ಹೊಸಿಲ ಒಳಗೆ-ಹೊರಗೆ | ಹೆಣ್ಣುಮಕ್ಕಳ ವೈಯಕ್ತಿಕ ವಿಷಯಗಳು ಮತ್ತು ಊರ ಪಂಚಾಯ್ತಿ ವಿಷಯಗಳು

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಗಂಡನಿಗೆ ಹೊಡೆದ ಹೆಂಡತಿಯನ್ನು ಕರೆದು ಪಂಚಾಯತಿ ಮಾಡುತ್ತಾರೆ; ಮದುವೆಯಾಗದೆ ಉಳಿವ ಹೆಣ್ಣುಮಗಳನ್ನು ಅಣಕಿಸುತ್ತಾರೆ, ಧೃತಿಗೆಡಿಸುತ್ತಾರೆ; ಅಂತರ್ಜಾತಿ-ಧರ್ಮಗಳ ನಡುವೆ ಮದುವೆಗಳಾದಾಗ, ಅದರಲ್ಲೂ ಎರಡೂ ಕುಟುಂಬಗಳು ಒಪ್ಪಿಯೇ ಆದರೂ ಕೂಡಾ ಗಲಭೆಗಳೇ ಆಗುತ್ತವೆ… ಅನೇಕ ಕೌಟುಂಬಿಕ ವಿಷಯಗಳನ್ನು ಕಂಡೂ ಕಾಣದಂತಿರುವ ಊರಿನ ಮುಖಂಡರು, ಧಾರ್ಮಿಕ ಮುಖಂಡರು ಇಂತಹವುಗಳನ್ನಷ್ಟೇ ತಡೆಯುವ ಜವಾಬ್ದಾರಿ ವಹಿಸಿಕೊಳ್ಳುವುದು ವಿಪರ್ಯಾಸ ಅಲ್ಲವೇ?

“ಅಯ್ಯೋ… ಏನು ನೀವು ಹೇಳೋದು! ನಮ್ಮ ಪಕ್ಕದ ಮನೆಯಲ್ಲಿ ಗಂಡ ತನ್ನ ಹೆಂಡತಿಗೆ ತಾರಾಮಾರಾ ಹೊಡೀತಾನೆ, ಬೈತಾನೆ, ನಾನು ಒಂದೆರಡು ಸಾರಿ ತಡೆಯಲು ಹೋದೆ – ‘ನನ್ನ ಗಂಡ ನನಗೆ ಹೊಡೀತಾನೆ, ನೀವು ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ?’ ಅಂದುಬಿಟ್ಟಳಲ್ಲಾ! ನಾನು ಬಾಯಿ ಮುಚ್ಕೊಂಡು ಹಿಂದೆ ಬಂದೆ. ಒಂದು ಸಾರಿ ತಡೀಲಾರದೆ, ನನ್ನ ಗಂಡನೇ ಹೋದರೂ, ‘ನಿನಗೂ ಇವಳಿಗೂ ಏನು ಸಂಬಂಧ?’ ಅಂತ ದಬಾಯಿಸಿಬಿಟ್ಟ ಅವಳ ಗಂಡ…”

“ಅಲ್ಲಾ… ಅವಳಿಗಿನ್ನೂ ಹದಿನಾರು ವಯಸ್ಸು ತುಂಬಿಲ್ಲ, ಮದುವೆ ಮಾಡುತ್ತಿದ್ದೀರಲ್ಲಾ, ಸರಿಯೇ?” ಅಂದರೆ, “ಅವಳು ನನ್ನ ಮಗಳು; ಅವಳಿಗೆ ಏನು ಒಳ್ಳೇದು, ಏನು ಕೆಟ್ಟದು ನನಗೆ ಗೊತ್ತು. ನೀವು ನಿಮ್ಮ ಮನೆ ವಿಷ್ಯ ನೋಡ್ಕೊಳ್ಳಿ,” ಅಂತ ತಿರುಗಿ ರೇಗಿಬೀಳುತ್ತಾರೆ.

