ಕಬ್ಬು ಕೊಯ್ಲಿನ ಋತುವನ್ನೇ ನೆಚ್ಚಿಕೊಂಡಿರುವ ಬಡ ಕಾರ್ಮಿಕ ಕುಟುಂಬಗಳು ಬೇರೆ ಬೇರೆ ರಾಜ್ಯಗಳಿಂದ ಕೂಲಿಗಾಗಿ ಮಹಾರಾಷ್ಟ್ರದ ಕಬ್ಬು ಬೆಳೆಯುವ ಊರುಗಳಿಗೆ ವಲಸೆ ಬರುತ್ತವೆ. ಮುಟ್ಟಾಗುವ ಮಹಿಳೆಯರು ರಜೆ ತೆಗೆದುಕೊಂಡರೆ ತಮ್ಮ ಕೆಲಸ ಕುಂಠಿತವಾಗುತ್ತದೆ ಎಂಬ ದುರಾಲೋಚನೆಯ ಗುತ್ತಿಗೆದಾರರು ಮಹಿಳೆಯರನ್ನು ಕೂಲಿಗೆ ನೇಮಿಸಿಕೊಳ್ಳುವುದಿಲ್ಲ. ಉಪಾಯಗಾಣದ ಅಸಂಖ್ಯ ಮಹಿಳಾ ಕೂಲಿಕಾರರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಿದ್ಡಾರೆ. ಹಳ್ಳಿಗಳು ಗರ್ಭಗಳೇ ಇಲ್ಲದ ಖಾಲಿ ಒಡಲುಗಳಾಗಿವೆ.
ಮಹಾರಾಷ್ಟ್ರದಲ್ಲಿ ಈ ವರ್ಷ ಕಬ್ಬು ಕಟಾವು ಮಾಡುವ ಮಹಿಳೆಯರು ಗರ್ಭಕೋಶಗಳನ್ನು ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸುದ್ದಿ ಓದಿ ಆತಂಕವಾಯಿತು. ಇದೇನು ಹೊಸ ಸುದ್ದಿಯಲ್ಲ. ಕಳೆದ ಹಲವಾರು ವರುಷಗಳಿಂದ ಕೂಲಿಯ ಹೆಸರಿನಲ್ಲಿ ಮಹಿಳೆಯರ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಇದನ್ನು ತಡೆಯುವ ಯಾವ ಕ್ರಮಗಳೂ ಇದುವರೆಗೆ ಜಾರಿಯಾಗದ್ದು ಅತ್ಯಂತ ಶೋಚನೀಯವಾಗಿದೆ. ಇದುವರೆಗೂ ನೂರಾರು ಮಹಿಳಾ ಕಾರ್ಮಿಕರು ಗರ್ಭಕೋಶಗಳನ್ನು ಕಳೆದುಕೊಳ್ಳುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹಾಳಾಗುತ್ತಿರುವ ಅವರ ಆರೋಗ್ಯದ ಕುರಿತ ಕಳವಳದ ಕಾಳಜಿಯ ಯಾವ ಕ್ರಮಗಳಿಗಾಗಿ ಹಕ್ಕೊತ್ತಾಯದ ಯಾವ ಸುದ್ದಿಗಳೂ ಕಣ್ಣಿಗೆ ಬಿದ್ದಿಲ್ಲ ಇದುವರೆಗೂ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ 843 ಮಹಿಳಾ ಕಬ್ಬು ಕಟಾವು ಕಾರ್ಮಿಕರು 