CEC ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ACP) ವಿವೇಕ್ ಭಗತ್ ಅವರ ಹೆಚ್ಚುವರಿ ಡಿಸಿಪಿ ಹುದ್ದೆಗೆ ಬಡ್ತಿಯನ್ನು ತಡೆಹಿಡಿಯಲಾಗಿದೆ.
2018ನೇ ಬ್ಯಾಚ್‌ನ DANIPS ಅಧಿಕಾರಿ ವಿವೇಕ್ ಭಗತ್ ಪ್ರಸ್ತುತ ಕನ್ನಾಟ್ ಪ್ಲೇಸ್‌ನ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಹೊರಡಿಸಲಾದ ಆದೇಶದಲ್ಲಿ ಭಗತ್ ಸೇರಿದಂತೆ 12 DANIPS ಅಧಿಕಾರಿಗಳನ್ನು ಹೆಚ್ಚುವರಿ ಡಿಸಿಪಿಗಳಾಗಿ ಬಡ್ತಿ ನೀಡಲಾಗಿತ್ತು. ಆದರೆ, ತಮ್ಮ ವಿರುದ್ಧದ ಆರೋಪಗಳ ಕುರಿತು ಕ್ರೈಂ ಬ್ರಾಂಚ್ ತನಿಖೆ ನಡೆಯುತ್ತಿರುವುದನ್ನು ಉಲ್ಲೇಖಿಸಿ ಭಗತ್, ಹೆಚ್ಚುವರಿ ಡಿಸಿಪಿ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳುವುದನ್ನು ತಡೆಹಿಡಿಯುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು. ನಂತರ ಸೋಮವಾರ ರಾತ್ರಿ ದೆಹಲಿ ಸರ್ಕಾರ ಬಡ್ತಿ ಆದೇಶದಲ್ಲಿ ಬದಲಾವಣೆ ಮಾಡಿತು.
ಈ ಕುರಿತು ದೆಹಲಿ ಸರ್ಕಾರ ‘ಎಕ್ಸ್’ನಲ್ಲಿ ಸ್ಪಷ್ಟನೆ ನೀಡಿದ್ದು, ಭಗತ್ ಸೇರಿದಂತೆ ಅಧಿಕಾರಿಗಳ ಬಡ್ತಿ ಪ್ರಸ್ತಾವವನ್ನು ಆಗಸ್ಟ್ 25ರಂದೇ ಆರಂಭಿಸಲಾಗಿತ್ತು. ಇತ್ತೀಚಿನ ಘಟನೆಗಳಿಗೆ ಮುನ್ನವೇ ಈ ಪ್ರಕ್ರಿಯೆ ನಡೆದಿತ್ತು. ಅಕ್ಟೋಬರ್ 5ರಂದು ಅನುಮೋದನೆ ದೊರೆತ ಬಳಿಕ ಆದೇಶ ಹೊರಡಿಸಲಾಗಿತ್ತು ಎಂದು ತಿಳಿಸಿದೆ.
ಮಹಿಳಾ ಪತ್ರಕರ್ತರಿಗೆ ಕಿರುಕುಳ ನೀಡಿದ ಆರೋಪದ ಕುರಿತು ಸಂಪೂರ್ಣ ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚುವರಿ ಡಿಸಿಪಿ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಭಗತ್ ಮನವಿ ಮಾಡಿರುವುದನ್ನೂ ಸರ್ಕಾರ ತಿಳಿಸಿದೆ. ಉಳಿದ 11 ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವಂತೆ ತೋರಿಸುವ ನಕಲಿ ಎಐ ವಿಡಿಯೊವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಆರೋಪದಡಿ 24 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಪಲ್ವಾಲ್ ನಿವಾಸಿ ನದೀಮ್ ಅಹ್ಮದ್ ಬಂಧಿತ ಆರೋಪಿ. ಆತ 10ನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದು, ಸ್ವತಂತ್ರ ಪತ್ರಕರ್ತನಂತೆ ಗುರುತಿಸಿಕೊಂಡು ಭಾನುವಾರ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ ಜಿಲ್ಲೆಯ ಹೆಚ್ಚುವರಿ ಡಿಸಿಪಿ ಮಂಜೀತ್ ಶಿಯೋರಾನ್ ಅವರ ಪ್ರಕಾರ, ಜಿಲ್ಲೆಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಘಟಕವು ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಪ್ರತಿಭಟನಾ ಸ್ಥಳದ ಸಿಸಿಟಿವಿ ದೃಶ್ಯಗಳಿರುವಂತೆ ಕಾಣುವ ರೀಲ್ಸ್‌ಗಳನ್ನು ಗಮನಿಸಿತ್ತು.
