ಭಾರತದ ಲಕ್ಷಾಂತರ ಯುವಜನರು ಬೀದಿಗಿಳಿದದ್ದು ಕೇವಲ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧವಲ್ಲ. ಅದು ಹಲವು ವರ್ಷಗಳಿಂದ ಕುದಿಯುತ್ತಿದ್ದ ಆಕ್ರೋಶದ ಸ್ಫೋಟ. ಸಮಸ್ಯೆ ಪ್ರಶ್ನೆಪತ್ರಿಕೆಯಲ್ಲಿ ಇಲ್ಲ; ಅದು ದೇಶದ ಅಭಿವೃದ್ಧಿ ಮಾದರಿಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಪ್ರಶ್ನೆಪತ್ರಿಕೆ ಸೋರಿಕೆಯಾಯಿತು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳು ನಡೆದವು, ಪರೀಕ್ಷೆಗಳು ರದ್ದಾದವು, ಪ್ರತಿಭಟನೆಗಳು ಆರಂಭವಾದವು. ಇದೇ ಹೊತ್ತಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ದೇಶದ ಯುವ ಸಮುದಾಯದ ಒಂದು ಭಾಗವನ್ನು ‘ಜಿರಳೆ’ಗಳು ಎಂದು ಕರೆದರು. ಅವರ ಹೇಳಿಕೆಯ ವಿರುದ್ಧ ವಿಡಂಬನಾತ್ಮಕವಾಗಿ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ಹುಟ್ಟಿಕೊಂಡಿತು. ಅದಕ್ಕೆ, ದೇಶಾದ್ಯಂತ ಭಾರೀ ಬೆಂಬಲವೂ ವ್ಯಕ್ತವಾಯಿತು. ಡಿಜಿಟಲ್ ಪಕ್ಷವು ನೆಲದ ಮೇಲೆ ಇಳಿಯಿತು. ಪ್ರತಿಭಟನೆಯನ್ನು ಸಂಘಟಿಸಿತು. ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿದರು.
ಇದೆಲ್ಲವೂ ಮೇಲ್ನೋಟಕ್ಕೆ ಕೇವಲ ಪರೀಕ್ಷಾ ವ್ಯವಸ್ಥೆಯ ವೈಫಲ್ಯಕ್ಕೆ ಸಂಬಂಧಿಸಿದ ವಿಷಯದಂತೆ ಕಾಣಬಹುದು. ಆದರೆ, ಭಾರತದ ಲಕ್ಷಾಂತರ ಯುವಜನರು ಬೀದಿಗಿಳಿದದ್ದು ಕೇವಲ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧವಲ್ಲ. ಅದು ಹಲವು ವರ್ಷಗಳಿಂದ ಕುದಿಯುತ್ತಿದ್ದ ಆಕ್ರೋಶದ ಸ್ಫೋಟ. ಯಾಕೆಂದರೆ, ಒಂದು ಮೀಮ್‌ನಿಂದ ಆರಂಭವಾದ ಪ್ರತಿಭಟನೆ ಕೊನೆಗೆ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ತಲುಪಿದೆ ಎಂದರೆ, ಸಮಸ್ಯೆ ಪ್ರಶ್ನೆಪತ್ರಿಕೆಯಲ್ಲಿ ಇಲ್ಲ; ಅದು ದೇಶದ ಅಭಿವೃದ್ಧಿ ಮಾದರಿಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಇಂದಿನ ಭಾರತೀಯ ಯುವಜನರು ಹಿಂದಿನ ತಲೆಮಾರಿನವರಂತೆ ಬದುಕನ್ನು ಅಳೆಯುವುದಿಲ್ಲ. ಒಂದು ಕಾಲದಲ್ಲಿ ಹಳ್ಳಿಯ ವಿದ್ಯಾರ್ಥಿಯೊಬ್ಬ ತನ್ನ ಪಕ್ಕದ ಮನೆಯ ಹುಡುಗ ಎಲ್ಲಿ ಕೆಲಸ ಪಡೆದಿದ್ದಾನೆ ಎಂಬುದನ್ನಷ್ಟೇ ನೋಡುತ್ತಿದ್ದ. ಇಂದು ಅದೇ ವಿದ್ಯಾರ್ಥಿ ತನ್ನ ಮೊಬೈಲ್ ಪರದೆಯಲ್ಲಿ ಐಐಟಿ ಟಾಪರ್‌ಗಳನ್ನು, ಐಎಎಸ್ ಯಶೋಗಾಥೆಗಳನ್ನು, ಕೋಟ್ಯಂತರ ಫಾಲೋವರ್‌ಗಳನ್ನು ಹೊಂದಿರುವ ಇನ್‌ಫ್ಲುಯೆನ್ಸರ್‌ಗಳನ್ನು, ವಿದೇಶಗಳಲ್ಲಿ ನೆಲೆಸಿರುವ ಸಹಪಾಠಿಗಳನ್ನು, ಸ್ಟಾರ್ಟ್‌ಅಪ್ ಆರಂಭಿಸಿ ಯಶಸ್ಸು ಕಂಡ ಯುವಜನರನ್ನು ಒಂದೇ ಸಮಯದಲ್ಲಿ ನೋಡುತ್ತಿದ್ದಾನೆ. ಅವನ ಕನಸುಗಳ ಜಗತ್ತು ಜಾಗತಿಕವಾಗಿದೆ. ಆದರೆ, ಅವನಿಗೆ ಲಭ್ಯವಾಗುವ ಅವಕಾಶಗಳು ಇನ್ನೂ ಸ್ಥಳೀಯವಾಗಿಯೇ ಉಳಿದಿವೆ.
ಇದೇ ಭಾರತದ ಇಂದಿನ ದುರಂತ. ಆಕಾಂಕ್ಷೆಗಳು ಜಾಗತೀಕರಣಗೊಂಡಿವೆ. ಆದರೆ, ಅವಕಾಶಗಳು ಕುಟಿಲವೂ-ಜಟಿಲವೂ ಆಗಿವೆ.
ಸಾಮಾಜಿಕ ಜಾಲತಾಣಗಳು ಯುವಜನರಿಗೆ ಕನಸುಗಳನ್ನು ತೋರಿಸುತ್ತವೆ. ಆದರೆ, ಆ ಕನಸುಗಳತ್ತ ಹೋಗುವ ದಾರಿಯನ್ನು ತೋರಿಸುವುದಿಲ್ಲ. ಸಾಂಸ್ಕೃತಿಕ ಮಾನವಶಾಸ್ತ್ರಜ್ಞ ಅರ್ಜುನ್ ಅಪ್ಪದುರೈ ಹೇಳುವಂತೆ: ಆಸೆಪಡುವ ಸಾಮರ್ಥ್ಯ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿಲ್ಲ. ಆಶೆಯನ್ನು ವಾಸ್ತವಿಕ ಗುರಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಸಮಾಜವೇ ಅಸಮಾನವಾಗಿ ಹಂಚಿದೆ. ಮೊಬೈಲ್ ಪರದೆಯಲ್ಲಿ ಬೆಟ್ಟದ ತುದಿ ಕಾಣುತ್ತದೆ; ಆದರೆ ಅಲ್ಲಿಗೆ ಏರಲು ಬೇಕಾದ ಮೆಟ್ಟಿಲನ್ನು ಯಾರೂ ನಿರ್ಮಿಸುವುದಿಲ್ಲ. ಈ ವೈರುಧ್ಯವೇ ಭಾರತದ ಯುವಜನರನ್ನು ಕೋಚಿಂಗ್ ಸೆಂಟರ್‌ಗಳ ಅತಿದೊಡ್ಡ ಮಾರುಕಟ್ಟೆಗೆ ತಳ್ಳಿದೆ.
ಇದನ್ನು ಓದಿದ್ದೀರಾ?: ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಪಾತ್ರಧಾರಿ, ಆರ್‌ಎಸ್‌ಎಸ್ ಸೂತ್ರಧಾರಿ!