“ಮಾವ, ನನ್ನನ್ನು ಓದಿಸ್ತೇನೆ ಅಂತ ಕೋಣೆಯೊಳಗೆ ಕರಕೊಂಡು ಹೋಗಿ ನನಗೆ ಮುತ್ತು ಕೊಟ್ಟ, ನನಗೆ ಅಸಹ್ಯ ಆಗೋಹಾಗೆ ನಡಕೊಂಡ…” ಅಂತ ಹೇಳಿದರೆ, “ಅಯ್ಯೋ, ಆಯಿತು… ಇನ್ನು ಊರೆಲ್ಲಾ ಹೇಳ್ಕೊಂಡು ಬರಬೇಡ. ಏನೋ ಆಯಿತು, ಸುಮ್ಮನಿರು,” ಅಂತ ಹೇಳುವುದೇ ಹೆಚ್ಚು. ಒಂದಿಷ್ಟು ಸಮಾಧಾನ ಮಾಡಿ, ಧೈರ್ಯ ತುಂಬಿದರೂ ಕೊನೆಗೆ ಹೇಳುವ ಮಾತು – “ಯಾರಿಗೂ ಹೇಳಬೇಡ,” ಎಂದೇ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

– ಈ ಎಲ್ಲ ಸಂದರ್ಭಗಳಲ್ಲೂ ಸ್ಪಷ್ಟವಾಗಿ ಮನೆಯೊಳಗಿನ ವಿಚಾರಕ್ಕೆ ಬೇರೆಯವರು ತಲೆ ಹಾಕಬಾರದು ಎಂಬ ಒಂದು ಅಂಶ ಕಾಣುತ್ತದೆ. ಇವು ವೈಯಕ್ತಿಕ ವಿಚಾರಗಳು, ಇವಕ್ಕೂ ಸಾರ್ವಜನಿಕ ಬದುಕಿಗೂ ಸಂಬಂಧವಿಲ್ಲ ಎಂಬ ದನಿ ಕೇಳಿಬರುತ್ತದೆ. ಇವನ್ನೆಲ್ಲ ಸಾಮಾಜಿಕ ಸಮಸ್ಯೆಗಳು ಎಂದು ಗುರುತಿಸಲಾಗಿದ್ದರೂ ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಹಕ್ಕುಗಳ ಪ್ರಶ್ನೆ ಅಂತ ಇದ್ದರೂ, ಪುರುಷಪ್ರಧಾನ ಚಿಂತನೆಯ ಫಲವಾಗಿ ಇವೆಲ್ಲ ಮನೆಯೊಳಗೆ ಭದ್ರವಾಗಿ ಇಟ್ಟುಕೊಳ್ಳಬೇಕಾದ ವಿಚಾರಗಳೇ ಆಗಿ ಉಳಿದಿವೆ. ಇದು ಇರಲಿ… ಇನ್ನೊಂದಷ್ಟು ಸಂದರ್ಭಗಳನ್ನು ನೋಡೋಣ.

ಒಬ್ಬ ಹೆಂಡತಿ ಗಂಡನಿಗೆ ಹೊಡೆದುಬಿಟ್ಟಳು, ಹೇಗೋ ಬಚಾವಾದ – ಅಂತ ಗೊತ್ತಾದಾಗ; ಒಬ್ಬ ಹೆಣ್ಣುಮಗಳು, “ನನಗೆ ಮದುವೆ ಬೇಡ, ಮಗು ಬೇಡ, ಮಕ್ಕಳನ್ನು ಸಾಕಿ ಬೆಳೆಸುವುದು ನನಗೆ ಅಂತಹ ಇಷ್ಟದ ವಿಚಾರ ಅಲ್ಲ, ನನಗೆ ನನ್ನ ವೃತ್ತಿಯೇ ಮುಖ್ಯ,” ಅಂತ ಖಚಿತವಾಗಿ ಹೇಳಿದಾಗ; ಹೆಣ್ಣುಮಗಳೊಬ್ಬಳು ನನಗೆ ಜಾತಿ, ಧರ್ಮ ಮುಖ್ಯ ಅಲ್ಲ, ಅವನು ನನಗೆ ಬಹಳ ಇಷ್ಟ ಆಗಿದ್ದಾನೆ, ಮದುವೆ ಆಗುತ್ತೇನೆ,” ಅಂತ ತನ್ನ ಧರ್ಮದಲ್ಲದವರನ್ನು ಮದುವೆಯಾಗಲು ಹೊರಟಾಗ ಅಥವಾ ಮನೆಮಂದಿಯೇ ಸೇರಿ, ಒಪ್ಪಿಗೆ ನೀಡಿಯೇ ನಮ್ಮ ಮನೆಯಲ್ಲಿ ಮಕ್ಕಳಿಗೆ ಅಂತರಧರ್ಮೀಯ ಮದುವೆ ಮಾಡಿಸುತ್ತೇವೆ ಅಂತ ಹೊರಟಾಗ; ಹೆಣ್ಣುಮಕ್ಕಳು ಈ ಸಾಂಪ್ರದಾಯಿಕ ಉಡುಗೆ ನನಗೆ ಇಷ್ಟವಿಲ್ಲ ಅಂತ ತಮ್ಮ ಇಷ್ಟದ ಉಡುಪು ತೊಟ್ಟಾಗ – ಇದು ಅವರವರ ಮನೆಗೆ ಸಂಬಂಧಿಸಿದ ಸುದ್ದಿ, ಅವರ ವೈಯಕ್ತಿಕ ವಿಚಾರ ನಾವು ಹೊರಗಿನವರು ತಲೆಹಾಕಬಾರದು ಎಂದು ಬಾಯಿಮುಚ್ಚಿ ಕುಳಿತುಕೊಳ್ಳುತ್ತದೆಯೇ ಈ ಸಮಾಜ?

