ಸುಳ್ಯ ವಿಧಾನಸಭಾ ಕ್ಷೇತ್ರ | ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಬೆನ್ನಲ್ಲೇ ಕಾರ್ಯಕರ್ತರ ಪ್ರತಿಭಟನೆ

Date:

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರ ಸುಳ್ಯದಲ್ಲಿ ಬಿಜೆಪಿಯ ಸೋಲಿಲ್ಲದ ಸರದಾರ ಎಸ್‌ ಅಂಗಾರ ಅವರು ಕಳೆದ ಆರು ಚುನಾವಣೆಗಳಲ್ಲಿ ಸತತವಾಗಿ ಜಯಶಾಲಿಯಾಗುತ್ತಲೇ ಬಂದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ನಿಂದ ಸತತ ಮೂರು ಬಾರಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಅಭ್ಯರ್ಥಿ ವೈದ್ಯರೂ ಆಗಿರುವ ಡಾ. ರಘು ಅವರು ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಹೊಸ ಅಭ್ಯರ್ಥಿಯನ್ನು ಘೋಷಿಸಿದೆ. ಅದೀಗ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ.

ಕೊಡಗಿನ ಎಚ್‌ ನಂದಕುಮಾರ್‌ ಸುಳ್ಯ ಬ್ಲಾಕ್‌ ಉಸ್ತುವಾರಿಯಾಗಿದ್ದು, ಅವರೇ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಎಂದೇ ನಂಬಲಾಗಿತ್ತು. ಆದರೆ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಿ ಕೃಷ್ಣಪ್ಪ ಎಂಬವರಿಗೆ ಟಿಕೆಟ್‌ ನೀಡಲಾಗಿದೆ. ಇದು ಸುಳ್ಯದ ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ʼಯಾವ ಸರ್ವೆಯ ಆಧಾರದಲ್ಲಿ ಕೃಷ್ಣಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆಯೋ ಎಂಬುದು ನಮಗೆ ಗೊತ್ತಾಗಬೇಕು, ಮರು ಸರ್ವೆ ನಡೆಸಬೇಕುʼ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ಧಾರೆ.

ಯಾರು ಜಿ ಕೃಷ್ಣಪ್ಪ?
ಸಕಲೇಶಪುರದ ಕಾಂಗ್ರೆಸ್‌ ಮುಖಂಡ ಜಿ ಕೃಷ್ಣಪ್ಪ ಅವರು ಎನ್‌ಎಸ್‌ಯುಐನಿಂದಲೇ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಸದ್ಯ ಕಡಬ ಬ್ಲಾಕ್‌ ಉಸ್ತುವಾರಿಯಾಗಿದ್ದರು. ಆದರೆ ಕಾರ್ಯಕರ್ತರ ಜೊತೆ ಅಷ್ಟಾಗಿ ಬೆರೆಯದಿರುವ ಆರೋಪ ಇವರ ಮೇಲಿದೆ. ಅವರೇನಿದ್ದರೂ ಮೇಲಿನ ನಾಯಕರ ಜೊತೆ ಸಂಪರ್ಕದಲ್ಲಿರುವ ಮುಖಂಡ. ಆದರೆ ಎಚ್‌ ನಂದಕುಮಾರ್‌ ಹಾಗಲ್ಲ. ಕಾರ್ಯಕರ್ತರ ಜೊತೆ ಕ್ಷೇತ್ರದ ಉದ್ದಗಲಕ್ಕೂ ಸುತ್ತಾಡಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಸುಳ್ಯದ ಉಸ್ತುವಾರಿಯೂ ಆಗಿರುವ ನಂದಕುಮಾರ್‌ ಅವರೇ ನಮ್ಮ ಅಭ್ಯರ್ಥಿ ಎಂದುಕೊಂಡ ಕಾರ್ಯಕರ್ತರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ಕೆ ಸಿದ್ದತೆ ಮಾಡಿಕೊಂಡಿದ್ದರು.

