ಈ ದಿನ ಸಂಪಾದಕೀಯ | ಬಿಜೆಪಿಗೆ ಮತದಾರರು ಕಲಿಸಿದ ಪಾಠವನ್ನು ಕಾಂಗ್ರೆಸ್ ಮರೆಯದಿರಲಿ

Date:

ಗೆದ್ದು ಗದ್ದುಗೆ ಏರಲು ಸಿದ್ಧವಾಗಿರುವ ಕಾಂಗ್ರೆಸ್ ಈ ಅಜ್ಞಾತ ಮತದಾರರನ್ನು ಮರೆಯಬಾರದು. ಅವರ ಕಾಣ್ಕೆಯನ್ನು ಕಡೆಗಣಿಸಬಾರದು. ಬಡವರ ಬೇಗುದಿ, ಶೋಷಿತರ ಸಿಟ್ಟು, ಅಸಹಾಯಕರ ಅತಂತ್ರ ಸ್ಥಿತಿಯನ್ನು ಧ್ಯಾನಿಸಿ, ಕಾಂಗ್ರೆಸ್ ಆಡಳಿತ ನಡೆಸಬೇಕಾಗಿದೆ.

ಈ ಸಲದ ವಿಧಾನಸಭಾ ಚುನಾವಣೆ ಹಲವರಿಗೆ ಹಲವು ರೀತಿಯಲ್ಲಿ ಪಾಠ ಕಲಿಸಿದೆ. ದುಷ್ಟರಿಗೆ, ದುರಹಂಕಾರಿಗಳಿಗೆ, ಸೋಮಾರಿಗಳಿಗೆ, ನಿಷ್ಪ್ರಯೋಜಕರಿಗೆ ನೀರಿಳಿಸಿದೆ. ಪಕ್ಷ, ಜಾತಿ, ಹಣ ಮತ್ತು ಪ್ರಭಾವ ಬಳಸಿ ಗೆಲ್ಲುತ್ತಿದ್ದವರಿಗೆ ಗರಬಡಿಸಿದೆ. ಯೋಗ್ಯರು-ಅಯೋಗ್ಯರ ನಡುವಿನ ಗೆರೆ ಅಳಿಸಿಹೋಗಿ ಆಯ್ಕೆಯೇ ಕಷ್ಟವಾಗಿರುವ ಈ ಕಾಲದಲ್ಲಿ ಮತದಾರರಿಗೆ ಮರೆಯಲಾರದ ಅನುಭವವನ್ನು ನೀಡಿದೆ.

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಬಿಗಿ ಹಿಡಿತದಿಂದ ಬಿಡಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿಂದ ಕರ್ನಾಟಕವನ್ನು ಪಾರು ಮಾಡಿದ ನಾಡಿನ ಜನತೆ ಇವತ್ತು ದೇಶದ ದಿಕ್ಕು ದೆಸೆ ಬದಲಿಸಿದ್ದಾರೆ. ಮಾದರಿ ಮತದಾರರಾಗಿ ಹೊರಹೊಮ್ಮಿದ್ದಾರೆ. ಇಡೀ ದೇಶವೇ ಕರ್ನಾಟಕದತ್ತ ನೋಡುವಂತೆ ಮಾಡಿದ್ದಾರೆ.

ಗೆದ್ದು ಗದ್ದುಗೆ ಏರಲು ಸಿದ್ಧವಾಗಿರುವ ಕಾಂಗ್ರೆಸ್ ಈ ಅಜ್ಞಾತ ಮತದಾರರನ್ನು ಮರೆಯಬಾರದು. ಅವರ ಕಾಣ್ಕೆಯನ್ನು ಕಡೆಗಣಿಸಬಾರದು. ಬಡವರ ಬೇಗುದಿ, ಶೋಷಿತರ ಸಿಟ್ಟು, ಅಸಹಾಯಕರ ಅತಂತ್ರ ಸ್ಥಿತಿಯನ್ನು ಧ್ಯಾನಿಸಿ, ಕಾಂಗ್ರೆಸ್ ಆಡಳಿತ ನಡೆಸಬೇಕಾಗಿದೆ. ಬಿಜೆಪಿ ಮಾಡಿರುವ ಸಾಲ, ಆರ್ಥಿಕ ಅಧ್ವಾನಗಳ ನಡುವೆಯೇ ಬಡವರಿಗೆ ಕೊಟ್ಟ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಬೇಕಾಗಿದೆ. ಅದು ನಿಜಕ್ಕೂ ಸವಾಲಿನ ಹಾದಿಯಾದರೂ, ಸಾಧಿಸಿ ತೋರಬೇಕಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪತ್ರಿಕಾ ಸ್ವಾತಂತ್ರ್ಯ- ಎದೆ ಸೆಟೆಸಿ ಸೆಣಸುವುದೊಂದೇ ದಾರಿ

