ಬರಪರಿಹಾರ ಕೆಲಸಗಳನ್ನು ಕೂಡಲೇ ಯುದ್ಧೋಪಾದಿಯಲ್ಲಿ ಆರಂಭಿಸಬೇಕು. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ, ಕಾರ್ಮಿಕ ಸಂಘಟನೆ ಒತ್ತಾಯಿಸಿದೆ.
ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಕಾರ್ಯಕರ್ತರು, “ಬ್ಯಾಂಕ್ ಸಾಲ ಸೇರಿದಂತೆ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ವರ್ಷ ಪೂರ್ತಿ ವಿಸ್ತರಿಸಬೇಕು.ಆ ಮೂಲಕ ರೈತರು ಗುಳೇ ಹೋಗುವುದನ್ನು ತಪ್ಪಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಬರಪೀಡಿತ ಗ್ರಾಮಗಳಲ್ಲಿ ಉಚಿತ ಶುದ್ದ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.ಶಾಲೆ. ಕಾಲೇಜು ಮಕ್ಕಳ ಶುಲ್ಕವನ್ನು ಮನ್ನಾ ಮಾಡಿ. ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ವರ್ಷವಿಡೀ ಉಚಿತ ಪಡಿತರ ನೀಡಲು ಕ್ರಮಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಕೆರೆ ಜೋಡಣೆ ಯೋಜನೆಯನ್ನು ಜಾರಿಗೊಳಿಸಿ. ನೀರಿನ ಸಮಸ್ಯೆಯ ಶಾಶ್ವತ ಮುಕ್ತಿಗಾಗಿ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ರಾಜ್ಯದಲ್ಲಿ ಮಳೆಯ ಅಭಾವದಿಂದಾಗಿ 236 ತಾಲೂಕುಗಳ ಪೈಕಿ 161 ತೀವ್ರ, 34 ಸಾಮಾನ್ಯ ಬರ ಪೀಡಿತ ತಾಲೂಕುಗಳೆಂದು ಘೋಷಿಸಲ್ಪಟ್ಟಿವೆ. ಬರಗಾಲ ಪೀಡಿತ ಎಂದು ಘೋಷಣೆ ಮಾಡಿರುವ ಪ್ರದೇಶಗಳಲ್ಲಿ ಬರಪರಿಹಾರ ಕಾಮಗಾರಿಗಳು ಇನ್ನೂ ಆರಂಭವಾಗದೇ ಇರುವುದು ಚಿಂತಾಜನಕವಾದ ವಿಷಯವಾಗಿದೆ. ಇಲ್ಲಿಯವರೆಗೂ ಯಾವುದೇ ಕಾಮಗಾರಿಗಳಾಗಲೀ, ಯೋಜನೆಗಳಾಗಲೀ ಆರಂಭ ಆಗಿಲ್ಲ. ಕಾರಣ ಪರಿಸ್ಥಿತಿ ಹದಗೆಟ್ಟು ರೈತರು ಆತ್ಮಹತ್ಯೆಯ ಹಾದಿ ಹಿಡಿಯುವ ಮೊದಲೇ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿ ನಾಗಸ್ಥಿತ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜಪ್ಪ, ಭೀಮಣ್ಣ ಮಾಯಕೊಂಡ, ನಾಗರಾಜ ರಾಮಗೊಂಡನಹಳ್ಳಿ, ನೀರ್ಥಡಿ ಲೋಕೇಶ್ ಇತರರು ಇದ್ದರು.