2024-2025ರ ಸುಗ್ಗಿಯ ಕಾಲಕ್ಕೆ ಮುಂಚಿತವಾಗಿ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಮುಟ್ಟಿನ ಸಮಯದಲ್ಲಿ ಕೆಲಸದ ದಿನಗಳನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಇವತ್ತು ವಿಕಸಿತ ಭಾರತ ಮಹಿಳಾ ಮೀಸಲಾತಿ, ಮಹಿಳಾ ಹಕ್ಕುಗಳ ಬಗ್ಗೆ ಮಾತಾಡುತ್ತಿರುವಾಗ ನಿಜವಾದ ಭಾರತದ ಚಿತ್ರಣ ಬೆಚ್ಚಿಬೀಳಿಸುತ್ತದೆ. ಈ ಹೆಣ್ಣುಮಕ್ಕಳ ಒಡಲು ಖಾಲಿಯಾಗುತ್ತಿರುವುದು- ಯಾವುದೇ ಗಂಭೀರ ರೋಗದಿಂದ ಅಲ್ಲ, ಆರೋಗ್ಯಕ್ಕಾಗಿ ಅಲ್ಲ, ಕೇವಲ ಅವರ ಮಾಸಿಕ ಧರ್ಮ ಅಥವಾ ಗರ್ಭಧಾರಣೆಯಿಂದಾಗಿ ಅವರು ಒಂದು ದಿನದ ರಜೆಯನ್ನೂ ಪಡೆಯದೇ ದುಡಿಮೆಯಿಂದ ತಪ್ಪಿಸಿಕೊಳ್ಳದಂತೆ ಮಾಡಲು ಅವರ ದೇಹದಿಂದ ಆ ಅಂಗವನ್ನೇ ಕಿತ್ತುಹಾಕುವಂತಹ ಅಮಾನವೀಯ ಕೃತ್ಯವನ್ನು ಮಾಡುತ್ತಲೇ ಬಂದಿದ್ದಾರೆ, ಇವತ್ತಿಗೂ ಮಾಡುತ್ತಿದ್ದಾರೆ.
ಧನ ಪಿಶಾಚಿ ಕಾಂಟ್ರಾಕ್ಟರ್ಗಳು, ಲಾಭಕೋರ ಆಸ್ಪತ್ರೆಗಳು, ಸಕ್ಕರೆ ಉದ್ಯಮದ ಪ್ರಭಾವಿಗಳು —ಈ ಎಲ್ಲಾ ರಾಕ್ಷಸರು ಸೇರಿ ಮಹಿಳೆಯರ ದೇಹಗಳನ್ನು ಲಾಭದ ಯಂತ್ರಗಳಾಗಿ ಮಾಡಿದ್ದಾರೆ. ಈ ಭೀಕರ ಘಟನೆಗಳು ಹಲವು ವರ್ಷಗಳಿಂದ ದಾಖಲಾಗುತ್ತಿವೆ. ತನಿಖೆಗಳು ಸಾವಿರಾರು ಪ್ರಕರಣಗಳನ್ನು ಬಹಿರಂಗಪಡಿಸಿವೆ. ಆದರೂ ಈ ಮಹಿಳೆಯರನ್ನು ಜೋಪಾನ ಮಾಡುವಂತಹ ಯಾವ ಪವಾಡಗಳೂ ನಡೆದಿಲ್ಲ. ಮುಖ್ಯಧಾರೆ ಮಾಧ್ಯಮಗಳಲ್ಲಿ ಯಾವುದೇ ಆಕ್ರೋಶವಿಲ್ಲ. ನ್ಯಾಯಕ್ಕಾಗಿ ರಾಜಕೀಯ ನಾಯಕರು ಒತ್ತಾಯಿಸುತ್ತಿಲ್ಲ. “ಮಹಿಳಾ ಹಕ್ಕುಗಳ” ಹೋರಾಟಗಾರರ ಧ್ವನಿಯೂ ಕೇಳುತ್ತಿಲ್ಲ. ಇದು ಇಂದಿನ ದುರಂತ ಭಾರತದ ಚಿತ್ರಣ. ದೇಶ “ಮಹಿಳಾ ಮೀಸಲು