ಸಂವಿಧಾನದ 143ನೇ ವಿಧಿಯಡಿ ಸಂಸದೀಯ ಸಮಿತಿಯು ಮಹತ್ವದ ಕಾನೂನು ರೂಪಿಸುವಾಗ, ಸುಪ್ರೀಂ ಕೋರ್ಟ್‌ನ ಸಲಹೆ ಪಡಯಬೇಕಿದ್ದರೆ, ರಾಷ್ಟ್ರಪತಿಗೆ ಅದನ್ನು ತಿಳಿಸಿ, ಅವರಿಂದ ಅನುಮತಿ ಪಡೆದು, ನ್ಯಾಯಾಂಗದ ಜೊತೆಗೆ ಮುಕ್ತ ಚರ್ಚೆ ನಡೆಸಲು ಅವಕಾಶ ನೀಡಲಾಗಿದೆ. ಇಂತಹ ಪಾರದರ್ಶಕ ಸಾಂವಿಧಾನಿಕ ಮಾರ್ಗವಿರುವಾಗ, ಸಂಸದೀಯ ಸಮಿತಿಯು ಮುಚ್ಚಿದ ಬಾಗಿಲಲ್ಲಿ 'ಅನೌಪಚಾರಿಕ' ಮಾತುಕತೆಗೆ ಮುಂದಾಗಿದ್ದು ಅಸಂವಿಧಾನಿಕ ಕ್ರಮ/ಧೋರಣೆ.
‘ಒಂದು ದೇಶ–ಒಂದು ಚುನಾವಣೆ’ ಎಂಬುದು ಕೇವಲ ಚುನಾವಣೆಯ ದಿನಾಂಕಗಳನ್ನು ಒಂದೇ ದಿನಕ್ಕೆ ತರುವ ಆಡಳಿತಾತ್ಮಕ ಪ್ರಯೋಗ ಮಾತ್ರವಲ್ಲ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಅವಧಿ, ರಾಜ್ಯಗಳ ರಾಜಕೀಯ ಸ್ವಾಯತ್ತತೆ, ಚುನಾವಣಾ ಆಯೋಗದ ಅಧಿಕಾರ ಹಾಗೂ ಭಾರತದ ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಗಂಭೀರ ಸಂವಿಧಾನಾತ್ಮಕ ಬದಲಾವಣೆ.
ಇಂತಹ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಹಾಲಿ ನ್ಯಾಯಮೂರ್ತಿಗಳ ಜೊತೆ ‘ಅನೌಪಚಾರಿಕ ಚರ್ಚೆ’ ನಡೆಸಲು ಮುಂದಾಗಿತ್ತು. ಅಕ್ಟೋಬರ್ 6ರಂದು ಈ ಸಂವಾದ ನಡೆಯಲಿದೆ ಎಂಬುದು ನ್ಯಾಯಾಲಯದ ಕಾರ್ಯಕ್ರಮ ಪಟ್ಟಿಯಲ್ಲಿ ಉಲ್ಲೇಖವಾಗಿತ್ತು. ಇದೀಗ, ಆ ಚರ್ಚೆಯನ್ನು ರದ್ದುಗೊಳಿಸಲಾಗಿದೆ. ‘ಪ್ರಸ್ತಾವಿತ ತಿದ್ದುಪಡಿ ಮಸೂದೆಯು ನ್ಯಾಯಾಂಗ ಪರಿಶೀಲನೆಯ ವಿಷಯವಾಗಿ ನ್ಯಾಯಾಲಯದ ಮೆಟ್ಟಿಲು ಏರುವ ಸಾಧ್ಯತೆ ಇದೆ. ಹೀಗಿರುವಾಗ, ಈ ವಿಚಾರವಾಗಿ ಸಂಸದೀಯ ಸಮಿತಿಯೊಂದಿಗೆ ನ್ಯಾಯಾಧೀಶರು ಚರ್ಚಿಸುವುದು ಸೂಕ್ತವಲ್ಲ’ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಈ ಕ್ರಮ ಸ್ವಾಗತಾರ್ಹ.
