ದೇಶಾದ್ಯಂತ ಇಂದು (ಭಾನುವಾರ) ನೀಟ್-ಯುಜಿ ಮರುಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳಿಂದ ವಿವಾದಕ್ಕೆ ತುತ್ತಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ), ಮತ್ತೆ ಸಮಸ್ಯೆ ಮಾಡಿಕೊಳ್ಳದಂತೆ ಪರೀಕ್ಷೆ ನಡೆಸಲು ಮುಂದಾಗಿದೆ. ಪರೀಕ್ಷೆಯನ್ನು ಅತ್ಯಂತ ಸುಗಮ ಮತ್ತು ಸುರಕ್ಷಿತವಾಗಿ ನಡೆಸಲು ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಿದೆ.
ಇಂದಿನ ಬೃಹತ್ ಪರೀಕ್ಷೆಯಲ್ಲಿ ಒಟ್ಟು 22.79 ಲಕ್ಷ ಅಭ್ಯರ್ಥಿಗಳು ಭಾಗವಹಿಸುತ್ತಿದ್ದು, ಸಿದ್ಧತೆಗಳನ್ನು ಅಂತಿಮವಾಗಿ ಪರಿಶೀಲಿಸಲು ಸಂಸ್ಥೆಯು ಶನಿವಾರ ದೇಶಾದ್ಯಂತ ಅಣಕು ಪರೀಕ್ಷೆಯನ್ನು ನಡೆಸಿದೆ. ಈ ಬಾರಿ ಮರುಪರೀಕ್ಷೆಗೆ ಹೆಚ್ಚುವರಿಯಾಗಿ 15 ನಿಮಿಷಗಳ ಸಮಯವನ್ನು ನೀಡಲಾಗುತ್ತಿದ್ದು, ಪರೀಕ್ಷೆಯು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಭದ್ರತೆ ಮತ್ತು ಶೀಘ್ರ ಪ್ರಕ್ರಿಯೆಯನ್ನು ಸಮತೋಲನಗೊಳಿಸಲು ಎನ್‌ಟಿಎ ವಿಶೇಷ ಆದ್ಯತೆ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್, “ಬಯೋಮೆಟ್ರಿಕ್ ದೃಢೀಕರಣದ ಸಮಯದಲ್ಲಿ ಅಭ್ಯರ್ಥಿಗಳು ಕಾಯುವ ಅವಧಿಯನ್ನು ಕಡಿಮೆ ಮಾಡಲು ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯನ್ನು ಯಾವುದೇ ಲೋಪವಿಲ್ಲದೆ ನಡೆಸಲು ವಾಯುಪಡೆ ಮತ್ತು ಅರೆಸೇನಾ ಪಡೆಗಳನ್ನು ಸಹ ಬಳಸಿಕೊಳ್ಳಲಾಗುತ್ತಿದ್ದು, ಸರ್ಕಾರದ ಎಲ್ಲ ವಿಭಾಗಗಳು ಒಟ್ಟಾಗಿ ಕೆಲಸ ಮಾಡುವ ಸಮಗ್ರ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಮೇ 3 ರಂತೆಯೇ ಸುಮಾರು 5,400 ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಮತ್ತು ಮೆಟಲ್ ಡಿಟೆಕ್ಟರ್‌ಗಳ ಮೂಲಕ ಕಟ್ಟುನಿಟ್ಟಿನ ತಪಾಸಣೆ ನಡೆಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳು ಭದ್ರತಾ ವ್ಯವಸ್ಥೆಯಲ್ಲಿ ನೇರವಾಗಿ ಭಾಗಿಯಾಗಿದ್ದು, ಪರೀಕ್ಷಾ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಾಗಿಸಲು ಪೊಲೀಸ್ ರಕ್ಷಣೆಯೊಂದಿಗೆ ಜಿಪಿಎಸ್ ಅಳವಡಿಸಿದ ವಾಹನಗಳನ್ನು ಬಳಸಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: 37 ದಿನಗಳಲ್ಲಿ 12 ಬಲಿ: ವಿದ್ಯಾರ್ಥಿಗಳನ್ನು ‘ಸೈಕಲಾಜಿಕಲ್ ಬರ್ನ್‌ಔಟ್’ಗೆ ತಳ್ಳುವ ನೀಟ್ ಮರುಪರೀಕ್ಷೆ ಒತ್ತಡ!
ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಮೇ 12 ರಂದು ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಪ್ರಸ್ತುತ, ಈ ಇಡೀ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿದೆ.
ಮತ್ತೊಂದೆಡೆ, ಪರೀಕ್ಷೆಯಲ್ಲಿ ನಡೆಯುವ ಅಕ್ರಮ ಜಾಲಗಳನ್ನು ತಡೆಯಲು ಕೇಂದ್ರ ಸರ್ಕಾರವು ದೇಶಾದ್ಯಂತ ಟೆಲಿಗ್ರಾಮ್ ಆಪ್ ಬಳಕೆಯನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಅಲ್ಲದೆ, ಈ ಆಪ್‌ನಲ್ಲಿ ಸಂದೇಶಗಳನ್ನು ಎಡಿಟ್ ಮಾಡುವ ವೈಶಿಷ್ಟ್ಯವನ್ನು ಜೂನ್ 30 ರವರೆಗೆ ರದ್ದುಗೊಳಿಸಲಾಗಿದೆ.



