ದಿಲ್ಲಿ ಮಾತು | ದಿಲ್ಲಿಗೆ ವಿಷವುಣಿಸುತ್ತಿರುವ ಕಸದ ಪರ್ವತಗಳು

Date:

ಹೌದು! ದಿಲ್ಲಿ ಮಹಾನಗರದ ಕಾಲಿಂದಿಯಲ್ಲಿ ಮೂರು ಕಸದ ಪರ್ವತಗಳೆಂಬ ವಿಷದ ಕಾಳಿಂಗ ಸರ್ಪಗಳಿವೆ. ಅವು ನಿರಂತರವಾಗಿ ವಿಷವನ್ನು ಗಾಳಿಯ ಮೂಲಕ ನಗರದ ನರನಾಡಿಗಳಿಗೂ ಹರಿಸುತ್ತಿವೆ. ಈ ಡಂಪ್ ಯಾರ್ಡ್‍ಗಳೆಂದು ಕರೆಯಲ್ಪಡುವ ವಿಷದ ಪರ್ವತಗಳ ಕೆಳಗಡೆ ವಿಶಾಲವಾದ ಜನಜೀವನವೂ ಇದೆ. ಇವರೂ ವೋಟ್ ಬ್ಯಾಂಕುಗಳಾಗಿ ಅಸ್ತಿತ್ವದಲ್ಲಿ ಉಳಿದಿದ್ದಾರೆಯೇ ಹೊರತು ಮನುಷ್ಯರ ದಾಖಲೆಗಳಿಂದ ಅಳಿಸಿಹೋಗಿದ್ದಾರೆ. 

- Advertisement -

ದಿಲ್ಲಿಯಲ್ಲಿ ಚಳಿ ನಿಧಾನವಾಗಿ ಹೆಚ್ಚುತ್ತಿದೆ. ಅದರೊಂದಿಗೆ ದೆಹಲಿಗರ ಆತಂಕವೂ. ಸರ್ಕಾರ ಹವಾ ಮಾಲಿನ್ಯವನ್ನು ಅದರ ಗುಣಮಟ್ಟವನ್ನು ನಿಯಂತ್ರಿಸುವ GRAP 4 ನಿಯಮಗಳನ್ನು ಡಿ.13 ರಂದು ಜಾರಿಗೊಳಿಸಿದೆ. ದೆಹಲಿ ಶಿಕ್ಷಣ ನಿರ್ದೇಶನಾಲಯ (ಡಿಡಿಇ) ಹೊರಡಿಸಿದ ಸುತ್ತೋಲೆಯ ಪ್ರಕಾರ ಆನ್‍ಲೈನ್ ಬೋಧನೆ ಸಾಧ್ಯವಿರುವಲ್ಲೆಲ್ಲಾ ಕೆಲವು ತರಗತಿಗಳಿಗೆ ಭೌತಿಕ ಹಾಗೂ ಆನ್‍ಲೈನ್ ಆಯ್ಕೆಗಳೆರಡರಲ್ಲೂ ಹೈಬ್ರಿಡ್ ಸ್ವರೂಪದಲ್ಲಿ ನಡೆಸುವಂತೆ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದರ ಹೊರತಾಗಿ ಕಟ್ಟಡ ನಿರ್ಮಾಣದ ಎಲ್ಲಾ ಚಟುವಟಿಕೆಗಳು, ಗಣಿಕೆಲಸಗಳು, ಉಷ್ಣ ವಿದ್ಯುತ್‌ ಸ್ಥಾವರ, ಡೀಸೆಲ್ ಚಾಲಿತ ಮಧ್ಯಮ ಸರಕು ವಾಹನ (MGV) ಹಾಗೂ ಭಾರೀ ಸರಕು ವಾಹನಗಳು (HGV)ಗಳು ದೆಹಲಿಯಲ್ಲಿ ಸಂಚರಿಸುವುದರ ಮೇಲೆ ಕಟ್ಟುನಿಟ್ಟಿನ ನಿಷೇಧ ಜಾರಿಯಿದೆ, ಹೆದ್ದಾರಿಗಳು, ರಸ್ತೆಗಳು, ಮೇಲ್ಸೇತುವೆಗಳು, ವಿದ್ಯುತ್‌ ಪ್ರಸರಣ, ಪೈಪ್‌ಲೈನ್‌ಗಳು, ದೂರಸಂಪರ್ಕ, ಮುಂತಾದ ಸಾರ್ವಜನಿಕ ಯೋಜನೆಗಳನ್ನೂ ನಿಲ್ಲಿಸಲಾಗಿದೆ. ಇದಲ್ಲದೇ ದಿಲ್ಲಿ ಎನ್‍ಸಿಆರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಹದಗೆಡುವುದನ್ನು ತಡೆಗಟ್ಟುವ ಕ್ರಮಗಳನ್ನು ಹೆಚ್ಚಿಸುವಂತೆ NCR ಮಾಲಿನ್ಯ ನಿಯಂತ್ರಣ ಮಂಡಳಿಗಳು (CPCB) ಹಾಗೂ ಸಮಿತಿಗಳು ಸಂಬಂಧಪಟ್ಟ ಇತರ ಸಂಸ್ಥೆಗಳಿಗೆ ಆದೇಶ ನೀಡಿವೆ.