ಆದಾಗ್ಯೂ, ಚರ್ಚೆ ಈಗ ರದ್ದಾಗಿರಬಹುದು. ಆದರೆ, ಅಂತಹದೊಂದು ವಿಷಯದಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗ ಚರ್ಚೆಗೆ ಮುಂದಾಗಿದ್ದವು ಎಂಬುದೇ ಕಳವಳಕಾರಿ. ಯಾಕೆಂದರೆ, ಸಂಸತ್ತು ರೂಪಿಸುವ ಕಾನೂನಿನ ಸಂವಿಧಾನಬದ್ಧತೆಯನ್ನು ಪರೀಕ್ಷಿಸುವುದೇ ಸುಪ್ರೀಂ ಕೋರ್ಟ್. ಹೀಗಿದ್ದಾಗ, ಕಾನೂನು ರೂಪಿಸುವವರು ಮಸೂದೆ ರೂಪುಗಳ್ಳುವ ಹಂತದಲ್ಲಿಯೇ ನ್ಯಾಯಮೂರ್ತಿಗಳ ಬಳಿಗೇ ಹೋಗಿ, ಆ ಬಗ್ಗೆ ಮಾತುಕತೆ ನಡೆಸಿದರೆ, ನಾಳೆ ಆ ಕಾನೂನನ್ನು ಪ್ರಶ್ನಿಸಿ ಸಲ್ಲಿಕೆಯಾಗುವ ಅರ್ಜಿಗಳ ಪರಿಸ್ಥಿತಿ ಏನಾಗಬಹುದು? ನ್ಯಾಯಾಂಗದ ಸ್ವಾತಂತ್ರ್ಯ ಎಲ್ಲಿಗೆ ಹೋಗಿ ನಿಲ್ಲಬಹುದು?
ಇದೇ ಪ್ರಶ್ನೆಯನ್ನು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಕೂಡ ಎತ್ತಿದ್ದಾರೆ. ಮುಖ್ಯವಾಗಿ, ನ್ಯಾಯಾಂಗದ ಸ್ವಾತಂತ್ರ್ಯ ಎಂದರೆ ನ್ಯಾಯಮೂರ್ತಿಗೆ ಯಾರೂ ಫೋನ್ ಮಾಡಬಾರದು ಎನ್ನುವಷ್ಟು ಸಣ್ಣ ಕಲ್ಪನೆಯಲ್ಲ; ನ್ಯಾಯಾಧೀಶರು ತೀರ್ಪು ನೀಡುವ ಮೊದಲು ಯಾವ ರಾಜಕೀಯ ಅಥವಾ ಶಾಸನಾತ್ಮಕ ಪ್ರಕ್ರಿಯೆಯ ಭಾಗವಾಗಿದ್ದರೂ ಎಂಬ ಅನುಮಾನವೇ ಬಾರದಂತೆ ಕಾರ್ಯನಿರ್ವಹಿಸಬೇಕು.
ಭಾರತದ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ರೂಪಿಸಿದೆ. ಪ್ರತಿಯೊಂದಕ್ಕೂ ತನ್ನದೇ ಕಾರ್ಯವ್ಯಾಪ್ತಿಯನ್ನು ನಿಗದಿಪಡಿಸಿದೆ. 1955ರ ‘ರಾಮ್ ಜವಾಯ ಕಪೂರ್ vs ಪಂಜಾಬ್ ರಾಜ್ಯ’ ಪ್ರಕರಣದಲ್ಲಿಯೂ ಸುಪ್ರೀಂ ಕೋರ್ಟ್, ”ಮೂರು ಅಂಗಗಳ ಕಾರ್ಯಕ್ಷೇತ್ರಗಳು ಸ್ಪಷ್ಟವಾಗಿ ವಿಭಜಿಸಲ್ಪಟ್ಟಿದ್ದು, ಒಂದು ಅಂಗವು ಇನ್ನೊಂದರ ಮೂಲ ಕಾರ್ಯವನ್ನು ಆಕ್ರಮಿಸಿಕೊಳ್ಳುವುದನ್ನು ಸಂವಿಧಾನ ಒಪ್ಪುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿತ್ತು.