ಮಸೂದೆ” ಬಗ್ಗೆ ಸಂಭ್ರಮಿಸುತ್ತಿರುವಾಗ, ನಿಜವಾದ ಭಾರತದ ಹೆಣ್ಣುಮಕ್ಕಳು ಸಕ್ಕರೆಕಬ್ಬಿನ ಹಣಕ್ಕಾಗಿ ಮೌನವಾಗಿ ವೈದ್ಯಕೀಯ ಹಿಂಸೆಗೆ ಒಳಗಾಗುತ್ತಿದ್ದಾರೆ. ಇದು ಸಬಲೀಕರಣವಲ್ಲ. ಇದು ಆಧುನಿಕ ದಾಸ್ಯ ಮತ್ತು ವೈದ್ಯಕೀಯ ಭಯೋತ್ಪಾದನೆ. ಸಕ್ಕರೆ ಉದ್ಯಮಿಗಳ ಗೂಂಡಾಗಿರಿ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬಹುತೇಕ ಮಹಿಳೆಯರ ಒಡಲು ಗರ್ಭಕೋಶಗಳಿಲ್ಲದ ಖಾಲಿ ಗೂಡಾಗಿವೆ. ಸುಮಾರು ಶೇ.50ರಷ್ಟು ಮಹಿಳೆಯರು ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅಮಾನವೀಯ ಕೃತ್ಯವನ್ನು ಪ್ರಮುಖ ಇಂಗ್ಲಿಷ್ ಪತ್ರಿಕೆಗಳು ಬಹಳ ಹಿಂದೆಯೇ ಬಯಲು ಮಾಡಿದ್ದವು. ಚುನಾವಣೆಯ ತುರುಸಿನಲ್ಲಿ ಗೆಲ್ಲುವ ಉಮೇದಿನಲ್ಲಿ ಮುಳುಗಿ ರೋಡ್ ಶೋ ಮಾಡುವವರಿಗೆ ಇವು ಸುದ್ದಿಗಳಲ್ಲವೇ ಅಲ್ಲ. ಮಾಧ್ಯಮಗಳಿಗೂ ಈ ಸುದ್ದಿ ಬೇಡ. ಜನರು ಸತ್ತರೆ ಸಾಯಲಿ ಚುನಾವಣೆಯನ್ನು ಗೆಲ್ಲುತ್ತಿರಬೇಕು ಅಷ್ಟೇ!
ಕಬ್ಬು ಕೊಯ್ಲಿನ ಋತುವನ್ನೆ ನೆಚ್ಚಿಕೊಂಡಿರುವ ಬಡ ಕಾರ್ಮಿಕ ಕುಟುಂಬಗಳು ಬೇರೆ ಬೇರೆ ರಾಜ್ಯಗಳಿಂದ ಕೂಲಿಗಾಗಿ ಮಹಾರಾಷ್ಟ್ರದ ಕಬ್ಬು ಬೆಳೆಯುವ ಊರುಗಳಿಗೆ ವಲಸೆ ಬರುತ್ತವೆ. ಮುಟ್ಟಾಗುವ ಮಹಿಳೆಯರು ರಜೆ ತೆಗೆದುಕೊಂಡರೆ ತಮ್ಮ ಕೆಲಸ ಕುಂಠಿತವಾಗುತ್ತದೆ ಎಂಬ ದುರಾಲೋಚನೆಯ ಗುತ್ತಿಗೆದಾರರು ಮಹಿಳೆಯರನ್ನು ಕೂಲಿಗೆ ನೇಮಿಸಿಕೊಳ್ಳುವುದಿಲ್ಲ. ಉಪಾಯಗಾಣದ ಅಸಂಖ್ಯ ಮಹಿಳಾ ಕೂಲಿಕಾರರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಿದ್ಡಾರೆ. ಹಳ್ಳಿಗಳು ಗರ್ಭಗಳೇ ಇಲ್ಲದ ಖಾಲಿ ಒಡಲುಗಳಾಗಿವೆ.