dump kids

ಹವಾಮಾಲಿನ್ಯ ನಿಯಂತ್ರಣಕ್ಕಾಗಿ ಇಷ್ಟೆಲ್ಲಾ ಕ್ರಮಗಳನ್ನು ಆದೇಶವನ್ನು ಹೊರಡಿಸುವ ಸರ್ಕಾರಕ್ಕೆ ದೆಹಲಿ ಸುತ್ತಮುತ್ತಲು ಬೃಹದಾಕಾರವಾಗಿ ಬೆಳೆದು ನಿಂತಿರುವ ಕಸದ ಗುಡ್ಡಗಳು ಇವೆ ಎಂಬ ಜಾಣ ಮರೆವು.   

ಹೌದು! ದಿಲ್ಲಿ ಮಹಾನಗರವೆಂಬ ಕಾಲಿಂದಿಯಲ್ಲಿ ಮೂರು ಕಸದ ಪರ್ವತಗಳು ವಿಷದ ಕಾಳಿಂಗ ಸರ್ಪಗಳಂತಿವೆ. ಅವು ನಿರಂತರವಾಗಿ ವಿಷವನ್ನು ಗಾಳಿಯ ಮೂಲಕ ನಗರದ ನರನಾಡಿಗಳಿಗೂ ಹರಿಸುತ್ತಿವೆ. ಈ ಡಂಪ್ ಯಾರ್ಡ್‍ಗಳೆಂದು ಕರೆಯಲ್ಪಡುವ ವಿಷದ ಪರ್ವತಗಳ ಕೆಳಗಡೆ ವಿಶಾಲವಾದ ಜನಜೀವನವೂ ಇದೆ. ಇವರೂ ವೋಟ್ ಬ್ಯಾಂಕುಗಳಾಗಿ ಅಸ್ತಿತ್ವದಲ್ಲಿ ಉಳಿದಿದ್ದಾರೆಯೇ ಹೊರತು ಮನುಷ್ಯರ ದಾಖಲೆಗಳಿಂದ ಅಳಿಸಿಹೋಗಿದ್ದಾರೆ. 

