ಇಂದು ಬೆಂಗಳೂರಿಗೆ ಬೇಕಾಗಿರುವುದು ಬುಲ್ಡೋಜರ್ ರಾಜಕೀಯವಲ್ಲ; ಸಮಗ್ರ ನಗರ ಯೋಜನೆ. ಕಾಂಗ್ರೆಸ್ ತನ್ನನ್ನು ಇನ್ನೂ ಸಾಮಾಜಿಕ ನ್ಯಾಯ ಮತ್ತು ಸಮಾಜವಾದದ ಮೌಲ್ಯಗಳ ಪಕ್ಷವೆಂದು ನಂಬುವುದಾದರೆ, ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳನ್ನು ಕೇವಲ ‘ಒತ್ತುವರಿ’ ಎಂಬ ದೃಷ್ಟಿಯಿಂದ ನೋಡದೆ, ‘ಜೀವನೋಪಾಯ’ ಎಂಬ ಮಾನವೀಯ ದೃಷ್ಟಿಕೋನದಿಂದಲೂ ಪರಿಗಣಿಸಬೇಕು.
“ಬಿಸಿಲು, ಮಳೆ, ಗಾಳಿ ನಡುವೆ ಬೀದಿಬದಿಯಲ್ಲಿ ನಿಂತು ವ್ಯಾಪಾರ ಮಾಡಿ ಬದುಕುತ್ತಿದ್ದೇವೆ. ನಮ್ಮ ಮಕ್ಕಳು ನಮ್ಮಂತೆ ಕಷ್ಟ ಪಡಬಾರದು, ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಂಡು ಉತ್ತಮ ಬದುಕು ಬಾಳಬೇಕೆಂದು ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸುತ್ತಿದ್ದೇವೆ. ಬೀದಿಬದಿ ವ್ಯಾಪಾರವನ್ನೇ ನಂಬಿದ್ದೇವೆ. ಆದರೆ, ಏಕಾಏಕಿ ಅಧಿಕಾರಿಗಳು ನಮ್ಮ ತಳ್ಳುಗಾಡಿ-ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ವ್ಯಾಪಾರ ಸಾಮಗ್ರಿಗಳನ್ನು ಹೊತ್ತೊಯ್ದಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಮಕ್ಕಳ ಶಿಕ್ಷಣ, ಮದುವೆಗಾಗಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದೇವೆ. ಮುಂದೆ ನಮ್ಮ ಬದುಕಿನ ಗತಿಯೇನು? ಅಧಿಕಾರಿಗಳ ಕಚೇರಿ ಮುಂದೆ ಸಾಮಾಹಿಕವಾಗಿ ಸಾವಿಗೆ ಶರಣಾಗಬೇಕೇ? ನಮಗೆ ನ್ಯಾಯ ಕೊಡಿಸಿ, ನಾವು ಬದುಕಿ-ಬಾಳಲು ಅವಕಾಶ ಮಾಡಿಕೊಡಿ. ನಮ್ಮ ನೋವಿಗೆ ಸ್ಪಂದಿಸಿ” ಎಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೀದಿಬದಿ ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ತಮ್ಮ ಬದುಕಿನ ಆಧಾರವಾದ ಬೀದಿಬದಿ ವ್ಯಾಪಾರವನ್ನು ಕಸಿದುಕೊಳ್ಳಬೇಡಿ ಎಂದು ಸರ್ಕಾರದ ಎದುರು ಅಂಗಲಾಚುತ್ತಿದ್ದಾರೆ.
ಆದರೆ, ಆಳುವ ಸರ್ಕಾರ ‘ಕಣ್ಣಿದ್ದೂ ಕುರುಡಾಗಿ, ಕಿವಿಯಿದ್ದೂ ಕಿವುಡಾಗಿ’ ವರ್ತಿಸುತ್ತಿದೆ. ಬಡ ವ್ಯಾಪಾರಿಗಳ ಬದುಕನ್ನು ಬೀದಿಗೆ ತರಲು ಜೆಸಿಬಿಗಳೊಂದಿಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮತ್ತು ಅವರ ಇಲಾಖೆಯ ಅಧಿಕಾರಿಗಳು ಹೌಹಾರಿ ಬಡ ವ್ಯಾಪಾರಿಗಳ ಮೇಲೆ ಮುಗಿಬಿದ್ದಿದ್ದಾರೆ. ‘ಫುಟ್‌ಪಾತ್ ತೆರವು ಅಭಿಯಾನ’ ಹೆಸರಿನಲ್ಲಿ ಬೀದಿ ವ್ಯಾಪಾರಿಗಳ ಜೀವ-ಜೀವನವನ್ನು ಕಸಿದುಕೊಳ್ಳುತ್ತಿದ್ದಾರೆ.
