ಮಾರ್ಚ್ ಮಾಸದ ಅಂತ್ಯದ ವೇಳೆಗಾಗಲೇ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗಿ ಜನ ಜೀವನವನ್ನು ಹೈರಾಣಾಗಿಸುತ್ತಿದೆ. ಒಂದು ಕೊಂಡರೆ ಒಂದು ಉಚಿತ ಎಂಬಂತೆ ಬೇಡವೆಂದರೂ ಒಟ್ಟಿಗೆ ಕಾಲಿಟ್ಟಿರುವ ಬೇಸಿಗೆ ಮತ್ತು ಬರ ಜನರ ನೆಮ್ಮದಿ ಕಸಿದುಕೊಂಡಿವೆ.
ನೀರಿನ ಬರದಿಂದಾಗಿ ಬೀದರ್ ಜನತೆ ದಾಹದಿಂದ ಬಳಲಿ ಬೆಂಡಾಗುತ್ತಿದ್ದಾರೆ. ಮಕ್ಕಳಾಗಲೀ, ವೃದ್ಧರಾಗಲೀ ಟ್ಯಾಂಕರ್ ನೀರಿಗಾಗಿ ಬಿಸಿಲಿನಲ್ಲೇ ಕಾಯಬೇಕು. ಅದೂ ಇಲ್ಲವೆಂದರೆ ಪರಿಸ್ಥಿತಿ ಅಧೋಗತಿ! ಈ ದೃಶ್ಯ ವರ್ಷದಿಂದ ವರ್ಷಕ್ಕೆ ಮರುಕಳಿಸುತ್ತಿದ್ದರೂ ಶಾಶ್ವತ ಪರಿಹಾರ ಮಾತ್ರ ಕಾಣಿಸದೇ ಇರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.
ಕೆಲ ತಿಂಗಳ ಹಿಂದಷ್ಟೇ ವಾಡಿಕೆಗಿಂತ ಅಧಿಕ ಮಳೆಯಾಗಿ, ಬಾವಿ, ಕೆರೆ, ಕಟ್ಟೆ, ತೊರೆಗಳು ಮೈದುಂಬಿ ಹರಿದವು. ಪ್ರವಾಹದ ಹೊಡೆತಕ್ಕೆ ಕೆಲ ಕೆರೆ-ಕಟ್ಟೆ ಒಡೆದೂ ಹೋದವು. ಸಾಕು ಸಾಕೆನ್ನುವಷ್ಟು ನೀರು ಹರಿದರೂ ಬೇಸಿಗೆ ಹೊತ್ತಿಗೆ ಬತ್ತಿ ಹೋದವು, ಈಗ ʼಬರʼದ ಛಾಯೆ! ಬಯಲುಸೀಮೆಯ ಬಹುತೇಕ ಜಿಲ್ಲೆಗಳದ್ದು ಇದೇ ಪಾಡು. ಔರಾದ್ ತಾಲೂಕಿನ ಗಡಿ ಭಾಗದ ಸಾವರಗಾಂವ್ ಊರಿನ ಕತೆಯತ್ತ ಬಂದರೆ, ಇಲ್ಲಿನ ಜನ ನಿತ್ಯ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ಬರಿಗಾಲಿನಲ್ಲಿ ಕಾದ ಹೆಂಚಿನಂತಾಗಿದ್ದ ನೆಲದ ಮೇಲೆ ಕೈಯಲ್ಲಿ ಬಣ್ಣ ಬಣ್ಣದ ಖಾಲಿ ಕೊಡ ಹಿಡಿದು ನೀರಿನ ಟ್ಯಾಂಕರ್ ಇದ್ದೆಡೆಗೆ ಮೆರವಣಿಗೆ ಹೊರಡುತ್ತಿದ್ದ ಹೆಣ್ಣುಮಕ್ಕಳ ಗುಂಪೊಂದು ಕಣ್ಣಿಗೆ ಬಿತ್ತು. ವೃದ್ಧ ಮಹಿಳೆಯರು ಸೊಂಟದ ಮೇಲೊಂದು, ಕೈಯಲ್ಲೊಂದು ನೀರು ತುಂಬಿಸಿಕೊಂಡ ಕೊಡ ಹೊತ್ತು ಮನೆ ಕಡೆ ಹೊರಟಿದ್ದರು. ಕುತೂಹಲದಿಂದ ಅವರಿದ್ದ ಕಡೆಗೆ ಹೆಜ್ಜೆ ಹಾಕಿದೆ.
