- ಬ್ರ್ಯಾಂಡ್ ಬೆಂಗಳೂರು ಅಭಿಯಾನಕ್ಕೆ ಸಾರ್ವಜನಿಕರಿಂದ 20 ಸಾವಿರಕ್ಕೂ ಹೆಚ್ಚು ಸಲಹೆ
- ಬೆಂಗಳೂರು ಅಭಿವೃದ್ಧಿಗಾಗಿ ಏಳು ವಿಚಾರಗಳ ಬಗ್ಗೆ ಸಲಹೆ ಸಂಗ್ರಹಿಸಲು ಮುಂದಾದ ರಾಜ್ಯ ಸರ್ಕಾರ
ರಾಜ್ಯ ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆರಂಭಿಸಿರುವ ಬ್ರ್ಯಾಂಡ್ ಬೆಂಗಳೂರು ಅಭಿಯಾನಕ್ಕೆ ಸಾರ್ವಜನಿಕರಿಂದ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ಇದೀಗ ಕ್ರೈಮೇಟ್ ರೈಸ್ ಅಲೈಯನ್ಸ್ ಸಂಸ್ಥೆ, ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ, ಸಾಕ್ರಟಿಸ್, ಸಾಹಸ್, ರೀಪ್ ಬೆನಿಫಿಟ್, ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಶಿಪ್ ಅಂಡ್ ಡೆಮಾಕ್ರಸಿ ಸೇರಿದಂತೆ ಅನೇಕ ಸಂಸ್ಥೆಗಳು ಸಲಹೆ ಸೂಚನೆ ನೀಡಿವೆ.
ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಕುರಿತು ನಾಗರಿಕರಿಂದ ಬೆಂಗಳೂರಿನ ಅಭಿವೃದ್ಧಿಗಾಗಿ ಏಳು ವಿಚಾರಗಳ ಬಗ್ಗೆ ಅಭಿಪ್ರಾಯ ಮತ್ತು ಸಲಹೆ ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇದಕ್ಕೆ ಸಂಸ್ಥೆಗಳು ಹಲವಾರು ರೀತಿಯಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪೋರ್ಟ್‌ಲ್, ಟ್ವೀಟರ್, ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್ ಮೂಲಕ ತಮ್ಮ ಸಲಹೆಗಳನ್ನು ಸರ್ಕಾರಕ್ಕೆ ಕಳಿಸಿವೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವರ್ಷ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿತ್ತು. ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆ, ಸಾರ್ವಜನಿಕರು ನೀರು ಮತ್ತ ಪ್ರವಾಹ ನಿರ್ವಹಣೆಗೆ ಕೆಲವು ಶಿಫಾರಸು ಮಾಡಿದ್ದಾರೆ.
- ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಬಿಡ್ಬ್ಲೂಎಸ್‌ಎಸ್‌ಬಿ ಬೆಂಬಲದೊಂದಿಗೆ ರಚನಾತ್ಮಕ ಮತ್ತು ರಚನಾತ್ಮಕವಲ್ಲದ ಕಾರ್ಯತಂತ್ರಗಳೊಂದಿಗೆ ಪ್ರವಾಹ ನಿರ್ವಹಣೆಯ ಯೋಜನೆಗಳನ್ನು ಸಿದ್ಧಪಡಿಸಬೇಕು.
- ನಗರದಾದ್ಯಂತ ಪ್ರವಾಹ ಉಂಟಾಗುವ ಪ್ರದೇಶಗಳನ್ನು ನಕ್ಷೆ ಮಾಡಲು ಸಮಗ್ರ ಪ್ರಚಾರ ಕೈಗೊಳ್ಳುವುದು.
- ‘ಸ್ಪಾಂಜ್ ಸಿಟಿ’ ವಿಧಾನವನ್ನು ಅಳವಡಿಸಿಕೊಳ್ಳುವುದು. ನೀರಿನ ಒಳನುಸುಳುವಿಕೆ, ಹರಿವಿನ ನಿಯಂತ್ರಣಕ್ಕಾಗಿ ಜೈವಿಕ-ಸ್ವೇಲ್ಸ್, ರೀಚಾರ್ಜ್ ಬಾವಿಗಳು, ಜೌಗು ಪ್ರದೇಶಗಳು ಮತ್ತು ಉದ್ಯಾನವನಗಳಂತಹ ಪ್ರಕೃತಿ ಆಧಾರಿತ ಪರಿಹಾರಗಳನ್ನು ಅನುಷ್ಠಾನಗೊಳಿಸುವುದು.