ನಗರ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆಗಳು ನಡೆಯುತ್ತಿವೆ. ಈ ಅಭಿಯಾನವು ಬೆಂಗಳೂರು ನಗರವನ್ನು ಸುಂದರ, ಸ್ವಚ್ಛ ಮತ್ತು ಪಾದಚಾರಿಗಳಿಗೆ ಸುರಕ್ಷಿತ ಫುಟ್‌ಪಾತ್ ವ್ಯವಸ್ಥೆಯನ್ನು ಒದಗಿಸುವ ಗುರಿ ಹೊಂದಿದೆ ಎಂದು ಸಚಿವರು ಹೇಳಿಕೊಂಡಿದ್ದಾರೆ. ಆದರೆ, ಏಕಮುಖ ಅಭಿವೃದ್ಧಿ ಎಂಬ ಹೆಸರಿನಲ್ಲಿ ಸಾವಿರಾರು ಬಡ ಕುಟುಂಬಗಳ ಜೀವನೋಪಾಯವನ್ನು ಬಲಿಕೊಡುವ ಕ್ರೌರ್ಯವೂ ಇದರ ಹಿಂದಿದೆ ಎಂಬುದನ್ನು ಸಚಿವರು ಮರೆತಿದ್ದಾರೆ ಅಥವಾ ಮರೆತಂತೆ ನಟಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಅಂದಾಜು ಎರಡು ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿದ್ದಾರೆ. ಹಣ್ಣು, ತರಕಾರಿ, ಹೂವು, ತಿಂಡಿ, ಗೃಹೋಪಯೋಗಿ ವಸ್ತು ಸೇರಿದಂತೆ ಅನೇಕ ಸಣ್ಣ ವ್ಯಾಪಾರಗಳ ಮೂಲಕ ಸಾವಿರಾರು ಕುಟುಂಬಗಳು ಬದುಕು ಸಾಗಿಸುತ್ತಿವೆ. ರಸ್ತೆ ಬದಿಯಲ್ಲಿ ದುಡಿಯುವ ಈ ಕಾಯಕವು ಅವರ ಆಯ್ಕೆಯಲ್ಲ; ಬದುಕಿನ ಅನಿವಾರ್ಯತೆ. ಬಡತನ, ಆರ್ಥಿಕ ಅಸಹಾಯಕತೆ ಹಾಗೂ ಬದುಕು ಸಾಗಿಸಬೇಕಾದ ಅನಿವಾರ್ಯತೆಯಿಂದಾಗಿ ಅವರೆಲ್ಲರೂ ರಸ್ತೆ ಬದಿಯನ್ನೇ ಜೀವನೋಪಾಯದ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ.
ಈ ವ್ಯಾಪಾರಿಗಳಲ್ಲಿ ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ವಿಶೇಷ ಚೇತನರು ಹಾಗೂ ಸಮಾಜದ ಅತ್ಯಂತ ದುರ್ಬಲ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಅನೇಕರು ಮಹಾನಗರ ಪಾಲಿಕೆಯ ಸಮೀಕ್ಷೆಗೆ ಒಳಪಟ್ಟಿದ್ದಾರೆ. ಕೇಂದ್ರ ಸರ್ಕಾರದ ಪಿಎಂ-ಸ್ವನಿಧಿ ಯೋಜನೆಯಡಿ ಸಾಲ ಪಡೆದಿದ್ದಾರೆ. ಕಾರ್ಮಿಕ ಸಂಘಗಳಲ್ಲಿ ನೋಂದಾಯಿತರಾಗಿದ್ದಾರೆ. ಮುಖ್ಯವಾಗಿ, ‘ಬೀದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ವ್ಯಾಪಾರ ನಿಯಂತ್ರಣ) ಕಾಯ್ದೆ–2014’ರ ಅಡಿಯಲ್ಲಿ ಕಾನೂನುಬದ್ಧ ಹಕ್ಕುಗಳನ್ನು ಹೊಂದಿದ್ದಾರೆ.
