ಈ ದಿನ ಸಂಪಾದಕೀಯ | ಕಷ್ಟಕ್ಕಾಗದ ಮೋದಿ, ಈಗ ಇಷ್ಟಪಟ್ಟು ಮೈಮೇಲೆ ಬೀಳುತ್ತಿದ್ದಾರೆ ಯಾಕೆ?

Date:

ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಗೃಹಸಚಿವ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಸರತಿಯಂತೆ ಬಂದು ಹೋಗುತ್ತಿದ್ದಾರೆ. ನಾವು ಶಂಕುಸ್ಥಾಪನೆ ಮಾತ್ರ ಮಾಡುತ್ತಿಲ್ಲ ಉದ್ಘಾಟನೆಯನ್ನೂ ಮಾಡುತ್ತಿದ್ದೇವೆ ಎಂದು ತೋರಿಸಲು ಅಪೂರ್ಣ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡುತ್ತಿದ್ದಾರೆ.

ʼರಾಜ್ಯಕ್ಕಿಂದು ಮೋದಿ ಆಗಮನʼ ಎಂಬ ತಲೆಬರಹ ರಾಜ್ಯದ ಸಮೂಹ ಮಾಧ್ಯಮಗಳಲ್ಲಿ ತಿಂಗಳಲ್ಲಿ ಕನಿಷ್ಠ ಎರಡು ಬಾರಿ  ಕಾಣಿಸಿಕೊಳ್ಳುತ್ತಿದೆ. 2022ರ ಆರಂಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಮೈಸೂರು, ಮಂಗಳೂರು, ಬೆಂಗಳೂರಿನಲ್ಲಿ ಶಂಕುಸ್ಥಾಪನೆ, ಉದ್ಘಾಟನೆಗಳ ನೆಪದಲ್ಲಿ ಬಂದು ಹೋಗಿದ್ದಾರೆ. ಆ ಮೂಲಕ ಚುನಾವಣಾ ಪ್ರಚಾರಕ್ಕೆ ಅನಧಿಕೃತ ಚಾಲನೆ ಕೊಟ್ಟಿದ್ದರು. ಈ ವರ್ಷ ಆರಂಭವಾಗುತ್ತಿದ್ದಂತೆ ತಿಂಗಳಿಗೆ ಎರಡು ಸಲ ಬಂದು ಅಪೂರ್ಣ ಕಟ್ಟಡ, ರಸ್ತೆಗಳನ್ನು ಉದ್ಘಾಟಿಸಿ ಭರ್ಜರಿ ಚುನಾವಣಾ ಭಾಷಣ ಬಿಗಿದು ಹೋಗುತ್ತಿದ್ದಾರೆ. ಇದೇ ಮಾರ್ಚ್‌ ಎರಡನೇ ವಾರ ಮಂಡ್ಯಕ್ಕೆ ಬಂದಿದ್ದ ಪ್ರಧಾನಿ ಮೋದಿ ಇನ್ನೂ ಪೂರ್ಣಗೊಳ್ಳದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಮಂಡ್ಯದಲ್ಲಿ ಉದ್ಘಾಟಿಸಿ ರೋಡ್‌ ಶೋ, ಸಮಾವೇಶ ನಡೆಸಿ ಹೋದರು.

ಮತ್ತೆ ನಾಳೆ (ಮಾರ್ಚ್‌ 25) ರಾಜ್ಯಕ್ಕೆ ಬರಲಿರುವ ಪ್ರಧಾನಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ನವೀಕರಣಗೊಂಡ ಆವರಣವನ್ನು ಉದ್ಘಾಟಿಸಲಿದ್ದಾರೆ. ಕೆ.ಆರ್‌ಪುರ-ವೈಟ್‌ಫೀಲ್ಡ್‌ಗೆ ಸಂಪರ್ಕಿಸುವ ಮೆಟ್ರೋ ಸೇತುವೆ ಉದ್ಘಾಟಿಸಲಿದ್ದಾರೆ. ಆದರೆ, ಆ ಸೇತುವೆಯ ಮೇಲೆ ಮೆಟ್ರೊ ರೈಲು ಓಡುವುದಕ್ಕೆ ಇನ್ನೂ ಕಾಯಬೇಕಿದೆ. ಏಕೆಂದರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಅಲ್ಲಿಗೆ ಮೂರು ತಿಂಗಳಲ್ಲಿ ಏಳು ಬಾರಿ ರಾಜ್ಯಕ್ಕೆ ಬಂದಂತಾಯ್ತು!

