ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಅತೀ ಹೆಚ್ಚು ಸ್ಥಾನ ಗೆದ್ದ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು ಅಗತ್ಯವಿರುವ ಬಹುಮತದ ಸಂಖ್ಯೆ (118) ಕ್ಕಿಂತ ಸ್ವಲ್ಪ ಹಿಂದಿರುವ ಟಿವಿಕೆ ಪಕ್ಷದ ಜೊತೆ ಮಾತುಕತೆ ನಡೆಸಲು ಕಾಂಗ್ರೆಸ್ ಮುಕ್ತವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸುಳಿವು ನೀಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಕೇರಳದ ಆಲಪ್ಪುಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷವು ಡಿಎಂಕೆ ಮೈತ್ರಿಯ ಭಾಗವಾಗಿ ಚುನಾವಣೆಯನ್ನು ಎದುರಿಸಿತ್ತು. ಆದಾಗ್ಯೂ, ತಮಿಳುನಾಡಿನಲ್ಲಿ ಈಗ ಒಂದು ‘ಹೊಸ ಪರಿಸ್ಥಿತಿ’ ನಿರ್ಮಾಣವಾಗಿದೆ. ಉದ್ಭವಿಸಿರುವ ಈ ಹೊಸ ಸಮೀಕರಣಗಳನ್ನು ಕಾಂಗ್ರೆಸ್ ಗಮನಿಸಲಿದೆ ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ” ಎಂದು ತಿಳಿಸಿದರು. ಪ್ರಕಟಿತ ಅಂಕಿಅಂಶಗಳ ಪ್ರಕಾರ, ಟಿವಿಕೆ 108 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಕಾಂಗ್ರೆಸ್ 5 ಮತ್ತು ಪಿಎಂಕೆಯು 4 ಸ್ಥಾನಗಳನ್ನು ಗೆದ್ದುಕೊಂಡಿವೆ.
ದಕ್ಷಿಣ ಭಾರತದ ರಾಜಕೀಯದಲ್ಲಿ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಇನ್ನು ಹೆಚ್ಚಿನ ಬಲಿಷ್ಠ ಪಾತ್ರ ವಹಿಸುವ ಅಗತ್ಯವಿದೆ ಎಂದು ವೇಣುಗೋಪಾಲ್ ತಿಳಿಸಿದರು. ಮಹಿಳಾ ಮೀಸಲಾತಿಯ ಜೊತೆ ಗುಟ್ಟಾಗಿ ತರಲಾಗಿರುವ ಬಿಜೆಪಿಯ ಕ್ಷೇತ್ರಗಳ ಪುನರ್ವಿಂಗಡಣೆ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ಹಿಂದಿ ಮಾತನಾಡುವ ಉತ್ತರ ಭಾರತದ ರಾಜ್ಯಗಳಿಗೆ ಅನುಕೂಲ ಮಾಡಿಕೊಡುವ ಹೂನ್ನಾರವಾಗಿದೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ಜನಸಂಖ್ಯಾ ನಿಯಂತ್ರಣ ಮತ್ತು ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿರುವ ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಪ್ರಬಲ್ಯವನ್ನು ಕುಗ್ಗಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಸಂಸತ್ತಿನಲ್ಲಿ ಸೋಲಿಸಿತ್ತು. ಆದರೆ ಈ ಅಪಾಯ ಇನ್ನೂ ಜೀವಂತವಾಗಿದ್ದು, ಇದನ್ನು ತಡೆಯಲು ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ವಿಪಕ್ಷ ಒಕ್ಕೂಟವು ಒಗ್ಗೂಡಬೇಕಿದೆ ಎಂದು ಅವರು ಕರೆ ನೀಡಿದರು.
ಇದೇ ವೇಳೆ ಇತರ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆಯೂ ಮಾತನಾಡಿದ ವೇಣುಗೋಪಾಲ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಕ್ಷೇತ್ರಗಳ ಗಡಿಯನ್ನು ರಾಜಕೀಯವಾಗಿ ಅನುಕೂಲವಾಗುವ ರೀತಿಯಲ್ಲಿ ಬದಲಾಯಿಸಿರುವ ಕಾರಣದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ ಎಂದು ದೂರಿದರು. ಕೇರಳದ ಫಲಿತಾಂಶದ ಕುರಿತು ಪ್ರಸ್ತಾಪಿಸುತ್ತಾ, ಎಲ್‌ಡಿಎಫ್ ಮತ್ತು ಎಸ್‌ಎನ್‌ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್ ಅವರು ಮತದಾರರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಒಡೆಯಲು ಪ್ರಯತ್ನಿಸಿದರು. ಆದರೆ ಮತದಾರರು ಈ ಕುತಂತ್ರವನ್ನು ತಿರಸ್ಕರಿಸಿ, ಯುಡಿಎಫ್‌ನ ಜಾತ್ಯತೀತ ನಿಲುವಿಗೆ ಮತ ನೀಡಿದ್ದಾರೆ. ಇದು ಜಾತ್ಯತೀತತೆಗೆ ಸಿಕ್ಕಿದ ದೊಡ್ಡ ಗೆಲುವು ಎಂದು ತಿಳಿಸಿದರು.