ಮಹಾನಗರದಲ್ಲಿನ ಈ ಮೂರು ಡಂಪ್ ಯಾರ್ಡ್‌ಗಳೆಂದರೆ ಗಾಜಿಪುರ್, ಭಲ್ಸ್ವಾ ಹಾಗೂ ಒಖ್ಲಾ ಡಂಪ್ ಯಾರ್ಡ್‌. ಒಂದು ಇಪ್ಪತ್ತು ವರ್ಷದ ಕೆಳಗೆ ನಾನು ಮಾಲವೀಯ ನಗರಕ್ಕೆ ಹೊಂದಿಕೊಂಡಿದ್ದ ಖಿಡಕಿ ಗಾಂವ್ ಎಂಬಲ್ಲಿ ವಾಸಿಸುತ್ತಿದ್ದಾಗ ಟೆರೇಸಿನಿಂದ ಈ ಓಖ್ಲಾ ಡಂಪ್ ಯಾರ್ಡ್ ಒಂದು ಪುಟ್ಟ ಗುಡ್ಡದಂತೆ ಕಾಣುತ್ತಿತ್ತು. ಇದ್ಯಾವ ಗುಡ್ದ ಇಲ್ಲಿದೆ? ಅರಾವಳಿಯ ಭಾಗವೋ ಎಂದು ಬಹಳ ಯೋಚಿಸಿದ್ದೆ. ನಂತರ ಗೊತ್ತಾಯಿತು ಇದು ಸಸ್ಯ ಶ್ಯಾಮಲ ಕಾಡುಕುಸುಮ ಮರ ಕಲ್ಲುಗುಡ್ದಗಳಿಂದ ಆವರಿಸಿದ ಗುಡ್ಡವಲ್ಲ; ಇಡೀ ನಗರದ ಕಸ, ಹೊಲಸನ್ನು ಹೊತ್ತುಕೊಂಡಿರುವ ಕಸದ ಗುಡ್ಡವೆಂದು. ಇದೇ ರೀತಿ GT ಕರ್ನಾಲ್ ಹೆದ್ದಾರಿಯ ಮೂಲಕ ಪ್ರಯಾಣ ಹೊರಟಾಗಲೂ ಭಲ್ಸ್ವಾ ಕಸದ ಗುಡ್ಡವನ್ನು ಯಾವುದೋ ಬೆಟ್ಟವಿರಬೇಕೆಂದು ಮೋಸ ಹೋಗಿದ್ದೆ. ಅಂಥಾ ದೊಡ್ಡ ದೊಡ್ಡ ಕಸದ ಪರ್ವತಗಳಿವು. ದೆಹಲಿಯ ವಾಯು ಮಂಡಲ ಸುತ್ತಲಿನ ವಾತಾವರಣವನ್ನು ಕಲುಷಿತಗೊಳಿಸುವುದರಲ್ಲಿ ಈ ಡಂಪ್ ಯಾರ್ಡ್‌ಗಳ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಯೋಜನೆಗಳ ಬಗ್ಗೆಯಾಗಲಿ, ಚರ್ಚೆಗಳಾಗಲಿ ಆಗದಿರುವುದು ಒಂದು ದೊಡ್ದ ವಿಡಂಬನೆಯಾಗಿದೆ.

ಪ್ರಪಂಚದ ಎಲ್ಲಾ ಕಡೆಗೂ ಬೆಳಗಾಗುವಂತೆ ಇಲ್ಲಿಯೂ ಸೂರ್ಯ ಹುಟ್ಟುತ್ತಾನೆ. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಗಾಜಿಪುರ್ ಡಂಪ್ ಯಾರ್ಡ್ ಬಳಿ ವಾಸಿಸುವ (ಕೊಳಚೆಗೇರಿ ಎನ್ನಬಯಸುವೆ) ಜನರು ಎಚ್ಚರಗೊಳ್ಳುತ್ತಾರೆ. ನಾವೆಲ್ಲ ನಮ್ಮ ಮನೆಗಳ ಡಬಲ್ ಬೆಡ್ಡಿನಿಂದ ಸುಖ ನಿದ್ದೆಯಿಂದ ಏಳುತ್ತ ಮಂಜು ಸುರಿದ ಮುಂಜಾವನ್ನು ನೆನೆಯುವಂತೆ, ಬಾಲ್ಕನಿಯ ಹೂಬಿಸಿಲಿಗೆ ಮೈಯೊಡ್ಡಿ ಕುಳಿತು ಬಿಸಿ ಬಿಸಿ ಕಾಫಿ ಕುಡಿದಂತಲ್ಲ ಇಲ್ಲಿ! ಇಲ್ಲಿನ ಜನರು ಏಳುವುದು ಮತ್ತೊಂದು ನರಕದ ಕೆಟ್ಟ ಕನಸಿನಿಂದ. ಅವರಿಗೆ ಎಚ್ಚರಿಸುವುದು ಸೂರ್ಯನ ಹೊಂಬಿಸಿಲಲ್ಲ, ಕಸದ ದುರ್ವಾಸನೆ! ಸದಾಕಾಲ ಹೊಗೆಯಂತೆ ಆಕಾಶದಲ್ಲಿ ತೇಲುವ ವಿಷಕಾರಿ ಗಾಳಿ, ಉಸಿರಾಡುವುದನ್ನೇ ಒಂದು ಹೋರಾಟವಾಗಿಸುತ್ತದೆ. ದೆಹಲಿ ಎಂಬ ರಾಷ್ಟ್ರ ರಾಜಧಾನಿಯ ಹೃದಯದಲ್ಲಿ, ಕಸದ ಪರ್ವತಗಳ ನೆರಳಲ್ಲಿ ಹೀಗೂ ಬದುಕು ಸಾಗುತ್ತಿದೆ ಎಂಬುದನ್ನು ಊಹಿಸಲಾಗುತ್ತದೆಯೇ?