ಆದರೆ, ಇತ್ತೀಚಿನ ತೆರವು ಕಾರ್ಯಾಚರಣೆಗಳಲ್ಲಿ ಅವರನ್ನು ಕೇವಲ ‘ಒತ್ತುವರಿದಾರರು’ ಎಂಬ ಒಂದೇ ಪದದಲ್ಲಿ ಗುರುತಿಸಲಾಗುತ್ತಿದೆ. ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗಳು ಅನೇಕ ಕಡೆ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೆ ನಡೆಯುತ್ತಿವೆ.
ಗಮನಾರ್ಹವಾಗಿ, ‘2014ರ ಕಾಯ್ದೆ’ಯ ಸೆಕ್ಷನ್ 3(3) ಪ್ರಕಾರ ನಗರದಲ್ಲಿರುವ ಎಲ್ಲ ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಯಾರನ್ನೂ ಒಕ್ಕಲೆಬ್ಬಿಸುವಂತಿಲ್ಲ. ಅದೇ ರೀತಿ ಸೆಕ್ಷನ್ 18ರ ಪ್ರಕಾರ ಯಾವುದೇ ವ್ಯಾಪಾರಿಯನ್ನು ತೆರವುಗೊಳಿಸುವ ಮೊದಲು ಕನಿಷ್ಠ 30 ದಿನಗಳ ಲಿಖಿತ ನೋಟಿಸ್ ನೀಡುವುದು ಕಡ್ಡಾಯ. ಬೆಂಗಳೂರಿನಲ್ಲಿ ಇನ್ನೂ ಸಂಪೂರ್ಣ ಸಮೀಕ್ಷೆ ಮುಗಿದಿಲ್ಲ, ಎಲ್ಲರಿಗೂ ಗುರುತಿನ ಚೀಟಿ ನೀಡಲಾಗಿಲ್ಲ ಹಾಗೂ ಟೌನ್ ವೆಂಡಿಂಗ್ ಕಮಿಟಿಗಳ ಕಾರ್ಯ ಸಂಪೂರ್ಣವಾಗಿ ಜಾರಿಯಾಗಿಲ್ಲ. ಇಷ್ಟೆಲ್ಲ ಕೆಲಸಗಳು ಬಾಕಿ ಇರುವಾಗಲೇ ಏಕಾಏಕಿ ತೆರವು ಕಾರ್ಯಾಚರಣೆಗಳು ನಡೆಯುತ್ತಿರುವುದು ಕಾನೂನಾತ್ಮಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಾಸ್ತವದಲ್ಲಿ, ಪಾದಚಾರಿ ಮಾರ್ಗಗಳ ನಿಜವಾದ ಅತಿಕ್ರಮಣಕಾರರು ಯಾರು? ನಗರದ ಹಲವೆಡೆ ಫುಟ್‌ಪಾತ್‌ಗಳ ಮೇಲೆ ಐಷಾರಾಮಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ದಿನವಿಡೀ ನಿಲ್ಲಿಸಲಾಗುತ್ತಿದೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು, ಯುಟಿಲಿಟಿ ಬಾಕ್ಸ್‌ಗಳು, ಖಾಸಗಿ ಉದ್ಯಾನಗಳು, ವಾಣಿಜ್ಯ ಮಳಿಗೆಗಳ ವಿಸ್ತರಣೆಗಳು, ರೆಸ್ಟೋರೆಂಟ್‌ಗಳ ಅಕ್ರಮ ಆವರಣಗಳು ಹಾಗೂ ವಿವಿಧ ನಿರ್ಮಾಣ ಕಾಮಗಾರಿಗಳು ಪಾದಚಾರಿಗಳ ಸಂಚಾರಕ್ಕೆ ದೊಡ್ಡ ಅಡ್ಡಿಯಾಗಿವೆ. ಇಂತಹ ಪ್ರಭಾವಿ ಅತಿಕ್ರಮಣಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ತೋರುವ ಉತ್ಸಾಹ ಮತ್ತು ಬಡ ವ್ಯಾಪಾರಿಗಳ ವಿರುದ್ಧ ತೋರಿಸುವ ಕಠಿಣ ಕ್ರಮಗಳು ಒಂದೇ ಮಟ್ಟದಲ್ಲಿದೆಯೇ? ಈ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿಲ್ಲ!
