ಮತದಾನದ ಹಕ್ಕನ್ನು ಮೂಲಭೂತ ಹಕ್ಕು ಎಂಬುದನ್ನು ವ್ಯಕ್ತವಾಗಿ ಹೇಳದೆ ಇರುವುದು ಸಂವಿಧಾನದ ಲೋಪವಾಗಲಿ, ನಿರ್ಲಕ್ಷ್ಯವಾಗಲಿ ಅಲ್ಲ. ಸಂವಿಧಾನ ರಚನಾಸಭೆಯಲ್ಲಿ ನಡೆದ ಚರ್ಚೆಗಳೇ ಈ ಮಾತಿಗೆ ಸಾಕ್ಷಿ. ಈ ಹಕ್ಕನ್ನು ಮೂಲಭೂತ ಹಕ್ಕೆಂದು ಸಾರಲು ಸಂವಿಧಾನ ರಚನಾ ಸಭೆಯಲ್ಲಿ ಬಹುತೇಕ ಒಮ್ಮತ ಮೂಡಿತ್ತು.
‘ಭಾರತದ ಪ್ರಜೆಗಳಾದ ನಾವು…’ (We, the People..) ಎಂಬ ವಿಧಿವತ್ತಾದ ಸಾರ್ವಭೌಮ ಘೋಷಣೆಯೊಂದಿಗೆ ಶುರುವಾಗುತ್ತದೆ ನಮ್ಮ ಸಂವಿಧಾನ. ‘ಭಾರತದ ಸರ್ಕಾರವಾದ ನಾವು’ ಎಂಬ ಬದಲಿಗೆ ‘ಭಾರತದ ಪ್ರಜೆಗಳಾದ ನಾವು’ ಎಂಬ ಪದಗುಚ್ಛವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಆರಿಸಿದ್ದಾರೆ ನಮ್ಮ ಸಂವಿಧಾನ ನಿರ್ಮಾಪಕರು. ಪ್ರಜೆಗಳ ಸಮ್ಮತಿಯನ್ನು ಸರ್ಕಾರಕ್ಕಿಂತ ಮೇಲೆ ಇರಿಸಲಾಗಿದೆ. ಮತ ಚಲಾಯಿಸುವ ಪ್ರಜೆಗಳ ಅಧಿಕಾರವನ್ನು ಮೂಲಭೂತ ಹಕ್ಕುಗಳಲ್ಲಿ ಒಂದೆಂದು ವ್ಯಕ್ತವಾಗಿ ಸಾರದೆ ಹೋದರೂ, ‘ಭಾರತದ ಪ್ರಜೆಗಳಾದ ನಾವು…’ಎಂಬ ಶುರುವಾತಿನಲ್ಲಿ ಅವ್ಯಕ್ತವಾಗಿ ಅದೇ ಅರ್ಥ ಹುದುಗಿದೆ.
ಮುಂದೊಂದು ದಿನ ‘ಮೋಶಾ’ ಸರ್ಕಾರ ದೇಶವನ್ನು ಆಳಲಿದೆ, ಎಸ್.ಐ.ಆರ್.ಎಂಬ ಕರಾಳ ಹತಾರನ್ನು ಜನತಂತ್ರ ಹರಣಕ್ಕೆ ಬಳಸಲಿದೆ, ಕೋಟ್ಯಂತರ ಜನರ ಮತ ಚಲಾಯಿಸುವ ಹಕ್ಕನ್ನೇ ಕಿತ್ತುಕೊಳ್ಳಲಿದೆ ಎಂಬ ಕೆಟ್ಟ ಕಾಲವನ್ನು ಸಂವಿಧಾನ ನಿರ್ಮಾಪಕರು ದೂರ ದೂರಕ್ಕೂ ಊಹಿಸಿರಲಾರರು. ಊಹಿಸಿಕೊಂಡಿದ್ದಿದ್ದರೆ ಮತದಾನದ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿಸಿಬಿಡುತ್ತಿದ್ದರು.
‘ಸಂವಿಧಾನ ಎಷ್ಟೇ ಒಳ್ಳೆಯದಿರಲಿ, ಕೆಡುಕ ಸರ್ಕಾರದ ಕೈಗೆ ಬಿದ್ದರೆ ಕೆಟ್ಟದೇ ಆಗಿ ಹೋಗುತ್ತದೆ. ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ, ಒಳ್ಳೆಯ ಸರ್ಕಾರವಿದ್ದರೆ, ಒಳ್ಳೆಯದೇ ಆಗುತ್ತದೆ’ ಎಂಬ ದಾರ್ಶನಿಕ ಮಾತುಗಳನ್ನು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹೇಳಿದ್ದು ಅಕ್ಷರಶಃ ಸತ್ಯ.