4000

ಇಲ್ಲಿ ಒಂದು ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ. ರಾಜ್ಯಕ್ಕೆ ಶುದ್ಧ ಗಾಳಿ ಮತ್ತು ಸುರಕ್ಷಿತ ಪರಿಸರ ಒದಗಿಸುವ ಜವಾಬ್ದಾರಿ ಇಲ್ಲವೇ? ಸಂವಿಧಾನವು ಜೀವ ಹಕ್ಕಿನ ಭಾಗವಾಗಿ ಆರೋಗ್ಯಕರ ಪರಿಸರವನ್ನು ಪರಿಗಣಿಸಿದರೂ, ಡಂಪ್ ಯಾರ್ಡ್‌ಗಳ ವಾಸ್ತವಿಕತೆ ಅದನ್ನು ನಿರಾಕರಿಸುತ್ತದೆ.

ನಮ್ಮಲ್ಲಿ ಯೋಜನೆಗಳ ಕೊರತೆ ಇಲ್ಲ. ವರದಿಗಳ ಕೊರತೆ ಇಲ್ಲ. ನ್ಯಾಯಾಲಯದ ಸೂಚನೆಗಳೂ ಇವೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಈ  ಹವಾಮಾಲಿನ್ಯದ ವಿಷಯವನ್ನು ಎತ್ತುತ್ತಲೇ ಇದ್ದಾರೆ. ಆದರೆ ಆಡಳಿತದಲ್ಲಿರುವವರಿಗೆ  “ವಂದೇ ಮಾತರಂ”ವಿವಾದ, ನೆಹರೂರನ್ನು ನಿಂದಿಸುವುದಕ್ಕೇ ಸಮಯ ಸಾಲುತ್ತಿಲ್ಲ. ಇನ್ನು ಈ ಬಗ್ಗೆ ಚರ್ಚಿಸುವ ಇಚ್ಛಾಶಕ್ತಿ ಅವರಲ್ಲಿ ಇರುವುದಾದರೂ ಹೇಗೆ? ಏಕೆಂದರೆ ಇಲ್ಲಿ ಸಾಯುವವರು ನೀತಿ ನಿರ್ಧಾರಗಳ ಕೇಂದ್ರದಲ್ಲಿಲ್ಲ. ಅವರ ಆರೋಗ್ಯ ರಾಜಕೀಯ ಆದ್ಯತೆಯಲ್ಲ. 

ಈ ಕಾರಣಕ್ಕಾಗಿಯೇ ದೆಹಲಿಯ ಯುವ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇಂಡಿಯಾ ಗೇಟ್ ಬಳಿ “ಶುದ್ಧ ಗಾಳಿ ನಮ್ಮ ಹಕ್ಕು, ಜನರ ಜೀವದ ಮೇಲೆ ರಾಜಕೀಯ ಬೇಡ” ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಅಸಭ್ಯವಾಗಿ ಬೀದಿಯಲ್ಲೇ ಎಳೆದಾಡಿ ಅವರ ಮೇಲೆ ಎಫ್‌ಐಆರ್ ದಾಖಲಿಸಿಕೊಂಡರು. ಒತ್ತಾಯದಿಂದ ಪ್ರತಿಭಟನಾಕಾರರನ್ನು ಬಸ್ಸಿನೊಳಗೆ ದಬ್ಬಿ ಹೊರಹಾಕಲಾಯಿತು. ಒಟ್ಟಿನಲ್ಲಿ ನಮ್ಮ ಮೂಲಭೂತ ಹಕ್ಕುಗಳಿಗಾಗಿ ಯಾರೂ ದನಿಯೆತ್ತಬಾರದು. ಏಕೆಂದರೆ ಅವರಿಗೆಲ್ಲ ಬಂಗಲೆಗಳಲ್ಲಿ ದುಬಾರಿ ಏರ್ ಪ್ಯೂರಿಫೈಯರ್ ಅಳವಡಿಸಿಕೊಂಡು ಬದುಕಲು ದಾರಿಗಳಿವೆ. ಬಡವರು ಏನು ಮಾಡಬೇಕು?