ಗಂಡನಿಗೆ ಹೊಡೆದ ಹೆಂಡತಿಯನ್ನು ಕರೆದು ಪಂಚಾಯಿತಿ ಮಾಡುತ್ತಾರೆ. ಮದುವೆಯಾಗದೆ ಉಳಿವ ಹೆಣ್ಣುಮಗಳನ್ನು ಅಣಕಿಸುತ್ತಾರೆ, ಧೃತಿಗೆಡಿಸುತ್ತಾರೆ. ಅಂತರ್ಜಾತಿ-ಧರ್ಮಗಳ ನಡುವೆ ಮದುವೆಗಳಾದಾಗ, ಅದರಲ್ಲೂ ಎರಡೂ ಕುಟುಂಬಗಳು ಒಪ್ಪಿಯೇ ಆದರೂ ಗಲಭೆಗಳೇ ಆಗುತ್ತವೆ; ಊರಿನ ಮುಖಂಡರು, ಧಾರ್ಮಿಕ ಮುಖಂಡರು ಇವನ್ನು ತಡೆಯುವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಉಡುಪಿನ ವಿಚಾರವಂತೂ ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನೇ ಹುಟ್ಟುಹಾಕುತ್ತದೆ. ಆ ಮನೆಯ ಆಗುಹೋಗುಗಳಿಗೂ ನಮಗೂ ಸಂಬಂಧವಿಲ್ಲ ಅಂತ ಸುಮ್ಮನೆ ಕೂರುವುದಿಲ್ಲ ಅಲ್ಲವೇ? ಇಂತಹ ಸಂದರ್ಭಗಳಲ್ಲಿ ಯಾವುದೇ ಮನೆಯ ವಿಚಾರಗಳಿಗೆ ತಲೆಹಾಕುವುದು ತಪ್ಪು ಅಂತ ಅನಿಸದೆ ಇರುವುದು ವಿಪರ್ಯಾಸ ಅಲ್ಲವೇ? ಈ ನಡೆಗಳು ‘ಅಧಿಕಪ್ರಸಂಗಿತನ’ ಅನಿಸಿಕೊಳ್ಳುವುದೇ ಇಲ್ಲವಲ್ಲ?

