ಬೆಳಕಿನ ಹಬ್ಬದ ಸಂಭ್ರಮದ ನಡುವೆಯೇ ಸಂವಿಧಾನದ ಆಶಯ, ಸಮಾನತೆ, ಸ್ವಾತಂತ್ರ್ಯ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಸಾರುವ ಮೂಲಕ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದ ಜೆಎಂಜೆ ಶಾಲಾ ಆವರಣದಲ್ಲಿ ಬೆಳಕಿನ ಹಬ್ಬ ಹಾಗೂ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅನಿತಾ ಸಿಸ್ಟರ್ ಅವರು, ಭಾರತೀಯ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಖಾತರಿಪಡಿಸುವ ಮಹತ್ವದ ಮಾರ್ಗದರ್ಶಿಯಾಗಿದೆ. ಸಂವಿಧಾನ ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಅದರ ಆಶಯಗಳು ಪ್ರತಿಯೊಬ್ಬರ ಬದುಕಿನಲ್ಲಿ ಪ್ರತಿಫಲಿಸಬೇಕು. ಸಂವಿಧಾನದ ಮೌಲ್ಯಗಳನ್ನು ಅರಿತು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಹೃದಯ ಮೇರಿ ಮಾತನಾಡಿ, ಬೆಳಕಿನ ಹಬ್ಬವು ಕೇವಲ ದೀಪಗಳ ಬೆಳಕಿಗೆ ಸೀಮಿತವಾದ ಆಚರಣೆಯಲ್ಲ. ಅಜ್ಞಾನ, ದ್ವೇಷ ಮತ್ತು ಅಸಹಿಷ್ಣುತೆಯ ಕತ್ತಲೆಯನ್ನು ದೂರ ಮಾಡಿ ಜ್ಞಾನ, ಪ್ರೀತಿ, ಶಾಂತಿ ಹಾಗೂ ಸಹಬಾಳ್ವೆಯ ಬೆಳಕನ್ನು ಸಮಾಜದಲ್ಲಿ ಪಸರಿಸುವ ಸಂದೇಶವನ್ನು ನೀಡುತ್ತದೆ. ಧರ್ಮ, ಜಾತಿ, ಭಾಷೆಯ ಭೇದಗಳನ್ನು ಮೀರಿ ಎಲ್ಲರೂ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು.
ಬೆಳಕಿನ ಹಬ್ಬದ ಸಂಭ್ರಮಕ್ಕೆ ಸಂವಿಧಾನದ ಸಮಾನತೆ ಮತ್ತು ಸಹೋದರತ್ವದ ಆಶಯಗಳು ಮೇಳೈಸಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರಿತು.
ಶಾಲೆಯ ಝೇವಿಯರ್, ಕರ್ಣಾ, ಶಾಂತಾಬಾಯಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