ರಾಷ್ಟ್ರಿಯ ಮಹಿಳಾ ಆಯೋಗ, ಮಹಿಳಾ ಸಂಘಟನೆಗಳನ್ನು ಬಿಟ್ಟರೆ ಚುನಾವಣಾ ಪ್ರಚಾರ ಪ್ರಣಾಳಿಕೆಯಲ್ಲಿ, ಭಾಷಣಗಳಲ್ಲಿ ಮಹಿಳೆಯರ ಯಾವೊಂದೂ ಸಮಸ್ಯೆಗಳು ಸ್ಥಾನಪಡೆದುಕೊಳ್ಳದೇ ಅವರು ಅದೃಶ್ಯಜೀವಿಗಳಾಗಿದ್ದು ನಮ್ಮ ದುರ್ದೈವ. ದುಡಿಮೆಗೆ ಶಕ್ಯರಿರುವ ಮಹಿಳೆಯರಿಗೆ ಕೆಲಸ ಕೊಡದೇ ಆ ಹಕ್ಕನ್ನೂ ಕಿತ್ತುಕೊಳ್ಳುವುದು ಕೇವಲ ದೌರ್ಜನ್ಯವಷ್ಟೇ ಅಲ್ಲ, ಮಾನವ ಹಕ್ಕುಗಳ ಉಲ್ಲಂಘನೆ ಕೂಡ ಆಗಿದೆ.
ಬರಪೀಡಿತ ಪಶ್ಚಿಮ ಮಹಾರಾಷ್ಟ್ರದ ಕಬ್ಬು ಬೆಳೆಯುವ ಈ ನಾಡಿನಲ್ಲಿ ಅಕ್ಟೋಬರ್ನಿಂದ ಮಾರ್ಚ್ವರೆಗೆ ಕಬ್ಬು ಕೊಯ್ಯುವ ಕೆಲಸ. ಪುರುಷನಿಗೆ ಸಮಾನಾಗಿ ದುಡಿಯುವ ಮಹಿಳೆಗೆ ತಾನೂ ಸರಿ ಸಮಾನಳು, ಗಂಡಸಿಗೆ ಸಿಗುವ ಕೂಲಿಯಷ್ಟೇ ತನಗೂ ಸಿಗಬೇಕು. ಅದು ತನ್ನ ಹಕ್ಕು. ತನ್ನ ಶ್ರಮಕ್ಕೆ ಸಿಗಬೇಕಾದ ಗೌರವ ಎಂಬ ತಿಳಿವಳಿಕೆಯ ಕೊರತೆಯೇ ಈ ಗುತ್ತಿಗೆದಾರನ ಬಂಡವಾಳ. ಗರ್ಭಕೋಶವನ್ನು ತೆಗೆಸಿಕೊಳ್ಳಲು ತಗಲುವ ವೆಚ್ಚವನ್ನೂ ಗುತ್ತಿಗೆದಾರನೇ ವಹಿಸಿಕೊಳ್ಳುತ್ತಾನೆ. ಈ ಮೂಲಕ ಕೂಲಿ ಕಾರ್ಮಿಕ ಕುಟುಂಬ ಆ ಸಾಲವನ್ನು ತೀರಿಸದೆ ಬೇರೆ ಕಡೆ ಹೋಗಲಾರರು. ಹೀಗೆ ಇದೊಂದು ಅಲಿಖಿತ ಒಪ್ಪಂದವಿದ್ದಂತೆ. ಕಬ್ಬಿನ ಫಸಲು ಕೊಯ್ಲಾಗುವವರೆಗೆ ಕೂಲಿಕಾರರು ಗುತ್ತಿಗೆದಾರನ ಉಕ್ಕಿನ ಪಂಜರದಲ್ಲಿ ಬಂದಿಯಾದ ಗುಲಾಮರು.

ಈ ಪ್ರಕರಣಗಳು ಮುಖ್ಯವಾಗಿ 2010-2020 ರ ಹೊತ್ತಿಗೆ ಬೆಳಕಿಗೆ ಬಂದವು. ಮಹಾರಾಷ್ಟ್ರ ರಾಜ್ಯ ಸರ್ಕಾರದ ಅಂಕಿಅಂಶದ ಪ್ರಕಾರ ಇದುವರೆಗೂ ಸುಮಾರು 1000-1500 ಮಹಿಳೆಯರು ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಅದರಲ್ಲಿ 85% ಶಸ್ತ್ರಚಿಕಿತ್ಸೆಗಳು ಖಾಸಗಿ ಆಸ್ಪತ್ರೆಯಲ್ಲಿ ನಡೆದಿವೆ. ಕಳೆದ ವರ್ಷದ ತುಲನೆಯಲ್ಲಿ 200 ಮಹಿಳೆಯರಲ್ಲಿ ಶೇಕಡ 36 ಜನ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರಂತೆ. ಮೇಲ್ಪದರಿಗೆ ಇದು ಗುತ್ತಿಗೆದಾರ ಕಾರ್ಮಿಕರ ನಡುವಿನ ಸಂಘರ್ಷದಂತೆ ಕಂಡರೂ ಆಳದಲ್ಲಿ ಗುತ್ತಿಗೆದಾರ, ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರು ಮತ್ತು ಮಾಲೀಕ ವರ್ಗದ ದೊಡ್ದ ಜಾಲವೇ ಇದೆ.
