ಪ್ರತೀಕಾರ ತೀರಿಸಿಕೊಳ್ಳಲು ಸಂಗಾತಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಅಥವಾ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವಿಕೃತ ಪ್ರವೃತ್ತಿ ವಿರುದ್ಧ ರಾಜ್ಯ ಪೊಲೀಸರ ಬಿಗಿ ಕ್ರಮಕೈಗೊಂಡಿದ್ದಾರೆ. ಒಪ್ಪಿಗೆಯಿಲ್ಲದೆ ಖಾಸಗಿ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದು, ಆನ್‌ಲೈನ್ ಬ್ಲ್ಯಾಕ್‌ಮೇಲ್ ಮಾಡುವುವವರ ವಿರುದ್ಧ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ ಎ ಸಲೀಮ್ ಆದೇಶ ಹೊರಡಿಸಿದ್ದಾರೆ.
ಆಪ್ತ ವಿಷಯಗಳನ್ನು ಬಳಸಿಕೊಂಡು ಹಣ, ಲೈಂಗಿಕ ಅನುಕೂಲ ಅಥವಾ ಬೇರೆ ಲಾಭಕ್ಕಾಗಿ ಬೆದರಿಕೆ, ಸುಲಿಗೆ ಸಂಬಂಧಿಸಿದ ಆರೋಪಗಳಲ್ಲಿ ದೂರು ದಾಖಲಿಸಲು ವಿಳಂಬ ಮಾಡಿದ್ದಾರೆ ಅಥವಾ ದೂರೇ ದಾಖಲಿಸಿಲ್ಲ ಎಂಬ ಬಗ್ಗೆ ಹಲವು ದೂರುಗಳು ಬಂದಿದ್ದವು. ಈ ಸಂಬಂಧ ಡಿಜಿಪಿ ಸಲೀಂ ಸುತ್ತೋಲೆ ಹೊರಡಿಸಿದ್ದು, ಇಂತಹ ವಿಕೃತ ಪ್ರವೃತ್ತಿ ವಿರುದ್ಧ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯ ಸರ್ಕಾರ ಶೀಘ್ರದಲ್ಲಿ ಸೈಬರ್ ಸೆಕ್ಯೂರಿಟಿ ಪಾಲಿಸಿ ಜಾರಿಗೆ ತರಲಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಫೋಟೋ, ವಿಡಿಯೋ ತೆಗೆಯಲು ಒಪ್ಪಿಗೆ ನೀಡಲಾಗಿದೆ ಎಂಬ ಕಾರಣ ನೀಡಿ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಈ ಸಂಬಂಧ ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಡಿಜಿಪಿ, “ಫೋಟೋ, ವಿಡಿಯೋ ತೆಗೆಯಲು ಒಪ್ಪಿಗೆ ನೀಡಿದ ಮಾತ್ರಕ್ಕೆ, ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಒಪ್ಪಿಗೆ ನೀಡಿದಂತೆ ಅಲ್ಲ. ಅನುಮತಿ ಇಲ್ಲದೆಯೇ ಖಾಸಗಿ ಚಿತ್ರ, ವಿಡಿಯೋ ಹಂಚಿಕೊಳ್ಳುವುದು ಅಪರಾಧ” ಎಂದು ಸ್ಪಷ್ಟಪಡಿಸಿದ್ದಾರೆ.
ದೂರುದಾರರ ಒಪ್ಪಿಗೆ ಇದೆ ಎಂಬ ಕಾರಣವನ್ನು ಆಧರಿಸಿ ಎಫ್‌ಐಆರ್ ದಾಖಲಿಸುವುದನ್ನು ವಿಳಂಬ ಮಾಡಬಾರದು ಅಥವಾ ಎಫ್‌ಐಆರ್ ದಾಖಲಿಸಲು ನಿರಾಕರಿಸಬಾರದು ಎಂದು ಡಿಜಿಪಿ ಸಲೀಂ ಪುನರುಚ್ಚರಿಸಿದ್ದಾರೆ.
ಗೌಪ್ಯತೆ ಉಲ್ಲಂಘನೆ ಮತ್ತು ವಾಯರಿಸಂ (Voyeurism) ಅಡಿಯಲ್ಲಿ ಬಿಎನ್ಎಸ್ (BNS) ಸೆಕ್ಷನ್ 77 ರ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 66(ಇ), 67 ಮತ್ತು 67(ಎ) ಅಡಿಯಲ್ಲಿಯೂ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.