ಮುಂದೆ, ‘ಕೇಶವಾನಂದ ಭಾರತಿ, ಇಂದಿರಾ ಗಾಂಧಿ vs ರಾಜ್ ನಾರಾಯಣ್’ ಸೇರಿದಂತೆ ಹಲವು ತೀರ್ಪುಗಳಲ್ಲಿ ಅಧಿಕಾರ ವಿಭಜನೆ ಮತ್ತು ನ್ಯಾಯಾಂಗ ಪರಿಶೀಲನೆಯ ತತ್ವಗಳು ಸಂವಿಧಾನದ ಮೂಲ ರಚನೆಯ ಭಾಗವೆಂದು ಕೋರ್ಟ್ ಸ್ಪಷ್ಟಪಡಿಸಿದೆ. 2015ರ ಎನ್‌ಜೆಎಸಿ ತೀರ್ಪಿನಲ್ಲಿಯೂ ನ್ಯಾಯಾಂಗದ ಸ್ವಾತಂತ್ರ್ಯವೂ ಮೂಲ ವ್ಯವಸ್ಥೆಯ ಅವಿಭಾಜ್ಯ ಅಂಗವೆಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದ್ದಿದೆ.
ಇದೆಲ್ಲವೂ, ನ್ಯಾಯಾಂಗ ಮತ್ತು ಕಾರ್ಯಾಂಗ/ಶಾಸಕಾಂಗ ಜಂಟಿಯಾಗಿ ಕಾರ್ಯನಿರ್ವಹಿಸದೆ, ತಮ್ಮದೇ ಚೌಕಟ್ಟಿನೊಳಗೆ ಕಾರ್ಯಾಚರಿಸಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಆದಾಗ್ಯೂ, ಸಂವಿಧಾನಾತ್ಮಕ ಸಂಸ್ಥೆಗಳ ನಡುವೆ ಆಡಳಿತಾತ್ಮಕ ಸಂಪರ್ಕ, ಅಧ್ಯಯನ ಭೇಟಿ ಅಥವಾ ಸೌಜನ್ಯದ ಸಂವಾದಗಳು ನಡೆಯಲು, ಸಂಸದೀಯ ಸಮಿತಿಯು ನಿವೃತ್ತ ನ್ಯಾಯಾಧೀಶರು ಅಥವಾ ಕಾನೂನು ತಜ್ಞರ ಅಭಿಪ್ರಾಯ ಆಲಿಸಲು ಅವಕಾಶವೂ ಇದೆ. ಆದರೂ, ಅಲ್ಲಿ ಸ್ಪಷ್ಟ ಗೆರೆಯೂ ಇರಬೇಕು. ಭವಿಷ್ಯದಲ್ಲಿ ನ್ಯಾಯಾಂಗದ ಮುಂದೆ ಬರಬಹುದಾದ, ಸಿಂಧುತ್ವದ ಬಗ್ಗೆ ಪರಿಶೀಲಿಸಬೇಕಾದ ವಿಚಾರಗಳ ಕುರಿತು ಮೊದಲೇ ನ್ಯಾಯಾಂಗ ಮತ್ತು ಶಾಸಕಾಂಗ ಜೊತೆಗಾಗಿ ‘ಅನೌಪಚಾರಿಕ ಸಭೆ/ಚರ್ಚೆ’ ನಡೆಸಿಲು ಮುಂದಾದರೆ, ಅದು ನ್ಯಾಯಾಂಗದ ನಿಷ್ಪಕ್ಷಪಾತತೆ ಮತ್ತು ನ್ಯಾಯಾಂಗ-ಶಾಸಕಾಂಗ ನಡುವಿನ ಗಡಿಯನ್ನು ಅಸ್ಪಷ್ಟಗೊಳಿಸುತ್ತದೆ.