ಈ ಸಮಸ್ಯೆಯನ್ನು ಕುರಿತು ಅಧ್ಯಯನ ಮಾಡಿದ ಒಂದು ಸಂಸ್ಥೆಯ ಪ್ರಕಾರ ಮಹಿಳೆ ಮುಟ್ಟಾದರೆ ತಮ್ಮ ಕೆಲಸ ಕುಂಠಿತವಾಗುತ್ತದೆ ಎಂದು ಲೆಕ್ಕ ಹಾಕಬಲ್ಲ ಧನದಾಹಿಗಳಿಗೆ ಮಹಿಳೆಯ ಶ್ರಮಶಕ್ತಿ ಪುರುಷನ ಶ್ರಮಶಕ್ತಿಯಷ್ಟೇ ಮೌಲ್ಯಯುತವೆಂದು ಅನಿಸುವುದಿಲ್ಲ. ಪುರುಷಪ್ರಧಾನ ಸಮಾಜದಲ್ಲಿನ ನ್ಯೂನತೆಗಳು ಜಡ್ಡು ಹಿಡಿದ ವ್ಯವಸ್ಥೆಯಲ್ಲಿನ ಕೊರತೆಗಳು, ಲಿಂಗ ತಾರತಮ್ಯ, ವೇತನದಲ್ಲಿ ಅಸಮಾನತೆ, ಲೈಂಗಿಕ ದೌರ್ಜನ್ಯಗಳಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶ್ರಮಿಕ ಮಹಿಳೆಯರು ದುಡಿಯುವಂತೆ ಮಾಡುತ್ತವೆ.
ಒಬ್ಬ ಕೂಲಿಕಾರ ಹೇಳುವಂತೆ, ಒಂದು ಟನ್ ಕಬ್ಬನ್ನು ಕೊಯ್ದರೆ ಸಿಗುವ ಹಣ. 250 ರಿಂದ 400 ರುಪಾಯಿಗಳು. ದಿನಕ್ಕೆ 3-4 ಟನ್ನು ಕಬ್ಬನ್ನು ಕೊಯ್ಯಬಹುದು. ಜೋಡಿಗೆ (ಗಂಡ ಹೆಂಡತಿ) ದಿನಕ್ಕೆ 500- 800 ರುಪಾಯಿ ಮಾತ್ರ ಬರುತ್ತದೆ. ಮಧ್ಯವರ್ತಿಗೆ ಸುಮಾರು 20% ಕಮಿಷನ್ ಹೋಗುತ್ತದೆ. ಆಗ ಕಾರ್ಮಿಕರ ಕೈಗೆ ಬರುವ ನಿಜವಾದ ಹಣ ಇನ್ನೂ ಕಡಿಮೆ. ಇನ್ನು ಗಂಡ ಹೆಂಡತಿ ಜೋಡಿಗೆ ಒಟ್ಟಾಗಿ ಕೂಲಿ ಕೊಡುವುದರಿಂದ ಮಹಿಳೆಯ ಕೆಲಸಕ್ಕೆ ಸ್ವತಂತ್ರ ಮೌಲ್ಯಿಕರಣವೇ ಇಲ್ಲ. ಅವಳ ಶ್ರಮ “ಗಂಡನ ಸಹಾಯಕಿ” ಎಂದಾಗಿ ಅಷ್ಟೇ ಪರಿಗಣಿಸಿದಂತಾಗಲಿಲ್ಲವೇ? ಇದು ಮಹಿಳೆಯ ಆರ್ಥಿಕ ಅಸ್ಮಿತೆಯನ್ನೇ ಅಳಿಸಿಹಾಕುವಂತಹ ಸಾಂಸ್ಥಿಕ ವ್ಯವಸ್ಥೆಯಾಗಿದೆ. ಈ ಪರಿಶ್ರಮದ ಮೇಲೆ ಆಕೆಗೆ ಅಡುಗೆ, ಮಕ್ಕಳ ಜೋಪಾನ, ಇವೆಲ್ಲದರ ಹೊಣೆಯೂ ಅವಳದೇ.