ಕೇವಲ ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ಉದ್ದೇಶದಿಂದ ಪದೇ ಪದೇ ರಾಜ್ಯಕ್ಕೆ ಬರುತ್ತಿರುವ ಪ್ರಧಾನಿ ಮೋದಿ ರಾಜ್ಯ ಸಂಕಷ್ಟದಲ್ಲಿದ್ದಾಗ ಬರಲಿಲ್ಲ ಯಾಕೆ? ಇದು ರಾಜ್ಯದ ಜನ ಕೇಳುತ್ತಿರುವ ಪ್ರಶ್ನೆ. ಜೊತೆಗೆ ಹೀಗೆ ತಿಂಗಳಿಗೆ ಎರಡು ಮೂರು ಬಾರಿ ಬಂದು ರೋಡ್‌ ಶೋ ನಡೆಸುವುದಕ್ಕೆ ತಗಲುವ ನೂರಾರು ಕೋಟಿ ಖರ್ಚು ಜನರ ತೆರಿಗೆಯ ಹಣ.

ಅದನ್ನು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರದ ಆಸೆಗಾಗಿ ಪೋಲು ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಯಲ್ಲಿ ಹುರುಳಿದೆ. ಪ್ರತಿ ಸಲ ಪ್ರಧಾನಿ ಬಂದು ಹೋಗುವಾಗ ಕನಿಷ್ಠ ಐವತ್ತು ಕೋಟಿಯಷ್ಟು ಖರ್ಚಾಗುತ್ತಿದೆ. ನಡುವೆ ಜನರಿಗೆ ಮಾರ್ಗ ಬಂದ್‌, ಟ್ರಾಫಿಕ್‌ ಕಿರಿಕಿರಿ ಬೇರೆ. ಹಾಗಿದ್ದರೆ ರಾಜ್ಯ ಕಷ್ಟದಲ್ಲಿದ್ದಾಗ ಪ್ರಧಾನಿ ಯಾಕೆ ಬರಲಿಲ್ಲ? ರಾಜ್ಯದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿತ್ತು. ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸಿಕೊಟ್ಟ ಮತದಾರರ ನೆನಪು ಮೋದಿಗೆ ಬರಲಿಲ್ಲವೇ? ರಾಜ್ಯದ ಜನರ ಬಗ್ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಹೈಕಮಾಂಡ್‌ಗೆ ಯಾಕಿಷ್ಟು ನಿರ್ಲಕ್ಷ್ಯ? ಇದು ಕೇವಲ ವಿರೋಧ ಪಕ್ಷದ ಆರೋಪವಲ್ಲ. ಜನ ಸಾಮಾನ್ಯರ ಪ್ರಶ್ನೆ.

2019 ಆಗಸ್ಟ್‌ ತಿಂಗಳಿನಲ್ಲಿ ನೂರು ವರ್ಷಗಳಲ್ಲಿಯೇ ಅತ್ಯಂತ ಹೆಚ್ಚು ಮಳೆ ಸುರಿದ ಪರಿಣಾಮವಾಗಿ ರಾಜ್ಯದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಭೂಕುಸಿತ ಆಸ್ತಿ ಪಾಸ್ತಿ ಹಾನಿ ಸಂಭವಿಸಿತ್ತು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಕೃಷ್ಣಾ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋದವು. ಮನೆಮಾರು ಕಳೆದುಕೊಂಡು ಬೀದಿಗೆ ಬಿದ್ದ ಜನರಿಗೆ ಸಾಂತ್ವನ ಹೇಳಲು, ನೆರವಿಗೆ ಧಾವಿಸಲು ರಾಜ್ಯದಲ್ಲಿ ಸರ್ಕಾರ ಎಂಬುದರ ಸುಳಿವಿರಲಿಲ್ಲ!