ಈಗಾಗಲೇ ಬೀದಿಬದಿ ವ್ಯಾಪಾರಿಗಳು ಆನ್‌ಲೈನ್ ಮಾರುಕಟ್ಟೆಗಳ ಸ್ಪರ್ಧೆ, ಬೆಲೆ ಏರಿಕೆ, ಅನಿರೀಕ್ಷಿತ ಹವಾಮಾನ ಬದಲಾವಣೆ ಹಾಗೂ ಆಡಳಿತಾತ್ಮಕ ಒತ್ತಡಗಳಿಂದ ಸಂಕಷ್ಟದಲ್ಲಿದ್ದಾರೆ. ವಿಶೇಷವಾಗಿ ಮಹಿಳಾ ವ್ಯಾಪಾರಿಗಳಿಗೆ ಮೂಲಭೂತ ಶೌಚಾಲಯ, ಕುಡಿಯುವ ನೀರು, ನೆರಳು ಸೇರಿದಂತೆ ಅಗತ್ಯ ಸೌಲಭ್ಯಗಳೂ ಇಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಪುನರ್ವಸತಿ ಯೋಜನೆ ಅಥವಾ ಪರ್ಯಾಯ ವ್ಯಾಪಾರ ವಲಯ ಕಲ್ಪಿಸದೆ ತೆರವು ಕಾರ್ಯಾಚರಣೆ ನಡೆಸುವುದು ಸಾವಿರಾರು ಕುಟುಂಬಗಳ ಜೀವನೋಪಾಯವನ್ನು ಬುಡಮೇಲು ಮಾಡಿದೆ.
ಫುಟ್‌ಪಾತ್ ವಿಚಾರವಾಗಿ ಬೊಬ್ಬೆಹೊಡೆಯುತ್ತಿರುವ ಸರ್ಕಾರ, ಒಮ್ಮೆ ಬೆಂಗಳೂರಿನ ರಸ್ತೆ ಸುರಕ್ಷತೆಯ ಕಡೆಗೆ ಕಣ್ಣಾಯಿಸಬೇಕಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾಹಿತಿಯ ಪ್ರಕಾರ, ನಗರದಲ್ಲಿ ಪ್ರತಿ 110 ನಿಮಿಷಕ್ಕೊಮ್ಮೆ ರಸ್ತೆ ಅಪಘಾತ ಸಂಭವಿಸುತ್ತಿದೆ. ಪ್ರತಿ 10 ಗಂಟೆಗೊಮ್ಮೆ ಒಬ್ಬ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾನೆ. ಒಂದು ವರ್ಷದಲ್ಲಿ 4,769 ಅಪಘಾತಗಳು ಸಂಭವಿಸಿವೆ. 894 ಮಂದಿ ಮೃತಪಟ್ಟಿದ್ದರೆ, 4,022 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಗುಂಡಿಗಳು, ಅವೈಜ್ಞಾನಿಕ ರಸ್ತೆ ವಿನ್ಯಾಸ, ಸಿಗ್ನಲ್ ಕೊರತೆ, ಮುರಿದ ಫುಟ್‌ಪಾತ್‌ಗಳು ಹಾಗೂ ನಿರ್ವಹಣೆಯ ಲೋಪಗಳು ಈ ಅಪಘಾತಗಳಿಗೆ ಪ್ರಮುಖ ಕಾರಣ. ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಬದಲು, ಇಡೀ ಸಮಸ್ಯೆಯ ಹೊಣೆಯನ್ನು ಬೀದಿಬದಿ ವ್ಯಾಪಾರಿಗಳ ಮೇಲೆ ಹೊರಿಸುವುದು ಸರ್ಕಾರದ ವೈಫಲ್ಯವಲ್ಲದೆ, ಮತ್ತೇನು?
ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?