ಈ ನಾಲ್ಕೈದು ತಿಂಗಳ ಕಬ್ಬು ಕೊಯ್ಲಿನ ಅವಧಿಯಲ್ಲಿ ಸುಮಾರು 300 ಟನ್ನುಗಳಷ್ಟು ಕಬ್ಬನ್ನು ಕೊಯ್ಯುತ್ತಾರೆ. ಇದೊಂದೇ ಅವರ ವಾರ್ಷಿಕ ಆದಾಯ. ಆ ನಂತರ ಅವರಿಗೆ ಯಾವ ಕೂಲಿಯೂ ಸಿಗುವುದಿಲ್ಲವಂತೆ. ಆದಕಾರಣ ಅನಾರೋಗ್ಯದಲ್ಲಿಯೂ ಒಂದು ದಿನ ರಜೆ ತೆಗೆದುಕೊಳ್ಳದೆ ದುಡಿಯಬೇಕಾದ ಅನಿವಾರ್ಯತೆಯಿದೆ. ಮಹಿಳೆ ಒಂದು ಮುಟ್ಟಿನ ರಜೆ ಮಾಡಿದರೆ ಅವಳ ಮತ್ತು ಅವಳ ಗಂಡನ ಒಂದು ದಿನದ ಕೂಲಿಯನ್ನು ಮುರಿದುಕೊಳ್ಳುತ್ತಾನಂತೆ ಗುತ್ತಿಗೆದಾರ. ಅಂದರೆ ಆಕೆ ರಜೆ ಮಾಡಿದರೆ ಒಂದೇ ದಿನಕ್ಕೆ 500 ರುಪಾಯಿಗಳ ಹಜಾಮತ್ತು! ಇದ್ಯಾವ ನೀತಿ? ಈ ಎಲ್ಲಾ ಒತ್ತಡದಲ್ಲಿ ಮಹಿಳೆಯರು ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಗೆ ಅನಿವಾರ್ಯವಾಗಿ ಒಳಗಾಗಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಈ ಬಗ್ಗೆ ಹಿಂದಿನ ಸರ್ಕಾರಿ ವರದಿಗಳು ಎಚ್ಚರಿಸಿದ್ದರೂ ಸಹ ಈ ಪದ್ಧತಿ ಮುಂದುವರಿದಿದೆ ಎಂದು ಕಾರ್ಯಕರ್ತರು ವರದಿ ಮಾಡಿದ್ದಾರೆ.
ಈ ಮಹಿಳೆಯರ ದುಃಸ್ಥಿತಿ ನೆನೆದಾಗ ಲಂಕೇಶರ “ಅವ್ವ” ನೆನಪಾಗುತ್ತಾಳೆ. “ನನ್ನವ್ವ ಬದುಕಿದ್ದು ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ; ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ; ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ”!