14 ತಿಂಗಳು ಅಸ್ತಿತ್ವದಲ್ಲಿದ್ದ ಜೆಡಿಎಸ್‌- ಕಾಂಗ್ರೆಸ್‌ ಸರ್ಕಾರವನ್ನು ಆಪರೇಷನ್‌ ಕಮಲ ಎಂಬ ದುಷ್ಕೃತ್ಯದ ಮೂಲಕ ಉರುಳಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ವಾರ ಕಳೆದಿರಲಿಲ್ಲ. ಭೀಕರ ಮಳೆ ಶುರುವಾಗಿತ್ತು. ಇನ್ನೂ ಪೂರ್ಣ ಪ್ರಮಾಣದ ಸರ್ಕಾರ ರಚನೆ ಆಗಿರಲಿಲ್ಲ. ಮಳೆ ಸಂತ್ರಸ್ತ ಪ್ರದೇಶಗಳಿಗೆ ಯಡಿಯೂರಪ್ಪ ಒಬ್ಬರೇ ಎಡತಾಕಿದರು. ಯಾವ ಶಾಸಕರೂ ತಮ್ಮ ಕ್ಷೇತ್ರದ ಜನರಿಗೆ ಸ್ಪಂದಿಸಲಿಲ್ಲ. ‘ಆಪರೇಷನ್ ಕಮಲ’ಕ್ಕೆ ಮಾರಿಕೊಂಡು ರಾಜೀನಾಮೆ ನೀಡಿದ್ದ ಕಾರಣ ರಾಜ್ಯದ 17 ಕ್ಷೇತ್ರಗಳಲ್ಲಿ ಶಾಸಕರೇ ಇರಲಿಲ್ಲ. ಆದರೆ, ಪ್ರವಾಹ ಇಳಿಯುತ್ತಿದ್ದಂತೆ ನಡೆದ ಉಪಚುನಾವಣೆಯಲ್ಲಿ ಪಕ್ಷಾಂತರ ಮಾಡಿ ಬಿಜೆಪಿಯಿಂದ ಸ್ಪರ್ಧಿಸಿದ್ದ 14 ಮಂದಿಯನ್ನು ಜನ ಗೆಲ್ಲಿಸಿದ್ರು! ಆದರೆ ಪ್ರವಾಹ ಪೀಡಿತ ಜನರಿಗೆ ಸಿಕ್ಕಿದ್ದೇನು? 

ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚುವಲ್ಲಿ ವಿಳಂಬ ಮಾತ್ರವಲ್ಲ, ಮಲತಾಯಿ ಧೋರಣೆ ತಳೆದಿತ್ತು ಎಂಬುದಕ್ಕೆ ಕೇಂದ್ರ ನೀಡಿದ ಪರಿಹಾರದ ಮೊತ್ತವೇ ಸಾಕ್ಷಿ. 2019ರಿಂದ 2022ರವರೆಗೆ ರಾಜ್ಯದಲ್ಲಿ ಮಳೆಯಿಂದ ಆದ ನಷ್ಟ ಸುಮಾರು ರೂ.1,31,848  ಕೋಟಿ, ರಾಜ್ಯ ಸರ್ಕಾರ ಕೇಂದ್ರದಿಂದ ಕೇಳಿದ್ದು ರೂ. 8,275.99 ಕೋಟಿ. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ ರೂ. 3,965.43 ಕೋಟಿ!

2020-21ರಲ್ಲಿ ಕೊರೋನಾ ಸಾಂಕ್ರಾಮಿಕದಿಂದ ತತ್ತರಿಸುತ್ತಿದ್ದಾಗ ಆಕ್ಸಿಜನ್‌, ಬೆಡ್‌, ಆಸ್ಪತ್ರೆ ಸಿಗದೇ ಜನ ಹಾದಿ ಬೀದಿಯಲ್ಲಿ ಸಾಯುತ್ತಿರುವಾಗ ಒಕ್ಕೂಟ ಸರ್ಕಾರ ಇತ್ತ ತಿರುಗಿಯೂ ನೋಡಿರಲಿಲ್ಲ. ಭ್ರಷ್ಟಾಚಾರದ ನಗ್ನ ನರ್ತನ ನಡೆದಿತ್ತು. ಚಾಮರಾಜನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ಮಂದಿ ಕೊರೋನಾ ಪೀಡಿತರು ಆಕ್ಸಿಜನ್‌ ಕೊರತೆಯಿಂದ ಒಂದೇ ರಾತ್ರಿ ಸಾವನ್ನಪ್ಪಿದ ದುರಂತ ಜರುಗಿತ್ತು. ಆಡಳಿತಯಂತ್ರ ಮತ್ತು ಸಚಿವರ ದಿವ್ಯ ನಿರ್ಲಕ್ಷ್ಯಕ್ಕೆ ಬಡಜನರ ಜೀವಗಳು ಬಲಿಯಾದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಸಂತ್ರಸ್ತ ಕುಟುಂಬಕ್ಕೆ ಸರಿಯಾದ ಪರಿಹಾರ ನೀಡುವ ಕನಿಷ್ಠ ಮಾನವೀಯತೆಯನ್ನೂ ಡಬಲ್ ಎಂಜಿನ್ ಸರ್ಕಾರ ತೋರಲಿಲ್ಲ.

