ಈ ದಿನ ಸಂಪಾದಕೀಯ| ಶ್ರೀರಾಮ ‘ಅಸ್ಪೃಶ್ಯ’ರ ಮೈಮೇಲೆ ಹಚ್ಚೆಯಾದ- ಸ್ಥಾವರ ಇಳಿದು ಜಂಗಮನಾದ

Date:

ಇಂದು ಶ್ರೀರಾಮನವಮಿ. ಶೀರಾಮನ ಭವ್ಯ ಮಂದಿರವನ್ನು ಕಟ್ಟಲು ಮೂವತ್ತು ವರ್ಷಗಳ ಹಿಂದೆ ಬಾಬರಿ ಮಸೀದಿ ಕೆಡವಲಾಯಿತು. ಸಾವಿರಾರು ಸಾವುನೋವುಗಳಿಗೆ, ಅಂತ್ಯವಿಲ್ಲದ ರೋಷದ್ವೇಷಕ್ಕೆ ದಾರಿ ಮಾಡಲಾಯಿತು. ರಾಮನ ಗುಡಿಯೊಳಕ್ಕೆ ಬಿಟ್ಟುಕೊಳ್ಳದ ಮೇಲರಿಮೆಗಳನ್ನು ಧಿಕ್ಕರಿಸಿ, ರಾಮನಾಮವನ್ನು ಅಡಿಯಿಂದ ಮುಡಿತನಕ ಹಚ್ಚೆ ಹೊಯ್ಯಿಸಿಕೊಂಡು ಅಸ್ಮಿತೆಗಾಗಿ ಹಂಬಲಿಸಿದ ಅಸ್ಪೃಶ್ಯರ ಕಥೆಯನ್ನು ನೆನೆಯಬೇಕಿದೆ ಇಂದು.

ಗುಡಿಯಿಂದ ನಮ್ಮನ್ನು ದೂರ ಇಟ್ಟರೇನಂತೆ,…ಗುಡಿಯೊಳಗಣ ನಿಮ್ಮ ಅದೇ ದೇವರು ನಮ್ಮ ಮೈ ಮನಸುಗಳ ಮೇಲಿನ ಹಚ್ಚೆಯಾಗಿ ಶ್ರದ್ಧೆಯಾಗಿ ಹಗಲಿರುಳು ನಮ್ಮೊಡನಿದ್ದಾನೆ ನೋಡಿರಯ್ಯಾ ಎಂದು ಸೋತು ಗೆದ್ದು ಅಣಕಿಸಿದವರ ವ್ಯಥೆ.
ಶಿಲಾಮೂರ್ತಿ ರಾಮನ ಗೊಡವೆಯೇ ಬೇಡೆಂದು ಆತನನ್ನು ನಿರಾಕಾರನನ್ನಾಗಿಯೂ ನಿರ್ಗುಣನನ್ನಾಗಿಯೂ ಪ್ರೀತಿಸಿ ಪೂಜಿಸಿದ ಸಹನಶೀಲರು ಪ್ರಗತಿಪರರು ಪ್ರಬುದ್ಧರು ಛತ್ತೀಸಗಢದ ಚಮ್ಮಾರರು. ಇವರೇ ಮಧ್ಯಭಾರತದ ರಾಮನಾಮಿಗಳು. ಜಾತಿವ್ಯವಸ್ಥೆಯ ಕ್ರೌರ್ಯದ ವಿರುದ್ಧ ಬಂಡೆದ್ದು ಬದುಕಿ ಬಾಳಿದ ಈ ಅನನ್ಯ ಪ್ರತಿಭಟನೆಯ ಪಂಥ ಈಗ ಗತದ ಕತ್ತಲಿಗೆ ಸರಿದಿದೆ.

ಮಂದಿರ ಮೂರ್ತಿಗಳ ಗೊಡವೆ ಬಿಟ್ಟ ರಾಮನಾಮಿಗಳು ತುಳಸೀದಾಸರ ರಾಮಚರಿತ ಮಾನಸ ಗ್ರಂಥದ ಸುತ್ತ ಕುಳಿತು ಭಜನೆ ಮಾಡಿದರು. ಇವರ ಮೈಮೇಲಿನ ಹಚ್ಚೆಯಾದ ರಾಮನು ಜಂಗಮನೇ ಆಗಿಬಿಟ್ಟ. ರಾಮನನ್ನು ಸ್ಥಾವರವಾಗಿ ನೆಲೆಗೊಳಿಸಿದ ‘ಮೇಲ್ಜಾತಿ’ ಗಳನ್ನು ರಾಮನಾಮಿಗಳು ಅಪ್ರತಿಭಗೊಳಿಸಿಬಿಟ್ಟಿದ್ದರು. ನಖಶಿಖಾಂತ ರಾಮನಾಮದ ಹಚ್ಚೆ ಹೊಯ್ಯಿಸಿಕೊಂಡರು. ಮೈಮುರಿವ ದುಡಿತ ಮತ್ತು ಜಾತಿವ್ಯವಸ್ಥೆಯ ದಮನಕ್ಕೆ ಸಿಕ್ಕಿದ ಈ ಜನ ತಮ್ಮದೇ ಸಮಸಮಾಜದ ಕಿರು ಜಗತ್ತುಗಳ ಸೃಷ್ಟಿಸಿಕೊಂಡರು. ರಾಮನಾಮ ಬರೆದ ದುಪ್ಪಟಿಗಳ ಹೊದ್ದರು. ಮಾಂಸಾಹಾರ ಮದ್ಯಪಾನ ತ್ಯಜಿಸಿದರು.