ದುಡಿತಕ್ಕೆ ಗರ್ಭಕೋಶವನ್ನು ತೆಗೆಸಿಕೊಂಡ ಈ ಅವ್ವಂದಿರು ಆರೋಗ್ಯವನ್ನು ನೆಮ್ಮದಿಯನ್ನು ಕಳೆದುಕೊಂಡು ಕತ್ತೆಯಂತೆ ದುಡಿಯುತ್ತಾರೆ. ನೊಗಹೊತ್ತ ಗಾಣದೆತ್ತಿನಂತೆ ಜೀವ ತೇಯುತ್ತಾರೆ. ಒಲೆಯ ಬೆಂಕಿ ಆರದಂತೆ ಕಳ್ಳುಬಳ್ಳಿಗಳು ಉಪವಾಸ ಬೀಳದಂತೆ ತನ್ನ ದೇಹವನ್ನೇ ದಂಡಿಸಿ, ನೋವ ನುಂಗಿ ಕುಟುಂಬವನ್ನು ಪೊರೆಯುವವರು ಈ ಮಹಿಳೆಯರೇ. ಕಬ್ಬಿನ ಕೊಯ್ಲಾಗುವವರೆಗೂ ಕಬ್ಬಿನ ಹೊಲಗಳ ಆಸುಪಾಸಿನಲ್ಲಿ ಅಥವಾ ಟೆಂಟ್ನಲ್ಲಿ ಅಥವಾ ಸಕ್ಕರೆ ಗಿರಣಿಗಳ ಬಳಿ ವಾಸಿಸಬೇಕು. ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೌಕರ್ಯವೂ ಇಲ್ಲ. ಮುಟ್ಟಿನ ದಿನಗಳಲ್ಲಿ ಅವರ ಪಾಡನ್ನು ಕೇಳುವರಾರು?
ತಮ್ಮ ದುಡಿಮೆಗೆ ಕುತ್ತಾಗಿರುವ ಈ ಗರ್ಭಕೋಶವಾದರೂ ಯಾಕಿರಬೇಕು ಎಂದು ಹತಾಶೆಯಲ್ಲಿ ಕಾಯಕಜೀವಿ ಅವಿವಾಹಿತ ಯುವತಿಯರು, ಮಕ್ಕಳ ತಾಯಂದಿರು ಗರ್ಭಕೋಶಗಳನ್ನೆ ತೆಗೆಸಿಕೊಳ್ಳುತ್ತಿದ್ದರೆ, ತಮಿಳುನಾಡಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರ ಅಸಹಾಯಕತೆ ವಿಹ್ವಲಗೊಳಿಸುತ್ತದೆ.
“ಮುಟ್ಟಿನ ನೋವಿನ“ ಕಾರಣದಿಂದ ಉತ್ಪಾದನೆಯಲ್ಲಿ ವ್ಯತ್ಯಯವಾಗದಂತೆ ಅವರಿಗೆ ಅಕ್ರಮ ನೋವು ನಿವಾರಕ ಗುಳಿಗೆಗಳನ್ನು ನುಂಗಿಸುವ ಕ್ರೌರ್ಯದ ಬಗ್ಗೆ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ (Thomson Reuters Foundation) ನಡೆಸಿದ ಸಂದರ್ಶನದ ವರದಿಯನ್ನು ಹಫ್ಪೋಸ್ಟ್ ಪ್ರಕಟಿಸಿತ್ತು.

ಸರಕಾರಿ ಅಂಕಿಗಳ ಪ್ರಕಾರ 40000 ಗಾರ್ಮೆಂಟ್ಸ್ ಕಾರ್ಖಾನೆಗಳು, ಸ್ಪಿನ್ನಿಂಗ್ ಮಿಲ್ಲುಗಳಿರುವ ತಮಿಳುನಾಡಿನಲ್ಲಿ 3 ಲಕ್ಷಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿದ್ದಾರೆ. ವಾಸ್ತವದಲ್ಲಿ ಈ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರಬಹುದು ಎನ್ನುತ್ತದೆ ಥಾಮ್ಸನ್ ವರದಿ. ದೊಡ್ದ ದೊಡ್ಡ ವಿದೇಶಿ ಬ್ರಾಂಡಿನ ತುರ್ತಿನ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ಸೂಪರ್ವೈಸರುಗಳು ಮತ್ತು ಟೈಮ್ ಕೀಪರ್ ಮಹಿಳಾಮಣಿಗಳು ಮುಟ್ಟಾದ ಮಹಿಳೆಯರಿಗೆ ನೋವು ನಿವಾರಕ ಗುಳಿಗೆಗಳನ್ನು ನುಂಗಲು ಕೊಟ್ಟು ಉತ್ಪಾದನೆಗೆ ತಡೆಯಾಗದಂತೆ ಒತ್ತಡ ಹೇರುತ್ತಾರೆ. ರಜೆ ಮಾಡಿದರೆ ಕೆಲಸ ಕಳೆದುಕೊಳ್ಳುವ ಭಯ. ಮೂತ್ರ ವಿಸರ್ಜಿಸಲು ಹೋದ ಸಮಯವನ್ನೂ ಲೆಕ್ಕವಿಡುತ್ತಾರೆ ಈ ಟೈಮ್ ಕೀಪರುಗಳು.