2025ರ ವೇಳೆಗೆ ಸುಮಾರು 7.2 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದ ಕೋಚಿಂಗ್ ಉದ್ಯಮವು ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 17.8 ಬಿಲಿಯನ್ ಡಾಲರ್‌ಗಳಿಗೆ ಬೆಳೆಯಲಿದೆ ಎನ್ನಲಾಗುತ್ತಿದೆ. ಸರ್ಕಾರ ಈ ಬೆಳವಣಿಗೆಯನ್ನು ಶಿಕ್ಷಣ ಕ್ಷೇತ್ರದ ಸಾಧನೆಯೆಂದು ಬಿಂಬಿಸುತ್ತಿದೆ. ಆದರೆ, ಅದು ಸಾಧನೆಯಲ್ಲ; ಅದು ಅವಕಾಶಗಳ ಕೊರತೆಯ ಮೇಲೆ ಕಟ್ಟಿದ ಉದ್ಯಮ. ಕೋಟಾದಂತಹ ನಗರಗಳಿಗೆ ಪ್ರತಿವರ್ಷ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ಬರುತ್ತಾರೆ. ಆದರೆ, ಯಶಸ್ಸು ಪಡೆಯುವವರ ಪ್ರಮಾಣ ಅತೀ ಕಡಿಮೆ. ಉಳಿದವರ ಕನಸುಗಳು ಮಾರುಕಟ್ಟೆಗೆ ಲಾಭವನ್ನಷ್ಟೇ ಕೊಡುತ್ತವೆ.
ಪ್ರತಿ ಪ್ರಶ್ನೆಪತ್ರಿಕೆ ಸೋರಿಕೆಯೂ ಒಂದು ಪರೀಕ್ಷೆಯನ್ನು ಮಾತ್ರ ಹಾಳು ಮಾಡುವುದಿಲ್ಲ. ಅದು ಸಾವಿರಾರು ಕುಟುಂಬಗಳು ವರ್ಷಗಳಿಂದ ಕಟ್ಟಿಕೊಂಡಿದ್ದ ನಂಬಿಕೆಯನ್ನೂ ನಾಶಗೈಯುತ್ತವೆ.
ಆದರೆ, ಸರ್ಕಾರವು ಕೋಚಿಂಗ್ ಸೆಂಟರ್‌ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಯುವಜನರ ಪ್ರಗತಿಯ ಸೂಚಕವೆಂದು ನೋಡುತ್ತಿದೆ. ಪರೀಕ್ಷೆಗಳಿಗೆ ಹೆಚ್ಚುತ್ತಿರುವ ಅರ್ಜಿಗಳನ್ನು ಅದು ಅವಕಾಶಗಳು ಹೆಚ್ಚುತ್ತಿವೆ ಎಂಬ ಸಾಕ್ಷಿಯೆಂದು ಪರಿಗಣಿಸಿದೆ. ವಾಸ್ತವದಲ್ಲಿ, ಮುಚ್ಚಿಹೋಗುತ್ತಿರುವ ಅವಕಾಶಗಳ ಮೇಲೆ ಹೆಚ್ಚುತ್ತಿರುವ ಒತ್ತಡ ಎಂಬ ವಾಸ್ತವವನ್ನು ಮರೆ ಮಾಡುತ್ತಿದೆ. ಈ ಅವಕಾಶಗಳ ಕೊರತೆಯು ಯುವಜನರಲ್ಲಿ ಮುಚ್ಚಿದ ‘ಕುಕ್ಕರ್’ನೊಳಗೆ ಒತ್ತಡ ಹೆಚ್ಚುತ್ತಲೇ ಇರುವಂತೆ ಕಾಣುತ್ತಿತ್ತು. ಒಂದು ಪ್ರಶ್ನೆಪತ್ರಿಕೆ ಸೋರಿಕೆಯು, ಆ ಕುಕ್ಕರ್‌ನ ಮುಚ್ಚಳವನ್ನು ಹಾರಿಸಿತು. ಯುವಜನರ ತಾಳ್ಮೆಯ ಕಟ್ಟೆ ಹೊಡೆಯಿತು. ಬೀದಿಗಿಳಿಯುವಂತೆ ಮಾಡಿತು.
ಒಂದೆಡೆ, ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಉದ್ಯೋಗ ಕ್ಷೇತ್ರವೂ ದುರಂತದ ಅಂಚಿನಲ್ಲಿದೆ. 2025ರ ‘ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ’ಯ ಪ್ರಕಾರ ದೇಶದ ಒಟ್ಟಾರೆ ನಿರುದ್ಯೋಗ ದರ ಕೇವಲ 3.1%. ಆದರೆ, ಪದವೀಧರರಲ್ಲಿ ಅದು 11.2%ಗೆ ಏರಿದೆ. ಸ್ನಾತಕೋತ್ತರ ಪದವೀಧರರ ಸ್ಥಿತಿಯೂ ಹೆಚ್ಚು ಭಿನ್ನವಾಗಿಲ್ಲ. ಗ್ರಾಮೀಣ ಭಾಗದ ಪದವೀಧರರು ಇನ್ನೂ ಹೆಚ್ಚು ಸಂಕಷ್ಟದಲ್ಲಿದ್ದಾರೆ.
ಅರ್ಥಶಾಸ್ತ್ರದ ಸಾಮಾನ್ಯ ತತ್ವ ಏನೆಂದರೆ ಶಿಕ್ಷಣ ಹೆಚ್ಚಾದಂತೆ ಉದ್ಯೋಗಾವಕಾಶ ಹೆಚ್ಚಬೇಕು. ಆದರೆ, ಭಾರತದಲ್ಲಿನ ಚಿತ್ರಣ ತಲೆಕೆಳಗಾಗಿದೆ. ಶಿಕ್ಷಣ ಹೆಚ್ಚಾದಂತೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ, ನಿರುದ್ಯೋಗ ಹೆಚ್ಚುತ್ತಿದೆ. ಪದವಿ ಈಗ ಉದ್ಯೋಗದ ಭರವಸೆಯಲ್ಲ; ಅದು ಉದ್ಯೋಗಕ್ಕಾಗಿ ಕಾಯುವ ಇನ್ನೊಂದು ಪ್ರಮಾಣಪತ್ರವಷ್ಟೇ ಆಗಿಹೋಗಿದೆ.
ಇದರಿಂದ ಲಕ್ಷಾಂತರ ಯುವಜನರು ಒಂದೇ ಚಕ್ರದಲ್ಲಿ ಸಿಲುಕಿದ್ದಾರೆ. ಮತ್ತೊಂದು ಪದವಿ. ಮತ್ತೊಂದು ಕೋಚಿಂಗ್. ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆ. ಮತ್ತೊಂದು ವಿಫಲತೆ – ಇವೇ ಯುವಜನರನ್ನು ಸುರುಳಿಯಂತೆ ಸುತ್ತಿ ಬಿಸಾಡುತ್ತಿವೆ. ಈಗ, ಒಂದು ತಲೆಮಾರು ಕೆಲಸ ಸಿಗದ ಕಾರಣ ಬದುಕನ್ನು ಮುಂದೂಡುತ್ತಾ, ಮತ್ತೊಂದು ಪರೀಕ್ಷೆಯ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತ, ಬದುಕನ್ನೇ ಕಳೆದುಕೊಳ್ಳುತ್ತಿದೆ.
ಭಾರತದಲ್ಲಿರುವ ಒಟ್ಟು ನಿರುದ್ಯೋಗಿಗಳಲ್ಲಿ ಸುಮಾರು 83%ರಷ್ಟು ಯುವಜನರೇ ಆಗಿದ್ದಾರೆ. 2000ರಲ್ಲಿ ನಿರುದ್ಯೋಗಿಗಳಲ್ಲಿದ್ದ ವಿದ್ಯಾವಂತ ಯುವಜನರ ಪ್ರಮಾಣ 35.2% ಇದ್ದರೆ, 2022ರ ವೇಳೆಗೆ ಅದು 65.7%ಕ್ಕೆ ಏರಿಕೆ ಕಂಡಿದೆ. ಅಂದರೆ, ಶಿಕ್ಷಣದ ಮೇಲೆ ಕುಟುಂಬಗಳು ಹೆಚ್ಚು ಹೂಡಿಕೆ ಮಾಡುತ್ತಿವೆ; ಆದರೆ ಆ ಹೂಡಿಕೆಗೆ ಸಿಗುವ ಪ್ರತಿಫಲ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
ಹಲವು ದಶಕಗಳಿಂದ, ದೇಶದ ಮಧ್ಯಮ ವರ್ಗವು ‘ಚೆನ್ನಾಗಿ ಓದು, ಕಷ್ಟಪಡು, ನಿನ್ನ ಜೀವನ ಬದಲಾಗುತ್ತದೆ’ ಎಂಬ ಭರವಸೆಯ ಮೇಲೆಯೇ ತನ್ನ ಮಕ್ಕಳ ಭವಿಷ್ಯವನ್ನು ಕಟ್ಟಿಕೊಂಡಿತ್ತು. ಇಂದು ಆ ಭರವಸೆ ಕುಸಿಯುತ್ತಿದೆ. ಪರಿಶ್ರಮಕ್ಕೆ ಪ್ರತಿಫಲ ಸಿಗುವುದಿಲ್ಲ ಎಂಬ ಭಾವನೆ ಸಮಾಜದಲ್ಲಿ ಗಟ್ಟಿಯಾಗುತ್ತಿದೆ. ಇದರ ಪರಿಣಾಮವಾಗಿ, ಆಕ್ರೋಶವೂ ಮಡುಗಟ್ಟುತ್ತಿದೆ.
ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರತಿಕ್ರಿಯೆಯೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಆರಂಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಒಂದು ಕೇಂದ್ರಕ್ಕೆ ಮಾತ್ರ ಸೀಮಿತ ಎಂದು ಹೇಳಲಾಯಿತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವ್ಯವಸ್ಥೆಯನ್ನು ಯಶಸ್ಸಿನ ಮಾದರಿಯೆಂದು ಬಿಂಬಿಸಲಾಯಿತು. ವರ್ಷಕ್ಕೆ ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳನ್ನು ಒಂದೇ ವ್ಯವಸ್ಥೆಯ ಮೂಲಕ ಪರೀಕ್ಷಿಸುವುದನ್ನು ಆಡಳಿತಾತ್ಮಕ ಸಾಧನೆಯೆಂದು ಪ್ರಶಂಸಿಸಲಾಯಿತು. ಆದರೆ, ಇದೇ ಕೇಂದ್ರೀಕೃತ ವ್ಯವಸ್ಥೆಯು ಒಂದು ತಪ್ಪಿನಿಂದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವೇ ಅಲುಗಾಡುವಂತಾಯಿತು.
ಸಮಸ್ಯೆ ಪರೀಕ್ಷಾ ವ್ಯವಸ್ಥೆ ಮಾತ್ರವಲ್ಲ. ದೇಶದ ಬೆಳವಣಿಗೆಯ ಮಾದರಿಯೂ ಆಗಿದೆ. ಉತ್ಪಾದನಾ ವಲಯ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಗುಣಮಟ್ಟದ ಅರ್ಹತೆಗೆ ತಕ್ಕ ಉದ್ಯೋಗಗಳು ಹೆಚ್ಚುತ್ತಿಲ್ಲ. ಯುವಜನರ ಕೌಶಲ್ಯ ಮತ್ತು ಮಾರುಕಟ್ಟೆಯ ಬೇಡಿಕೆಯ ನಡುವೆ ಅಂತರ ಹೆಚ್ಚುತ್ತಿದೆ. ಪರಿಣಾಮವಾಗಿ ಪ್ರತಿಯೊಂದು ಸರ್ಕಾರಿ ಪರೀಕ್ಷೆಯೂ ಪ್ರತಿಭೆಯ ಪರೀಕ್ಷೆಯಾಗಿ ಉಳಿಯದೆ, ಕೊರತೆಯಲ್ಲಿರುವ ಅವಕಾಶಗಳಿಗಾಗಿ ನಡೆಯುವ ಪಡಿತರ ವ್ಯವಸ್ಥೆಯಾಗಿ ಮಾರ್ಪಟ್ಟಿದೆ.
ಈ ಲೇಖನ ಓದಿದ್ದೀರಾ?: ದೇಶದ ಉನ್ನತ ಹುದ್ದೆಗಳಲ್ಲಿ ಯಾರಿದ್ದಾರೆ? ದಲಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ಬದಿಗೆ ಸರಿಸಿದ ಮೀಸಲಾತಿಯ ಸತ್ಯ
ಶಿಕ್ಷಣ ಸಚಿವರ ರಾಜೀನಾಮೆ ಒಂದು ರಾಜಕೀಯ ಘಟನೆ ಮಾತ್ರ. ಕಠಿಣ ಪರೀಕ್ಷಾ ಅಕ್ರಮ ತಡೆ ಕಾಯ್ದೆ ತರುವುದು ಆಡಳಿತಾತ್ಮಕ ಕ್ರಮ ಮಾತ್ರ. ಆದರೆ, ಇವುಗಳಿಂದ ಭಾರತದ ಯುವಜನರ ಸಂಕಷ್ಟ ಪರಿಹಾರವಾಗುವುದಿಲ್ಲ. ‘ಭಾರತದ ಆರ್ಥಿಕ ಬೆಳವಣಿಗೆಯ ಮಾದರಿ ತನ್ನ ಯುವಜನರಿಗೆ ಗೌರವಯುತ ಉದ್ಯೋಗಗಳನ್ನು ಸೃಷ್ಟಿಸುತ್ತಿದೆಯೇ?’ ಎಂಬ ಮೂಲ ಪ್ರಶ್ನೆ ಇನ್ನೂ ಹಾಗೆಯೇ ಉಳಿದಿದೆ.
ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಸಿಗುವವರೆಗೂ ಮತ್ತೊಂದು ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತದೆ. ಮತ್ತೊಂದು ಪ್ರತಿಭಟನೆ ನಡೆಯುತ್ತದೆ. ಮತ್ತೊಬ್ಬ ಸಚಿವರು ರಾಜೀನಾಮೆ ನೀಡಬಹುದು. ಆದರೆ, ಯುವಜನರ ಭವಿಷ್ಯ ಬದಲಾಗುವುದಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ದೇಶದ ಯುವಜನರು ‘ತಮ್ಮ ಪರಿಶ್ರಮಕ್ಕೂ ಪ್ರತಿಭೆಗೂ ಮೌಲ್ಯವಿಲ್ಲ’ ಎಂಬ ನಿರ್ಣಯಕ್ಕೆ ಬರುತ್ತಿದ್ದಾರೆ. ಹೀಗೆ, ಯುವಜನರು ತಮ್ಮ ಕನಸುಗಳನ್ನು ಕಳೆದುಕೊಂಡರೆ, ಅವರು ಕೇವಲ ಉದ್ಯೋಗಗಳನ್ನು ಮಾತ್ರ ಕಳೆದುಕೊಳ್ಳುವುದಿಲ್ಲ; ಅವರ ಭವಿಷ್ಯವನ್ನೇ ಕಳೆದುಕೊಳ್ಳುತ್ತಾರೆ.
ಅಂದರೆ, ಇಲ್ಲಿ ಸಮಸ್ಯೆ ಕೇವಲ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಮಾತ್ರ ಇಲ್ಲ, ವ್ಯವಸ್ಥೆ ಮೇಲಿನ ವಿಶ್ವಾಸದ ಸೋರಿಕೆಯಲ್ಲಿಯೂ ಇದೆ. ಆ ವಿಶ್ವಾಸವನ್ನು ಮರಳಿ ಕಟ್ಟುವ ಜವಾಬ್ದಾರಿ ಕೇವಲ ಶಿಕ್ಷಣ ಇಲಾಖೆಯದ್ದಲ್ಲ; ದೇಶದ ಸಂಪೂರ್ಣ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯ ಮೇಲಿದೆ.