ಅಂದರೆ, ಈ ಮನೆಯ ವಹಿವಾಟು ಅವರವರದ್ದೇ ಎಂದು ಹೇಳುವುದೇ ಒಂದು ದೊಡ್ಡ ರಾಜಕೀಯ ತಾನೇ? ಪುರುಷಪ್ರಧಾನ ವ್ಯವಸ್ಥೆಯ ರಾಜಕೀಯ. ಮಹಿಳೆಯರು ತಮ್ಮ ಮೇಲಿನ ಯಾವುದೇ ತಾರತಮ್ಯಗಳನ್ನು, ದೌರ್ಜನ್ಯಗಳನ್ನು ಮನೆಯಿಂದ ಆಚೆಗೆ ಮಾತಾಡಬಾರದು, ಬಡಿಸಿಕೊಂಡರೂ ಒದೆಸಿಕೊಂಡರೂ ತಾಳಿಕೊಂಡು ನಾಲಕ್ಕು ಗೋಡೆಯೊಳಗೆ ಬಾಳುವೆ ಮಾಡಬೇಕು, ಅಂತಹವರು ಆದರ್ಶ ಮಹಿಳೆಯರು ಅಂತ ರಕ್ತಗತ ಮಾಡಿಬಿಟ್ಟರೆ ಆಯಿತಲ್ಲ… ಆ ಹೆಣ್ಣುಮಗಳು ಮೇಲೆ ಹೇಳಿದಂತೆ, “ನನ್ನ ಗಂಡ ನನಗೆ ಹೊಡೀತಾರೆ, ನಿಮಗೆ ಯಾಕೆ ತಲೆಬಿಸಿ?” ಅಂತ ಹೇಳಿಬಿಡುತ್ತಾಳಲ್ಲ; ಮತ್ತೆ ಯಾರೂ ಅವರ ವಿಷಯಕ್ಕೆ ಹೋಗುವುದೇ ಇಲ್ಲವಲ್ಲ! ಎಂತಹ ಜಾಣತನದ ವ್ಯವಸ್ಥೆ. ಒಂದು ಸಾಮಾನ್ಯ ಪ್ರಶ್ನೆ – ಬಡಿಸ್ಕೊಂಡು, ಬೈಸ್ಕೊಂಡು ಇರೋದು ನಿಜಕ್ಕೂ ಯಾವ ಹೆಣ್ಣುಮಕ್ಕಳಿಗೆ ಅಥವಾ ಯಾರಿಗಾದರೂ ಹೇಗೆ ಇಷ್ಟವಾಗುವುದು ಸಾಧ್ಯ? ಅಂದರೆ, ಮನೆಯೊಳಗಿನ ಜೀವನಶೈಲಿ ತೀರ್ಮಾನವಾಗುವುದು ಹೊರಗಿನ ವ್ಯವಸ್ಥೆಯ ಮೂಲಕ. ಅದೂ ಅಧಿಕಾರ ಸಂಬಂಧದ ರಚನೆಗಳ ಮೂಲಕ.

ಮನೆಯೊಳಗೆ ಮಹಿಳೆಯರ ಮೇಲೆ ನಡೆಯುವ ತಾರತಮ್ಯಗಳನ್ನು, ದೌರ್ಜನ್ಯಗಳನ್ನು, ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಗುರುತಿಸುವವರು ಯಾರು? ಸರಿಪಡಿಸುವವರು ಯಾರು? ಅನುಭವಿಸುವವರು ಹೊರಗೆ ಹೇಳಿಕೊಳ್ಳುವ ಹಾಗೆ ಇಲ್ಲ. ತವರುಮನೆಯವರು ಬರುವ ಹಾಗಿಲ್ಲ, ಅಕ್ಕಪಕ್ಕದವರು ಮಾತಾಡುವ ಹಾಗಿಲ್ಲ. ಹಾಗಾದರೆ, ಇದಕ್ಕೆ ಪರಿಹಾರವೇ ಇಲ್ಲವೇ? ಈ ಪ್ರಶ್ನೆಯನ್ನು ಮಹಿಳಾ ಚಳವಳಿ ನಿರಂತರವಾಗಿ ಎದುರಿಸಿದೆ. ಈ ಪ್ರಶ್ನೆಗೆ ಉತ್ತರವಾಗಿಯೇ ಹುಟ್ಟಿಕೊಂಡಿದ್ದು ‘ದಿ ಪರ್ಸನಲ್ ಈಸ್ ಪೊಲಿಟಿಕಲ್ (ವೈಯಕ್ತಿಕತೆಯೇ ನಮ್ಮ ರಾಜಕಾರಣ)’ ಎಂಬ ಕ್ರಾಂತಿಕಾರಿ ಘೋಷವಾಕ್ಯ, ಪರಿಕಲ್ಪನೆ. ಇದು ಮಹಿಳಾ ಚಳವಳಿ ಹುಟ್ಟುಹಾಕಿದ ಹೊಸ ಭಾಷ್ಯ ಎಂದೇ ಹೇಳಬಹುದು. ಸರಳವಾಗಿದೆ, ಸಂಕೀರ್ಣವಾಗಿಯೂ ಇದೆ. ಮಹಿಳಾ ಚಳವಳಿಗಳು ಅನೇಕ ಮಜಲುಗಳನ್ನು ದಾಟಿಕೊಂಡು ಬಂದಿವೆ. ಒಂದು ಹೊತ್ತಿನಲ್ಲಿ ಈ ಮಾತು ಹುಟ್ಟಿಕೊಂಡಿತು. ಸ್ತ್ರೀವಾದಿಗಳು ಬಹಳ ಜೋರಾಗಿ ಒಪ್ಪಿಕೊಂಡು ಪ್ರಚಾರ ಮಾಡಿದಂತಹ ಘೋಷವಾಕ್ಯ ಇದು. ಈ ಪದದ ಮೂಲ ಸರಿಯಾಗಿ ಗೊತ್ತಿಲ್ಲ. ಆದರೆ, 1970ರ ಹೊತ್ತಿನಲ್ಲಿ, ಕ್ಯಾರೋಲ್ ಹಾನಿಶ್ ಎಂಬಾಕೆ ಇದೇ ಹೆಸರಿನ ಪ್ರಬಂಧವನ್ನು ಪ್ರಕಟಿಸಿದ ಬಳಿಕ ಇದು ಬಹಳ ಜನಪ್ರಿಯವಾಯಿತು. ಇದು ಎರಡನೇ ಅಲೆಯ ಸ್ತ್ರೀವಾದದ ಪರಿಕಲ್ಪನೆ.