ಗಾಜಿಪುರ್, ಭಲ್ಸ್ವಾ ಮತ್ತು ಒಖ್ಲಾ — ಈ ಮೂರು ಡಂಪ್ ಯಾರ್ಡ್‌ಗಳು ದೆಹಲಿಯ ಮೌನ ದುರಂತಗಳಾಗಿವೆ. 1980ರಲ್ಲಿ ಚಿಕ್ಕ ಚಿಕ್ಕ ಗುಡ್ದಗಳಿದ್ದು ವರ್ಷಗಳಿಂದ ಇವು ಬೆಳೆಯುತ್ತಾ ಬೆಳೆಯುತ್ತಾ, ಒಂದು ಕಾಲದಲ್ಲಿ ನಗರದ ಹೊರವಲಯದಲ್ಲಿದ್ದ ಈ ಡಂಪ್ ಯಾರ್ಡ್‌ಗಳು, ಇಂದು ನಗರದ ಮಧ್ಯಭಾಗದಲ್ಲೇ ಬಂದು ನಿಂತಿವೆ. ಜನರ ಆರೋಗ್ಯ ಕುಗ್ಗಿದೆ. ಪರಿಸರವೂ ಮೌನವಾಗಿ ಅಳುತ್ತಿದೆ. ಗಾಜಿಪುರ್ ಡಂಪ್ ಯಾರ್ಡ್ ಎತ್ತರದಲ್ಲಿ ತಾಜ್‌ಮಹಲನ್ನೇ ಮೀರಿಸಿರುವುದು, ಅಭಿವೃದ್ಧಿಯ ವ್ಯಂಗ್ಯಚಿತ್ರದಂತೆ ಕಾಣುತ್ತದೆ. ಪ್ರತಿದಿನ ಸಾವಿರಾರು ಟನ್ ಕಸ ಇಲ್ಲಿ ಸುರಿಯಲ್ಪಡುತ್ತದೆ. ತ್ಯಾಜ್ಯದ ವಿಂಗಡಣೆ ಇಲ್ಲ, ವೈಜ್ಞಾನಿಕ ನಿರ್ವಹಣೆ ಇಲ್ಲ.

ಈ ಕಸದ ಪರ್ವತಗಳಿಂದ ಜೈವಿಕ ಕಸ ಕೊಳೆಯುವಾಗ ಹೊರಬರುವ ಮಿಥೇನ್ ಅನಿಲ ಮತ್ತು ಆಗಾಗ್ಗೆ ಹೊತ್ತಿಕೊಳ್ಳುವ ಬೆಂಕಿ, ದೆಹಲಿಯ ವಾಯುಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಮಿಥೇನ್ ಬಲವಾದ ಹಸಿರು ಗೃಹ ಅನಿಲವಾಗಿದ್ದು, ವಾಯು ಗುಣಮಟ್ಟ ಹದಗೆಡಿಸುವುದರ ಜೊತೆಗೆ ಹವಾಮಾನ ಬದಲಾವಣೆಯನ್ನೂ ವೇಗಗೊಳಿಸುತ್ತದೆ. ಬೆಂಕಿ ಹೊತ್ತಿದಾಗ, ಹೊಗೆ ಕೇವಲ ಆಕಾಶವನ್ನಲ್ಲ, ಮಾನವ ಶ್ವಾಸಕೋಶವನ್ನೂ ಆವರಿಸುತ್ತದೆ. ಶಾಲೆಗೆ ಹೋಗುವ ಮಕ್ಕಳು ಮಾಸ್ಕ್ ಧರಿಸಿ ನಡೆಯುವುದು ಇಲ್ಲಿ ಸಾಮಾನ್ಯ ದೃಶ್ಯ. ಇಲ್ಲಿನ ನೀರಿಗೂ ವಿಷ ಬೆರೆತಿದೆ.

ಮಳೆಯ ಸಮಯದಲ್ಲಿ ಕಸದೊಳಗಿಂದ ಹೊರಬರುವ ಕಪ್ಪು ಬಣ್ಣದ ಲೀಚೇಟ್, ಭೂಮಿಯೊಳಗೆ ಹರಿದು ಭೂಗರ್ಭ ಜಲವನ್ನು ವಿಷಗೊಳಿಸುತ್ತದೆ. ಕುಡಿಯುವ ನೀರೇ ಕಾಯಿಲೆಗಳ ಮೂಲವಾಗುತ್ತದೆ. ಮಣ್ಣು ತನ್ನ ಜೀವಶಕ್ತಿಯನ್ನು ಕಳೆದುಕೊಳ್ಳುತ್ತದೆ; ಸುತ್ತಮುತ್ತಲಿನ ಕೃಷಿಭೂಮಿಗಳು ಬಂಜರಾಗುತ್ತಿವೆ.