ಈಗ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿಜೆಪಿ ನಡ್ಡಾ, ಗೃಹಸಚಿವ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಸರತಿಯಂತೆ ಬಂದು ಹೋಗುತ್ತಿದ್ದಾರೆ. ನಾವು ಶಂಕುಸ್ಥಾಪನೆ ಮಾತ್ರ ಮಾಡುತ್ತಿಲ್ಲ ಉದ್ಘಾಟನೆಯನ್ನೂ ಮಾಡುತ್ತಿದ್ದೇವೆ ಎಂದು ತೋರಿಸಲು ಅಪೂರ್ಣ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡುತ್ತಿದ್ದಾರೆ. ಮತ್ತೆ ಐದು ವರ್ಷ ಅಧಿಕಾರ ಕೊಡಿ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆ ಎಂದು ಅಮಿತ್‌ ಶಾ ಹೇಳುತ್ತಿದ್ದಾರೆ. ಇದರ ನಡುವೆ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಭಾಷಣದ ನಡುವೆಯೇ ಬಡ ಮಹಿಳೆಯರು ʼಭಾಷಣ ಸಾಕು ಸಿಲಿಂಡರ್‌ ಬೆಲೆ ಇಳಿಸಿʼ ಎಂದು ಏರು ದನಿಯಲ್ಲಿಯೇ ಕೇಳಲು ಶುರು ಮಾಡಿದ್ದಾರೆ. ಗೆಲ್ಲಿಸಿ ಕಳಿಸಿದ ಜನರ ಕಷ್ಟ ಕಣ್ಣೀರಿಗೆ ಆಗದ ಮೋದಿ, ಈಗ ಇಷ್ಟಪಟ್ಟು ಮೈಮೇಲೆ ಬೀಳುತ್ತಿದ್ದಾರೆ ಯಾಕೆ?

ಈ ದಿನ ಸಂಪಾದಕೀಯ
+ posts

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಜನಪ್ರಿಯ

ಈ ರೀತಿಯ ಹೆಚ್ಚು
Related

ವೃತ್ತಿಯಲ್ಲಿ ಭಿಕ್ಷುಕನಾದರೂ ಪತ್ನಿ ಸಲಹುವುದು ಪತಿ ಕರ್ತವ್ಯ ಎಂದ ಪಂಜಾಬ್-ಹರಿಯಾಣ ಹೈಕೋರ್ಟ್

ಪಂಜಾಬ್‌- ಹರಿಯಾಣ ಹೈಕೋರ್ಟ್ ಮೂಲಕ ಮೇಲ್ಮನವಿ ಸಲ್ಲಿಸಿದ್ದ ಪತಿ ಪತ್ನಿಗೆ ಪ್ರತಿ ತಿಂಗಳು...

ಕೋಮು ಉದ್ವಿಗ್ನತೆ ಹಿನ್ನೆಲೆ ಅಮಿತ್‌ ಶಾ ಬಿಹಾರ ಭೇಟಿ ರದ್ದು; ಜನ ಬಾರದ ಕಾರಣ ವಾಪಸ್‌ ಎಂದ ಜೆಡಿಯು

ಏಪ್ರಿಲ್‌ 2ರಂದು ನಳಂದ ಜಿಲ್ಲೆಯ ಸಸರಾಮ್‌ನಲ್ಲಿ ಕಾರ್ಯಕ್ರಮ ನಿಗದಿ ನಳಂದ ಜಿಲ್ಲೆಯಲ್ಲಿ ಬಿಜೆಪಿಗೆ...

ತುಮಕೂರು | ಕೊಳಗೇರಿ ಪ್ರದೇಶಗಳಲ್ಲಿ ಬೀದಿ ಸಭೆಗಳ ಮೂಲಕ ಮತದಾನ ಜಾಗೃತಿಗೆ ನಿರ್ಣಯ

ಕೊಳಗೇರಿ ಜನರ ಮತ, ವಸತಿ ಮತ್ತು ಉದ್ಯೋಗ ಖಾತ್ರಿಗಾಗಿ ಜಾಗೃತಿ ಅಭಿಯಾನ ಕೊಳಗೇರಿ...

ರಾಮನಗರ | ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಪುನೀತ್‌ ಕೆರೆಹಳ್ಳಿ ಬಂಧನಕ್ಕೆ ಆಗ್ರಹ‌

ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಹಿಂದೂ ಕಾರ್ಯಕರ್ತರ ದಾಳಿ ಜಾನುವಾರು ರಕ್ಷಣೆ ಸಂಬಂಧ...