ಪಶ್ಚಿಮ ಬಂಗಾಳದಲ್ಲಿ 2026ರ ವಿಧಾನಸಭಾ ಚುನಾವಣೆಯ ನಿರ್ಣಾಯಕ ಎರಡನೇ ಹಾಗೂ ಅಂತಿಮ ಹಂತದ ಮತದಾನವು ಬುಧವಾರ ಆರಂಭವಾಗಿದ್ದು, ಬೆಳಿಗ್ಗೆ 9 ಗಂಟೆಯ ವೇಳೆಗೆ ರಾಜ್ಯಾದ್ಯಂತ ಶೇಕಡಾ 18.39 ರಷ್ಟು ಮತದಾನ ದಾಖಲಾಗಿದೆ. ಉತ್ಸಾಹದ ಮತದಾನದ ನಡುವೆಯೂ, ರಾಜ್ಯದ ಹಲವು ಭಾಗಗಳಲ್ಲಿ ಹಿಂಸಾಚಾರ ಹಾಗೂ ಅಶಾಂತಿಯ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿವೆ.
ಹುಗ್ಲಿಯಲ್ಲಿ ನಕಲಿ ಏಜೆಂಟ್ ವಿಚಾರವಾಗಿ ಟಿಎಂಸಿ ಮತ್ತು ಐಎಸ್‌ಎಫ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ನಾಡಿಯಾದಲ್ಲಿ ಟಿಎಂಸಿ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಏಜೆಂಟ್ ದೂರಿದ್ದಾರೆ. ಹೌರಾದಲ್ಲಿ ಇವಿಎಂ ಯಂತ್ರ ಕೈಕೊಟ್ಟಾಗ ಶುರುವಾದ ಗಲಾಟೆಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಲಾಠಿ ಚಾರ್ಜ್ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿವೆ. ಇತ್ತ ಕೋಲ್ಕತ್ತಾದಲ್ಲಿ ತಮ್ಮ ಏಜೆಂಟ್ ಅನ್ನು ಹೊರಹಾಕಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಅವರು ಅಧಿಕಾರಿಗಳ ಜೊತೆ ಜಗಳವಾಡಿದ್ದಾರೆ. ಈ ಗಲಾಟೆಗಳ ಬಗ್ಗೆ ಕಿಡಿಕಾರಿರುವ ಸಿಎಂ ಮಮತಾ ಬ್ಯಾನರ್ಜಿ, “ಕೇಂದ್ರದ ಭದ್ರತಾ ಪಡೆಗಳು ಬಿಜೆಪಿಯವರ ಮಾತು ಕೇಳಿಕೊಂಡು ನಮ್ಮ ಟಿಎಂಸಿ ನಾಯಕರನ್ನು ಗುರಿಯಾಗಿಸಿ ತೊಂದರೆ ಕೊಡುತ್ತಿವೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ದಕ್ಷಿಣ ಬಂಗಾಳ ಹಾಗೂ ಕೋಲ್ಕತ್ತಾ ಭಾಗಗಳಲ್ಲಿ ಮತದಾನ ನಡೆಯುತ್ತಿದ್ದು, ಇದು ಅಧಿಕಾರಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಭದ್ರಕೋಟೆಗಳಾಗಿವೆ. ಸುಮಾರು 3.22 ಕೋಟಿ ಮತದಾರರು 1,448 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಯ ವರದಿಯಂತೆ, ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ಅತ್ಯಧಿಕ ಶೇಕಡಾ 20.86 ರಷ್ಟು ಮತದಾನವಾಗಿದೆ. ಉಳಿದಂತೆ ಹೂಗ್ಲಿಯಲ್ಲಿ ಶೇ. 20.16, ನಾಡಿಯಾ ಶೇ. 18.50, ಉತ್ತರ 24 ಪರಗಣ ಶೇ. 17.81, ಹೌರಾ ಶೇ. 17.76, ದಕ್ಷಿಣ 24 ಪರಗಣ ಶೇ. 17.25, ಕೋಲ್ಕತ್ತಾ ಉತ್ತರ ಶೇ. 17.28 ಹಾಗೂ ಕೋಲ್ಕತ್ತಾ ದಕ್ಷಿಣದಲ್ಲಿ ಶೇ. 16.81 ರಷ್ಟು ಮತದಾನ ದಾಖಲಾಗಿದೆ.
ಇದನ್ನು ಓದಿದ್ದೀರಾ? ಓಮನ್ ಬಳಿ 12 ಭಾರತೀಯರಿದ್ದ ಹಡಗಿನ ಮೇಲೆ ಇರಾನ್ ದಾಳಿ; ಎಲ್ಲಾ ಸಿಬ್ಬಂದಿ ಸುರಕ್ಷಿತ
ಕೋಲ್ಕತ್ತಾ ಭಾಗದ ಭವಾನಿಪುರ ಕ್ಷೇತ್ರವು ಈ ಚುನಾವಣೆಯ ಅತ್ಯಂತ ಕುತೂಹಲಕಾರಿ ಕ್ಷೇತ್ರವಾಗಿದೆ. ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮಮತಾ ಬ್ಯಾನರ್ಜಿ ಅವರು ಭವಾನಿಪುರದ ವಿವಿಧ ಬೂತ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆಯಲ್ಲಿ ಅವರು, “ಬಿಜೆಪಿ ನಿರ್ದೇಶನದ ಮೇರೆಗೆ ಹೊರಗಿನಿಂದ ಬಂದ ಚುನಾವಣಾ ವೀಕ್ಷಕರು ವರ್ತಿಸುತ್ತಿದ್ದು, ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣಾ ಆಯೋಗವು ಭದ್ರತೆಗಾಗಿ ಅತ್ಯಂತ ಕಠಿಣವಾದ ಕ್ರಮಗಳನ್ನು ಕೈಗೊಂಡಿದೆ. ಒಟ್ಟು 41,001 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 8,845 ಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಶಾಂತಿಯುತ ಮತದಾನಕ್ಕಾಗಿ ಸುಮಾರು 2,400 CAPF (ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ) ತುಕಡಿಗಳನ್ನು ನಿಯೋಜಿಸಲಾಗಿದೆ. ಮತದಾನಕ್ಕೂ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ಎರಡು ದಿನಗಳಲ್ಲಿ 2,473 ಜನರನ್ನು ಬಂಧಿಸಲಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 93.2 ರಷ್ಟು ಮತದಾನ ದಾಖಲಾಗಿ ದಾಖಲೆ ನಿರ್ಮಿಸಿತ್ತು