- ತೃತೀಯ ಮಳೆನೀರಿನ ಚರಂಡಿಗಳ ನಿಯಮಿತ ಡಿ-ಸಿಲ್ಟಿಂಗ್ ಮತ್ತು ಹೂಳನ್ನು ಸಂಪೂರ್ಣವಾಗಿ ತೆಗೆಯುವುದು.
ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಆಡಳಿತ
- ಸಾರ್ವಜನಿಕರನ್ನು ಒಳಗೊಂಡಂತೆ ಸಮಸ್ಯೆ ಪರಿಹರಿಸಲು ವಾರ್ಡ್ ವಾರು ಡಿಜಿಟಲ್ ವೇದಿಕೆಗಳ ನಿರ್ಮಾಣ ಮಾಡುವುದು. ಹಾಗೂ ಬಿಬಿಎಂಪಿ ಕೌನ್ಸಿಲ್‌ನ ಒಳಗೊಳ್ಳುವಿಕೆ ಮತ್ತು ಪ್ರಮುಖ ಕಾಮಗಾರಿಗಳು, ವಾರ್ಡ್ ಮಟ್ಟದ ಯೋಜನೆಗಳಲ್ಲಿ ಜನರೊಂದಿಗೆ ಸಮಾಲೋಚನೆ ಮಾಡುವುದು.
- ಸ್ಥಳೀಯ ನಾಯಕರ ಅಭಿವೃದ್ಧಿಗಾಗಿ ಯುವ ಸಮಿತಿ ರಚನೆ, ಅಂತರ್ಗತ ಭಾಗವಹಿಸುವಿಕೆಗಾಗಿ ಕ್ರಿಯಾತ್ಮಕ ವಾರ್ಡ್ ಸಮಿತಿಗಳ ರಚನೆ ಮಾಡುವುದು.
- ಕಾರ್ಯಕ್ಷಮತೆಯನ್ನು ಅಳೆಯಲು ಮತ್ತು ಸಹಯೋಗದ ಸ್ಪರ್ಧೆಯನ್ನು ಪ್ರೋತ್ಸಾಹಿಸಲು ಸ್ಟೇಟ್-ಆಫ್-ವಾರ್ಡ್ ಮೆಟ್ರಿಕ್‌ನ ಅನುಷ್ಠಾನ ಮಾಡಬೇಕು.
- ಹೊಂದಾಣಿಕೆ ಮತ್ತು ತಗ್ಗಿಸುವಿಕೆಯ ಕಾರ್ಯತಂತ್ರಗಳನ್ನು ಸಂಘಟಿಸಲು ಮತ್ತು ಬಲಪಡಿಸಲು ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಮೀಸಲಾದ ಪರಿಸರ ಕೋಶಗಳ ರಚನೆ ಮಾಡಬೇಕು.
ತ್ಯಾಜ್ಯ ನಿರ್ವಹಣೆ
- ತೇವ/ತೋಟದ ತ್ಯಾಜ್ಯವನ್ನು ಗೊಬ್ಬರ ಮಾಡುವ ಕುರಿತು ನಾಗರಿಕರಿಗೆ ವಾರ್ಡ್ ಮಟ್ಟದ ತರಬೇತಿ; ಕಾಂಪೋಸ್ಟಿಂಗ್‌ಗೆ ಅಗತ್ಯವಿರುವ ವಸ್ತುಗಳಿಗೆ ಸಹಾಯಧನ ಮತ್ತು ಪ್ರೋತ್ಸಾಹಗಳನ್ನು ಒದಗಿಸುವುದು.
- ತ್ಯಾಜ್ಯ ಕೆಲಸಗಾರರು ವಿಷಕಾರಿ ಅಂಶಗಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಲು ತ್ಯಾಜ್ಯ ನಿರ್ವಹಣೆಗೆ ಯಾಂತ್ರಿಕೃತ ಉಪಕರಣಗಳನ್ನು ಅಳವಡಿಸಿಕೊಳ್ಳುವುದು. ತ್ಯಾಜ್ಯ ನಿರ್ವಹಣೆಯಲ್ಲಿ ಕೆಲಸ ಮಾಡುವ ಎಲ್ಲ ಪೌರಕಾರ್ಮಿಕರಿಗೆ ಕಲ್ಯಾಣ ಪ್ರಯೋಜನಗಳನ್ನು ಒದಗಿಸುವುದು.