ನ್ಯಾಯದ ಮೂಲತತ್ವ ಬಹಳ ಸರಳ: ನ್ಯಾಯ ದೊರೆಯುವುದು ಮಾತ್ರವಲ್ಲ, ನ್ಯಾಯ ದೊರೆಯುತ್ತಿದೆ ಎಂಬ ವಿಶ್ವಾಸವೂ ಸಾರ್ವಜನಿಕರಲ್ಲಿ ಮೂಡಬೇಕು. 1997ರಲ್ಲಿ ಸುಪ್ರೀಂ ಕೋರ್ಟ್ ಅಂಗೀಕರಿಸಿದ ‘ನ್ಯಾಯಾಂಗ ಮೌಲ್ಯಗಳ ಪುನರುಚ್ಚಾರ ಸಂಹಿತೆ’ಯ ಮೊದಲ ತತ್ವ ಹೇಳುವಂತೆ, ‘ನ್ಯಾಯಾಂಗದ ನಿಷ್ಪಕ್ಷಪಾತತೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಂದಿಸುವ ಯಾವುದೇ ವರ್ತನೆಯನ್ನು ನ್ಯಾಯಾಧೀಶರು ತಪ್ಪಿಸಬೇಕು.’
ಅದೇ ಸಂಹಿತೆಯ 8ನೇ ತತ್ವ ಇನ್ನೂ ಸ್ಪಷ್ಟವಾಗಿದೆ: ಮುಂದೆ ನ್ಯಾಯಾಂಗ ಪರಿಶೀಲನೆಗೆ ಬರಬಹುದಾದ ವಿಷಯಗಳ ಕುರಿತು ನ್ಯಾಯಾಧೀಶರು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಬಾರದು. ಈ ಸ್ವಯಂ ನಿಯಮವನ್ನು ನ್ಯಾಯಾಂಗವೇ ತನಗೆ ತಾನೇ ವಿಧಿಸಿಕೊಂಡಿದೆ.
ಅದೇ ರೀತಿ, ಸಂವಿಧಾನದ 143ನೇ ವಿಧಿಯಡಿ ಸಂಸದೀಯ ಸಮಿತಿಯು ಮಹತ್ವದ ಕಾನೂನು ರೂಪಿಸುವಾಗ, ಸುಪ್ರೀಂ ಕೋರ್ಟ್‌ನ ಸಲಹೆ ಪಡಯಬೇಕಿದ್ದರೆ, ರಾಷ್ಟ್ರಪತಿಗೆ ಅದನ್ನು ತಿಳಿಸಿ, ಅವರಿಂದ ಅನುಮತಿ ಪಡೆದು, ನ್ಯಾಯಾಂಗದ ಜೊತೆಗೆ ಮುಕ್ತ ಚರ್ಚೆ ನಡೆಸಲು ಅವಕಾಶ ನೀಡಲಾಗಿದೆ. ಇಂತಹ ಪಾರದರ್ಶಕ ಸಾಂವಿಧಾನಿಕ ಮಾರ್ಗವಿರುವಾಗ, ಸಂಸದೀಯ ಸಮಿತಿಯು ಮುಚ್ಚಿದ ಬಾಗಿಲಲ್ಲಿ ‘ಅನೌಪಚಾರಿಕ’ ಮಾತುಕತೆಗೆ ಮುಂದಾಗಿದ್ದು ಅಸಂವಿಧಾನಿಕ ಕ್ರಮ/ಧೋರಣೆ.
