರು.