ಸಂವಿಧಾನವು ನಿಯಮಗಳು, ತತ್ವಗಳು ಹಾಗೂ ಸಾಂಸ್ಥಿಕ ಚೌಕಟ್ಟುಗಳನ್ನು ಹಾಕಿಕೊಡುತ್ತದೆ. ಜನತಂತ್ರದ ಮೂರು ಸ್ತಂಭಗಳನ್ನಾಗಿ ಶಾಸನ ರೂಪಿಸಿಲು ಶಾಸಕಾಂಗ, ಅವುಗಳನ್ನು ಜಾರಿಗೆ ತರಲು ಕಾರ್ಯಾಂಗ ಹಾಗೂ ಇವುಗಳನ್ನು ವ್ಯಾಖ್ಯಾನ ಮಾಡಲು ನ್ಯಾಯಾಂಗವನ್ನು ಸ್ಥಾಪಿಸಿದೆ.
ಆದರೆ ಈ ಸ್ತಂಭಗಳು ತಾವೇ ತಾವಾಗಿ ನಡೆಯಲಾರವು. ಅವುಗಳ ಯಶಸ್ಸು, ಪರಿಣಾಮ ಹಾಗೂ ನೈತಿಕ ದಿಸೆ ದೆಸೆಗಳು ದೇಶವನ್ನು ನಡೆಸಲು ಆಯ್ಕೆಯಾಗಿರುವ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳನ್ನೇ ಅವಲಂಬಿಸಿರುತ್ತದೆ. ಇವರನ್ನು ಚುನಾವಣೆಯ ಮೂಲಕ ಆರಿಸುವ ನಿರಂತರ ಜಾಗೃತ ಪ್ರಜೆಗಳ ಪಾತ್ರವೂ ಅಷ್ಟೇ ಮುಖ್ಯ.
ಮುನ್ನೋಟ ಹೊಂದಿದ ದಾರ್ಶನಿಕರ ಮತ್ತು ನೈತಿಕ ಎಚ್ಚರ ಕಾಪಾಡಿಕೊಂಡ ಜನನಾಯಕರ ಕೈಯಲ್ಲಿ ದೋಷಪೂರಿತ ಸಾಂಸ್ಥಿಕ ವ್ಯವಸ್ಥೆ ಕೂಡ ಜನತಂತ್ರಕ್ಕೆ ಬದ್ಧವಾದ, ಪಾರದರ್ಶಕ ಹಾಗೂ ಸಾರ್ವಜನಿಕ ಕಲ್ಯಾಣದ ವ್ಯವಸ್ಥೆ ಆಗಿಬಿಡಬಹುದು. ಜನನಾಯಕರಿಗೆ ದೇಶದ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಕಣ್ಣಿರಬೇಕು ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಆಳವಾದ ವಿಶ್ವಾಸ ಇರಬೇಕು ಅಷ್ಟೇ.
ಹಾಗೆಯೇ ಅದೆಷ್ಟೇ ಜನಪರವಾಗಿ ನಿರ್ಮಿಸಲಾದ ಸಂವಿಧಾನ ಕೂಡ ಭ್ರಷ್ಟ ಮತ್ತು ಏಕಚಕ್ರಾಧಿಪತ್ಯ ಧೋರಣೆಯ ನಾಯಕರ ಕೈಯಲ್ಲಿ ವಕ್ರ ಆಗಿಬಿಡಬಹುದು, ಶೋಷಣೆಗೆ ತುತ್ತಾಗಬಹುದು, ಒಳಗೊಳಗಿನಿಂದಲೇ ಟೊಳ್ಳಾಗಿಸುವ ಹುನ್ನಾರಕ್ಕೆ ಬಲಿಯಾಗಬಹುದು, ಬುಡಮೇಲು ಕೂಡ ಆಗಿ ಹೋಗಬಹುದು. ಕೊಂಚ ಅರೆಕೊರೆಯ ಸಂದಿಗೊಂದಿಗಳನ್ನೂ ಬಳಸಿಕೊಂಡು ಸಾಂವಿಧಾನಿಕ ಸಂಸ್ಥೆಗಳನ್ನು, ಜನತಂತ್ರವನ್ನು ಬಲಹೀನಗೊಳಿಸಬಹುದು. ಅವುಗಳ ಹಿರಿಮೆಯನ್ನು ಕುಗ್ಗಿಸಲೂಬಹುದು. ಹೀಗಾಗಿ ದೇಶವನ್ನು ಆಳುವವರಿಗೆ ಸಾಂವಿಧಾನಿಕ ನೈತಿಕತೆ ಎಂಬುದೊಂದು