ಆದ್ದರಿಂದಲೇ, ‘ಒಂದು ದೇಶ – ಒಂದು ಚುನಾವಣೆ’ ವಿಚಾರ ಕುರಿತಾದ ಸಂಸದೀಯ ಸಮಿತಿ ಮತ್ತು ನ್ಯಾಯಾಂಗ ನಡುವಿನ ಚರ್ಚೆಗಳ ಕುರಿತು ಪ್ರಶ್ನೆಗಳು ಎದ್ದಿದ್ದವು. ಇದೀಗ, ನ್ಯಾಯಾಲಯವು ಸಭೆಯನ್ನು ರದ್ದುಗೊಳಿಸಿದೆ. ಆದರೆ, ಅದಕ್ಕೂ ಮುನ್ನ ಸಂಸದೀಯ ಸಮಿತಿ ನೀಡಿದ ಕಾರಣಗಳು ವಿರೋಧಾಬಾಸವಾಗಿದ್ದವು. ಆರಂಭದಲ್ಲಿ, ‘ದಿನಾಂಕ ಹೊಂದಾಣಿಕೆಯಾಗಲಿಲ್ಲ’ ಎಂದೂ, ನಂತರ ‘ಇದು ಕೇವಲ ಗ್ರಂಥಾಲಯ ವೀಕ್ಷಣೆಯ ಭೇಟಿ’ ಎಂದೂ ಸಮಿತಿ ಸುಳ್ಳು ಸಮರ್ಥನೆಗಳನ್ನು ನೀಡಿತು. ಆದರೆ, ಕಾರ್ಯಕ್ರಮದ ಅಧಿಕೃತ ಪಟ್ಟಿಯಲ್ಲಿ ‘ಸಮಕಾಲೀನ ಚುನಾವಣೆ ಕುರಿತ ಚರ್ಚೆ’ ಎಂದು ಉಲ್ಲೇಖವಾಗಿತ್ತು.
ಈ ಲೇಖನ ಓದಿದ್ದೀರಾ?: SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ: ಪ್ರಜಾಪ್ರಭುತ್ವದ ಹಕ್ಕನ್ನೇ ಕಸಿಯುವ ಹುನ್ನಾರ!
‘ಒಂದು ದೇಶ–ಒಂದು ಚುನಾವಣೆ’ ಮಸೂದೆಯು ಸಣ್ಣ ತಿದ್ದುಪಡಿಯಲ್ಲ. ಪ್ರಸ್ತಾವಿತ 129ನೇ ತಿದ್ದುಪಡಿಯು ಹೊಸ 82A ವಿಧಿಯನ್ನು ಸೇರಿಸುವ ಮೂಲಕ, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಒಂದೇ ಸಮಯಕ್ಕೆ ನಿಗದಿ ಮಾಡುವ ದೊಡ್ಡ ಸಂಚು ಹೊಂದಿವೆ. ಇದರಿಂದಾಗಿ, ಅವಧಿಗೂ ಮುನ್ನ ಸದನ ವಿಸರ್ಜನೆ, ವಿಧಾನಸಭೆಗಳ ಅವಧಿ, ಜನಾದೇಶದ ಸ್ವರೂಪ, ರಾಜ್ಯಗಳ ಸ್ವಾಯತ್ತತೆ, ಚುನಾವಣಾ ಆಯೋಗದ ಅಧಿಕಾರ ಹಾಗೂ ಮತ್ತು ಒಕ್ಕೂಟ ವ್ಯವಸ್ಥೆಯ ಮೂಲ ತತ್ವದ ಕುರಿತು ಗಂಭೀರ ಪ್ರಶ್ನೆಗಳು ಮತ್ತು ಚರ್ಚೆಗಳು ಮುನ್ನೆಲೆಗೆ ಬರುತ್ತವೆ. ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆಗಳೂ ಏಳುತ್ತವೆ. ಇಂತಹ ಮಸೂದೆಯ ಕುರಿತು ತೀರ್ಪು ನೀಡಬೇಕಾದವರ ಜೊತೆ ಅದನ್ನು ರೂಪಿಸುತ್ತಿರುವ ಸಮಿತಿ ಮುಂಚೆಯೇ ಸಂವಾದ ನಡೆಸುವುದು ಅಪಾಯಕಾರಿ.