ಅಷ್ಟಕ್ಕಷ್ಟೇ ಮರಾಠಿ ಮಾತಾಡುವ ನಾನು ಅವರ ಭಾಷೆಯನ್ನೇ ತದೇಕಚಿತ್ತದಿಂದ ಗಮನಿಸಿದೆ. ಅಲ್ಲಿನ ಜನಕ್ಕೂ ಬಹುಶಃ ಕನ್ನಡ ಸರಿಯಾಗಿ ಬರುವುದಿಲ್ಲ ಎಂಬುದು ಅವರ ಮಾತಾಡುವಾಗ ಅಂದಾಜಿಗೆ ಬಂತು. ಹಿಂದಿ ಏನಾದರೂ ಬರಬಹುದೇನೋ ಎಂದುಕೊಂಡು ನಾನೇ ಹಿಂದಿಯಲ್ಲಿ ಪ್ರಶ್ನೆ ಕೇಳಲು ಶುರು ಮಾಡಿದೆ.
“ನಿಮ್ಮ ಮನೆಗೆ ನೀರು ಬರಲ್ವಾ, ಟ್ಯಾಂಕರ್ ನೀರು ಯಾಕೆ? ಎಂದು ಹಿಂದಿಯಲ್ಲಿ ಕೇಳಿದೆ. ಅದಕ್ಕೆ “ನೀರಿಲ್ಲ, ಏನಿಲ್ಲ! ಈ ಟ್ಯಾಂಕರ್ ನೀರೇ ಗತಿ ನಮ್ಗೆ” ಎಂದು ಅಲ್ಲಿದ್ದ ಕೆಲ ಮಹಿಳೆಯರು ಕೊಡ ತುಂಬಿಸಿಕೊಳ್ಳುತ್ತಾ ಸಿಟ್ಟಿನಿಂದ ಉತ್ತರಿಸಿದರು.
ನಾನು ನೀರಿನ ಸಮಸ್ಯೆ ಬಗ್ಗೆ ವಿಚಾರಿಸುತ್ತಲೇ ಇದ್ದೆ, ಆದರೆ, ಎಲ್ಲರೂ ತಮ್ಮ ಓಣಿಯೊಳಗೆ ಬಂದು ನಿಂತ ನೀರಿನ ಟ್ಯಾಂಕರ್ ಖಾಲಿಯಾಗುವ ಮುನ್ನ ನೀರು ತುಂಬಿಕೊಳ್ಳುವ ಧಾವಂತದಲ್ಲಿದ್ದರು. ನೀರಿನ ಕೊಡ ತುಂಬುತ್ತಲೇ ಕೇಳಿದ ಪ್ರಶ್ನೆಗಳಿಗೆ ಅಸಮಧಾನದಿಂದ ಉತ್ತರಿಸುತ್ತಾ ಕೊಡ ತುಂಬಿಸಿಕೊಂಡು ಮನೆಯತ್ತ ಹೆಜ್ಜೆ ಹಾಕಿದರು. ಮತ್ತೆ ವಾಪಸ್ ಬಂದು ಹೇಳುತ್ತಿದ್ದರು.

“ಈ ರೀತಿ ದಿನಕ್ಕೆ ಎಷ್ಟು ಬಾರಿ ನೀರಿನ ಟ್ಯಾಂಕರ್ ನೀರು ಬರುತ್ತೆ?” ಎಂದು ಮರು ಪ್ರಶ್ನಿಸಿದೆ. ಅದಕ್ಕೆ, “ದಿನಕ್ಕೆ ಮೂರ್ನಾಲ್ಕು ಬಾರಿ ಬರುತ್ತದೆ. ಹೀಗೆ ಊರಲ್ಲಿ 3 ಟ್ಯಾಂಕರ್‌ಗಳಿವೆ. ಮಾರ್ಚ್ ಶುರುವಾದ ದಿನದಿಂದ ಟ್ಯಾಂಕರ್ ನೀರೇ ನಮ್ಗೆ ಆಧಾರ” ಎಂದು ಅಸಹಾಯಕರಾಗಿ ಹೇಳತೊಡಗಿದರು.
ಓಣಿಯಲ್ಲಿ ಟ್ಯ್ರಾಕ್ಟರ್ ಮೂಲಕ ತಂದು ನಿಲ್ಲಿಸಿದ ಟ್ಯಾಂಕರ್ ನೀರಿನ ಸುತ್ತ ಮಕ್ಕಳು, ಮಹಿಳೆಯರು ನಾ ಮುಂದು, ತಾ ಮುಂದು ಎನ್ನುವಂತೆ ಕೊಡ ತುಂಬಿಸಿಕೊಳ್ಳುತ್ತಿದ್ದರು. ಅಷ್ಟರಲ್ಲೇ ಮನೆಯಿಂದ ಅಜ್ಜಿಯೊಬ್ಬರು ಖಾಲಿ ಕೊಡ ಹಿಡಿದು ಬಂದರು.
ನಾನು ಕೇಳದಿದ್ರು, “ಏನ್ ಮಾಡ್ಬೇಕು ಸರ್, ನೋಡ್ರೀ ನಮ್ ಹೈರಾಣಿ, ಪಂದ್ರಾ ದಿನ ಆಯ್ತು ಈ ಟ್ಯಾಂಕರ್ ಯಾವಾಗ ಬರ್ತುದ್ ಅಂತೇ ಕಾಯ್ದು ಕೂಡ್ತೆವು, ಏನಾರಾ ಮಾಡಿ ಪುಣ್ಯಕಟ್ಕೋರಿʼ ಎಂದು ಅಜ್ಜಿ ತೇಜಾಬಾಯಿ ಬೇಸರದಿಂದ ಹೇಳತೊಡಗಿದರು.
ನಾನು ತಿರುಗಿ ಮಾತಾಡಿಸಬೇಕು ಎನ್ನುವಷ್ಟರಲ್ಲೇ ಅವರು ಒಂದು ಕೊಡ ಬಾಗಿದ ಭುಜದ ಮೇಲೆ ಹೊತ್ತು ಹೋದರು.
ನೀರಿನ ಟ್ಯಾಂಕರ್ ನಿಲ್ಲಿಸಿದ ಪಕ್ಕದಲ್ಲೇ ಮನೆ ಎದುರು ಸ್ಥಾಪಿಸಿದ ಜೆಜೆಎಂ ನಲ್ಲಿ ಕಂಡು, ʼಈ ನಲ್ಲಿಗೆ ನೀರು ಬರಲ್ವಾ? ಎಂದು ಕೇಳಿದೆ.
“ಆ ನಲ್ಲಿ ಕೂಡಿಸಿ ಎರಡ್ಮೂರು ವರ್ಷ ಆಯ್ತು, ಹನಿ ನೀರು ಬಂದಿಲ್ಲ. ಆ ಜೆಜೆಎಂ ಸ್ಕೀಮ್ ಪೂರಾ ಫೇಲ್ ಅದಾ ರೀ” ಎಂದು ಯುವಕನೊಬ್ಬ ಆಕ್ರೋಶದಿಂದ ಹೇಳಿದರು.
ಮಹಾರಾಷ್ಟ್ರ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಗ್ರಾಮ ಸಾವರಗಾಂವ್, ಬೋಂತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ದೊಡ್ಡ ಊರು. ಈ ಗ್ರಾಮದಲ್ಲಿ 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಇರುವ ಕೊಳವೆ ಬಾವಿಗಳು ಬತ್ತಿವೆ. ಇದರಿಂದಾಗಿ ಜನ-ಜಾನುವಾರು ನೀರಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಹಲವು ಹಳ್ಳಿ, ತಾಂಡಾಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕೆಲವೆಡೆ ಅಂತರ್ಜಲ ಪಾತಾಳಕ್ಕಿಳಿದಿದೆ. ಇನ್ನು ಕೆಲವೆಡೆ ಕಾಲುವೆ, ಕೆರೆ, ಬಾವಿಯಲ್ಲಿ ನೀರಿದ್ದರೂ ಸಮರ್ಪಕ ಬಳಕೆ ಇಲ್ಲದಿರುವುದರಿಂದ ಜನ ನಿತ್ಯ ನೀರಿಗಾಗಿ ಪರದಾಡುವುದು ಗ್ರಾಮೀಣ ಪ್ರದೇಶದಲ್ಲಿ ಕಾಣುತ್ತಿದೆ. ಇಂತಹ ಸ್ಥಿತಿಯಲ್ಲಿ ಬಾಯಾರಿದ ಜನರ ದಾಹ ನೀಗುವುದು ಎಲ್ಲಿಂದ?

ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ನೀರಿನ ಅಭಾವ ಉಂಟಾದ ಮೇಲೆ ಗ್ರಾಮ ಪಂಚಾಯತ್‌ನಿಂದ ಒಂದು ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿತ್ತು. ಅಷ್ಟು ದೊಡ್ಡ ಊರಿಗೆ ಒಂದು ಟ್ಯಾಂಕರ್ ನೀರು ಸಾಕಾದೀತೇ? ಕೆಲ ದಿನಗಳಿಂದ ಮತ್ತೆ ಎರಡು ಟ್ಯಾಂಕರ್ ಮೂಲಕ ನೀರು ಪೂರೈಸಿಲಾಗುತ್ತಿದೆ. ಗ್ರಾಮದಲ್ಲಿ ಬೋರ್‌ವೆಲ್, ಬಾವಿ ಒಣಗಿದ್ದು, ಭೂಗರ್ಭ ಜಲಮಟ್ಟ ಕುಸಿದಿರುವುದರಿಂದ ಇಡೀ ಊರಿನ ಜನರಿಗೆ ನಿತ್ಯವೂ 3 ಟ್ಯಾಂಕರ್‌ಗಳಿಂದ ಪೂರೈಕೆಯಾಗುವ ನೀರು ಏಕೈಕ ಆಧಾರವಾಗಿದೆ.
ಅದೇ ಊರಿನ ಮತ್ತೊಂದು ಓಣಿಗೆ ಕಾಲಿಟ್ಟಿದೆ. ಪುಟ್ಟ ಮಕ್ಕಳು, ಮಹಿಳೆಯರು ಕೈಯಲ್ಲಿ ಕೊಡ, ಬಕೇಟ್ ಹಿಡಿದು ರಸ್ತೆ ಪಕ್ಕದಲ್ಲಿ ನಿಂತಿದ್ದ ನೀರಿನ ಟ್ಯಾಂಕರ್ ಕಡೆ ಓಡುತ್ತಿದ್ದರು. ನಾನೂ ಟ್ಯಾಂಕರ್ ಬಳಿ ತೆರಳಿದೆ.
ನೀರು ಪೂರೈಸುವ ಚಾಲಕನನ್ನು ಮಾತಿಗೆಳೆದು, ʼದಿನಕ್ಕೆ ಎಷ್ಟು ಟ್ಯಾಂಕರ್ ನೀರು ತರ್ತೀರಾ? ನೀರು ಎಲ್ಲಿಂದ ತರೋದು, ಒಂದು ಟ್ಯಾಂಕರ್‌ಗೆ ಎಷ್ಟು ಹಣ ಎಂಬಿತ್ಯಾದಿ ಪ್ರಶ್ನೆ ಕೇಳಿದೆ.
ʼಮೂರು ಟ್ಯಾಂಕರ್‌ಗಳಿವೆ. ಒಬ್ಬೊಬ್ಬರು ಒಂದು ಓಣಿಗೆ ತೆರಳಿ ನೀರು ಕೊಡುತ್ತೇವೆ. ದಿನಕ್ಕೆ 4-5 ಆಗುತ್ತವೆ. ಊರಿನ ಹೊರಗಡೆ ಖಾಸಗಿ ಬಾವಿಯಿಂದ ತುಂಬಿಸಿಕೊಂಡು ಪೂರೈಸುತ್ತಿದ್ದೇವೆ. ಒಂದು ಟ್ಯಾಂಕರ್‌ಗೆ ಇಂತಿಷ್ಟು ಹಣ ನಿಗದಿಯಿಲ್ಲ. ಒಂದು ದಿನಕ್ಕೆ ₹1 ಸಾವಿರ ಎಂಗೇಜ್ ಲೆಕ್ಕದಲ್ಲಿ ಕೊಡ್ತಾರೆʼ ಎಂದು ಉತ್ತರಿಸಿದರು.
ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿಬೇಕೆಂಬ ಮಹತ್ವದ ಉದ್ದೇಶದಿಂದ ಸರ್ಕಾರಗಳು ತಂದ ಜಲ ಜೀವನ ಮಿಷನ್ (ಜೆಜೆಎಂ), ಶುದ್ಧ ಕುಡಿಯುವ ನೀರಿನ ಘಟಕ ಯೋಜನೆಗಳು ಈ ಗ್ರಾಮದಲ್ಲಿ ಅಕ್ಷರಶಃ ನೆಲಕಚ್ಚಿವೆ. ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಯತ್ನಿಸಿದ ʼಮನೆ-ಮನೆಗೆ ಗಂಗೆʼ ಹರಿಸುವ ಜಲೋತ್ಸವ ಕಾಮಗಾರಿ ಕೂಡ ಅಪೂರ್ಣವಾಗಿದೆ. ಇನ್ನು ಗ್ರಾಮದ ಹೊರವಲಯದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕದ ಬಾಗಿಲು ಮುಚ್ಚಿ ವರ್ಷಗಳೇ ಕಳೆದರೂ ನೋಡುವವರು ಯಾರಿಲ್ಲ.
ಮಹಿಳೆಯರು ಮತ್ತು ಮಕ್ಕಳು ಬೆಳಗಿನ ಜಾವವೇ ನೀರಿಗಾಗಿ ಒಂದೆರಡು ಕಿಲೋಮೀಟರ್‌ನಷ್ಟು ದೂರದ ಪ್ರದೇಶಗಳಿಂದ ನೀರು ತಂದುಕೊಳ್ಳಬೇಕಾದ ಅನಿವಾರ್ಯತೆ ತಾಲೂಕಿನ ಹಲವೆಡೆ ಇದೆ. ಕೆಲ ಕಡೆ ಖಾಸಗಿ ಬೋರ್‌ವೆಲ್, ಟ್ಯಾಂಕರ್ ಮೂಲಕ ನೀರು ಪೂರೈಸುತ್ತಾ ಕೈತೊಳೆದುಕೊಳ್ಳುವ ಅಧಿಕಾರಿಗಳು, ಜನಪ್ರತಿನಿಧಿಗಳು ʼಕುಣಿಲಾಕ್ ಕರೀರಿ, ಕಾಳಜಿ ಕೇಳಭ್ಯಾಡ್ರಿʼ ಎಂಬಂತೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವಲ್ಲಿ ವಿಫಲ ಆಗಿರುವುದು ಕಂಡು ಬರುತ್ತದೆ.
ಬೀದರ್ ಜಿಲ್ಲೆಯಲ್ಲಿ ಕಳೆದ ವರ್ಷದ ಬೇಸಿಗೆಯಲ್ಲಿ ಒಟ್ಟು 201 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಈ ಪೈಕಿ ಅತಿ ಹೆಚ್ಚು ಔರಾದ್ ಮತಕ್ಷೇತ್ರದ 69 ಹಳ್ಳಿಗಳಲ್ಲಿ ನೀರಿನ ಅಭಾವ ಉದ್ಭವಿಸಿತು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿದ ಅಧಿಕೃತ ದಾಖಲೆಗಳೇ ಹೇಳುತ್ತಿವೆ.

