ಶಾಲಾ ಶಿಕ್ಷಣದಲ್ಲಿ ತೃತೀಯ ಭಾಷೆ ಹಿಂದಿ ವಿಷಯವನ್ನು ಕೈ ಬಿಡುವಂತೆ ಒತ್ತಾಯಿಸಿ, ಎರಡು ನುಡಿ ಪದ್ಧತಿಯನ್ನು ಜಾರಿಗೆ ತರುವಂತೆ ಹಾಗೂ ಪ್ರಸ್ತುತ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ʼಪಾಸ್ ವಿತೌಟ್ ಹಿಂದಿʼ ಎಂಬ ನಿಯಮ ಮಾಡಿ ಎಲ್ಲಾ ವಿದ್ಯಾರ್ಥಿಗಳನ್ನು ಹಿಂದಿ ವಿಷಯದಲ್ಲಿ ಉತ್ತೀರ್ಣ ಮಾಡಬೇಕೆಂದು ಜೊತೆಗೆ ಶಾಲಾ ಶಿಕ್ಷಣದಲ್ಲಿ 2026-2027 ರಿಂದ ಶಾಶ್ವತವಾಗಿ ತ್ರಿಭಾಷಾ ಸೂತ್ರ ತೆಗೆದು ದ್ವಿಭಾಷಾ ಸೂತ್ರ ಜಾರಿ ಮಾಡಿ ಎಂದು ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟವಾದ ‘ಹಿಂದಿ ಹೇರಿಕೆ ವಿರೋಧಿ ಕರ್ನಾಟಕ’ವು ಮಧು ಬಂಗಾರಪ್ಪನ ಮನೆಗೆ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಈ ವಿಷಯದ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಇಂದು ಸಂಜೆಯೊಳಗೆ ಸ್ಪಷ್ಟನೆ ನೀಡುವುದಾಗಿ ಕನ್ನಡಪರ ಹೋರಾಟಗಾರರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮಧು ಬಂಗಾರಪ್ಪರವರು ಸರಿಯಾದ ತೀರ್ಮಾನ ತೆಗೆದುಕೊಳ್ಳದೆ ಇದ್ದಲ್ಲಿ ಮಾರ್ಚ್ 31ರಂದು ರಾಜ್ಯದಲ್ಲಿ 2900 ಕ್ಕಿಂತ ಹೆಚ್ಚಿರುವ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ನುಗ್ಗಿ ತೃತೀಯ ಭಾಷೆಯಾದ ಹಿಂದಿ ಪರೀಕ್ಷೆಗೆ ಅಡ್ಡಿಪಡಿಸುತ್ತೇವೆಂದು ಕನ್ನಡಪರ ಹೋರಾಟಗಾರರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖ ಹೋರಾಟಗಾರರಾದ ಸಾ ರಾ ಗೋವಿಂದು, ಶೇ ಬೊ ರಾಧಕೃಷ್ಣ, ದ್ರಾವಿಡ ಕನ್ನಡಿಗ ಅಭಿ ಒಕ್ಕಲಿಗ, ಕರವೇ ಶಿವರಾಮೇಗೌಡ, ಪಾರ್ವತಿಶ್, ಕದಂಬ ಪಡೆ ಮಂಜು ಗಣತಿಪುರ, ರಾಮಪ್ರಸಾದ್, ಅಶ್ವತ್ ಗೌಡ, ಸುಶೀಲ್ ಕುಮಾರ್,ನಾಗೇಶ್, ಸಚಿನ್ ಒಕ್ಕಲಿಗ ಮುಂತಾದ ಹೋರಾಟಗಾರರು ಉಪಸ್ಥಿತಿಯಲ್ಲಿದ್ದರು.
ಇದನ್ನೂ ಓದಿ: ಬೆಂಗಳೂರು | SSLC ಪರೀಕ್ಷೆಯಲ್ಲಿ ಹಿಂದಿ ಕಡ್ಡಾಯ; ಕನ್ನಡಪರ ಸಂಘಟನೆಗಳ ವಿರೋಧ, ಮುತ್ತಿಗೆ ಎಚ್ಚರಿಕೆ