ಒಂದು ಕಡೆ ಅಂಗಾರ ಅವರಿಗೆ ಟಿಕೆಟ್‌ ನೀಡುವ ಬಗ್ಗೆಯೇ ಬಿಜೆಪಿಯೊಳಗೆ ಅಸಮಾಧಾನವಿದೆ. ಅಷ್ಟೇ ಅಲ್ಲ ರಾಜ್ಯದೆಲ್ಲೆಡೆ ಆಡಳಿತ ವಿರೋಧಿ ಅಲೆ ಇದೆ. ಅದರ ಲಾಭ ಪಡೆಯುವ ಉತ್ಸಾಹದಲ್ಲಿ ಸ್ಥಳೀಯ ನಾಯಕರು, ಕಾರ್ಯಕರ್ತರಿದ್ದಾರೆ. ಹಾಗಾಗಿ ಸುಳ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಅಂಗಾರರಿಗೆ ಪ್ರಬಲ ಸ್ಫರ್ಧೆ ನೀಡಬಲ್ಲʼಕಾರ್ಯಕರ್ತರ ಅಭ್ಯರ್ಥಿʼ ನಂದಕುಮಾರ್‌ ಪರ ಕೆಲಸ ಮಾಡಲು ಉತ್ಸುಕರಾಗಿದ್ದರು. ಆದರೆ ನಂದಕುಮಾರ್‌ ಗೆ ಟಿಕೆಟ್‌ ಸಿಗದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ʼಕಾರ್ಯಕರ್ತರ ಅಭ್ಯರ್ಥಿʼ ನಂದಕುಮಾರ್
ಜಿ ಕೃಷ್ಣಪ್ಪ ಅವರಿಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಸುಳ್ಯದಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ನಂದಕುಮಾರ್‌ ಅಭಿಮಾನಿ ಕಾರ್ಯಕರ್ತರು ಮಂಗಳೂರಿನಲ್ಲಿರುವ ಜಿಲ್ಲಾ ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. “ನಾಯಕರ ಅಭ್ಯರ್ಥಿ ನಮಗೆ ಬೇಡ” ಎಂಬ ಘೋಷಣೆ ಕೂಗಿದರು. ಕಾಂಗ್ರೆಸ್‌ನ ಈ ಇಬ್ಬರು ಅಭ್ಯರ್ಥಿ ಆಕಾಂಕ್ಷಿಗಳೂ ಹೊರ ಜಿಲ್ಲೆಯವರು ಎಂಬುದು ಇಲ್ಲಿ ಗಮನಾರ್ಹ ಅಂಶ.

ಇದನ್ನೂ ಓದಿ ಈ ದಿನ ಸಂಪಾದಕೀಯ| ಶ್ರೀರಾಮ ‘ಅಸ್ಪೃಶ್ಯ’ರ ಮೈಮೇಲೆ ಹಚ್ಚೆಯಾದ- ಸ್ಥಾವರ ಇಳಿದು ಜಂಗಮನಾದ

“ನಂದಕುಮಾರ್‌ ಅವರು ಕಳೆದ ವರ್ಷ ಸುಳ್ಯ ತಾಲ್ಲೂಕಿನಾದ್ಯಂತ ಭೀಕರ ಮಳೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ವೈಯಕ್ತಿಕವಾಗಿ ಮತ್ತು ಪಕ್ಷದ ವತಿಯಿಂದಲೂ ಧನ ಸಹಾಯ ಮಾಡಿದ್ದರು. ಕ್ಷೇತ್ರದ ತುಂಬ ಸುತ್ತಾಡುತ್ತಾ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸ್ವಂತ ಹಣದಿಂದ ಅಭಿವೃದ್ಧಿಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಯಾವುದೇ ಕಾರ್ಯಕರ್ತ ಫೋನ್‌ ಮಾಡಿ ಸಮಸ್ಯೆ ಹೇಳಿಕೊಂಡರೆ ಸಾಕು ತಕ್ಷಣ ಸ್ಪಂದಿಸುತ್ತಿದ್ದರು. ಕೆಪಿಸಿಸಿ ಅಧ್ಯಕ್ಷರು ಸರ್ವೆ ಮಾಡಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡುವುದಾಗಿ ಹೇಳಿದ್ದರು. ಆದರೆ, ಯಾವ ಸರ್ವೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಸ್ಥಳೀಯ ನಾಯಕರ ಮಾತು ಕೇಳಿ ಟಿಕೆಟ್‌ ನೀಡಲಾಗಿದೆ ಎಂಬ ಅನುಮಾನ ಬರುತ್ತಿದೆ” ಎಂಬುದು ಕಾರ್ಯಕರ್ತರ ಆಕ್ರೋಶದ ನುಡಿ.