“ಭೂಮಾಲಿಕರು, ಎಲ್ಲಾ ಪುರುಷರಂತೆ ಬಿತ್ತದೇ ಬೆಳೆ ಕೊಯ್ಯಬೇಕೆಂದು ಬಯಸುತ್ತಾರೆ“ ಎಂದಿದ್ದ ಕಾರ್ಲ್ಮಾರ್ಕ್ಸ್. ಇಲ್ಲಿ ಮಾಲಿಕನಿಗೆ ಕೆಲಸವಾಗಬೇಕಷ್ಟೇ. ಆ ಕೆಲಸವನ್ನು ಕನಿಷ್ಠ ಸಮಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಿಕೊಡುವವನು ಈ ಗುತ್ತಿಗೆದಾರ. ಇವರಿಬ್ಬರ ನಡುವಿನ ವ್ಯವಹಾರದಲ್ಲಿ ನುಜ್ಜುಗುಜ್ಜಾಗುವವರು ಶ್ರಮಿಕರು. ಕಂಪನಿಗಳಿಗೆ, ಸಕ್ಕರೆ ಗಿರಣಿ, ಗಾರ್ಮೆಂಟ್ ಗಿರಣಿಗಳಿಗೆ ಶ್ರಮಿಕರನ್ನು ಒದಗಿಸಿ ಅವರ ಮೂಲಕ ಗರಿಷ್ಠ ಉತ್ಪಾದನೆಯನ್ನು ತೆಗೆಯುವ ಉದ್ಯಮದಲ್ಲಿ ಮಾಲೀಕನ ಎಲ್ಲ ತಂತ್ರಗಾರಿಕೆಯಲ್ಲಿ ಬೆಂಬಲಗಾರರಾಗುವ ಗುತ್ತಿಗೆದಾರ, ಸೂಪರ್ವೈಸರು, ಟೈಮ್ ಕೀಪರುಗಳ ದುರ್ವ್ಯವಹಾರಗಳು ಬೆಚ್ಚಿಬೀಳಿಸುತ್ತವೆ.
ಸಕ್ಕರೆ ಗಿರಣಿಗಳಿರಲಿ, ಗಾರ್ಮೆಂಟ್ ಗಿರಣಿಗಳೇ ಇರಲಿ ಶೋಷಣೆಯ ಝಳ ಉಣ್ಣುವುದು ಮಹಿಳೆಯ ದೇಹವೇ! ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಗೊಳಗಾಗುತ್ತಿರುವ ’ಮುಟ್ಟು’ ಎಂಬುದು ಕುಟಿಲ ಸಾಮಾಜಿಕ -ರಾಜಕೀಯದ ಜಟಿಲ ಪ್ರಶ್ನೆಯಾಗುತ್ತ ಮಹಿಳೆಯರ ಅಸ್ಮಿತೆಯ ಕತ್ತು ಹಿಸುಕುತ್ತಲೆ ಇದೆ. ಇದು ಪುರುಷಾಧಿಪತ್ಯ ಪಾಳೇಗಾರಿಕೆ ಬೇರುಬಿಟ್ಟ ನೆಲದ ನಿಟ್ಟುಸಿರು! ಬೆಂದ ಈ ಒಡಲುಗಳು ತಂಪಾಗುವುದು ಎಂದು? ಸಿಹಿ ಹೊಲಗಳ ಕಹಿ ಕ್ರೌರ್ಯ ನಿಲ್ಲುವುದು ಎಂದು?

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ



