ಒಬ್ಬ ಧರ್ಮಗುರು ತನ್ನ ಕಣ್ಣಿಗೆ ಮಹಿಳೆ ಕಾಣಬಾರದು ಎಂದುಕೊಂಡರೆ ಆತ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಬಹುದು; ಸಾರ್ವಜನಿಕವಾಗಿ ದೂರ ಉಳಿಯಬಹುದು; ಅದರಾಚೆಗೆ, ಕೆಲಸದ ಸ್ಥಳದಲ್ಲಿರುವ ಮಹಿಳೆಯನ್ನು ನನ್ನ ಕಣ್ಣಿಗೆ ಬೀಳಬೇಡ ಎಂದು ಹೇಳುವ ಹಕ್ಕು ಆತನಿಗಿಲ್ಲ. ಅಂತೆಯೇ, ಸಮಾಜದ ಎಲ್ಲ ವೇದಿಕೆಗಳು ಮಹಿಳೆಯರಿಗೆ ಮುಚ್ಚಬೇಕು ಎಂದು ಘೋಷಿಸುವ ಅಧಿಕಾರವೂ ಇಲ್ಲ.
ಪ್ಯಾರಿಸ್ನ ಐಫೆಲ್ ಟವರ್ ಜಗತ್ತಿಗೆ ಕೇವಲ ಒಂದು ಪ್ರವಾಸಿ ತಾಣವಲ್ಲ. ಸ್ವಾತಂತ್ರ್ಯ, ಆಧುನಿಕತೆ ಹಾಗೂ ಫ್ರಾನ್ಸ್ನ ಸಾರ್ವಜನಿಕ ಬದುಕಿನ ಸಂಕೇತ ಕೂಡ. ಆದರೆ, ಅದೇ ಐಫೆಲ್ ಟವರ್ನಲ್ಲಿ ಕೆಲವು ಗಂಟೆಗಳ ಕಾಲ ಮಹಿಳೆಯರನ್ನು ನಿರ್ಬಂಧಿಸಲಾಯಿತು, ಅಲ್ಲಿನ ಮಹಿಳಾ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳದಿಂದ ಹಿಂದೆ ಸರಿಯಬೇಕಾಯಿತು, ಅವರ ಜಾಗದಲ್ಲಿ ಪುರುಷ ಸಿಬ್ಬಂದಿಯನ್ನು ನಿಯೋಜಿಸಲಾಯಿತು, ಕೆಲವು ಪ್ರದೇಶಗಳಲ್ಲಿ ಮಹಿಳಾ ಸಿಬ್ಬಂದಿ ಕಾಣಿಸಿಕೊಳ್ಳದಂತೆ ಸೂಚಿಸಲಾಯಿತು. ಇದೆಲ್ಲದಕ್ಕೂ ಕಾರಣ, ಧಾರ್ಮಿಕ ಸಂಘಟನೆ ‘ಬೋಚಾಸನವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥಾ’ದ (BAPS) ನಿಯೋಗದ ಭೇಟಿ.
ಐಫೆಲ್ ಟವರ್ಗೆ ಮಂಗಳವಾರ ಬಿಎಪಿಎಸ್ ಆಧ್ಯಾತ್ಮಿಕ ನಾಯಕ ಮಹಂತ್ ಸ್ವಾಮಿ ಮಹಾರಾಜ್ ನೇತೃತ್ವದ ನಿಯೋಗ ಭೇಟಿ ನೀಡಿತ್ತು. ಈ ವೇಳೆ, ಮಹಂತ್ ಸ್ವಾಮಿ ಅವರಿಗೆ ಮಹಿಳೆಯ ನೆರಳು-ಸಂವಹನ ಎದುರಾಗದಂತೆ ಮಹಿಳೆಯರನ್ನು ದೂರವಿಡುವಂತೆ ಕೇಳಲಾಗಿತ್ತು ಎಂಬುದನ್ನು ಐಫೆಲ್ ಟವರ್ ನಿರ್ವಹಣಾ ಸಂಸ್ಥೆ ‘ಎಸ್ಇಟಿಇ’ ಒಪ್ಪಿಕೊಂಡಿದೆ. ”ಅಂತಹ ಷರತ್ತನ್ನು ಒಪ್ಪಿಕೊಳ್ಳಬಾರದಿತ್ತು, ಅದು ಲಿಂಗ ಸಮಾನತೆಯ ತತ್ವಕ್ಕೆ ವಿರುದ್ಧವಾಗಿತ್ತು” ಎಂದೂ ಸಂಸ್ಥೆ ಹೇಳಿದೆ.
ಬಿಎಪಿಎಸ್ನ ಬೇಡಿಕೆ ಮತ್ತು ಎಸ್ಇಟಿಇಯ ಧೋರಣೆಯ ವಿರುದ್ಧ ಅಲ್ಲಿನ ಸಿಬ್ಬಂದಿಗಳ ಸಂಘಟನೆಗಳು ಪ್ರತಿಭಟಿಸಿವೆ. ಪರಿಣಾಮ ಐಫೆಲ್ ಟವರ್ಗೆ ಸಾರ್ವಜನಿಕರ ಭೇಟಿಯನ್ನು ಒಂದು ದಿನ ನಿರ್ಬಂಧಿಸಲಾಗಿತ್ತು.
ಈ ಘಟನೆ ಬಳಿಕ, ಬಿಎಪಿಎಸ್ ಕೂಡ ತನ್ನ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದೆ. ‘ಯಾರಿಗೂ ಐಫೆಲ್ ಟವರ್ ಪ್ರವೇಶ ನಿರಾಕರಿಸುವುದು ತಮ್ಮ ಉದ್ದೇಶವಾಗಿರಲಿಲ್ಲ, ದೊಡ್ಡ ನಿಯೋಗದ ಭೇಟಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು’ ಎಂದು ಸಮಜಾಯಿಷಿಯನ್ನೂ ನೀಡಿದೆ. ಕ್ಷಮೆಯನ್ನೂ ಯಾಚಿಸಿದೆ.
ಆದರೆ, ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಧಾರ್ಮಿಕ ನಿಯೋಗಕ್ಕೆ ಅನುಕೂಲವಾಗಬೇಕು ಎಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಮಾರಕದಲ್ಲಿ ಮಹಿಳಾ ಉದ್ಯೋಗಿಗಳೇ ಕಾಣಿಸಿಕೊಳ್ಳಬಾರದು, ಮಹಿಳೆಯರು ಬರಬಾರದು, ಮಹಿಳೆಯ ನೆರಳೂ ಬೀಳಬಾರದು ಎಂಬ ಧೋರಣೆ ಮತ್ತು ಅದನ್ನು ಪುರಸ್ಕರಿಸುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಮಹಿಳೆಯನ್ನು ಸಂಪರ್ಕಿಸುವುದಿಲ್ಲವೆಂದು ಆತ ವೈಯಕ್ತಿಕ ಧಾರ್ಮಿಕ ವ್ರತ ಆಚರಿಸುತ್ತಿದ್ದರೆ, ಅದನ್ನು ಪಾಲಿಸುವ ಹೊಣೆ ಯಾರದು? ಆ ಧರ್ಮಗುರುವಿನದ್ದೋ ಅಥವಾ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯರದ್ದೋ? ಈ ಸೂಕ್ಷ್ಮತೆ ಎಸ್ಇಟಿಇಗೆ ಅರ್ಥವಾಗದೇ ಇರುವುದು ಖೇದಕರ.