ನೀರಿನ ಸಮಸ್ಯೆ ಉಂಟಾದ ಔರಾದ್-ಕಮಲನಗರ ಅವಳಿ ತಾಲೂಕಿನ 69 ಗ್ರಾಮಗಳಲ್ಲಿ ಹೊಸ ಬೋರ್‌ವೆಲ್ ಕೊರೆಸುವುದು, ಹಳೆ ಕೊಳವೆಬಾವಿಗಳಿಗೆ ಫ್ಲಸಿಂಗ್ ಮಾಡಿಸುವುದು, ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆಯುವುದು, ಆಳ ತೆಗೆಯುವುದು ಹಾಗೂ ಪೈಪ್ ಲೈನ್, ವಿದ್ಯುತ್ ಸಂಪರ್ಕ ಕಾಮಗಾರಿ ಸೇರಿ ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿಗಾಗಿ ಬರೋಬ್ಬರಿ ₹1.64 ಕೋಟಿ ಖರ್ಚಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸದನಕ್ಕೆ ಮಾಹಿತಿ ನೀಡಿದ್ದಾರೆ. ಆದರೂ, ಈ ಸಮಸ್ಯೆಗೆ ಪರಿಹಾರ ಕಾಣದೇ ಯಥಾಸ್ಥಿತಿ ಈ ವರ್ಷವೂ ಅನೇಕ ಗ್ರಾಮಗಳಲ್ಲಿ ಮುಂದುವರೆದಿದ್ದು ಗುಟ್ಟಾಗಿ ಉಳಿದಿಲ್ಲ. ಕಂಡೂ ಕಾಣದಂತೆ ಮೌನವಾಗಿರುವ ಆಡಳಿತ ವ್ಯವಸ್ಥೆಯ ಇಚ್ಛಾಶಕ್ತಿ ಕೊರತೆಯೊ ಅಥವಾ ಜನರ ಪ್ರತಿರೋಧದ ಕೊರತೆಯೋ ಎಂಬುದು ಕಾಡುವ ಪ್ರಶ್ನೆ?
ಇದನ್ನೂ ಓದಿ : ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ ₹5 ಸಾವಿರ ರೊಕ್ಕ ಕೊಟ್ಟು ತಕೋತಿವಿ!
ಪ್ರತಿ ವರ್ಷ ಇದೇ ರೀತಿ ನೀರಿನ ಬವಣೆ ಉದ್ಭವಿಸಿದರೂ ಶಾಶ್ವತ ಪರಿಹಾರ ಯಾಕೆ ಇಲ್ಲ? ಎಂದು ನೇರವಾಗಿ ಪ್ರಶ್ನಿಸುವ ನಾಗರಿಕ ಸಮಾಜ, ತಾತ್ಕಾಲಿಕ ಕ್ರಮಗಳ ಬದಲು ದೀರ್ಘಕಾಲಿಕ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಂತೆ ಆಗ್ರಹಿಸುತ್ತಿದೆ. ಮುಂದಿನ ದಿನಗಳಲ್ಲಾದರೂ ಆಡಳಿತ ಮಂಡಳಿಯು ಎಚ್ಚೆತ್ತುಕೊಂಡು, ಹನಿ ನೀರಿಗಾಗಿ ಜನರ ಪರದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂಬುದು ಇಡೀ ಗ್ರಾಮದ ಆಶಯವಾಗಿದೆ. ಇಲ್ಲದಿದ್ದರೆ, ಈ ಬಾಯಾರಿಕೆ ಗಂಟಲಿನಲ್ಲಿ ಮಾತ್ರವಲ್ಲ ಆಡಳಿತ ವ್ಯವಸ್ಥೆಯ ಮೇಲಿನ ಆಕ್ರೋಶದ ಕಿಡಿಯಾಗಿ ಸ್ಫೋಟಿಸುವುದರಲ್ಲಿ ಸಂಶಯವಿಲ್ಲ.
ಸಾವರಗಾಂವ್ ಗ್ರಾಮದ ನೀರಿನ ಸಮಸ್ಯೆ ಕುರಿತು ವಿಚಾರಿಸಲು ಬೋಂತಿ ಗ್ರಾಮ ಪಂಚಾಯತ್ ಪಿಡಿಒ ರಮೇಶಕುಮಾರ ಅವರ ಸಹಾಯವಾಣಿ ಸಂಖ್ಯೆಗೆ ‘ಈದಿನ’ ಪ್ರತಿನಿಧಿ ಕರೆ ಮಾಡಿದರೆ, ಅವರು ಲಭ್ಯವಿರಲಿಲ್ಲ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