ಮನೆಯೊಳಗೆ ಏನು ನಡೆಯುತ್ತಿದೆಯೋ ಅದಕ್ಕೆ ಕಾರಣ, ಸಮಾಜದಲ್ಲಿ ಆವರಿಸಿಕೊಂಡಿರುವ ಲಿಂಗ ತಾರತಮ್ಯ ಮತ್ತು ಅದಕ್ಕೆ ಪೂರಕವಾಗಿರುವ ರಾಜಕೀಯ ಪರಿಸ್ಥಿತಿ. ಅಂದರೆ, ಅದು ರಾಜಕಾರಣಕ್ಕೆ ಸಂಬಂಧಿಸಿದ್ದು ಎಂದು ಆಯಿತಲ್ಲವೇ? ವೈಯಕ್ತಿಕ ಅನುಭವಗಳಿಗೂ ಸಾಮಾಜಿಕ, ಐತಿಹಾಸಿಕ, ರಾಜಕೀಯ ಸಂದರ್ಭಗಳಿಗೂ ಗಟ್ಟಿಯಾದ ನಂಟು ಇದೆ ಎಂದು ಸಮಾಜಶಾಸ್ತ್ರಜ್ಞರು ಹೇಳುತ್ತಾರೆ. ವಿಶಾಲ ಸಮಾಜದ ಯಥಾಸ್ಥಿತಿಯನ್ನು ಕಾಪಾಡುವ ಜವಾಬ್ದಾರಿಯನ್ನು ಈ ವ್ಯವಸ್ಥೆ ಸಮಾಜದ ಸಣ್ಣ ಘಟಕವಾದ ಕುಟುಂಬಕ್ಕೆ ಕೊಡುತ್ತದೆ. ಅದಕ್ಕಾಗಿ ಕುಟುಂಬಕ್ಕೆ ಈ ಒಟ್ಟಾರೆ ಸಮಾಜದ ಆಶಯಕ್ಕೆ ವಿರುದ್ಧವಾಗಿ ನಡೆಯಲು ಕಷ್ಟವಾಗುತ್ತದೆ. ವ್ಯವಸ್ಥೆ ಭದ್ರವಾಗಿ ಉಳಿಯುತ್ತದೆ.