ಇದನ್ನೂ ಓದಿ: ಪತ್ರಕರ್ತೆಯ ಎದೆ ಹಿಂಡಿ ವಿಕೃತಿ ಮೆರೆದ ಪೊಲೀಸ್ ಅಧಿಕಾರಿಗೆ DCP ಹುದ್ದೆಗೆ ಬಡ್ತಿ ನೀಡಿದ ಮೋಶಾ ಸರ್ಕಾರ!
ಈ ದೃಶ್ಯಗಳನ್ನು ತಿರುಚಿ, ಮಹಿಳೆಯೊಬ್ಬರಿಗೆ ಪೊಲೀಸ್ ಸಿಬ್ಬಂದಿ ಅಸಭ್ಯವಾಗಿ ವರ್ತಿಸುತ್ತಿರುವಂತೆ ತೋರಿಸಲಾಗಿತ್ತು. ವಿಡಿಯೊದಲ್ಲಿರುವ ವ್ಯಕ್ತಿ ಹಿರಿಯ ದೆಹಲಿ ಪೊಲೀಸ್ ಅಧಿಕಾರಿಯೇ ಎಂದು ಹೇಳಲಾಗಿತ್ತು.
ಈ ಕುರಿತು ನವದೆಹಲಿ ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು. ತನಿಖೆ ನಡೆಸಿದ ಪೊಲೀಸರು ‘news_aaina0776’ ಎಂಬ ಇನ್‌ಸ್ಟಾಗ್ರಾಂ ಚಾನೆಲ್‌ನ ನಿರ್ವಾಹಕನನ್ನು ಪಲ್ವಾಲ್‌ನಲ್ಲಿ ಪತ್ತೆಹಚ್ಚಿ ಸೋಮವಾರ ಬಂಧಿಸಿದ್ದಾರೆ. ಆತನ ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಪ್ರಕಾರ, ಅಹ್ಮದ್ ಅಕ್ಟೋಬರ್ 3ರಂದು ಎಐ ಸಾಧನಗಳನ್ನು ಬಳಸಿಕೊಂಡು ನಕಲಿ ವಿಡಿಯೊವನ್ನು ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಬಡ್ತಿ ತಡೆಗೆ ಕಾರಣವಾಗಿರುವ ಆರೋಪಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಎಐ ವಿಡಿಯೊ ಒಂದೇ ಪ್ರಕರಣವೆಂದು ಪರಿಗಣಿಸಲಾಗುತ್ತಿಲ್ಲ. ಪೊಲೀಸ್ ಅಧಿಕಾರಿಯ ವಿರುದ್ಧದ ಪತ್ರಕರ್ತೆಯರ ಆರೋಪಗಳ ಕುರಿತು ಕ್ರೈಂ ಬ್ರಾಂಚ್ ತನಿಖೆ ನಡೆಯುತ್ತಿದ್ದರೆ, ನಕಲಿ ವಿಡಿಯೊ ಸೃಷ್ಟಿಸಿ ಹರಡಿದ ಆರೋಪದಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಅಂದರೆ ಪ್ರತಿಭಟನೆಗೆ ಸಂಬಂಧಿಸಿದಂತೆ ನೈಜ ಘಟನೆಗಳ ಕುರಿತು ತನಿಖೆ ಒಂದೆಡೆ, ಕೃತಕ ವಿಷಯದ ಮೂಲ ಪತ್ತೆಹಚ್ಚುವ ತನಿಖೆ ಮತ್ತೊಂದೆಡೆ ನಡೆಯುತ್ತಿದೆ.