ಈ ಬೆಳವಣಿಗೆಗೆ ಫ್ರಾನ್ಸ್ ತಕ್ಷಣವೇ ಪ್ರತಿಕ್ರಿಯಿಸಿದೆ. ಮಹಿಳೆ ಮತ್ತು ಪುರುಷರ ನಡುವೆ ಸಮಾನತೆ ತರಲೆಂದೇ ರಚಿಸಲಾಗಿರುವ ‘ಸಮಾನತೆಯ ಸಚಿವಾಲಯ’ದ ಸಚಿವೆ ಅಯೋರೇ ಬೆರ್ಗೆ, “ಫ್ರಾನ್ಸ್ನಲ್ಲಿ ಧರ್ಮ ಅಥವಾ ಸಿದ್ಧಾಂತದ ಹೆಸರಿನಲ್ಲಿ ಮಹಿಳೆಯರು ತಮ್ಮ ಅಸ್ತಿತ್ವವನ್ನೇ ಮುಚ್ಚಿಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಯಾವುದೇ ಸಿದ್ಧಾಂತ ಅಥವಾ ಧರ್ಮವು ಗಣರಾಜ್ಯದ ಕಾನೂನಿಗಿಂತ ಮೇಲಲ್ಲ” ಎಂದಿದ್ದಾರೆ. ಪ್ಯಾರಿಸ್ ಮೇಯರ್ ಎಮ್ಯಾನುಯೆಲ್ ಗ್ರೆಗೊಯರ್, ”ಮಹಿಳೆ-ಪುರುಷ ಸಮಾನತೆ ಐತಿಹಾಸಿಕ ಸ್ಮಾರಕಗಳ ಬಾಗಿಲಲ್ಲಿ ನಿಂತುಹೋಗಬಾರದು” ಎಂದು ಹೇಳಿದ್ದಾರೆ. ಮುಖ್ಯವಾಗಿ, ಫ್ರಾನ್ಸ್ನ ತೀವ್ರ ಬಲಪಂಥೀಯ ನಾಯಕಿ ಮೇರಿ ಲೆ ಪೆನ್ ಕೂಡ, ”ಮಹಿಳೆಯರ ಉಪಸ್ಥಿತಿಗೆ ‘ಮಿತಿ ಹೇರುವುದನ್ನು’ ಫ್ರಾನ್ಸ್ ಎಂದಿಗೂ ಒಪ್ಪುವುದಿಲ್ಲ” ಎಂದು ಖಂಡಿಸಿದ್ದಾರೆ.
ಈ ಖಂಡನೆಗಳನ್ನೆಲ್ಲ ಸ್ವಾಗತಿಸಬಹುದಾದರೂ, ತಮ್ಮದೇ ನೆಲದಲ್ಲಿ ಪರದೇಶಿ ಧಾರ್ಮಿಕ ಮುಖಂಡನೊಬ್ಬ ಮಹಿಳೆಯರನ್ನು ನಿರ್ಬಂಧಿಸುವಂತೆ ಕೇಳಿದಾಗ ಮತ್ತು ಅದನ್ನು ಅಲ್ಲಿನ ನಿರ್ವಹಣಾ ಸಂಸ್ಥೆ ಒಪ್ಪಿಕೊಂಡಿದ್ದಾದರೂ ಹೇಗೆ? ಇದಕ್ಕೆ ಉತ್ತರದಾಯಿ ಇದೇ ಫ್ರಾನ್ಸ್ ಆಡಳಿತ!
ಐಫೆಲ್ ಟವರ್ ಘಟನೆ ಭಾರತದ ಮಾನವನ್ನು ಜಾಗತಿಕವಾಗಿ ಹರಾಜು ಹಾಕಿದೆ. ಬಿಎಪಿಎಸ್ ಒಂದು ಭಾರತೀಯ ಮೂಲದ ಜಾಗತಿಕ ಧಾರ್ಮಿಕ ಸಂಸ್ಥೆ. ಅದರ ನಿಯೋಗದ ಭೇಟಿಯಿಂದ ಹುಟ್ಟಿದ ವಿವಾದದಲ್ಲಿ ಫ್ರಾನ್ಸ್ನ ಕಾರ್ಮಿಕರು ಮಹಿಳಾ ಸಮಾನತೆಗಾಗಿ ಪ್ರತಿಭಟಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಭಾರತದ ಬಗ್ಗೆ ಹೊರಜಗತ್ತಿನಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಘಟನೆಗೂ ಮುನ್ನ, ಕೇರಳದ ಇಸ್ಲಾಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕರ್ ಮುಸಲಿಯಾರ್, ”ಮಹಿಳೆಯರು ಮನೆಗಳೊಳಗೆ ಇರಬೇಕು, ಸಾರ್ವಜನಿಕವಾಗಿ ಅವರ ಹಾಜರಿ ವಿನಾಶಕ್ಕೆ ಕಾರಣವಾಗಬಹುದು. ಮಹಿಳೆಯರು ಆಭರಣವಿದ್ದಂತೆ, ಅವರನ್ನು ವೇದಿಕೆಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಬಾರದು” ಎಂದು ಹೇಳಿದ್ದರು.