ಇನ್ನು ಮುಖ್ಯಮಂತ್ರಿ ಯಾರಾಗಬೇಕೆಂಬ ಹಗ್ಗಜಗ್ಗಾಟ. ಇದು ಗೆದ್ದ ಎಲ್ಲ ಪಕ್ಷಗಳಲ್ಲೂ, ಎಲ್ಲ ಕಾಲಕ್ಕೂ ನಡೆಯುವ ಸಹಜ ರಾಜಕಾರಣ. 1972ರಲ್ಲಿ ದೇವರಾಜ ಅರಸು ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 165 ಸ್ಥಾನಗಳನ್ನು ಗೆದ್ದಿತ್ತು. ಅಂದಿನ ಕಾಂಗ್ರೆಸ್ಸಿನ ಅಧಿನಾಯಕಿ ಇಂದಿರಾ ಗಾಂಧಿಯವರ ಆಯ್ಕೆಯೂ ಅರಸು ಅವರೇ ಆಗಿದ್ದರು. ಆದರೆ, ಅಂದಿನ ಹಿರಿಯ ರಾಜಕಾರಣಿಗಳಾದ ಕೆ.ಎಚ್ ಪಾಟೀಲ್, ಕೆ.ಎಚ್ ರಂಗನಾಥ್, ಸಿದ್ಧವೀರಪ್ಪ, ಕೆ.ಎಸ್ ನಾಗರತ್ನಮ್ಮ, ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿದ್ದರು. ದೇವರಾಜ ಅರಸರನ್ನು ಅಧಿಕಾರದಿಂದ ದೂರವಿಡಲು ಹವಣಿಸಿದ್ದರು.

ಹಾಗಾಗಿ ಸಿಎಂ ಪೈಪೋಟಿ ಎನ್ನುವುದು ಇವತ್ತೇ ಹುಟ್ಟಿಕೊಂಡ ಹೊಸ ವಿವಾದವಲ್ಲ. ಗೆದ್ದವರಾರು ಸನ್ಯಾಸಿಗಳಲ್ಲ. ಆದರೆ ಇದು ಭಟ್ಟಂಗಿಗಳ ಬಲಪ್ರದರ್ಶನಕ್ಕೆ ಬಲಿಯಾಗಬಾರದು. ಬೀದಿಜಗಳ, ಜಾತಿಜಗಳವಾಗಿ ಪರಿವರ್ತನೆಯಾಗಬಾರದು. ಮಠಾಧೀಶರು, ಸ್ವಾಮೀಜಿಗಳು ರಾಜಕಾರಣಿಗಳಾಗಲೇಬಾರದು. ಬದಲಿಗೆ, ಪಕ್ಷದ ಚೌಕಟ್ಟಿನೊಳಗೇ ಚರ್ಚೆಯಾಗಬೇಕಾಗಿದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕಾಗಿದೆ. ಅಂತಹ ಪ್ರಬುದ್ಧತೆಯನ್ನು ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್– ಇಬ್ಬರೂ ತೋರಬೇಕಾಗಿದೆ. ಆ ಮೂಲಕ ಜಾತಿ ಮೀರಿದ ಜನನಾಯಕರೆಂದು ಮತ್ತೆ ಮತ್ತೆ ಸಾಬೀತುಪಡಿಸಬೇಕಾಗಿದೆ. ಹೈಕಮಾಂಡ್‌ಗೆ ಎದುರಾಗಿರುವ ಎದೆಬಡಿತವನ್ನು ನಿವಾರಿಸಬೇಕಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ, ಮುಖ್ಯಮಂತ್ರಿ ಯಾರೇ ಆದರೂ, ಮತ್ತೊಬ್ಬರು ಹೆಗಲಾಗಿ ನಿಲ್ಲಬೇಕಾಗಿದೆ. ಒಗ್ಗಟ್ಟು ಪ್ರದರ್ಶಿಸಿ ಸರ್ಕಾರ ಸುಗಮವಾಗಿ ಸಾಗಲು ಸಹಕರಿಸಬೇಕಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸತ್ಯವಾಯಿತು ಈದಿನದ ಸಮೀಕ್ಷೆ; ಇದು ಜನರ ಗೆಲುವು