ಇರಲೇಬೇಕು. ರಾಜ್ಯವ್ಯವಸ್ಥೆಯ (STATE) ಕಾರ್ಯವೈಖರಿಗಳು, ನಾಗರಿಕರ ನಡವಳಿಕೆ ಹಾಗೂ ಕಾನೂನಾತ್ಮಕ ವ್ಯಾಖ್ಯಾನಗಳು ಸಂವಿಧಾನದ ಮೂಲಭೂತ ಆಶಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಭಾವನೆಗಳಿಗೆ ಹೊಂದುವಂತಿರಬೇಕು ಎಂಬುದನ್ನು ಸಾಂವಿಧಾನಿಕ ನೈತಿಕತೆಯ ತಿರುಳು ಎನ್ನಬಹುದು. ಬಹುಸಂಖ್ಯಾತ ಭಾವನೆಗಳು, ರೂಢಿಗಳು ಅಥವಾ ಸಾರ್ವಜನಿಕ ನೈತಿಕತೆಯನ್ನು ರೂಪಿಸುವ ಸಾಮಾಜಿಕ ಕಟ್ಟುಕಟ್ಟಳೆಗಳನ್ನು ಕೂಡ ಸಾಂವಿಧಾನಿಕ ಮೌಲ್ಯಗಳ ಒರೆಗೆ ಹಚ್ಚುವುದೇ ಸಾಂವಿಧಾನಿಕ ನೈತಿಕತೆ. ಬಹುಸಂಖ್ಯಾತ ಭಾವನೆಗಳ ಹೆಸರಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಮೂಲೆಗುಂಪು ಮಾಡಲು ಅವಕಾಶ ಇಲ್ಲದಿರುವುದು ಸಾಂವಿಧಾನಿಕ ನೈತಿಕತೆ.
ಮತದಾನದ ಹಕ್ಕನ್ನು ಮೂಲಭೂತ ಹಕ್ಕು ಎಂಬುದನ್ನು ವ್ಯಕ್ತವಾಗಿ ಹೇಳದೆ ಇರುವುದು ಸಂವಿಧಾನದ ಲೋಪವಾಗಲಿ, ನಿರ್ಲಕ್ಷ್ಯವಾಗಲಿ ಅಲ್ಲ. ಸಂವಿಧಾನ ರಚನಾಸಭೆಯಲ್ಲಿ ನಡೆದ ಚರ್ಚೆಗಳೇ ಈ ಮಾತಿಗೆ ಸಾಕ್ಷಿ. ಈ ಹಕ್ಕನ್ನು ಮೂಲಭೂತ ಹಕ್ಕೆಂದು ಸಾರಲು ಸಂವಿಧಾನ ರಚನಾ ಸಭೆಯಲ್ಲಿ ಬಹುತೇಕ ಒಮ್ಮತ ಮೂಡಿತ್ತು. ಮೂಲಭೂತ ಹಕ್ಕುಗಳ ಉಪಸಮಿತಿ ಮತ್ತು ಅಲ್ಪಸಂಖ್ಯಾತರ ಉಪಸಮಿತಿ ಎರಡೂ ಈ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದವು. ಆ ಸಂದರ್ಭದಲ್ಲಿ ಭಾರತದ ಅನೇಕ ಅರಸೊತ್ತಿಗೆಗಳನ್ನು ವಿಲೀನಗೊಳಿಸಿಕೊಳ್ಳುವ ಕುರಿತ ಅವುಗಳ ಪ್ರತಿನಿಧಿಗಳೊಂದಿಗೆ ಸಂಧಾನ ನಡೆದಿತ್ತು. ಈ ಹಂತದಲ್ಲಿ ಮತದಾನದ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿಸುವುದು ವಿಲೀನ ಪ್ರಕ್ರಿಯೆಗೆ ಬಾಧೆಯೊಡ್ಡಬಹುದು ಎಂಬ ಸಂದೇಹ ಎದ್ದಿತ್ತು. ಸ್ವತಂತ್ರ ದೇಶವನ್ನು ಒಗ್ಗೂಡಿಸುವ ಪ್ರಕ್ರಿಯೆಯ ನಾಜೂಕಿನ ಗಳಿಗೆಗಳಲ್ಲಿ ತೋರಲಾದ ರಾಜಕೀಯ ವ್ಯಾವಹಾರಿಕತೆಯಿದು. ಅದೇ ಖಾಯಂ ಆಗಿಬಿಡಬಹುದೆಂಬ ಸಂದೇಹ ಅಂದು ಯಾರಿಗೂ ಇರಲಿಲ್ಲ. ಹೀಗೆ ರಾಜಿ ಒಪ್ಪಂದವೊಂದು ದೌರ್ಬಲ್ಯವಾಗಿ ಬದಲಾಗಿ ಬೇರಿ ಬಿಟ್ಟಿತು. ಸುಪ್ರೀಮ್ ಕೋರ್ಟ್ ಕೂಡ ಮತದಾನದ ಹಕ್ಕು ಶಾಸನಾತ್ಮಕವೇ ವಿನಾ ಮೂಲಭೂತ ಹಕ್ಕು ಅಲ್ಲ ಎಂದು 1982ರ ತೀರ್ಪಿನಲ್ಲಿ ವಿಧಿಸಿತು. ಹೀಗಾಗಿ ಯಾವುದು ಅನಾಯಸವಾಗಿ ಸ್ವತಂತ್ರ ಭಾರತದ ಪೌರರ ಹಸ್ತಗತ ಆಗಬೇಕಿತ್ತೋ, ಅದು ಗಗನ ಕುಸುಮವಾಗಿ ದೂರ ಸರಿಯಿತು. ನಂತರದ ನಲವತ್ತು ವರ್ಷಗಳಲ್ಲಿ ಚುನಾವಣಾ ಆಡಳಿತವ್ಯವಸ್ಥೆಯು ಹೆಚ್ಚು ಹೆಚ್ಚು ಸಂಕೀರ್ಣವಾಗಿ ಬೆಳೆದು ನಿಂತಿತು.
ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ನೆಪದಲ್ಲಿ ಕೋಟ್ಯಂತರ ಜನರ ಮತಾಧಿಕಾರ ಹರಣ ನಡೆಯುತ್ತಿರುವ ಇಂದಿನ ವಿಷಮ ಹಂತಕ್ಕೆ ಮುಟ್ಟಿದೆ. ವಲಸಿಗರು, ಅಲ್ಪಸಂಖ್ಯಾತರು, ರಾಜಕೀಯ ವಿರೋಧಿಗಳು, ಮಹಿಳೆಯರು, ಬುಡಕಟ್ಟು ಜನಾಂಗಗಳ ಮೇಲೆ ಭಾರೀ ಆಕ್ರಮಣ ನಡೆದಿದೆ. ನ್ಯಾಯಾಂಗ ಕೂಡ ಅವರ ರಕ್ಷಣೆಗೆ ಮುಂದೆ ಬರುವ ದಿಟ್ಟತನ ತೋರಿಲ್ಲ. ಮೇಲ್ಮನವಿ ನ್ಯಾಯಾಧಿಕರಣಗಳನ್ನು ರಚಿಸಲಾಗಿದೆ. ಬಂಗಾಳದಲ್ಲಿ 19 ನ್ಯಾಯಾಧಿಕರಣಗಳು ತಿಂಗಳುಗಟ್ಟಲೆ ವಿಚಾರಣೆ ನಡೆಸಿದರೂ ಐದಾರು ಸಾವಿರಕ್ಕಿಂತ ಹೆಚ್ಚು ಮೇಲ್ಮನವಿಗಳ ಇತ್ಯರ್ಥ ಸಾಧ್ಯವಾಗಿಲ್ಲ. ಈ ಆಮೆಗತಿ, ಅತ್ಯಂತ ಕ್ಲಿಷ್ಟ ವಿಧಿವಿಧಾನಗಳು ಹಕ್ಕು ಕಳೆದುಕೊಂಡ ಮತದಾರರ ವಿರುದ್ಧವಾಗಿವೆ. ಹೊಟ್ಟೆಬಟ್ಟೆಗೆ ಬಡಿದಾಡಬೇಕಿರುವ ಬಡವರ್ಗಗಳ ಜನ ಜಟಿಲ ಕಾನೂನು ವಿಧಿವಿಧಾನಗಳ ಬೆಟ್ಟವನ್ನು ಏರುವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ. ಪಟ್ಟಿಯಿಂದ ಕೈಬಿಡಲಾದ ಈ ಜನ ಮತಾಧಿಕಾರ ತ್ಯಾಗವನ್ನು ಅನಿವಾರ್ಯ ಆಗಿಸುವ ದುಷ್ಟ ಹುನ್ನಾರಕ್ಕೇ ಮೇಲುಗೈ ಆಗಿಸುವಂತೆ ಕಾನೂನು ಪ್ರಕ್ರಿಯೆಯನ್ನು ಜಟಿಲವಾಗಿಸಿ ವಿನ್ಯಾಸಗೊಳಿಸಲಾಗಿದೆ.