ಪ್ಯಾರಿಸ್ನ ಐಫೆಲ್ ಟವರ್ನಲ್ಲಿ ಮಹಿಳೆಯರನ್ನು ‘ಕಾಣಿಸದಂತೆ’ ಮಾಡುವುದು ಮತ್ತು ಕೇರಳದಲ್ಲಿ ಮಹಿಳೆಯರು ಸಾರ್ವಜನಿಕ ವೇದಿಕೆಗೆ ಬರಬಾರದು ಎನ್ನುವುದು– ಈ ಎರಡೂ ವಿಭಿನ್ನ ಸಂದರ್ಭಗಳು, ವಿಭಿನ್ನ ಧರ್ಮಗಳು ಹಾಗೂ ವಿಭಿನ್ನ ಧರ್ಮಗಳಿಗೆ ಸಂಬಂಧಿಸಿದ್ದು. ಆದರೆ, ಈ ಎರಡೂ ಘಟನೆಗಳ ಸಿದ್ಧಾಂತ ಒಂದೇ- ಸ್ರೀದ್ವೇಷ. ಮಹಿಳೆ ಪುರುಷನ ಅಧೀನಳು ಎಂಬ ಪುರುಷಾಧಿಪತ್ಯದ ಅಹಮ್ಮಿಕೆ. ಇದು ಮಹಿಳೆ ಎಲ್ಲಿ ನಿಲ್ಲಬೇಕು, ಯಾರನ್ನು ನೋಡಬೇಕು, ಯಾರ ಮುಂದೆ ಕಾಣಿಸಿಕೊಳ್ಳಬೇಕು, ಯಾವ ಬಟ್ಟೆ ಧರಿಸಬೇಕು, ಯಾವ ವೇದಿಕೆಗೆ ಹೋಗಬೇಕು, ಮನೆ ಬಿಟ್ಟು ಯಾವಾಗ ಹೊರಬರಬೇಕು ಎಂಬುದನ್ನು ಪುರುಷರೇ ನಿರ್ಧರಿಸಬೇಕು ಎಂಬ ಪಿತೃಪ್ರಭುತ್ವದ ಮನೋಭಾವ.
ಈ ಪಿತೃಸತ್ತೆ ಯಾವಾಗಲೂ ‘ಮಹಿಳೆಯನ್ನು ದ್ವೇಷಿಸುತ್ತೇವೆ’ ಎಂದು ನೇರವಾಗಿ ಹೇಳುವುದೂ ಇಲ್ಲ, ಘೋಷಿಸುವುದೂ ಇಲ್ಲ. ತನ್ನ ಕೃತ್ಯ ಮತ್ತು ಧೋರಣೆಗಳನ್ನು ‘ಮಹಿಳೆಯ ಗೌರವ ರಕ್ಷಣೆ’, ‘ಸಂಸ್ಕೃತಿ’, ‘ಮರ್ಯಾದೆ’, ‘ಪಾವಿತ್ರ್ಯ’, ‘ಕುಟುಂಬದ ಘನತೆ’, ‘ಧರ್ಮದ ನಿಯಮ’, ‘ಸ್ತ್ರೀಯರ ಸುರಕ್ಷತೆ’ ಎಂಬ ಪದಗುಚ್ಛಗಳನ್ನು ಸೇರಿಸಿ, ‘ನಿಮ್ಮ ಒಳ್ಳೆಯದಕ್ಕಾಗಿಯೇ ನಿಮ್ಮನ್ನು ಕೊಲ್ಲುತ್ತಿದ್ದೇವೆ. ನೀವು ಸಾಯಿರಿ’ ಎಂದು ಒಪ್ಪಿಸಲು ಯತ್ನಿಸುತ್ತಿದೆ. ಮಹಿಳೆಯ ಸ್ವಾತಂತ್ರ್ಯದ ಗಡಿಯನ್ನು ಪುರುಷರು ನಿಗದಿಪಡಿಸುತ್ತಾರೆ ಎಂದು ವಾದಿಸುತ್ತದೆ.
ಮಹಿಳೆ ಆಭರಣವೂ ಅಲ್ಲ, ವಸ್ತುವೂ ಅಲ್ಲ. ಆಕೆ ನಾಗರಿಕಳು. ಆಕೆಯನ್ನು ವಸ್ತುವಿನಂತೆ ಲಾಕರ್ನಲ್ಲಿ ಇಡುವ ಅಗತ್ಯವಿಲ್ಲ. ಆಕೆ ಯಾರ ಮಗಳು ಅಥವಾ ಯಾರ ಪತ್ನಿ ಎಂಬುದರಿಂದ ಮಾತ್ರ ಆಕೆಯ ಅಸ್ತಿತ್ವ ನಿರ್ಧಾರವಾಗುವುದಿಲ್ಲ. ಆಕೆಯ ದೇಹ, ವೃತ್ತಿ, ಶಿಕ್ಷಣ, ರಾಜಕೀಯ, ಅಭಿಪ್ರಾಯ, ಧಾರ್ಮಿಕ ನಂಬಿಕೆ, ಉಡುಪು, ವಿವಾಹ, ಮಾತೃತ್ವ, ಸಾರ್ವಜನಿಕ ಬದುಕು- ಇವೆಲ್ಲದರ ಕುರಿತು ಅಂತಿಮ ನಿರ್ಧಾರ ಅವಳದ್ದೇ ಆಗಿರುತ್ತದೆ. ಆಗಬೇಕು.
ಭಾರತದ ಸಂವಿಧಾನವೂ ಇದೇ ಮೂಲತತ್ವದ ಮೇಲೆ ನಿಂತಿದೆ. ಸಮಾನತೆಯ ಹಕ್ಕು, ಲಿಂಗ ಆಧಾರಿತ ತಾರತಮ್ಯ ನಿಷೇಧ, ಅಭಿವ್ಯಕ್ತಿ ಮತ್ತು ಸಂಚಾರದ ಸ್ವಾತಂತ್ರ್ಯ, ಜೀವಿಸುವ ಮತ್ತು ಘನತೆಯಿಂದ ಬದುಕುವ ಹಕ್ಕುಗಳು ಯಾವ ಧರ್ಮಗುರುವಿನ ವರವೂ ಅಲ್ಲ, ದಾನವೂ ಅಲ್ಲ. ಅವು ನಾಗರಿಕರ ಹಕ್ಕುಗಳು. ಈ ಹಕ್ಕುಗಳಿಂದ ಮಹಿಳೆಯರನ್ನು ವಂಚಿಸಲು ಯಾರಿಗೂ ಸಾಧ್ಯವಿಲ್ಲ.
ಒಬ್ಬ ಧರ್ಮಗುರು ತನ್ನ ಕಣ್ಣಿಗೆ ಮಹಿಳೆ ಕಾಣಬಾರದು ಎಂದುಕೊಂಡರೆ ಆತ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಬಹುದು; ಸಾರ್ವಜನಿಕವಾಗಿ ದೂರ ಉಳಿಯಬಹುದು; ಅದರಾಚೆಗೆ, ಕೆಲಸದ ಸ್ಥಳದಲ್ಲಿರುವ ಮಹಿಳೆಯನ್ನು ನನ್ನ ಕಣ್ಣಿಗೆ ಬೀಳಬೇಡ ಎಂದು ಹೇಳುವ ಹಕ್ಕು ಆತನಿಗಿಲ್ಲ. ಅಂತೆಯೇ, ಸಮಾಜದ ಎಲ್ಲ ವೇದಿಕೆಗಳು ಮಹಿಳೆಯರಿಗೆ ಮುಚ್ಚಬೇಕು ಎಂದು ಘೋಷಿಸುವ ಅಧಿಕಾರವೂ ಇಲ್ಲ.
ಮಹಿಳೆಯರ ವಾದ ಸ್ಪಷ್ಟವಾಗಿದೆ: ಅವರನ್ನು ದೇವತೆಯನ್ನಾಗಿಸಬೇಕಿಲ್ಲ. ಆಭರಣವೆಂದೂ ಕರೆಯಬೇಕಿಲ್ಲ. ಮನೆಯ ‘ಗೌರವ’ದ ಹೊಣೆಯನ್ನೂ ಹೇರಬೇಕಿಲ್ಲ. ರಕ್ಷಿಸುವ ನೆಪದಲ್ಲಿ ಅವರನ್ನು ಬಂಧಿಸಿಡಬೇಕಿಲ್ಲ. ಅವರನ್ನು ಮನುಷ್ಯಳಾಗಿ, ಸಮಾನ ನಾಗರಿಕಳಾಗಿ ನೋಡಿದರಷ್ಟೇ ಸಾಕು. ತಾವು ಎಲ್ಲಿ ಇರಬೇಕು, ಹೇಗೆ ಬದುಕಬೇಕು, ಏನಾಗಬೇಕು ಎಂಬುದನ್ನು ಮಹಿಳೆಯೇ ನಿರ್ಧರಿಸುತ್ತಾರೆ. ಅದಕ್ಕೆ, ಪಿತೃಸತ್ತೆಯ ಕೃಪೆ-ಕರುಣೆಯ ಅಗತ್ಯವಿಲ್ಲ!




