ಬೆಂಗಳೂರಿನ ನೆಲಮಂಗಲದ ಟಿ ಬೇಗೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ತರಗತಿ ನಡೆಯುತ್ತಿದ್ದಾಗಲೇ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ (ಪ್ರಪೋಸ್) ಮಾಡಿದ್ದು, ಇದರಿಂದ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿನಿ ಹಾಗೂ ಆಕೆಯ ಸಹಪಾಠಿಗಳು ಆತನಿಗೆ ಚಪ್ಪಲಿಯಿಂದ ಥಳಿಸಿದ ಘಟನೆ ನಡೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ತರಗತಿಯ ವೇಳೆಯಲ್ಲಿಯೇ ಪ್ರಾಧ್ಯಾಪಕನು ವಿದ್ಯಾರ್ಥಿನಿಯ ಮುಂದೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದು, ಈ ವೇಳೆ ಮಹಿಳೆಯು ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೈಕ್ ಧರಿಸಿದ್ದ ಪ್ರಾಧ್ಯಾಪಕ, “ನಮ್ಮ ಬ್ಯಾಚ್‌ನ ಅತ್ಯಂತ ಪ್ರಮುಖ ಹುಡುಗಿಯೊಬ್ಬಳಿಗೆ ನಾನು ಪ್ರಪೋಸ್ ಮಾಡಲು ಬಯಸುತ್ತೇನೆ” ಎಂದು ಹೇಳಿ ವಿದ್ಯಾರ್ಥಿನಿಯ ಹೆಸರನ್ನು ಪ್ರಸ್ತಾಪಿಸಿದ್ದಾನೆ. ತಕ್ಷಣವೇ ಆಕೆ ಪ್ರಾಧ್ಯಾಪಕನನ್ನು ಪ್ರಶ್ನಿಸಿದ್ದು, ತರಗತಿಯೊಳಗಿನ ವಾತಾವರಣವು ಬಿಸಿಬಿಸಿಯಾಗಿದೆ.
ವಿಡಿಯೊದಲ್ಲಿ ಪ್ರಾಧ್ಯಾಪಕ, “ನೀನೇ ನನಗೆ ಐ ಲವ್ ಯು ಎಂದು ಹೇಳಿದ್ದೆ” ಎಂದು ವಾದಿಸುವುದು ಸೆರೆಯಾಗಿದೆ. ಆದರೆ ಈ ಹೇಳಿಕೆಯನ್ನು ಕಟ್ಟುನಿಟ್ಟಾಗಿ ನಿರಾಕರಿಸುವ ವಿದ್ಯಾರ್ಥಿನಿ, “ನಾನು ಹಾಗೆ ಹೇಳಿಲ್ಲ. ನಿಮಗೆ ಮಾತನಾಡಬೇಕು ಎನಿಸಿದರೆ ನೇರವಾಗಿ ಪ್ರಾಂಶುಪಾಲರ ಬಳಿ ಹೋಗಬಹುದು. ಇಡೀ ಬ್ಯಾಚ್ ವಿದ್ಯಾರ್ಥಿಗಳು ನಿಮ್ಮೊಂದಿಗೆ ಬರುತ್ತಾರೆ” ಎಂದು ತಕ್ಕ ತಿರುಗೇಟು ನೀಡಿದ್ದಾಳೆ.
ಇದಾದ ಬಳಿಕವೂ ಇಬ್ಬರ ನಡುವಿನ ಮಾತಿನ ಚಕಮಕಿ ಮುಂದುವರಿದಿದೆ. “ಹಾಗಾದರೆ ನೀನೇಕೆ ನನಗೆ ಪ್ರಪೋಸ್ ಮಾಡಿದೆ?” ಎಂದು ಪ್ರಾಧ್ಯಾಪಕ ಕೇಳಿದಾಗ, “ಕ್ಷಮಿಸಿ, ನಾನು ಯಾವಾಗ ಪ್ರಪೋಸ್ ಮಾಡಿದೆ?” ಎಂದು ವಿದ್ಯಾರ್ಥಿನಿ ಮರುಪ್ರಶ್ನಿಸಿದ್ದಾಳೆ. ಇದಕ್ಕೆ ಉತ್ತರಿಸಿದ ಪ್ರಾಧ್ಯಾಪಕ, ಕಾಲೇಜಿನಲ್ಲಿ ‘ಸಿಸಿಟಿವಿ ಇದೆ’ ಎಂದಿದ್ದಾನೆ. ಅದಕ್ಕೆ ಕಿಡಿಕಾರಿದ ವಿದ್ಯಾರ್ಥಿನಿ ‘ಸಿಸಿಟಿವಿ ದೃಶ್ಯವನ್ನು ತೋರಿಸಿ’ ಎಂದು ಸವಾಲು ಹಾಕಿದ್ದಾಳೆ.
ಇದನ್ನು ಓದಿದ್ದೀರಾ? ಅಸ್ಸಾಂ ವಿಧಾನಸಭಾ ಚುನಾವಣೆ: ಪಕ್ಷಾಂತರಿಗಳಿಗೆ ಪಾಠ ಕಲಿಸುತ್ತಾರೆಯೇ ಮತದಾರರು?
ಕೊನೆಗೆ ತರಗತಿಯಿಂದ ಹೊರನಡೆಯಲು ಮುಂದಾದ ಪ್ರಾಧ್ಯಾಪಕ, “ನಾನು ನಾಳೆ ನಿನ್ನೊಂದಿಗೆ ಮಾತನಾಡುತ್ತೇನೆ” ಎಂದಿದ್ದು, “ನನಗೆ ಮಾತನಾಡುವ ಇಷ್ಟವಿಲ್ಲ” ಎಂದು ವಿದ್ಯಾರ್ಥಿನಿ ಖಡಕ್ ಆಗಿ ಹೇಳಿದ್ದಾಳೆ. ಈ ಘಟನೆಯ ಕೆಲವೇ ಕ್ಷಣಗಳ ಬಳಿಕ ಕಾಲೇಜು ಆವರಣದಲ್ಲಿಯೇ ಆಕ್ರೋಶಗೊಂಡ ವಿದ್ಯಾರ್ಥಿನಿ ಹಾಗೂ ಆಕೆಯ ಸಹಪಾಠಿಗಳು ಒಗ್ಗೂಡಿ ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಗುಂಪು ಆತನಿಗೆ ಥಳಿಸಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.
ಘಟನೆಯ ಮಾಹಿತಿ ಬೆನ್ನಲ್ಲೇ ಪೊಲೀಸರು ಕಾಲೇಜಿಗೆ ಭೇಟಿ ನೀಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸುತ್ತಮುತ್ತಲಿನ ಸನ್ನಿವೇಶಗಳು ಮತ್ತು ವಾಸ್ತವಾಂಶಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.