ಇಂತಹ ಸುಭದ್ರ ವ್ಯವಸ್ಥೆಯ ನಡುವೆಯೂ, ವೈಯಕ್ತಿಕ ಅನುಭವಗಳು ರಾಜಕೀಯ ರಚನೆಯಿಂದ ರೂಪುಗೊಳ್ಳುತ್ತವೆ ಎಂಬ ಸತ್ಯದ ಅರಿವು ಸಿಕ್ಕಿದ್ದು ನಿಜಕ್ಕೂ ಮಹಾ ಸಂಗತಿ. ಅದಕ್ಕಾಗಿ, ‘ದಿ ಪರ್ಸನಲ್ ಈಸ್ ಪೊಲಿಟಿಕಲ್’ ಎಂಬುದು ಸ್ತ್ರೀವಾದಿ ತಿಳುವಳಿಕೆಯ ಮೈಲುಗಲ್ಲು. ಲಿಂಗರಾಜಕಾರಣದ ಜೊತೆಗೆ ಹೆಣೆದುಕೊಂಡಿರುವ, ವರ್ಗ, ಜಾತಿ, ಬಣ್ಣದ ಹೆಸರಿನ ಅಧಿಕಾರ ಸಂಬಂಧಗಳು ಕೂಡ ಗಮನ ಸೆಳೆಯಿತು. ಮಹಿಳೆಯರು ಒಂದು ಸಮುದಾಯ ಹೌದು, ಆದರೆ ಏಕರೀತಿಯ ಸಮುದಾಯವಲ್ಲ. ವಿಭಿನ್ನ ಹಿನ್ನೆಲೆಗಳ, ಅನುಭವಗಳ ಆಗರವಿದೆ ಇಲ್ಲಿ. ಪ್ರತಿಯೊಬ್ಬರ ಮಟ್ಟಿಗೂ ‘ದಿ ಪರ್ಸನಲ್ ಈಸ್ ಪೊಲಿಟಿಕಲ್’ ಎಂಬುದು ಅವರವರ ಬದುಕಿಗೆ ತಕ್ಕಂತೆ ಅನ್ವಯಿಸುತ್ತದೆ.

ಮಹಿಳೆಯರು ಜೊತೆ ಸೇರಿದಾಗ ‘ಹಾಳು ಹರಟೆ’ ಹೊಡೆಯುತ್ತಾರೆ ಎಂಬ ಟೀಕೆ ಇದೆ. ಆದರೆ, ಮಹಿಳಾ ಚಳವಳಿಯ ದಾರಿಯಲ್ಲಿ, ಮಹಿಳೆಯರು ಈ ಹರಟೆಗಳಲ್ಲಿ ತಮ್ಮ-ತಮ್ಮ ಬದುಕಿನ ದಿನನಿತ್ಯದ ಕತೆ ಹೇಳುತ್ತ-ಹೇಳುತ್ತ, ಅನುಭವಗಳಲ್ಲಿ ಇರುವ ಸಾಮ್ಯತೆಯನ್ನು ಗಮನಿಸುತ್ತ, ಇದರ ಹಿಂದಿನ ರಾಜಕಾರಣವನ್ನು ಕಂಡುಕೊಂಡ ಬಗೆಯೇ ಚಂದ; ಈ ಅರಿವು ಹೊಸಿಲು ದಾಟಲು ಸಹಕರಿಸಿದ, ಸಹಕರಿಸುತ್ತಿರುವ ರೀತಿಯೂ ಚಂದವೇ.

ಕಲಾಕೃತಿ ಕೃಪೆ: ‘ಹರ್ ಸ್ಟೋರಿ’ ಜಾಲತಾಣ

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನಸ್ಸಿನ ಕತೆಗಳು – 19 | ತನ್ನ ಸೀರೆಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದ ಲತಾಳ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಗಾಯ ಗಾರುಡಿ | ‘ಪ್ರೀತ್ಸೆ ಪ್ರೀತ್ಸೆ’ ಎಂಬ ಚಿತ್ರಗೀತೆಯೂ ‘ಜನಗಣಮನ’ ಎಂಬ ರಾಷ್ಟ್ರಗೀತೆಯೂ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ನಮ್ ಜನ | ದುಡಿದರೂ ದಣಿದರೂ ನಿಸೂರಾಗದ ನಿರ್ಮಲಮ್ಮನ ಬದುಕು

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಈಗ ನೀವೇ ಹೇಳಿ… ಟಕೂ ಬಾಯಿಯ ಮಗು ನಿಜಕ್ಕೂ ಯಾರದ್ದು?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...