ನ್ಯೂಯಾರ್ಕ್, ಬ್ಯಾಂಕಾಕ್ ಸೇರಿದಂತೆ ಹಲವು ನಗರಗಳು ಬೀದಿಬದಿ ವ್ಯಾಪಾರವನ್ನು ನಗರದ ಆರ್ಥಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯ ಭಾಗವಾಗಿ ಪರಿಗಣಿಸಿ ನಿಯಂತ್ರಿತ ವ್ಯಾಪಾರ ವಲಯಗಳನ್ನು ರೂಪಿಸಿವೆ. ಅಷ್ಟೇ ಯಾಕೆ, ಭಾರತದಲ್ಲಿಯೇ ಒಡಿಶಾದ ಭುವನೇಶ್ವರ ನಗರವು 2014ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಅಧಿಕೃತ ವೆಂಡಿಂಗ್ ಜೋನ್‌ಗಳನ್ನು ಅಭಿವೃದ್ಧಿಪಡಿಸಿದೆ. ದೇಶಕ್ಕೆ ಹೊಸ ಮಾದರಿ ಮುಂದಿಟ್ಟಿದೆ. ಮುಂಬೈ ಮತ್ತು ದೆಹಲಿ ಹೈಕೋರ್ಟ್‌ಗಳೂ ಟೌನ್ ವೆಂಡಿಂಗ್ ಕಮಿಟಿಗಳ ಅನುಮತಿ ಮತ್ತು ಕಾನೂನು ಪ್ರಕ್ರಿಯೆ ಇಲ್ಲದೆ ವ್ಯಾಪಾರಿಗಳನ್ನು ತೆರವುಗೊಳಿಸುವುದು ನ್ಯಾಯಸಮ್ಮತವಲ್ಲ ಎಂದು ಹಲವು ಬಾರಿ ಅಭಿಪ್ರಾಯ ವ್ಯಕ್ತಪಡಿಸಿವೆ.
ಇದೆಲ್ಲದರ ಆಚೆಗೂ, 2024ರಲ್ಲಿ ಬೀದಿಬದಿ ವ್ಯಾಪಾರಿಗಳ ಪರವಾದ ಕಾಯ್ದೆಯನ್ನು ರೂಪಿಸಿದ್ದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳನ್ನು ಭೇಟಿ ಮಾಡಿದ್ದರು. ಅವರ ಹಕ್ಕುಗಳ ಪರ ನಿಲ್ಲುವ ಭರವಸೆ ನೀಡಿದ್ದರು. ಅಂತೆಯೇ, ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಇತಿಹಾಸದುದ್ದಕ್ಕೂ ಸಾಮಾಜಿಕ ನ್ಯಾಯ, ಕಲ್ಯಾಣ ರಾಜ್ಯ ಹಾಗೂ ಸಮಾಜವಾದಿ ಮೌಲ್ಯಗಳನ್ನು ತನ್ನ ಸೈದ್ಧಾಂತಿಕ ಅಡಿಪಾಯವೆಂದು ಹೇಳಿಕೊಂಡಿದೆ. ದುರ್ಬಲ ವರ್ಗಗಳು, ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಶ್ರಮಿಕರ ಪರ ನಿಲ್ಲುವುದೇ ತನ್ನ ರಾಜಕೀಯ ಬದ್ಧತೆ ಎಂದು ಪ್ರತಿಪಾದಿಸುತ್ತಾ ಬಂದಿದೆ.
ಆದರೆ, ಈಗ ಅದೇ ಪಕ್ಷದ ಸರ್ಕಾರದ ಅವಧಿಯಲ್ಲಿ ವ್ಯಾಪಾರಿಗಳ ವಿರುದ್ಧ ತೆರವು ಕಾರ್ಯಾಚರಣೆಗಳು ನಡೆಯುತ್ತಿರುವುದು ಕಾಂಗ್ರೆಸ್ ರಾಜಕೀಯ ಬದ್ಧತೆ ಮತ್ತು ಆಡಳಿತಾತ್ಮಕ ನಿಲುವನ್ನು ಪ್ರಶ್ನೆಗೆ ಗುರಿಮಾಡಿದೆ. ಪರ್ಯಾಯ ವ್ಯವಸ್ಥೆ, ಪುನರ್ವಸತಿ ಅಥವಾ ಕಾನೂನುಬದ್ಧ ವೆಂಡಿಂಗ್ ವಲಯಗಳನ್ನು ಕಲ್ಪಿಸದೆ ವ್ಯಾಪಾರಿಗಳನ್ನು ತೆರವುಗೊಳಿಸುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವಿರುದ್ಧವಾದ ಧೋರಣೆಯೂ ಆಗಿದೆ.