ಇದೀಗ, ಸುಪ್ರೀಂ ಕೋರ್ಟ್ ಈ ಚರ್ಚೆಯಿಂದ ಹಿಂದೆ ಸರಿದಿದೆ. ಆದಾಗ್ಯೂ, ಈ ಬೆಳವಣಿಗೆಯಿಂದ ಸರ್ಕಾರವೂ ಸಂಸತ್ತೂ ಒಂದು ವಿಚಾರವನ್ನು ಅರಿತುಕೊಳ್ಳಬೇಕು. ಸರ್ಕಾರ/ಸಂಸದೀಯ ಸಮಿತಿಯು ನ್ಯಾಯಾಂಗದ ಜೊತೆ ಅತಿಯಾದ ಆಡಳಿತಾತ್ಮಕ ಆತ್ಮೀಯತೆ, ಪೂರ್ವಭಾವಿ ಸಂವಾದ, ಭವಿಷ್ಯದ ವಿವಾದಗಳ ಕುರಿತು ಅನೌಪಚಾರಿಕ ಮಾತುಕತೆ ನಡೆಸುವುದು ಸಾರ್ವಜನಿಕ ಅನುಮಾನ ಹುಟ್ಟುಹಾಕುತ್ತವೆ. ಇದು, ನ್ಯಾಯಾಂಗದ ಮೇಲಿನ ಜನಾಭಿಪ್ರಾಯ ಮತ್ತು ವಿಶ್ವಾಸವನ್ನು ಕುಂದಿಸುತ್ತವೆ.
ಸಂಸತ್ತಿಗೆ ಕಾನೂನು ಮಾಡುವ ಹಕ್ಕಿದೆ. ಸರ್ಕಾರಕ್ಕೆ ಅದರ ಪರವಾಗಿ ವಾದಿಸುವ ಸ್ವಾತಂತ್ರ್ಯವಿದೆ. ವಿರೋಧ ಪಕ್ಷಗಳಿಗೆ ಅದನ್ನು ಪರಾಮರ್ಶಿಸುವ ಅಧಿಕಾರವಿದೆ. ಆದರೆ, ಆ ಕಾನೂನು ಸಂವಿಧಾನದ ಗಡಿ ದಾಟಿದೆಯೇ-ಇಲ್ಲವೇ ಎಂಬುದನ್ನು ಅಂತಿಮವಾಗಿ ತೀರ್ಮಾನಿಸುವ ಹಕ್ಕು ನ್ಯಾಯಾಂಗಕ್ಕಿದೆ. ಆ ತೀರ್ಪು ನೀಡುವ ನ್ಯಾಯಾಧೀಶರಿಗೆ ಮಸೂದೆಯ ಕುರಿತು ‘ಅನೌಪಚಾರಿಕವಾಗಿ ಪೂರ್ವಭಾವಿಯಾಗಿಯೇ ಮಾಹಿತಿ ನೀಡುವ ಅಥವಾ ಚರ್ಚಿಸುವ’ ಸಂಸ್ಕೃತಿ ಬೆಳೆದರೆ, ಅದು ಪ್ರಜಾಪ್ರಭುತ್ವದ ಮೂಲ ಸ್ತಂಭವನ್ನು ಅಲುಗಾಡಿಸುತ್ತದೆ.
ಆದ್ದರಿಂದ, ‘ಒಂದು ದೇಶ – ಒಂದು ಚುನಾವಣೆ’ ಕುರಿತಾದ ಈ ಅನೌಪಚಾರಿಕ ಸಭೆ ರದ್ದಾದದ್ದು ಮತ್ತು ಸುಪ್ರೀಂ ಕೋರ್ಟ್ ತನ್ನ ಗಡಿಯನ್ನು ತಾನೇ ನೆನಪಿಸಿಕೊಂಡು ಹಿಂದಕ್ಕೆ ಸರಿದದ್ದು, ಸ್ವಾಗತಾರ್ಹ ಬೆಳವಣಿಗೆ.