- ಕ್ಷೇತ್ರ ಮಟ್ಟದಲ್ಲಿ ತೇವ ತ್ಯಾಜ್ಯವನ್ನು ಸಂಸ್ಕರಿಸಲು ಜೈವಿಕ-ಸಿಎನ್‌ಜಿ ಸ್ಥಾವರಗಳನ್ನು ಸ್ಥಾಪಿಸುವುದು.
- ಸುಸಜ್ಜಿತ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಲಭ್ಯತೆ, ಶೇ.100ರಷ್ಟು ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ವಾಹನಗಳನ್ನು ಬಳಸಿಕೊಳ್ಳುವುದು.
- ತೆರೆದ ಮಲವಿಸರ್ಜನೆಯ ನಿದರ್ಶನಗಳನ್ನು ಪರಿಹರಿಸಲು ಮತ್ತು ಕಡಿತಗೊಳಿಸಲು ಪ್ರತಿ ವಾರ್ಡ್‌ನಲ್ಲಿ (ಕನಿಷ್ಠ 2) ಕೈಗೆಟುಕುವ ಮತ್ತು ಸ್ವಚ್ಛವಾದ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡುವುದು.
ಹಸಿರು ಸ್ಥಳಗಳು ಮತ್ತು ಮೂಲಸೌಕರ್ಯ
- ಎಲ್ಲ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಹಸಿರು ಬೆಳೆಸಲು ಆದೇಶ ಹೊರಡಿಸುವುದು.
- ಮುನ್ಸಿಪಲ್ ಪ್ರಾಧಿಕಾರ/ಸ್ಮಾರ್ಟ್ ಸಿಟಿ ಮಿಷನ್/ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ಸಿಟಿ ಕ್ಲೀನ್ ಏರ್ ಆಕ್ಷನ್ ಪ್ಲಾನ್ ಆಧರಿಸಿ ಬೃಹತ್ ಬೆಂಗಳೂರು ಪ್ರದೇಶಕ್ಕೆ ಕಾಂಕ್ರೀಟ್ ಕ್ಲೀನ್ ಏರ್ ಆಕ್ಷನ್ ಪ್ಲಾನ್ ರಚನೆ ಮಾಡುವುದು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವರ್ಷಾಂತ್ಯಕ್ಕೆ ರಸ್ತೆಗಿಳಿಯಲಿವೆ 1,900 ಬಿಎಂಟಿಸಿ ಬಸ್‌ಗಳು
ಚಲನಶೀಲತೆ
- ಎಲ್ಲ ಸಾರಿಗೆ ಸಂಬಂಧಿತ ನಿರ್ಧಾರಗಳನ್ನು ಒಂದೇ ಘಟಕದಿಂದ ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಬಲವರ್ಧಿತವಾಗಿ ಅನುಷ್ಠಾನ ಮಾಡುವುದು.
- ಸಾರ್ವಜನಿಕ ಸಾರಿಗೆಯ ಸಾಮರ್ಥ್ಯವನ್ನು ಹೆಚ್ಚಿಸುವುದು.
- ಪರಿಸರ, ಗಾಳಿಯ ಗುಣಮಟ್ಟ ಮತ್ತು ಪ್ರತಿಯಾಗಿ ಜನರ ಆರೋಗ್ಯದ ಮೇಲೆ ವೈಯಕ್ತಿಕ ವಾಹನಗಳ ಬಳಕೆಯ ಪರಿಣಾಮಗಳ ಕುರಿತು ಜಾಗೃತಿ ಅಭಿಯಾನ ನಡೆಸುವುದು.
- ಸಾಂಸ್ಥಿಕ ಕಟ್ಟಡಗಳನ್ನು ಹೊರತುಪಡಿಸಿ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದನ್ನು ತಡೆಯುವುದು. ಎಲ್ಲ ವಾಣಿಜ್ಯ ಪ್ರದೇಶದಲ್ಲಿ ಬಹು ಹಂತದ ಪಾರ್ಕಿಂಗ್ ಅಭಿವೃದ್ಧಿಪಡಿಸುವುದು.