ಏಣಿಶ್ರೇಣಿಗಳು, ಸ್ವರ್ಗ ನರಕಗಳು, ಉಚ್ಚ ನೀಚವೆಂಬ ತರತಮಗಳನ್ನು ಇಂದಿಗೂ ಜತನದಿಂದ ಕಾಯುತ್ತ ಬರಲಾಗಿದೆ. ಅಂಚಿಗೆ ಜೋತು ಬಿದ್ದು, ಜೀವ ಹಿಡಿದುಕೊಂಡಿವೆ ಕೆಳಜಾತಿಗಳು. ನ್ಯಾಯಬದ್ಧ ಅಸ್ಮಿತೆಗೆ ಹಂಬಲಿಸಿ ಹಿಂದುವಾದಿ ಚೌಕಟ್ಟಿನ ಒಳ-ಹೊರಗೆ ಕೈಕಾಲು ಬಡಿಯುತ್ತಲೇ ಬಂದಿವೆ. ಇಂತಹ ಒಂದು ಹೋರಾಟಗಾಥೆ ಅಂದಿನ ಮಧ್ಯಪ್ರದೇಶ ಮತ್ತು ಇಂದಿನ ಛತ್ತೀಸಗಢದ ರಾಮನಾಮಿ ಪಂಥದ್ದು.

ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬ್ರಿಟಿಷರ ಆಡಳಿತದಡಿ ಉಂಟಾಗಿದ್ದ ಸಾಮಾಜಿಕ ಧಾರ್ಮಿಕ ತಳಮಳದ ಕಾಲಘಟ್ಟ. ಜನಿವಾರ ಧರಿಸಿ ಬಲವಂತ ದೇವಾಲಯ ಪ್ರವೇಶಕ್ಕೆ ಮುಂದಾದ ಸತ್ನಾಮಿಗಳು ಸವರ್ಣೀಯರಿಂದ ತೀವ್ರ ಪ್ರತಿರೋಧ ಎದುರಿಸಿದ್ದರು.

ಆಗ 1890ರಲ್ಲಿ ಪ್ರಬಲ ಶಕ್ತಿಯಾಗಿ ಮೈತಳೆದಿತ್ತು ರಾಮನಾಮಿ ಸಮಾಜ. ಪಂಥದ ಸ್ಥಾಪಕ ಅನಕ್ಷರಸ್ಥ ಚಮ್ಮಾರ ಪರಶುರಾಮ. ಈತನಿಗೆ ತಗುಲಿದ ಕುಷ್ಠರೋಗವನ್ನು ರಾಮಾನಂದೀ ಜೋಗಿಯೊಬ್ಬ ಗುಣಪಡಿಸಿದ್ದ. ರಾಮಚರಿತ ಮಾನಸವನ್ನೇ ದೇವರೆಂದು ತಿಳಿದು ಅದಕ್ಕಾಗಿ ಬದುಕು ಸವೆಸುವಂತೆ ಪರಶುರಾಮ. ದೇವಾಲಯ ಪ್ರವೇಶಕ್ಕಾಗಿ ಕದನದ ಹಾದಿ ಸಾಕೆನಿಸಿತ್ತು ಸತ್ನಾಮಿಗಳಿಗೆ. ಪರಶುರಾಮನತ್ತ ಹೊರಳಿದರು. ಸತ್ಯನಾಮಿಗಳು ರಾಮನಾಮಿಗಳಾದರು.