ಡಂಪ್ ಯಾರ್ಡ್‌ಗಳ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗಿ ಬಡವರು, ವಲಸೆ ಕಾರ್ಮಿಕರು, ಕಾರ್ಮಿಕ ಕುಟುಂಬಗಳು, ನಿರ್ಗತಿಕರು ವಾಸಿಸುತ್ತಾರೆ. ಮಹಿಳೆಯರು ದಿನದ ಬಹುಭಾಗವನ್ನು ಇದೇ ವಿಷದ ಮಧ್ಯೆ ಕಳೆಯುತ್ತಾರೆ. ಅವರ ಮಕ್ಕಳಿಗೆ ಕಸದ ಗುಡ್ಡಗಳೇ ಆಟದ ಮೈದಾನ. ಗರ್ಭಿಣಿಯರಲ್ಲಿ ಮುಂಗಡ ಹೆರಿಗೆ, ಕಡಿಮೆ ತೂಕದ ಶಿಶುಗಳು ಹೆಚ್ಚುತ್ತಿರುವ ವರದಿಗಳು ಹೊಸದಲ್ಲ. ಮಕ್ಕಳಲ್ಲಿ ಅಸ್ತಮಾ, ಉಸಿರಾಟದ ಕಾಯಿಲೆಗಳು ಸಾಮಾನ್ಯವಾಗಿವೆ. ಆದರೂ ಇವುಗಳನ್ನು “ವೈಯಕ್ತಿಕ ಆರೋಗ್ಯ ಸಮಸ್ಯೆ” ಗಳೆಂದು ದಾಖಲಿಸಿ, ರಾಜ್ಯ ತನ್ನ ಹೊಣೆಗಾರಿಕೆಯಿಂದ ಕೈ ತೊಳೆದುಕೊಳ್ಳುತ್ತದೆ.

ಇಲ್ಲಿನ ಮಕ್ಕಳಿಗೆ ಶಾಲೆ ಶಿಕ್ಷಣವೆಂಬುದು ಕನಸಿನ ಮಾತು. ವಿಷದ ಗುಡ್ದದ ಮಡಿಲಲ್ಲಿಯೇ ಬೆಳೆಯುತ್ತ ಕಸ ಎತ್ತುವುದು, ಪ್ಲಾಸ್ಟಿಕ್ ಬಾಟಲ್, ಡಬ್ಬ ಇತ್ಯಾದಿ ತ್ಯಾಜ್ಯಗಳನ್ನು ಎತ್ತಿ ಕಾಸು ಸಂಪಾದಿಸಿ ತಮ್ಮ ಕುಟುಂಬಕ್ಕೆ ನೆರವಾಗುವ ಪುಟ್ಟ ಮಕ್ಕಳ ಭವಿಷ್ಯವೇನು? ಭವಿಷ್ಯವೆಂಬುದು ಎಲ್ಲಿಯಾದರೂ ಇದೆಯೇ ಈ ಕಸದ ಗುಡ್ಡೆಯಲ್ಲಿ? ಬದಲಿಗೆ ಉಸಿರಾಟದ ತೊಂದರೆ, ಚರ್ಮ ರೋಗಗಳು, ಕ್ಯಾನ್ಸರ್ ಇವು ಇಲ್ಲಿನ ಸಾಮಾನ್ಯ ರೋಗಗಳು. ಈ ಸಮಸ್ಯೆ ಪರಿಸರದಷ್ಟೇ ಅಲ್ಲ, ಇದು ಸಾಮಾಜಿಕ ನ್ಯಾಯದ ಪ್ರಶ್ನೆಯೂ ಹೌದು. ‘ಯಾರ ಜೀವಕ್ಕೆ ಎಷ್ಟು ಮೌಲ್ಯ?’ ಎಂಬ ಪ್ರಶ್ನೆಯನ್ನು ಈ ಡಂಪ್ ಯಾರ್ಡ್‌ಗಳು ಮೌನವಾಗಿ ಕೇಳುತ್ತಿವೆ. ಗದ್ದುಗೆಗಾಗಿ, ತಮ್ಮ ಅಧಿಕಾರಕ್ಕಾಗಿ ಇಪ್ಪತ್ತನಾಲ್ಕು ಗಂಟೆಯೂ ಹಪಹಪಿಸುತ್ತಿರುವವರಿಗೆ ಈ ಜನರು ಕಾಣಿಸುವುದಿಲ್ಲ. ಈ ಜನರ ಪ್ರಶ್ನೆ ಬಂದಾಗ ಆಡಳಿತ ಮೌನವಹಿಸುತ್ತದೆ. ಇದು ಯಾವ ಅಭಿವೃದ್ಧಿ? ಇದನ್ನು ಅಭಿವೃದ್ಧಿ ಎನ್ನುತ್ತೀರಾ? 

dump 2

ಒಟ್ಟಿನಲ್ಲಿ ಹೇಳಬೇಕೆಂದರೆ ದೆಹಲಿಯ ವಾಯು ಮಾಲಿನ್ಯಕ್ಕೆ ವಾಹನಗಳು ಮತ್ತು ಕೈಗಾರಿಕೆಗಳಷ್ಟೇ ಅಲ್ಲ, ದೆಹಲಿಯ ಡಂಪ್ ಯಾರ್ಡ್‌ಗಳೂ ಪ್ರಮುಖ ಕಾರಣ. ಆದರೆ ನಗರ ನೀತಿಯಲ್ಲಿ ಇದಕ್ಕೆ ತಕ್ಕಷ್ಟು ಮಹತ್ವ ಸಿಗುತ್ತಿಲ್ಲ. ಕಸದ ವೈಜ್ಞಾನಿಕ ನಿರ್ವಹಣೆ ಇಲ್ಲದೆ, ದೆಹಲಿಯ ವಾಯು ಶುದ್ಧೀಕರಣ ಅಸಾಧ್ಯ. ಪ್ರತಿ ಬಾರಿ ಡಂಪ್ ಯಾರ್ಡ್‌ನಲ್ಲಿ ಬೆಂಕಿ ಹೊತ್ತಿಸಿದಾಗ, ಎಚ್ಚರಿಕೆ ಘೋಷಣೆಗಳು ಬರುತ್ತವೆ. ಸಭೆಗಳು ನಡೆಯುತ್ತವೆ. ಆದರೆ ದಿನಗಳು ಕಳೆದಂತೆ, ಎಲ್ಲವೂ ಮರೆತು ಹೋಗುತ್ತದೆ. ಕಸದ ವಿಂಗಡಣೆ, ಮರುಬಳಕೆ, ಕಂಪೋಸ್ಟಿಂಗ್ ಎಂಬ ಪರಿಹಾರಗಳು ಯೋಜನೆಗಳಲ್ಲೇ ಸೀಮಿತವಾಗುತ್ತವೆ.

ಪರಿಸರ ತಜ್ಞರು ಹೇಳುವಂತೆ, ಕಸದ ಮೂಲದಲ್ಲೇ ವಿಂಗಡಣೆ, ಸ್ಥಳೀಯ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಡಂಪ್ ಯಾರ್ಡ್‌ಗಳ ವೈಜ್ಞಾನಿಕ ಶುದ್ಧೀಕರಣವೇ ಏಕೈಕ ದಾರಿ. ಆದರೆ, ಅದಕ್ಕೆ ಕೇವಲ ತಂತ್ರಜ್ಞಾನವಲ್ಲ ರಾಜಕೀಯ ಇಚ್ಛಾಶಕ್ತಿ ಮತ್ತು ನಾಗರಿಕರ ಒತ್ತಾಯ ಅಗತ್ಯ.

ಒಂದು ಕಾಲದಲ್ಲಿ ದಿಲ್ಲಿಯ ಸರದಿ, ಚಳಿಯ ಬಗ್ಗೆ ಬರೆಯದ ಕವಿಗಳೇ ಇದ್ದಿಲ್ಲ. ದೊಡ್ಡ ದೊಡ್ಡ ಕವಿಗಳೆಲ್ಲ ದಿಲ್ಲಿಯ ಚಳಿಯನ್ನು ರೊಮ್ಯಾಂಟಿಕ್ಕಾಗಿ ಬರೆಯುತ್ತಿದ್ದರು. ನಾನೂ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಲೇಖನಗಳನ್ನು ಕವಿತೆನೂ ಬರೆದೆ ಒಂದು ಕಾಲದಲ್ಲಿ. ಈಗ ಬರಿ ಹೊಗೆ ತುಂಬಿಕೊಂಡಿದೆ ಹೃದಯದಲ್ಲಿ.  

ಕಾಡು ಕಾಡುಗಳಲ್ಲಿ ಬೆಂಕಿ ಬಿದ್ದಿದೆ, ನದಿ ನದಿಗಳಲ್ಲಿ ನೀರಿದೆ

ನಗರ ನಗರಗಳಿಗೆ ಪರಿಚಯವಿಲ್ಲ, ಜನರು ಭಯಗೊಂಡಿದ್ದಾರೆ –(ಜಮೀಲ್ ಅಜೀಮಾಬಾದಿ)

ದೂರ ನದಿಗಳ ಆಚೆ ಕಾಡಿನಲ್ಲಿ ಬೆಂಕಿಬಿದ್ದಿದೆ / ಯಾರೋ ನಗರದಲ್ಲಿ ತಿರುಗುತ್ತಿದ್ದಾರೆ ಭಯದಿಂದ – (ಜಫರ್ ಇಕ್ಬಾಲ್)  

ಹೇಗಾಗಿ ಹೋಗುತ್ತಿದೆ ಈ ಊರು !

ಡಂಪ್ ಯಾರ್ಡ್‌ಗಳ ಬಗ್ಗೆ ಮಾತನಾಡದ ಜನರು ಈಗ “ಅರಾವಳಿ ಉಳಿಸಿ” ಆಂದೋಲನವನ್ನು ಜೋರಾಗಿ ನಡೆಸುತ್ತಿದ್ದಾರೆ. ನಲವತ್ತು ವರ್ಷಗಳಿಂದ ಅರಾವಳಿಗಳನ್ನು ಕಡಿಯುತ್ತಿದ್ದಾಗ, ಭೂಮಿ ಮಾಫಿಯಾ ಗಣಿ ಮಾಫಿಯಾ ಬೆಳೆಯುತ್ತಿದ್ದಾಗ ಯಾರೂ ಅದನ್ನು ಪ್ರತಿಭಟಿಸಲಿಲ್ಲ. ನೋಡುತ್ತಲೇ ದಾಟಿಕೊಂಡು ಸಾಗಿದರು. ನಾಳೆ ಗೋದಿ ಮೀಡಿಯಾ ಈ ಕಸದ ಪರ್ವತಗಳನ್ನೇ ಅರಾವಳಿ ಎನ್ನತೊಡಗಿಯಾರು ಎಂದು ವ್ಯಂಗ್ಯವಾಡುತ್ತಾರೆ ರವೀಶ್ ಕುಮಾರ್. 

ಜಗತ್ತಿನ ಗಮನ ಸೆಳೆಯುತ್ತಿರುವ ಗ್ರೆಟಾ ಥನ್‌ಬರ್ಗ್‌; ಭಾರತದ ರೈತರನ್ನು ಬೆಂಬಲಿಸಿದ್ದ ಪರಿಸರ ಹೋರಾಟಗಾರ್ತಿ

ದೆಹಲಿಯ ಡಂಪ್ ಯಾರ್ಡ್‌ಗಳು ಕೇವಲ ಕಸದ  ರಾಶಿಗಳಲ್ಲ. ಅವು ನಮ್ಮ ರಾಷ್ಟ್ರದ ರಾಜಧಾನಿ, ವಿಶ್ವಗುರುವಾಗುತ್ತಿರುವ ನಮ್ಮ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಪ್ರತಿಬಿಂಬ. ಈ ಕಸದ ಪರ್ವತಗಳು ಕುಸಿಯಬೇಕಾದರೆ, ನಮ್ಮ ನಿರ್ಲಕ್ಷ್ಯವೂ ಕುಸಿಯಬೇಕು. ಪ್ರಭುತ್ವದ ಅಹಂಕಾರವೂ ಕುಸಿಯಬೇಕು, ಇಲ್ಲದಿದ್ದರೆ, ಮುಂದಿನ ಪೀಳಿಗೆಗೆ ನಾವು ನೀಡುವ ವಾರಸತ್ತು ಅಭಿವೃದ್ಧಿಯಲ್ಲ, ವಿಷವಾಗಿರುತ್ತದೆ.

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಾಪತಾ ಲೇಡೀಸ್: ಮನೆ ಒಳಗೂ ಹೊರಗೂ ಕಳೆದುಹೋಗುವ ಮಹಿಳೆಯರ ಹುಡುಕಾಟ

'ಲಾಪತಾ ಲೇಡೀಸ್' ಕೇವಲ ರೈಲಿನಲ್ಲಿ ಕಾಣೆಯಾದ ಇಬ್ಬರು ವಧುಗಳ ಕಥೆಯಲ್ಲ. ಮಹಿಳೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಕಂಗಳ ಕರುಳ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಇವ ನಮ್ಮವನೆಂದೆನಿಸಯ್ಯಾ….

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ....

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...