ಸಮಾಜವಾದ ಎಂಬುದು ಕೇವಲ ರಾಜಕೀಯ ಘೋಷಣೆಯಲ್ಲ. ಅದು ರಾಜ್ಯದ ನೀತಿಗಳಲ್ಲಿ, ಆಡಳಿತದ ಆದ್ಯತೆಗಳಲ್ಲಿ ಹಾಗೂ ದುರ್ಬಲ ವರ್ಗಗಳ ಬಗ್ಗೆ ತೋರುವ ಸಂವೇದನೆಯಲ್ಲಿ ಪ್ರತಿಫಲಿಸಬೇಕು. ಸರ್ಕಾರಗಳ ನೀತಿ-ನಿರ್ಧಾರಗಳಲ್ಲಿ ಆರ್ಥಿಕವಾಗಿ ಬಲಿಷ್ಠರ ಅಕ್ರಮಗಳ ಎದುರು ಮೃದು ಧೋರಣೆ ಮತ್ತು ಬಡವರ ಜೀವನೋಪಾಯದ ವಿರುದ್ಧ ಕಠಿಣ ಕ್ರಮ ಎಂಬ ಭಾವನೆ ಮೂಡಿದರೆ, ಅಲ್ಲಿ ಸಮಾಜವಾದ ಇರುವುದಿಲ್ಲ. ಬದಲಾಗಿ, ಬಲಾಢ್ಯರ ಪರವಾದ ವಾದವಷ್ಟೇ ಉಳಿದಿರುತ್ತದೆ.
ಇಂದು ಬೆಂಗಳೂರಿಗೆ ಬೇಕಾಗಿರುವುದು ಬುಲ್ಡೋಜರ್ ರಾಜಕೀಯವಲ್ಲ; ಸಮಗ್ರ ನಗರ ಯೋಜನೆ. ಕಾಂಗ್ರೆಸ್ ತನ್ನನ್ನು ಇನ್ನೂ ಸಾಮಾಜಿಕ ನ್ಯಾಯ ಮತ್ತು ಸಮಾಜವಾದದ ಮೌಲ್ಯಗಳ ಪಕ್ಷವೆಂದು ನಂಬುವುದಾದರೆ, ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳನ್ನು ಕೇವಲ ‘ಒತ್ತುವರಿ’ ಎಂಬ ದೃಷ್ಟಿಯಿಂದ ನೋಡದೆ, ‘ಜೀವನೋಪಾಯ’ ಎಂಬ ಮಾನವೀಯ ದೃಷ್ಟಿಕೋನದಿಂದಲೂ ಪರಿಗಣಿಸಬೇಕು. ನಗರ ಅಭಿವೃದ್ಧಿ ಮತ್ತು ಬಡವರ ಬದುಕು ಪರಸ್ಪರ ವಿರುದ್ಧವಲ್ಲ. ಅವೆರಡೂ ಸಮಾಜದ ಅವಿಭಾಜ್ಯ ಅಂಗ, ಅವುಗಳನ್ನು ಸಮಾನವಾಗಿ ನಿಭಾಯಿಸುವ ಆಡಳಿತವೇ ಪ್ರಜಾಪ್ರಭುತ್ವದ ಯಶಸ್ಸಿನ ನಿಜವಾದ ಮಾನದಂಡ ಎಂಬುದನ್ನು ಕಾಂಗ್ರೆಸ್ ಸರ್ಕಾರ ಮನಗಾಣಬೇಕು. ಪಾದಚಾರಿಗಳಿಗೆ ಅಗಲವಾದ ಫುಟ್‌ಪಾತ್‌ಗಳು, ಕಾನೂನುಬದ್ಧ ವೆಂಡಿಂಗ್ ವಲಯಗಳು, ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ಮೂಲಸೌಕರ್ಯ ಮತ್ತು ಪುನರ್ವಸತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇವೆಲ್ಲವನ್ನೂ ಒಟ್ಟಾಗಿ ಜಾರಿಗೊಳಿಸುವ ಮಾದರಿಯೇ ಶಾಶ್ವತ ಪರಿಹಾರವಾಗಲಿದೆ. ಎಲ್ಲರನ್ನೂ ಒಳಗೊಳ್ಳಲಿದೆ!