ಜನಿವಾರ ಧರಿಸಿದರೂ, ನೈರ್ಮಲ್ಯ ಪಾಲಿಸಿದರೂ ದೇವಾಲಯ ಪ್ರವೇಶ ದೊರೆಯದ ಅಸ್ಪೃಶ್ಯರು ರಾಮನಾಮವನ್ನು ಮೈ ಮೇಲೆ ಹಚ್ಚೆ ಚುಚ್ಚಿಸಿಕೊಂಡಿದ್ದರು. ಮಂದಿರ ಪ್ರವೇಶಕ್ಕಾಗಿ ಸವರ್ಣೀಯ ಹಿಂದೂಗಳೊಂದಿಗೆ ಘರ್ಷಣೆ ಬೇಡವೆಂದು ವಿಧಿಸಿದ ಪರಶುರಾಮ. ಬಹುಪಾಲು ಸವರ್ಣೀಯರು ಹಿಂಸಾಚಾರಕ್ಕೆ ಇಳಿದರು. ರಾಮನಾಮಿಗಳು ಹೊದೆಯುತ್ತಿದ್ದ ರಾಮನಾಮದ ಶಾಲುಗಳನ್ನು ಮತ್ತು ಅವರು ಟೋಪಿಗಳಿಗೆ ಸಿಕ್ಕಿಸಿಕೊಳ್ಳುತ್ತಿದ್ದ ನವಿಲುಗರಿಯನ್ನು ಸುಟ್ಟರು. ರಾಮನಾಮಿಗಳನ್ನು ಅಪಹರಿಸಿ ರಾಮನಾಮ ಬರೆದಿದ್ದ ಹಣೆಯ ಚರ್ಮವನ್ನು ಸುಡುವ-ಕೊಯ್ದು ಹಾಕುವ ಹೀನ ಕೃತ್ಯಗಳಿಗೆ ಇಳಿದರು. ಹಲ್ಲೆಗಳು ಎಲ್ಲೆ ಮೀರಿದಾಗ ಪರಶುರಾಮ ಬ್ರಿಟಿಷ್ ಆಡಳಿತಕ್ಕೆ ದೂರು ನೀಡಿದ. 1910ರಲ್ಲಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತು. ಸವರ್ಣೀಯರು ಹಲ್ಲೆಗಳನ್ನು ಸಮರ್ಥಿಸಿಕೊಂಡರು. ರಾಮನಾಮ ಕೇವಲ ಸವರ್ಣೀಯರ ಸ್ವತ್ತು ಎಂದು ವಾದಿಸಿದ್ದರು. 1912ರ ಅಕ್ಟೋಬರ್ 12 ರಾಮನಾಮಿಗಳು ಕೇಸು ಗೆದ್ದ ದಿನ. ರಾಮನಾಮ ಸರ್ವರಿಗೂ ಸೇರಿದ್ದು ಎಂದು ತೀರ್ಪು ನೀಡಲಾಗಿತ್ತು.

ರಾಮಚರಿತ ಮಾನಸ ಗ್ರಂಥದ ಪಠಣವೇ ಪೂಜೆಯಾಯಿತು. ನಿರಾಕಾರ ನಿರ್ಗುಣ ರಾಮನ ಪರ್ಯಾಯ ಕಥನಗಳು ಭಜನೆಗೆ ಸೇರಿಕೊಂಡವು. ಮಾನಸದಲ್ಲಿ ರಾಮನಾಮವೊಂದೇ ಪ್ರಶ್ನಾತೀತ ಆಯಿತು. ಉಳಿದದ್ದೆಲ್ಲವೂ ಮರುವ್ಯಾಖ್ಯಾನಕ್ಕೆ ಒಳಗಾಯಿತು. ತಮ್ಮ ನಂಬಿಕೆಗಳು ಮತ್ತು ಮೌಲ್ಯಗಳಿಗೆ ವ್ಯತಿರಿಕ್ತವಾದ ಅಂಶಗಳನ್ನು ರಾಮನಾಮಿಗಳು ಬದಿಗೆ ಸರಿಸಿದರು. ಹೀಗೆ ಮಾನಸವು ಏಕ ಕಾಲಕ್ಕೆ ಪವಿತ್ರ ಗ್ರಂಥವೂ, ಮರುವ್ಯಾಖ್ಯಾನಗಳು ಮತ್ತು ಟೀಕೆ ಟಿಪ್ಪಣಿಗಳನ್ನು ಸೇರಿಸಿಕೊಂಡ ಮುಕ್ತ ಗ್ರಂಥವೂ ಆಯಿತು.
ಕಾಲಪ್ರವಾಹದ ಹೊಡೆತ ಬಡಪಾಯಿ ರಾಮನಾಮಿಗಳನ್ನು ಯಥಾಸ್ಥಿತಿವಾದೀ ವ್ಯವಸ್ಥೆಗೆ ತಳ್ಳಿದೆ. ಪಂಥದ ಬೇರುಗಳು ಶಿಥಿಲವಾಗಿವೆ. ಮತಾಂಧ ಶಕ್ತಿಗಳು ಕಲಿಯಬೇಕಾದದ್ದು ಬಹಳಷ್ಟಿದೆ. ಮನತೆರೆದು ಕುಳಿತರೆ ರಾಮನಾಮಿಗಳು ಪಾಠ ಹೇಳಬಲ್ಲರು

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...

ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ,...