ಸುಪ್ರೀಮ್ ಕೋರ್ಟ್ ಕೂಡ, ಈ ಸಲ ಮತ ಹಾಕದಿದ್ದರೇನಂತೆ, ಮುಂದಿನ ಸಲ ಅವಕಾಶ ಸಿಕ್ಕೀತು ಎಂಬುದಾಗಿ ಮತಾಧಿಕಾರ ವಂಚಿತರ ಅಹವಾಲನ್ನು ಕುರಿತು ಹಗುರ ಟಿಪ್ಪಣಿ ಮಾಡುವಂತಾಗಿರುವುದು ಅತೀವ ದುರದೃಷ್ಟಕರ.
ಮತದಾನದ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿಸುವುದೇ ಈ ಹುನ್ನಾರಕ್ಕೆ ಅರೆಯಬಹುದಾದ ಮದ್ದು. ಆಗ ಸುಪ್ರೀಮ್ ಕೋರ್ಟು ಮತಾಧಿಕಾರ ಹರಣವನ್ನು ಪರಿಣಾಮಕಾರಿಯಾಗಿ ಅಂದಂದಿಗೇ ಇತ್ಯರ್ಥಗೊಳಿಸಲು ಬಂದೀತು. ಖಾಸಗಿತನವು ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಇಲ್ಲ. ಆದರೆ 2027ರಲ್ಲಿ ಸುಪ್ರೀಮ್ ಕೋರ್ಟು ಈ ಹಕ್ಕು ಮೂಲಭೂತ ಎಂದು ವ್ಯಾಖ್ಯಾನಿಸಿತು. ಸಂವಿಧಾನವನ್ನು ಜನತಾಂತ್ರಿಕ ಮೌಲ್ಯಗಳ ಸಜೀವ ದಾಖಲೆಯಾಗಿ ನೋಡಬೇಕೇ ವಿನಾ ಐತಿಹಾಸಿಕ ಸಂದರ್ಭದಲ್ಲಿ ಹೆಪ್ಪುಗಟ್ಟಿರುವ ದಸ್ತಾವೇಜಾಗಿ ಅಲ್ಲ ಎಂದು ಜಸ್ಟಿಸ್ ಕೆ.ಎಸ್.ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮೊಕದ್ದಮೆಯಲ್ಲಿ ಸಾಂವಿಧಾನಿಕ ನ್ಯಾಯಪೀಠ ಸಾರಿ ಹೇಳಿದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಸಂಸದೀಯ ವ್ಯವಸ್ಥೆಯ ಹೃದಯ ಎಂದು 1978ರ ಮತ್ತೊಂದು ತೀರ್ಪಿನಲ್ಲಿ ಇದೇ ಸುಪ್ರೀಮ್ ಕೋರ್ಟು ಘೋಷಿಸಿತ್ತು.
ಎಲ್ಲ ಮೂಲಭೂತ ಹಕ್ಕುಗಳಿಗೂ ನಿರ್ಬಂಧರಹಿತವೇನೂ ಅಲ್ಲ. ಮತದಾನದ ಮೂಲಭೂತ ಹಕ್ಕು ಕೂಡ ಈ ಮಾತಿಗೆ ಹೊರತಲ್ಲ. ಹೀಗಾಗಿ ಚುನಾವಣಾ ವ್ಯವಸ್ಥೆಯು ವ್ಯಾಜ್ಯಗಳ ಸುಳಿಗೆ ಸಿಲುಕಿ ಹಾಕಿಕೊಳ್ಳುತ್ತದೆ ಎಂಬ ಶಂಕೆಗೆ ಆಧಾರವಿಲ್ಲ.
ಮೂಲಭೂತ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿರುವ ಈ ಹೊತ್ತಿನಲ್ಲಿ, ಶಾಸನಾತ್ಮಕ ಹಕ್ಕೊಂದನ್ನು ಮೂಲಭೂತ ಹಕ್ಕಾಗಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಸಾರ್ವಜನಿಕ ಅಭಿಪ್ರಾಯ ಆಂದೋಲನಗಳು ಈ ದಿಕ್ಕಿನಲ್ಲಿ ಸಾಗಬೇಕಿದೆ.