ʼಈ ಬಾರಿ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಿ 35 ವರ್ಷಗಳ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರನ್ನು ಕಾಣುವ ಹಂಬಲದಲ್ಲಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಶುರು ಮಾಡಿದ್ದೆವು. ಈಗ ನೋಡಿದ್ರೆ ಕಾರ್ಯಕರ್ತರ ಜೊತೆ ಸಂಪರ್ಕವೇ ಇಲ್ಲದ ಅಭ್ಯರ್ಥಿಯ ಪರ ಕೆಲಸ ಮಾಡಬೇಕಾಗಿದೆ. ನಂದ ಕುಮಾರ್‌ ಅವರಿಗೆ ಟಿಕೆಟ್‌ ನೀಡಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಾವು ಹೊರುತ್ತೇವೆ. ಕೆಪಿಸಿಸಿ ಮತ್ತೊಮ್ಮೆ ಪರಿಶೀಲಿಸಿ ಟಿಕೆಟ್‌ ನೀಡಬೇಕುʼ ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಗೊಂದಲ ಹೀಗೇ ಮುಂದುವರಿದರೆ ಕ್ಷೇತ್ರದಲ್ಲಿ ಪಕ್ಷದ ಬಲ ಇನ್ನಷ್ಟು ಕುಸಿಯಲಿದೆ. ಅಚ್ಚರಿಯೆಂದರೆ ಪ್ರತಿಭಟನೆಯಲ್ಲಿ ಕಡಬ ತಾಲ್ಲೂಕಿನ ಕಾಂಗ್ರೆಸ್‌ ಕಾರ್ಯಕರ್ತರೂ ಭಾಗಿಯಾಗಿದ್ದರು. ಒಟ್ಟಾರೆಯಾಗಿ 35 ವರ್ಷಗಳಿಂದ ಸುಳ್ಯದಲ್ಲಿ ಕಾಂಗ್ರೆಸ್‌ ಶಾಸಕರು ಇಲ್ಲ ಎಂಬ ಕಾರ್ಯಕರ್ತರು, ನಾಯಕರ ಕೊರಗು ಸದ್ಯಕ್ಕೆ ನೀಗುವ ಲಕ್ಷಣ ಕಾಣುತ್ತಿಲ್ಲ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್‌ ಸರ್ಕಾರ | ಪ್ರಮಾಣವಚನ ಸ್ವೀಕರಿಸಿದವರು ಯಾರ ಹೆಸರಿನಲ್ಲಿ ಪ್ರಮಾಣ ಮಾಡಿದರು?

ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹಾಗೂ ಎಂಟು...

ಶನಿವಾರವೇ ಮೊದಲ ಸಂಪುಟ ಸಭೆ; ಜಾರಿಗೆ ಬರುತ್ತವಾ ಐದು ಗ್ಯಾರಂಟಿಗಳು?

ರಾಜ್ಯದಲ್ಲಿ ಶನಿವಾರ ಹೊಸ ಸರ್ಕಾರ ರಚನೆಯಾಗಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ...

ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಲಿ: ನಿರಂಜನಾರಾಧ್ಯ ವಿ ಪಿ

ಪಠ್ಯಪುಸ್ತಕ, ಶಿಕ್ಷಣ ಕ್ಷೇತ್ರ ಸಂವಿಧಾನಕ್ಕೆ ಬದ್ಧವಾಗಿರಲಿ ಶಿಕ್ಷಕರ ನೇಮಕ ವೇಗಗತಿಯಲ್ಲಿ ಆರಂಭವಾಗಲಿ ಶಾಲಾ ಶಿಕ್ಷಣವನ್ನು...

ನಾನು ಪದವಿ ಆಕಾಂಕ್ಷಿಯಲ್ಲ; ಕೊಟ್ಟರೆ ಜವಾಬ್ದಾರಿ ನಿಭಾಯಿಸುವೆ: ಶೆಟ್ಟರ್

ಪಕ್ಷ ಕೊಡುವ ಜವಾಬ್ದಾರಿ ನಿಭಾಯಿಸುವೆ ಎಂದ ಮಾಜಿ ಸಿಎಂ ಶೆಟ್ಟರ್ ಸೋತರೂ ಜಗದೀಶ್...