ಇಲ್ಲದಿದ್ದರೆ, ಈ ಸಣ್ಣ ಸೆಣಸಾಟವನ್ನೇ ದೊಡ್ಡ ಗುಡ್ಡ ಮಾಡುವ ಮಾರಿಕೊಂಡ ಮಾಧ್ಯಮ- ಅಪಾತ್ರರಿಗೆ ಅಧಿಕಾರ, ಕಾಂಗ್ರೆಸ್ಸಿನ ಹಣೆಬರಹವೇ ಇಷ್ಟು ಎಂಬಂತೆ ಬಾಯಿ ಬಡಿದುಕೊಳ್ಳುತ್ತದೆ. ಅದನ್ನು ಬಿಜೆಪಿ ದೇಶದ ತುಂಬಾ ಪ್ರಚಾರ ಮಾಡುತ್ತದೆ. ಅಧಿಕಾರದಿಂದ ದೂರವಿರುವ ಅಯೋಗ್ಯರು, ಕೆಲವೇ ಕೆಲವು ದಿನಗಳ ಅಂತರದಲ್ಲಿ ಸಂತರಂತೆ ಕಾಣತೊಡಗುತ್ತಾರೆ. ಅದು ಬರಲಿರುವ 2024ರ ಲೋಕಸಭಾ ಚುನಾವಣೆ ಮೇಲೆ ವ್ಯತ್ತಿರಿಕ್ತ ಪರಿಣಾಮವನ್ನೂ ಬೀರುತ್ತದೆ.

ಹಾಗಾಗಿ ಮುಖ್ಯಮಂತ್ರಿ ಯಾರಾಗಬೇಕೆಂಬ ಗೊಂದಲವನ್ನು ಕಾಂಗ್ರೆಸ್ ಹೈಕಮಾಂಡ್ ಆದಷ್ಟು ಬೇಗ ಬಗೆಹರಿಸಬೇಕಾಗಿದೆ. ಅದಷ್ಟೇ ಅಲ್ಲ, ಮಂತ್ರಿಗಳಾಗುವ ಮಹತ್ವಾಕಾಂಕ್ಷಿಗಳು, ಸಿಗದಿದ್ದಾಗ ಸಿಡಿದೇಳುವ ಅತೃಪ್ತ ಆತ್ಮಗಳು, ಬಂಡಾಯದ ರೂಪದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಿನಿಕರ ದೊಡ್ಡ ದಂಡೇ ಕಾಂಗ್ರೆಸ್ಸಿನಲ್ಲಿದೆ. ಇವರೇನು ಇಂದ್ರ-ಚಂದ್ರರಲ್ಲ, ಕಾಸು ಖರ್ಚು ಮಾಡದೆ ಗೆದ್ದು ಬಂದವರಲ್ಲ, ಅಧಿಕಾರಕ್ಕೇರಿದರೆ ಬಿಜೆಪಿಗಿಂತ ಭಿನ್ನವಾದ ಆಡಳಿತವನ್ನೇನೂ ಕೊಡುವುದಿಲ್ಲ.

ಕಾಂಗ್ರೆಸ್ ಮುಖಂಡರು ಮತ್ತು ವರಿಷ್ಠರು ಜನ ಕೊಟ್ಟಿರುವ ಈ ಅಧಿಕಾರವನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಮತ್ತು ಜನಹಿತಕ್ಕಾಗಿ ಮಾತ್ರ ವಿನಿಯೋಗಿಸಬೇಕು. ಕುರ್ಚಿಗಾಗಿ ಕಿತ್ತಾಡುವುದು, ಮಂತ್ರಿ ಪಟ್ಟಕ್ಕಾಗಿ ಬಂಡಾಯ, ಭಿನ್ನಮತ ಇಂಥವನ್ನೆಲ್ಲ ಮಾಡಿ ಜನರಲ್ಲಿ ರೇಜಿಗೆ ಹುಟ್ಟಿಸಬಾರದು. ಭ್ರಷ್ಟಾಚಾರವನ್ನಂತೂ ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸಬಾರದು. ಇವೆಲ್ಲ ಮಾಡಿದ್ದರಿಂದಲೇ ಬಿಜೆಪಿಗೆ ಹೀನ ಸ್ಥಿತಿ ಬಂದೊದಗಿದ್ದು ಎನ್ನುವುದನ್ನು ಕಾಂಗ್ರೆಸ್ ಮರೆಯಬಾರದು.

ಸಂಕಟದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಕೈ ಹಿಡಿದಿರುವ ನಾಡಿನ ಬಡವರು, ಶೋಷಿತರು, ಅಸಹಾಯಕರು ಅಸಹ್ಯ ಪಟ್ಟುಕೊಳ್ಳುವ ಮುನ್ನ ಎಚ್ಚೆತ್ತು, ಸರ್ಕಾರ ರಚನೆ ಮಾಡುವ, ಜನತೆಯ ಆಶೋತ್ತರಗಳನ್ನು ಈಡೇರಿಸುವ ಕೆಲಸ ಆಗಬೇಕಾಗಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...

ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ,...